ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನ ಸೀರೆ ಉಟ್ಟು..

-ಕೆ ಎನ್ ಲಾವಣ್ಯಪ್ರಭಾ

ಅವಳೊಬ್ಬಳಿದ್ದಳು ಮಲ್ಲಿ

ನಾವು ಅಮ್ಮನ ಸೀರೆ ಉಟ್ಟು
ಆಟವಾಡುತ್ತಿದ್ದ ಕಾಲದಲ್ಲಿ
ಬೆಳಗಿನ ಸಣ್ಣ ಬಿಸಿಲೇರುವಾಗಲೋ
ಸಂಜೆಯ ತಂಪು ಗಾಳಿಯಲ್ಲೋ
ದಪ್ಪನಾದ ಕಾಲ್ಗೆಜ್ಜೆ ಕಾಣುವಂತೆ
ಮಾಸಿದ ಸೀರೆಯುಟ್ಟು
ಗುಂಗುರು ಕೂದಲನ್ನೆತ್ತಿ ತುರುಬು ಕಟ್ಟಿ
ತೊಟ್ಟಗಾಢ ಹಸಿರಿನ ಬಳೆಯ
ಕೈ ಕುಣಿಸುತ್ತಾ
ಹಣೆಯ ಮೇಲಾಡುವ
ಮುಂಗುರಳನೆತ್ತಿ ಕಿವಿಯ ಹಿಂದೆ ಸರಿಸಿ
ಸೊಂಟದಲ್ಲಿರಿಸಿಕೊಂಡಿದ್ದ
ಬಿದಿರು ಬುಟ್ಟಿಯೊಳಗಿನ
ತರಹೇವಾರಿ ಬಣ್ಣ ಘಮಲಿನ
ಹೂಗಳ ಕೊಂಡವರು ಕೊಟ್ಟ
ಚಿಲ್ಲರೆ ಕಾಸನ್ನು ಸೆರಗಿನ ತುದಿಗೆ
ಗಂಟು ಹಾಕಿಕೊಂಡ
ಸೆರಗ ಗೊಂಡೆಯಲ್ಲೇ ಕೊರಳ
ಬೆವರನೊರೆಸಿ ಸಣ್ಣ ಸೊಂಟಕ್ಕೆ ಸಿಗಿಸಿ
ಕಿತ್ತುಹೋದ ಹವಾಯಿ ಚಪ್ಪಲಿ ತೊಟ್ಟ
ಪಾದಗಳ ಜೊತೆ ಕಾಲ್ಗೆಜ್ಜೆ ನಾದವೂ ಸೇರಿ
ವಿಚಿತ್ರ ಶಬ್ದದ ಜೊತೆ
ಹೂವೂ ….
ಮಲ್ಲಿಗೆ ಸಂಪಿಗೆ ಜಾಜಿ ಮರುಗ
ಸುಗಂಧರಾಜ ಕಾಕಡ ಕನಕಾಂಬರ….
ಹೂವೂ….
ದನಿಯೂ ಸೇರಿ ನಸುಗಪ್ಪಿನ ಚೆಲುವೆ
ಮಲ್ಲಿ
ನಮ್ಮ‌ಮನೆಯ ಗಲ್ಲಿಯಲ್ಲಿ
ಕಾಲಿಡುವಷ್ಟರಲ್ಲಿ
ದೇವರಪೂಜೆಗೆ ಮದುವೆಗೆ ಜಾತ್ರೆಗೆ
ಹರಕೆಗೆ ದೇಗುಲಕ್ಕೆ ತಾಂಬೂಲಕ್ಕೆ
ತಮ್ಮ ಎಂದಿನ ಸಿಂಗಾರಕ್ಕೆ
ಹೆಂಗಳೆಯರ
ಹೂವ ಕೊಳ್ಳುವ ತವಕವೂ ಸೇರಿ
ಊರಗಾಳಿಯ ತುಂಬಾ ಬಗೆಬಗೆಯ
ಹೂವ ಪರಿಮಳ ಅಡರಿ
ಕಸದ ತೊಟ್ಟಿ ಚರಂಡಿ ಹೊಲಸು
ಮನೆಯೊಗ್ಗರಣೆಯ ಇಂಗು ತೆಂಗಿನ ಘಮದೊಂದಿಗೂ
ಹೂವ ಸುಗಂಧ ಲೇಪನವಾಗಿ
ಊರ ಗಾಳಿ ಬೆಳಕಿಗೆ ದಿವ್ಯ ಕಳೆ.

ಮಲ್ಲಿ ಹಾದು ಹೋಗುವೆಡೆಯೆಲ್ಲಾ
ಜಗಳಗಂಟಿ ಜನಗಳೂ
ಕರ್ಕಶದ ಯಂತ್ರ ತಂತ್ರಗಳೂ
ಮೃದು ಮಧುರ ಗುನುಗುತ್ತಾ
ಬೆಳಗಿನ ಬಿಸಿಲೂ ತಣಿದು
ಎಲೆಯುದುರಿದ ಮರದ ಕೆಳಗೂ
ನೆರಳ ಹಾಸು

ಈಗಂತೂ ಮಲ್ಲಿ ನಮ್ಮೂರ
ಗಲ್ಲಿಯಲ್ಲೆಲ್ಲೂ ಕಾಣುವುದಿಲ್ಲ…

ಸೊಕ್ಕಿ ಕೊಬ್ಬಿದ ಕಾಡುಮೃಗಗಳೇ
ನಾಡ ತುಂಬಾ ಮೀಸೆ ತಿರುವಿ
ಗಹಗಹಿಸುವ ನಗೆಯಲ್ಲಿ
ಹೂವನ್ನೇ ಹೊಸಕಿ ಬಿಸುಡುವ
ಕಟುಕರಾಗಿರುವ ಈ ವಿಪರೀತದ
ಅವತಾರ ಯುಗದಲ್ಲಿ
ಮಲ್ಲಿಯಂತಹ ಹೂಹೆಣ್ಣುಗಳು
ಹೂವ ಮಾರುವುದಿಲ್ಲ
ನಮ್ಮೂರ ಹಾದಿಗುಂಟ ಸುಗಂಧ
ಪೂಸಲು ಬರುವುದಿಲ್ಲ
ಮಲ್ಲಿಯ ಬದಲಿಗೆ
ಬೆಳಗು ಸಂಜೆಗಳಲ್ಲಿ ಹೂಹುಡುಗರು
ಹೂವೂ…
ಮಲ್ಲಿಗೆ ಕಾಕಡ ಕನಕಾಂಬರ
ಸೇವಂತಿಗೆ ತುಳಸಿ ಸಂಪಿಗೆ..
ಹೂವೂ… ಎಂದೊರಲುತ್ತಾ
ತಂತಮ್ಮ ಸೈಕಲ್ ಬೈಕುಗಳಲ್ಲಿ
ಗಲ್ಲಿ ಗಲ್ಲಿ ತಿರುಗಿ ಬೆವರುವರು.

ವೇದಿಕೆಯೇರುವವರ ಸನ್ಮಾನಕ್ಕೆ
ಯುದ್ಧದಲ್ಲಿ ಸತ್ತ ಸೈನಿಕನ ಶವಸಂಸ್ಕಾರಕ್ಕೆ
ಪರವಾನಗಿಯಿಲ್ಲದೆಯೂ ಗಡಿದಾಟಿ
ಬಂದ ಅತಿಥಿಗಳ ಸ್ವಾಗತಕ್ಕೆ
ಮದುವೆಯಾದೊಪ್ಪತ್ತಲ್ಲೇ ಬ್ರೇಕಪ್
ಮಾಡಿಕೊಳ್ಳುವ ತಾತ್ಕಾಲಿಕ
ದಂಪತಿಗಳ ಕೊರಳಿಗೆ ,
ಹರಕೆ ಬಲಿಗೆ ಸಿದ್ಧವಾದ
ಕುರಿಕೋಣಗಳ ಸಿಂಗಾರಕ್ಕೆ
ಸುಗಂಧವಿಲ್ಲದ ತರಹೇವಾರಿ ರಂಗಿನ
ಹೂಗುಚ್ಛ , ಮಣಭಾರದ ಹೂಹಾರ
ಹೂದಂಡೆಗಳು ಯಥೇಚ್ಛವಾಗಿ
ಮಾರ್ಕೆಟ್ಟಿನಲ್ಲಿ ಮಾರಾಟವಾಗುತ್ತವೆ.

ವಾರ್ತೆಗಳಲ್ಲಿ ಅಣು ಪರಮಾಣು
ಬಾಂಬು ಸ್ಫೋಟದ ಸುದ್ದಿ
ಮನೆಮನೆಗಳಲ್ಲಿ ಸೂತಕದ ಛಾಯೆ
ಯೋಗ ಧ್ಯಾನಗಳಲ್ಲಿ ಕಣ್ಮಚ್ಚಿ
ಶವಾಸನ ಹಾಕಿ ಮನ ಹಗುರಾಗಲು
ಸಿದ್ಧವಾಗುವಾಗ
ಹೊಸ ಸಂವತ್ಸರ ಸಂಭ್ರಮಿಸಿ
ಹೂಗಳು ಸಶಬ್ದ ನಗುವ ಹೊತ್ತಲ್ಲಿ

ಮಲ್ಲಿ ಕಾಣೆಯಾಗಿದ್ದಾಳೆ…

‍ಲೇಖಕರು Admin

30 May, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading