ಅಮ್ಮನ ’ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಡೇ’! – ಪ್ರಶಾಂತ್ ಅಡೂರ್

ನಂಗ ಗೊತ್ತದ, ಆದರ ನಾ ಯಾಕ ಹೇಳಲಿ?

ಪ್ರಶಾಂತ್ ಅಡೂರ್

ಮೊನ್ನೆ ಸಂಪತ್ತ ಶುಕ್ರವಾರ ಬೆಳಿಗ್ಗೆ ನಾ ಏಳೋ ಪುರಸತ್ತ ಇಲ್ಲದ ದೇವರ ಮನ್ಯಾಗ ನಮ್ಮವ್ವಂದ ‘ಭಾಗ್ಯದ ಲಕ್ಷ್ವೀ ಬಾರಮ್ಮಾ, ಶುಕ್ರವಾರದ ಪೂಜೆಯ ವೇಳೆಗೆ’ ಶುರು ಆಗಿತ್ತ. ಇತ್ತಲಾಗ ನನ್ನ ಹೆಂಡತಿದ ಇನ್ನೂ ಏಳೋ ವೇಳೆ ಆಗಿದ್ದಿಲ್ಲಾ. ಅಲ್ಲಾ ಅಕಿಗೆ ಮೊದ್ಲಿಂದ ದೇವರು ದಿಂಡ್ರು ಅಂದ್ರ ಅಷ್ಟ ಕಷ್ಟ ಅದರಾಗ ಅಕಿಗೆ ಈ ಆರತಿ ಹಾಡು, ದೇವರ ಸ್ತೋತ್ರ ಬರಂಗೇಲಾ ಹಿಂಗಾಗಿ ಅಕಿ ಲಗು ಎದ್ದ ಏನಮಾಡಬೇಕ ಅಂತ ಆರಾಮ ಏಳೋ ಗಿರಾಕಿ.
ಅಕಿ ಇನ್ನೇನ ನಮ್ಮವ್ವನ ದೇವರ ಮಂಗಳಾರತಿ ಮುಗದ ಇಕಿ ಇನ್ನೂ ಎದ್ದಿಲ್ಲಾ ಅಂತ ಇಕಿಗೆ ಮಂಗಳಾರತಿ ಮಾಡ್ತಾಳ ಅಂತ ಗ್ಯಾರಂಟಿ ಆದ ಮ್ಯಾಲೆ ಎದ್ದ ಹಲ್ಲು ಮಾರಿ ತೊಕ್ಕೊಂಡ ಟಿಫಿನ್ ಮಾಡಲಿಕ್ಕೆ ಹೋದ್ಲು.
ನಾ ಅಷ್ಟರಾಗ ಎದ್ದ ರೆಡಿಯಾಗಿ ಟಿಫಿನ್ನಿಗೆ ಬಂದರ ಒಂದ ಪ್ಲೇಟನಾಗ ಕಲಸನ್ನ ಮಾಡಿ ಹಾಕಿದ್ಲು.
“ಇದೇನಲೇ, ನಿನ್ನಿ ಅನ್ನದ ಕಲಸನ್ನ ಮಾಡಿಯಲಾ?” ಅಂತ ನಾ ಅಂದರ
“ಮತ್ತೇನ ಮಾಡಬೇಕ, ನಿನ್ನೆ ರಾತ್ರಿ ನೀವ ಮನ್ಯಾಗ ಊಟಾ ಮಾಡಿಲ್ಲಾ, ಇದ ನಿಮ್ಮ ಪಾಲಿ ಅನ್ನ, ನೀವ ತಿನ್ನಬೇಕ. ಇಲ್ಲಾಂದರ ನಿಮ್ಮ ಅವ್ವ ‘ನಿನ್ನ ಗಂಡನ ಪಾಲಿನ ಅನ್ನ’ ಅಂತ ನನ್ನ ತಲಿಗೆ ಕಟ್ಟತಾರ” ಅಂದ್ಲು.
ನಂಗ ಇಕಿ ಹಣೇಬರಹ ಗೊತ್ತಾತ, ದಿವಸಾ ನಮ್ಮವ್ವ ಟಿಫಿನ್ ಮಾಡೋಕಿ, ಯಾಕೊ ಇವತ್ತ ಲಕ್ಷ್ಮಿ ಪೂಜಾ ಗದ್ಲದಾಗ ಪಾಪ ಆಗಿರಲಿಕ್ಕಿಲ್ಲಾ, ಇಕಿ ಹೇಳಿ ಕೇಳಿ ಮುಗ್ಗಲಗೇಡಿ, ತಿಂಡಿ ಮಾಡಲಿಕ್ಕೂ ಬೇಜಾರಾಗಿ ನಿನ್ನಿ ಅನ್ನಕ್ಕ ಮೊನ್ನಿ ಒಗ್ಗರಣಿ ಹಾಕಿ ಕೊಟ್ಟಾಳ ಅಂತ ಗ್ಯಾರಂಟಿ ಆತ. ನಂಗೂ ಹೊತ್ತಾಗಿತ್ತ ಇನ್ನ ಇಕಿ ಜೋತಿ ಏನ ವರಟ ಹರಿಯೋದ ಅಂತ ಸುಮ್ಮನ ತಿಂದ ಆಫೀಸಿಗೆ ಹೋದೆ.
ಮಧ್ಯಾಹ್ನ ಊಟಕ್ಕ ಮತ್ತ ನನ್ನ ಹೆಂಡತಿನ ಅಡಗಿ ಮಾಡಿದ್ಲು, ಒಂದ ಬಿಳೆ ಅನ್ನಾ-ಕೆಂಪಂದ ನೀರ ಸಾರು. ಯಾಕ ಅಂತ ಕೇಳಿದರ
“ಮನ್ಯಾಗ ಭಾಳ ಕೆಲಸ ಇರತಾವ, ಅಡಗಿ ಮಾಡೋದ ಒಂದ ಅಲ್ಲಾ. ಅದರಾಗ ನಂಗ ಭಕ್ಕರಿ ಬಡಕೋತ ಕೂಡಲಿಕ್ಕೆ ಟೈಮ ಇಲ್ಲಾ” ಅಂದ್ಲು. ಅಲ್ಲಾ ಇಕಿಗೆ ಭಕ್ಕರಿ ಬಡಿಲಿಕ್ಕೆ ಟೈಮ ಇಲ್ಲಂತ, ಇಕಿ ಬಡದದ್ದ ಭಕ್ಕರಿ ನಮ್ಮವ್ವ ಬಡದದ್ದ ಕುಳ್ಳಗಿಂತ ದಪ್ಪ ಇರ್ತಾವ ಯಾರಿಗೆ ಬೇಕ ಇಕಿ ಭಕ್ರಿ.
ಹಂಗ ನಮ್ಮವ್ವನ ದಿವಸಾ ಅಡಗಿ ಮಾಡೋಕಿ ಇವತ್ಯಾಕ ಹಿಂಗ ಮಾಡಿದ್ಲು ಅಂತ ನಮ್ಮವ್ವನ ಕೇಳಿದರ
“ಇವತ್ತ ವರ್ಲ್ಡ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಡೇ ಪಾ, ಹಿಂಗಾಗಿ ನಾ ನನ್ನ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಇವತ್ತ ಬಳಸಂಗಿಲ್ಲಾ” ಅಂದ್ಲು.

ನಾ ಒಮ್ಮಿಂದೊಮ್ಮಿಲೆ ಗಾಬರಿ ಆದೆ. ಇದ ಎಲ್ಲಿದ ಬಂತಲೇ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಡೇ ಅಂತ ಖರೇನ ಶಾಕ್ ಆಗಿ
“ಅಲ್ಲವಾ, ಹೆಣ್ಣಮಗಳಾಗಿ ಮನ್ಯಾಗ ಅಡಗಿ ಮಾಡೋದು ನಿನ್ನ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಏನ?” ಅಂದೆ
“ಮತ್ತ? ಮಗನ ದಿವಸಾ ಇಷ್ಟ ರುಚಿ-ರುಚಿ ಅಡಗಿ ಮಾಡಿ ಹಾಕೋದ ನನ್ನ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿನ, ಅದ ನನ್ನ ಹಕ್ಕ, ನಾ ಬೇಕಾರ ಮಾಡಬಹುದು ಇಲ್ಲಾಂದರ ಇಲ್ಲಾ. ನಿನ್ನ ಹೆಂಡತಿನೂ ಹೆಣ್ಣ ಅಲಾ, ನೀ ಬೇಕಾರ ನಿನ್ನ ಹೆಂಡತಿ ಕಡೆ ಮಾಡಿಸಿಗೊಂಡ ಉಣ್ಣ ದಿವಸಾ ಗೊತ್ತಾಗತದ ಅಕಿ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಎಷ್ಟ ಅದ ಅಂತ” ಅಂದ್ಲು.
ಹಕ್ಕ…. ಹಿಂಗಾಗೆ ನಮ್ಮವ್ವ ನನ್ನ ಹೆಂಡತಿ ಇಷ್ಟ ಬಡಕೊಂಡರು ಅಕಿಗೆ ಅಡಿಗೆ ಕೆಲಸಾ ಏನೂ ಕಲಿಸಿ ಕೊಟ್ಟಿಲ್ಲಾ ಅಂತ ಅನಸಲಿಕತ್ತು. ಪಾಪ ನನ್ನ ಹೆಂಡತಿಗೆ ನಮ್ಮವ್ವ ಮುಂಜಾನೆ ಎದ್ದ ಮೂರ ಎಳಿ ರಂಗೋಲಿ ಹಾಕೋದರಿಂದ ಹಿಡದ ರಾತ್ರಿ ಮಲ್ಕೋಬೇಕಾರ ಗಂಡಗ/ಮಕ್ಕಳಿಗೆ ದೃಷ್ಟಿ ತಗಿಯೋದರತನಕ ಏನೇನು ಕಲಿಸಿ ಕೊಟ್ಟಿಲ್ಲಾ, ಎಲ್ಲಾ ತಾನ ಮಾಡೋಕಿ. ಅಲ್ಲಾ ಮುಂದ ಅಕಿ ಇಲ್ಲದ ಕಾಲಕ್ಕ ಹೆಂಗ ಅಂತ ಸ್ವಲ್ಪರ ವಿಚಾರ ಮಾಡ್ಬೇಕೊ ಬ್ಯಾಡ ಅಂತೇನಿ.
ಅಲ್ಲಾ ಹಿಂಗ ಮನಿ ಹಿರೇಮನಷ್ಯಾರ ‘ನಂಗ ಗೊತ್ತದ, ಆದರ ನಾ ಯಾಕ ಹೇಳಲಿ?’ ಅಂತ ತಮಗ ಗೊತ್ತಿದ್ದದ್ದನ್ನ ತಮ್ಮ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಅಂತ ಮುಂದಿನ ಜನರೇಶನ್ ಮಂದಿಗೆ ಹೇಳಿ ಕೊಡಲಿಲ್ಲಾಂದ್ರ ಹೆಂಗ ಅಂತೇನಿ.

ಒಂದ ಕಾಲದಾಗ ಹೆಣ್ಣ ಮಕ್ಕಳ ಮನ್ಯಾಗ ಸಂಡಗಿ ಮಾಡ್ತಿದ್ದರು, ಹಪ್ಪಳ ಮಾಡ್ತಿದ್ದರು, ಉಪ್ಪಿನ ಕಾಯಿ ಹಾಕತಿದ್ದರು, ಭಕ್ಕರಿ ಬಡಿತಿದ್ದರು, ಮಸಾಲಪುಡಿ, ಮೆಂತೆ ಹಿಟ್ಟ ಎಲ್ಲಾ ಮನ್ಯಾಗ ಮಾಡ್ತಿದ್ದರು. ಆದರ ಈಗಿನ ಹೆಣ್ಣಮಕ್ಕಳಿಗೆ ಇವೇನು ಮಾಡಲಿಕ್ಕೆ ಬರಂಗಿಲ್ಲಾ, ಎಲ್ಲಾ ಕೊಂಡ ತೊಗೊಳೊದು. ಅಲ್ಲಾ ಹಪ್ಪಳ- ಸಂಡಗಿ ಬಿಡರಿ, ಕಲಿಸಿದ್ದ ಇಡ್ಲಿ ಹಿಟ್ಟ, ರುಬ್ಬಿದ್ದ ದೊಸೆ ಹಿಟ್ಟಿನಿಂದ ಹಿಡದ ಹೆಚ್ಚಿದ್ದ ಕಾಯಿಪಲ್ಯಾ ಸಹಿತ ಇವತ್ತ ಹೆಣ್ಣಮಕ್ಕಳ ರೊಕ್ಕಾ ಕೊಟ್ಟ ತೊಗೊತಾರ.
ಇವತ್ತೀನ ಹೆಣ್ಣ ಮಕ್ಕಳಿಗೆ ಮಕ್ಕಳ ತಲ್ಯಾಗ ಹೇನ ಆದರ ಹೇನ ಹೆಕ್ಕಲಿಕ್ಕೆ ಬರಂಗಿಲ್ಲಾ, ಅದಕ್ಕು ಡಾಕ್ಟರ ಕಡೆ ಕರಕೊಂಡ ಹೋಗಿ ೫೦೦ ರೂಪಾಯಿದ್ದ ಶಾಂಪೂ ಬಡದ ಹತ್ತ ಸಲಾ ತಲಿ ತೊಳಸ್ತಾರ.
ಇನ್ನ ಭಟ್ಟಿ ಸರದರ ಭಟ್ಟಿ ತಿಕ್ಕಲಿಕ್ಕಂತೂ ಮುಗದ ಹೋತ, ಮೊನ್ನೆ ನನ್ನ ಹೆಂಡತಿಗೆ ನಾ ಹೊಟ್ಟಿನೋವ ಅಂತ ಒದ್ದಾಡಲಿಕತ್ತಾಗ ಎಣ್ಣಿ ಹಚ್ಚಿ ಭಟ್ಟಿ ತಿಕ್ಕ ಬಾಲೇ ಭಟ್ಟಿ ಸರದದ ಅಂದರ “ಹೋಗರಿ, ಏನ ಅಸಂಯ್ಯ ಮಾಡ್ತೀರಿ. ಮತ್ತ ಎಲ್ಲರ ಒಂದ ಹೋಗಿ ಇನ್ನೊಂದ ಆಗಿ ಗಿಗಿತ್ತ” ಅಂತ ಹೇಳಿ ಡಾಕ್ಟರನ ಕೇಳಿ ಅರ್ಧಾ ಡಜನ್ ಪೇನ ಕಿಲ್ಲರ ನನ್ನ ಬಾಯಾಗ ತುರಕಿದ್ಲು.
ಹಿಂಗ ಯಾಕ ಅಂದರ ಈಗಿನವರಿಗೆ ಏನೂ ಬರಂಗಿಲ್ಲಾ. ಇನ್ನ ಯಾಕ ಬರಂಗಿಲ್ಲಾ ಅಂದರ ಅವರಿಗೆ ಯಾರು ಹೇಳಿನೂ ಕೊಟ್ಟಿಲ್ಲಾ ಇನ್ನ ಕೆಲವೊಬ್ಬರಿಗೆ ಇವನ್ನೇಲ್ಲಾ ಮಾಡ್ಕೋತ ಕೂಡಲಿಕ್ಕೆ ಟೈಮ ಇಲ್ಲಾ, ಕಲಿಯೋ ಇಂಟರೆಸ್ಟ ಇಲ್ಲಾ. ಅಲ್ಲಾ ಇವತ್ತ ಎಲ್ಲಾ ರೆಡಿಮೇಡ ಸಿಗಬೇಕಾರ ಯಾರ ಯಾಕ ಕಲಿತಾರ ಹೇಳ್ರಿ?
ಇದ ಹಿಂಗ ಮುಂದವರಿತ ಅಂದರ ಎಲ್ಲೆ ಹೆಣ್ಣಮಕ್ಕಳ ನಂಗ ಹಡಿಲಿಕ್ಕೆ ಟೈಮ್ ಇಲ್ಲಾ, ಬಾಣಂತನ ಮಾಡಿಸಿಗೊಳ್ಳಿಕ್ಕೆ ಟೈಮ ಇಲ್ಲಾ ಅಂತಾರೋ ಅಂತ ಖರೇನ ಹೆದರಕಿ ಹತ್ತೇದ.
ಮೊನ್ನೆ ನಮ್ಮ ಪೈಕಿ ಒಬ್ಬಾಕಿ ಹಡದರ ಅವರ ಮನ್ಯಾಗ ಯಾರೂ ಬಾಣೆಂತನ ಮಾಡೋರ ಇದ್ದಿದ್ದಿಲ್ಲಂತ. ಪಾಪ, ಅವರ ಆ ಬಾಣೆಂತನ ಮಾಡೋರನ ಹುಡಕಿ ಹುಡಕಿ ಸಾಕಾಗಿ ಕಡಿಕೆ ಐದ ಸಾವಿರ ರೂಪಾಯಿ, ಒಂದ ರೇಶ್ಮಿ ಸೀರಿ ಕೊಡ್ತೇವಿ ಅಂದ ಮ್ಯಾಲೆ ಒಬ್ಬಕಿ ಕಿಲ್ಲೆದಾಗ ಸಿಕ್ಕಳಂತ. ಏನ್ಮಾಡ್ತೀರಿ, ಇವತ್ತ ಸಮಾಜದಾಗ ಹಡದರ ಬಾಣೆಂತನ ಮಾಡೋರ ಇಲ್ಲಾ. ಯಾಕಂದರ ಇವತ್ತೀನ ಜನರೇಶನಗೆ ಬಾಣೆಂತನ ಮಾಡಿಸಿಗೊಂಡs ಗೊತ್ತಿಲ್ಲಾ ಇನ್ನ ಅವರ ಬಾಣಂತನ ಮಾಡೋದ ಅಂತೂ ದೂರ ಉಳಿತ. ಇನ್ನ ಮನ್ಯಾಗಿನ ದೊಡ್ಡವರರ ಕಲಸಬೇಕ ಬ್ಯಾಡ? ಅವರ ಬಾಣೆಂತನಾ ಮಾಡೋದು ಒಂದ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಅಂತ ತಿಳ್ಕೊಂಡ ಯಾರಿಗೂ ಹೇಳೆ ಕೊಡಲಿಲ್ಲಾ ಅಂದರ ಮುಂದಿನ ಜನರೇಶನ್ ಹೆಂಗ ಹಡಿಬೇಕ ಅಂತೇನಿ.
ಇವತ್ತ ಬಾಣಂತಿಗೆ ನೀರ ಹಾಕೋರ ಇಲ್ಲಾ, ಕೂಸಿಗೆ ಎಣ್ಣಿ ಹಚ್ಚಿ ತಿಕ್ಕೋರ ಇಲ್ಲಾ, ಹೊರಸ ಕಟ್ಟೋರ ಸಿಗವಲ್ಲರು, ಅಗ್ಗಿಷ್ಟಗಿ ಅಂದರ ಫೈರ್ ಕ್ಯಾಂಪ ಅಂತ ತಿಳ್ಕೊಂಡವರ ಇದ್ದಾರ, ಇದು ಹೋಗಲಿ ಇವತ್ತ ನಮ್ಮ ಮಕ್ಕಳಿಗೆ ಯಾರಿಗರ ಹೊರಗಿನ ಮಂದಿದ ದೃಷ್ಟಿ ಹತ್ತಿದರ ದೃಷ್ಟಿ ತಗಿಲಿಕ್ಕೆ ಸಹಿತ ಮನ್ಯಾಗಿನ ಮಂದಿಗೆ ಬರಂಗಿಲ್ಲಾ. ಅದನ್ನ ತಗಿಲಿಕ್ಕೆ ಮತ್ತ ಹೊರಗಿನ ಮಂದಿನ ಕರದ
“ನಮ್ಮ ಕೂಸಿಗೆ ದೃಷ್ಟಿ ಆಗೇದ, ಒಂದ ಸ್ವಲ್ಪ ನಿಮ್ಮ ಚಪ್ಪಲ್ಲಲೇನ ದೃಷ್ಟಿ ತಗದ ಹೋಗರಿವಾ” ಅಂತ ಹೇಳೋ ಪ್ರಸಂಗ ಬಂದದ.
ಒಟ್ಟ ಒಂದ ಅಂತು ಖರೆ ಇದ ಹಿಂಗ ಮುಂದವರದರ ಕಡಿಕೆ ನಮ್ಮ ಸಂಪ್ರದಾಯ, ಸಂಸ್ಕೃತಿನು ನಮ್ಮ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಅಂತ ಹಳೇ ಮಂದಿ ತಮ್ಮ ಜೊತಿ ತೊಗಂಡ ಹೋದರ ಅವು ಮಾಯ ಆಗ್ತಾವ ಅನಸ್ತದ.

‍ಲೇಖಕರು avadhi

April 30, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

6 ಪ್ರತಿಕ್ರಿಯೆಗಳು

  1. Anuradha.B.Rao

    ಹಿರಿಯರು ಹೇಳಿಕೊಡುವುದಿಲ್ಲ ಎನ್ನುವ ಮಾತು ಎಲ್ಲರಿಗೂ ಸರಿಹೊಂದುವುದಿಲ್ಲ. ಹೇಳಿಕೊಡ್ತೀನಿ ಅಂದರೂ ಈಗಿನ ಹುಡುಗರಿಗೆ ಆಸಕ್ತಿಯಿಲ್ಲ,ಎಲ್ಲವೂ ರೆಡಿಮೇಡ್ ನ್ನೇ ಬಯಸುವುದು ಹೆಚ್ಚು. “ಇವತ್ತ ವರ್ಲ್ಡ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಡೇ ಪಾ, ಹಿಂಗಾಗಿ ನಾ ನನ್ನ ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಇವತ್ತ ಬಳಸಂಗಿಲ್ಲಾ” ಈ ಮಾತಂತೂ ಖುಷಿ ಕೊಡ್ತು!!
    ಅಭಿನಂದನೆಗಳು.

    ಪ್ರತಿಕ್ರಿಯೆ
  2. raju

    ಇವತ್ತೀನ ಹೆಣ್ಣ ಮಕ್ಕಳಿಗೆ ಮಕ್ಕಳ ತಲ್ಯಾಗ ಹೇನ ಆದರ ಹೇನ ಹೆಕ್ಕಲಿಕ್ಕೆ ಬರಂಗಿಲ್ಲಾ, ಅದಕ್ಕು ಡಾಕ್ಟರ ಕಡೆ ಕರಕೊಂಡ ಹೋಗಿ ೫೦೦ ರೂಪಾಯಿದ್ದ ಶಾಂಪೂ ಬಡದ ಹತ್ತ ಸಲಾ ತಲಿ ತೊಳಸ್ತಾರ.
    very true sir, how do you still remember these all funny things, great. nice article and reminds the days of my ajji era.
    thanks for sharing with us
    raj

    ಪ್ರತಿಕ್ರಿಯೆ
  3. Priyadarshini

    Prashant sir our elders are ready to teach but are these generation ppl ready to learn ? I being in joint family have seen so many experience. Our elders are always happy to teach sampradaya rituals puje puraskara but avar kalasthar but ivarg hang madlik agangila bcoz avarg madak ishtanu illa so paap namm ajji yesht vaiyas adhra yenu madabeku bidak agangila anth madthar ikade daughter in laws namm athi adhal yella madthal anth summ kudthar. Niv mundh hen anlikathiree adan yesht mandee serious togotharee hardly may be 5% ulikidhavar already hantha puje puraskara sampradaya avag madthidhru but navela adhan palsak time illa anthar. I feel really bad when people neglect their duties they dont even remember what is rituals proper way to do puje n all. I always appreciate prashant sir his article has some message i hope this will implement many.

    ಪ್ರತಿಕ್ರಿಯೆ
  4. vaideshi

    ಪಾಪ, ಅವರ ಆ ಬಾಣೆಂತನ ಮಾಡೋರನ ಹುಡಕಿ ಹುಡಕಿ ಸಾಕಾಗಿ ಕಡಿಕೆ ಐದ ಸಾವಿರ ರೂಪಾಯಿ, ಒಂದ ರೇಶ್ಮಿ ಸೀರಿ ಕೊಡ್ತೇವಿ ಅಂದ ಮ್ಯಾಲೆ ಒಬ್ಬಕಿ ಕಿಲ್ಲೆದಾಗ ಸಿಕ್ಕಳಂತ. ಏನ್ಮಾಡ್ತೀರಿ, ಇವತ್ತ ಸಮಾಜದಾಗ ಹಡದರ ಬಾಣೆಂತನ ಮಾಡೋರ ಇಲ್ಲಾ very true line sir, this has happened with my cousin in banglore, he was ready even to pay 10000 rs but there was no one to do BANANTANA.ha..ha..
    some time you make us to look back to our childhood and those times. thanks for that, keep rocking
    vaidehi.

    ಪ್ರತಿಕ್ರಿಯೆ
  5. chetu

    Nice article, where do u get all these days? never heard before. Thanx for introducing us to these funny days.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: