ಸತೀಶ ಕುಲಕರ್ಣಿ
ಒಂದು ಕವಿತೆ ನೂರು ಕವಿತೆಗಳ ಹೊತ್ತಿಗೆಯಾಗಬಹುದೆ ? ಒಬ್ಬ ತಾಯಿ ನೂರು ತಾಯಂದಿರ ನೆನಪು ತರಬಹುದೇ ? ತಾನೇ ಕವಿತೆಯಾಗುತ್ತ, ನಾವೆಲ್ಲ ಕವಿಗಳಾಗಬಹುದೆ ? ಇಂಥ ಹಲವು ಪ್ರಶ್ನೆಗಳಿಗೆ ಒಂದೇ ಉತ್ತರ – ‘ಯಾಕಾಗಬಾರದು?, ಆಗಬಹುದು ‘ ಎಂದು ‘ತಾನು ಕವಿತೆಯಾಗಿ, ನನ್ನನ್ನು ಕವಿಯಾಗಿಸಿದಳು’ – ಓದಿದಾಗ ಹುಟ್ಟಿದ ವಿಚಾರಗಳಿವು.
ಮೊನ್ನೆ ನನ್ನ ಮಗಳು , ಹೆಸಿರೇ ಕಾವ್ಯ, ತಾಯಿಯಾದಳು. ಹೆರಿಗೆ ನೋವುಗಳು ಆರಂಭವಾದಾಗ, ಹುಬ್ಬಳ್ಳಿಯ ಆ ಖಾಸಗಿ ಆಸ್ಪತ್ರೆಗೆ ಹೋದೆ. ರಾತ್ರಿಯಲ್ಲ ಅವಳ ಹೆರಿಗೆ ನೋವಿನ ನರಳುವಿಕೆ ದವಾಖಾನೆಯ ಆ ಮೌನದಲ್ಲಿ – ಕೇಳಿದೆ. ರಾತ್ರಿ ಕಳೆದು, ಬೆಳಗು ಬಂದು, ಹೊತ್ತಿನ ಏಣಿ ಏರಿ ಸೂರ್ಯ ಬಂದಾಗಲೂ ‘ ನೋವು ನರಳಿಕೆ ‘ ನಿಲ್ಲಲಿಲ್ಲ. ಅನಿವಾರ್ಯವಾಗಿ .. … .. ಸರ್ಜರಿಯಿಂದ ಮೊಮ್ಮಗ ಹೊರಬಂದ. ನೋವಿನಲ್ಲೂ ತಣ್ಣನ ಎಲೆಯುದುರಿದ ನಗೆ ನಕ್ಕಳು. ಮಗಳು ‘ಅವ್ವ’ ಳಾದಾಗ, ಅವ್ವ ಅವಳೆದರು, ಅವಳ ಮುಂಗೈ ಹಿಡಿದು ಕುಳಿತ್ತಿದ್ದಳು. ಅಣ್ಣ ಚೆನ್ನಬಸವಣ್ಣನಿಗೆ ಮೋಬೈಲ್‍ನಿಂದ ಸುದ್ಧಿ ಹೇಳಿದಾಗ ‘ ಮಗಳು ಅವ್ವ, ಅವ್ವ ಮಗಳವ್ವ ಇದೊಂದು ‘ಜೀವ ಚಕ್ರ‘ ಎಂದು ನಕ್ಕ.
ಅವ್ವ ಆಗುವುದು, ಹೆರಿಗೆಯಲ್ಲಿ ನೋಯುವುದು ಇವುಗಳ ಅರ್ಥ ನನಗೆ ಗೊತ್ತಾಯಿತು. ಸುಮ್ಮನೆ ದೂರ ದವಾಖಾನೆಯ ಬಾಕಿನ ಮೇಲೆ ಕುಳಿತು ವಿಚಾರ ಮಾಡಹತ್ತಿದೆ. ನಮ್ಮೆಲ್ಲರ ಅವ್ವಂದಿರು ಹೀಗೆ ನರಳಿರಬೇಕಲ್ಲವೆ ? ನಮ್ಮನ್ನೆಲ್ಲ ಕವಿಯಾಗಿಸಿದವರೇ ಈ ಅವ್ವಂದಿರು ಎಂದುಕೊಂಡೆ.
ಒಂದು ಬಿರುಸಾಡಲಿಲ್ಲ, ಒಂದು ಉರಿಸ್ಯಾಡಲಿಲ್ಲ
ಎಂಥ ಬಡತನದಲ್ಲೂ, ಝಳ ಹತ್ತಗೊಡಲಿಲ್ಲ
ಕಮ್ಮಿ ಎನಿಸಲೇ ಇಲ್ಲ ಯಾವ ನೆಮ್ಮದಿಗೂ
ಉಂಡಷ್ಟ್ಪು ದಿನ, ಆ ಕೈ ಮಮತೆಯ ಅನ್ನ
ಇಂದಿಗೂ ಅದೇ ಕಣ್ಣ ಕಾವಲ ನೆನಪು
ಅದೇ ನೀರಂತೆ ಮಣ್ಣು ತಂಪು ಊಡುತಿದೆ ತಾಯಿಯ ಬೇರು
ಹೇಗೆ ಒಪ್ಪಲಿ ಈಗ ಏನೂ ಉಳಿದಿಲ್ಲವೆಂಬ ದೂರು.
ದಿ. ಗಂಗಾಧರ ಚಿತ್ತಾಲರ ಕವಿತೆಯ ಸಾಲುಗಳು ನೆನಪಾದವು. ಮತ್ತೆ ನಾನು ಅಪ್ಪಂದಿರ ಬಗ್ಗೆ ವಿಚಾರ ಮಾಡಹತ್ತಿದೆ. ನಾವು ಗಂಡುಗಳು ನಮ್ಮ ಬವಣೆಗಳೇ ಬೇರೆ. [ ಮಾತು, ನೋವು, ಅವಮಾನ ಮನೆಗಿಂತ ಜಗದ ಚಿಂತೆ , ನಾಯಿಯಂತೆ ನಿತ್ಯ ಹೊರಗೆ ತಿರುಗುವ ನಮ್ಮನ್ನು ಕೇಳುವವರು ಬಹಳ ಕಮ್ಮಿ. ]
ಅವ್ವಂದಿರು ನೂರಾರು ತರಹ. ಎಲ್ಲ ಅವ್ವಂದಿರು , ನಾನು ನೋಡದ ‘ ದೇವರೆ ಎರಕ ಇರಬಹುದು. ‘ ದೇವತೆ ನಿನ್ನನ್ನು ಅನುವಾದಿಸುವ – ಕೆಲಸ ಕೊಟ್ಟದ್ದಕೆ’ ಧನ್ಯವಾದಗಳು’ ಎಂದು ಕವಯತ್ರಿ ಶ್ರೀಮತಿ ಲಲಿತಾ ಸಿದ್ಧಬಸವಯ್ಯ ಹೇಳುತ್ತಾರೆ.
ಮಿತ್ರ ಸತ್ಯಾನಂದ ಪಾತ್ರೋಟರ ಪದ್ಯ ಓದಿದಾಗ ಇಷ್ಟೆಲ್ಲ ವಿಚಾರಗಳು ಮನದಲ್ಲಿ ಹೊತ್ತಿಕೊಂಡವು. ಕೆಲವು ಅಳಿಸಲಾಗದ ನೆನಪುಗಳು ಚಿತ್ರ ಚಿತ್ರವಾಗಿ ಇಳಿದು ಬಂದವು. ನನ್ನ ಸೋದರತ್ತೆಯ ಊರು ಎರೆಬೂದಿಹಾಳ ಅದರ ಹೆಸರು. ಈಗಿನ ಧಾರಾವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಒಂದುಹಳ್ಳಿ . ಅಲ್ಲಿನ ಹೊಕ್ಕು ತುಂಬುವ ಹೊಂಡ, ತೆಳು ತೊಗಲಂಥಹ ನೀರು, ಗುಂಡಿಯಲ್ಲಿ ದಿಕ್ಕು ಗೊತ್ತಿರದೇ ಅಲೆದಾಡುವ ಏಡಿಗಳು. ನೀರು ತುಂಬುವ ಹಳ್ಳಿಗಾಡಿನ ಕಚ್ಚೆ ಪÀಂಜೆಯ ಆಳು ಮಕ್ಕಳು, ಸಾಲು ಸಾಲು ಹೆಗಲು ಕೊಡುವ ಕೊಡಗಳ ಮೆರವಣಿಗೆ. ಜೊತೆಗೆ ಸದಾ ಅಲಂಕೃತ ಬಸವಣ್ಣ ದೇವರು, ಕತ್ತಲು ಗುಡಿಯಲ್ಲಿಯೇ ಮುಂಗೈ ಮೇಲೆ ಪರ್ವತ ಹೊತ್ತು ಹಾರಲು ಸಿದ್ಧನಾದ ಹನುಮಂತ ದೇವರು .. .. .. ಬೂದಿಹಾಳ ನೆನಪುಗಳಿವು.

ನಮ್ಮದು ಶಾನುಭೋಗರ ಮನೆತನ, ಅಲ್ಲೊಬ್ಬ ಒಕ್ಕಲಗಿತ್ತಿ ಬಾರಕೇರ ಬಸವ್ವ. ಕುಳ್ಳಿ, ತಲೆ ತುಂಬ ಹೊತ್ತ ಇಳಿಕಲ್ ಸೀರೆ, ಕೊರಳಲ್ಲಿ ಬಂಗಾರ ಲೇಪಿತ ಬೋರ್ಮಳಾ, ತಾಯಿ ಸ್ವರೂಪಿಣಿ. ಅವಳ ಮನೆಗೆ ಐದು ವರ್ಷದನಾದ ನಾನು ಆಗಾಗ ಹೋಗುತ್ತಿದ್ದೆ. ಗೂಡು ಒಲೆಯಲ್ಲಿ ದಂಟುಗಳ ತುರುಕಿ , ನಿಗಿ ನಿಗಿ ಕೆಂಡದ ಮೇಲೆ ಇರುವ ಕರಿ ಹಂಚಿನಿಂದ ರೊಟ್ಟಿ ಸುಟ್ಟು ಕೊಡುತ್ತಿದ್ದಳು. ಪಟಪಟನೆ ಬಡಿದು ರೊಟ್ಟಿಗೆ ಹತ್ತಿದ ಹಿಟ್ಟನ್ನು ಜಾಡಿಸಿ, ಹಸಿ ಕೆಂಪಿಂಡಿಗೆÀ, ಗಿಂಡಿಯಿಂದ ಒಳ್ಳೆಣ್ಣೆ ಹಾಕಿ ರೊಟ್ಟಿ ಸುತ್ತಿಕೊಟ್ಟಿದ್ದು ನೆನಪಿದೆ. ನನ್ನ ಮನಸ್ಸಿನಲ್ಲಿರುವ ಹಳ್ಳಿಗಾಡಿನ ಮೊದಲ ತಾಯಿಯ ಚಿತ್ರವಿದು. ಈಗಲೂ ನನಗೆ ಅವಳೊಂದು ತಾಯಿ. ಕುಂತಿಯ ಹಾಗೆ. ಪಾತ್ರೋಟರ ಅವ್ವನ ಚಿತ್ರ ನಮ್ಮಲ್ಲಿ ಓದಿ ಕರಗಿದಾಗ ಹುಟ್ಟಿದ್ದು ಈ ಬಸವ್ವಳ ಚಿತ್ರ.
ಶತಮಾನದ ( ಹೆಚ್ಚು ಕಡಿಮೆ ) ಆಯಸ್ಸು ಹೊತ್ತು , ಸತ್ಯಾನಂದರ ತಾಯಿ ನನ್ನಲ್ಲಿ ಕವಿತೆಯಾಗಿ ಕಾಡಿದ್ದು ಹೀಗೆಲ್ಲ. ನಾವು ಪ್ರೀತಿಸುವವರನ್ನು ಕಳೆದುಕೊಂಡಾಗ ನಮ್ಮ ಸುತ್ತ ಆವರಿಸುವ ಕತ್ತಲೆ, ಅದರೊಳಗಿನ ಹುಡುಕಾಟ ‘ ತಾನು ಕವಿತೆಯಾಗಿ , ನನ್ನನ್ನು ಕವಿಯಾಗಿಸಿದಳು.’ ಕವಿತೆಯ ಅಂತರಾಳ. ಮಟಾ ಮಾಯದ, ಬಟಾ ಬಯಲು. ಸುತ್ತಲೂ ಸುರಿಯುವ ಜಡೆಮಳೆ, ಹುತ್ತಗಟ್ಟಿದ ಬಂಡೆಗಲ್ಲುಗಳ ದಟ್ಟ ಚಿತ್ರಗಳು ವಿವ್ಹಲಗೊಳಸಿದವು.. ಇವುಗಳ ನಡುವೆ ನೆನಪುಗಳ ಜೇನು ದಾಳಿ ಮಾಡದಿರಲು ಸಾಧ್ಯವೇ ? ಉಡಲಿಲ್ಲದಾಗ , ಉಣ್ಣಲಿಲ್ಲದಾಗ , ಮೆಟ್ಟಿಲು ಇಲ್ಲದಾಗ – ಕಾಲವನ್ನು ಹಿಮ್ಮೆಟ್ಟಿಸುವವಳೇ ತಾಯಿ, ಅವ್ವ, ಅಮ್ಮ, ಏನೆಲ್ಲ, ಇವೆಲ್ಲ ಅವ್ವನ ಅನುಗಾಲದ ಅವತಾರಗಳು.
ಕರುಳಿಗೊಂದು ಭಾಷೆ ಇದ್ದರೆ. ಅದು ಹುಟ್ಟುವುದೇ ಅಮ್ಮನ ಕರುಳಿಂದ. ಅಲ್ಲೊಂದು ಹಾಡಿದ್ದರೆ, ಅದು ಬರುವುದೇ ನಮ್ಮಂಥವರ ಕೊರಳಿಂದ. ಇಂಥ ತಾಯಿ ಎಂಬ ಬಂಡೆಗಲ್ಲಿನ ಕೆಳೆಗೆ ಹುಟ್ಟುವ ಹುಲ್ಲುಗಳು ನಾವು. ತಾನು ಕವಿತೆಯಾಗಿ ನನ್ನನ್ನು ಕವಿತೆಯಾಗಿಸಿದಳು ಎಂಬ ಉದ್ಗಾರ ರೀತಿಯದು.
ಅಮ್ಮ ಬರೀ ಒಂದು ಹೆಣ್ಣಲ್ಲ. ಯಾತನೆಯೂ ಅಲ್ಲ. ಭಾವ ದೀಪ್ತಿ, ಕರುಣೆ ಮೂರ್ತಿ ಏನೇನೂ ಅಲ್ಲ, ಅವಳೊಂದು ವಿಶ್ವಾಸ, ಒಂದು ಅಸ್ಮಿತೆ, ಆತ್ಮ ಸಂಗಾತದ ಪಲ್ಲವ ! ನಿನ್ನೆ ಇಂದು ನಾಳೆಗಳ ಹೊಳೆ ದಾಟಿಸುವ ಜೀವ ಧರೆಯ ನಾವೆ. .






ಚಂದ ಇದೆ ಸರ್
sogasagide sir