ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನನ್ನು ಮೀಯಿಸುವಾಗ..

ಮಲಯಾಳಂ ಮೂಲ : ಸಾವಿತ್ರಿ ರಾಜೀವನ್


ಕನ್ನಡಕ್ಕೆ: ತೇರಳಿ ಎನ್ ಶೇಖರ್

ಅಮ್ಮನನ್ನು ಮೀಯಿಸುವಾಗ
ಹಸುಗೂಸನ್ನು ಮೀಯಿಸುತ್ತಿರುವಂತೆ
ನಿಗಾ ವಹಿಸಬೇಕು.
ಒಡಲು ಕೈಯಿಂದ ಜಾರಬಾರದು
ನೀರು ಉಗುರುಬೆಚ್ಚಗಿರಬೇಕು,
ಕಾಲ ಸಪೂರಗೊಳಿಸಿದ
ಆ ಒಡಲನ್ನು
ಕಟುವಾಸನೆಗಳ ಪಸರಿಸುವ
ಸೋಪುದ್ರಾವಕದಿಂದ ನೊರೆಗಟ್ಟಬಾರದು,
ಕಣ್ಣುಗಳು ಉರಿಯಬಾರದು.

ಒಂದೊಮ್ಮೆ
ನಿನ್ನನು ಮೀಯಿಸಿ ಸಿಂಗರಿಸಿದ
ಅಮ್ಮನ ಕೈಗಳಲ್ಲಿ
ಅಂದು ನೀನು ಗಿಲಿಕಿಯಾಡಿದ ಬಳೆಗಳು
ಅವುಗಳ ಕಿಲಕಿಲ ನಗೆಗಳು ಕಾಣುವುದಿಲ್ಲ,
ನಿನ್ನ ಎಳೆ ಹಲ್ಲ ಕಡಿತಕ್ಕೊಳಗಾದ ಹಳೆಯ ಉಂಗುರ
ಆ ಬೆರಳಿನಿಂದ ಎಂದೋ ಬಿದ್ದು ಹೋಗಿರುತ್ತದೆ.

ಆದರೀಗ
ಅಮ್ಮನ ಕೈಗಳಲ್ಲಿವೆ
ಸುಕ್ಕುಗಳ
ಅಸಂಖ್ಯಾತ ನೆರಿಗೆಯ ಬಳೆಗಳು
ನೆನಪುಗಳಿಂದ ಥಳಥಳಿಸುತ್ತಿರುವಂಥವು.
ಏಳೋ ಎಪ್ಪತ್ತೋ ಏಳುಸಾವಿರವೋ
ಅದರಲ್ಲಿ ವರ್ಣಪಲ್ಲಟಗಳು?
ಎಣಿಸಲು ಹೆಣಗಾಟಬೇಡ
ಕಣ್ಣುಮುಚ್ಚಿ
ಉಗುರುಬೆಚ್ಚಗಿನ ನೀರುಬಿದ್ದು
ಮೆತ್ತಗಾದ ಆ ಮೃದು ಮೈಯನ್ನು
ಸ್ಪರ್ಶಿಸಿ ನೇವರಿಸುತ್ತಾ ಇದ್ದುಬಿಡು.

ಆಗ
ನೆನಪುಗಳು ದಟ್ಟೈಸಿ ತಿಣುಕಾಡಿದ
ಆ ಸುಕ್ಕುಗಳು ಸೆಟೆದುಕೊಳ್ಳುತ್ತವೆ.
ಅಮ್ಮ ಮೆಲ್ಲಗೆ ಕೈಗಳನು ಚಾಚಿ
ಪುನಃ ನಿನ್ನನು ಮೀಯಿಸತೊಡಗುತ್ತಾಳೆ
ಎಣ್ಣೆ ಸೀಗೆಕಾಯಿಗಳಲ್ಲಿ ಮುಳುಗುತ್ತಾ
ನೀನು ಮಿಂದು ಸ್ಫುಟವಾಗಿ
ಬೆಳಗುತ್ತಿರುತ್ತೀಯಾ.

ಆಗ
ಅಮ್ಮ ನಿನಗಿತ್ತ ಮುತ್ತಗಳಲ್ಲೊಂದನ್ನು
ನೀನು ಪ್ರತಿಯಾಗಿ ಅಮ್ಮನಿಗೆ ಕೊಟ್ಟುಬಿಡು.
ಅಮ್ಮನನ್ನು ಮೀಯಿಸುವಾಗ
ಹಸುಗೂಸನ್ನು ಮೀಯಿಸುತ್ತಿರುವಂತೆ….

 

‍ಲೇಖಕರು Avadhi Admin

25 March, 2019

4 Comments

  1. Girijashastry

    ಎಂದು ಚೆಂದದ ಕವಿತೆ

    • Prakash

      beautiful , no additional word is required

  2. Savitha Sharath

    Beautiful..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading