ಚಪ್ಪಲಿ, ಬ್ಯಾಗಿನ ಚಿಂತನ ಮಂಥನ
ಜಯಶ್ರೀ ಭಟ್
ಕುಡಿತ, ಸಿಗರೇಟು ಮತ್ತೊಂದು ಮಗದೊಂದು ಯಾವುದೂ ಇಲ್ಲದ ಹೆಣ್ಣು ಹೆಂಗಸರಿಗೆ ಟೈಂಪಾಸ್ ಗೆ ಅಂತಲಾದರೂ ಏನಾದರೂ ಒಳ್ಳೆಯ ಅಥವಾ ಕೆಟ್ಟ ಹವ್ಯಾಸ ಬೇಕಲ್ಲವೇ? ಹಾಬಿಯಲ್ಲವಾದರೂ ಒಂದು ವೀಕ್ ನೆಸ್ ಅಂತಲಾದರೂ ಏನೋ ಒಂದು ಮನುಷ್ಯಾ ಅಂತನ್ನಿಸಿಕೊಂಡವರಿಗೆಲ್ಲಾ ಇರಲೇ ಬೇಕಲ್ಲವೇ? ಹಾಗೇ ಅಂತಿಟ್ಟುಕೊಳ್ಳಿ ನನ್ನ ಚಪ್ಪಲಿ ಹಾಗೂ ಬ್ಯಾಗಿನ ಕತೆ.
ಮೊಟ್ಟ ಮೊದಲು ನಮ್ಮೂರಲ್ಲಿ ಇದ್ದ ಒಂದೇ ಒಂದು ’ಬಾಟ’ ಅಂಗಡಿಯಲ್ಲಿ ನಾನು ಅಷ್ಟೂ ಬಾಕ್ಸ್ ಗಳನ್ನೂ ತೆಗೆಸಿ ಇನ್ನೂರು ರೂಪಾಯಿಯ ಒಂದು ಜೊತೆ ಚಪ್ಪಲಿ ತೆಗೆದುಕೊಂಡಾಗ ಮೂರಲ್ಲವಾದರೂ ಒಂದು ತಾಸಾದರೂ ಕಳೆದುಹೋಗಿತ್ತು. ಆಗಿನ್ನೂ ಕಾಲೇಜಿನಲ್ಲಿದ್ದ ನನಗೆ ಚಪ್ಪಲಿ ಆಯ್ಕೆಯಲ್ಲಿ ನನ್ನದು ಅತ್ಯಂತ ಸಂಕೀರ್ಣವಾದ ಸಮಸ್ಯೆ ಎಂದು ಅವತ್ತೇ ಮನದಟ್ಟಾಗಿ ಹೋಗಿತ್ತು. ಹಿರಣ್ಯಕಶಪುವಿನ ಸಾವಿನಂತೆ ತೀರ ಸಪಾಟೂ ಇರದ, ಹೈಹೀಲ್ಡೂ ಆಗಿರದ, ಗಟ್ಟಿಯೂ ಆಗಿರದ, ಪುಸುಕ್ ಎನ್ನುವಷ್ಟು ಮೆತ್ತಗೂ ಇರದ, ಉಂಗುಷ್ಠ ಇದ್ದರೂ ಮಾಡರ್ನ್ ಆಗಿರುವ, ಜರಿ ಪರಿಗಳಿಲ್ಲದ ಸಿಂಪಲ್ಲಾಗಿರುವ ಆದರೂ ಕ್ಲಾಸಿಯಾಗಿರುವ ಆ ನನ್ನ ಕನಸಿನ ಚಪ್ಪಲಿ ನಮ್ಮೂರಿನ ಅಂಗಡಿಗಳಲ್ಲಿ ದುರ್ಲಭವಾಗಿತ್ತು. ದೊಡ್ಡ ಸಿಟಿಗಳಲ್ಲಿ ಗ್ಲಾಸಿನ ಕಪಾಟುಗಳಲ್ಲಿ ಅಂಥಾ ಚಪ್ಪಲಿಗಳು ಕಂಡರೂ ಅವು ನನ್ನ ಪರ್ಸಿಗೆ ನಿಲುಕದ್ದಾಗಿದ್ದವು.
ಇನ್ನು ಬ್ಯಾಗಿನ ವಿಷಯದಲ್ಲಿ ನನ್ನ ಟೇಸ್ಟಿನ, ರಿಕ್ವೈರ್ ಮೆಂಟಿನ ಬಗ್ಗೆ ಗೊತ್ತಿದ್ದರಿಂದ ನಾನು ವಿಷಾದದಿಂದ ವೈರಾಗ್ಯವನ್ನೇ ಬೆಳೆಸಿಕೊಂಡು ಬಿಟ್ಟಿದ್ದೆ. ಆದರೆ ನನ್ನ ಕೈಯಲ್ಲಿ ಸಂಬಳದ ಹಣ ಸಿಗುತ್ತಿದ್ದಂತೆ ವೈರಾಗ್ಯದ ಮೋಡ್ ನಿಂದ ಹೊರಬಂದು ನನ್ನ ಬಾಲ್ಯದ ಅರೆಬೆಂದ ಕನಸಿಗೆ ಜೀವ ಕೊಡತೊಡಗಿದ್ದೇ ನನ್ನ ಬಂಧು ಬಾಂಧವರೆಲ್ಲ ಈ ನನ್ನ ಎರಡೇ ಎರಡು ವೀಕ್ ನೆಸ್ ಗಳ ಬಗ್ಗೆ ಬಾಯಿಗೆ ಬಂದದ್ದೆಲ್ಲಾ ಮಾತಾಡತೊಡಗಿದ್ದಾರೆ. ಅಪರೂಪಕ್ಕೆ ಮನೆಗೆ ಬಂದಿದ್ದ ಅಕ್ಕನ ಜೊತೆ ಚಪ್ಪಲಿ ತಗೊಳ್ಳಕ್ಕೆ ಹೋದರೆ ಭಾವ ಫೋನಿನಲ್ಲೇ ಹೇಳಿದ್ದ ”ಅಯ್ಯೋ, ಅವಳ ಚಪ್ಪಲಿ ವ್ಯಾಪಾರ ಮುಗಿಯುವುದರಲ್ಲಿ ಬೆಳಗಾಗಿ ಹೋಗುತ್ತದೆ, ನೀನು ನಿನಗೆ ಬೇಕಾದ್ದೆಲ್ಲ ಮೊದಲು ಕೊಂಡುಕೊಂಡು ಬಿಡು” ಅಂತ. ಬ್ಯಾಗಿನ ಅಂಗಡಿಗಂತೂ ಈಗ ನನ್ನ ಜೊತೆ ಬರುವ ಧೈರ್ಯ ಯಾರೂ ತೋರುತ್ತಿಲ್ಲ. ಮೊದ ಮೊದಲು ನನ್ನ ಬ್ಯಾಗಿನ ವಿಷಯದಲ್ಲಿ ವಿನಾಕಾರಣ ಮೂಗುತೂರಿಸುತ್ತಿದ್ದ, ಒಂದು ವ್ಯಕ್ತಿಗೆ ಒಂದೇ ಬ್ಯಾಗು ಸಾಕೆಂದು ನಂಬಿದ್ದ ನನ್ನ ಪತಿರಾಯ ಈಗೆಷ್ಟು ಸುಧಾರಿಸಿದ್ದಾರೆಂದರೆ ತಾವೇ ಬೇರೆಲ್ಲಾದರೂ ಹೋದರೆ ವಾಟ್ಸಾಪ್ ನಲ್ಲಿ ಪಿಕ್ಚರ್ ಕಳಿಸಿ ’ಇದು ತರಲಾ?” ಎಂದು ಕೇಳುವಷ್ಟು. ಮೊದಲೆಲ್ಲಾ ”ಮೊನ್ನೆಯಷ್ಟೇ ತಗೊಂಡೆಯಲ್ಲ, ಮತ್ಯಾಕೆ ಬ್ಯಾಗು?” ಎಂದು ಪ್ರಶ್ನಿಸಿ ನನ್ನಿಂದ ಪಾಠ ಹೇಳಿಸಿಕೊಳ್ಳುತ್ತಿದ್ದವರು ಇವರೇನಾ ಅನ್ನಿಸುವಷ್ಟು ಬದಲಾಗಿ ಹೋಗಿದ್ದಾರೆ. ”ಎಲ್ಲಾ ಬ್ಯಾಗೂ ಎಲ್ಲಾ ಕಡೆಯೂ ಸಲ್ಲುವುದಿಲ್ಲ, ಮಾರ್ಕೆಟ್ ಗೆ ಹೋಗುವ ಬ್ಯಾಗು, ಏರ್ ಪೋರ್ಟಿಗೆ ಹೋಗುವ ಬ್ಯಾಗು, ಪಾರ್ಟಿಗೆ ಹೋಗುವ, ಶಾಪಿಂಗ್ ಗೆ ಹೋಗುವ, ಜೀನ್ಸ್ ಗೆ ಒಪ್ಪುವ, ಸೀರೆಗೆ ಸಲ್ಲುವ ಬ್ಯಾಗುಗಳಲ್ಲಿ ಅದೆಷ್ಟು ಅಂತರವಿದೆ. ನೀವು ಹಾಗೆಲ್ಲ ಬ್ಯಾಗಿನ ವಿಷಯದಲ್ಲಿ ತಲೆಹಾಕಿ ಬಿ.ಪಿ. ಹೆಚ್ಚು ಮಾಡಿಕೊಳ್ಳಬೇಡಿ” ಎಂಬ ನನ್ನ ಸಲಹೆಯನ್ನು ಸೀರಿಯಸ್ಸಾಗೇ ತಗೊಂಡಂತಿದೆ.

ಹೀಗಿರುತ್ತಲಾಗಿ ಮೊನ್ನೆ ಒಂದು ಚಿಕ್ಕದೂ ಅಲ್ಲದ, ದೊಡ್ಡದೂ ಅಲ್ಲದ, ಮೆತ್ತಗೂ ಇರುವ, ನನಗೊಪ್ಪುವ ಕಲರ್ ಇರುವ ಉದ್ದ ಹ್ಯಾಂಡಲ್ ನ ಒಂದು ಬ್ಯಾಗನ್ನು ಖರೀದಿಸಿದ್ದೆ. ಅದೂ ಪೂರಾ ಫಿಫ್ಟಿ ಪರ್ಸೆಂಟ್ ಸೇಲ್ ನಲ್ಲಿ. ಆದರೆ ಮನೆಗೆ ಬಂದು ನೋಡಿದರೆ ನನ್ನ ಅಗತ್ಯಕ್ಕಿಂತ ಎರಡು ಇಂಚು ಉದ್ದ ಇರುವ ಬ್ಯಾಗಿನ ಹ್ಯಾಂಡಲ್ ನನಗೆ ರಾತ್ರಿ ಇಡೀ ನಿದ್ದೆ ಮಾಡಲು ಬಿಡಲಿಲ್ಲ. ಬೆಂಗಳೂರಲ್ಲಾಗಿದ್ದರೆ ಮಾರಿಗೊಬ್ಬರು ರಿಪೇರಿ ಮಾಡುವವರು (ಅದೂ ಇದೂ ಅಂತೇನಿಲ್ಲ, ಎಲ್ಲವನ್ನೂ ರಿಪೇರಿ ಮಾಡುವವರು) ಸಿಗುತ್ತಿದ್ದರೇನೋ. ಆದ್ರೆ ಇಲ್ಲಿ ರಿಪೇರಿ ಮಾಡಿಸಿಕೊಳ್ಳುವುದಕ್ಕಿಂತ ಹೊಸದನ್ನೇ ಖರೀದಿಸುವುದು ಸಸ್ತಾ ಆಗಿರುತ್ತದೆನ್ನುವುದು ನನ್ನ ಅನುಭವದ ಮಾತು. ಒಮ್ಮೆ ಹತ್ತೋ ಹದಿನೈದೋ ಡಾಲರಿನ ಶೂ ಗೆ ಸೋಲ್ ಸರಿಮಾಡಿಸಲು ಹೋಗಿದ್ದೆ. ರಿಪೇರಿ ಚಾರ್ಚ್ ನಲವತ್ತು ಡಾಲರ್ ಅಂತ ಹೇಳಿ ನನ್ನ ಬೆಚ್ಚಿಬೀಳಿಸಿದ್ದ ಆ ಚಪ್ಪಲಿ ರಿಪೇರಿಯವ. ಅಂದೇ ಮನೆಗೆ ಬಂದು ಹೇಳಿದ್ದೆ “ಅದಕ್ಕೇ ನಾನು ಅಷ್ಟೊಂದು ಪೇರ್ ಚಪ್ಪಲಿ ಇಟ್ಟುಕೊಂಡಿರುವುದು. ಇಲ್ಲಿ ರಿಪೇರಿ ತುಂಬಾ ಕಾಸ್ಟ್ಲಿ“ ಅಂತ.
ಮೊದಲೆಲ್ಲ ಪಾಪ ಮನೆಯಿಂದ ಹೊರಗಡಿಯಿಟ್ಟರೆ ಒಂದೇ ಜೊತೆ ಚಪ್ಪಲಿ ಇದ್ದ ಇವರು ನಿಶ್ಚಿಂತೆಯಿಂದ ಅದನ್ನ ಮೆಟ್ಟಿ ಹೋಗುತ್ತಿದ್ದರೆ ಈಗ ಸಹವಾಸ ದೋಷದಿಂದ ನನ್ನಷ್ಟಲ್ಲದಿದ್ದರೂ ನನ್ನ ಅರ್ಧದಷ್ಟು ಶೂ, ಚಪ್ಪಲಿ ಅಂತ ಗುಡ್ಡೆ ಬಿದ್ದಿರುವುದರಿಂದ ಯಾವುದು ಹಾಕುವುದೆಂದು ಯೋಚಿಸುವಂತಾಗುತ್ತದೆ. ವಿಷಯ ನನ್ನ ಹೊಸ ಬ್ಯಾಗಿನ ತುಸು ಉದ್ದನೆ ಹ್ಯಾಂಡಲ್ ಬಿಟ್ಟು ಇನ್ನೆಲ್ಲೋ ಹೋಗುತ್ತಿದೆ. ಇರಲಿ ಮತ್ತೆ ಯೂ ಟರ್ನ್ ತಗೊಳ್ತೀನಿ ಬಿಡಿ. ನಿದ್ದೆ ಇಲ್ಲದೆ ಎದ್ದ ನಾನು ಮರುದಿನವೇ ಒಬ್ಬಳು ಟೈಲರ್ ಹತ್ತಿರ ಹೋಗಿ ನನ್ನ ಬ್ಯಾಗ್ ತೋರಿಸಿ ಕೇಳಿದೆ, ಸರಿ ಮಾಡಿಕೊಡುತ್ತಾಳಾ ಅಂತ. ಅದನ್ನು ಅಲ್ಲೇ ಮುಂದೆ, ಪಕ್ಕದ ರಸ್ತೆಯಲ್ಲಿರುವ ಚಪ್ಪಲಿ ರಿಪೇರಿಯವನೊಬ್ಬ ಮಾಡುತ್ತಾನೆಂದು ಹೇಳಿದಳು ಆಕೆ. ಮಟ ಮಧ್ಯಾಹ್ನದ ಹೊತ್ತು. ಪಕ್ಕದ ರಸ್ತೆಯಲ್ಲಿದ್ದ ಆ ಅಂಗಡಿ ಹುಡುಕುವಷ್ಟರಲ್ಲಿ ನನ್ನ ಗಂಟಲ ಪಸೆ ಒಣಗಿತ್ತು. ಮಾಸಿದ ಬೋರ್ಡಿನ ಆ ಚಿಕ್ಕ ಅಂಗಡಿಯ ಒಳಗಡಿಯಿಡುತ್ತಿದ್ದಂತೆ ‘ಡಿಂಗ್ ಡಾಂಗ್‘ ಎಂದು ಗಂಟೆ ಹೊಡೆದುಕೊಂಡಿತು. ಕಬ್ಬಿಣದ ಕುರ್ಚಿಯಲ್ಲಿ ಕೂತು ತೂಕಡಿಸುತ್ತಿದ್ದ ಸಣಕಲು ಮೈಯ ಆ ಚೀನೀ ಮುದುಕನ ಕಣ್ಣು ತನ್ನಷ್ಟಕ್ಕೇ ತೆರೆದುಕೊಂಡು ನನ್ನತ್ತ ನೋಡಿತು. ನನಗೆ ಮಧ್ಯಾಹ್ನದ ಸಕ್ಕರೆ ನಿದ್ದೆಯನ್ನು ಹಾಳುಮಾಡಿದ ಅಪರಾಧೀ ಭಾವ ಕಾಡಿತು. ಒಂದು ಫ್ಯಾನೂ ಇಲ್ಲದೆ ಆತ ಆ ಸೆಖೆಯಲ್ಲಿ ಅಲ್ಲಿ ಹೇಗೆ ಕೂತಿರುತ್ತಿದ್ದನೋ ಎಂಬಂತೆ ನನ್ನ ಮುಖವೆಲ್ಲಾ ಬೆವರ ಹನಿಯಿಂದ ಮುಚ್ಚಿಹೋಯಿತು ಆ ಎರಡು ನಿಮಿಷದಲ್ಲೇ. ನಾನು ನನ್ನ ಕೆಲಸವೇನೆಂದು ಹೇಳುತ್ತಿದ್ದಂತೆ ತನ್ನ ಹತ್ತಿರ ಅದಕ್ಕೆ ಮ್ಯಾಚಿಂಗ್ ಬಕಲ್ ಇದೆಯಾ ನೋಡಲು ಮಾತಿಲ್ಲದೆ ಒಳಗೆ ಹೋದ ಆತ. ಅಂತದ್ದೇ ಬಕಲ್ ಇದ್ದದ್ದರಿಂದ ರಿಪೇರಿ ಮಾಡಲು ಒಳಗೆ ನನ್ನ ಬ್ಯಾಗ್ ಕೊಂಡೊಯ್ದ. ನಾನು ಸುತ್ತಲೂ ನೋಡಿದೆ. ಆ ಚಿಕ್ಕ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ನಾಲ್ಕಾರು ಜೊತೆ ಚಪ್ಪಲಿಗಳಿದ್ದವು. ಮನೆಯಲ್ಲಿ ನನ್ನ ಹತ್ತಿರ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಚಪ್ಪಲಿಗಳಿರುವುದು ನೆನಪಾಯ್ತು. ಅಲ್ಲಿಗೆ ಮನುಷ್ಯರ್ಯಾರದರೂ ಬರುತ್ತಾರೋ ಇಲ್ಲವೋ ಎನ್ನುವಷ್ಟು ಬಿಕೋ ಎನ್ನುತ್ತಿತ್ತು ಆ ಅಂಗಡಿ. ಆ ಮುದುಕ ಹೇಗೆ ಈ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಾನೋ ಅಂತ ಯೋಚಿಸುತ್ತಿರುವಷ್ಟರಲ್ಲೇ ಆತ ಬ್ಯಾಗ್ ಕೆಲಸ ಮುಗಿಸಿ ನನ್ನ ಕೈಗೆ ಕೊಟ್ಟ. ಎಷ್ಟು ಎನ್ನುತ್ತಿದ್ದಂತೆ ಕೇವಲ ಎರಡೇ ಡಾಲರ್ ಅವನ ಚಾರ್ಚ್ ಅಂತ ಕೇಳಿ ನನಗೆ ಮತ್ತಷ್ಟು ಬೇಸರವಾಯಿತು. ಸುಮ್ಮನೇ ಹೆಚ್ಚಿನ ಹಣ ಕೊಟ್ಟರೆ ಅವನ ಅಭಿಮಾನಕ್ಕೆ ಪೆಟ್ಟುಕೊಟ್ಟಂತಾಗಬಹುದೆಂದು ಸುಮ್ಮನಾದೆ. ಅವನ ಕೈಯಲ್ಲಿ ದುಡ್ಡುಕೊಟ್ಟು ಬ್ಯಾಗನ್ನು ಒಮ್ಮೆ ಹೆಗಲಿಗೆ ಹಾಕಿ ನೋಡಿದರೆ ಅದು ಇನ್ನೂ ಸರಿಯಾಗಿರಲಿಲ್ಲ. ಅವನಿಗೆ ತೋರಿಸಿ ಮತ್ತೆ ಅಳತೆ ಹಾಕಿ ರಿಪೇರಿ ಮಾಡಲು ಕೊಟ್ಟೆ. ಈಗಲೂ ಅದೇ ತನ್ಮಯತೆಯಿಂದ ಮತ್ತೆ ನನ್ನ ಬ್ಯಾಗನ್ನು ರಿಪೇರಿ ಮಾಡಿದ ಆತ ನನ್ನ ಬಳಿಗೆ ಬರುತ್ತಿದ್ದಂತೆ ಮೊದಲೇ ತೆಗೆದಿಟ್ಟುಕೊಂಡಿದ್ದ ಎರಡು ಡಾಲರ್ ಅವನ ಕೈಲಿಡಲು ಹೋದೆ. ಇಂಗ್ಲಿಷ್ ನಲ್ಲಿ ಮಾತಾಡಲು ಬರುತ್ತಿರಲಿಲ್ಲವೇನೋ ಅದುವರೆಗೂ ಒಂದೂ ಮಾತಾಡದ ಆತ “ನೋ, ನೋ,“ ಎನ್ನುತ್ತಾ ಜೋರಾಗಿ ತಲೆಯಲ್ಲಾಡಿಸಿಬಿಟ್ಟ. ಅವನ ಅಚಲ ನಿರ್ಧಾರದೆದುರು ನಾನು ಏನೂ ಮಾಡಲು ತೋಚದೆ ವಾಪಸ್ಸಾದೆ. ಮನೆಯಲ್ಲಿದ್ದ ನನ್ನ ಬ್ಯಾಗು, ಚಪ್ಪಲಿಗಳು ನನ್ನನ್ನು ಅಣಕಿಸಿ ನಗುತ್ತಿರುವಂತನ್ನಿಸಿತು. ನಾನು ಒಂದುವೇಳೆ ಚಪ್ಪಲಿ ಕೊಳ್ಳುವುದನ್ನು ನಿಲ್ಲಿಸಿದರೂ, ಕಡಿಮೆ ಮಾಡಿದರೂ ಆ ಮುದುಕನ ಜೀವನದಲ್ಲೇನೂ ಬದಲಾವಣೆ ಆಗುವುದಿಲ್ಲ. ಆದರೆ ಆ ಮುದುಕ ಹಾಗೂ ಅವನ ತಲೆಮಾರಿಗಿದ್ದ ‘ಇದ್ದುದರಲ್ಲೇ ತ್ರುಪ್ತಿ‘ ಎಂಬ ಬಲುದೊಡ್ಡ ಮಂತ್ರವನ್ನು ಹಿಂದೆ ಬಿಟ್ಟು ಇಡೀ ಜನಾಂಗವೇ ಈಗ ರೇಸಿಗೆ ಬಿದ್ದಿರುವುದನ್ನು ಕಂಡು ಇದೆಲ್ಲಿಗೆ ಬಂದು ಮುಟ್ಟುವುದೋ ಎಂದು ತಲ್ಲಣಿಸಿದೆ ನಾನು. ಕೊಳ್ಳು ಬಾಕ ಸಂಸ್ಕ್ರುತಿಯ ಬಲಿಪಶುಗಳು ನಾವು. ಇದರಲ್ಲಿ ನಮ್ಮ ನಮ್ಮ ವರ್ತುಲಗಳು ದೊಡ್ಡದು, ಚಿಕ್ಕದು ಇರಬಹುದಷ್ಟೇ ಹೊರತು ಇನ್ಯಾವ ವ್ಯತ್ಯಾಸವೂ ಇಲ್ಲ. ಆದರೂ ಕೊನೆಯಲ್ಲಿ ಒಂದು ಮಾತು, ನನ್ನ ಗಂಡ ಕಡಾ ಖಂಡಿತವಾಗಿ ಕ್ರೆಡಿಟ್ ಕಾರ್ಡ್ ಹಾಗೂ ಆನ್ ಲೈನ್ ಶಾಪಿಂಗ್ ಬ್ಯಾನ್ ಮಾಡಿರುವುದರಿಂದ ನನ್ನ ಪಾಡು ಉಳಿದವರಿಗಿಂತ ವಾಸಿ. ಇಲ್ಲವಾದರೆ ‘ಕನ್ಫೆಶನ್ಸ್ ಆಫ್ ಎ ಶಾಪೋಹಾಲಿಕ್‘ ಎಂಬ ಇಂಗ್ಲಿಷ್ ಸಿನಿಮಾದಂತೆ ನಮ್ಮ ಬದುಕೂ ಆಗುವ ದಿನ ದೂರವಿಲ್ಲ. ಅಮೆಜಾನ್ ಕಾಡಿಗೆ ಹೋದರೂ ಮನಃಶಾಂತಿ ದಕ್ಕುವುದಿಲ್ಲ. ಹಾಗಾಗಿ ಈ ಗಲೇ ಎಚ್ಚೆತ್ತು (e) ಕಾರ್ಟ್ ಗಳನ್ನೇ ಫ್ಲಿಪ್ ಮಾಡುವುದೊಳಿತು.







good article. Regards,
Very nicely written Jayashri..all ladies ccan connect to the article as we are searching happiness in materials..need to take u turn
Very well written. Yes. Even I could connect myself to your write up as I too am a shopaholic but this year I’ve made up my mind not to yield to such desires. Had a hearty laugh while going through your article, especially these lines: ರಿಪೇರಿ ಚಾರ್ಚ್ ನಲವತ್ತು ಡಾಲರ್ ಅಂತ ಹೇಳಿ ನನ್ನ ಬೆಚ್ಚಿಬೀಳಿಸಿದ್ದ ಆ ಚಪ್ಪಲಿ ರಿಪೇರಿಯವ. ಅಂದೇ ಮನೆಗೆ ಬಂದು ಹೇಳಿದ್ದೆ “ಅದಕ್ಕೇ ನಾನು ಅಷ್ಟೊಂದು ಪೇರ್ ಚಪ್ಪಲಿ ಇಟ್ಟುಕೊಂಡಿರುವುದು. ಇಲ್ಲಿ ರಿಪೇರಿ ತುಂಬಾ ಕಾಸ್ಟ್ಲಿ“ ಅಂತ. ha ha ha.. 🙂
Thank you all for your likes and comments!
ಆಪ್ತ, ಪ್ರಸ್ತುತ ಕ್ರೆಡಿಟ್ ಕಾರ್ಡ್ ಜಾಲಕ್ಕೆ ಸಿಕ್ಕಿ ಬಲಿಪಶು ಆದವರಿಗೆ ಚಾಟಿಏಟಿನ೦ತಿರುವ ಲೇಖನ. ಕೊಳ್ಳುಬಾಕ ಸ೦ಸ್ಕೃತಿಯ ರಿಸೀವಿ೦ಗ್ ಎ೦ಡ್ ನಲ್ಲಿರುವರಿಗೆ ಅಗತ್ಯ ವಾರ್ನಿ೦ಗ್ ಇದು.