ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅಮೃತ ಬಳ್ಳಿ ನಾನು…’ – ಇಶ್ರತ್ ನಿಸಾರ್

ಎರಡು ಕವನಗಳು

– ಇಶ್ರತ್ ನಿಸಾರ್

ಅಮೃತ ಬಳ್ಳಿ

ಮುಂಗಾರ ಮೊದಲ
ಮಳೆ ಹನಿಗೆ
ಘಮ್ಮಂತ ತೆರೆಕೊಳ್ಳುವ
ಮಣ್ಣಿನ ಘಮಲು ನಾನು
 
ಕಾದ ಭುವಿಯ ಒಡಲ
ಕಾತರದ ಕ್ಷಣ ನಾನು, ಮಳೆ
ಹನಿಯನಿತು ಬಿಡದೆ ಹೀರಿಕೊಂಡು
ಪುಟಿದೇಳುವ ಚಿಲುಮೆ ನಾನು
 
ಬಿದ್ದ ಪ್ರೀತಿಯ ಬೀಜವ ಮೊಳಸಿ
ಕುಡಿಯೊಡಸಿ ಬಸಿರಲಿ
ಹಿಡಿದಿಟ್ಟು,ನೋವು ನಲಿವಿನೊಂದಿಗೆ
ಪ್ರಸವಿಸಿ ಸಂಭ್ರಮಿಸುವ ಪ್ರಕೃತಿ ನಾನು
 
ಪುಟ್ಟ ಹೆಜ್ಜೆಯಿಟ್ಟು,ತುತ್ತಿಗೆ
ಬಾಯ್ದೆರೆದು ತೊದಲ ಮಾತಾಡಿ
ಅಮ್ಮ ಎಂದಾಗ ಸ್ವರ್ಗ ಕಾಲ್ಬುಡದಲ್ಲಿ
ಬಿದ್ದಾಂಗ ಸುಖಿಸುವವಳು ನಾನು
 
ಹರಿವ ನದಿ, ಬೀಸುವ ತಂಪೆಲರು
ಹಕ್ಕಿಯ ಕಲರವ, ಕಾಮನಬಿಲ್ಲು
ಅನುಭವದ ದಟ್ಟ ಕಾನನ
ಬದುಕಿನ ಜೀವ ಸಂಜೀವಿನಿ ನಾನು
 
ನನ್ನ ಇರುವ ಕಡೆಗಣಿಸಿ ಆಸ್ತಿತ್ವ
ನಿರಾಕರಿಸಿ, ಅನಾಮಧೇಯಳಾಗಿಸಿ
ಬದುಕು ಕಟ್ಟುವ ನಿನ್ನ ಉಮೇದನ್ನು
ಧಿಕ್ಕರಿಸಿ ಚಿಗುರ ಬಲ್ಲ ಅಮೃತ ಬಳ್ಳಿ ನಾನು
 
ಮೌನಕ್ಕೆ ಮಾತು ಬಂದಾಗ

ಮೌನಕ್ಕೆ ಮಾತು ಬಂದಾಗ
ತೆರಕೊಂಡ ಅರ್ಥಗಳು
ಮುಚ್ಚಿದ ಎವೆಯೊಳಗಿನಿಂದ
ಬಿಚ್ಚಿಕೊಂಡ ಕನಸುಗಳು
ಗರಿಗೆದುರಿ ಹಾರುತ್ತಾವ
 
ಮನ ಮೌನದ ಕೌದಿಯೊಳಗಿನಿಂದ
ಒಂದಿಷ್ಟು ಇಣುಕಿ,ಹೊರ
ಬರಲು ತಾವ ಹುಡುಕಿ
ಅಕ್ಷರಕ್ಕೆ ಅಕ್ಷರವ ಜೋಡಿಸಿ
ಮಾತ ಬಿಚ್ಚಿಟ್ಟ…ಆ..ಕ್ಷಣ
 
ಮನದ ಮೂಲೆಯಲಿ
ಮೌನಕ್ಕೂ ಕಾಣದೆ,ಮಾತಿಗೂ ಸಿಗದೆ
ಬಚ್ಚಿಟ್ಟುಕೊಂಡ ಭಾವಗಳು, ನೋವು
ನಲಿವುಗಳು,ಜಿದ್ದಿಗೆ ಬಿದ್ದಂತೆ ನಾ ಮುಂದು
ತಾ ಮುಂದೆಂದು ಮುಗ್ಗರಿಸಿ
 
ಬದುಕಿನ ಬದುಕಿನಲಿ ಕಳಕೊಂಡ
ಇಂದುಗಳಡಿಯಿಂದ ಸವೆದ ಆ
ಕನಸುಗಳ ಬಳಕೊಂಡು,ಅನುಭವದ
ಹೊಳಪಿನೊಂದಿಗೆ, ಫೀನಿಕ್ಸ್ನಂತೆ ಪುಟಿದೆದ್ದು
ಮೌನಕ್ಕೆ ಮಾತ ನೀಡಿದ ಆಕ್ಷಣ…..
 
ಮನದ ಗಾಳಿಪಟ ಮುಗಿಲೆತ್ತರಕ್ಕೆ
ಜಿಗಿದು ಬಾನಾಡಿಯಾಗಿ ಹಾರಿ
ತನ್ನೆತ್ತರದ ಮುಂದೆ ಎಲ್ಲವ ಕುಬ್ಜವಾಗಿಸಿ
ತನ್ನತನವ ಪಡಕೊಂಡ
ಆ ಕ್ಷಣ…….. ಮಾತ ಬಿಚ್ಚಿಟ್ಟ ಆ ಕ್ಷಣ…………
 
 

‍ಲೇಖಕರು avadhi

28 May, 2013

2 Comments

  1. mmshaik

    nice..mam!

    • Basavantappa

      Nimma kavite tumba chennagide. Amrutaballiya mahatwavannu kannige kattuvante chitrisiddeeri. DHANNYAVAADAGALU

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading