ಅಮೃತಾ ಹೆಗಡೆ ಅಂಕಣ- ಶಾಲೆಯ ಮೊದಲ ದಿನ…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

13

ದೊಡ್ಡ ನಿರೀಕ್ಷೆಯನ್ನೇ ಹೊತ್ತು ಹುಟ್ಟಿದ್ದ ಆವತ್ತಿನ ಸೂರ್ಯ. ನನ್ನ ಕೈಗಡಿಯಾರ ಇನ್ನೂ 9.30 ತೋರಿಸುತ್ತಿತ್ತು. ಉದ್ದದ ಖಾಲಿ ವರಾಂಡದಲ್ಲಿ ಯಾರೋ ಒಬ್ಬರು ಮಹಿಳೆ, ತನ್ನ ಪುಟ್ಟ ಮಗಳೊಂದಿಗೆ ಮಾತನಾಡುತ್ತಾ ನಿಂತಿದ್ದು ಕಂಡೆ. ಹತ್ತಿರ ಹೋಗುತ್ತಿದ್ದಂತೆ ಇಬ್ಬರ ಮುಖವೂ ಸ್ಪಷ್ಟವಾಯ್ತು. ನಮ್ಮ ಮುಖ ಕಂಡಿದ್ದೇ ನಕ್ಕು, ‘ಹೊಸಬರಾ..?’ ಎಂದರು ಆ ತಾಯಿ. ನಾನು ಪ್ರತಿ ನಗು ನಕ್ಕು ‘ಹೌದು’ ಎನ್ನುತ್ತಾ ಅಥರ್ವನ ಚಪ್ಪಲಿ ಬಿಚ್ಚತೊಡಗಿದೆ. ಚಪ್ಪಲಿ ಇಡುವ ಜಾಗದಲ್ಲಿ ಅದೇ ತಾಯಿ ಮಗುವಿನ ಜೋಡುಗಳಿದ್ದವು. ಅವುಗಳ ಪಕ್ಕದಲ್ಲಿಯೇ ನನ್ನದನ್ನೂ ಇಟ್ಟು,  ಮಧ್ಯದಲ್ಲಿ ಅಥರ್ವನ ಚಪ್ಪಲಿಯನ್ನ ಬೆಚ್ಚಗೆ ಕೂರಿಸಿದೆ. ನನ್ನ ಪಾಲಿಗಿದು ಮತ್ತೊಮ್ಮೆ ಶಾಲಾ ವಿದ್ಯಾರ್ಥಿನಿಯಾಗುವ ಯೋಗವಾಗಿದ್ದರೆ, ಅಥರ್ವನ ಪಾಲಿಗೆ ಶಾಲೆಯ ಮೊದಲ ದಿನ. ನಮ್ಮಿಬ್ಬರಿಗೂ ಪಿ.ಎ.ಡಿ.ಸಿ ಜೀವನ ಆವತ್ತಿನಿಂದ ಶುರುವಾಗಿತ್ತು.  

ನಾವು ಚಪ್ಪಲಿ ಬಿಚ್ಚಿ ಇಟ್ಟಿದ್ದನ್ನೂ ಮಗಳಿಗೆ ವಿವರಿಸುತ್ತಾ, ನನ್ನ ಹಿಂದೆಯೇ ಬಂದು ನಿಂತಿದ್ದ ಅವರು, ‘ನೋಡು, ಹೊಸ ಹುಡುಗ, ಹೊಸ ಆಂಟೀ ನಮ್ಮ ಶಾಲೆಗೆ ಬಂದಿದ್ದಾರೆ. ನಮ್ಮ ಶಾಲೆಯಲ್ಲಿ ಮಾತಿನ ತರಬೇತಿ ಪಡೆಯಲು ಅವನು ಬಂದಿದ್ದಾನೆ. ಅವನ ಹೆಸರು ಗೊತ್ತಿದೆಯಾ..? ಇಲ್ಲ.  ಕೇಳೋಣ ಬಾ’ ಅನ್ನುತ್ತಿದ್ದರು. 

ನಸು ನಗುವಿನಿಂದ ತಮ್ಮನ್ನು ತಾವೂ ಪರಿಚಯಿಸಿಕೊಂಡು, ನಮ್ಮ ಬಗ್ಗೆಯೂ ತಿಳಿದುಕೊಂಡು ಮೆಲು ದನಿಯಲ್ಲಿ ಮಗಳಿಗೆ ಎಲ್ಲವನ್ನೂ ಹೇಳುತ್ತಿದ್ದ ಜ್ಯೋತಿ ಮೊದಲ ನೋಟದಲ್ಲಿಯೇ ಇಷ್ಟವಾದರು ನನಗೆ. ಇಂದಿಗೂ ಒಳ್ಳೆಯ ಸ್ನೇಹಿತೆಯರಾಗಿರುವ ನಾವು ಆವತ್ತೇ ನಮ್ಮಿಬ್ಬರ ಸ್ನೇಹಕ್ಕೆ ಅಡಿಪಾಯ ಹಾಕಿದ್ದೆವು. ‘ಮಗೂಗೆ ಹಿಯರಿಂಗ್​ ಏಡ್​ ಹಾಕಿಲ್ವಾ..?’ ಪ್ರಶ್ನೆ ಇಟ್ಟರು. ‘ಇಲ್ಲ ಜ್ಯೋತಿ, ಆಯಿಶ್​ನಲ್ಲಿ ಬುಕ್​ ಮಾಡಿ ಒಂದು ತಿಂಗಳಿಗೂ ಮೇಲಾಯ್ತು. ಇನ್ನೂ ಅವರಿಂದ ಸುದ್ದಿಯೇ ಇಲ್ಲ’ ಎನ್ನುತ್ತಾ ಮುಖ ಬಾಡಿಸಿದೆ. ಅಯ್ಯೋ ಹೌದಾ.. ಮತ್ತೆ ವಿಚಾರಿಸಿ..’ ಅವರ ಕಣ್ಣಲ್ಲಿ ಕಾಳಜಿ ಇತ್ತು. ಮನಸ್ಸಿನ ತುಂಬಾ ಅದೇ ಯೋಚನೆಯಲ್ಲಿಯೇ ಇದ್ದ ನನಗೆ ಮತ್ತೆ ಹೊಟ್ಟೆಯೊಳಗೆ ತಳಮಳ ಶುರುವಾಯಿತು.

‘ಪ್ರವೀಣ್​ ಸರ್ ​ಅಂತ ಆಡಿಯೋಲಾಜಿಸ್ಟ್​ ಇದಾರೆ. ನಾಳೆ ನನ್ನ ಮಗಳಿಗೆ ಲಿಸನಿಂಗ್ ​ಥೆರಪಿ ಕೊಡೋಕೆ ಬರ್ತಾರೆ, ಅವರನ್ನೊಮ್ಮೆ ಕೇಳಿ ನೋಡಿ’ ಎಂದು ಅವರಂದಾಗ, ನನಗೆ ದೀಪಾ ಅಕ್ಕಾ ಕೂಡ ಪ್ರವೀಣ್ ​ರಾಯನ ಗೌಡರ್​ ಎಂಬುವವರ ಫೋನ್​ ನಂಬರ್ ​ಕೊಟ್ಟು ಮಾತನಾಡಲು ಹೇಳಿದ್ದು ನೆನಪಾಯ್ತು. ಅವರೇ ಇವರು ಎಂದು ಖಾತರಿಯಾಗುತ್ತಿದ್ದಂತೆ ಇವತ್ತೇ ಪ್ರವೀಣ್​ ಸರ್​ಗೆ ಫೋನ್ ​ಮಾಡಬೇಕು ಅಂದುಕೊಂಡೆ.   

ನಾವಿದೆಲ್ಲ ಮಾತನಾಡುವಾಗ, ಕಣ್ಣಲ್ಲೇ ಪರಸ್ಪರ ಪರಿಚಯ ವಿನಿಮಯಿಸಿಕೊಂಡ ನಮ್ಮಿಬ್ಬರ ಮುಗ್ಧ ಕಂದಮ್ಮಗಳು ಅವರ ಆಟ ಶುರು ಮಾಡಿಬಿಟ್ಟಿದ್ದರು. ಜ್ಯೋತಿ ಮಗಳು ಪುಟ್ಟ ಅಮೃತಾ ತೊದಲು ನುಡಿಯುತ್ತಾ, ಉದ್ದದ ಒರಾಂಡದಲ್ಲಿ ಅಥರ್ವನ ಕೈ ಹಿಡಿದು ಓಡುತ್ತಿದ್ದಳು. ವಯಸ್ಸಿನಲ್ಲಿ ಅಥರ್ವನಿಗಿಂತ ಒಂದು ವರ್ಷ ದೊಡ್ಡವಳಾಗಿರುವ ಅಮೃತಾಗೆ ಕಾಕ್ಲಿಯರ್​ ಇಂಪ್ಲಾಂಟ್​ ಸರ್ಜರಿಯಾಗಿ ಆಗಷ್ಟೇ 6 ತಿಂಗಳುಗಳಾಗಿದ್ದವು. ಅಷ್ಟೇ ಅವಧಿಯಲ್ಲಿಯೇ ಎರಡೆರಡು ಅಕ್ಷರಗಳನ್ನ ಜೋಡಿಸಿ ಹೇಳಲು ಆರಂಭಿಸಿಬಿಟ್ಟಿದ್ದಳು ಅವಳು. ಆ ಪುಟ್ಟಿಯನ್ನ ನೋಡುತ್ತಿದ್ದಂತೆ, ಅದೇನೋ ಖುಷಿ ಎದೆತುಂಬಿಕೊಂಡಿತ್ತು ನನಗೆ. ಮಾತಿನ ಆರಂಭಕ್ಕೂ, ಕೊನೆಗೂ ಅಮ್ಮಾ.. ಅಮ್ಮಾ… ಅನ್ನುತ್ತಿದ್ದ ಅವಳನ್ನೇ ನೋಡಿ, ನನಗ್ಯಾವಾಗ ‘ಅಮ್ಮಾ’ ಎಂದು ಕರೆಸಿಕೊಳ್ಳುವ ಭಾಗ್ಯ ಬರುವುದೋ ಅನ್ನಿಸಿತು. 

ಬೆಳಗ್ಗೆ ಹತ್ತು ಗಂಟೆಯ ಸಮಯ ಹತ್ತಿರವಾಗುತ್ತಿದ್ದಂತೆ, ಸ್ಕೂಲಿನ ವರಾಂಡ ತುಂಬಿಕೊಳ್ಳತೊಡಗಿತು. ಎಲ್ಲ ಅಮ್ಮ ಮಕ್ಕಳೂ, ಮಾತನಾಡಿಕೊಳ್ಳುತ್ತಲೇ ಸ್ಕೂಲಿಗೆ ಬರುತ್ತಿರುವುದನ್ನ ಗಮನಿಸಿದೆ. ಎಲ್ಲರೂ ತಮ್ಮ ತಮ್ಮ ಮಗುವಿನ ಜತೆ ಮಾತನಾಡುತ್ತಲೇ ಇದ್ದರು. ಒಬ್ಬ ತಾಯಿ ತನ್ನಿಬ್ಬರು ಕಿವುಡು ಮಕ್ಕಳ ಜತೆ ಬರುತ್ತಿರುವುದನ್ನ ಕಂಡೆ.

ಎಡ ಬಲದಲ್ಲಿ ಇಬ್ಬರ ಕೈಯ್ಯನ್ನೂ ಹಿಡಿದುಕೊಂಡು ಎರಡೂ ಹೆಗಲಿಗೂ ಒಂದೊಂದು ಬ್ಯಾಗು ನೇತಾಡಿಸಿಕೊಂಡು, ಇಬ್ಬರ ಬಳಿಯೂ ಮಾತನಾಡುತ್ತಾ ಹೆಜ್ಜೆ ಹಾಕುತ್ತಿದ್ದ ಆ ಮಹಾ ತಾಯಿ ಕಂಡು ಬೆರಗಾದೆ..!  ಅರವತ್ತು ವರ್ಷಕ್ಕೂ ಹೆಚ್ಚು ವಯಸ್ಸಿನ ಇಬ್ಬರು ಅಜ್ಜಿಯರು ತಮ್ಮ ಕಿವುಡು  ಮೊಮ್ಮಕ್ಕಳ ಜತೆ ಬಂದು ವರಾಂಡದಲ್ಲಿ ಕುಳಿತಿದ್ದನ್ನ ಕಂಡು, ಮೊಮ್ಮಕ್ಕಳಿಗೆ ಮಾತು ಕಲಿಸುವ ಪ್ರಯತ್ನಕ್ಕೆ ಕೈಹಾಕಿರುವ ಆ ಇಳಿವಯಸ್ಸಿನ ಜೀವಗಳಿಗೆ ಮನಸ್ಸಿನಲ್ಲಿಯೇ ನಮಿಸಿದೆ. 

ಕೈಯ್ಯಲ್ಲಿ ರೈಟಿಂಗ್​ಪ್ಯಾಡ್​ ಹಿಡಿದು ಸ್ವಲ್ಪ ದೊಡ್ಡ ಮಕ್ಕಳನ್ನ ಜತೆಯಲ್ಲಿ ಕರೆದುಕೊಂಡು ಬಂದಿರುವ ತಾಯಿಯರ ಮುಖದಲ್ಲಂತೂ ಅದ್ಯಾವುದೋ ಆವೇಗ ಕಂಡೆ. ಅವರು ಕೇಳುವ ಪ್ರಶ್ನೆಗಳಿಗೆ ಮಕ್ಕಳು ಚಟಚಟನೆ ಉತ್ತರಿಸುವುದನ್ನ ನೋಡಿ ಚಕಿತಗೊಂಡೆ. ಶಿಕ್ಷಕಿಯರು ಶಾಲೆಗೆ ಬರುತ್ತಿದ್ದಂತೆ, ಮಕ್ಕಳು ಓಡೋಡಿ ಹೋಗಿ ಅವರ ಮುಂದೆ ನಿಂತು ಕೈ ಮುಗಿದು ‘ನಮಸ್ತೆ ಆಂಟೀ’ ಎಂದು ಜೋರಾಗಿ ಹೇಳುತ್ತಿರುವುದನ್ನು ನೋಡಿದೆ. ನಾನು ಬಂದಾಗ ಯಾರೂ ಇಲ್ಲದೆ ನಿಶ್ಯಬ್ಧವಾಗಿದ್ದ ವರಾಂಡವೀಗ ಗಿಜಿಗುಡುತ್ತಿತ್ತು. ಅಮ್ಮ ಮಕ್ಕಳ ಲೋಕವಾಗಿತ್ತು.  ಹೊಸ ಜಗತ್ತಿನಲ್ಲಿ ತಲ್ಲೀನರಾಗಿರುವ ನಾನು ಅಥರ್ವ ಇಬ್ಬರೂ ಅಷ್ಟು ಜನರನ್ನ ಒಮ್ಮೆಲೇ ನೋಡಿ ದಂಗಾಗಿಬಿಟ್ಟಿದ್ದೆವು. ಅಥರ್ವ ತನ್ನ ಪುಟ್ಟ ಕೈಗಳನ್ನ ನನ್ನ ಕತ್ತು ಬಳಸಿ ಹಿಡಿದುಕೊಂಡು ನನ್ನ ಬಿಗಿಯಾಗಿ ತಬ್ಬಿದ್ದ. 

ಸಮಯ ಹತ್ತಕ್ಕೆ ಸರಿಯಾಗಿ ಗಂಟೆ ಬಾರಿಸಿದ್ದೇ, ದೊಡ್ಡ ಮಕ್ಕಳೆಲ್ಲ ತಮ್ಮ ತಾಯಿಯ ಕೈ ಬಿಡಿಸಿಕೊಂಡು ಪ್ರಾರ್ಥನೆಯ ಕೊಠಡಿಯತ್ತ ಓಟ ಕಿತ್ತರು. ಮಕ್ಕಳನ್ನೆತ್ತಿಕೊಂಡು ಅತ್ತ ಸಾಗುತ್ತಿದ್ದ ಚಿಕ್ಕಮಕ್ಕಳ ತಾಯಿಯರ ಜತೆ ನಾನೂ ಹೆಜ್ಜೆಹಾಕಿದೆ. ಅವರಂತೆಯೇ ನನ್ನ ಬ್ಯಾಗ್​ನ್ನ ವರಾಂಡದಲ್ಲಿಯೇ ಇಟ್ಟು, ಹಿಂದಿನ ಸಾಲಿನಲ್ಲಿ ಹೋಗಿ ಕುಳಿತೆ. ಅಕ್ಕ ಪಕ್ಕದಲ್ಲಿ ಕುಳಿತಿದ್ದ ತಾಯಿಯರೆಲ್ಲ ನನ್ನನ್ನು ಮುಂದಿನ ಸಾಲಿಗೆ ಕಳಿಸಿದರು. ಸಾಲಾಗಿ ಕುಳಿತಿದ್ದ ಎಲ್ಲ ತಾಯಿಯರೂ ತಮ್ಮ ತಮ್ಮ ಮಕ್ಕಳನ್ನು ತಮ್ಮ ಎದುರಿಗೆ ನಿಲ್ಲಿಸಿಕೊಂಡರು. ಮಡಿಲಲ್ಲಿ ಬೆಚ್ಚಗೆ ಕುಳಿತಿದ್ದ ಅಥರ್ವನನ್ನ ಎಬ್ಬಿಸಿ ನಾನೂ ನನ್ನೆದುರಿಗೆ ನಿಲ್ಲಿಸಿಕೊಂಡೆ. ರಂಪ ಮಾಡದೆ ಎಲ್ಲ ಮಕ್ಕಳನ್ನ ನೋಡಿ ತಾನೂ ಕೈ ಮುಗಿದು ನಿಂತುಕೊಂಡ. ಪ್ರಾರ್ಥನೆ ಶುರುವಾಯಿತು.

ಶ್ಲೋಕದಿಂದ ಆರಂಭವಾಗಿ, ನಾಡಗೀತೆ ರಾಷ್ಟ್ರಗೀತೆಯ ತನಕ ಹೇಳಿ ಮುಗಿಸುವ ತನಕ ಸುಮಾರು 10 ನಿಮಿಷಗಳಾಗಿದ್ದವು. ಅಷ್ಟೊತ್ತು ಅಥರ್ವ ನನ್ನೆದರುರಿಗೆ ನಿಲ್ಲುತ್ತಾನೆಯೇ..? ಕನಿಷ್ಟ ಐದು ಬಾರಿ ನನ್ನಿಂದ ದೂರ ಓಡಿ ಹೋಗಿ ಬಾಗಿಲಿನಲ್ಲಿ ನಿಂತುಕೊಂಡು, ಬಾ ಹೋಗೋಣ ಎನ್ನುವಂತೆ ಸನ್ನೆ ಮಾಡುತ್ತಿದ್ದ. ಎದ್ದು ಹೋಗಿ ಅವನನ್ನೆತ್ತಿಕೊಂಡು ಬಂದು, ಮತ್ತೆ ಮತ್ತೆ ನನ್ನೆದುರಿಗೆ ನಿಲ್ಲಿಸಿಕೊಂಡೆ. ಕೊಸರಾಡಿದ. ಕೂಗಾಡಿದ. ರಚ್ಚೆಹಿಡಿದ. ಅಂತೂ ಪ್ರಾರ್ಥನೆ ಮುಗಿದಿತ್ತು. ನಮ್ಮ ದಾಖಲಾತಿ ಆಗಿದ್ದನ್ನು ಖಾತರಿಪಡಿಸಿಕೊಂಡ ಶಿಕ್ಷಕಿಯರು ಹಾಜರಿ ಪುಸ್ತಕದಲ್ಲಿ ಅಥರ್ವನ ಹೆಸರನ್ನೂಸೇರಿಸಿದರು. ಶಿಕ್ಷಕಿಯರು ಹೆಸರು ಕೂಗುತ್ತಿದ್ದಂತೆ, ಒಬ್ಬೊಬ್ಬರೇ ಮಕ್ಕಳು ‘ಬಂದಿದ್ದೇನೆ ಆಂಟೀ’ ಅನ್ನುತ್ತಿದ್ದರು. ಹೇಳಲು ಇನ್ನೂ ಕಲಿಯದ ಮಕ್ಕಳಿಗೆ ಅವರ ಅಮ್ಮಂದಿರು ‘ಬಂದಿದ್ದೇನೆ ಆಂಟೀ’ ಎಂದು ನಿಧಾನವಾಗಿ ಹೇಳಿಕೊಡುತ್ತಿದ್ದರು. ಅಥರ್ವನ ಹೆಸರು ಕೂಗುತ್ತಿದ್ದಂತೆ ನಾನೂ ಅವರನ್ನೇ ಅನುಕರಿಸಿದೆ. 

ಇದೆಲ್ಲ ನಡೆದ ಹಿಂದಿನ ದಿನವಷ್ಟೇ, ನಾನು ಅಥರ್ವ ಮೈಸೂರಿಗೆ ಅಧಿಕೃತ ವಲಸಿಗರಾಗಿದ್ದೆವು. 2017ರ ಕನ್ನಡ ರಾಜ್ಯೋತ್ಸವದ ದಿನವದು.  ಮಟ ಮಟ ಮಧ್ಯಾಹ್ನ 1.30ರ ಸಮಯ ಮೈಸೂರಿನ ಭೋಗಾದಿಯಲ್ಲಿ ನಾವು ನೋಡಿದ ಮನೆ ತಲುಪಿಯಾಗಿತ್ತು. ಕಾರ್​ಡಿಕ್ಕಿಯಲ್ಲಿ ತುಂಬಿಕೊಂಡು ಬಂದಿದ್ದ ಪಾತ್ರೆ-ಪಗಡೆ ಸಾಮಾನುಗಳನ್ನೆಲ್ಲ ಮನೆಯೊಳಗಿಡಲು ಐದು ನಿಮಿಷವೂ ಬೇಕಾಗಲಿಲ್ಲ. ಸಮಯಕ್ಕೆ ಸರಿಯಾಗಿ, ಸುರಕ್ಷಿತವಾಗಿ ನಮ್ಮನ್ನು ಭೋಗಾದಿ ತಲುಪಿಸಿ ಹೊರಟೇಬಿಟ್ಟರು ನಮ್ಮನ್ನು ಬೆಂಗಳೂರಿನಿಂದ ಮೈಸೂರಿಗೆ ಕರೆತಂದಿದ್ದ ಸ್ನೇಹಿತ ದಂಪತಿ. 

ಕಟ್ಟಿದ್ದ ಗಂಟು ಬಿಚ್ಚಿ ಎಲ್ಲವನ್ನೂ ತೆಗೆದು ಅದರದರ ಜಾಗಗಳಿಗೆ ಎತ್ತಿಡುತ್ತಿದ್ದಂತೆ, ಅಥರ್ವನ ಅಪ್ಪ ಮತ್ತು ಚಿಕ್ಕಪ್ಪ ಇಬ್ಬರೂ ಅಕ್ಕಿ, ಬೇಳೆ, ಕಾಳು-ಕಡಿ, ಹಣ್ಣು ತರಕಾರಿ ತರಲು ಬೈಕ್​ಏರಿದರು. ನಾನು ಮನೆಯನ್ನೆಲ್ಲ ಒಪ್ಪಗೊಳಿಸಿದೆ. ಒಪ್ಪಗೊಳಿಸುವುದಕ್ಕಾದರೂ ಏನಿದ್ದವು…? ಅದೇ ಪಾತ್ರೆ ಪಗಡೆ ಬಟ್ಟೆ. ನಾನು ಎಲ್ಲವನ್ನೂ ಎತ್ತಿಡೋದನ್ನ ನೋಡುತ್ತಿದ್ದ ಅಥರ್ವ, ತಾನೂ ಬಂದು ಬ್ಯಾಗ್​ಒಳಗೆ ಕೈ ಹಾಕಿ, ತನ್ನ ಆಟದ ಸಾಮಾನುಗಳನ್ನೆಲ್ಲ ತೆಗೆದು ನೆಲಕ್ಕಿಟ್ಟುಕೊಳ್ಳತ್ತಿದ್ದ. ಅದೇನು ಅರ್ಥಮಾಡಿಕೊಂಡಿತ್ತೋ ಮಗು, ಖುಷಿಯಲ್ಲಿಯೇ ಇದ್ದ. 

ಪಕ್ಕದಲ್ಲಿಯೇ ಇದ್ದ ನಮ್ಮತ್ತೆಯ ದೂರದ ಸಂಬಂಧಿ ಗಂಗಕ್ಕಾ ಎಲ್ಲರನ್ನೂ ಊಟಕ್ಕೆ ಕರೆದು, ಹಸಿದು ದಣಿದ ಎಲ್ಲರಿಗೂ ಅನ್ನವಿಕ್ಕಿ, ಋಣಭಾರ ಹೆಚ್ಚಿಸಿದ್ದರು. ಮೈಸೂರಿನ ಮತ್ಯಾವುದೋ ಪ್ರದೇಶದಲ್ಲಿರುವ ಮನೆಯೊಡೆಯ, ಒಂದು ರೂಪಾಯಿ ಅಡ್ವಾನ್ಸ್​ಪಡೆಯದೇ, ಮನೆಯ ಕೀ ಕೂಡ ಕೊಟ್ಟು, ಅಡ್ವಾನ್ಸ್ ​ಯಾವಾಗಬೇಕಾದೂ ಕೊಡಿ ಎಂಬ ಉದಾರಭಾವ ತೋರಿದ್ದಲ್ಲದೇ, ನಾವು ಸುರಕ್ಷಿತವಾಗಿ ಬಂದು ತಲುಪಿದ್ದನ್ನ ಖಾತರಿಪಡಿಸಿಕೊಂಡು ಫೋನ್​ನಲ್ಲಿಯೇ ಶುಭಹಾರೈಸಿದ್ದರು. ಇವರದೆಲ್ಲ ಯಾವ ಜನ್ಮದ ಮೈತ್ರಿಯೋ ತಿಳಿಯೆ. 

ಗಂಗಕ್ಕನ ಮನೆಯಲ್ಲಿ ಊಟಮಾಡಿದ್ದೇ, ವಿಜಯ್ ​ಬಾವ ಬೆಂಗಳೂರಿಗೆ ಹೊರಟೇಬಿಟ್ಟರು. ಆಫೀಸಿಗೆ ರಜಾ ಹಾಕಲಾರದ ಪರಿಸ್ಥಿತಿಯ ಕೈಗೊಂಬೆಯಾಗಿದ್ದ ವಿನಯ್​ಕೂಡ ವಲ್ಲದ ಮನಸ್ಸಿನಿಂದ ತನ್ನ ತಮ್ಮನ ಜತೆ ಹೊರಟು ನಿಂತಿದ್ದ. ತಿಳಿಯದ ಊರಲ್ಲೊಂದು ಮನೆಯ ಮಾಡಿ, ನಾನೊಬ್ಬಳೇ ಮಗನ ಜತೆ ಉಳಿಯಬೇಕಾದ ಸಂದರ್ಭ ಅಂತೂ ಬಂದೇಬಿಟ್ಟಿತ್ತು ನೋಡಿ..! ಹೀಗೊಂದು ಪರಿಸ್ಥಿತಿ ನನ್ನ ಜೀವನದಲ್ಲಿ ಎದುರಾಗಬಹುದೆಂಬ ಅಂದಾಜೇ ಇರಲಿಲ್ಲ ನನಗೆ. ಎಲ್ಲರಿಂದ ದೂರಾಗಿ ಎಲ್ಲಿಯೋ ಕಳೆದುಹೋಗುತ್ತಿದ್ದೇನೇನೋ ಎಂಬ ಭಾವ ಮನಸ್ಸಿನಲ್ಲಿದ್ದರೂ, ಮಗನ ಬಾಯಲ್ಲಿ ಮಾತು ಕೇಳುವ ತುಡಿತವೇ ಹೆಚ್ಚು ಶಕ್ತಿ ನೀಡುತ್ತಿತ್ತು. ಎದೆಯಲ್ಲೇನೋ ಮಿಶ್ರಭಾವ ತಳಮಳಿಸುತ್ತಿದ್ದರೂ, ವಿನಯ್​ಹೊರಟು ನಿಂತಾಗ ಕಣ್ಣಲ್ಲಿ ನೀರು ಜಿನುಗಿರಲಿಲ್ಲ. ರಾತ್ರಿ ಮಗು ಮಲಗಿ ಎಷ್ಟೋ ಹೊತ್ತಾದ ಮೇಲೆಯೂ, ಕಣ್ಣಿಗೆ ನಿದ್ದೆಯೇ ಬಂದಿರಲಿಲ್ಲ.

ಅಥರ್ವನ ಉಸಿರಿನ ಏರಿಳಿತದ ಶಬ್ಧ ಕೇಳಿಸುವಷ್ಟು ನಿಶ್ಯಬ್ಧ ಅಲ್ಲಿತ್ತು. ಹೊಸ ಜಾಗದಲ್ಲಿ ನಾನೊಬ್ಬಳೇ ಮಲಗಿರುವ ಆ ನಿಶ್ಯಬ್ಧ ಪ್ರದೇಶದಲ್ಲಿ ಕಾಡುವ ಭಯಕ್ಕೋ, ತಲೆಯಲ್ಲಿ ಧುಮುಗುಡುತ್ತಿದ್ದ ನಾನಾ ಯೋಚನೆಗಳಿಗೋ ಗೊತ್ತಿಲ್ಲ ಒಂದಷ್ಟು ಕಣ್ಣೀರು ಒತ್ತರಿಸಿತು. ನಭ ಕಟ್ಟಿಕೊಂಡ ಮೋಡ ಮಳೆಯಾಗಿ ಸುರಿದಂತೆ. ಹಗುರವಾದಂತಾಗಿ, ಅದೆಷ್ಟೋ ಹೊತ್ತಿಗೆ ನಿದ್ದೆಗೆ ಜಾರಿದ್ದೆ. ಮರುದಿನ ಒಂಭತ್ತು ಗಂಟೆಗೇ ಆಟೋಗೆ ಬರಹೇಳಿದ್ದರು ಗಂಗಕ್ಕಾ. ಅವರ ಮನೆಯಲ್ಲಿಯೇ ಬೆಳಗ್ಗಿನ ತಿಂಡಿ ತಿಂದು, ಅಥರ್ವನಿಗೂ ತಿನ್ನಿಸಿ, ಮಧ್ಯಾಹ್ನಕ್ಕೂ ಸ್ವಲ್ಪ ಅದನ್ನೇ ಕಟ್ಟಿಕೊಂಡು, ಆಟೋ ಹತ್ತಿ ಶಾಲೆಗೆ ಬಂದಿದ್ದೆ.     

ಪ್ರಾರ್ಥನೆ ಮುಗಿದಿದ್ದೇ, ಎಲ್ಲಿಗೆ ಹೋಗಬೇಕು..? ಯಾವ ತರಗತಿಯಲ್ಲಿ ಕೂರಬೇಕೆಂದು ತಿಳಿಯದೆ ಆಫೀಸ್​ರೂಮ್​ನ ಹತ್ತಿರವೇ ಮಗುವನ್ನೆತ್ತಿಕೊಂಡು ನಿಂತಿದ್ದ ನನ್ನನ್ನು, ದೇವಮ್ಮಾ ಆಂಟೀ (ಶಿಕ್ಚಕಿ) ಬಂದು ಅವರ ಜತೆ ನನ್ನ ಕರೆದುಕೊಂಡು ಹೋಗಿ, ಅದಾಗಲೇ ವೃತ್ತಾಕಾರವಾಗಿ ಕುಳಿತಿದ್ದ ಅಮ್ಮ ಮಕ್ಕಳ ಗುಂಪಿಗೆ ಸೇರಿಸಿದರು. ಚಿಕ್ಕಮಕ್ಕಳದೇ ಗುಂಪು ಅದು. ಆಂಟಿ ಹೊಸದಾಗಿ ಸ್ಕೂಲಿಗೆ ಬಂದಿದ್ದ ಅಥರ್ವನನ್ನು ತಮ್ಮ ಹತ್ತಿರ ನಿಲ್ಲಿಸಿಕೊಂಡು, ಗುಂಪಿನಲ್ಲಿದ್ದ ಎಲ್ಲರಿಗೂ ಅಥರ್ವನನ್ನ ಪರಿಚಯಿಸುತ್ತಿದ್ದರು.

‘ಇವನು ಹೊಸದಾಗಿ ನಮ್ಮ ಸ್ಕೂಲಿಗೆ ಬಂದಿದ್ದಾನೆ. ಇವನ ಹೆಸರು ಅಥರ್ವ. ಇವನು ಒಬ್ಬ ಹುಡುಗ. ಇವನು ಬೆಂಗಳೂರಿನಿಂದ ಬಂದಿದ್ದಾನೆ. ಇವರು ಅಮೃತಾ ಆಂಟೀ. ಅಥರ್ವನ ಅಮ್ಮ.’ ಎಲ್ಲ ಪದಗಳನ್ನೂ ಬಿಡಿಬಿಡಿಯಾಗಿ ನಿಧಾನವಾಗಿ ಮಕ್ಕಳಿಗೆಲ್ಲ ಹೇಳಿದರು. ತನ್ನಮ್ಮನ ಮಡಿಲಲ್ಲಿ ಕುಳಿತು, ಅಥರ್ವ ನನ್ನ ಕಣ್ಣಲ್ಲೇ ಮಾತನಾಡಿಸುತ್ತಿದ್ದ ಪುಷ್ಕರ್​ ನಿಧಾನಕ್ಕೆ ಬಂದು ಅಥರ್ವನ ಮುಂದೆ ಕುಕ್ಕರಗಾಲಿನಲ್ಲಿ ಕುಳಿತು, ಅಥರ್ವನ ಕೈ ಹಿಡಿದು ಖುಷಿಯಿಂದ ನಕ್ಕಿದ್ದ.  ಎಷ್ಟೋ ದಿನಗಳಿಂದ ಪರಿಚಯವೇನೋ ಎಂಬಂತೆ ಇಬ್ಬರೂ ಮಾತಿನ ಹಂಗೇ ಇಲ್ಲದೆ ಸಂಭಾಷಿಸುವುದನ್ನ ನೋಡಿ ಅವನಮ್ಮನಿಗೂ ನನಗೂ ಆಶ್ಚರ್ಯವಾಗಿತ್ತು. 

‘ಪುಷ್ಕರ್​ ಸನ್ನೆ ಮಾಡಬಾರದು. ಮಾತನಾಡಬೇಕು. ಇವನು ಅಥರ್ವ. ಅಥರ್ವನನ್ನ ತೋರಿಸು’ ಅಂದರು ಅವನಮ್ಮ ಸೌಮ್ಯ. ಒಂದೇ ವಯಸ್ಸಿನ ಅಥರ್ವ- ಪುಷ್ಕರ್ ​ಅಂದೇ ಗೆಳೆಯರಾಗಿಬಿಟ್ಟಿದ್ದರು. ಮತ್ತೊಮ್ಮೆ ಗಂಟೆ ಬಾರಿಸಿತು. ಎಲ್ಲರೂ ಗಡಿಬಿಡಿಯಲ್ಲೆದ್ದು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಇನ್ನೊಬ್ಬ ತಾಯಿಗೆ ಒಪ್ಪಿಸಿ, ತಾವೂ ಇನ್ಯಾರದೋ ಮಗುವನ್ನು ಕರೆದುಕೊಂಡು ಬಂದು ತಮ್ಮೆದುರಿಗೆ ಕೂರಿಸಿಕೊಂಡು ಕುಳಿತೇಬಿಟ್ಟರು. ಏನೂ ತೋಚದೇ ನಿಂತಿದ್ದ ನನಗೆ ಮುಖ್ಯ ಶಿಕ್ಷಕಿ ಗಾಯತ್ರಿ ಆಂಟಿ ನೆರವಾದರು. ಚಿಕ್ಕ ಮಗುವಿನ ತಾಯಿಯೊಬ್ಬರನ್ನು ಕರೆದು, ಅಥರ್ವನನ್ನು ಅವರ ಬಳಿ ಕಳಿಸಿಕೊಟ್ಟರು. ಹೊಸದಾಗಿ ಬಂದ ಮಕ್ಕಳು, ತನ್ನಮ್ಮನನ್ನು ಬಿಟ್ಟು ಅಪರಿಚಿತ ತಾಯಿ ಜತೆ ಪಾಠಕ್ಕೆ ಕೂರುವಾಗ ಅಳುತ್ತವಂತೆ..! ಆದರೆ ಈ ಆಸಾಮಿ ನನಗೇ ಬಾಯ್​ಮಾಡಿ, ಅವರ ಜತೆ ಹೋಗಿದ್ದು ನೋಡಿ ಆಂಟಿಗೆ ಅಚ್ಛರಿಯೋ ಅಚ್ಚರಿ..!  

‘ಅಥರ್ವ ಅಮ್ಮ, ನಿಮಗೆ ಸ್ಕೂಲ್​ಬಗ್ಗೆ, ಇಲ್ಲಿಯ ನಿಯಮಗಳ ಬಗ್ಗೆ ಹೇಳಬೇಕು. ಬನ್ನಿ’ ಎನ್ನುತ್ತಾ ಆಫೀಸ್ ​ರೂಮ್​ನ ಒಳ ಕರೆದರು ಗಾಯತ್ರಿ ಆಂಟಿ. ‘ಇನ್ನೂ ಮಗುವಿನ ಹಿಯರಿಂಗ್ ಏಡ್​ಬಂದಿಲ್ಲ ಅಂತಿದ್ದೀರಾ. ದಯವಿಟ್ಟು ಅದನ್ನ ಬೇಗ ಹಾಕಿಸಿ. ಮಗು ಕೇಳಿಸಿಕೊಳ್ಳಬೇಕಲ್ವಾ..?’ ನಾನು ಹೌದು ಎಂಬಂತೆ ಗೋಣು ಅಲ್ಲಾಡಿಸಿದೆ. ‘ಹಿಯರಿಂಗ್​ಏಡ್​ ಬಂದ ಮೇಲೆ ಮಗು ಎಚ್ಚರವಿರುವಷ್ಟೂ ಹೊತ್ತು ಅದನ್ನ ಹಾಕಬೇಕು. ಅಭ್ಯಾಸವಾಗುವವರೆಗೆ ಅದನ್ನ ಹಾಕಿಕೊಳ್ಳೋಕೆ ಮಕ್ಕಳು ಕಿರಿಕಿರಿ ಮಾಡ್ತಾರೆ. ಆದರೂ ನಾವು ಬಿಡಬಾರದು. ನಂಬಿಸಿಯೋ, ಉಳಿದ ಮಕ್ಕಳನ್ನ ತೋರಿಸಿಯೋ, ಮಗು ಹಿಯರಿಂಗ್​ ಏಡ್ ​ಹಾಕಿಕೊಳ್ಳುವಂತೆ ಮಾಡಬೇಕು. ಆಮೇಲೆ ಅವನು ಹಿಯರಿಂಗ್​ಏಡ್​ ಇಲ್ಲದೆ ಇರೋದೇ ಇಲ್ಲ ನೋಡಿ’ ನಗುತ್ತಲೇ ಹೇಳಿದರು. 

‘ಮಗುವಿಗೆ ನಿದ್ದೆ ಬಂದ ಮೇಲೆ ಹಿಯರಿಂಗ್​ಏಡ್​ ತೆಗೆದು ಅದರಿಂದ ಮೋಲ್ಡ್ ​ಬೇರ್ಪಡಿಸಿ ತೊಳೆದು, ಒರೆಸಿಡಬೇಕು. ಇಲ್ಲವೆಂದರೆ ಮಗುವಿನ ಕಿವಿಯಲ್ಲಿ ಸೋಂಕಾಗಬಹುದು. ತೀಳೀತಾ..?’ ನಾನು ಹೂಂ ಅಂದೆ. ಇನ್ಮುಂದೆ, ಸ್ಕೂಲ್​ಗೆ ರಜಾ ಹಾಕಕೂಡದು. ಭಾನುವಾರ ರಜಾ ಇರುತ್ತೆ ಅಷ್ಟೆ. ಮತ್ಯಾವ ಸರ್ಕಾರಿ ರಜಾಗಳಿಗೂ ನಮ್ಮ ಸ್ಕೂಲ್​ನಿಲ್ಲೋದಿಲ್ಲ’ ‘ಅರ್ಥವಾಯಿತು ಆಂಟೀ’ ಎಂದೆ.  

‘ನಿಮ್ಮ ಮಗು ಈಗ ಆಬ್ಜೆಕ್ಟ್​ಲೆವಲ್​ನಲ್ಲಿದ್ದಾನೆ. ಅವನಿಗೆ ಎಷ್ಟು ಸಾಧ್ಯವೋ ಅಷ್ಟು ಬೇರೆ ಬೇರೆ ವಸ್ತುಗಳನ್ನು ಪರಿಚಯ ಮಾಡಿಸಬೇಕು.  ಅದಕ್ಕೋಸ್ಕರ ‘ಆಬ್ಜೆಕ್ಟ್ ಪುಸ್ತಕ’ ಮಾಡಬೇಕು. ಯಾವ ಯಾವ ಆಬ್ಜೆಕ್ಟ್​ಗಳ ಚಿತ್ರಗಳನ್ನು ನೀವು ಪುಸ್ತಕದಲ್ಲಿ ಹಚ್ಚಬೇಕು ಎಂಬುದನ್ನ ಬೇರೆ ತಾಯಂದಿರ ಪುಸ್ತಕ ನೋಡಿ, ಲಿಸ್ಟ್​ಮಾಡಿಕೊಳ್ಳಿ. ಪ್ರಾಣಿಗಳ, ಪಕ್ಷಿಗಳ, ಹಣ್ಣು, ಹೂವು, ತರಕಾರಿಗಳ ಚಿತ್ರಗಳನ್ನ ಅಂಟಿಸಿ ಅವುಗಳೆಲ್ಲದರ ಪ್ರತ್ಯೇಕ ಪುಸ್ತಕಗಳನ್ನು ಮಾಡಬೇಕು. ನಿಮ್ಮ ಕುಟುಂಬದ ಎಲ್ಲರ ಫೋಟೋಗಳನ್ನೂ ಅಂಟಿಸಿ, ಅವರ ಹೆಸರು ಸಂಬಂಧ ಬರೆದು ‘ಸಂಬಂಧಗಳ ಪುಸ್ತಕ’ ಮಾಡಿಟ್ಟುಕೊಳ್ಳಬೇಕು. ಒಟ್ಟೂ ಒಂಭತ್ತು ಬಗೆಯ ಪುಸ್ತಕಗಳಾಗುತ್ತವೆ.’  

‘ಇದೆಲ್ಲ ಎಷ್ಟು ದಿನಗಳಲ್ಲಾಗಬೇಕು ಆಂಟೀ..?’ ಮಧ್ಯದಲ್ಲಿ ಬಂದ ನನ್ನ ಪ್ರಶ್ನೆಗೆ ‘ಒಂದು ವಾರ..?’ ಎಂದರು. ನಾನು ಅಷ್ಟೊಂದು ಪುಸ್ತಕಗಳನ್ನ ಒಂದೇ ವಾರದ ಅವಧಿಯಲ್ಲಿ ಹೇಗಪ್ಪಾ ಮಾಡಲಿ..? ಎಂಬ ಆತಂಕ ಮನಸ್ಸಿನಲ್ಲಿದ್ದರೂ ತೋರಗೊಡದೇ ‘ಆಗಲಿ ಆಂಟೀ’ ಎಂದೆ. ‘ಹಾಂ. ಈಗ ಪಾಠಕ್ಕೆ ಕೂತಿರೋ ನಿಮ್ಮ ಮಗುವಿಗೆ ನೀವು ಕಾಣಿಸಿಕೊಳ್ಳಬೇಡಿ. ನೀವು ಆಬ್ಜೆಕ್ಟ್​ಲೆವೆಲ್​ನ ಮಕ್ಕಳಿಗೆ ಪಾಠ ಮಾಡುತ್ತಿರುವ ಯಾರ ಬಳಿಯಾದರೂ ಕುಳಿತು, ಪಾಠ ಮಾಡೋದು ಹೇಗೆ ಅನ್ನೋದನ್ನ ಗಮನಿಸಿಕೊಳ್ಳಿ. ಹೋಗಿ’ ಸೂಚಿಸಿದರು ಅವರು. ನಾನು ಅಲ್ಲಿಂದೆದ್ದು ಹೋಗಿ ಚಿಕ್ಕ ಮಗುವಿಗೆ ಪಾಠ ಮಾಡುತ್ತಿದ್ದ ಒಬ್ಬ ತಾಯಿಯ ಬಳಿ ಕುಳಿತುಕೊಂಡೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

August 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸವಿತಾ

    ತುಂಬಾ ಚೆನ್ನಾಗಿದೆ. ಓದುತ್ತಾ ಕಣ್ಣೀ ರೂ ಬಂತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: