ಅಫ್ಘನ್ ನೆಲದ ಕ್ರಿಕೆಟಿಗನ ಅಕ್ಷರ ಕಣ್ಣೀರು…

ರಮಾಕಾಂತ್‌ ಆರ್ಯನ್

ಅವನು ರಶೀದ್ ಖಾನ್ ಅರ್ಮಾನ್ ಎಂಬ ಮದ್ದುಗುಂಡುಗಳ ಭೂಮಿಯಲ್ಲಿ ಅರಳಿದ ಕ್ರಿಕೆಟ್ ಹುಡುಗ. ಯಾವ ದೇಶದ ಕ್ರಿಕೆಟ್ ತಂಡಕ್ಕಾದರೂ ಸಿಗಬಹುದಾದ ಬೆಂಕಿಯಂಥ ಆಲ್​ರೌಂಡರ್ ! ಒಂಥರಾ ಬೆಂಕಿಯಲ್ಲಿ ಅರಳಿದ ತಾಲಿಬಾನ್​ ನೆಲದ ಮಸಣದ ಹೂವು!

ಒಂದಿಪ್ಪತ್ತು ವರ್ಷಗಳ ಕಾಲ ತಾಲಿಬಾನ್ ರಕ್ಕಸರು ಅದ್ಯಾವುದೋ ಬಿಲಗಳಲ್ಲಿ ಅಡಗಿದ್ದರಲ್ಲ, ಅದೇ ವೇಳೆ ಮನೆಯಿಂದ ಆಚೆ ಬಂದು ಚೆಂಡು, ಬ್ಯಾಟ್ ಹಿಡಿದಿದ್ದ ಹುಡುಗ ಇವನು. ಇವನಂತೆ ಒಂದಷ್ಟು ಹುಡುಗರು ಆಡಲಿಕ್ಕೆ ಇಳಿದಿದ್ದರು! ಇದೊಂಥರಾ ಆಫ್ಘನ್ ಲಗಾನ್! ಸುಮಾರು 3 ಕೋಟಿ ಜನಸಂಖ್ಯೆಯ ದೇಶದಲ್ಲಿ ಒಂದು ಅದ್ಭುತ ಎನಿಸುವ ತಂಡವೇ ರೆಡಿಯಾಗಿಬಿಟ್ಟಿತ್ತು. ಈ ತಂಡದ ಹುಡುಗರಂತೂ ವಿಶ್ವಕ್ಕೆ ಆಸ್ತಿಯಾಗುವ ರೀತಿಯಲ್ಲಿ ಆಡಿದರು, ಆಡುತ್ತಿದ್ದಾರೆ ಕೂಡಾ!

ಆದರೆ ಒಂದು ದಟ್ಟ ದರಿದ್ರ ಸಮಯದಲ್ಲಿ, ಅಫ್ಘನ್, ತಾಲಿಬಾನಿಗಳ ಆಡುಂಬೊಲವಾಗಿಬಿಟ್ಟಿತ್ತಲ್ಲ. ಅಲ್ಲಿಗೆ ಎಲ್ಲ ಚೆಂಡಾಟಗಳೂ ಮುಗಿದವು. ರುಂಡಮುಂಡಗಳ ಚೆಂಡಾಟ ಮಾತ್ರ ಚಾಲ್ತಿಯಲ್ಲಿ. ಅಲ್ಲಿನ ಸಂಸತ್ತಿಗೆ ನುಗ್ಗಿ ಸ್ಪೀಕರ್ ಚೇರ್​ ಮೇಲೆ ಕೂತರೆ, ಹೇಗೆ ಕಾಣುತ್ತೇನೆ ಎಂದು ವಿಡಿಯೋ ಮಾಡೋ ಎಂಬಲ್ಲಿಗೆ, ಅದು ಅಟ್ಟಹಾಸದ ಪರಾಕಾಷ್ಠೆ! ಅಮ್ಯೂಸ್ಮೆಂಟ್ ಪಾರ್ಕ್​ಗಳಿಗೆ ನುಗ್ಗಿ ಆಟಿಕೆ ಕಾರುಗಳಲ್ಲಿ ಅಡ್ಡಾದಿಡ್ಡಿ ಆಡಲು ಶುರು ಮಾಡಿದರು. ವಿಶ್ವಕ್ಕೆ ಅಹಿಂಸೆ ಸಾರಿದ ಬುದ್ಧನ ತಲೆಯ ಕಡೆ, ಟ್ರಿಗರ್​ ಎಳೆದರೆ 47 ಗುಂಡು ಸಿಡಿಯುವ ಕೋವಿ ಇರಿಸಿ, ಧಮ್​ ಎಳೆದು ಬಿಟ್ರಲ್ಲ! ಖುದ್ದು ಅಂಗೂಲಿಮಾಲಾನು ಬೆಚ್ಚುತ್ತಿದ್ದನೋ ಏನೋ!

ಇನ್ನೊಂದು ಕಡೆ 150 ಅಮೆರಿಕನ್​ ಸಿಬ್ಬಂದಿಯನ್ನ ಕರೆದೊಯ್ಯಲು ಬಂದಿದ್ದ ಅಮೆರಿಕದ ಯುದ್ಧವಿಮಾನಕ್ಕೆ ಜೋತುಬಿದ್ದ ಅಫ್ಘನ್ ನಾಗರಿಕರೆಷ್ಟೋ? ವಿಮಾನದ ಚಕ್ರದ ಮೇಲೆ ಕುಳಿತೇ ಹಾರಿ, ಅಲ್ಲಿಂದ ಜಾರಿ ಜೀವತೆತ್ತವರೆಷ್ಟೋ? ಹೆಣ್ಣುಮಗಳೊಬ್ಬಳ ಬಿಗಿ ಉಡುಪಿನ ಕಾರಣಕ್ಕೆ ಮೆದುಳಿನಾಳಕ್ಕೆ ಬುಲೆಟ್​ ನುಗ್ಗಿತ್ತು. ಚಪ್ಪಲಿ ಕಾಣುವ ಕಾರಣಕ್ಕೆ ಹತಳಾದವಳು ಒಬ್ಬಳು. 15 ತುಂಬಿದ, 45 ದಾಟದ ವಿಧವೆಯರು ಇದೇ ರಕ್ಕಸರ ಮೋಜಿನ ಆಟಿಕೆಗಳು.

ಈ ಕಡೆ ಆಫ್ಘನ್​ ಕ್ರಿಕೆಟ್ ತಂಡದ ಹುಡುಗರು, ಇಂಗ್ಲೆಂಡ್​ನಲ್ಲಿ The Hundred ಎನ್ನುವ ಕ್ರಿಕೆಟ್​ ಟೂರ್ನಿಯಲ್ಲಿ ಆಡುತ್ತಿದ್ದಾರೆ. ವಿಶೇಷವಾಗಿ ರಶೀದ್​ ಮತ್ತು ನಬಿ. ರಶೀದ್, ಟ್ರೆಂಟ್ ರಾಕೆಟ್ಸ್ ತಂಡದ ಪರವಾಗಿ ಚೆಂಡು ತಿರುಗಿಸುತ್ತಾನೆ ಮತ್ತು ಬ್ಯಾಟ್ ಬೀಸುತ್ತಾನೆ!

Hundred ಎಂಬುದು ಅಲ್ಲಿನ ಜನಪ್ರಿಯ ಉದ್ಘಾಟನಾ ಟೂರ್ನಿ. ತಲಾ 100 ಎಸೆತಗಳ ಪಂದ್ಯ. ಒಂಥರಾ ಮಜವಾಗಿದೆ. ಟಿ-20 ಗಿಂತ ಒಂದು ಹಂತಕ್ಕೆ ರೋಚಕ. ನಿಯಮಗಳು ನವನವೀನ! ಇಂತಹ ಟೂರ್ನಿಯಲ್ಲಿ ಹುಡುಗರು ಆಡುತ್ತಿರಬೇಕಾದರೆ, ಮನೆಗೆ ಬೆಂಕಿ ಬಿದ್ದರೆ ಹೇಗಾಗಬೇಡ!
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಅದೇಕೋ ಟ್ವಿಟರ್​ನಲ್ಲಿ ಇದೇ ರಶೀದ್ ಕಣ್ಣೀರುಗರೆದುಬಿಟ್ಟ. ಇಂಗ್ಲೆಂಡ್​ನ ಮಾಜಿ ನಾಯಕ ಕೆವಿನ್ ಪೀಟರ್​ಸೆನ್​ ಕಳವಳವಾಗುವ ರೀತಿಯಲ್ಲಿ ರಶೀದ್ ಮಮ್ಮಲ ಮರುಗಿಬಿಟ್ಟಿದ್ದ.

ರಶೀದ್​ ಬೌಂಡರಿಯಲ್ಲಿ ನಿಂತಿರಬೇಕಾದರೆ ಅವನೊಂದಿಗೆ ಪೀಟರ್​ಸೆನ್​ ತುಂಬ ಮಾತಾಡಿದ್ದ. ಅಷ್ಟೂ ಮಾತುಗಳೂ ಅಫ್ಘನ್​ನಲ್ಲಿರುವ ತಮ್ಮ ಕುಟುಂಬವನ್ನ ಆ ಬೆಂಕಿಯಿಂದ ಆಚೆ ತರುವುದು ಹೇಗೆ ಎಂಬ ಬಗ್ಗೆಯೇ! ನೋಡಿದರೆ ಅಲ್ಲಿನ ಏರ್​ಪೋರ್ಟ್​ಗಳೂ ಕೂಡಾ ಕಾರ್ಯಾಚರಿಸುವುದನ್ನ ನಿಲ್ಲಿಸಿಬಿಟ್ಟಿವೆ. ಆಚೆ ಬರುವ ಪರಿ ಹೇಗೆ ಎಂಬುದೇ ನಿಗೂಢ!

ದಿ ಹಂಡ್ರೆಡ್​ ಕ್ರಿಕೆಟ್​ ಟೂರ್ನಿಯಲ್ಲಿ ಇದುವರೆಗೂ ಇಂತಹ ಹೃದಯ ಒದ್ದೆಯಾಗುವ ಸನ್ನಿವೇಶ ಯಾರಿಗೂ ಬಂದಿಲ್ಲ ಎಂದ ಪೀಟರ್​ಸೆನ್​. ಈ ನಡುವೆ ಆಫ್ಘನ್​ ಕ್ರಿಕೆಟ್​ ಮಂಡಳಿ CEO ಹಮೀದ್​ ಶಿನ್ವಾರಿ ಹೇಳಿದ್ದು ಇಂಟರೆಸ್ಟಿಂಗ್​! ಇಲ್ಲ ಇಲ್ಲ ನಿಮಗೆ ಏನೂ ಆಗಲ್ಲಾ ತಾಲಿಬಾನಿಗಳೂ ಕ್ರಿಕೆಟ್​ ಅನ್ನ ಪ್ರೀತಿಸುತ್ತಾರೆ ಮತ್ತು ಪೋಷಿಸುತ್ತಾರೆ ಎಂಬ ಸಾಂತ್ವನ. ಈ ಸಾಂತ್ವನದ ಆಯುಷ್ಯ ಅದ್ಯಾವ ಬಂದೂಕಿನಿಂದ ಸಿಡಿಯುವ ಬುಲೆಟ್​ ನಿರ್ಧರಿಸುತ್ತದೋ ಗೊತ್ತಿಲ್ಲ!

ಈ ನೋವಿನಲ್ಲಿಯೂ ರಶೀದ್​ ಎಂಥ ಆಟವಾಡಿದ್ದ ಗೊತ್ತಾ? ಟ್ರೆಂಟ್ ರಾಕೆಟ್ಸ್​ ತಂಡವನ್ನ ನಾಕ್​ ಔಟ್​ ತಲುಪಿಸಿದ್ದ. ಮ್ಯಾಂಚೆಸ್ಟರ್​ ಒರಿಜಿನಲ್ಸ್​ ವಿರುದ್ಧ ಅವನ ಸ್ಪೆಲ್​ ಅದ್ಭುತ! 16 ರನ್​ ಕೊಟ್ಟು 3 ಭಯಂಕರ ವಿಕೆಟ್​ ಕಬಳಿಸಿದ್ದ, ಮಾರಕವೆನಿಸಿದ್ದ ಪಾರ್ಟ್​ನರ್​ಶಿಪ್​ಗಳಿಗೆ ನೀರಿಳಿಸಿದ್ದ!.
ಇಂತಹ ರಶೀದ್​ಗೆ ಪಾಕಿಸ್ತಾನ ಒಂದು ಕಡೆ ಕರೆಯುತ್ತಿದೆ, ಇನ್ನೊಂದು ಕಡೆ ಭಾರತಕ್ಕೆ ಬಂದು ಇಲ್ಲಿನ ಪ್ರಜೆಯೇ ಆಗಿಬಿಡು ರಶೀದ್,​ ಎಂದು ಅನೇಕರು ಅವನನ್ನ ಕರೆಯುತ್ತಿದ್ದಾರೆ. ವಿಷಯ ಅವನಾ? ಅವನ ಬದುಕಾ? ಕ್ರಿಕೆಟ್ಟಾ? ಕುಟುಂಬವಾ? ಇದು ಇವೆಲ್ಲದರ ಸಂಗಮವಾ? ಗೊತ್ತಿಲ್ಲ.

ರಶೀದ್​ ಖಾನ್​ ಅರ್ಮಾನ್, ಆಫ್ಘನ್​ ರಾಷ್ಟ್ರೀಯ ತಂಡವನ್ನ ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಮುನ್ನಡೆಸುತ್ತಾನೆ. ಈಗ್ಗೆ 22 ವರ್ಷಗಳ ಹಿಂದೆ ಅವನು ಅಫ್ಘನ್​ನ ನಂಗರ್​ಹರ್​ ಎಂಬಲ್ಲಿ ಹುಟ್ಟಿದವನು. 2018ರ ಜೂನ್​ನಲ್ಲಿ ಭಾರತದ ವಿರುದ್ಧವೇ ಟೆಸ್ಟ್​ನಲ್ಲಿ ಅವನ ಮೊದಲ ಪಂದ್ಯ. ಅವನು ಭಾರತದ ಸನ್​ರೈಸರ್ಸ್​ ಹೈದರಾಬಾದ್​ ಪರ ಚೆಂಡು ತಿರುಗಿಸುತ್ತಾನೆ. ಆಸ್ಟ್ರೇಲಿಯಾದ ಬಿಗ್​ಬ್ಯಾಷ್​ ಲೀಗ್​ನಲ್ಲಿ ಅಡಿಲೇಡ್​ ಸ್ಟ್ರೈಕರ್​ಗೆ ಇವನೇ ಟ್ರಂಪ್​ಕಾರ್ಡ್​! ಪಾಕಿಸ್ತಾನದ ಸೂಪರ್​ ಲೀಗ್​ನಲ್ಲಿ, ಲಾಹೋರ್​ ಕಲಂದರ್​ಗೂ ಇವನು ತುಂಬ ಬೇಕಿರುವ ಹುಡುಗ! ಎಂಥ ಪ್ರತಿಭೆಗೆ ಎಂಥ ಸಂಕಷ್ಟವಲ್ಲವಾ?

ಟೆಸ್ಟ್​ ಪಂದ್ಯಗಳಲ್ಲಿ ಇವನಷ್ಟು ಚಿಕ್ಕವಯಸ್ಸಿಗೆ ಕ್ಯಾಪ್ಟನ್​ ಆದ ಇನ್ನೊಬ್ಬ ಆಟಗಾರ ಸದ್ಯ ವಿಶ್ವದಲ್ಲಿ ಇಲ್ಲ. ಕೇವಲ 20 ವರ್ಷ 350 ದಿನಗಳು ಅಷ್ಟೇ!

2018 ರಲ್ಲಿ ಏಕದಿನ ಬೌಲಿಂಗ್​ Ranking ನಲ್ಲಿ ಇವನೇ ಮೊದಲು. ಟಿ-20 ಬೌಲಿಂಗ್​ ನಲ್ಲೂ ಇವನೇ ಮೊದಲಿಗನಾಗಲಿಕ್ಕೆ ತುಂಬಾ ಸಮಯ ಬೇಕಿರಲಿಲ್ಲ. ಕ್ರಿಕೆಟ್​ಗೆ ಆಸ್ತಿಯಂತೆ ಬೆಳೆದ ಹುಡುಗ. 2018ರ ಏಷ್ಯಾ ಕಪ್​ನಲ್ಲಿ ಅದ್ಯಾವ ಪರಿ ಆಡಿದ್ದನೆಂದರೆ ಆಲ್​ರೌಂಡರ್​ ಅಗ್ರಪಟ್ಟವೇ ಇವನನ್ನ ಕರೆದು ಹೆಸರು ಬರೆಸಿತ್ತು. ಏಕದಿನಕ್ಕೆ ನಾಯಕನಾದ ಅತ್ಯಂತ ಚಿಕ್ಕ ಹುಡುಗನೂ ಇದೇ ರಶೀದ್​. ನಿಮಗೆ ಗೊತ್ತಿರಲಿ, ಅವನು ಏಕದಿನದಲ್ಲಿ 100 ವಿಕೆಟ್​ ಕಿತ್ತ ಅತ್ಯಂತ ಚಿಕ್ಕ ಹುಡುಗ! ಆಫ್ಘನ್​ ಮಣ್ಣಲ್ಲೂ ಎಂಥಾ ಬೆಳೆಯಲ್ಲವಾ ರಶೀದ್​!

ಇವೆಲ್ಲವೂ ಅವನ ಕಿರೀಟದ ಗರಿಗಳೆಂಬುದು ನಿಜ. ಆದರೆ ಬದುಕು ಇವೆಲ್ಲವನ್ನೂ ಮೀರಿದ್ದು. ಯಾರೋ ವಿದೂಷಕ ತಮಾಷೆ ಮಾಡಿ ಬದುಕುತ್ತಿದ್ದರೆ, ಮನರಂಜನೆಯೇ ನಿಷಿದ್ಧ ಎಂಬ ತಿಕ್ಕಲು ಕಾನೂನು ತಂದು ಅವನ ಕಪಾಳಕ್ಕೆ ಹೊಡೆದು ದೇಹಕ್ಕೆ ಬುಲೆಟ್​ ನುಗ್ಗಿಸಿದ್ದಾರೆ. ಬ್ಯೂಟಿ ಪಾರ್ಲರ್​ ಮುಂದೆ ರೂಪದರ್ಶಿ ಚಿತ್ರ ಇದ್ದರೆ ಅದಕ್ಕೆ ಮಸಿ! ಇನ್ನು ಸಿನಿಮಾಗಳ ಪಾಡೇನು, ಇನ್ನು ಅಲ್ಲಿನ ನಿರ್ದಯಿಗಳ ಮುಂದೆ ನಿರ್ದೇಶಕರ ಕಥೆ ಏನು? ಕ್ರೀಡೆ, ಕಲೆ, ಸಂಗೀತ, ಸಂಸ್ಕೃತಿಯ ಕಥೆ? ತಾಲಿಬಾನಿಗಳೇ ಬಲ್ಲರು.

ಇವರನ್ನೂ, ಇವರಂಥ ಅಲ್ಲಿನ ಅನೇಕರನ್ನು ರಕ್ಷಿಸಬೇಕಿದೆ. ಕಳೆದ 20 ವರ್ಷಗಳ ಜಾಗತಿಕ ಸಮುದಾಯದ ಶ್ರಮ ಸಾರ್ಥಕವಾಗಬೇಕಾದರೆ, ಭಾರತವೂ ಸೇರಿ ಎಲ್ಲರೂ ಸಾತ್ವಿಕ ಸಿಟ್ಟು, ರೋಷ, ಕ್ಷಾತ್ರ ತೇಜಸ್ಸನ್ನ ತೋರಿಸಬೇಕಿದೆ. ಇದು ಒಬ್ಬ ರಶೀದ್​ ಖಾನ್​ನ ಸ್ಟೋರಿಯಲ್ಲ. ಇದು ಹಣೆಯ ಮೇಲೆ ಬಂದೂಕಿನ ಕೋವಿ ತೂಗಿಸಿಕೊಳ್ಳುತ್ತಿರುವ ಕೋಟ್ಯಂತರ ಅಮಾಯಕ ಅಫ್ಘನ್ನರ ಕಥೆ!

ಎಲ್ಲರೂ ಕೈಬಿಟ್ರೆ ಅಭಿಮಾನಿಗಳ, ಕರುಣಿಗಳ, ಹೃದಯವಂತರ ಆಶೀರ್ವಾದ ಮತ್ತು ಕಣ್ಣೀರು ನಿಮ್ಮನ್ನ ಕಾಯಲಿ ರಶೀದ್​…

‍ಲೇಖಕರು Admin

August 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: