ಅಮೃತಾ ಹೆಗಡೆ ಅಂಕಣ- ‘ಜನತಾ ನಗರದೊಳಗೊಂದು ಮನೆಯ ಮಾಡಿ…’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

17

‘ಅರೆರೆ.. ಇದ್ಯಾವುದೋ ಹಿಯರಿಂಗ್​ ಏಡ್​ ಹಾಕೊಂಡಿದ್ದಾನಲ್ಲ… ಇವನು..?’  ಮನೆಯೊಳಗೆ ಬಂದಿದ್ದೇ ಮಗನ ಮುಖ ನೋಡಿ ಅಚ್ಚರಿಪಟ್ಟು ಖುಷಿಯಿಂದ ಮಗುವನ್ನೆತ್ತಿಕೊಂಡು ಮುದ್ದಿಸತೊಡಗಿದ್ದ ವಿನಯ್​ ಅಥರ್ವನೋ ಅಮೂಲ್ಯ ವಸ್ತುವೊಂದು ಕೈಗೆಸಿಕ್ಕ ರೀತಿಯಲ್ಲಿ ತನ್ನಪ್ಪನನ್ನ ಬಿಗಿದಪ್ಪಿಕೊಂಡಿದ್ದ. ಆಗಾಗ ಅಪ್ಪನ ಮುಖ ನೋಡಿ, ಖುಷಿಪಟ್ಟು ಮತ್ತೆ ಮತ್ತೆ ಅವನ ಕತ್ತು ಬಳಸಿ ಹಿಡಿದುಕೊಳ್ಳುತ್ತಿದ್ದ. ಮಾತು ಬರುತ್ತಿದ್ದರೆ, ಇಷ್ಟು ದಿನ ಎಲ್ಲಿಗೆ ಹೋಗಿದ್ದೆ..? ಯಾಕೆ ನನ್ನ ಬಿಟ್ಟು ಹೋಗಿದ್ದೆ..? ಎನ್ನುವ ಪ್ರಶ್ನೆಗಳನ್ನ ಕೇಳುತ್ತಿದ್ದನೋ ಏನೋ..? ಅದೆಲ್ಲವನ್ನೂ ಕೃತಿಯಲ್ಲೇ ತೋರಿಸುತ್ತಿದ್ದ. ಅವನ ಮೂಕ ಖುಷಿ ನೋಡಿ, ಇಬ್ಬರ ಕಣ್ಣಲ್ಲೂ ನೀರು ಜಿನುಗಿತ್ತು. ಕಳೆದಿದ್ದು, ಒಂದೇ ವಾರವಾದರೂ ಎಷ್ಟೋ ತಿಂಗಳು ದೂರವಿದ್ದೆವೇನೋ ಎನ್ನುವ ಭಾವವದು. 

‘ಹಿಯರಿಂಗ್​ ಏಡ್​ ಬಂತಾ..? ನೀನ್​ ಹೇಳೇ ಇಲ್ಲ ನಂಗೆ..?’ ವಿನಯ್​ ಖುಷಿಯಿಂದ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರವಾಗಿ ‘ಹೂಂ’ ಎಂದೆ ಕಷ್ಟಪಟ್ಟು ನಗುತ್ತಾ. ‘ಈಗ ಕೇಳಿಸುತ್ತಾ ಅವನಿಗೆ…? ಸೌಂಡ್​ಗೆ ರಿಯಾಕ್ಟ್​ ಮಾಡ್ತಿದ್ದಾನಾ…?’ ಇನ್ನಷ್ಟು ಉತ್ಸಾಹದಿಂದ ಕೇಳಿದ ವಿನಯ್​, ‘ಊಹೂಂ. ಸೌಂಡ್​ಗೆ ರಿಯಾಕ್ಟ್​ ಮಾಡೋಕೆ ಇನ್ನೂ ಸ್ವಲ್ಪ ಸಮಯ ಬೇಕಂತೆ..’ ಎನ್ನುತ್ತಾ ಅಡುಗೆ ಮನೆ ಹೊಕ್ಕೆ. ಅಪ್ಪ ಮಗನ ಸಂಭ್ರಮ ಮುಗಿಲುಮುಟ್ಟಿತ್ತು.  

ಹೇಳಬೇಕಿರುವುದು ಸಾಕಷ್ಟಿರುವುದರಿಂದಲೋ ಏನೋ ಗಂಟಲು ಕಟ್ಟಿದಂತಾಗಿತ್ತು ನನಗೆ. ಅವನು ಬಂದ ಸಮಯವೂ ಹಾಗೇ ಇತ್ತು. ಮಧ್ಯಾಹ್ನದ ಊಟದ ಹೊತ್ತು ಮೀರಿತ್ತು. ಹಸಿದು ಬಂದಿದ್ದಾನೆ ಅನ್ನೋದು ಗೊತ್ತಿತ್ತಲ್ಲ.. ಮೊದಲು ಊಟ ಬಡಿಸಿದೆ. ಅವನ ಊಟ ಮುಗಿಸಿ ಕೈ ತೊಳೆಯುತ್ತಿದ್ದಂತೆ, ಎಲ್ಲವನ್ನೂ ಬಿಡಿಬಿಡಿಯಾಗಿ ಹೇಳಿಬಿಟ್ಟೆ. ಹಿಯರಿಂಗ್ ಏಡ್​ ಕ್ಯಾನ್ಸಲ್​ಮಾಡಿದ್ದು, ಹೊಸ ಹಿಯರಿಂಗ್​ ಏಡ್​ ಬುಕ್​ ಮಾಡಿ ಸಧ್ಯಕ್ಕೆ, ಸ್ಪೇರ್​ ಹಿಯರಿಂಗ್​ ಏಡ್​ ಹಾಕಿಸಿದ್ದು, ಅಡ್ವಾನ್ಸ್ ಕೊಟ್ಟಿದ್ದು, ನನ್ನಪ್ಪನ ಬಳಿ ಹಣ ಪಡೆದಿದ್ದು, ಎಲ್ಲವಕ್ಕೂ ಮೌನವಾಗಿ ಕಿವಿಗೊಟ್ಟಿದ್ದ ವಿನಯ್ ‘ಆಗಲಿ. ಒಳ್ಳೇದೇ ಆಯಿತು. ಎಷ್ಟು ದಿನ ಅಂತ ಕಾಯೋದು…? ನೀನು ಮಾಡಿದ್ದು ಸರಿಯೇ ಇದೆ.’ ಎಂದು ಬಿಟ್ಟ ಮತ್ತೇನೂ ಪ್ರಶ್ನಿಸದೇ.! ಇದು ನನ್ನ ಪಾಲಿಗೆ ಅನಿರೀಕ್ಷಿತ. ಒಳಗೊಳಗೇ ಸಮಾಧಾನವಾಯಿತು. ಆದರೆ, ಹಳ್ಳಿ ಭೋಗಾದಿಯಲ್ಲಿ ಮಾಡಿದ್ದ ಮನೆಯನ್ನ ಖಾಲಿಮಾಡಿ, ಸ್ಕೂಲ್​ ಹತ್ತಿರವೇ ನಾನು ನೋಡಿದ ಮನೆಗೆ ನಾಳೆಯೇ ಶಿಫ್ಟ್​ ಆಗಬೇಕು ಎಂಬ ಬೇಡಿಕೆ ಕೇಳಿದ ಮೇಲೆ ಸ್ವಲ್ಪಹೊತ್ತು ಸಂಪೂರ್ಣ ಮೌನವಾದ ವಿನಯ್​, ಅಥರ್ವನ ಜತೆ ಆಟವಾಡುತ್ತಲೇ ಇದ್ದನೇ ಹೊರತು ನನ್ನ ಮುಖ ನೋಡಿ ಏನೂ ಹೇಳಲಿಲ್ಲ. ಅಥರ್ವನೂ ಮಧ್ಯಾಹ್ನ ಊಟ ಮಾಡಿ ಮಲಗೋದನ್ನೇ ಮರೆತು ಅಪ್ಪನ ಜತೆ ಆಟವಾಡುತ್ತಿದ್ದ. 

ನಾನು ಮತ್ತೆ ಕೆದಕಿದೆ. ‘ಇವತ್ತು ನಾಳೆ ಎರಡೇ ದಿನ ಸಮಯವಿರೋದು. ಈ ವಾರಾಂತ್ಯದಲ್ಲೇ ಈ ಕೆಲಸ ಆಗಬೇಕು ವಿನಯ್​’ “———” ಅವನಿಂದ ಉತ್ತರವೇ ಇಲ್ಲ. ‘ಇವತ್ತು ನಾವಿಬ್ಬರೂ ಹೋಗಿ ಮನೆ ನೋಡಿ ಬರೋಣ, ನನಗೆ ಅನುಕೂಲಕರವಾಗಿದೆ ಆ ಮನೆ. ನಾಳೆಯೇ ಇಲ್ಲಿಂದ ಶಿಫ್ಟ್ ಆಗಬೇಕು’ ಅವನ ಹಿಂದಿನಿಂದ ಹಿಂಜರಿಯುತ್ತಾ ಹೇಳಿದೆ. ‘ಸಾಕು. ನಡಿ. ಬೆಂಗಳೂರಿಗೇ ಹೋಗೋಣ. ಅಲ್ಲೇ ಥೆರಪಿ ಕೊಡಿಸದರಾಯ್ತಲ್ಲ. ಬೇಕಾದರೆ, ಚಂದ್ರಶೇಖರ ಇನ್​ ಸ್ಟಿಟ್ಯೂಟ್​ ಹತ್ರಾನೇ ಮನೆ ಮಾಡೋಣ. ನೀನೊಬ್ಬಳೇ ಕಷ್ಟಪಡೋದೂ ಬೇಡ. ಈ ಗೊಂದಲಗಳೂ ಬೇಡ.’  ಒಮ್ಮೆಲೇ ಸಿಡಿದ. ‘ದಯವಿಟ್ಟು ಹಾಗೆಲ್ಲ ಹೇಳಬೇಡ ವಿನಯ್​ ಮೈಸೂರಿಗೆ ಬಂದಾಗಿದೆ. ಶಾಲೆಗೂ ಸೇರಿದ್ದಾಗಿದೆ. ಆ ಶಾಲೆ ತನ್ನಲ್ಲಿ ಬಂದ ಎಲ್ಲ ಮಕ್ಕಳಿಗೂ ಮಾತು ಕಲಿಸಿದೆಯಂತೆ. ನನ್ನ ಮಗನಿಗೂ ಮಾತು ಕೊಟ್ಟೇ ಕೊಡುತ್ತೆ ಅನ್ನೋ ನಂಬಿಕೆ ಇದೆ ನನಗೆ. ಒಂದೇ ವಾರ ನಾನು ಆ ಶಾಲೆಯಲ್ಲಿ ಕಳೆದದ್ದು. ಆದರೆ, ಅಷ್ಟೇ ಸಮಯದಲ್ಲಿಯೇ ಅದೆಷ್ಟೋ ಹೊಸ ವಿಷಯಗಳನ್ನ ತಿಳಿದುಕೊಂಡೆ ಗೊತ್ತಾ..?’

ನಮ್ಮ ಮಧ್ಯೆ ಇನ್ನೂ ಸ್ವಲ್ಪ ಹೊತ್ತು ನಡೆದ, ಪ್ರಶ್ನೆ, ಪ್ರತಿಪ್ರಶ್ನೆ, ಉತ್ತರ, ಪರಿಹಾರ, ಗೊಂದಲಗಳು ಬೆರೆತ ಮಾತುಕತೆಗೆ ಚುರುಕು ಹೊತ್ತಿಕೊಂಡಿತ್ತು. ಅಥರ್ವ ನಮ್ಮಿಬ್ಬರ ಮುಖಗಳನ್ನೂ ಪಿಕಿಪಿಕಿ ನೋಡುತ್ತಾ ಕುಳಿತಿದ್ದ. ನಮ್ಮಿಬ್ಬರ ಗಂಭೀರವದನಗಳನ್ನ ಗಮನಿಸುತ್ತಲೇ ಇದ್ದ ಕಂದಮ್ಮ ಭಯಗೊಂಡು ಸುಮ್ಮನಾಗಿದ್ದ.ವಿನಯ್​ ಅವನ ಆ ಮುಗ್ಧ ಮುಖ ಗಮನಿಸುತ್ತಿದ್ದಂತೆ ಏನನ್ನಿಸಿತೋ ಏನೋ ‘ನಡಿ, ಹೋಗೋಣ ಆ ಮನೆ ನೋಡಿಕೊಂಡೇ ಬಂದುಬಿಡೋಣ’ ಎನ್ನುತ್ತಾ ಅಥರ್ವನ ಎತ್ತಿಕೊಂಡು ಎದ್ದು ನಿಂತಿದ್ದ. 

ಸ್ಕೂಲ್​ನಿಂದ ಕೂಗಳತೆಯ ದೂರದಲ್ಲಿದ್ದ ಮನೆ ಅದು. ಹಾಲ್​, ಕಿಚನ್​, ಬೆಡ್​ ರೂಂ ರೈಲು ಬೋಗಿ ಥರ ಒಂದಾದಮೇಲೊಂದು ಇದ್ದರೂ ಸಹ, ಮನೆ ತಕ್ಕಮಟ್ಟಿಗೆ ಚನ್ನಾಗಿಯೇ ಇತ್ತು. ಅಥವಾ ಆಗಿನ ಅನಿವಾರ್ಯತೆಗೆ ಹಾಗನ್ನಿಸಿತೋ..? ವಿನಯ್​ ಮುಖ ಗಮನಿಸುತ್ತಿದ್ದೆ. ಅವನಿಗೆ ಮನೆ ಇಷ್ಟವಾದಂತೆ ಕಾಣಿಸುತ್ತಿಲ್ಲ. ‘ಅಯ್ಯೋ.. ಈ ಮನೆಯೂ ಬೇಡ ಅಂದುಬಿಟ್ಟರೆ..? ಗತಿ ಏನಪ್ಪಾ..? ಮತ್ತೆ ನನ್ನಿಂದ ಮನೆ ಹುಡುಕಲು ಸಾಧ್ಯವಿಲ್ಲ.’ ಮನಸ್ಸಿನಲ್ಲಿಯೇ ಹೊಯ್ದಾಟ ನಡೆಯುತ್ತಿತ್ತು. ಆ ಚಿಕ್ಕ ಮನೆಯಲ್ಲೇ ಒಂದೆರಡು ಬಾರಿ ಒಳಹೊರ ಅಳೆದ ವಿನಯ್​, ಏನೋ ಯೋಚಿಸುತ್ತಿದ್ದ.  ಸಧ್ಯದ ಪರಿಸ್ಥಿತಿಯಲ್ಲಿ ಶಾಲೆಗೆ ಇಷ್ಟು ಹತ್ತಿರವಿರುವ ಮನೆ ನನಗೆ ತೀರಾ ಅವಶ್ಯವಿದೆ ಅನ್ನೋದನ್ನ ಯೋಚಿಸಿದನೋ ಏನೋ. ಒಪ್ಪಿಕೊಂಡ.  ಓನರ್​ಅಜ್ಜಿಯ ಹತ್ತಿರವೂ ಮಾತನಾಡಿ, 50 ಸಾವಿರ ಅಡ್ವಾನ್ಸ್​ನ್ನ 40 ಸಾವಿರಕ್ಕೆ ಒಪ್ಪಿಸಿದ. ಆದರ ಬದಲಾಗಿ, ಬಾಡಿಗೆಯಲ್ಲಿ ಒಂದೈದುನೂರು ಅವರು ಜಾಸ್ತಿ ಕೇಳಿದ್ದಕ್ಕೆ ಒಪ್ಪಿಕೊಳ್ಳಲೇಬೇಕಾಯಿತು. ಅಂತೂ ಶಾಲೆಯ ಹತ್ತಿರದ ಮನೆ ಫಿಕ್ಸ್​ ಆಗಿತ್ತು.

‘ಮನೆ ಶಿಫ್ಟ್​ ಮಾಡಲೇಬೇಕು ಅಂದಾದ ಮೇಲೆ ನಾಳೆಯ ತನಕ ಕಾಯೋದೆಂಥಕ್ಕೆ..? ಇವತ್ತೇ ಶಿಫ್ಟ್​ ಮಾಡೋಣ’ ಅನ್ನುತ್ತಲೇ, ಮೈಸೂರಿನಲ್ಲಿಯೇ ಇದ್ದ ತನ್ನ ಗೆಳೆಯ ವಿಕ್ರಮ್​ಗೆ ಫೋನಾಯಿಸಿದ.  ಅರ್ಧಗಂಟೆಯಲ್ಲಿ ವಿಕ್ರಮ್​ ನಮ್ಮನ್ನ ಸೇರಿಕೊಂಡ. ಹಳ್ಳಿಭೋಗಾದಿಯ ಮನೆ ಓನರ್​ ಜತೆ ಮಾತನಾಡಬೇಕಲ್ಲ ಈಗ. ಅಡ್ವಾನ್ಸ್​ ಕೂಡ ಪಡೆಯದೇ ಮನೆ ಕೊಟ್ಟಿದ್ದ ಆ ಮಹಾನುಭಾವ ಏನನ್ನುತ್ತಾನೋ..? ಅನ್ನೋ ತಳಮಳ. ಪಾಪ. ಫೋನ್​ನಲ್ಲಿಯೇ ನಮ್ಮೆಲ್ಲ ಗೊಂದಲಗಳನ್ನೂ ಕೇಳಿಸಿಕೊಂಡ ಅವರು, ‘ಆಗಲಿ. ನಿಮಗೆ ಇಲ್ಲಿ ಕಷ್ಟವಾಗುತ್ತಿದೆ ಅಂದ್ರೆ, ಇಲ್ಲೇ ಇರಿ ಅನ್ನೋಕೆ ನಾನ್ಯಾರು. ಮನೆ ಖಾಲಿ ಮಾಡಿ. ಪರವಾಗಿಲ್ಲ’ ಅಂದುಬಿಟ್ಟರು. 

ಒಂದೇ ವಾರಕ್ಕೆ ಆ ಮನೆಯ ಋಣ ಮುಗಿದೇ ಹೋಗಿತ್ತು. ವಿನಯ್​, ವಿಕ್ರಮ್​, ನಾನು ಎಲ್ಲರೂ ಸೇರಿ ಇದ್ದ ಎಲ್ಲ ಸಾಮಾನು ಸರಂಜಾಮುಗಳನ್ನೂ ಕಟ್ಟಿ, ಗೂಡ್ಸ್​ ಆಟೋದಲ್ಲಿ ತುಂಬಿಕೊಂಡು ಹೊಸ ಮನೆಗೆ ತಂದು ಇಟ್ಟಾಯಿತು. ಅಲ್ಲಿಗೆ ನಾನು ಮೈಸೂರಿನ ಜನತಾನಗರ ಎಂಬ ಪ್ರದೇಶದೊಳಗೊಂದು ಪುಟ್ಟ ಮನೆ ಮಾಡಿದ್ದೆ. ಹತ್ತುಗಂಟೆಗೆ ಶಾಲೆ ಶುರು. ಅದಕ್ಕೂ ಹದಿನೈದು ನಿಮಿಷ ಮುಂಚಿತವಾಗಿ ಮನೆಯಿಂದ ಹೊರಟರೆ ಸಾಕು. ಎಂಬ ಸಮಾಧಾನ ಈಗ. ಆ ನೆಮ್ಮದಿಯಿಂದಲೇ ಆವತ್ತು ರಾತ್ರಿ ಕಣ್ತುಂಬಾ ನಿದ್ದೆಬಂದಿತ್ತು. 

ಮರುದಿನ ಭಾನುವಾರ. ಬೆಳಗ್ಗೆ ಎದ್ದಿದ್ದೇ ಮನೆಗೆ ಬೇಕಾಗಿದ್ದ ದಿನಸಿ, ಹಣ್ಣು ತರಕಾರಿಗಳನ್ನೆಲ್ಲ ವಿನಯ್​ ತಂದಿಟ್ಟ. ಮನೆಯಲ್ಲಿ ಫ್ಯಾನ್​ ಇರದ ಕಾರಣ ಫ್ಯಾನ್​ ತಂದು ಹಾಕಿಸಿದ. ಹತ್ತಿರದ ಅಂಗಡಿಯನ್ನ ವಿಚಾರಿಸಿ ಬಿಸ್ಲೇರಿ ಕ್ಯಾನ್​ ತಂದುಕೊಡುವಂತೆ ಅವರಿಗೆ ಹೇಳಿ ಅಡ್ವಾನ್ಸ್​ ಕೊಟ್ಟು, ಕುಡಿಯುವ ನೀರಿಗೂ ವ್ಯವಸ್ಥೆ ಮಾಡಿದ. ಇದೆಲ್ಲ ಮಾಡುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ನನ್ನ ಅಡುಗೆಯೂ ಸಿದ್ಧವಾಗಿತ್ತು. ಊಟ ಮಾಡಿ, ಮಗುವನ್ನ ಮಲಗಿಸಿದ. ಮಗು ಅಥರ್ವ ಮಲಗಿದ್ದೇ, ಬ್ಯಾಗ್​ ಕಟ್ಟಿಕೊಂಡು ಮತ್ತೆ ಮುಂದಿನವಾರ ಬರುತ್ತೇನೆ ಎನ್ನುತ್ತಾ ಮೆಟ್ಟಿಲಿಳಿದು ಹೊರಟೇಬಿಟ್ಟ. ನಮ್ಮಿಬ್ಬರ ಕಣ್ಣಾಲೆಗಳಲ್ಲೂ ಕಣ್ಣೀರಿನ ಪಸೆ ಇತ್ತಾದರೂ, ಇಬ್ಬರೂ ಒಬ್ಬರಿಗೊಬ್ಬರೂ ನಮ್ಮನಮ್ಮ ತುಮುಲಗಳನ್ನ ಹೇಳಿಕೊಳ್ಳದೇ ಒತ್ತಾಯದ ನಗುವಿನೊಂದಿಗೆ ವಿದಾಯ ಹೇಳಿಕೊಂಡೆವು. ನಡೆದು ಹೋಗುತ್ತಿರುವ ವಿನಯ್​ನ ಬೆನ್ನನ್ನ ಬಾಗಿಲಿನಲ್ಲೇ ನಿಂತು ನೋಡುತ್ತಿದ್ದ ಕಣ್ಣಲ್ಲಿ ಈಗ ಕಣ್ಣೀರು ಹರಿಯುತ್ತಿತ್ತು. ಅಷ್ಟೊತ್ತು ಕಟ್ಟಿಕೊಂಡಿದ್ದ ದುಃಖ ಈಗ ಕರಗಿತ್ತು. ನಿರಾತಂಕವಾಗಿ ಬಿಕ್ಕಿದೆ. 

ಬೆಳಗ್ಗೆ ಐದಕ್ಕೇ ಎದ್ದು, ಐದಂಗುಲದ ಆ ಮನೆಯನ್ನೊಮ್ಮೆ ಗುಡಿಸಿ-ಒರೆಸಿ, ಸ್ನಾನಾದಿಗಳನ್ನ ಮುಗಿಸಿ, ಅಡುಗೆ -ತಿಂಡಿಮಾಡಿ, ಎಲ್ಲ ಅಣಿಗೊಂಡಮೇಲೆ ಅಥರ್ವನನ್ನ ಎದ್ದೇಳಿಸೋದು. ಅವನನ್ನೂ ಸಿದ್ಧಗೊಳಿಸಿಕೊಂಡು, ತಿಂಡಿ ತಿನ್ನಿಸಿಕೊಂಡು, ಮಧ್ಯಾಹ್ನದ ಊಟವನ್ನೂ ಕಟ್ಟಿಕೊಂಡು ಶಾಲೆಗೆ ಹೊರಡುವುದು ನನ್ನ ಬೆಳಗಿನ ಟೈಮ್​ ಟೇಬಲ್​ 

ಆವತ್ತು ಸೋಮವಾರ. ಪ್ರತಿ ಸೋಮವಾರ ನಮ್ಮ ಶಾಲೆಯಲ್ಲಿ ಪೂಜಾ ಘಟನೆ ಇರುತ್ತದೆ. ಪ್ರಾರ್ಥನೆಯ ನಂತರ ಮಕ್ಕಳನ್ನೆಲ್ಲ ಕೂರಿಸಿಕೊಂಡು ದೇವರ ಫೋಟೋಗಳಿಗೆ ಹೂವು ಏರಿಸಿ, ಊದುಬತ್ತಿ ಬೆಳಗಿ ಪೂಜೆ ಮಾಡುವ ಪದ್ಧತಿ ಅದು. ಸುಮ್ಮನೆ ಹಳೆ ಹೂವು ತೆಗೆದು ಹೊಸ ಹೂವು ಹಾಕಿ ಪೂಜೆ ಮಾಡೋದಲ್ಲ, ಪೂಜೆಯ ಪ್ರತಿ ಹಂತವನ್ನೂ ಮಕ್ಕಳಿಗೆ ವಿವರಿಸಿ ಹೇಳುತ್ತಾ ಪೂಜೆ ಮಾಡುವುದೇ ಪೂಜಾ ಘಟನೆ. ಪ್ರತಿ ವಾರ ಒಬ್ಬೊಬ್ಬ ತಾಯಿ ಪೂಜಾ ಘಟನೆ ಮಾಡಬೇಕು. ಹಾಜರಿ ಪುಸ್ತಕದ ಪ್ರಕಾರ ಒಬ್ಬೊಬ್ಬರದೇ ಪಾಳಿ ಬರುತ್ತದೆ. ಈ ಬಾರಿ ಪೂಜಾ ಘಟನೆ ಮಾಡುವ ತಾಯಿ ತುಂಬಾ ಚೆನ್ನಾಗಿ ಮಾತನಾಡುವವರಾಗಿದ್ದರು. ಅವರು ಮಾತನಾಡೋದನ್ನ ಕೇಳುತ್ತಲೇ ಇರಬೇಕೆನ್ನಿಸುತ್ತಿತ್ತು ನನಗೆ.

‘ಇವತ್ತು ಯಾವ ವಾರ…? ಇವತ್ತು ಸೋಮವಾರ. ಪ್ರತೀ ಸೋಮವಾರ ನಮ್ಮ ಸ್ಕೂಲಿನಲ್ಲಿ ಪೂಜಾ ಘಟನೆ ಮಾಡುತ್ತಾರಾ..? ಹೌದು. ಪ್ರತಿ ಸೋಮವಾರ ನಮ್ಮ ಶಾಲೆಯಲ್ಲಿ ಪೂಜಾ ಘಟನೆ ಮಾಡುತ್ತಾರೆ. ಇಲ್ಲಿ ಯಾವ ಯಾವ ದೇವರ ಫೋಟೋಗಳಿವೆ..? ಗಣಪತಿ, ಲಕ್ಷ್ಮಿ, ಸರಸ್ವತಿ ದೇವರ ಫೋಟೋಗಳಿವೆ.’ ಅನ್ನುತ್ತಾ ಪ್ರಾರಂಭ ಮಾಡಿ, ಹೂವಿದ್ದ ಕವರ್​ ತೋರಿಸಿ, ಕವರ್​ನ ಬಗ್ಗೆ ಹೇಳಿ, ಅದರಿಂದ ಹೂವು ತೆಗೆದು ಆ ಹೂವುಗಳ ಬಗ್ಗೆ ಹೇಳಿ, ಹೂದುಬತ್ತಿ ಪ್ಯಾಕೇಟ್​ತೋರಿಸಿ ಅದರ ಬಣ್ಣ, ಆಕಾರ, ಯಾವುದರಿಂದ ಮಾಡುತ್ತಾರೆ, ಎಂಬೆಲ್ಲವನ್ನೂ ವಿವರಿಸಿ, ಮುಗಿಸಿದ ಮೇಲೆ. ಪೂಜೆ ಸಂಪನ್ನಗೊಳ್ಳುವ ತನಕ 20 ರಿಂದ 30 ನಿಮಿಷಗಳು ಸಂದಿದ್ದವು. ಅಥರ್ವನಷ್ಟು ಚಿಕ್ಕಮಕ್ಕಳಗಳನ್ನು ಅಷ್ಟೊತ್ತು ನಮ್ಮ ಬಳಿ ಇರಿಸಿಕೊಳ್ಳುವುದು ಕಷ್ಟವೆನಿಸಿದರೂ, ಹೇಗ್ಹೇಗೋ ಸಂಬಾಳಿಸುತ್ತಲೇ ಪೂಜಾ ಘಟನೆಯನ್ನ ನಮ್ಮ ಮಕ್ಕಳ ಕಿವಿಯಲ್ಲಿ ವಿವರಿಸುತ್ತಿದ್ದೆವು. ಅಷ್ಟೊತ್ತು ಕೂರಲಾರದೇ,  ಚಿಕ್ಕಮಕ್ಕಳೆಲ್ಲ ಅವರವರ ಅಮ್ಮಂದಿರಿಗೆ ಪರಚುವುದು, ಕೂದಲೆಳೆಯುವುದು, ಅಳುವುದು ಮಾಡುತ್ತಿದ್ದರೆ, ಅಥರ್ವ ಸುಮ್ಮನಿರುತ್ತಾನೆಯೇ..? ನನ್ನ ಮುಂಗೈಯನ್ನ ಅವನಿಗೆ  ಕೊಟ್ಟು ಕುಳಿತಿರುತ್ತಿದ್ದೆ. ಅಥರ್ವ ಮೌನವಾಗಿ ನನ್ನ ಕೈ ಕಚ್ಚುತ್ತಿದ್ದ. ಅವನ ಹಲ್ಲಿನ ಚೂಪಿಗೆ ಕೈ ಉರಿಹತ್ತಿ ಕಣ್ಣಲ್ಲಿ ನೀರು ಹರಿಯುತ್ತಿತ್ತು.  

ವಿಶೇಷವೇನೆಂದರೆ, ಪಿ.ಎ.ಡಿ.ಸಿ ಶಾಲೆಯಲ್ಲಾಡುವ ಮಾತುಗಳಿಗೆ ವಿಶೇಷ ಧಾಟಿಯಿದೆ. ಅತ್ತ ಮಂಗಳೂರು ಶೈಲಿಯೂ ಅಲ್ಲದ, ಇತ್ತ ಬೆಂಗಳೂರು ಶೈಲಿಯೂ ಅಲ್ಲದ ಎರಡೂ ಭಾಷೆಗಳ ಹೋಲಿಕೆ ಇರುವ ಪುಸ್ತಕೀಯ ಭಾಷೆ ಅದು. ಎಲ್ಲ ಮಕ್ಕಳ ಬಳಿಯೂ ಶಿಕ್ಷಕರೂ, ತಾಯಿಯರೂ ಅದೇ ಧಾಟಿಯಲ್ಲಿಯೇ ಮಾತನಾಡುತ್ತಾರೆ. ತಾಯಿಯರು ಉತ್ತರ ಕರ್ನಾಟಕದವರಾಗಿರಲಿ, ದಕ್ಷಿಣ ಕರ್ನಾಟಕದವರಾಗಿರಲಿ, ಕರಾವಳಿಯವರಾಗಿರಲಿ ಈ ಶಾಲೆಗೆ ಬಂದಮೇಲೆ ಅವರ ಸ್ವಂತ ಊರಿನ ಮಾತುಗಳನ್ನ ಬಿಟ್ಟು ಶಾಲೆಯದೇ ಆದ ಮಾತಿನ ಧಾಟಿಯನ್ನ ರೂಢಿಸಿಕೊಳ್ಳುವುದು ನಮ್ಮ ಶಾಲೆಯ ವಾಡಿಕೆ. ಹೀಗಾಗಿ ಪಿ.ಎ.ಡಿ.ಸಿ ಶಾಲೆಯ ಯಾವ ತಾಯಿ ಮಾತನಾಡಿಸಿದರೂ ಅಲ್ಲಿ ಕಲಿಯುವ ಮಕ್ಕಳಿಗೆ ಬಹು ಬೇಗ ಅರ್ಥವಾಗಿಬಿಡುತ್ತದೆ. ಒಂದು ವಾರ ಪೂರ್ತಿ ಆ ಶಾಲೆಯ ಮಾತನ್ನು ಅನುಕರಿಸಲು ಸಾಹಸ ಪಟ್ಟೆ. ಹಿಂದಿನ ವಾರ ಪೂರ್ತಿ ಶಾಲೆಯ ಮಾತಿನ ಧಾಟಿಯನ್ನು ಅನುಕರಿಸಿ ಅಥರ್ವನ ಬಳಿ ಮಾತನಾಡೋಕೆ ಅಭ್ಯಾಸ ಮಾಡುತ್ತಿದ್ದೆ. 

ಅಥರ್ವನ ಪಾಠಕ್ಕೆ ಬೇಕಾಗಿದ್ದ, ಹೂವು, ಹಣ್ಣು, ತರಕಾರಿ, ವಾಹನ, ಪ್ರಾಣಿ, ಪಕ್ಷಿಗಳ ಪುಸ್ತಕಗಳನ್ನೆಲ್ಲ ಮಾಡಿದ್ದೆ. ಅಂಗಡಿಯಿಂದ ಪಟ ತಂದು ಅದನ್ನು ಕತ್ತರಿಸಿ ಪುಸ್ತಕದ ಹಾಳೆಗೆ ಒಂದೊಂದನ್ನೇ ಅಂಟಿಸಿ, ಅದರ ಕೆಳಗೆ  ಇದು ಬಾಳೆಹಣ್ಣು, ಇದು ಮಲ್ಲಿಗೆ ಹೂವು, ಇದು ಕಾರು, ಇದು ಟೊಮ್ಯಾಟೋ ಅಂತ ಬರೆದು ಮುಗಿಸಿದ್ದೆ. ಅಥರ್ವನಿಗೆ ಬೇಕಾಗಿದ್ದ ಒಂಭತ್ತು ಪುಸ್ತಕಗಳನ್ನು ಒಂದೇ ವಾರದಲ್ಲಿ ಸಿದ್ಧಗೊಳಿಸಿದ್ದೆ. ಈ ಪುಸ್ತಕಗಳಲ್ಲಿ ಅತೀ ವಿಶೇಷವಾಗಿರುವುದೆಂದರೆ, ಆಬ್ಜೆಕ್ಟ್​ ಪುಸ್ತಕ ಮತ್ತು ಸಂಬಂಧದ ಪುಸ್ತಕ.

ದಿನನಿತ್ಯ ನಮ್ಮ ಕಣ್ಣುಗಳಿಗೆ ಬೀಳುವ ಮತ್ತು ನಾವು ಉಪಯೋಗಿಸುವ ವಸ್ತಗಳ ಚಿತ್ರಗಳನ್ನೇ ಅಂಟಿಸಿ ಆಬ್ಜೆಕ್ಟ್​ ಪುಸ್ತಕ ಮಾಡಬೇಕು. ಹೂವು, ಎಲೆ, ಬಾಲ್​, ಚಮಚ, ತಟ್ಟೆ, ಲೋಟ, ಹೀಗೆ ಪಟ್ಟಿ ಮುಂದುವರೆಯುತ್ತದೆ. ಮೂರು ಮೂರೇ ಆಬ್ಜೆಕ್ಟ್​ಗಳನ್ನ ಪಾಠ ಮಾಡುತ್ತಾ, ಆ ಮೂರು ವಸ್ತುಗಳು ಮಗುವಿಗೆ ಅರ್ಥವಾದಮೇಲೆ, ಅವುಗಳ ಹೆಸರು ಹೇಳುವುದನ್ನ, ತೋರಿಸುವುದನ್ನ ಮಗು ಕಲಿತ ಮೇಲೆ, ಮತ್ತೆ ಮೂರು ಹೊಸ ಆಬ್ಜೆಕ್ಟ್​ಗಳನ್ನು ಮಗುವಿಗೆ ಪರಿಚಯಿಸಬೇಕು.  

ಇನ್ನು, ಸಂಬಂಧಗಳ ಪುಸ್ತಕವೆಂದರೆ, ಆ ಮಗುವಿನ ತಂದೆ, ತಾಯಿ, ಅಜ್ಜಿ, ತಾತ, ಚಿಕ್ಕಪ್ಪ, ಚಿಕ್ಕಮ್ಮ, ತಮ್ಮ ತಂಗಿಯರ ಎಲ್ಲ ಫೋಟೋಗಳನ್ನೂ ಪ್ರತ್ಯೇಕವಾಗಿ ಅಂಟಿಸಿ, ಆ ಫೋಟೋದ ಕೆಳಗೆ ‘ಇದು ನನ್ನ ಅಪ್ಪನ ಫೋಟೋ, ನನ್ನ ಅಪ್ಪನ ಹೆಸರು ವಿನಯ್​, ವಿನಯ್​ ನನಗೆ ಅಪ್ಪ ಆಗಬೇಕು, ನಾನು ವಿನಯ್​ಗೆ ಮಗ ಆಗಬೇಕು’ ಎಂದು ಬರೆಯಬೇಕು. ಹೀಗೆ ಎಲ್ಲರ ಭಾವಚಿತ್ರಗಳ ಕೆಳಗೂ ಅವರವರ ಸಂಬಂಧಗಳನ್ನ ವಿವರಿಸಬೇಕು. ಈ ಎಲ್ಲ ಒಂಭತ್ತೂ ಪುಸ್ತಕಳಗನ್ನು ದಿನಕ್ಕೊಮ್ಮೆಯಾದರೂ ಮಕ್ಕಳಿಗೆ ಓದಿಸಬೇಕು. 

ಈಗ ನಮ್ಮ ದಿನಗಳು ಓಡುತ್ತಿದ್ದವು. ನಮ್ಮ ಬೆನ್ನಿಗೆ ನಿಯಮಿತ ಟೈಮ್​ ಟೇಬಲ್​ ಅಂಟಿಕೊಂಡಿತ್ತಲ್ಲ ದಿನ, ವಾರ, ತಿಂಗಳು ಹೇಗೆ ಕಳೆಯುತ್ತಿವೆ ಎಂಬುದೇ ತಿಳಿಯುತ್ತಿರಲಿಲ್ಲ. ಈ ಮಧ್ಯೆ, ಹೊಸ ಹಿಯರಿಂಗ್​ ಏಡ್​ನ್ನೂ ಕೂಡ ಪ್ರವೀಣ್​ಸರ್​ಅಥರ್ವನ ಕಿವಿಗಳಿಗೆ ಹಾಕಿಕೊಟ್ಟರು. ಸ್ಕೂಲ್​ಗೆ ಬರೋದು, ಇಲ್ಲಿ ಹೇಳಿಕೊಟ್ಟಿದ್ದನ್ನ ಮನೆಯಲ್ಲಿ ಪ್ರಯೋಗಿಸೋದು, ಸಾಧ್ಯವಾದಷ್ಟು ಹೊಸ ಹೊಸ ಶಬ್ಧಗಳನ್ನು ಅವನ ಕಿವಿಯೊಳಗೆ ಹಾಕುವುದು ನಡೆಯುತ್ತಲೇ ಇತ್ತು.  

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: