ಅಮೃತಾ ಹೆಗಡೆ ಅಂಕಣ- ಆ ಯಂತ್ರ ನನ್ನ ಕಂದನ ನುಂಗಿಬಿಟ್ಟಿತ್ತು…

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

21

‘ಕಾಕ್ಲಿಯರ್‌ ಇಂಪ್ಲಾಂಟ್ ಅನ್ನೋದು ಒಂದು ಅದ್ಭುತ ಹೌದು ಕಣೇ. ಬಂದದ್ದು ಬರಲಿ ಆಗೋದು ಆಗಲಿ, ಸಾಲ ಮಾಡಿಯಾದರೂ ಇಂಪ್ಲಾಂಟ್ ಮಾಡಿಸಲೇಬೇಕು’. ಎಂಬ ಮಾತು ವಿನಯ್‌ ಬಾಯಿಯಿಂದಲೇ ಬಂದಿತ್ತು. ಈ ಮಾತು ಕೇಳಿದ್ದೇ, ನನ್ನ ಮನಸ್ಸೊಳಗೆ ಅದ್ಯಾವುದೋ ಅವ್ಯಕ್ತ ಸಮಾಧಾನದ ತಂಗಾಳಿ ಹಾದು ಹೋದಂತಾಯಿತು. ನಾನು ‘ಹೂಂ’ ಅಂದೆ ಮತ್ತೇನೂ ಮಾತನಾಡದೇ. ಮನೆಗೆ ಹೋಗುವ ದಾರಿಯಲ್ಲಿ ಮಗನನ್ನ ಎತ್ತಿಕೊಂಡಿದ್ದ ವಿನಯ್‌, ಸುತ್ತಮುತ್ತೆಲ್ಲ ಏನನ್ನೋ ತೋರಿಸುತ್ತಾ ಅವನ ಬಳಿ ಮಾತನಾಡುತ್ತಲೇ ಇದ್ದ. ನಿಶ್ಯಬ್ಧವಾಗಿ ಅಪ್ಪ ಮಗನನ್ನೇ ಹಿಂಬಾಲಿಸುತ್ತಿದ್ದ ನಾನು ವಿನಯ್‌ ಮುಖದಲ್ಲಿಯೂ ಅಷ್ಟು ದಿನ ಕಾಣದ ಖುಷಿ ಕಂಡಿದ್ದೆ. ಒಂದಲ್ಲಾ ಒಂದು ದಿನ ನಮ್ಮ ಮಗನೂ ಸಾಮಾನ್ಯ ಮಕ್ಕಳಂತಾಗುತ್ತಾನೆ ಎಂಬ ಆಲೋಚನೆಯೇ ವಿನಯ್‌ಗೆ ಅಷ್ಟು ಉತ್ಸಾಹ ನೀಡಿದೆ ಎಂಬುದು ಅರ್ಥವಾಯ್ತು ನನಗೆ.

ಒಂದು ಕಿವಿಗೆ ಶಸ್ತ್ರಚಿಕಿತ್ಸೆ ಮಾಡಲು ಕನಿಷ್ಠವೆಂದರೂ 8 ಲಕ್ಷ ಖರ್ಚಾಗುತ್ತದೆ ಎಂಬ ಬಗ್ಗೆ ಆಗಷ್ಟೇ ಕಾರ್ಯಾಗಾರದಲ್ಲಿ ತಿಳಿಸಿದ್ದರು, ಅಲ್ಲದೇ ಮಗು ಚಿಕ್ಕದಿದ್ದಾಗಲೇ ಆದಷ್ಟು ಬೇಗ ಸರ್ಜರಿ ಮಾಡಿಸಿದರೆ ಮಾತ್ರ ಉಪಯೋಗ ಜಾಸ್ತಿ ಎಂಬುದನ್ನೂ ಹೇಳಿದ್ದರಲ್ಲ, ನಮಗೆ ಸಮಯ ಅತ್ಯಂತ ಕಡಿಮೆಯಿತ್ತು. ಇದರಿಂದಾದ ತಳಮಳ, ಧಾವಂತದ ನಡುವೆಯೂ ಮಗನ ಭವಿಷ್ಯದ ಕಲ್ಪನೆಯೇ ನಮಗೆ ನೆಮ್ಮದಿ ನೀಡುತ್ತಿತ್ತು. ಮಧ್ಯಾಹ್ನ ಊಟವಾಗಿದ್ದೇ ಅಥರ್ವನನ್ನ ಮಲಗಿಸಿ ಹೊರಡಲು ಸಿದ್ಧನಾದ ವಿನಯ್‌, ಹಣದ ವ್ಯವಸ್ಥೆ ಹೇಗೆ ಮಾಡುವುದು ನೋಡೋಣ. ನೀನು ಈ ಆಪರೇಶನ್‌ ತಯಾರಿಯ ಮೊದಲ ಹಂತ ಎಲ್ಲಿಂದ ಶುರು ಮಾಡಬೇಕು ಎಂದು ತಿಳಿದುಕೊಂಡು ಕೆಲಸ ಆರಂಭಮಾಡು. ಎಂದು ಹೇಳಿ ಬೆಂಗಳೂರಿಗೆ ಹೊರಟು ಹೋದ.

ಮರುದಿನವೇ ಪ್ರವೀಣ್‌ ಸರ್‌ನ್ನ ಭೇಟಿ ಮಾಡಿ, ಕಾಕ್ಲಿಯರ್‌ ಇಂಪ್ಲಾಂಟ್‌ ಮಾಡಬೇಕು ಅಂತ ನಿರ್ಧರಿಸಿದ್ದೇವೆ. ಈಗ ಮೊದಲು ಏನು ಮಾಡಬೇಕು ಹೇಳಿ ಎಂದೆ. ‘ಎಲ್ಲಕ್ಕಿಂತ ಮೊದಲು ನೀವು ವೈದ್ಯರನ್ನ ಭೇಟಿಯಾಗಬೇಕು. ಅವರು ಅಥರ್ವನನ್ನ ಪರೀಕ್ಷೆ ಮಾಡಿ, ಎಮ್‌. ಆರ್‌.ಐ ಮತ್ತು ಸಿ.ಟಿ ಸ್ಕ್ಯಾನ್‌ಮಾಡಿಸಲು ಬರೆದು ಕೊಡುತ್ತಾರೆ. ಸ್ಕ್ಯಾನ್ ರಿಪೋರ್ಟ್‌ ಬಂದ ಮೇಲೆ ನಿಮ್ಮ ಕೈಗೆ ಸರ್ಜರಿಯ ಕೊಟೇಶನ್‌ ಸಿಗುತ್ತದೆ. ಕೊಟೇಶನ್‌ ನಿಮ್ಮ ಕೈಗೆ ಬಂದ ಮೇಲೆ ನೀವು ಅದನ್ನ ನಿಮ್ಮ ವಿಧಾನ ಸಭಾ ಕ್ಷೇತ್ರಕ್ಕೆ ಹೋಗಿ, ಎಮ್‌.ಎಲ್‌.ಎ ಮತ್ತು ಎಂ.ಪಿ ಆಫೀಸ್‌ನಲ್ಲಿ ಮುಖ್ಯಮಂತ್ರಿ ನಿಧಿ ಹಾಗೂ ಪ್ರಧಾನ ಮಂತ್ರಿ ನಿಧಿಗಾಗಿ ನೀವು ಅರ್ಜಿ ಸಲ್ಲಿಸಬೇಕು. ಕೆಲವು ಮಕ್ಕಳಿಗೆ ಎರಡೂ ನಿಧಿಗಳೂ ಸಿಕ್ಕು ಅನುಕೂಲವಾಗಿದೆ. ಮೂರು ತಿಂಗಳೊಳಗೆ ಪ್ರಧಾನ ಮಂತ್ರಿ ನಿಧಿಯಂತೂ ಸಿಗುತ್ತದೆ. ಫಂಡ್‌ ಸಿಕ್ಕ ಮೇಲೆ ನಿಮ್ಮ ಕಡೆಯಿಂದಲೂ ಉಳಿದ ಹಣದ ವ್ಯವಸ್ಥೆಯಾದ ಮೇಲೆ ಆಪರೇಶನ್‌ ಡೇಟ್‌ ಫಿಕ್ಸ್‌ ಮಾಡಬಹುದು. ಮೊದಲು ನೀವೀಗ ಡಾಕ್ಟರ್‌ ದತ್ತಾತ್ರಿ ಅವರನ್ನ ಭೇಟಿಯಾಗಬೇಕು’ ಅಂದರು. ಡಾಕ್ಟರ್‌ ದತ್ತಾತ್ರಿ ಅವರನ್ನ ಮುಂದಿನ ಶನಿವಾರ ವಿನಯ್‌ ಮೈಸೂರಿಗೆ ಬಂದಾಗಲೇ ಇಬ್ಬರೂ ಒಟ್ಟಿಗೇ ಹೋಗಿ ಭೇಟಿಯಾದರಾಯಿತು ಎಂದು ಮನಸ್ಸಿನಲ್ಲಿಯೇ ನಿರ್ಧರಿಸಿ ಪ್ರವೀಣ್‌ ಸರ್‌ಗೆ ಥ್ಯಾಂಕ್ಯೂ ಎಂದೆ.

ಇತ್ತ ನಾವು ಕಾಕ್ಲಿಯರ್‌ ಇಂಪ್ಲಾಂಟ್ ಮಾಡಿಸುವ ಕುರಿತು ನಮ್ಮ ನಿರ್ಧಾರ ದೃಢಗೊಳ್ಳುತ್ತಿದ್ದಂತೆ. ಅತ್ತ ನಮ್ಮ ಅಪ್ಪ-ಅಮ್ಮ, ಅತ್ತೆ ಮಾವರಲ್ಲಿ ಆತಂಕ ಹೆಚ್ಚತೊಡಗಿತ್ತು. ‘ಗಡಿಬಿಡಿ ಮಾಡಬೇಡಿ. ಮಗೂಗೆ ಇನ್ನೂ ಎರಡು ವರ್ಷವೂ ಆಗಿಲ್ಲ. ಹಿಯರಿಂಗ್‌ ಏಡ್‌ನಲ್ಲಿಯೇ ಕೇಳಿಸಿಕೊಂಡು ಮಾತನಾಡುತ್ತಾನೋ ಏನೋ.. ನೋಡೋಣ. ಸ್ವಲ್ಪ ಸಮಯ ಕಾಯೋಣ’ ಎಂಬ ನನ್ನಮ್ಮನ ಆತಂಕ ಮಿಶ್ರಿತ ಮೆಲು ಮಾತು ಪ್ರತಿ ದಿನ ಫೋನ್‌ನಲ್ಲಿ ನನ್ನ ಕಿವಿಗೆ ಬೀಳತೊಡಗಿತ್ತು. ‘ಹಾಗಲ್ಲ ಅ‌ಮ್ಮ. ಅಥರ್ವನಿಗೆ ಇರೋದು ಪ್ರೊಫೌಂಡ್‌ ಹಿಯರಿಂಗ್‌ ಲಾಸ್‌. ಹಿಯರಿಂಗ್‌ ಏಡ್‌ ಹಾಕಿ ಒಂದು ತಿಂಗಳು ಕಳೆದರೂ ಅವನಿಂದ ರೆಸ್ಪಾನ್ಸ್ ಬರುತ್ತಿಲ್ಲ ಅಮ್ಮ. ಅವನಿಗೆ ಅದರಿಂದ ಕೇಳಿಸುತ್ತಿದೆಯೋ ಇಲ್ಲವೋ ಅನ್ನೋದೇ ನನಗೆ ತಿಳಿಯುತ್ತಿಲ್ಲ. ಇಂಪ್ಲಾಂಟ್ ಮಾಡಿಸುವ ವಯಸ್ಸು ಮೀರುತ್ತಿದೆ ಅಮ್ಮ. ಒಂದು ವರ್ಷ ತುಂಬದ ಮಕ್ಕಳಿಗೆ ಈ ಸರ್ಜರಿ ಮಾಡಿಸುತ್ತಾರಂತೆ. ಈಗ ಅಥರ್ವ ಎರಡರ ಹತ್ತಿರವಿದ್ದಾನಲ್ವಾ..? ಇದರಿಂದ ಮತ್ತೇನೂ ಅಪಾಯವಿಲ್ಲ ಅಂತ ಡಾಕ್ಟರ್‌ ಹೇಳಿದ್ದಾರೆ. ಹೆದರಬೇಡ. ಒಳ್ಳೇದಾಗುತ್ತೆ’ ಅಮ್ಮನಿಗೆ ನಾನೇ ಸಮಾಧಾನ ಮಾಡಿದ್ದೆ. ಕಾರ್ಯಾಗಾರದಲ್ಲಿ ತಿಳಿದುಕೊಂಡ ಎಲ್ಲ ವಿಚಾರಗಳನ್ನೂ ಅಮ್ಮನಿಗೂ ಹೇಳಿದ್ದೆ.

ನನ್ನ ಅತ್ತೆ, ಅಥರ್ವನ ಜಾತಕವನ್ನ ಜ್ಯೋತಿಷಿಗಳಿಗೆ ತೋರಿಸಿ, ಮಗುವಿಗೆ ವಾಕ್‌ ಶಕ್ತಿ ಬಂದೇ ಬರುತ್ತಂತೆ ಅಮೃತಾ, ಮುಂದೆ ಎಲ್ಲವೂ ಒಳ್ಳೆಯದೇ ಆಗುತ್ತದಂತೆ. ಎಂದು ನನಗೂ ಸಮಾಧಾನ ಮಾಡಿ, ತಮ್ಮ ಪಾಡಿಗೆ ತಾವು ಧೈರ್ಯ ತಂದುಕೊಂಡುಬಿಟ್ಟರು. ಆದರೆ ನನ್ನ ಅಮ್ಮ ಮಾತ್ರ ಆಪರೇಶನ್‌ಎಂಬ ಪದ ಕೇಳಿದರೇ ಬೆಚ್ಚಿ ಬೀಳುತ್ತಿದ್ದಳು. ಮತ್ಯಾವುದೋ ಜ್ಯೋತಿಷಿಗಳನ್ನ ಭೇಟಿಯಾಗೋಣ ಊರಿಗೆ ಬನ್ನಿ, ಒಂದೇ ಒಂದು ಬಾರಿ ಅವರನ್ನ ಭೇಟಿ ಮಾಡಿ ಮಾತನಾಡೋಣ. ಮಗುವಿಗೆ ಆಪರೇಶನ್‌ ಬೇಡವೇ ಬೇಡ ಹಾಗೆಯೇ ಮಾತನಾಡುತ್ತಾನೆ ಎಂದಿದ್ದಾರೆ ಅವರು. ಒಂದು ಸಾರಿ ಬನ್ನಿ ಅನ್ನುತ್ತಲೇ ಇದ್ದಳು ಅಮ್ಮ. ನಾನು ನನ್ನ ಮಗನಿಗೆ ಸರ್ಜರಿ ಮಾಡಿಸಿದಂತೂ ಎಲ್ಲಿಯೂ ಬರಲ್ಲ ಅಮ್ಮ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದೆ.

ಧಾರ್ಮಿಕ ನಂಬಿಕೆ ಮತ್ತು ವಿಜ್ಞಾನದ ನಡುವಿನ, ಸಂಘರ್ಷ ಕೆಲ ಕಾಲ ನನ್ನೊಳಗೂ ನಡೆದಿದ್ದು ಹೌದು. ಆದರೆ ನಾನೊಂದು ವಿಚಾರವನ್ನ ಮನಸ್ಸಲ್ಲೇ ಗಟ್ಟಿ ಮಾಡಿಕೊಂಡಿದ್ದೆ. ವಿಜ್ಞಾನವನ್ನ ನಂಬಿಯಾಗಿದೆ. ಅದಕ್ಕೇ ಬದ್ಧರಾಗಿಬಿಡೋಣ. ಮಧ್ಯದಲ್ಲಿ ಜ್ಯೋತಿಷ್ಯ ಕೇಳೋದು ಬೇಡವೇ ಬೇಡ. ಎರಡೂ ದೋಣಿಯಲ್ಲಿ ಕಾಲಿಟ್ಟು ಮುಳುಗೋದಕ್ಕಿಂತ, ಒಂದೇ ದೋಣಿಯನ್ನೇ ಏರಿ ಎಷ್ಟು ಸಾಧ್ಯವೋ ಅಷ್ಟು ತೇಲಿಬಿಡೋಣ ಎಂಬ ನಿಲುವು ಅದು. ಅಮ್ಮ ನೊಂದುಕೊಂಡಿದ್ದಳು ಪಾಪ. ಅವಳ ಕಾಳಜಿ, ಆತಂಕ ನನಗೂ ಅರ್ಥವಾಗುತ್ತಿತ್ತು. ಆದರೆ ವಿಜ್ಞಾನವನ್ನು ಕಡೆಗಣಿಸಲು ನನಗೆ ಸುತಾರಾಂ ಮನಸ್ಸಿರಲಿಲ್ಲ.

ಮುಂದಿನವಾರ ವಿನಯ್‌ ಮೈಸೂರಿಗೆ ಬಂದಿದ್ದೇ, ವೈದ್ಯರನ್ನ ಭೇಟಿಯಾದೆವು. ಕಾರ್ಯಕ್ರಮದಲ್ಲಿ ‘ಡಾಕ್ಟರ್‌ ದತ್ತಾತ್ರಿ’ಯವರನ್ನ ನೋಡಿ, ಅವರ ಮಾತು ಕೇಳಿದ್ದರೂ, ನಮಗೆ ಅವರನ್ನ ಹತ್ತಿರದಿಂದ ಮುಖಾಮುಖಿಯಾಗಿವ ಮೊದಲ ಅವಕಾಶವದು. ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಅವರ ಕ್ಯಾಬಿನ್‌ಲ್ಲಿ ನಾವು ಮೂವರು ಕುಳಿತಿದ್ದೆವು. ನಮ್ಮ ಮತ್ತು ಅವರ ನಡುವೆ ವರ್ಷಗಳ ಒಡನಾಟವಿದೆಯೇನೋ ಎಂದೆನ್ನಿಸುವಂಥ ಆತ್ಮೀಯತೆ ಕಂಡಿತ್ತು ವೈದ್ಯರಲ್ಲಿ. ಅಥರ್ವನನ್ನು ತಮ್ಮ ಪಕ್ಕದ ಕುರ್ಚಿಯ ಮೇಲೆಯೇ ಕೂರಿಸಿಕೊಂಡು, ಅವನ ಕಿವಿಗಳನ್ನ ಪರೀಕ್ಷಿಸಿದರು. ಗಲಾಟೆಯನ್ನೇನೂ ಮಾಡದೆ ಕಿವಿ ಪರೀಕ್ಷೆ ಮಾಡಿಸಿಕೊಂಡ ಅಥರ್ವನಿಗೆ ಒಂದು ಪೆನ್ನು ಬರೆಯಲು ಹಾಳೆ ಕೊಟ್ಟರು. ಅವನು ಖುಷಿಯಿಂದ ಆ ಹಾಳೆಯ ಮೇಲೆ ಗೀಚತೊಡಗಿದ. ಅವರು ಅಥರ್ವನ ಕಿವಿ ಪರೀಕ್ಷೆಯ ಎಲ್ಲ ರಿಪೋರ್ಟ್‌‌ಗಳನ್ನೂ ಚೆಕ್‌ ಮಾಡುತ್ತಲೇ ಡಾಕ್ಟರ್‌ಕೇಳಿದರು, ‘ಹಿಯರಿಂಗ್‌ ಏಡ್‌ಹಾಕಿಸಿ ಎಷ್ಟು ತಿಂಗಳಾಯ್ತು..?’ ‘ಒಂದುವರೆ ತಿಂಗಳುಗಳಾದವು ಸರ್‌’ ‘ಏನಾದರೂ ರೆಸ್ಪಾನ್ಸ್‌ ಮಾಡ್ತಾನಾ ಶಬ್ಧಗಳಿಗೆ..?’ ‘ಸ್ವಲ್ಪ ಇಂಪ್ರೂವ್‌ಮೆಂಟ್‌ಇದೆ ಅನ್ನಿಸುತ್ತೆ. ಪಿ.ಎ.ಡಿ.ಸಿ ಸ್ಕೂಲ್‌ನ ಥೆರಪಿಯಿಂದಾಗಿ ಸ್ವಲ್ಪ ಸುಧಾರಣೆ ಕಾಣಿಸುತ್ತಿದೆ. ಆದರೆ, ಖಚಿತವಾಗಿ ಅವನಿಗೆ ಕೇಳಿಸುತ್ತಿದೆಯಾ, ಇಲ್ಲವಾ ಎಂಬ ಬಗ್ಗೆ ನಾನು ಏನೂ ಹೇಳಲಾರೆ ಸರ್‌’ ಅಂದು ಮುಖ ಚಿಕ್ಕದಾಗಿಸಿದೆ ನಾನು.

ರಿಪೋರ್ಟ್‌ ಫೈಲ್‌ಮುಚ್ಚುತ್ತಾ ನಮ್ಮನ್ನ ನೋಡಿ ಮಾತನಾಡತೊಡಗಿದರು. ‘ಹಾಂ ನಿಮಗೆ ಗೊತ್ತಿದಯಲ್ಲ, ಮಗೂಗೆ ‘ಸೀವಿಯರ್‌ಟು ಪ್ರೊಫೌಂಡ್’ ಹಿಯರಿಂಗ್‌ ಲಾಸ್‌ ಇರೋದ್ರಿಂದ , ಹಿಯರಿಂಗ್‌ ಏಡ್‌ನಿಂದ ಅಂಥ ಉಪಯೋಗವಿಲ್ಲ ಅಂತ’ ವಿನಯ್‌ಹೂಂ ಅಂದ. ನಾನು ಹೌದು ಎಂಬಂತೆ ತಲೆ ಅಲ್ಲಾಡಿಸಿದೆ. ‘ಈಗ ನೀವು ಆಪರೇಶನ್‌ಗೆ ಸಿದ್ಧರಾಗಿಯೇ ಬಂದಿದ್ದೀರಾ. ಕಾರ್ಯಾಗಾರದಲ್ಲಿ ಎಲ್ಲ ಮಾಹಿತಿ ತಿಳಿದುಕೊಂಡಿದ್ದೀರಾ ಅಲ್ವಾ…?’ ‘ಹೌದು ಸರ್‌, ಕಾರ್ಯಾಗಾರದ ನಂತರವೇ ನಮ್ಮ ನಿರ್ಧಾರವನ್ನ ಗಟ್ಟಿಗೊಳಿಸಿದ್ದು ನಾವು.’ ಅಂತ ಇಬ್ಬರೂ ಹೇಳಿದೆವು. ‘ಒಳ್ಳೇದಾಯ್ತು. ಈಗ ಎಲ್ಲಕ್ಕಿಂತ ಮೊದಲು ನೀವು ಮಗುವಿಗೆ ಸಿ.ಟಿ ಸ್ಕ್ಯಾನ್‌ಮತ್ತು ಎಮ್‌.ಆರ್‌.ಐ ಸ್ಕ್ಯಾನ್‌ ಮಾಡಿಸಬೇಕು’ ಎಂದು ಅವರೆನ್ನುತ್ತಿದ್ದಂತೆ, ಅದೇ ಆಸ್ಪತ್ರೆಯಲ್ಲಿಯೇ ಆಡಿಯಾಲಾಜಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣ್‌ ರಾಯನಗೌಡರ್‌ ಸರ್‌ ಕೂಡ ಬಂದು ನಮ್ಮನ್ನು ಸೇರಿಕೊಂಡರು.

‘ಸರ್‌.. ಈ ಸ್ಕ್ಯಾನ್‌ಗಳನ್ನೆಲ್ಲ ಏಕೆ ಮಾಡಿಸಬೇಕು..? ಇದರಿಂದ ಏನು ತಿಳಿಯುತ್ತದೆ? ತಿಳಿದುಕೊಳ್ಳೋಕೋಸ್ಕರ ಕೇಳ್ತಿದ್ದೀನಿ ಸರ್‌’ ವಿನಯ್‌ ಪ್ರಶ್ನೆ ಇಟ್ಟ. ‘ಮಧ್ಯ ಕಿವಿ, ಕಾಕ್ಲಿಯಾ ನರ, ಮೆದುಳಿನ ರಚನೆ ಬಗ್ಗೆ ತಿಳಿದುಕೊಳ್ಳಲು ಈ ಎರಡೂ ಸ್ಕ್ಯಾನ್ ಮಾಡಬೇಕು. ಸಿ ಟಿ ಸ್ಕ್ಯಾನ್ ಇಂದ ಹಾರ್ಡ್ ಟಿಶ್ಯೂ ಬಗ್ಗೆ ತಿಳಿಯುತ್ತದೆ. ಹಾರ್ಡ್ ಟಿಶ್ಯೂ ಅಂದರೆ ಮೂಳೆ. ಕಾಕ್ಲಿಯ (ಶಂಖದ ಥರ ಇರುವ ಶ್ರವಣಾಂಗ) ಒಂದು ಸುತ್ತಿರುವ ಮೂಳೆಯ ಕೊಳವೆ. ಅದರ ರಚನೆ ಇಂಪ್ಲಾಂಟ್ ಮಾಡಲು ಅತ್ಯವಶ್ಯ. ಎಂ.ಅರ್. ಐ ಇಂದ ಸಾಫ್ಟ್ ಟಿಶ್ಯೂ ಬಗ್ಗೆ ತಿಳಿಯುತ್ತದೆ. ಸಾಫ್ಟ್ ಟಿಶ್ಯೂ ಅಂದರೆ ನರ, ಮಾಂಸ, ಮೆದುಳು, ಕಾಕ್ಲಿಯಾ ಒಳಗೆ ಇರುವ ರಚನೆಗಳು. ಕಾಕ್ಲಿಯಾ ಇಂದ ಹೊರಬರುವ ನರದ ಮೆದುಳಿನ ತನಕದ ರಚನೆಯ ಬಗ್ಗೆ ನಮಗೆ ಈ ಸ್ಕ್ಯಾನ್‌ಗಳಲ್ಲಿ ತಿಳಿಯುತ್ತದೆ.’ ನಮಗೆ ಅರ್ಥವಾಗುವಂತೆ ಹಾಳೆಯ ಮೇಲೆ ಚಿತ್ರ ಬಿಡಿಸಿ ಹೇಳುತ್ತಿದ್ದರು ವೈದ್ಯರು.

‘ನಾವು ಆಪರೇಷನ್ ಅಲ್ಲಿ ಯಾವುದೇ ಅಂಗವನ್ನು ವ್ಯತ್ಯಾಸ ಮಾಡುವುದಿಲ್ಲ ಹೆದರಬೇಡಿ. ಸರಿಯಾದ ಜಾಗದಲ್ಲಿ ಅಂದರೆ ಕಾಕ್ಲೀಯ ನರ ಸ್ಟಾರ್ಟ್ ಆಗುವ ಜಾಗದಲ್ಲಿ ಇಂಪ್ಲ್ಯಾಂಟ್‌ ಅನ್ನು ಕೂರಿಸುತ್ತೇವೆ ಅಷ್ಟೆ. ಆದ್ದರಿಂದ ಇಂಪ್ಲಾಂಟ್ ಸಮರ್ಥವಾಗಿ ಕೆಲಸ ಮಾಡಲು ಈ ಎಲ್ಲ ಅಂಗಗಳ ರಚನೆ ಸರಿಯಾಗಿರುವುದು ಅತ್ಯವಶ್ಯ. ಹೀಗಾಗಿ ಅವುಗಳೆಲ್ಲವನ್ನ ಈಗಲೇ ಪರೀಕ್ಷಿಸಿಕೊಳ್ಳಬೇಕು.’ ವೈದ್ಯರು ವಿವರಿಸುತ್ತಿರುವಾಗಲೇ ನನ್ನದೊಂದು ಪ್ರಶ್ನೆ ಇಟ್ಟೆ. ‘ಸರ್‌.. ಈ ಸ್ಕ್ಯಾನ್‌ನಲ್ಲಿ ಕಾಕ್ಲಿಯರ್‌ ನರದೊಳಗಿರುವ ಹೇರ್‌ಸೆಲ್ಸ್‌ ಕೂಡ ಕಾಣಿಸುತ್ತದೆಯಾ..? ಹೇರ್‌ಸೆಲ್ಸ್‌ ಹೇಗಿದೆ ಅಂತ ಗೊತ್ತಾಗುತ್ತಾ..?’ ‘ಖಂಡಿತ ಇಲ್ಲ. ಹೇರ್‌ಸೆಲ್ಸ್‌ ಅತ್ಯಂತ ಸೂಕ್ಷವಾಗಿರುತ್ತೆ. ಸ್ಕ್ಯಾನ್‌ಗಳಲ್ಲಿ ಕಾಣಿಸೋದಿಲ್ಲ ಅದು.’ ಅರ್ಥವಾಯಿತು ಎಂಬಂತೆ ತಲೆ ಅಲ್ಲಾಡಿಸಿದೆವು ನಾವು.

ಮುಂದುವರೆಸಿದರು ಅವರು, ‘ಈ ಸ್ಕ್ಯಾನ್‌ನಲ್ಲಿ ನಮಗೆ ಮಗುವಿನ ಕಾಕ್ಲಿಯರ್‌ ನರ ಹೇಗಿದೆ..? ಅನ್ನೋದಷ್ಟೇ ತಿಳಿಯುತ್ತದೆಯೇ ಹೊರತು, ಅದರೊಳಗಿರುವ ಹೇರ್‌ಸೆಲ್ಸ್‌ಕಾಣಿಸುವುದಿಲ್ಲ. ಕೆಲವರಲ್ಲಿ ಕಾಕ್ಲಿಯರ್‌ ನರ ಸಣ್ಣದಾಗಿರುತ್ತೆ, ತಿರುಪಿಕೊಂಡಿರುತ್ತೆ, ಕೆಲವೇ ಕೆಲವು ಪ್ರಕರಣಗಳಲ್ಲಿ ಕಾಕ್ಲಿಯರ್‌ ನರವೇ ಇಲ್ಲದಿರುವುದೂ ಇದೆ. ಹೀಗಾಗಿ ಮೊದಲು ಸ್ಕ್ಯಾನ್‌ ಮಾಡಿಸಿಬಿಡಿ.’ ಡಾಕ್ಟರ್ ದನಿಯಲ್ಲಿ ಏರಿಳಿತವಿರಲಿಲ್ಲ.

ನನ್ನ ಹೃದಯ ಬಡಿತ ಹೆಚ್ಚಿದ್ದು ನನಗೇ ಗೊತ್ತಾಗುತ್ತಿತ್ತು. ‘ಕಾಕ್ಲಿಯರ್‌ನರವೇ ಇಲ್ಲದಿದ್ದರೆ..? ಏನು ಗತಿ ಸರ್‌..?’ ಅನಿಯಂತ್ರಿತವಾಗಿ ಪ್ರಶ್ನೆ ಕೇಳಿಬಿಟ್ಟೆ. ‘ಕಾಕ್ಲಿಯರ್‌ ನರವೇ ಇಲ್ಲದಿರುವುದೆಲ್ಲ ತುಂಬಾ ರೇರ್‌ ಕೇಸ್‌. ಅದಕ್ಕಾಗಿ ನೀವು ಭಯಪಡಬೇಕಿಲ್ಲ. ಸಾಮಾನ್ಯವಾಗಿ ಒಳಗೆ ಕಾಕ್ಲಿಯರ್‌ ನರದ ರಚನೆಯಲ್ಲಿ ಸಮಸ್ಯೆಯಿದ್ದಾಗ, ಹೊರಕಿವಿಯ ರಚನೆಯಲ್ಲಿ ಏನಾದರೂ ವ್ಯತ್ಯಾಸ ಕಾಣಿಸಿಕೊಳ್ಳುತ್ತೆ. ಅಥರ್ವನ ಕಿವಿ ರಚನೆ ಅತ್ಯಂತ ಸಾಮಾನ್ಯವಾಗಿದೆ. ಸೋ.. ನೀವು ಅದಕ್ಕಾಗಿ ಹೆದರಬೇಕಿಲ್ಲ’ ಎನ್ನುತ್ತಾ ತಮ್ಮ ಪಕ್ಕವೇ ಕುಳಿತಿದ್ದ ಅಥರ್ವನ ಬೆನ್ನು ನೇವರಿಸಿದರು. ಅವನು ಅವರನ್ನೇ ನೋಡಿ ಕಣ್ಣರಳಿಸಿಕೊಂಡು ನಕ್ಕ. ವೈದ್ಯರು ಇಷ್ಟು ಧೈರ್ಯ ನೀಡುತ್ತಿದ್ದರೂ, ಒಳಗೊಳಗೇ ಡುಕಿ ಡುಕಿ ಶುರುವಾಗಿತ್ತು ನನಗೆ. ಏ.ಸಿ ರೂಂನಲ್ಲಿಯೇ ತಣ್ಣಗೆ ಬೆವೆತಿದ್ದೆ.

ಎಂ.ಆರ್‌.ಐ ಮತ್ತು ಸಿ.ಟಿ ಸ್ಕ್ಯಾನ್‌ಮಾಡಿಸಲು ತಡ ಮಾಡದೇ ಅದೇ ವಾರದ ಮಧ್ಯದಲ್ಲಿಯೇ ಒಂದು ದಿನ ಮಧ್ಯಾಹ್ನ ಎರಡು ಗಂಟೆಗೆ ಅಪಾಯಿಂಟ್‌ಮೆಂಟ್‌ ಪಡೆದುಕೊಂಡೆ. ಅನುಮತಿ ಪಡೆದುಕೊಂಡು ಮಧ್ಯಾಹ್ನ 12ಕ್ಕೇ ಸ್ಕೂಲ್‌ನಿಂದ ಮನೆಗೆ ಬಂದು, ಸರಿಯಾಗಿ ಒಂದು ಗಂಟೆಗೆ ಅಥರ್ವನಿಗೆ ಊಟ ಮಾಡಿಸಿ, ಆಟೋ ಏರಿ ಸಮಯಕ್ಕಿಂತ ಹತ್ತು ನಿಮಿಷ ಮೊದಲೇ ಸ್ಕ್ಯಾನಿಂಗ್‌ ಸೆಂಟರ್‌ ತಲುಪಿದ್ದೆ. ರಿಸೆಪ್ಶನ್‌ನಲ್ಲಿ ಡಾಕ್ಟರ್‌ಕೊಟ್ಟ ಪತ್ರವನ್ನು ಕೊಟ್ಟು, ನಮ್ಮ ಅಪಾಯಿಂಟ್‌ಮೆಂಟ್‌ ನಂಬರ್‌ ಹೇಳಿದೆ. ಅವರು ಅಲ್ಲಿರುವ ಓರ್ವ ವೈದ್ಯರ ಕ್ಯಾಬಿನ್‌ಗೆ ಕಳುಹಿಸಿದರು, ಅವರು ಅಥರ್ವನನ್ನು ನೋಡುತ್ತಿದ್ದಂತೆ, ಸ್ಕ್ಯಾನ್‌ಮಾಡುವಾಗ ಮಗುವಿನ ಮೈಮೇಲೆ ಯಾವುದೇ ಲೋಹಗಳಿರಬಾರದು ಎಲ್ಲವನ್ನೂ ತೆಗೆದುಬಿಡಿ ಎಂದರು. ಅವನ ಕಿವಿಯಲ್ಲಿದ್ದ ಓಲೆಯನ್ನ ನಾವು ಬರಿಗೈಯ್ಯಲ್ಲಿ ತೆಗೆಯಲು ಸಾಧ್ಯವಿಲ್ಲ ಅಂದೆ, ಯಾವುದಾದರೂ ಅಕ್ಕಸಾಲಿಗರ ಅಂಗಡಿಗೆ ಹೋಗಿ ತೆಗೆಸಿಕೊಂಡು ಬನ್ನಿ ಅಂದುಬಿಟ್ಟರು. ಆಯ್ತು ಸರ್‌ಎನ್ನುತ್ತಾ ಅಲ್ಲಿಂದೆದ್ದು ಹೊರಟಿದ್ದೆ.

ಇನ್ನೇನು ಹೊರಗಿನ ಮೆಟ್ಟಿಲಿಳಿಯಬೇಕು ಅನ್ನುವಷ್ಟರಲ್ಲಿ. ನನ್ನ ಮಂಗಲಾ ಚಿಕ್ಕಮ್ಮ ಅವರ ಮಗನ ಬೈಕ್‌‌ನಲ್ಲಿ ಬಂದಿಳಿದರು. ಅವರಿಬ್ಬರನ್ನೂ ನೋಡಿ ನನಗೆ ಆಶ್ಚರ್ಯದ ಜತೆ ಸಮಾಧಾನವೂ ಆಯ್ತು. ಹಿಂದಿನ ದಿನ ಫೋನ್‌ನಲ್ಲಿ ಹೀಗೊಂದು ಸ್ಕ್ಯಾನ್‌ ಮಾಡಿಸಬೇಕು ನಾಳೆ ಎಂದಿದ್ದೆ ಅಷ್ಟೆ. ಸಹಜವಾಗಿ ಎಲ್ಲಿ ಎಂದು ಕೇಳಿದ್ದರು ನಾನು ಹೇಳಿದ್ದೆ. ಆದರೆ ಅವರು ಸಮಯಕ್ಕೆ ಸರಿಯಾಗಿ ಹೀಗೆ ನನಗೆ ಜತೆಯಾಗಲು ಓಡಿ ಬರುತ್ತಾರೆ ಎಂದು ಎಣಿಸಿರಲಿಲ್ಲ. ‘ಸ್ಕ್ಯಾನ್‌ಆಗೋಯ್ತಾ..? ಎಲ್ಲಿಗೆ ಹೊರಟಿದ್ದೀಯಾ..?’ ಬೈಕ್‌ಇಳಿಯುತ್ತಲೇ ಗಡಿಬಿಡಿಯಲ್ಲಿ ಕೇಳಿದರು ಚಿಕ್ಕಮ್ಮ. ‘ಇಲ್ಲ ಇಲ್ಲ. ಅಥರ್ವನ ಕಿವಿಯೋಲೆ ತೆಗೆಸಬೇಕಂತೆ, ಅದಕ್ಕಾಗಿ ಹೊರಟಿದ್ದೆ’ ಅಂದಿದ್ದೇ ಚಿಕ್ಕಮ್ಮ ಮಗ ದರ್ಶನ್‌ ನಾನು ಕರೆದೊಯ್ತೀನಿ ಬಾ ಅಂದ, ಹತ್ತೇ ನಿಮಿಷದಲ್ಲಿ ಒಬ್ಬ ಅಕ್ಕಸಾಲಿಗರ ಅಂಗಡಿಗೆ ಕರೆದೊಯ್ದು, ಕಿವಿಯೋಲೆ ತೆಗೆಸಿಕೊಂಡು ಬಂದೇ ಬಿಟ್ಟೆವು. ಅಲ್ಲಿಯ ವೈದ್ಯರ ಸಲಹೆಯಂತೆ ಮಗುವಿಗೆ ಸಿರಪ್‌ ಕುಡಿಸಿದೆ. ಸಿರಪ್‌ ಹೊಟ್ಟೆಗಿಳಿಸಿಕೊಂಡು ನಿದ್ದೆ ಹೋದ ಮಗುವನ್ನೆತ್ತಿಕೊಂಡು, ಸ್ಕ್ಯಾನ್‌ ಝೋನ್‌ಗೆ ಹೋದೆ.

ಅದೇ ಮೊದಲು ನಾನು ಎಮ್‌.ಆರ್‌.ಐ ಸ್ಕ್ಯಾನರ್‌ನ್ನ ನೋಡಿದ್ದು. ಸಿಲಿಂಡರ್‌ ಆಕೃತಿಯ ದೊಡ್ಡ ಸ್ಕ್ಯಾನರ್‌. ಬಿಳಿ ಬಣ್ಣದ ಆ ದೊಡ್ಡ ಸ್ಕ್ಯಾನರ್‌ ಯಂತ್ರದ ಮಧ್ಯ ಭಾಗದಲ್ಲಿ ವೃತ್ತಾಕಾರದ ಬಾಗಿಲೊಳಗಿನಿಂದ ಚಾಚಿಕೊಂಡಿರುವ ಸ್ಕ್ಯಾನರ್‌ ಟೇಬಲ್‌. ಅಲ್ಲಿಯ ಎಕ್ಸ್‌‌ಪರ್ಟ್ಸ್ ಹೇಳಿದಂತೆ ಮಗುವಿನ ಬಟ್ಟೆ ಬಿಚ್ಚಿ ಸ್ಕ್ಯಾನರ್‌ ಟೇಬಲ್‌ ಮೇಲೆ ಅವನನ್ನು ಮಲಗಿಸಿದೆ. ಒಂದು ಬಿಳಿ ಬಟ್ಟೆಯಿಂದ ಅವನನ್ನ ಪೂರ್ತಿ ಮುಚ್ಚಿದರು. ಮನಸ್ಸಿಗೆ ಕಸಿವಿಸಿಯಾದಂತಾಯಿತು. ‘ಮೇಡಮ್‌.. ನಿಮಗೆ ಭಯವಾಗುವುದಾದರೆ ಹೊರಗೆ ಹೋಗಿ ಕುಳಿತುಕೊಳ್ಳಿ. ಇಲ್ಲಿ ನಾವೆಲ್ಲ ಇರ್ತೀವಲ್ಲ ನೋಡ್ಕೋತ್ತೀವಿ’ ಎಂದರು ಅಲ್ಲಿರುವ ಓರ್ವ ನರ್ಸ್‌. ನನಗ್ಯಾಕೋ ಅಲ್ಲಿಂದ ಹೊರಹೋಗಲು ಮನಸ್ಸಿರಲಿಲ್ಲ. ‘ಎಷ್ಟೊತ್ತಾಗಬಹುದು..?’ ಕೇಳಿದೆ. ’40 ನಿಮಿಷ’ ಅಂದರು. ‘ಇಲ್ಲೆ ಇರ್ತೀನಿ ಪರವಾಗಿಲ್ಲ’ ಅಂದೆ.

ಅಥರ್ವ ಮಲಗಿದ ಸ್ಕ್ಯಾನರ್‌ ಟೇಬಲ್‌ನ್ನ ಸ್ಕ್ಯಾನರ್‌ ಒಳಕ್ಕೆಳೆದುಕೊಂಡು ಲಾಕ್‌ ಆಗಿಬಿಡ್ತು. ಆ ಬೃಹತ್‌ ಯಂತ್ರ ನನ್ನ ಪುಟ್ಟ ಕಂದನನ್ನು ನುಂಗಿದಂತೆ ಕಂಡಿತು ನನಗೆ. ಅದು ಹೊರ ಸೂಸುತ್ತಿರುವ ‘ಧಡ್‌ಧಡ್‌ಧಡ್‌’ ಎಂಬ ಶಬ್ಧವಂತೂ ಭಯವನ್ನು ಇನ್ನಷ್ಟು ಹೆಚ್ಚಿಸುತ್ತಿತ್ತು. ಆ ಕೊಳವೆಯೊಳಗೆ ಮೈಮರೆತು ಮಲಗಿದ್ದಾನೆ ಅಥರ್ವ ಎಂದು ತಿಳಿದಿದ್ದರೂ, ಸ್ಕ್ಯಾನರ್‌ಯಂತ್ರದ ಒಳಗಿದ್ದಾಗ ಅವನಿಗೆ ಎಚ್ಚರವಾಗಿಬಿಟ್ಟರೆ ಏನು ಗತಿ..? ಆತಂಕ ಕಾಡುತ್ತಿತ್ತು. ಆ ಯಂತ್ರದ ಶಬ್ಧ ಕೇಳಲಾರದೇ, ಅದ್ಯಾಕೋ ವಿಪರೀತ ಬಾಯಾರಿಕೆಯಾದಂತಾಗಿ ಹೊರಬಂದುಬಿಟ್ಟೆ. ಹೊರಗೆ ಕುಳಿತು ನನಗೋಸ್ಕರ ಕಾಯುತ್ತಿದ್ದ ಚಿಕ್ಕಮ್ಮ ತಮ್ಮ ಬಳಿ ನನ್ನ ಕೂರಿಸಿಕೊಂಡು, ನನ್ನ ಮೃದುವಾಗಿ ಹಿಡಿದುಕೊಂಡರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

October 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Medha

    I wait for your column everyday . I can feel your every emotion. Just praying/Wishing all turns out good. !!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: