ಅಮೃತಾ ಹೆಗಡೆ ಅಂಕಣ- ಅರ್ಥವಾಗದ ‘ಆಶ್​ಪಟಾಟು’

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

26

ಶತಾಯಗತಾಯ ಪ್ರಯತ್ನ ಪಟ್ಟರೂ ಆವತ್ತು ಅಥರ್ವ, ಥೆರಪಿ ತರಗತಿಯಲ್ಲಿ ಕೂರತ್ತಲೇ ಇಲ್ಲ. ಏಕೋ ಥೆರಪಿ ಕೊಠಡಿಯೊಳಗೆ ಬರಲು ಅವನಿಗೆ ಅಂದು ಮನಸ್ಸೇ ಇರಲಿಲ್ಲ.  ಅತ್ತು, ಕೊಸರಾಡಿದರೂ ಬಿಡದೇ ಅವನನ್ನೆತ್ತಿಕೊಂಡು ಕೊಠಡಿಯೊಳಗೆ ಬಂದು ಕೂತಿದ್ದೆ ನಾನು. ಥೆರಪಿಸ್ಟ್​ ಶೈಲಜಾ ಶುಕ್ಲಾ ಕೂಡ, ಅದೇನೇನೋ ಆಟಿಕೆಗಳನ್ನು ತೋರಿಸಿ ಅವನ ಗಮನ ಸೆಳೆಯಲು ಹರಸಾಹಸ ಪಡುತ್ತಲೇ ಇದ್ದರು. ಊಹೂಂ. ನಮ್ಮಿಬ್ಬರಿಂದ್ಲೂ ಅವನನ್ನ ತಹಬಂದಿಗೆ ತರಲು ಆಗಲೇ ಇಲ್ಲ.  

ಕಾಕ್ಲಿಯರ್​ ಇಂಪ್ಲಾಂಟ್​ ಶಸ್ತ್ರ ಚಿಕಿತ್ಸೆಯಾಗಿ, ಆಕ್ಟಿವೇಟ್​ ಆದಾಗಿಂದಲೂ, ಮಗುವಿಗೆ ಕೇಳಿಸಿಕೊಳ್ಳುವುದನ್ನು ಕಲಿಸುವುದಕ್ಕಾಗಿಯೇ ತರಬೇತಿ ನೀಡುವುದು ಅತೀ ಅವಶ್ಯ. ಈ ಲಿಸನಿಂಗ್​ ಥೆರಪಿಯ ಜತೆ, ಕೇಳಿಸಿಕೊಂಡು ಮಾತನಾಡಲು ಕಲಿಸುವುದಕ್ಕಾಗಿ ಸ್ಪೀಚ್​ ಥೆರಪಿಯನ್ನೂ ಕೊಡಬೇಕು. ಇವೆರಡಕ್ಕೂ ಪ್ರತ್ಯೇಕ ಥೆರಪಿ ತರಗತಿಗಳನ್ನು ಇಂಪ್ಲಾಂಟ್​ ಆದ ಮಕ್ಕಳಿಗೆಂದೇ ಆಡಿಯೋಲಾಜಿಸ್ಟ್​ ಶೈಲಜಾ ಮೇಡಮ್​ ನಮ್ಮ ಶಾಲೆಗೇ ಬಂದು ನಡೆಸಿಕೊಡುತ್ತಿದ್ದರು. 45 ನಿಮಿಷದ ಆ ವಿಶೇಷ ತರಗತಿಯಲ್ಲಿ ಒಂದೇ ಮಗುವನ್ನ ಕೂರಿಸಿಕೊಂಡು ಅದರ ಕಲಿಕೆಗೆ ಅನುಗುಣವಾಗಿ ಥೆರಪಿ ನೀಡಲಾಗುತ್ತದೆ. ಪಿ.ಎ.ಡಿ.ಸಿ ಶಾಲೆಯ ಕಲಿಕೆಯ ಜತೆ ಜತೆಗೆ ವಾರಕ್ಕೆ ಮೂರು ಈ ವಿಶೇಷ ಥೆರಪಿ ತರಗತಿಗಳನ್ನೂ ಅಥರ್ವ ಪಡೆದುಕೊಳ್ಳತೊಡಗಿದ್ದ. 

 ನಮ್ಮ ಶಾಲೆಯಲ್ಲಿಯೇ ಇರುವ ಸೌಂಡ್​ ಪ್ರೂಫ್​ ಸ್ಪೆಷಲ್​ ರೂಮ್​ನಲ್ಲಿ ಲಿಸನಿಂಗ್​ ಥೆರಪಿ ನೀಡುತ್ತಿದ್ದರು. ಲಿಸನಿಂಗ್​ ಥೆರಪಿ ತರಗತಿ ಎಂದರೆ ಅಥರ್ವನಿಗೆ ಖುಷಿಯೋ ಖುಷಿ. ಪ್ರತಿದಿನ ಹೊಸ ಹೊಸ ಆಟಿಕೆಗಳ ಜತೆ ಆಡಬಹುದು ಎಂಬ ಆಸೆ ಅವನಿಗೆ. ಶೈಲಜಾ ಅವರಂತೂ ಮಕ್ಕಳೊಂದಿಗೆ ಮಗುವಾಗಿ ಕಲಿಸುವಂಥ ಗುಣದ ಸಹನಾಜೀವಿ. ಅವರು ಅಥರ್ವನನೊಂದಿಗೆ ಆಡುತ್ತಲೇ ಥೆರಪಿ ನೀಡುತ್ತಿದ್ದರು. ಅಥರ್ವನಿಗೋ ಅವರೆಂದರೆ ಬಹು ಇಷ್ಟ. ಇದೇ ಕಾರಣಕ್ಕೆ ಅತೀ ಕಡಿಮೆ ಸಮಯದಲ್ಲಿ ಅವನದೇ ಭಾಷೆಯಲ್ಲಿ ‘ಶೈಲಜಾ ಆಂಟೀ’ ಅನ್ನತೊಡಗಿದ್ದ. ಈ ಸಲುಗೆಯ ಕಾರಣದಿಂದಲೇ ಶೈಲಜಾ ಅವರ ತರಗತಿಯಲ್ಲಿ ತರಲೆ ಮಾಡುವುದೂ ಕೂಡ ವಿಪರೀತ. ಆದರೆ ಆವತ್ಯಾಕೋ ಚೇಷ್ಠೆ ಸ್ವಲ್ಪ ಜಾಸ್ತಿಯೇ ಆಗಿತ್ತು. ಇವತ್ತಿನ ಪಾಠ ಬೇಡವೇ ಬೇಡ ಎನ್ನುವಂತೆ ಹಟ ಮಾಡುತ್ತಿದ್ದ ಅಥರ್ವ. 

ಆಗಲೇ ಶೈಲಜಾ ತಮ್ಮ ಬ್ಯಾಗ್​ನಿಂದ ಆ ಪುಸ್ತಕಗಳನ್ನ ತೆಗೆದಿಟ್ಟದ್ದು. ಆ ಪುಸ್ತಕಗಳನ್ನ ತೆರೆದಿಟ್ಟು ಅಥರ್ವನಿಗೆ ತೋರಿಸಿದ್ದೇ ತಡ, ನಾಲ್ಕೇ ನಾಲ್ಕು ಕ್ಷಣಗಳೊಳಗೆ, ಆಶ್ಚರ್ಯಕರ ರೀತಿಯಲ್ಲಿ ಗಲಾಟೆ ನಿಂತಿತ್ತು. ತಕ್ಷಣ ಕಣ್ಣೊರೆಸಿಕೊಂಡು ಶೈಲಜಾ ಅವರು ತೋರಿಸುತ್ತಿರುವ ಪುಸ್ತಕದ ಮುಖಪುಟದ ಚಿತ್ರ ನೋಡತೊಡಗಿದ. ನನಗೂ ಆಶ್ಚರ್ಯ. ಇದೆಂಥ ಮಾಯಾ ಪುಸ್ತಕವಪ್ಪಾ..! ಅಂದುಕೊಂಡೆ ಮನಸ್ಸಿನಲ್ಲಿಯೇ. 

ಮುದ್ದು ಚಿತ್ರಗಳಿರುವ ಕಥೆ ಪುಸ್ತಕಗಳಾಗಿದ್ದವು ಅವು. ಅವುಗಳ ಹೆಸರು ‘ಪೆಪ್ಪರ್​ ಸಿರೀಸ್​’ ಎಂದು. ಇವು ಇಂಗ್ಲೀಷ್​ನಲ್ಲಿರುವ ಕಥೆ ಪುಸ್ತಕಗಳಾದರೂ, ಆ ಪುಸ್ತಕದಲ್ಲಿ ಅಕ್ಷರಗಳಿಗಿಂತ ಚಿತ್ರಗಳೇ ಹೆಚ್ಚು. ಪೆಪ್ಪರ್​ಎಂಬ ಮುದ್ದು ಮುದ್ದಾದ ನಾಯಿಮರಿಯ ಕಥೆಗಳಿರುವ ಸರಣಿ ಪುಸ್ತಕಗಳು ಅವು. ಎರಡು-ಮೂರು ವರ್ಷದ ಮಕ್ಕಳಿಗಾಗಿಯೇ ಇರುವ ಈ ಪುಸ್ತಕಗಳು, ತನ್ನ ಚೆಂದದ ಚಿತ್ರಗಳಿಂದಲೇ ಮಕ್ಕಳನ್ನು ಆಕರ್ಷಿಸುವಂತಿದೆ. ಇದೇ ಪುಸ್ತಕ ತೋರಿಸಿ ಅಥರ್ವನಿಗೆ ಕಥೆ ಹೇಳಿದ್ದರು ಶೈಲಜಾ. ಶೈಲಜಾ ಅವರ ಬಾಯಿಯಲ್ಲಿ ಬಂದ ಒಂದು ಮಾತನ್ನೂ ಜಾರಲು ಬಿಡದೆ ಎಲ್ಲವನ್ನೂ ತಲೆಯೊಳಗಿಟ್ಟುಕೊಳ್ಳತೊಡಗಿದ್ದ. ಅವರು ಹೇಳಿದ್ದೆಲ್ಲವನ್ನೂ ಗಮನವಿಟ್ಟು ಕೇಳಿಸಿಕೊಂಡಿದ್ದ. ಆವತ್ತು ಅಷ್ಟುಹೊತ್ತು ತನ್ನೆಲ್ಲ ತರಲೆ ಚೇಷ್ಟೆಗಳನ್ನು ಮರೆತೇಬಿಟ್ಟಿದ್ದ. ಅವರು ಹೇಳುವುದನ್ನ ಅರ್ಥಮಾಡಿಕೊಳ್ಳುತ್ತಾ, ಅಲ್ಲಿದ್ದ ಚಿತ್ರಗಳನ್ನೆಲ್ಲ ಖುಷಿಯಿಂದ ನೋಡುತ್ತಿದ್ದ.  ಕಥೆ ಹೇಳಿ ಮುಗಿಸಿ, ಅದೇ ಕಥೆಯ ಬಗ್ಗೆ ಪ್ರಶ್ನೆ ಕೇಳಿದರೆ, ಅದಕ್ಕೆ ಉತ್ತರವಾಗಿ ಅಲ್ಲಿರುವ ಚಿತ್ರಗಳನ್ನೆಲ್ಲ ತೋರಿಸತೊಡಗಿದ್ದ. ನನಗಂತೂ ಅಚ್ಛರಿಯೋ ಅಚ್ಛರಿ!. ಅಥರ್ವ, ಕಥೆಗಳನ್ನು ಇಷ್ಟರ ಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತಿದ್ದಾನೆ ಎಂಬುದೇ ದೊಡ್ಡ ಖುಷಿ ಸಂಗತಿ ನನ್ನ ಪಾಲಿಗೆ !

ಆವತ್ತೇ ಶೈಲಜಾ ಅವರ ಕೈಯಲ್ಲಿದ್ದ ಆ ಎರಡೂ ಪುಸ್ತಕಗಳನ್ನೂ ಎರವಲು ಪಡೆದೆ. ಮನೆಯಲ್ಲಿ ಮತ್ತೊಮ್ಮೆ ಈ ಕಥೆಗಳನ್ನೆಲ್ಲ ಅಥರ್ವನಿಗೆ  ಹೇಳುವ ಸಂಕಲ್ಪ ಮಾಡಿಕೊಂಡೆ. ಅಲ್ಲಿಂದ ಶುರುವಾಯ್ತು ನಮ್ಮ ಕಥಾ ಮ್ಯಾರಥಾನ್​. ಪ್ರತಿ ದಿನ ಕನಿಷ್ಟ ಎರಡು ಕಥೆಗಳನ್ನು ಅಥರ್ವನಿಗೆ ಹೇಳಲೇಬೇಕಿತ್ತು. ಪಿ.ಎ.ಡಿ.ಸಿ ಶಾಲೆ ಪಾಠಕ್ಕೆ ಸಂಬಂಧಿಸಿದ ಬೇರೆಲ್ಲ ಚಟುವಟಿಕೆಗಳು ಮುಗಿದ ಮೇಲೆ ನಮ್ಮ ‘ಸ್ಟೋರಿ ಟೈಮ್​’ ಶುರುವಾಗುತ್ತಿತ್ತು. ಕಥೆಗಳನ್ನು ಕೇಳದೇ ಅಥರ್ವ ರಾತ್ರಿ ಮಲಗುತ್ತಲೇ ಇರಲಿಲ್ಲ. ಅವನು ಕೇಳಿದಷ್ಟು ಕಥೆಯನ್ನು ಹೇಳಬೇಕು. ಶೈಲಜಾ ಅವರಿಂದ ಪುಸ್ತಕಗಳನ್ನು ತಂದು ಮನೆಯಲ್ಲಿ ಕಥೆ ಹೇಳುತ್ತಿದ್ದೆನಲ್ಲ, ಆ ಪುಸ್ತಕವನ್ನ ವಾಪಾಸ್​ಕೊಟ್ಟಮೇಲೆಯೂ ಅದೇ ಕಥೆ ಹೇಳುವಂತೆ ದುಂಬಾಲು ಬೀಳುತ್ತಿದ್ದ. ಹೀಗಾಗಿ ಪೆಪ್ಪರ್​ ಸಿರೀಸ್ ಕಥೆ ಪುಸ್ತಕಗಳನ್ನು ಆನ್​ಲೈನ್​ ಶಾಪಿಂಗ್​ ವೆಬ್​ಸೈಟ್​ಗಳಲ್ಲಿ ಹುಡುಕಿ ಪುಸ್ತಕಗಳನ್ನು ಕೊಂಡುಕೊಂಡೆ. ಆರು ಪುಸ್ತಕಗಳಿರುವ ನಾಲ್ಕು ಸಿರೀಸ್​ ಸೆಟ್​ಗಳನ್ನು ತರಿಸಿಕೊಂಡು ಕಥೆ ಹೇಳತೊಡಗಿದ್ದೆ. 

ಚಿಕ್ಕಮಕ್ಕಳಿಗಾಗಿಯೇ ಇರುವ ಕಥೆ ಪುಸ್ತಕಗಳಾಗಿರುವುದರಿಂದ ಅದರಲ್ಲಿರುವ ಕಂಟೆಂಟ್​ ಕೂಡ ಚಿಕ್ಕಮಕ್ಕಳಿಗೆ ಸಂಬಂಧಪಟ್ಟಂಥವೇ. ಹಸಿರು ತರಕಾರಿ ತಿನ್ನುವ ವಿಷಯವಾಗಿ, ಪೆಪ್ಪರ್​ ಬೆಂಕಿಯೊಂದಿಗೆ ಆಡಲು ಹೋದಾಗ ಏನಾಯ್ತು ಎಂಬ ಬಗ್ಗೆ, ಪೆಪ್ಪರ್​ ರಸ್ತೆಯನ್ನು ಹೇಗೆ ದಾಟಿದ, ಪೆಪ್ಪರ್​ ಡಾಕ್ಟರ್​ ಕ್ಲಿನಿಕ್​ಗೆ ಹೋದಾಗ ಏನಾಯ್ತು, ಕೋಣೆಯಲ್ಲಿ ಕತ್ತಲೆ ಇದ್ದಾಗ ಪೆಪ್ಪರ್​ ಏಕೆ ಹೆದರಿದ, ಪೆಪ್ಪರ್​ ಜಾಸ್ತಿ ಕೇಕ್​ ತಿಂದಾಗ ಅವನಿಗೇನಾಯ್ತು, ಎಂಬ ವಿಷಯವಾಗಿ, ಹೀಗೆ ಇನ್ನೂ ಹತ್ತು ಹಲವು ಸಂಗತಿಗಳ ಮೇಲೆ ಕಥೆಗಳನ್ನ ಹೆಣೆದು ಮಕ್ಕಳ ಮನಸ್ಸಿಗೆ ಹಿತವೆನಿಸುವ  ಚಿತ್ರಗಳನ್ನ ಅಚ್ಚುಹಾಕಿಸಿಕೊಂಡ ಈ ಪುಸ್ತಕಳು, ಅಥರ್ವನ ಭಾಷಾ ಬಳಕೆಯನ್ನು ಬೆಳೆಸಿದ್ದವು. ನಾನು ಕಥೆ ಹೇಳುವಾಗ ಬಳಕೆ ಮಾಡಿದ ಶಬ್ಧಗಳನ್ನು, ತಾನೂ ಬಳಸಲು ಆರಂಭಿಸಿದ್ದ. 

ಕಥೆಗಳಿಂದ ಅಥರ್ವನ ಮಾತುಗಳಲ್ಲಾಗುತ್ತಿರುವ ಧನಾತ್ಮಕ ಬದಲಾವಣೆಯನ್ನ ಗುರುತಿಸಿದೆ.  ಹೀಗಾಗಿ ಶೈಲಜಾ ಬಳಿ ಇದ್ದ ಇನ್ನೂ ಹಲವು ರೀತಿಯ ಕಥೆ ಪುಸ್ತಕಗಳನ್ನೆಲ್ಲ ಜೆರಾಕ್ಸ್ ಮಾಡಿ ಇಟ್ಟುಕೊಂಡು ಕಥೆ ಹೇಳತೊಡಗಿದೆ. ಗೂಗಲ್​ನಲ್ಲಿ ಕಥೆ ಪುಸ್ತಕಗಳ ಸಾಫ್ಟ್​ ಕಾಪಿಗಳು ಸಿಗುವುದೋ ಎಂಬ ಹುಡುಕಾಟದಲ್ಲಿದ್ದಾಗ, ಪ್ರಥಮ್​ ಬುಕ್ಸ್​ ಅವರ  https://storyweaver.org.in/ ಎಂಬ ವೆಬ್​ ಸೈಟ್​ನಲ್ಲಿ ಭರಪೂರ ಕಥೆಗಳು ನನಗೆ ಸಿಕ್ಕವು. ಎರಡು ವರ್ಷದ ಮಕ್ಕಳಿಂದ ಹಿಡಿದು ಹದಿನಾಲ್ಕು ವರ್ಷದ ಮಕ್ಕಳ ತನಕ ಎಲ್ಲರೀತಿಯ ಕಥೆಗಳು, ಇಂಗ್ಲೀಷ್​, ಕನ್ನಡ, ಹಿಂದಿ ಒಳಗೊಂಡಂತೆ ಹಲವಾರು ಭಾಷೆಗಳಲ್ಲಿ  ಅಲ್ಲಿ ಲಭ್ಯವಿದೆ. ಕಥಾ ಸಾಗರವೇ ಸಿಕ್ಕ ಅನುಭವ ನಮಗೆ..! ಬಗೆದಷ್ಟೂ ಬಂಗಾರ..! ಸ್ಟೋರಿ ವೀವರ್​ ವೆಬ್​ಸೈಟ್​ ಅಥರ್ವನಿಗೆ ಮನದಣಿಯೆ ಕಥೆಗಳನ್ನ ಒದಗಿಸಿಬಿಡ್ತು. 

ಕಥೆ, ಕಥೆ, ಕಥೆ ಎಲ್ಲವೂ ಕಥಾಮಯ. ಅಥರ್ವನಿಗೆ ಕಥಾ ರೂಪದಲ್ಲಿಯೇ ಎಲ್ಲವನ್ನೂ ಹೇಳಲು ಆರಂಭಿಸಿದೆ. ‘ಮೈಸೂರಲ್ಲಿ ಅಥರ್ವ ಅನ್ನೋ ಒಬ್ಬ ಹುಡಗ ಇದ್ದಾನೆ. ಅವನು ಎಲ್ಲರಿಗಿಂತ ಜಾಣ. ಸ್ಕೂಲ್​ನಿಂದ ಬಂದತಕ್ಷಣ ಚಪ್ಪಲಿ ಬಿಚ್ಚಿ ಚಪ್ಪಲಿ ಗೂಡಿನಲ್ಲಿಯೇ ಇಡುತ್ತಾನೆ. ಕೈಕಾಲು ಮುಖ ತೊಳೆದುಕೊಳ್ಳುತ್ತಾನೆ. ಅಮ್ಮ ಕೊಟ್ಟ ತಕ್ಷಣ ಹಾಲು ಕುಡಿಯುತ್ತಾನೆ…’ ಹೀಗೆ ಕಥೆ ಹೇಳುವ ಧಾಟಿಯಲ್ಲಿ ಅದೇನು ಹೇಳಿದರೂ ಕೇಳಿಸಿಕೊಳ್ಳುತ್ತಿದ್ದ. ತನ್ನದೇ ಕಥೆಗಳನ್ನು ಅಮ್ಮ ಹೇಳುತ್ತಿದ್ದಾರೆ ಎಂಬುದನ್ನೂ ಅರ್ಥಮಾಡಿಕೊಂಡು ನಗುತ್ತಿದ್ದ. ಮನೆಯಲ್ಲಿರುವಾಗ ಸ್ಕೂಲ್​ನಲ್ಲಿ ಕಲಿತ ಪಾಠದ ಚಟುವಟಿಕೆಗಳನ್ನು, ಥೆರಪಿ ಕ್ಲಾಸ್​ನ ಚಟುವಟಿಕೆಗಳನ್ನು ಮಾಡುತ್ತಾ ಬೇಜಾರಾದರೆ ‘ಅಮ್ಮಾ.. ಅಎ  ಏಇ’ (ಅಮ್ಮಾ ಕಥೆ ಹೇಳಿ) ಎಂಬ ಬೇಡಿಕೆ ಇಡುತ್ತಿದ್ದ. ಒಂದು ಚುಟುಕು ಕಥೆ ಹೇಳಿದಂತೂ ಅವನಿಗೆ ಸಮಾಧಾನವಾಗುತ್ತಲೇ ಇರಲಿಲ್ಲ. 

ಇಂಪ್ಲಾಂಟ್​ಆಗಿ 5 ತಿಂಗಳಿಗೆ ಅಥರ್ವ ಎರಡು ಪದಗಳನ್ನ ಜೋಡಿಸುವುದಕ್ಕೆ ಶುರು ಮಾಡಿದ್ದ. ಈ ಸುಧಾರಣೆಯಲ್ಲಿ ಕಥೆಗಳ ಪಾತ್ರ ಬಹುದೊಡ್ಡದಿದೆ ಎಂಬುದು ನನಗೆ ಅರ್ಥವಾಗಿತ್ತು. ‘ನೀರು ಬೇಕು, ಅಮ್ಮಾ ಬನ್ನಿ, ಮೊಬಾಯ್ಲ್​ ಕೊಡಿ, ಕಾರು ಕೊಡಿ, ಕಥೆ ಹೇಳಿ’ ಹೀಗೆ ಎರಡೆರಡು ಪದಗಳನ್ನು ಜೋಡಿಸಿ ಹೇಳುತ್ತಿದ್ದನಾದರೂ ನನ್ನ ಹೊರತು ಮತ್ಯಾರಿಗೂ ಅವನ ಮಾತು ತಕ್ಷಣಕ್ಕೆ ಅರ್ಥವಾಗುವಂತಿರಲಿಲ್ಲ.  ಏಕೆಂದರೆ ಉಚ್ಛಾರಗಳ ಸ್ಪಷ್ಟತೆ ಇನ್ನೂ ಬಂದಿರಲಿಲ್ಲ. 

ಹೀಗಿದ್ದಾಗ,  ಒಂದು ದಿನ ಬೆಳಗ್ಗೆ ಸ್ಕೂಲ್​ಗೆ ಹೋಗುವ ಗಡಿಬಿಡಿಯಲ್ಲಿಯೇ ಅಥರ್ವನಿಗೆ ತಿಂಡಿತಿನ್ನಿಸಲು ಪ್ರಯತ್ನಪಟ್ಟೆ. ದೋಸೆಯನ್ನೋ, ಚಪಾತಿಯನ್ನೋ ಮಾಡಿದ್ದೆ ಎಂಬ ನೆನಪು. ಒಂದು ಚೂರನ್ನೂ ಬಾಯಿಗೆ ಹಾಕದೆ, ತಟ್ಟೆಯಲ್ಲೇನಿದೆ ಎಂಬುದನ್ನೂ ನೋಡದೆ ‘ಆಶ್​ಪಟಾಟು ಬೇಉ. ಓಸೆ ಬೇಆ’ ಅಂದ. ಅರ್ಥವಾಗಲಿಲ್ಲ ನನಗೆ. ಮತ್ತೊಮ್ಮೆ ಕೇಳಿದೆ. ಅದನ್ನೇ ಹೇಳಿದ. ದೋಸೆ ಬೇಡ ಅನ್ನುತ್ತಿದ್ದಾನೆ ಎಂಬುದು ಅರ್ಥವಾಯ್ತು. ‘ಬೇಡ’ ಎಂಬ ಪದ ಅದೇ ಮೊದಲ ಬಾರಿ ಅಥರ್ವ ಬಳಕೆ ಮಾಡಿದ್ದ.  ಅರೆರೆ..!? ಏನು ಬೇಡ ನಿನಗೆ..? ದೋಸೆ ಬೇಡವಾ..? ಇನ್ನೊಮ್ಮೆ ಹೇಳು. ಎನ್ನುತ್ತಾ ಮತ್ತೆ ಮತ್ತೆ ಹೇಳಿಸಿದೆ. ದೋಸೆ ತಿನ್ನಿಸಲು ಹೋಗಿ ಮತ್ತೆ ಮತ್ತೆ ಅವನ ಬಾಯಲ್ಲಿ ‘ಬೇಡ’ ಪದವನ್ನು ಕೇಳಿ ಕೇಳಿ ಖುಷಿಪಟ್ಟೆ.  ಆದರೆ, ಅವನಿಗಾಗಲೇ ಕಿರಿಕಿರಿಯಾಗತೊಡಗಿತ್ತು. ‘ಆಶ್​ಪಟಾಟು ಬೇಉ’ ಎಂದು ಜೋರಾಗಿ ಕಿರುಚಿಕೊಂಡ ! 

ದೋಸೆ ಬೇಡ ಎನ್ನುತ್ತಾನೆ ಎಂಬುದು ಅರ್ಥವಾದರೂ ಅದೇನನ್ನೋ ಬೇಕು ಅನ್ನುತ್ತಿದ್ದಾನಲ್ಲ ಅದೇನು ಎಂಬ ಅಂತಪಾರೇ ತಿಳಿಯಲಿಲ್ಲ. ಬೇಡ ಎಂಬ ಪದವನ್ನ ಅದೇ ಮೊದಲ ಬಾರಿ ಅಥರ್ವ ಉಪಯೋಗಿಸಿದ್ದಕ್ಕೆ ಖುಷಿಯಲ್ಲಿದ್ದೆನಲ್ಲ ನಾನು, ಆಶ್​ಪಟಾಟು ಬಗ್ಗೆ ತಲೆಕೆಡಿಸಿಕೊಳ್ಳದೇ, ಬಿಸ್ಕತ್ತು ತಿನ್ನಿಸಿ ಹಾಲು ಕುಡಿಸಿ ಸ್ಕೂಲ್​ಗೆ ಕರೆದೊಯ್ದೆ. ಆದರೆ, ಸ್ಕೂಲ್​ನಲ್ಲಿ ಮಧ್ಯಾಹ್ನ ಊಟ ಮಾಡುವಾಗಲೂ ‘ಆಶ್​ಪಟಾಟು’ವನ್ನ ನೆನಪಿಸಿಕೊಂಡ. ಸ್ಕೂಲ್​ನಿಂದ ವಾಪಾಸ್​ ಬಂದಮೇಲೆಯೂ ಅದೇ ರಾಗ. ರಾತ್ರಿ ಊಟ ಮಾಡುವಾಗಲೂ ಅದೇ ತಾಳ. ‘ಆಶ್​ಪಟಾಟು ಅಂದರೆ ಏನಿರಬಹುದು..? ತಲೆಯೊಳಗೆ ಹುಳ ಬಿಟ್ಟಂತಾಗಿತ್ತು. ಹಲವಾರು ತಿಂಡಿಗಳ ಹೆಸರುಗಳನ್ನು ಉಚ್ಛರಿಸಿ, ಇದಾ..? ಇದಾ..? ಎಂದು ಅವನನ್ನೇ ಕೇಳಿದೆ. ಊಹೂಂ ಎಲ್ಲಕ್ಕೂ ‘ಇನ್ನ’ ಅನ್ನುತ್ತಾ ತಲೆ ಅಲ್ಲಾಡಿಸಿದ್ದ. (ಇಲ್ಲ ಎನ್ನಲು ‘ಇನ್ನ’ ಎನ್ನುತ್ತಿದ್ದ) ಮರುದಿನ ಬೆಳಗ್ಗೆ ಏಳುವಾಗ ಪುಣ್ಯಕ್ಕೆ ಆ ‘ಆಶ್​ಪಟಾಟು’ ಮರೆತಿತ್ತು. ಅಬ್ಬಾ..! ಬಚಾವಾಗಿದ್ದೆ..!

ಈ ಘಟನೆ ನಡೆದು ವಾರವಾಗಿರಬಹುದು. ವಾರಾಂತ್ಯದ ರಜೆಯಲ್ಲಿ ವಿನಯ್​ ಮೈಸೂರಿಗೆ  ಬಂದಿದ್ದ. ಸಂಜೆಯ ಉಪಹಾರಕ್ಕಾಗಿ ಶಾವಿಗೆ ಉಪ್ಪಿಟ್ಟು ಮಾಡುತ್ತಿದ್ದೆ. ಉಪ್ಪಿಟ್ಟಿನ ಘಮ ಮೂಗಿಗೆ ಅಡರುತ್ತಿದ್ದಂತೆ ಅಡುಗೆ ಮನೆಗೆ ಓಡಿಬಂದ ಅಥರ್ವ, ‘ಓಸಿ'(ತೋರಿಸಿ) ಅಂದ. ಅವನನ್ನ ಎತ್ತಿಕೊಂಡು, ಒಲೆಯ ಮೇಲೆ ಇನ್ನೂ ಬೇಯುತ್ತಿದ್ದ ಉಪ್ಪಿಟ್ಟು ತೋರಿಸಿದೆ. ಕುತೂಹಲದಿಂದ ಬಾಣಲೆಯೊಳಗೆ ಇಣುಕಿ ನೋಡುತ್ತಾ, ಅಥರ್ವ ಖುಷಿಯಿಂದ ಕಿರುಚಿದ. ಏನಾಯ್ತಪ್ಪಾ…? ನನಗೂ ಎರಡು ಕ್ಷಣ ಅವನ ಖುಷಿಗೆ ಕಾರಣ ಹೊಳೆದಿರಲಿಲ್ಲ. ಧಡಕ್ಕನೆ ನನ್ನ ಕೈಯ್ಯಿಂದ ಜಾರಿ ನೆಲಕ್ಕೆ ನಿಂತುಕೊಂಡು ‘ಆಶ್​ಪಟಾಟು, ಆಶ್​ಪಟಾಟು, ಆಶ್​ಪಟಾಟು’ ಅನ್ನತ್ತಾ ಚಪ್ಪಾಳೆ ತಟ್ಟುತ್ತಾ ಕುಣಿದಾಡಿದ. ಅಬ್ಬಬ್ಬಾ..! ಏನು ಖುಷಿ ಅಂತೀರಾ..? ನಗುವಿನ ಹೊಳೆ..! ಅಂತೂ ಆಶ್​ಪಟಾಟು ಎಂಬ ಒಗಟಿಗೆ ಉತ್ತರ ಸಿಕ್ಕಿತಲ್ಲ ಎಂಬ ಸಮಾಧಾನದ ಸಂತಸ ನನಗೆ. ಅಥರ್ವನೊಂದಿಗೆ ನಾನೂ ಕುಣಿದಾಡಿದೆ. ಇದ್ದಕ್ಕಿದ್ದಂತೆ, ಇವರಿಬ್ಬರಿಗೇನಾಯ್ತು ಎಂಬಂತೆ ವಿನಯ್​ ನಮ್ಮನ್ನು ನೋಡತೊಡಗಿದ್ದ. ಇದ್ಯಾವ ವಿಷಯಕ್ಕೆ ತಾಯಿ ಮಗ ಇಷ್ಟು ಖುಷಿಪಡುತ್ತಿದ್ದಾರೆ ಎಂಬುದು ಅವನಿಗೆ ಅರ್ಥವೇ ಆಗಿರಲಿಲ್ಲ. ಅಂತೂ ನಾವಿಬ್ಬರೂ ಸಾವರಿಸಿಕೊಂಡು ‘ಆಶ್​ಪಟಾಟು’ ಪ್ರಹಸನವನ್ನು ವಿನಯ್​ಗೂ ಹೇಳಿದ್ದೆ. ಮೂವರೂ ಹೊಟ್ಟೆತುಂಬಾ ನಕ್ಕು ಹಗುರಾದೆವು. ‘ಆಶ್​ಪಟಾಟು’ ಅಲ್ಲ ಪುಟ್ಟಾ ‘ಶಾ..ವಿ…ಗೆ..ಉ..ಪ್ಪಿ..ಟ್ಟು..’  ನಿಧಾನವಾಗಿ ಹೇಳಿಕೊಟ್ಟು ಅವನ ಬಾಯಲ್ಲಿ ಹೇಳಿಸಿದೆ. (ಅಂದೇ ನಾನು ಮಾಡುವ ಶಾವಿಗೆ ಉಪ್ಪಿಟ್ಟಿಗೆ ‘ಆಶ್​ಪಟಾಟು’ ಎಂಬ ನಾಮಕರಣವಾಗಿತ್ತು.  ಇವತ್ತಿಗೂ ನಮ್ಮ ಮನೆಯಲ್ಲಿ ನಾವು ಶಾವಿಗೆ ಉಪ್ಪಿಟ್ಟಿಗೆ ‘ಆಶ್​ಪಟಾಟು’ ಅಂತ್ಲೇ ಕರೆಯುತ್ತೇವೆ. ಆಶಪಟಾಟು ಮಾಡಿದಾಗಲೆಲ್ಲ, ಒಮ್ಮೆ ಆ ಘಟನೆಯನ್ನ ನೆನೆಸಿಕೊಳ್ಳುತ್ತೇವೆ.) 

ಅಲ್ಲಿಯ ತನಕ ಎರಡೆರಡೇ ಶಬ್ಧಗಳನ್ನು ಸೇರಿಸಲು ಕಲಿತಿದ್ದ ಅಥರ್ವ, ಆಶ್​ಪಟಾಟು ತಿನ್ನುವಾಗ, ‘ಅಮ್ಮಾ ಮೊಬಾಯ್​ ಒಯಿ’ (ಅಮ್ಮಾ ಮೊಬಾಯ್ಲ್​ ಕೊಡಿ) ಎಂದಿದ್ದ. ನಾನು, ವಿನಯ್​ ಇಬ್ಬರೂ ಅವನ ಬಾಯಲ್ಲಿ ಬಂದ ಮೂರು ಪದಗಳ ವಾಕ್ಯ ಕೇಳಿ ಪುಳಕಿತಗೊಂಡಿದ್ದೆವು. ಈ ‘ಆಶ್​ಪಟಾಟು’ಗೆ ಅದೆಷ್ಟು ಶಕ್ತಿ ಇದ್ಯಪ್ಪಾ.. ಅನ್ನುತ್ತಾ ನಗತೊಡಗಿದ್ದ ವಿನಯ್​. 

ಸ್ವರದಿಂದ ಪದವಾಗಿ, ಪದಗಳನ್ನು ಜೋಡಿಸಲು ಕಲಿತು, ಮೂರು ಪದಗಳನ್ನ ಜೋಡಿಸಿ ಮಾತನಾಡಲು ಶುರು ಮಾಡಿದ್ದ ಅಥರ್ವ. ಆಡಿಯೋಲಾಜಿಸ್ಟ್​ ಪ್ರಕಾರ, ಇಂಪ್ಲಾಂಟ್​ ಆಗಿ ಐದು ತಿಂಗಳಿಗೆ ಪದಗಳನ್ನು ಜೋಡಿಸಲು ಕಲಿತಿದ್ದು ಒಳ್ಳೆಯ ಸುಧಾರಣೆ. ಶೈಲಜಾ ಅವರು ತಿಂಗಳಿಗೊಮ್ಮೆ ನಡೆಸುವ ಅಸೆಸ್​ಮೆಂಟ್ ಪ್ರಕಾರ, ಅಥರ್ವನ ಸುಧಾರಣೆ ಅವರ ನಿರೀಕ್ಷೆಯಷ್ಟೇ ಇರುತ್ತಿತ್ತು. ಪ್ರತಿ ಅಸೆಸ್​ಮೆಂಟ್​ನ ನಂತರ ಅವರು ರಿಸಲ್ಟ್​ ಹೇಳಿದಾಗ ಅದೇನೋ ನೆಮ್ಮದಿ ಮನಸ್ಸಿಗೆ. ಸುಧಾರಣೆಯ ಪ್ರತಿ ಮೆಟ್ಟಿಲುಗಳನ್ನೂ ಸರಿಯಾಗಿದೇ ಏರುತ್ತಿದ್ದಾನೆ ಎಂಬ ಸಮಾಧಾನ.

ಅವನಿಗೆ ಗೊತ್ತಿರುವವರ ಎಲ್ಲರ ಹೆಸರುಗಳನ್ನೂ ಹೇಳುತ್ತಿದ್ದ, ನಮ್ಮ ಕುಟುಂಬದ ಎಲ್ಲರ ಹೆಸರುಗಳನ್ನೂ ಹೇಳಲು ಪ್ರಯತ್ನಿಸುತ್ತಿದ್ದ. ಅಮೃತಾ ಎನ್ನಲು ‘ಅಮತಾ’, ವಿನಯ್​ಎನ್ನಲು ‘ಉಅಯ್​’,  ಸವಿತಾ ಎನ್ನಲು ‘ಓವಿತಾ’, ಸುಬ್ರಾಯ ಎನ್ನಲು ‘ಉಬ್ಬಾಯ’, ಆಂಟೀ ಎನ್ನಲು ಆತಿ ಹೀಗೆ.  ಅವನದೇ ಉಚ್ಛಾರದಲ್ಲಿ ನಮ್ಮೆಲ್ಲರ ಹೆಸರುಗಳು ಹೊಸ ರೂಪ ಪಡೆದುಕೊಂಡು ಮುದ್ದು ಭಾಷೆಯಲ್ಲಿ ಒದ್ದೆಯಾಗಿದ್ದವು. ಕೆಲವೇ ಕೆಲವು ವ್ಯಂಜನಗಳು ಉಚ್ಛಾರವಾಗುತ್ತಿದ್ದ ಕಾರಣಕ್ಕೆ ಅವನ ಮಾತಿನಲ್ಲಿ ಸ್ಪಷ್ಟತೆ ಇರಲಿಲ್ಲ. ಎಲ್ಲವಕ್ಕೂ ಅಥರ್ವ ಸ್ವರಗಳನ್ನೇ ಬಳಸುತ್ತಿದ್ದುದರಿಂದ ಬೇರೆಯವರಿಗೆ ಅವನ ಮಾತುಗಳು ಅರ್ಥವಾಗುತ್ತಿರಲಿಲ್ಲ. ಅಥರ್ವನ ಏನು ಹೇಳಿದ ಅನ್ನೋದನ್ನ ನಾನು ಎಲ್ಲರಿಗೂ ಅರ್ಥೈಸಬೇಕಿತ್ತು. 

ಅಥರ್ವ ಈ ಹಂತದಲ್ಲಿದ್ದಾಗ, ಆಡಿಯಾಲಾಜಿಸ್ಟ್​ ಶೈಲಜಾ ಅವರು ಸಧ್ಯದಲ್ಲಿಯೇ ನಡೆಯಬೇಕಿರುವ ಒಂದು ಕಾರ್ಯಕ್ರಮದ ಬಗ್ಗೆ ಹೇಳಿ, ಅಥರ್ವ ಮತ್ತು ನೀವು ಇಬ್ಬರೂ ಆ ಕಾರ್ಯಕ್ರಮಕ್ಕೆ ಬರಬೇಕು ಎಂಬ ಆಹ್ವಾನವಿಟ್ಟರು. ನಾನು ಆ ಬಗ್ಗೆ ಯೋಚಿಸುತ್ತಿದ್ದಂತೆ ಅವರು ಆ ಕಾರ್ಯಕ್ರಮದ ಬಗ್ಗೆ ಹೇಳತೊಡಗಿದರು.  ಆಷ್ಟ್ರೇಲಿಯಾದ ಮಾಜಿ ಕ್ರಿಕೇಟ್​ ಆಟಗಾರ ‘ಬ್ರೆಟ್​ಲೀ’ ಭಾಗವಹಿಸಲಿರುವ ಕಾರ್ಯಕ್ರಮ ಅದಾಗಿತ್ತು. ‘ಕಾಕ್ಲಿಯರ್​’ ಕಂಪನಿ ಹಾಗೂ ಮೈಸೂರಿನ ‘ಸ್ಕೈ ಸ್ಪೀಚ್​ಅಂಡ್ ಹಿಯರಿಂಗ್​ಕೇರ್​’ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಪ್ರಕಟಣೆಗೆ ಗ್ಲೋಬಲ್​ ಹಿಯರಿಂಗ್​ ಅಂಬಾಸಿಡರ್​ ಕೂಡ ಆಗಿರುವ ‘ಬ್ರೆಟ್​ಲೀ’ ಮೈಸೂರಿಗೆ ಬರುವವರಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಕಿವುಡು ಮಗುವಿಗೆ ಕಾಕ್ಲಿಯರ್​ಇಂಪ್ಲಾಂಟ್​ಮಾಡಿಸಿದರೆ ಫಲಿತಾಂಶ ಜಾಸ್ತಿ ಎಂಬುದರ ನಿದರ್ಶನಕ್ಕಾಗಿ ಆಯ್ಕೆಯಾದ ಮಕ್ಕಳಲ್ಲಿ ಅಥರ್ವನೂ ಇದ್ದ.  ಅದಲ್ಲದೇ ಕಾಕ್ಲಿಯರ್​ಇಂಪ್ಲಾಂಟ್​ಫಲಾನುಭವಿ

ಮಗುವಿನ ತಾಯಿಯಾಗಿ, ಅದೇ ವೇದಿಕೆಯಲ್ಲಿಯೇ ನನ್ನ ಅನುಭವ ಹೇಳಿಕೊಳ್ಳುವ ಅವಕಾಶವನ್ನೂ ನನಗೆ ನೀಡಿದ್ದರು ಅವರು. ಕಾರ್ಯಕ್ರಮದ ರೂಪುರೇಶೆಗಳನ್ನ ಕೇಳಿದ್ದೇ ಮನಸ್ಸು ಒಳಗೊಳಗೇ ಅಂಜುತ್ತಿತ್ತು.  ಬ್ರೆಟ್​ಲೀ ಅವರಂಥ ದೊಡ್ಡ ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಆ  ಅವಕಾಶವನ್ನು ಒಪ್ಪಿಕೊಳ್ಳುವುದೋ..? ಬಿಡುವುದೋ..? ಎಂಬ ಗೊಂದಲದಲ್ಲೇ ಇದ್ದ ನನ್ನ ಒಪ್ಪಿಸಿಯೇಬಿಟ್ಟರು ಶೈಲಜಾ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: