ಅಮೃತಾ ಹೆಗಡೆ ಅಂಕಣ- ‘ಅದರಮ್ಮ ಬೆಚ್ಚಿದಳು.. ‘

ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ.

ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ.

ತಂದೆ ಸಾಹಿತಿ ಮತ್ತೀಹಳ್ಳಿ ಸುಬ್ಬರಾಯರು. ಶಿರಸಿಯ ಈ ಎಕ್ಸ್ ಪ್ರೆಸ್ ಸಿದ್ಧಾಪುರದಲ್ಲಿ ಪದವಿ ಮುಗಿಸಿ ಮೈಸೂರಿನ ಕೆ ಎಸ್ ಓ ಯು ನಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಮಯ ಹಾಗೂ ಸುವರ್ಣ ಇವರು ಕೆಲಸ ಮಾಡಿದ ಚಾನಲ್ ಗಳು.

‘ಅತ್ತಾರ ಅಳಲವ್ವ ಈ ಕೂಸು ನನಗಿರಲಿ, ಕೆಟ್ಟರೇ ಕೆಡಲಿ ಮನೆಗೆಲಸ’ ಎನ್ನುವಂತೆ ಇಲ್ಲಿ ತಮ್ಮ ಮಗುವಿನ ಕಥೆಯನ್ನು ಹೇಳುತ್ತಾರೆ.

5

ಸತ್ಯ ಅರಿತ ಮೇಲೆ..

ನಾವು ಮನೆ ತಲುಪಿದಾಗ ಸಂಜೆ 6 ಗಂಟೆ..! ಆಗಷ್ಟೇ ಮನೆಯೊಳಗೆಲ್ಲ ಕತ್ತಲು ಆವರಿಸಿಕೊಳ್ಳುತ್ತಿತ್ತು. ನಮ್ಮಿಬ್ಬರ ಮನಸ್ಸುಗಳ ಹಾಗೆ….!  ನಿದ್ದೆಯಿಂದೆದ್ದು, ಆಡುತ್ತಿದ್ದ ನನ್ನ ಮಗನನ್ನೇ ನೋಡುತ್ತಾ ಅದೆಷ್ಟೋ ಹೊತ್ತು ಹಾಗೇ ಕುಳಿತುಬಿಟ್ಟಿದ್ದೆವು. ಅವನೊಂದಿಗೆ ಆಡಲೂ ಮನಸ್ಸಿಲ್ಲದ,  ಹೊಟ್ಟೆ ಹಸಿಯುತ್ತಿದ್ದರೂ ಏನೊಂದೂ ತಿನ್ನಲು ಸಾಧ್ಯವಾಗದ ಸ್ಥಿತಿ ಅದು.

ಪಕ್ಕದಲ್ಲಿಯೇ  ಕುಳಿತಿದ್ದ ವಿನಯ್‌ ಎಡಬಿಡದೇ, ನನಗೆ ಸಮಾಧಾನ ಮಾಡುತ್ತಲೇ ಇದ್ದ. ನನಗೆ ಸಮಾಧಾನ ಮಾಡ್ತಾ ಮಾಡ್ತಾ ತಾನೂ ಗಟ್ಟಿಯಾಗುವ ಪ್ರಯತ್ನವಿರಬಹುದು ಅದು. ‘ಹೇಗೆ ಬಂತು ಈ ಕಿವುಡು ನಮ್ಮ ಮಗುವಿಗೆ…? ಯಾಕೆ ಈ ಶಿಕ್ಷೆ ನಮಗೆ’ ಬಿಕ್ಕಳಿಸಿದೆ ನಾನು.  ‘ನಿನಗೇ ಗೊತ್ತಲ್ಲ ಅಮೃತಾ, ಮಗುವಿನ ಅಪ್ಪ, ಅಮ್ಮ, ರಕ್ತ ಸಂಬಂಧಿಗಳಾಗಿದ್ದರೆ, ಕುಟುಂಬದಲ್ಲಿ ಯಾರಾದರೂ ಇಂಥ ಸಮಸ್ಯೆಯವರು ಇದ್ದರೆ, ತಾಯಿ ಗರ್ಭಿಣಿಯಾಗಿದ್ದಾಗ ಅನಾರೋಗ್ಯವಿದ್ದಲ್ಲಿ ಅಥವಾ ಮಗು ಅವಧಿಗೂ ಮುನ್ನ ಹುಟ್ಟಿದ್ದರೆ.., ಹೀಗೇ ಇನ್ನೂ ಏನೇನೋ ಕಾರಣಗಳನ್ನ ಹೇಳಿದ್ರಲ್ಲ..? ಅವರು ಹೇಳಿದ ಅದ್ಯಾವ ಕಾರಣಗಳೂ ನಮ್ಮಲ್ಲಿಲ್ಲ. ಆದರೂ ಈ ಸಮಸ್ಯೆ ನಮ್ಮ ಮಗುವಿಗೆ ಬಂದಿದೆ ಅಂದರೆ ಅದು ಗಾಡ್‌ ಗಿಫ್ಟ್‌ ಕಣೆ.’ ಎಂದ. ಅವನ ಕಾರಣಗಳನ್ನೆಲ್ಲ ಕೇಳುತ್ತಾ ಇರುವಾಗ, ಹುಟ್ಟಿದಾಕ್ಷಣ ಮಗು ಅತ್ತಿರಲಿಲ್ಲವಲ್ಲ… ಅನ್ನೋದು ನೆನಪಾಯ್ತು ನನಗೆ. 

ಡಾ. ಎಸ್‌ ಆರ್‌‌ ಚಂದ್ರಶೇಖರ ಇನ್‌ಸ್ಟಿಟ್ಯೂಟ್‌ನಲ್ಲಿ ಎಲ್ಲ ಪರೀಕ್ಷೆಗಳನ್ನೂ ಮುಗಿದಿತ್ತು, ಫಲಿತಾಂಶವೂ ತಿಳಿದಿತ್ತು. ಎರಡೇ ಎರಡು ಕೆಲಸಗಳು ಬಾಕಿ ಇದ್ದವು. ಎಂ. ಆರ್‌ ಐ ಮತ್ತು ಸಿ.ಟಿ ಸ್ಕ್ಯಾನ್‌ ಮಾಡಿಸುವುದು ಮತ್ತು ಹಿಯರಿಂಗ್‌ ಏಡ್‌ (ಶ್ರವಣ ಸಾಧನ) ಖರೀದಿಸುವುದು. ಈ ಎರಡು ಕೆಲಸಗಳನ್ನು ಆಗಲೇ ಮಾಡಿದ್ದರೆ, ಮಗುವಿನ ಕಿವಿಗೆ ಎರಡು ತಿಂಗಳುಗಳಿಗೂ ಮುಂಚೆಯೇ ಶ್ರವಣಸಾಧನ ಒದಗುತ್ತಿತ್ತು. ಆದರೆ.. ನಮ್ಮಲ್ಲಿದ್ದ ಗೊಂದಲ, ಅನುಮಾನದಿಂದ ಆ ಎರಡು ಕೆಲಸಗಳು ತಡವಾದವು ಎಂಬ ಕೊರಗು ಈಗಲೂ ನನ್ನಲ್ಲಿದೆ. 

ಆವತ್ತೇ ಚಿಕ್ಕಮ್ಮಗೆ ಫೋನಾಯಿಸಿ ಚಂದ್ರಶೇಖರ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದಿದ್ದೆಲ್ಲವನ್ನ ತಿಳಿಸಿದೆ. ಈ ಟೆಸ್ಟ್‌ಗಳನ್ನೆಲ್ಲ ಮಾಡಿಸಲು ಮೂಲ ಕಾರಣ ಅವರೇ ಅಲ್ಲವೇ..? ಅವರ ಒತ್ತಾಯವಿಲ್ಲದಿದ್ದರೆ ನಾವು ಮಗುವಿನ ಪರೀಕ್ಷೆ ಮಾಡಿಸಲು ಇನ್ನೂ ತಡ ಮಾಡುತ್ತಿದ್ದಲ್ಲಿ ಸಂಶಯವೇ ಇಲ್ಲ. ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಚಿಕ್ಕಮ್ಮ ‘ಮುಂದೆ ಅವರು ಹೇಗೆ ಹೇಳಿದ್ದಾರೋ.. ಹಾಗೇ ಮಾಡಿ ಅಮೃತಾ. ಮಗುವಿನ ಕಿವಿಗೆ ಈಗಿಂದೀಗಲೇ ಹಿಯರಿಂಗ್‌ಏಡ್‌ (ಶ್ರವಣ ಸಾಧನ) ಹಾಕಬೇಕು. ಎಷ್ಟು ಬೇಗ ಅವನು ಕೇಳಿಸಿಕೊಳ್ಳಲು ಆರಂಭಿಸುತ್ತಾನೋ.. ಅಷ್ಟು ಬೇಗ ಮಾತನಾಡುತ್ತಾನೆ. ಆಲ್‌ದ ಬೆಸ್ಟ್‌’ ಎಂದರು. ‘ಅಜಿತ ಚೇತನ’ ವಿಷೇಶ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯಕಿಯಾಗಿರುವ ಅವರ ಆ ದೃಢ ಸಲಹೆಯಲ್ಲಿ ಆತ್ಮವಿಶ್ವಾಸವೂ ಬೆರೆತಿತ್ತು. 

‘ಡಾ.ಎಸ್‌ ಆರ್‌ ಚಂದ್ರಶೇಖರ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೀಚ್‌ ಅಂಡ್‌ ಹಿಯರಿಂಗ್‌’ನಲ್ಲಿ ಬೆಳಗ್ಗೆಯಿಂದ ಆ ಪರೀಕ್ಷೆ ಈ ಪರೀಕ್ಷೆ ಅಂತ ಬಹಳ ದಣಿದಿದ್ದೆವು ನಾವು. ಮಧ್ಯಾಹ್ನದ ಊಟವೂ ಸರಿಯಾಗದೇ, ಆಯಾಸವಾಗಿತ್ತು. ಅದೆಲ್ಲದಕ್ಕಿಂತ ಹೆಚ್ಚಾಗಿ ‘ನಮ್ಮ ಮಗು ಕಿವುಡು ಮಗು’ ಎಂಬ ಆಘಾತ ನಮ್ಮನ್ನ ಹೈರಾಣಾಗಿಸಿತ್ತು. ಆಗಿಂದಾಗ್ಗೇ, ನನ್ನ ಅಮ್ಮಂಗೆ ಫೋನಾಯಿಸಿ ಇದೆಲ್ಲವನ್ನೂ ಹೇಳಿಕೊಂಡುಬಿಡಬೇಕು, ಎಂದು ತೀರಾ ಅನ್ನಿಸುತ್ತಿತ್ತು. ಆದರೆ, ನಾವು ಟೆಸ್ಟ್‌ಗೆ ಬಂದಿರುವ ಒಂದು ಸುಳಿವೂ ತಿಳಿಯದ ಅವಳಿಗೆ, ಈಗ ಒಮ್ಮೆಲೇ ಈ ಸುದ್ದಿ ಹೇಳಿಬಿಟ್ಟರೆ.. ಅವಳಾದರೂ ಹೇಗೆ ತಡೆದುಕೊಂಡಾಳು..? ಎಂಬ ಆತಂಕ ಬೇರೆ.  

ನಾವಿಬ್ಬರು ಯಾವುದೋ ದುಖಃದಲ್ಲಿ ಇದ್ದೇವೆ ಎಂಬುದನ್ನ ನಮ್ಮ ಮುಖ ನೋಡಿಯೇ ಮಗು ಅರ್ಥ ಮಾಡಿಕೊಂಡಿದ್ದ. ಇತ್ತೀಚೆಗೆ ಅಥರ್ವ ನಮ್ಮ ಹಾವ, ಭಾವಗಳನ್ನು ಅತೀಯಾಗಿ ಗಮನಿಸುತ್ತಿದ್ದಾನೆ ಮತ್ತು ಅದನ್ನೇ ಅನುಕರಿಸುತ್ತಿದ್ದಾನೆ ಎಂಬುದು ನಮಗೆ ಈಗಾಗಲೇ ಅನುಭವಕ್ಕೆ ಬಂದಿತ್ತು. ತಾನು ಹೇಳಬೇಕಿರುವ ಎಲ್ಲವನ್ನೂ ಮುಖಭಾವಗಳ ಮೂಲಕ, ಕೈ-ಮೈ ಕುಣಿಸಿ, ಅಭಿನಯಿಸಿ ಹೇಳಿಬಿಡುತ್ತಿದ್ದ.

ಅವನ ಅಭಿನಯ, ಅವನ ಮುಖದ ಭಾವಗಳನ್ನ ನೋಡಿ ನಾನು ವಿನಯ್‌ಗೆ ಮೊದಲೆಲ್ಲ ಹೇಳುತ್ತಿದ್ದೆ ‘ನಮ್ಮ ಮಗ ಎಷ್ಟು ಎಕ್ಸ್‌ಪ್ರೆಸೀವ್‌ಅಲ್ವಾ..? ಮುಂದೆ ಅವನು ನಟ ಆಗ್ತಾನೆ ಅಂತ ಕಾಣುತ್ತೆ ಕಣೋ..’ ಅಂತ. ‘ನನ್ನ ತಂಗಿ ಅನನ್ಯಾ, ಆಗಾಗ ಅಥರ್ವನ ವೀಡಿಯೋಗಳನ್ನ ತನ್ನ ವಾಟ್ಸ್ಯಾಪ್‌ ಸ್ಟೇಟಸ್‌ಗೆ ಹಾಕುತ್ತಿದ್ದಳು. ಆ ವಿಡಿಯೋ ತುಣುಕುಗಳನ್ನೆಲ್ಲ ನೋಡಿದ್ದ ಅವಳ ಫ್ರೆಂಡ್ಸ್‌, ಕಲೀಗ್ಸ್‌ಅಥರ್ವನ ಮುಖಭಾವ, ಅಭಿನಯಕ್ಕೆ ಮಾರುಹೋಗಿದ್ದರಂತೆ. ದಿನಾಲೂ ಅವನ ಹೊಸ ಹೊಸ ವಿಡೀಯೋ ಮಾಡಿ ತರುವಂತೆ ಕೇಳುತ್ತಿದ್ದರಂತೆ..! ‘ಅಕ್ಕಾ.. ಇವನು ‘ಡ್ರಾಮಾ ಜೂನಿಯರ್ಸ್‌’ ಕ್ಯಾಂಡಿಯೇಟ್‌ ಕಣೇ… ಈ ಏಜ್‌ಗೇ ಅವನಿಗೆ ಎಷ್ಟೊಂದು ಫ್ಯಾನ್ಸ್‌ಇದಾರೆ ನೋಡು..’ ಎಂದು ತಮಾಷೆ ಮಾಡುತ್ತಿದ್ದಳು ಅನನ್ಯಾ. (ಆಗ ‘ಝೀ ಕನ್ನಡ’ ವಾಹಿನಿಯಲ್ಲಿ ’ಡ್ರಾಮಾ ಜೂನಿಯರ್ಸ್‌’ ಎಂಬ ಕಾರ್ಯಕ್ರಮ ಜನಪ್ರಿಯವಾಗಿತ್ತು.) ಬೇಜಾರು, ಖುಷಿ, ಭಯ, ಅಳು, ಆಶ್ಚರ್ಯ ಎಲ್ಲ ಭಾವಗಳನ್ನೂ ಅದ್ಭುತವಾಗಿ ಅಭಿನಯಿಸುತ್ತಾನಲ್ಲ ಈ ಪುಟಾಣಿ ಎಂದು ಮನಸ್ಸಿನಲ್ಲಿಯೇ ಹೆಮ್ಮೆ ಪಟ್ಟಿದ್ದೆ. 

ಆದರೆ.. ಅವನ ಅಭಿನಯದ ಹಿಂದಿನ ಸತ್ಯವನ್ನ ಆಗಷ್ಟೇ ತಿಳಿದುಕೊಂಡಿದ್ದ ನಮಗೆ ಅವನ ಹಾವ ಭಾವಗಳನ್ನು ನೋಡಿದಾಗ ಕರುಳು ಕಿತ್ತು ಬರುವಷ್ಟು ನೋವಾಗುತ್ತಿತ್ತು. 

ಅಪ್ಪ ಅಮ್ಮ ದುಖಃದಲ್ಲಿದ್ದಾರೆ ಎಂಬುದನ್ನ ಅಥರ್ವ ಅದ್ಹೇಗೋ ಅರ್ಥಮಾಡಿಕೊಂಡಿದ್ದ. ಏಕೆಂದರೆ ಆವತ್ತು ಅವನೂ ಸುಮ್ಮನಾಗಿಬಿಟ್ಟಿದ್ದ. ಇಡೀ ದಿನ ಬಾಯಲ್ಲಿ ಏನೇನೋ ಶಬ್ಧ ಮಾಡಿಕೊಳ್ತಾ, ಮನೆಯ ತುಂಬೆಲ್ಲ ಮಸ್ತಿ ಮಾಡುತ್ತಿದ್ದ ಹುಡುಗ, ಈಗ ತಾನೂ ಮಂಕಾಗಿಬಿಟ್ಟಿದ್ದ. ಅಯ್ಯೋ ಅಂತೆನಿಸಿತು ಅವನ ಮುಖ ನೋಡಿ. ಅವನನ್ನುಎತ್ತಿಕೊಂಡು ಮನೆಯ ತಾರಸಿಗೆ ಹೋಗಿದ್ದೆ. ರಾತ್ರಿಯ ದಾರೀದೀಪದ ಬೆಳಕಿನಲ್ಲಿ ಕಾಣುವ ರಸ್ತೆ, ರಸ್ತೆಯಲ್ಲಿ ಚಲಿಸುವ ವಾಹನಗಳು, ಗಾಳಿಗೆ ಅಲುಗಾಡುವ ಮರಗಳನ್ನ ನೋಡುತ್ತಾ ಅಥರ್ವ ಖುಷಿಪಟ್ಟ. ತನ್ನ ಪುಟಾಣಿ ತೋರುಬೆರಳುಗಳನ್ನ ರಸ್ತೆಯತ್ತ ತೋರಿಸುತ್ತಾ, ಜೋರಾಗಿ ನಗುತ್ತಾ ಅಲ್ಲಿ ಓಡಾಡುತ್ತಿರುವ ಹಿಂಡು ಹಿಂಡು ನಾಯಿಗಳನ್ನೇ ನೋಡುತ್ತಿದ್ದ. ನನಗೋ.. ಎಲ್ಲಿಯೋ ಮುಳುಗಿಹೋಗುತ್ತಿರುವ ಅನುಭವ. ನೆನಪುಗಳೂ ಒತ್ತರಿಸಿದವು.

ಆವತ್ತು ನನ್ನ ಮಗ ಹುಟ್ಟಿ ಎರಡೇ ಎರಡೇ ದಿನಗಳಾಗಿದ್ದವು ಅಷ್ಟೆ. ನಾವಿನ್ನೂ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿರಲಿಲ್ಲ. ಅದು ಮಧ್ಯಾಹ್ನನದ ಊಟದ ಸಮಯ. ವಿನಯ್‌ ಮತ್ತು ನನ್ನ ಅಮ್ಮ ಊಟಕ್ಕೆ ಹೋದ ಸಂದರ್ಭವದು. ಆಗಷ್ಟೇ ನಿದ್ದೆ ಮುಗಿಸಿ ಕಣ್ಣುಬಿಟ್ಟಿದ್ದ ಸುಕುಮಾರನನ್ನು ನಾನು ಮಡಿಲಿನಲ್ಲಿಟ್ಟುಕೊಂಡಿದ್ದೆ. ಕಣ್ಣರಳಿಸಿಕೊಂಡು ಸುತ್ತಮುತ್ತ ನೋಡುತ್ತಿದ್ದ ಮಗುವನ್ನ ನೋಡಿ ನನಗೇನೋ ಪುಳಕವಾಗುತ್ತಿತ್ತು. ಇದ್ದಕ್ಕಿದ್ದಂತೆ, ತಟ್ಟೆಬಿದ್ದ ದೊಡ್ಡ ಶಬ್ಧವಾಯ್ತು. ‘ಅಯ್ಯಯ್ಯೋ.. ಕೈ ಜಾರಿ ತಟ್ಟೆ ಬಿದ್ದುಬಿಡ್ತಲ್ಲೇ… ಅನ್ನುತ್ತಾ, ನನ್ನ ಸೋದರತ್ತೆ ನೆಲಕ್ಕೆ ಬಿದ್ದು ಸುತ್ತುತ್ತಾ ಜೋರಾಗಿ ಶಬ್ಧಮಾಡುತ್ತಿದ್ದ ದೊಡ್ಡ ತಟ್ಟೆಯನ್ನು ದಡಬಡಾಯಿಸಿ ಎತ್ತಿದರು. 

ಒಮ್ಮೆಲೆ ಬಂದಿದ್ದ ಆ ಶಬ್ಧಕ್ಕೆ, ನಾನೇ ಬೆಚ್ಚಿದ್ದೆ. ಆದರೆ, ಮಡಿಲಿನಲ್ಲಿದ್ದ ಪುಟ್ಟ ಕಂದ ಬೆಚ್ಚಲೇ ಇರಲಿಲ್ಲ!? ಅವನ ಮುಖಭಾವಲ್ಲಿಯೂ ಬದಲಾವಣೆಯಾಗಿರಲಿಲ್ಲ. ‘ಮಗು ಬೆಚ್ಚಿತೇನೇ…?’ ಆತಂಕದಿಂದ ಕೇಳಿದರು ಅವರು. ನಾನು ನಗುತ್ತ ‘ಇಲ್ಲ ಯಮುನತ್ತೆ… ಅದರಮ್ಮ ಬೆಚ್ಚಿದಳು’ ಅಂತ ನಕ್ಕೆ. ಅವರು ನಗಲಿಲ್ಲ. ‘ಶಬ್ಧಕ್ಕೆ ಮಗು ಬೆಚ್ಚಬೇಕು ಕಣೇ.. ಹುಟ್ಟಿದ ದಿನದಿಂದ್ಲೇ ಮಕ್ಕಳು ಬೆಚ್ತಾವೆ. ಇನ್ಮೇಲೆ ನೀನೂ ಸ್ವಲ್ಪ ಗಮನಿಸು ಆಯ್ತಾ..’ ಎಂದರು ಅವರು. ನಾನು ಹೂಂ ಅಂದೆ. ಅದ್ಯಾವುದೋ ಅಸಮಧಾನ ನನ್ನನ್ನು ತಡೆಯುತ್ತಿತ್ತು. ‘ಮಗು ಬೆಚ್ಚಲಿಲ್ಲ ಅಂದರೆ… ಯೋಚನೆ ಮಾಡ್ಬೇಕಾಗ್ತದೆ, ಡಾಕ್ಟರ್‌ನ್ನ ಕೇಳೋಣ ಇರು’ ಮುಂದುವರಿಸುತ್ತಿದ್ದರು. 

ನನಗೆ ಅವರ ಆ ಅನುಮಾನ ಹಿಂಸಿಸುತ್ತಿತ್ತು. ಮತ್ತೆ ಅದನ್ನ ಚರ್ಚೆ ಮಾಡಲು ಅವಕಾಶವನ್ನೇ ಕೊಡದೇ, ಆ ವಿಷಯವನ್ನ ಅಲ್ಲಿಗೇ ಮೊಟಕುಗೊಳಿಸಿದ್ದೆ. ಅವರೂ ಸುಮ್ಮನಾಗಿದ್ದರು. ಆ ನೆನಪು ಈಗ ಕಾಡುತ್ತಿತ್ತು. ಹುಟ್ಟಿ ಎರಡೇ ಎರಡು ದಿನಕ್ಕೆ ನನ್ನ ಸೋದರತ್ತೆಗೆ ಬಂದಿದ್ದ ಅನುಮಾನ ಈಗ ನಿಜವಾಗಿಬಿಟ್ಟಿತ್ತು. ನನ್ನ ಬಗಲಲ್ಲಿಯೇ ಇದ್ದ ನನ್ನ ಮಗನ ಮುಖ ನೋಡಿ.., ಯಾಕೋ ಕಂದ.. ಹೀಗಾಗಿಹೋಯ್ತು…? ಅಂದೆ. ನನ್ನ ಪ್ರಶ್ನೆಗೆ ಉತ್ತರಿಸುವಂತೆ, ತಾನೂ ಬಾಯಿ ಕುಣಿಸಿ, ಅಳುವಂತೆ ನಟಿಸುತ್ತಾ ನನ್ನ ಮುಖವನ್ನೇ ನೋಡಿದ. ನನ್ನ ಕಣ್ಣಲ್ಲಿ ತೊಟ್ಟಿಕ್ಕುತ್ತಿದ್ದ ನೀರು ನೋಡಿ, ಅವನ ಮುಖವೂ ಬಾಡಿತ್ತು. ಬಿಗಿಯಾಗಿ ಅವನನ್ನ ತಬ್ಬಿದೆ. 

‘ನಗರದ ಎಲ್ಲ ದೊಡ್ಡ ಆಸ್ಪತ್ರೆಗಳಲ್ಲಿರುವಂತೆ, ಅಥರ್ವ ಹುಟ್ಟಿದ ಆಸ್ಪತ್ರೆಯಲ್ಲಿಯೂ ಶಿಶುಗಳ ಕಿವಿ ಪರೀಕ್ಷೆ ಮಾಡುವ ವ್ಯವಸ್ಥೆ ಇದ್ದಿದ್ದರೆ, ಆಗಲೇ ಅವನ ಸಮಸ್ಯೆ ನಮಗೆ ತಿಳಿದು, ಇನ್ನಷ್ಟು ಬೇಗ ಅವನ ಕಿವಿಗಳಿಗೆ ಶ್ರವಣ ಸಾಧನಗಳನ್ನ ಹಾಕಬಹುದಿತ್ತು. ನಾನು ಹೆರಿಗೆಗಾಗಿ ತವರಿಗೆ ಹೋಗಲೇಬಾರದಿತ್ತು, ಬೆಂಗಳೂರಿನಲ್ಲಿಯೇ ಇರಬೇಕಾಗಿತ್ತು’ ಎಂದು  ಪಶ್ಚಾತ್ತಾಪ ಪಟ್ಟೆ.   

ಅದೇ ಸಮಯಕ್ಕೆ ಕಾಕತಾಳೀಯವೆಂಬಂತೆ ನನ್ನ ಮಾವ (ಗಂಡನ ತಂದೆ) ನನಗೆ ಫೋನಾಯಿಸಿದ್ದರು. ಕುಶಲೋಪರಿಯ ಮಾತುಕತೆಯಲ್ಲ ಮುಗಿಯುತ್ತಿದ್ದಂತೆ.. ‘ಅಮೃತಾ.. ನಾನೊಂದು ಬಜೆ ಬೇರನ್ನ ಕಳಿಸಿಕೊಡ್ತೇನೆ. ಅದನ್ನ ದಿನಾಲೂ ನೀರಿನಲ್ಲಿ ತೇದು ಮಗುವಿಗೆ ಸ್ವಲ್ಪ ನೆಕ್ಕಿಸು’ ಮಾತು ಬರುತ್ತೆ ಅಂದರು. ನಾನು ಆಯ್ತು ಮಾವ ಕಳಿಸಿಕೊಡಿ ಅಂದೆ. ನನ್ನ ಕಡೆಯಿಯಂದ ಮಾತು ಮುಂದುವರಿಯುತ್ತಿರಲಿಲ್ಲ. ಗಂಟಲು ಕಟ್ಟುತ್ತಿತ್ತು. ಅವರಿಗೇನರ್ಥವಾಯಿತೋ ಏನೋ. ಫೋನ್‌ಕರೆಯನ್ನ ತುಂಡರಿಸಿ, ವಿನಯ್‌ಗೆ ಫೋನಾಯಿಸಿದ್ದರು. ವಿಚಾರ ತಿಳಿದ ಮೇಲೆ ನಮ್ಮ ದುಃಖದಲ್ಲಿ ಶಾಮೀಲಾಗುವುದು ಅವರಿಗೂ ಅನಿವಾರ್ಯವಾಗಿತ್ತು.  

ಅಂತೂ ಆವತ್ತು ರಾತ್ರಿಯೇ ನನ್ನ ಅತ್ತೆ, ಮಾವ, ಅಪ್ಪ, ಅಮ್ಮ ಎಲ್ಲರಿಗೂ ವಿಷಯ ತಿಳಿಸಿದ್ದಾಯ್ತು. ಅವರೂ ಆ ರಾತ್ರಿ ಊಟಬಿಟ್ಟು, ನಿದ್ದೆಗೆಟ್ಟಿದ್ದೂ ಆಯ್ತು. ಅಲ್ಲದೆ, ಮರುದಿನವೇ ಅಥರ್ವನ ಜಾತಕ ಜೋತಿಷಿಗಳ ಮನೆಗಳಿಗೂ ಹೋಗಿ ಬಂತು. ಜಾತಕದಲ್ಲೇನೂ ಸಮಸ್ಯೆಯಿಲ್ಲ. ಮಗು ಮುಂದೆ ಮಾತನಾಡುತ್ತಾನೆ ಅಂತ ಜ್ಯೋತಿಷಿಗಳೂ ಹೇಳಿಕಳಿಸಿದ್ದರಂತೆ. ಅಮ್ಮ, ಅತ್ತೆಯರಿಗೆ ಅದೊಂದು ಸಮಾಧಾನ. ನನ್ನ ಅತ್ತೆ ಅದಾಗಲೇ, ತನ್ನ ತವರಿನ ದೇವಸ್ಥಾನಕ್ಕೆ ಹರಕೆ ಕಟ್ಟಿಕೊಂಡಾಗಿತ್ತು. ಸಧ್ಯದಲ್ಲಿಯೇ ಅಥರ್ವನ ಹೆಸರಿಗೊಂದು ಪೂಜೆಯೂ ನಿಶ್ಚಯವಾಯ್ತು. 

ವಿಷಯ ನಿಧಾನವಾಗಿ ನಮ್ಮ ಸಂಬಂಧಿಕರಿಗೆಲ್ಲ ಹಬ್ಬತೊಡಗಿತ್ತು. ಒಬ್ಬೊಬ್ಬರದೇ ಸಂಬಂಧಿಕರ, ನೆಂಟರ, ಇಷ್ಟರ, ಸ್ನೇಹಿತರ ಫೋನ್‌ಕಾಲ್ಸ್‌ಬರುವುದು ಸಾಮಾನ್ಯವಾಯಿತು. ಒಂದಷ್ಟು ಜನ ‘ಅಯ್ಯೋ.. ನಿನ್ನ ಮಗುವನ್ನ ನೋಡಿದರೆ, ಸಮಸ್ಯೆ ಇದೆ ಅಂತಾನೇ ಗೊತ್ತಾಗಲ್ವಲ್ಲೇ.. ಎಷ್ಟು ಮುದ್ದಾದ ಮಗು ಅದು. ಅದಕ್ಕೆ ಇಂಥ ಶಿಕ್ಷೆ ಬಂದುಬಿಡ್ತಲ್ಲೇ..’ ಅಂತ ತಾವೂ ಒಂದಷ್ಟು ಕೊರಗಿ ನನ್ನನ್ನೂ ಕೊರಗಿಸಿ ಕಣ್ಣೀರು ಹಾಕಿಸುತ್ತಿದ್ದರೆ, ಇನ್ನೊಂದಿಷ್ಟು ಜನ ‘ಇದಕ್ಕೆಲ್ಲ ಪರಿಹಾರ ಇದೆ ಕಣೇ, ಹೆದರಬೇಡಿ. ಅವನು ತುಂಬಾ ಚೂಟಿಯ ಮಗು ಎಲ್ಲವನ್ನೂ ಕಲೀತಾನೆ’ ಎಂಬ ಧೈರ್ಯವನ್ನೂ ಕೊಡುತ್ತಿದ್ದರು. 

ಮತ್ತೊಂದಷ್ಟು ಜನ ‘ಹಾ.. ನನಗೆ ಆವತ್ತೇ ಅನುಮಾನ ಬಂದಿತ್ತು. ನೀವೇನು ತಿಳಿದುಕೊಳ್ತೀರೋ.. ಅಂತ ಹೇಳಿರರ್ಲಿಲ್ಲ.’ ಅಂತಂದರೆ, ಮಗದೊಂದಷ್ಟು ಜನ ‘ಹಾಗಾದರೆ… ಇನ್ನು ಮುಂದೆ ಸನ್ನೆ ಭಾಷೆ ಕಲಿಸಬೇಕಾ..? ಮಗೂಗೆ..? ಅಂತ ಮುಗ್ಧವಾಗಿ ಕೇಳುತ್ತಿದ್ದರು. ನಾಟಿ ಔಷಧಿಗಳ ಬಗ್ಗೆ, ಹಲವು ಹರಕೆಗಳ ಬಗ್ಗೆ, ಕೇಳಿದ್ದನ್ನು ಕರುಣಿಸೋ ದೇವಸ್ಥಾನಗಳ ಮಹಿಮೆಗಳ ಬಗ್ಗೆ, ತಡವಾಗಿ ಮಾತನಾಡಿದ ಮಕ್ಕಳ ಉದಾಹರಣೆಗಳನ್ನೂ ನಾವು ನಮ್ಮ ಬಂಧು, ಬಳಗದವರಿಂದ, ಸ್ನೇಹಿತರಿಂದ ದಿನನಿತ್ಯ ಕೇಳಬೇಕಾಯಿತು. ಅವರೆಲ್ಲರದೂ ಪ್ರೀತಿ ತುಂಬಿದ ಕಾಳಜಿಯೇ ಆಗಿದ್ದರೂ ಕೂಡ ಒಬ್ಬೊಬ್ಬರ ಜತೆ ಮಾತನಾಡಿದಾಗಲೂ ಒಂದೊಂದು ಥರದ ಆತಂಕ, ಭಯ, ಗೊಂದಲ ನಮ್ಮನ್ನು ಕಾಡುತ್ತಿತ್ತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

June 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: