ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭೇರಿ ಎಂಬ ದೇವಗಾಂಧಾರಿ

ಎನ್.ಎಸ್. ಶ್ರೀಧರ ಮೂರ್ತಿ

(೨೨ನೇ ಮೇಳಕರ್ತರಾಗ ‘ಖರಹರ ಪ್ರಿಯ’ದಲ್ಲಿ ಜನ್ಯವಾಗುವ ಅಭೇರಿ ಕರ್ನಾಟಕಿ ಸಂಗೀತದ ಅತ್ಯಂತ ಜನಪ್ರಿಯ ರಾಗಗಳಲ್ಲಿ ಒಂದು.

ಭಾರತೀಯ ಚಿತ್ರರಂಗದಲ್ಲಿಯೂ ಅತಿ ಹೆಚ್ಚು ಬಳಕೆಯಾದ ರಾಗ ಎಂಬ ಹೆಗ್ಗಳಿಕೆ ಇದಕ್ಕಿದೆ.

ಔಢವ ಸಂಪೂರ್ಣ ರಾಗವಾಗಿರುವ ಅಭೇರಿಯ ಆರೋಹಣದಲ್ಲಿ ಐದು ಸ್ವರಗಳಿದ್ದರೆ ಅವರೋಹಣದಲ್ಲಿ ಏಳು ಸ್ವರಗಳಿವೆ.

ಅವರೋಹಣದಲ್ಲಿ ಬರುವ ಚತುಶ್ರುತ ರಿಷಭವನ್ನು ಹಿಡಿಯುವುದು ಗಾಯಕರ ಬಹು ದೊಡ್ಡ ಸವಾಲು.

ಅಭೇರಿಯ ಹಿಂದೂಸ್ತಾನಿ ಸಮಾನಂತರ ರಾಗ ಭೀಮ್ ಪಲಾಸ್ ಅನ್ನು ಶ್ರೀಕೃಷ್ಣನೇ ಸೃಷ್ಟಿಸಿದ ಇಂದಿಗೂ ನಂಬಲಾಗುತ್ತದೆ.

ರಾಸಲೀಲೆ ನೃತ್ಯಗಳಲ್ಲಿ ಈ ರಾಗ ಹೆಚ್ಚಾಗಿ ಬಳಕೆಯಾಗುತ್ತದೆ.

ದೇವಗಾಂಧಾರಿ ಎಂಬುದು ಅಭೇರಿಯ ಹಿಂದಿನ ಹೆಸರು)

ಆಧಾರ ಷಡ್ಜ
ನಾಭಿ ಮೂಲದಿಂದ
ಚಿಮ್ಮಿದ್ದು ಸ್ವರವೇ, ನಿಟ್ಟುಸಿರೇ!
ತೆರೆದ ತೋಳಿಗೆ ಸಿಕ್ಕಿದ್ದು ಅಪ್ಪುಗೆಯೇ
ಒಲುಮೆಯ ಒಪ್ಪಿಗೆಯೇ
ನಾದದ ಕಾಡ ತುಂಬೆಲ್ಲಾ
ಹಕ್ಕಿ ಪಕ್ಕಿಯ ಚಿಲಿಪಲಿ
ರಾಗದ ಹೊಲದೊಳಗೆ ಉಸಿರ ಬೇಸಾಯ
ಹಳೆಯ ಭಾವಕ್ಕೀಗ ಹೊಸ ಋಣ ಸಂದಾಯ.

ಹಸ್ತಿನಾಪುರದ ಎತ್ತರದ-
ಮಹಲಿನ ಮೇಲೆ ಹಾಡುವ ಕೋಗಿಲೆ.
ಅಂದದ ಹೆಣ್ಣಿನ ನಾಚಿಕೆಗೆ
ಸಿಕ್ಕಿದ್ದು ಅಣ್ಣ ತಮ್ಮಂದಿರ ಹಗೆ
ಯುಗಧರ್ಮದ ವ್ಯಾಖ್ಯಾನದಲ್ಲೂ ಬಗೆ ಬಗೆ.
ತೂಗಿ ಬಿಟ್ಟ ಷಡ್ಜಕ್ಕೊಂದು ಸಂತಾನವಿದೆ
ಸಂತಾನದೊಳಗೊಂದು ಸಾಂತ್ವನವಿದೆ
ಸಾಂತ್ವನಕ್ಕೊಂದು ಪರಂಪರೆ ಇದೆ.

ಹಾದಿಯಲ್ಲಿ ಸಾಗಬಹುದೆ ರಥ.
ಸಾಗಿ ಮುಗಿಯಬಹುದೆ ಪಥ
ಯಾವುದು ಸೋಲು? ಯಾವುದು ಗೆಲುವು?
ನೆರಳ ಪ್ರೀತಿಯ ನಡುವೆ ಉಳಿದ ಒಲವು.
ಮಿಸುಗುಡುತ್ತಿದೆ ಕಿವಿಗೊಟ್ಟು ಆಲಿಸು
ಅದು ಮೂಲಾಧಾರ.

ಸಾಧಾರಣ ಗಾಂಧಾರ
ಉಸಿರ ಮೇಲೆತ್ತರಿಸುವ ಮುನ್ನ
ಎಂಥಾ ಹೋರಾಟ!
ಸೋಲಿನದೆ? ಸಾವಿನದೆ?
ನೆರಳು-ನರಳಿನ ನಡುವೆಯ ಹೊರಳಿನದೆ
ಯಾರ ವಿರುದ್ಧ ಈ ಮುಗಿಯದ ಯುದ್ಧ
ಎದ್ದು ನಿಂತರೆ ಕದನ
ತಣಿದು ಕುಳಿತರೆ ಶಾಂತಿ
ದಡಕ್ಕೆ ಸಾಗುವ ದೋಣಿಗೆ
ನಿರಂತರ ನೀರಿನ ಒಸುಗೆ.

ಬಿರಿದಲ್ಲೆ ಬಾಗುತ್ತಾ
ಬಾಗಿದರೂ ಬದುಕುತ್ತಾ
ಬದುಕಲ್ಲೆ ಬೆರಗ ಕಾಣುವ
ಒಡಲೆಂಬ ಅಗ್ನಿಕುಂಡಕ್ಕೆ
ಪೂರ್ಣಾಹುತಿಯ ಹೆಬ್ಬಯಕೆ.

ಶುದ್ದ ಮಧ್ಯಮ
ತಕ್ಕಡಿಯ ಹಿಡಿದವರು ತವರಿನವರು
ಸ್ವರ ಬಂದು ನಿಂತರೆ
ನಿಂತ ಮೇಲೂ ಸಾಗಿದರೆ
ಸಾಲು ಸಾಗುವುದಿಲ್ಲ: ಮಾತು ಮುಗಿಯುವುದಿಲ್ಲ

ಹೊರಳಿದಲ್ಲೆಲ್ಲಾ ರೂಪಾಂತರ
ನೋಟಕ್ಕೂ ಮಾಟಕ್ಕೂ ಎಷ್ಟೊಂದು ಅಂತರ
ಮೇಲೆಂಬುದು ಚಲನೆಯಲ್ಲ
ಕೆಳಗೆಂಬುದು ಪತನವೂ ಅಲ್ಲ
ಗಮನವಿಟ್ಟು ತೂಗಿದರೆ ತಕ್ಕಡಿ ನಿಲ್ಲುವುದಿಲ್ಲ
ವ್ಯಾಪಾರ ಮುಗಿಯುವುದಿಲ್ಲ.

ಬದುಕಿಗೊಂದು ಮಮಕಾರ
ಸಾವಿಗೊಂದು ಸಂಸ್ಕಾರ
ಬದುಕು ಸಾವಿನ ಕಸಿಯಲ್ಲಿ
ಬೆಳೆದ ಮರಗಳ ತುಂಬೆಲ್ಲಾ
ದಮಯAತಿ ಬಿಚ್ಚಿಟ್ಟ ವಸ್ತ್ರಗಳು
ಪಾಂಡವರು ನೇತು ಬಿಟ್ಟ ಶಸ್ತ್ರಗಳು.
ಸಾವಿಗಾಗಿಯೇ ಹುಟ್ಟಿದಂತೆ
ಸಾವಿನಾಚೆಗೆ ಬದುಕಿದಂತೆ
ಕಣ್ಮುಚ್ಚಿ ಕುಳಿತರೆ-
ಇದು ಮಮಕಾರದ ಮಧ್ಯಮ
ಸೃಷ್ಟಿಯ ಅಚ್ಚರಿಯ ನಿಯಮ.

ಚತುಶ್ರುತ ದೈವತ
ಜೀವ ಜೀವದ ಸ್ವರ ಸಂಚಾರದಲ್ಲಿ
ಅಮೃತ ಚೇತನದ ರಸಧಾರೆ.
ಮೋಹಕ್ಕೊಂದು ದೈವತ
ಮಾಯಕ್ಕೊಂದು ದೈವತ
ಮಮಕಾರಕ್ಕೊಂದು ದೈವತ
ಕಾಲ ಕಾರಣ ನಿರ್ಮಿತ
ಭವಕ್ಕೆ ಎಸೆದ ಚುಕ್ಕಿಯಂತೆ
ಭುವಿಗೆ ಇಳಿದ ಅವತಾರದಂತೆ
ಗೀತೆಯೊಳಗಿನ ನಿಶ್ಯಬ್ದದಂತೆ
ಮಮಕಾರದ ಮಡಿಲಲ್ಲಿ ಏನೇನು ಕಂಡಿತು
ಹಿಡಿದ ಮುಷ್ಟಿಯಲ್ಲಿ ಏನೇನು ಉಳಿಯಿತು
ಗುರಿ ಹಿಡಿದ ಜಾಡಲ್ಲಿ ಒಂಟಿ ಪಯಣ
ಭವ ಗೆಲ್ಲಿಸುವ ದೇವ ಕಾರಣ.
ಹಿಡಿಯೊಳಗಿನ ಆಕಾಶ
ಸೂತ್ರದ ತುಂಬೆಲ್ಲಾ ಅವಕಾಶ
ಚುಕ್ಕಿ ಅಳಿಸುವ ಮುನ್ನ
ಶೂನ್ಯ ಗಳಿಸುವುದೆಂತು
ದೈವತ್ವ ಉಳಿಸುವುದೆಂತು

ಆಕಾರದ ಹಂಗಿನಲ್ಲಿ ನಿರಾಕಾರ
ಸಂಧಿಸುವ ಬಿಂದುವಿನಲ್ಲಿ
ಮುಗಿಯುವ ವೈಭವದ ಅವತಾರ
ಪರಶುರಾಮನ ಕೊಡಲಿಗೆ
ಎದುರಾಗಿದ್ದು ರಾಮ ಬಾಣ.

ಕೈಶಕಿ ನಿಷಾದ
ಸ್ವರ ಹುಟ್ಟುವ ಮುನ್ನ-
ಹಾಲ ಕೊಳದಲಿ ಇಣುಕಿ
ಗಾಳಿ ರೆಕ್ಕೆಯ ಬಿಡಿದು
ಕಂಬನಿಯ ಅಲೆ ಹಿಡಿದು
ನಿಧಾನವಾಗಿ ನಿಷಾದವಾಗಿ
ಸುಳಿದ ಅರಮನೆಯೊಳಗೆ ಅರಸರಿಲ್ಲ
ಕೋಟೆ ಕೊತ್ತಲೊಳಗೆ ಕಾದಾಟವಿಲ್ಲ
ಅಂತ:ಪುರದಲ್ಲಿ ಬಿಕ್ಕುವ ಹೆಂಗಳೆಯರೂ ಇಲ್ಲ.
ಬಾಗಿಲಿಲ್ಲ: ಚಿಲಕವಿಲ್ಲ
ಭೋಜನಶಾಲೆಯಲ್ಲಿ
ಹರಡಿ ಬಿಟ್ಟ ಎಂಜಲು ಎಲೆಯ ತುಂಬ
ಉಳಿದಿದೆ ಸುಗ್ರಾಸ ಭೋಜನ.
ಮೊಳಗಿದ ಫಿರಂಗಿಗೂ ಸಾಂತ್ವನ.

ಕರೆವ ನಾದದ ಕಡೆಗೆ ತೆವಳುತಿದೆ ಜೀವ
ಒಳ ಹೊರಗ ಹಂಗಿಲ್ಲದೇ ಕಾಡುತಿರುವ ಭಾವ
ನಾದದ ನದಿಯಲ್ಲೊಂದು
ನಿರಂತರ ಚಕ್ರತೀರ್ಥ
ಹೆಜ್ಜೆ ಹೆಜ್ಜೆಗೂ ಅರ್ಥ
ಮುರುಳಿ ನನ್ನವನೆಂಬ ಸ್ವಾರ್ಥ.
ಕರೆವ ಕೊಳಲಿಗೆ ಸಿಲುಕಿದ ಉಸಿರು.
ಭಾವಗಳ ಚಕ್ರಾಟದಲ್ಲಿ
ಜೀವ ಅರಳುವ ಹೂವು
ಬೊಗಸೆ ತುಂಬಾ ಒಲವು.

ಚತುಶ್ರುತ ರಿಷಭ
ಇಳಿಯುವಾಗ ಸಿಕ್ಕಿದ ಜಾಡು
ಪ್ರಾಣದ ಗೂಡು, ಅನೇಕಾಂತದ ಪಾಡು.
ಬಟ್ಟ ಬಯಲಿನಲಿ ಬೆಳಕಿನ ಹುಡುಕಾಟ
ಅಂಗೈಯಲ್ಲಿ ಹರಿದಾಡಿದ ಗೆರೆಗಳ ಆಟ.
ನೆತ್ತಿ ಸವರಿದ ಕೈ ಮಾಯವಾಯಿತು ಹೇಗೆ
ಕಂಬನಿಯೊರೆಸಿದ ಕರಳು ದೂರವಾಯಿತು ಹೇಗೆ
ಪುಟಿದೆದ್ದ ಜೀವ ವಿಂದ್ಯಾಚಲವ ದಾಟಿ
ಮುಗಿಲ ತೊಟ್ಟಿಲಿನಲಿ ಮಾತ ಹುಡುಕಿತ್ತು.
ನೋವಲೀಲೆಯ ಮುಂದೆ ನಾದ ಚೆಲ್ಲಿತ್ತು.

ಗುರಿ ಇರದೆ ಬಿಟ್ಟ ಬಾಣ ನೆಟ್ಟಿದ್ದು ಯಾರಿಗೆ
ಮಿಥಿಲೆಗೆ ಹೋಗುವ ದಾರಿ ತಪ್ಪಿದ್ದು ಹೇಗೆ?
ಶಿಶುಪಾಲನ ತಪ್ಪುಗಳ ಎಣಿಸಿದವರು ಯಾರು
ಸುದರ್ಶನಕ್ಕೆ ಸಿಕ್ಕೂ ಉಳಿದರು ಹೇಗೆ ರಕ್ಕಸರು.
ಬದುಕೇ ಸಾವಿನ ಮುಂದಿಟ್ಟ ನೈವೇದ್ಯ-
ಹಾಡು ಉಳಿದರೆ ಬೆಳಕು ಕಾಣುವುದು ಸಾಧ್ಯ.
ತಳಿರ ತಂಗಾಳಿಯಲ್ಲಿ ಅಗ್ನಿ ತೋರಿದ ಮಿಂಚು
ಪಲ್ಲವಿಯ ಹಿಡಿತಕ್ಕೆ ಬೇಕೆ ಇದಕಿಂಥ ಸಂಚು.
ಪಲ್ಲಟದ ಪಂಚಮ
ಪಥವ ಬಿಟ್ಟ ಸ್ವರಗಳ ಹಿಡಿದಿತ್ತು ನಾಕು ತಂತಿ
ಆನು ತಾನಿನ ನಡುವೆ ಬಾಳ ಜಂತಿ.
ಉಲಿದ ಉಯ್ಯಾಲೆ
ಹೆಣೆದ ನಾದವ ಬಿಡಿಸುತ್ತಾ
ಲಯದಲ್ಲಿ ಜೀವ ಹಿಡಿಯುತ್ತಾ
ಹುಟ್ಟಿದ್ದು ಹೇಗೆ ಈ ನಾದಲೀಲೆ.

ಹಾಡ ನಾಡಿನ ತುಂಬಾ
ಮೌನದಾ ನಿಬ್ಬೆರಗು-
ಮೌನಗೀತೆಯ ನಡುವೆ ನಿನ್ನ ಹಾಡು
ದಟ್ಟಡವಿಯಲ್ಲಿ ಪೊರೆ ಕಳಚಿದ ಹಾವು
ಬಗೆ ಬಗೆ ದನಿಗೂ ಇಲ್ಲೇ ಸಿಕ್ಕ ಠಾವು.

ಹಾಡು ಮುಗಿಯುವುದಿಲ್ಲ
ರಾತ್ರಿ ಕಳೆಯುವುದಿಲ್ಲ
ಯಮುನೆಯ ಹರಿವು ನಿರಂತರ
ತೃಪ್ತಳಾಗಳು ರಾಧೆ
ವ್ಯಕ್ತವಾಗದು ಬಾಧೆ
ಬೃಂದಾವನದ ಹಾದಿ ಈಗ ಸುಗಮ
ಬಿಡುಗಡೆಯ ಕೊನೆಯಲ್ಲಿ
ಸಂಗಮದ ರಂಗವಲ್ಲಿ.

‍ಲೇಖಕರು avadhi

24 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading