'ಅಭಿವ್ಯಕ್ತಿ ಸ್ವಾತಂತ್ರ್ಯ ಸಾರ್ವತ್ರಿಕ ಸಾಂವಿಧಾನಿಕ ಅಲ್ಲ' – ನಾ ದಿವಾಕರ

divakar
ನಾ ದಿವಾಕರ

ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕುರಿತಂತೆ ಚರ್ಚೆ ಹೆಚ್ಚಾಗಿರುವಂತೆಯೇ ವಿವಾದಗಳೂ ಹೆಚ್ಚಾಗುತ್ತಿವೆ. ಭಾರತದಂತಹ ಅರೆ ಊಳಿಗಮಾನ್ಯ ಸಾಮಾಜಿಕ ವ್ಯವಸ್ಥೆಯಲ್ಲಿ, ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಎನ್ನುವುದೇ ಒಂದು ಸಾಪೇಕ್ಷ ಪರಿಕಲ್ಪನೆಯಾಗಿದೆ. ಹಾಗಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದ 67 ವರ್ಷಗಳ ನಂತರವೂ ಕೆಲವು ಜನಸಮುದಾಯಗಳು ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎಂದು ಹಾಡುತ್ತಿವೆ. ಸ್ವಾತಂತ್ರ್ಯದ ಪರಿಕಲ್ಪನೆಯೇ ಪೂರ್ಣವಾಗಿ ವ್ಯಾಖ್ಯಾನಕ್ಕೊಳಗಾದ ಒಂದು ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನ ಮಾಡುವುದಾದರೂ ಹೇಗೆ ? ಬಹುಶಃ ಲೇಖಕರು ಈ ಗೊಂದಲದಲ್ಲಿ ಸಿಲುಕಿದ್ದಾರೆ ಎನಿಸುತ್ತದೆ. ಒಂದು ವಿಶಿಷ್ಟ ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುವುದಕ್ಕೂ, ದೇಶದ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಪ್ರಭುತ್ವದ ನೆಲೆಯಲ್ಲಿ ವ್ಯಾಖ್ಯಾನಿಸುವುದಕ್ಕೂ ಅಜಗಜಾಂತರ ವ್ಯತ್ಯಾಸ ಇರುವುದನ್ನು ಗಮನಿಸಲೇಬೇಕಾಗುತ್ತದೆ. ಪ್ರಭುತ್ವದ ದೃಷ್ಟಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಸಾರ್ವತ್ರಿಕ ಸತ್ಯದ ನೆಲೆಯಲ್ಲಿ ಕಂಡುಬರುತ್ತದೆ. ಆದರೆ ಸಮಾಜದ ಆಗುಹೋಗುಗಳನ್ನು, ಭೂತ ಭವಿಷ್ಯಗಳನ್ನು ಮತ್ತು ವರ್ತಮಾನದ ತಲ್ಲಣಗಳನ್ನು ಒರೆ ಹಚ್ಚಿ ನೋಡುವ ಮೂಲಕ ಸ್ಥಾಪಿತ ವ್ಯವಸ್ಥೆಯಲ್ಲಿನ ಲೋಪಗಳನ್ನು ತಿದ್ದಲು ಯತ್ನಿಸುವ ಕಲೆ, ಸಾಹಿತ್ಯ ಮತ್ತು ಸಂವಹನ ಮಾಧ್ಯಮಗಳ ದೃಷ್ಟಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬೌದ್ಧಿಕ ನೆಲೆಯಲ್ಲಿ ಕಂಡುಬರುತ್ತದೆ.

ನಿಜ, ಸಾಂವಿಧಾನಿಕ ದೃಷ್ಟಿಕೋನದಿಂದ ನೋಡಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಪ್ರಭುತ್ವ ಮತ್ತು ನಾಗರಿಕನ ನಡುವೆ ಇರುವ ಸಂಬಂಧವನ್ನು ಕುರಿತಾದದ್ದು. ಆಡಳಿತ ವ್ಯವಸ್ಥೆಯಲ್ಲಿ ಸೌಹಾರ್ದತೆಯನ್ನು ಕಾಪಾಡಲು ಪ್ರಭುತ್ವ ತನ್ನದೇ ಆದ ಚೌಕಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನ ನಡೆಸುತ್ತದೆ. ಹಾಗಾಗಿಯೇ ಪ್ರಭುತ್ವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಗಳನ್ನೂ ನಿಮರ್ಿಸುತ್ತದೆ. ಪ್ರಭುತ್ವದ ದೃಷ್ಟಿಯಲ್ಲಿ ರಾಷ್ಟ್ರೀಯ ಏಕತೆ ಮತ್ತು ಭೌಗೋಳಿಕ ಸುರಕ್ಷತೆ ಪ್ರಧಾನ ಅಂಶಗಳಾಗಿರುತ್ತವೆ. ಹಾಗಾಗಿ ಈ ಅಂಶಗಳಿಗೆ ಪ್ರತಿವಾದಿಯಾದ ಯಾವುದೇ ಪ್ರತಿರೋಧದ ದನಿಯನ್ನು ಹತ್ತಿಕ್ಕುವ ಹಕ್ಕನ್ನು ಪ್ರಭುತ್ವಕ್ಕೆ ಸಂವಿಧಾನ ನೀಡಿದೆ. ಇದು ಅತಿಶಯವೇನಲ್ಲ. ಸಂವಿಧಾನವನ್ನು ರಚಿಸಿರುವುದೇ ಪ್ರಭುತ್ವವನ್ನು ಪ್ರತಿನಿಧಿಸುವ, ಸ್ಥಾಪಿತ ವ್ಯವಸ್ಥೆಯನ್ನು ಸ್ವೀಕರಿಸಿ ಅಪ್ಪಿಕೊಂಡಿರುವ ಪ್ರಜ್ಞೆಗಳು. ಸಾಂವಿಧಾನಿಕವಾಗಿ ಸ್ವೀಕೃತವಾಗುವ ಅನೇಕ ಸಂಗತಿಗಳು ಸಾಮುದಾಯಿಕ ನೆಲೆಯಲ್ಲಿ ಸ್ವೀಕೃತವಾಗಲಾರದು. ಇದು ಭಾರತದ ಇತಿಹಾಸದಲ್ಲಿ ಅನೇಕ ಸಂದರ್ಭಗಳಲ್ಲಿ ನಿರೂಪಿತವಾಗಿರುವ ಸತ್ಯ. ಅಂತಹ ಸಂದರ್ಭಗಳಲ್ಲಿ ಪ್ರಭುತ್ವ ತನ್ನ ಸಾಂವಿಧಾನಿಕ ಹಕ್ಕುಗಳನ್ನು ಬಳಸಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಲಕ್ಷ್ಮಣರೇಖೆಗಳನ್ನು ಹಾಕುತ್ತದೆ.

1

ಆದರೆ ಭೌದ್ಧಿಕ ನೆಲೆಯಲ್ಲಿ ಮತ್ತು ಸಂವೇದನಾಶೀಲ ಪ್ರಜ್ಞೆಯ ನೆಲೆಯಲ್ಲಿ ವಿಶ್ಲೇಷಿಸುವಾಗ ಅಭಿವ್ಯಕ್ತಿ ಸ್ವಾತಂತ್ರ್ಯ ಸೃಜನಶೀಲತೆಯ ಅಂಶಿಕ ಭಾಗವಾಗಿಯೇ ಕಾಣಬೇಕಾಗುತ್ತದೆ. ಭಾರತದಂತಹ ಬಹುಮುಖೀ ಸಂಸ್ಕೃತಿಯ ರಾಷ್ಟ್ರದಲ್ಲಿ ಜಾತಿ, ಧರ್ಮ ಮತ್ತು ಪ್ರಾದೇಶಿಕತೆಗಳೇ ಜನಸಮುದಾಯಗಳ ಅಸ್ಮಿತೆಯನ್ನು ನಿರ್ಧರಿಸುತ್ತದೆ. ಈ ಅಸ್ಮಿತೆಗಳ ರಕ್ಷಣೆಗಾಗಿ ಸಾಂಸ್ಕೃತಿಕ ವಲಯಗಳನ್ನು ಸೃಷ್ಟಿಸಲಾಗುತ್ತದೆ. ಸಾಮುದಾಯಿಕ ಅಸ್ಮಿತೆಯನ್ನು ವ್ಯಾಪಕವಾದ ಜಾತಿ ಅಥವಾ ಧರ್ಮದ ನೆಲೆಯಲ್ಲಿ ವ್ಯಾಖ್ಯಾನಿಸುವ ಮೂಲಕ ಧರ್ಮ ರಕ್ಷಣೆ, ಜಾತಿ ಗೌರವದ ಹೆಸರಿನಲ್ಲಿ ಪ್ರಭಾವಳಿಗಳನ್ನು ನಿರ್ಮಿಸಿಕೊಳ್ಳಲಾಗುತ್ತದೆ. ಭಾರತದಲ್ಲಿ ಮಾತ್ರವೇ ಅಲ್ಲ ಯಾವುದೇ ರಾಷ್ಟ್ರದಲ್ಲಾದರೂ ಇಂತಹ ಸನ್ನಿವೇಶದಲ್ಲಿ ಪ್ರಬಲ ಸಮುದಾಯಗಳು ತಮ್ಮದೇ ಆದ ಭದ್ರಕೋಟೆಗಳನ್ನು ನಿರ್ಮಿಸಿಕೊಳ್ಳುತ್ತವೆ. ಭಾರತದಲ್ಲಿ ಇಂತಹ ಭದ್ರ ಕೋಟೆಗಳು ಪಾವಿತ್ರ್ಯತೆ, ಪಾರಂಪರಿಕ ಶ್ರೇಷ್ಠತೆ ಮತ್ತು ಸಾಂಪ್ರದಾಯಿಕ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತವೆ. ಸಾಮಾಜಿಕ ಪ್ರಾಬಲ್ಯ ಮತ್ತು ಆರ್ಥಿಕ ಸಾಮಥ್ರ್ಯವನ್ನು ಬಳಸಿಕೊಂಡು ಈ ಭದ್ರ ಕೋಟೆಗಳು ಪ್ರಭುತ್ವದ ಕಾನೂನು ಸಂಹಿತೆಗಳನ್ನು, ಸಾಂವಿಧಾನಿಕ ನಿಯಮಗಳನ್ನು ತಮ್ಮ ರಕ್ಷಾಕವಚಗಳಾಗಿ ಬಳಸಿಕೊಳ್ಳುತ್ತವೆ. ಇದು ಸಮಕಾಲೀನ ಭಾರತ ಕಂಡಿರುವ ಸತ್ಯ.

ಸ್ಥಾಪಿತ ವ್ಯವಸ್ಥೆಯ ಈ ಗಡಿ ರೇಖೆಗಳನ್ನು ಉಲ್ಲಂಘಿಸದೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾಕಾರಗೊಳ್ಳುವುದಿಲ್ಲ. ಇಲ್ಲಿ ಕಲೆ, ಸಾಹಿತ್ಯ ಮತ್ತು ಸಂವಹನ ಮಾಧ್ಯಮಗಳು ತಮ್ಮದೇ ಆದ ಪಾತ್ರ ವಹಿಸುತ್ತವೆ. ಇಲ್ಲಿ ಸಾಮಾಜಿಕ ಕಾಳಜಿ, ಮಾನವೀಯ ಸಂವೇದನೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಅವಕಾಶವಂಚಿತ ಜನಸಮುದಾಯಗಳ ನಡುವೆ ಸೌಹಾರ್ದತೆಯನ್ನು ನಿರ್ಮಿಸಲು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಚಾರಿತ್ರಿಕ ಪ್ರಮಾದಗಳನ್ನು ವಿಮರ್ಶಾತ್ಮಕವಾಗಿ ನೋಡುವ ಮೂಲಕ ವರ್ತಮಾನದ ಲೋಪದೋಷಗಳಿಗೆ ಪರಿಹಾರ ಕಂಡುಕೊಳ್ಳಲು ಸೃಜನಶೀಲ ಮನಸ್ಸುಗಳು ಹಾತೊರೆಯುವುದು ಒಂದು ಪ್ರಬುದ್ಧ ಪ್ರಜ್ಞಾವಂತ ಸಮುದಾಯದ ಲಕ್ಷಣ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಾಂವಿಧಾನಿಕ ಕಾನೂನು ಸಂಹಿತೆಯ ಚೌಕಟ್ಟಿನಿಂದ ಹೊರಗಿಟ್ಟೇ ವಿಶ್ಲೇಷಿಸಬೇಕಾಗುತ್ತದೆ. ಇಲ್ಲಿ ಪ್ರಭುತ್ವ ಮಾನವೀಯ ಸಂವೇದನೆ ಮತ್ತು ಸೃಜನಶೀಲತೆಯನ್ನು ಸಾಂಪ್ರದಾಯಿಕ ಮೂಲಭೂತವಾದದಿಂದ ರಕ್ಷಿಸುವ ನಿರ್ಣಾಯಕ ಪಾತ್ರ ನಿರ್ವಹಿಸಿದಲ್ಲಿ ಸೌಹಾರ್ದಯುತ ಸಮಾಜದ ನಿರ್ಮಾಣಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಇಲ್ಲವಾದಲ್ಲಿ ಮತ್ತಷ್ಟು ತಸ್ಲಿಮಾ ನಸ್ರಿನ್ಗಲು, ಸಲ್ಮಾನ್ ರಷ್ದಿಗಳು, ಎಂ ಎಫ್ ಹುಸೇನ್ಗಳು ಸೃಷ್ಟಿಯಾಗುತ್ತಾರೆ.

ಭೌದ್ಧಿಕ ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುವಾಗ ಸೃಜನಶೀಲತೆ ಮತ್ತು ಮಾನವೀಯ ಸಂವೇದನೆಯನ್ನು ಕಡೆಗಣಿಸಲಾಗುವುದಿಲ್ಲ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಕೇವಲ ಸಾಂವಿಧಾನಿಕ ಕಾನೂನು ಚೌಕಟ್ಟಿಗೆ ಒಳಪಡಿಸಿದರೆ ಬಹುಶಃ ಭಾರತೀಯ ಸಮಾಜ ಪ್ರಾಚೀನ ರಾಜಪ್ರಭುತ್ವಕ್ಕೆ ಮರಳಬೇಕಾಗುತ್ತದೆ. ಹತ್ಯೆಗೀಡಾದ ಕಲಬುರ್ಗಿ, ಪನ್ಸಾರೆ, ಧಬೋಲ್ಕರ್, ಬದುಕಿದ್ದೂ ಬದುಕಲಾರದೆ ನಿಷೇಧದ ಛಾಯೆಯಲ್ಲಿರುವ ತಸ್ಲಿಮಾ ನಸ್ರೀನ್, ಸಲ್ಮಾನ್ ರಷ್ದಿ, ದಿವಂಗತ ಹುಸೇನ್, ತನ್ನೊಳಗಿನ ಸಾಹಿತಿಯನ್ನು ಕೊಂದುಕೊಂಡಿರುವ ಪೆರುಮಾಳ್ ಮುರುಗನ್ ಇವರೆಲ್ಲರೂ ಇಂತಹುದೇ ವಿದ್ಯಮಾನಕ್ಕೆ ಬಲಿಯಾಗಿದ್ದಾರೆ. ಈ ಎಲ್ಲ ಘಟನೆಗಳನ್ನು ಕೇವಲ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದಲೇ ನೋಡುವುದಾದರೆ ಭಾರತದಲ್ಲಿ ಸೃಜನಶೀಲತೆ ಮತ್ತು ಸಂವೇದನೆಗೆ ಅವಕಾಶವೇ ಇರುವುದಿಲ್ಲ.

-0-0-0-0-0-

‍ಲೇಖಕರು G

September 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: