ಅಭಿಜ್ಞಾ ಪಿ ಎಮ್ ಗೌಡ
ರಾಜಿಯಾಗುತಿಹ ಒಲರಾಗ
ತನು ಮನಗಳ ಬಂಧ
ನೆನಪಿನುಯ್ಯಾಲೆಯಲಿ
ನವ್ಯಕನಸಿನಾಗರವು ಚಂದ
ಹೃದಯದರಮನೆಯಲಿ
ಮುತ್ತಿನಮಲಿಂದ ಮತ್ತೇರಿದೆ
ಪ್ರೀತಿಯ ಅಮಲಿನ ಗಂಧ….
ಬಲು ಸೋಜಿಗ
ಬಾಳ ಸಾಂಗತ್ಯದ ಸೌಜನ್ಯ
ಅವನೊಲುಮೆಯ ಆಪ್ತತೆಗೆ
ಸಾಕ್ಷಿ ಉಂಟು..!
ಹಂಪೆ ವಿರೂಪಾಕ್ಷನ ಪ್ರಣತೆಯು
ಮೂಡಿಸಿದೆ ಭರವಸೆ
ನನ್ನೊಳಗೆ ನವ ಚೈತನ್ಯ…

ಪ್ರೇಮ ಪಲ್ಲಕ್ಕಿ ದಿಬ್ಬಣದಿ
ನಿತ್ಯವೂ ಅಂಕುರಿಸಿದೆ
ನವಚಿಗುರಿನ ಮಹಾಪರ್ವ
ದೂರತೀರಗಳ ಸಂಗಮದಿ
ಮನಸುಗಳು ಮೇಳೈಸುತಲಿ
ಸದ್ದಡಗಿದ ಮಹಾಗರ್ವ…
ಮುಂಗುರುಳಿನೊಂದಿಗೆ ಬೆರಳಾಡಿಸಿ
ಮುದ್ದಿಸಿದ ಆ ಪ್ರತೀಕ್ಷೆ
ಇರುಳಿನಲಿ ಗುದ್ದಾಡಿ
ಬೆಳದಿಂಗಳಲಿ ಒಂದಾಗಿ
ಅನುರಣಿಸಿದೆ ನನ್ನೆದೆಯ ತುಂಬ
ಅವನೊಲುಮೆಯ ಪವಿತ್ರ ರಕ್ಷೆ..

ಮಧುಶಾಲೆ ಅಂಗಳದಿ
ಪ್ರೀತಿಯ ಮತ್ತಲ್ಲಿ
ಸೂರೆಗೊಂಡಿತು ದುಂಬಿಜೇನು
ಮನಸು ಮನಸುಗಳ ಮಿಲನ
ಕಂಗಳ ಕೊಳದಿ ಒಂದಾಗಿ
ಆವಿರ್ಭಿಸಿತು ಒಲವಭಾನು….
ಹೂವುಗಳ ರಾಣಿಯನು
ಬಿನ್ನೈಸಿ ಪಡೆದಿದ್ದೆ
ನನ್ನೊಲವ ಆಂತರ್ಯ ಹೊಕ್ಕಿ ನಿಲ್ಲೆಂದು
ಅಪೂರ್ವದ ಒಡಲೊಳು
ಅಮೋಘ ಸಿರಿ ಉಕ್ಕಿಸಿದೆ
ಅದ್ವಿತೀಯ ನನ್ನೊಡಲ ಒಲವಿಂದು…






0 Comments