ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಬ್ಳಿ ಹೆಗಡೆ ಹೊಸ ಕವಿತೆ- ಕನಸೊಂದು ಬಿದ್ದಿತ್ತೋ..!

ಅಬ್ಳಿ ಹೆಗಡೆ

ಕನಸೊಂದು ಬಿದ್ದಿತ್ತೋ
ಅಪರೂಪಕೆ
ಕನಸೊಂದು ಬಿದ್ದಿತ್ತೋ..!!೧!!

ನಗುಮರೆತ ಹಗಲಲ್ಲಿ
ಹೊಗೆಯಾಡೊ ಬಗೆಯಲ್ಲಿ
ನಗೆಬುಗ್ಗೆ ಚಿಮ್ಮಿತ್ತೋ
ಮುಗಿಲಿಂದ
ಕನಸೊಂದು ಕೆಡೆದಿತ್ತೋ..!!೨!!

ಸಂತೆಯ ದಿಗಿಲಲ್ಲಿ,
ಚಿಂತೆಯ ಹೆಗಲಲ್ಲಿ
ಸಂತಸ ಕುಂತಿತ್ತೋ,
ಬಂದೊಡನೆ
ನೋವನ್ನು ಮರೆಸಿತ್ತೋ.!!೩!!

ಬಣ್ಣಮಾಸಿದ ಸಣ್ಣ
ಮಣ್ಣ ಅಂಗಳದಲ್ಲಿ
ಹೊನ್ನಿನ ಹೂ ಬಿತ್ತೋ,
ನಂದನದಿಂದ
ಹೊಳೆಯುತ ಇಳಿದಿತ್ತೋ.!!೪!!.

ಎದ್ದಾಗ, ಬಿದ್ದಾಗ,
ಅಡ್ಡಡ್ಡ ನಡೆವಾಗ
ಶುದ್ಧಾಗಿ ನಿಂತಿತ್ತೋ
ಎದುರಲ್ಲಿ
ಕನಸಾಗಿ ಉದುರಿತ್ತೋ.!!೫!!

ಹುಟ್ಟಿನ ಗುಟ್ಟಲ್ಲಿ
ಸಾವಿನ ಪಟ್ಟಲ್ಲಿ
‘ಥಟ್’ ನೆ ನೆಗೆದಿತ್ತೋ,
ಕಣ್ಣೆದುರು
‘ಫಕ,ಫಕ’ ನಗುತಿತ್ತೋ.!!೬!!

ತಾರೆಯ ಊರನು
ಸೇರುವ ದಾರೀಲಿ
ಬೋರಲು ಮಲಗಿತ್ತೋ,
ಕಂಡೊಡನೆ
ತಾನೆದ್ದು ಕುಣಿದಿತ್ತೋ.!!೭!!

ಹಗಲಲ್ಲಿ, ಇರುಳಲ್ಲಿ
ಮುದ್ದಿನ ಮರುಳಲ್ಲಿ
ಸಂತಸ ಮರಳಿತ್ತೋ,
ತಂತಾನೆ
ಖುಷಿಯೊಂದು ನರಳಿತ್ತೋ.!!೮!!

ಹಸಿದ ಹೊಟ್ಟೆಗಳೆಲ್ಲ
ಕುಸಿದು ಬಿದ್ದಿರುವಾಗ
ಕಸುವು ತಾ ಮಳಿತ್ತೋ,
ಮನಸಿಗೆ
ತಿನಿಸಾಗಿ ಬಂದಿತ್ತೋ.!!೯!!.

ಸಂಜೆಯ ಕಡಲಲ್ಲಿ
ನಂಜೆಲ್ಲ ಕರಗಲು
ಅಂಜಿಕೆ ತೊಲಗಿತ್ತೋ,
ತಕ್ಷಣ
ಫಂಜೊಂದು ಉರಿದಿತ್ತೋ.!!೧೦!!

ಕನಸೊಂದು ಬಿದ್ದಿತ್ತೋ
ನನ್ನೊಳಗೆ
ನನಸೊಂದು ಚಿಗುರಿತ್ತೋ.!!೧೧!!

‍ಲೇಖಕರು Admin

24 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading