ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಬ್ಬಾ! ಎಂತಹ ಮಾಯಗಾತಿ ಅವಳು..

 

 

 

 

ಎನ್ ರವಿಕುಮಾರ್ / ಶಿವಮೊಗ್ಗ

 

 

 

 

 

ಅಬ್ಬಾ! ಎಂತಹ ಮಾಯಗಾತಿ
ಅವಳು
ಹುಸಿ ಮಾತುಗಳನ್ನು ಹೆಣೆಯುತ್ತಲೆ
ಹಣೆ, ಗಲ್ಲ, ತುಟಿಗಳಿಗೆಲ್ಲ
ಮಾಯದ ಮದ್ದು ಸವರುತ್ತ
ನಿಜದಂತೆ
ಪ್ರೀತಿಯನ್ನು ವಂಚಿಸುತ್ತಿದ್ದಾಳೆ.

ಒಂಟಿ ಮರವೊಂದು ಹೂಗಳ
ಮುಕ್ಕಳಿಸಿ
ಘಮಲಿಕ್ಕಿ ಸೆಳೆದಂತೆ ಬದುಕಿದ್ದೇನೆ
ಸುಳ್ಳುಗಳ ನಂಬಿ
ಅವಳು ಇಂದೆಲ್ಲಾ ನಾಳೆ
ನಿಜವಾಗಿ ಬಿಟ್ಟಾಳು ಎಂದೇ..

ಹಗಲಿಗೆ ಹಗಲಾಗಿ
ಇರುಳಿಗೆ ಇರುಳಾಗಿ
ಅವಳ ನುಣ್ಣನೆಯ ಕೆನ್ನೆ ಸವರಿದ ನೆನಪುಗಳ
ಇರಿತಗಳ ಭಾದೆಯಲ್ಲೂ
ಉಸಿರು ಉಯ್ಯುತ್ತಿದ್ದೇನೆ.

ನೆತ್ತಿಯ ಮೇಲೆ ಕುಂತು
ನಕ್ಕು ಲೇವಡಿ ಮಾಡುವ
ಹದ್ದು ಕೂಡ ಅವಳ
ಜನ್ಮಾಂತರ ರೂಪವಾಗಿರಲೂ ಬಹುದು.

ಗೊತ್ತು ನನಗೆ,
ಅವಳು ಪ್ರೀತಿಯ ಅಮಲು ಉಣಿಸುತ್ತಿದ್ದಾಳೆ.
ಕೋಮಲ ಎದೆಗಳಿಗವುಚಿಕೊಂಡು
ತೋಳುಗಳ ತೆಕ್ಕೆಯಲ್ಲಿ
ತಟ್ಟಿ, ತೂಗಿ ತಲೆ‌ನೇವರಿಸಿ ಜೋಂಪು ಹತ್ತಿಸಿದ್ದಳು
ಅದ್ಯಾವ ಘಳಿಗೆಯಲ್ಲಿ ಎದ್ದು ಹೋದಳೋ..
ಅಂಗೈಗೆ ಅವಳು ಹಚ್ಚಿದ್ದ ಮದರಂಗಿ‌ ರಕ್ತ ಮುಕ್ಕಳಿಸುತ್ತಿತ್ತು.

ಕಾದಿದ್ದೇನೆ
ಬದುಕಿದ್ದಷ್ಟು ಕಾಲ
ಅವಳ ಹುಸಿ ಪ್ರೀತಿಯ ಅಮಲಿನಲ್ಲಾದರೂ
ಸುಖಿಸುವುದಕ್ಕಾಗಿ…

ಅದೇ ಸುಗಂಧ ಗಾಳಿ ಬೀಸುತ್ತಿದೆ.
ಓ…ಅವಳು ಬಂದಳಂತೆ ಕಾಣುತ್ತಿದೆ
ನೀವಿನ್ನು ಹೊರಡಿ
ನಾನೀಗ ಅವಳ ಕೋಮಲ ಎದೆಗಳಿಗೆ ಕಿವಿಗೊಡಬೇಕು
ತೋಳುಗಳಲ್ಲಿ ಸೆರೆಯಾಗಬೇಕು
ಮತ್ತದೆ ಹುಸಿ ಪ್ರೀತಿಯ ಅಮಲಿನಲ್ಲಿ ಕರಗಬೇಕು.

‍ಲೇಖಕರು avadhi

24 October, 2017

2 Comments

  1. Bhuvana

    ಪ್ರೀತಿ, ಉನ್ಮತ್ತತೆ..ವಿಷಾದ ದ blend…ಅದ್ಬುತ! ಬಹುಶಃ ಇಷ್ಟು ಪರಿಣಾಮಕಾರಿಯಾಗಿ ಆತ್ಮಶೋಧದ ರೂಪಕ ತರುವುದು ನಿಮ್ಮಿಂದ ಮಾತ್ರ ಸಾಧ್ಯವೇನೋ..
    Really amazing sir.

  2. ಸುಧಾರಾಣಿ ನಾಯ್ಕ

    ಪ್ರೀತಿ ಹುಚ್ಚುತನದ ,ಉನ್ಮಾದದ ಚಂದದ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading