ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅಬ್ಬಾಸ್‍ ಕಿರಸ್ತೋಮಿ ಹೋಗ್ಬಿಟ್ರಂತೆ’

ಗಾಳಿಯ ದೈವಿಕ ಹಾದಿಯಲ್ಲಿ..

hema hebbagodi1

ಹೇಮಾ ಹೆಬ್ಬಗೋಡಿ 

ಬೆಳಗ್ಗೆ ಎಂದಿನಂತೆ ನನ್ನ ಮಗಳನ್ನ ಸ್ಕೂಲಿಗೆ ಹೊರಡಿಸೋ ಧಾವಂತದಲ್ಲಿದ್ದೆ. ಮೊಬೈಲಿನಲ್ಲಿ ವಾಟ್ಸಾಪ್ ಸಂದೇಶ ಬಂದ ಸದ್ದು. ಬಾಗಿಲಿಗೆ ಬೀಗ ಹಾಕುತ್ತಲೇ ಸಂದೇಶದ ಮೇಲೆ ಕಣ್ಣಾಡಿಸಿದೆ. ‘ಅಬ್ಬಾಸ್‍ ಕಿರಸ್ತೋಮಿ ಹೋಗ್ಬಿಟ್ರಂತೆ’

Kiarostami2ಅರೇ! ಕಳೆದ ಮೂರು ದಿನಗಳಿಂದ ಅಬ್ಬಾಸನ ಬಗ್ಗೆ ಇಂಟರ್‍ನೆಟ್‍ ಜಾಲಾಡ್ತಿದ್ದೆ. ಕ್ಯಾನ್ಸರ್‍ ಆಗಿ ಆಸ್ಪತ್ರೆ ಸೇರಿರೋ ಸುದ್ದೀನೂ ಓದಿದ್ದೆ. ನನ್ನ ಹಾಗೂ ನನ್ನ ಸ್ನೇಹಿತರ ‘ರಾಕ್‍ ಪೆ ಟಾಕ್‍’ನ ಸಿನೆಮಾ ಚರ್ಚೆಯಲ್ಲಿ ಅಬ್ಬಾಸ್‍, ಫನಾಯಿ ಮತ್ತು ಕುರಸೋವ ಸುಳಿಯದೇ ಹೋಗುತ್ತಿದ್ದದ್ದೆ ಅಪರೂಪ.

ಅಬ್ಬಾಸ್‍ ಕಿರಸ್ತೋಮಿಯ The Bread and Alley, Through the Olive trees, Where is my Friend’s home, Taste of Cherry ಬಹಳ ಇಷ್ಟವಾದ ಚಿತ್ರಗಳು. ಅಬ್ಬಾಸ ಕಿರಸ್ತೋಮಿಯ ಚಿತ್ರಗಳ ಕಾವ್ಯತ್ಮಕತೆ ಮನಸೆಳೆಯುವಂಥದ್ದು. ಈತ ಕಾವ್ಯಪ್ರೇಮಿ ಸ್ವತಃ ಕವಿ ಅಂತ ತಿಳಿದಾಗ ಪುಳಕಗೊಂಡಿದ್ದೆ. ಅ

ವನ ಬರಹಗಳ ಬೆನ್ಹತ್ತಿ ಹೋದಾಗ ಕೈಗೆ ಸಿಕ್ಕಿದ್ದು ಅವನ ಹಾಯ್ಕುಗಳ ಸಂಕಲನ ‘Walking with the wind’. ಕಳೆದ ಒಂದಷ್ಟು ದಿನಗಳಿಂದ ಅದರ ಓದಿನಲ್ಲೇ ಮುಳುಗಿದ್ದೆ. ಪರಿಮಿತತೆಯಲ್ಲಿ ಅಪರಿಮಿತತೆಯನ್ನು ತೋರಿದ ಆ ಗುರುವಿಗೆ ಆತನದೇ ಪದ್ಯಗಳ ಮೂಲಕ ಕಾವ್ಯನಮನ.

 

she

ಕೊಂಬೆಗೆ ಅಂಟಿದ ಕೊನೆಯ ಎಲೆ

ವಸಂತದ ಚಿಗುರಿಗೆ

ಭರವಸೆ ನೀಡುತ್ತಿದೆ

 

ಯೋಚಿಸಿದಷ್ಟು

ಅರ್ಥವಾದದ್ದು ಕಡಿಮೆ

ಸತ್ಯ ಯಾಕಿಷ್ಟು ಕಹಿ

 

ಮುಂಗಾರು ಮಳೆ

ಪಾರಿವಾಳದ ಗೂಡಲ್ಲಿ

ನೀರು ತುಂಬಿಸಿದೆ

ಪಾರಿವಾಳ ಮಳೆ ನೋಡಲು

ಹೊರಗೆ ಹೋಗಿದೆ

 

ಹಾವು

ರೋಡನ್ನು ಕ್ರಾಸ್ ಮಾಡ್ತಿದೆ

ಎಡಬಲ ನೋಡದೆ

 

ಚಂದ್ರನ ಕಣ್ಣಲ್ಲಿ ಪ್ರಶ್ನೆ:

ಯಾರಿವತ್ತು ಅವನನ್ನ ನೋಡುತ್ತಾರೆ?

ಸಾವಿರ ವರ್ಷಗಳ ಹಿಂದೆ ನೋಡಿದರಲ್ಲ

ಅವರೇನಾ?

 

ಅವಳಂದಳು:

‘ನನ್ನಿಂದ ಆಗಲ್ಲ’

ಅವಳು ಹೀಗನ್ನಲಿ ಅಂತ ನಂಗನ್ನಿಸಿತ್ತು:

‘ನನ್ನ ಮನಸ್ಸು ಒಪ್ಪಲ್ಲ’

 

ನಾ ಬಂದಿದ್ದು ಬೇಸಿಗೆಯ ಮೊದಲ ದಿನದ

ಗಾಳಿಯೊಂದಿಗೆ

ಗಾಳಿ ನನ್ನ ಕರೆದೊಯ್ಯುತ್ತದೆ

ಬೀಳುವ ಕಡೆ ಗಳಿಗೆಯವರೆಗೆ

she

ನೂರಾರು ದಾರಿಹೋಕರ

ಮಧ್ಯೆ

ಒಬ್ಬ ನನ್ನಂಗಡಿಯ ಮುಂದೆ ನಿಂತ

 

ಈ ಬಾರಿ

ಜೇಡ

ಚೆರ್ರಿ ಮಲ್ಬೆರ್ರಿ ಕೊಂಬೆಗಳನ್ನು

ಬೆಸೆಯಿತು

 

ಯಾರೂ

ಏನೂ ಮಾಡಲಾಗುವುದಿಲ್ಲ

ಆಕಾಶ ಮಳೆ ಸುರಿಸಲೇಬೇಕೆಂದಾಗ

 

ಹಿಮದ ಮೇಲೆ ಹಾದಿಹೋಕನ ಹೆಜ್ಜೆಗುರುತು

ಯಾವುದೋ ಪ್ರಯಾಣಕ್ಕೆ ಹೊರಟವನೇ?

ಮರಳಿ ಬರುವನೇ?

ಇದೇ ದಾರಿಯಲ್ಲಿ?

 

ಮಳೆ ನಿಂತ ಮರುಕ್ಷಣ

ಚಂದ್ರ

ಹೊಳೆಯುತ್ತಾನೆ ಒದ್ದೆ ಮರಗಳ ಮೇಲೆ

 

ಗಾಳಿ ಬೀಸಲು ಶುರುವಾಯಿತು

ಈಗ ಯಾವ ಎಲೆಯ ಸರದಿ

ಕೆಳಗುರುಳಲು?

she

ನೂರಾರು ದೊಡ್ಡ ಮರಗಳು

ಗಾಳಿಗೆ ಮುರಿದುಬಿತ್ತು

ಪುಟ್ಟ ಗಿಡದಿಂದ

ಎರಡು ಎಲೆಗಳಷ್ಟೇ

ಹಾರಿತು.

 

ಹುಣ್ಣಿಮೆಯ ರಾತ್ರಿ

ಹಾಸಿತು

ಮುದಿ ನದಿಯ ಮೇಲೆ ತೆಳು ಮಂಜಿನಹಾಳೆ

 

ಹಾರುತ್ತದೆ .. ಕೂರುತ್ತದೆ

ಕೂರುತ್ತದೆ ಮತ್ತೆ.. ಹಾರುತ್ತದೆ

ಮಿಡತೆ

ಯಾವ ದಿಕ್ಕಿಗೆ ಹಾರುತ್ತಿದೆ

ಅದಕ್ಕೆ ಮಾತ್ರ ಗೊತ್ತು

 

ಮಳೆಯ ಹನಿ

ಮರದೆಲೆಯಿಂದ  ಉರುಳಿ

ಮಣ್ಣೀರಿನಲ್ಲಿ ಬಿತ್ತು

 

ಪುಟ್ಟ ಹೆಸರಿಲ್ಲದ ಹೂ

ಅರಳುತಿದೆ ಒಬ್ಬಂಟಿ

ದೊಡ್ಡ ಪರ್ವತದ ಬಿರುಕಿನಲ್ಲಿ

 

ತೂಗುಸೇತುವೆ

ನೀರಿನ ಮೈ ಕದಡುತ್ತಿದೆ

ಚದರುತ್ತಿದೆ

ಬೆಳದಿಂಗಳು

 

ಜ್ವಾಲಾಮುಖಿಯ ನೆತ್ತಿಯ

ಮೇಲೆ ಹಾರುತ್ತಾ

ಪಾರಿವಾಳ ತನ್ನ

ಮೊದಲ ಮಹಾಕಾವ್ಯ ಹಾಡಿತು.

‍ಲೇಖಕರು Admin

6 July, 2016

3 Comments

  1. Anonymous

    BASAVARAJ PURANIK

    ಹೇಮಾ ನೀವು ಅನುವಾದಿಸಿರುವ ಅಬ್ಬಾಸ್ ಕಿರಸ್ತೋಮಿ ಯ ಹಾಯ್ಕುಗಳು ನಿಜವಾಗಿ ಉತ್ತಮವಾಗಿವೆ. ನಿಮ್ಮ ಅನುವಾದ ಕಲೆ ದೈವದತ್ತ. ಅದಕ್ಕೆ ಅಭಿನಂದನೆಗಳು.
    ನಾನು ಇಂದು ನಸಕಿನ 5 ಘಂಟೆಗೆ ಮಿತ್ರರೊಬ್ಬರು ಕಳಿಸಿದ್ದ ಈ ಮೇಲ್ ನಲ್ಲಿ ಕಿರಸ್ತೋಮಿಯ ಹೆಸರು ಹಾಗು ಅವನ ಹಾಯ್ಕುಗಳ ಇಂಗ್ಲಿಷ ರೂಪಾಂತರ ಓದಿದ್ದು ಮೊದಲ ಸಲ. ಆ ಚೆಲುವಾದ ಹಾಯ್ಕುಗಳ ಮಾಂತ್ರಿಕತೆಯಲ್ಲಿ ಮಂತ್ರಮುಗ್ಧ ನಾಗಿದ್ದೆ. ಈಗ 9 ಗಂಟೆಗೆ ನಿಮ್ಮ ಬರಹ ಓದಿದಾಗ ನನಗೆ ಏನು ತಿಳಿಯದಂತಾಯಿತು.
    ನಿಮ್ಮ ಆಪ್ತ ಬರಹ, ಅನುವಾದಗಳ ಮೂಲಕ ಸಂದ ಗೌರವಾರ್ಪಣೆ ಮನಕ್ಕೆ ನೆಮ್ಮದಿ ತಂದಿತು.
    ಧನ್ಯವಾದಗಳು

  2. lalitha sid

    Taste of cherry ಮೂವೀ ನೋಡಿದವರು ಅಬ್ಬಾಸ್ ಮರೆಯೋದು ಬಹಳ ಕಷ್ಟ. ಅಂತಹ ಕಲ್ಪನೆಯಾದರೂ ಹೇಗೆ ಬಂದಿರಬಹುದು ಒಬ್ಬ ನಿರ್ದೇಶಕನಿಗೆ ಎಂದು ಅನೇಕ ಸರ್ತಿ ನಾನು ಯೋಚಿಸಿದ್ದುಂಟು. ಅಬ್ಬಾಸ್ ಅದ್ಭುತ ಪ್ರತಿಭೆ. ಆತನ ಕವನಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ತಿಳಿದುಕೊಂಡಾಯ್ತು. ಬಹಳ ಸೊಗಸಾದ ಕವನಗಳು . ತ್ಯಾಂಕ್ಯೂ ಹೇಮಾ.
    ಆತನ ಸಾವು ಪ್ರತಿಭೆಯ ಸಾವು.

  3. Hema

    ತಮ್ಮೆಲ್ಲರ ಮೆಚ್ಚುಗೆ ಹಾಗೂ ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading