
ವಿನತೆ ಶರ್ಮ
‘ಅಪ್ರಾಪ್ತ ವಯಸ್ಸು’ ಎಂದರೇನು? ‘ಪ್ರಾಪ್ತ’ ಅನ್ನುವುದಕ್ಕೆ ಕನ್ನಡ ರತ್ನಕೋಶದಲ್ಲಿ ಸಿಕ್ಕುವ ಪದಗಳು – ದೊರೆತ, ಉಂಟಾದ, ಯೋಗ್ಯವಾದ, ಅರ್ಹವಾದ, ಹರಯಕ್ಕೆ ಬಂದ.
‘ಹರಯ’ ಎನ್ನುವುದು ಹತ್ತು ವರ್ಷಕ್ಕೆ ಋತುಸ್ರಾವವನ್ನು ಅನುಭವಿಸಿದ ಬಾಲಕಿಗೂ ಸಲ್ಲುತ್ತದೆಯೇ? ಒಬ್ಬ ವ್ಯಕ್ತಿಯ ವಯಸ್ಸು ಯಾವಾಗ ‘ಪ್ರಾಪ್ತ’ವಾಗುತ್ತದೆ? ಯಾರಿಗೆ? ಯಾಕಾಗಿ?
ಅಂತಹ ಒಂದು ಅಭಿವ್ಯಕ್ತಿ ನಮ್ಮ ಮಾತಿನಲ್ಲಿ, ಬರಹದಲ್ಲಿ ಇರಬೇಕೇ? ಅದು ಒಂದು ನಿರ್ದಿಷ್ಟ ಸಾಮಾಜಿಕ-ಸಾಂಸ್ಕೃತಿಕ ನಡೆಯನ್ನ ಸೂಚಿಸುತ್ತದೆಯೇ?
‘ಎಂಟು ವರ್ಷ’ ವಯಸ್ಸಿನ ಬಾಲಕ/ಬಾಲಕಿ, ಐದು ವರ್ಷದ ಹುಡುಗ/ಹುಡುಗಿ ಎಂದರೆ ಸಾಲದೇ? ಪ್ರಾಥಮಿಕ ಶಾಲಾ ಹುಡುಗಿ, ಹೈಸ್ಕೂಲಿನ ಹುಡುಗ ಅಂದರೆ ಹೇಗೆ?
ಹರಯದ ೧೪ರ ಹುಡುಗ/ಹುಡುಗಿ, ಹರೆಯದ ೧೯ ವರ್ಷದ ಯುವಕ/ಯುವತಿ ಅಥವಾ,
ಸೀದಾಸಾದಾ, ಇಂತಿಷ್ಟು ವಯಸ್ಸಿನ ಹೆಂಗಸು/ಗಂಡಸು ಎಂದರೆ ಹೇಗೆ?
‘ವಯಸ್ಸಿಗೆ ಬಂದ’ ಅನ್ನುವ ಅಭಿವ್ಯಕ್ತಿಯ ಹಿಂದೆ ಕೂಡ ಎಷ್ಟು ಪ್ರಶ್ನೆಗಳಿವೆ. ಯಾವ ನಿರ್ದಿಷ್ಟ ವಯಸ್ಸು? ಎಲ್ಲರಿಗೂ ಅವರವರದೇ ಆದ ‘ವಯಸ್ಸಿಗೆ ಬರುವ’ ಹಂತಗಳಿರುತ್ತವೆ, ಅಲ್ಲವೇ? ಅದು ಯೌವನವೇ ಆಗಬೇಕೆ?
ಕೆಲವರಿಗೆ ದೈಹಿಕವಾಗಿ, ಚಿಕ್ಕ ವಯಸ್ಸಿನಲ್ಲೇ ಅದೆಷ್ಟು ಮಾನಸಿಕ ಮತ್ತು ಬೌದ್ಧಿಕವಾದ ಪ್ರಬುದ್ಧತೆ ಇರುತ್ತದೆ.
ಕೆಲವರಿಗೆ ದೈಹಿಕವಾಗಿ ವಯಸ್ಸಾದರೂ, ಆ ವಯಸ್ಸಿಗೆ ಇರಬೇಕು ಎಂದು ಯಾರೋ ಅಪೇಕ್ಷಿಸಿದ ಪ್ರಬುದ್ಧತೆ ಇರದೇ ಹೋಗಬಹುದು.
ಮಾಪನವನ್ನ ಅಳವಡಿಸಿ, ಅನುಸರಿಸಿ ಹರಯವನ್ನು, ವಯಸ್ಸನ್ನು, ಮನಸ್ಸನ್ನು ವಿವಿಧ ಪದಗಳಲ್ಲಿ ಅಳೆಯುವುದು ಎಷ್ಟು ಸರಿ?
ಹಿಂದೊಮ್ಮೆ ಕಾಲೇಜು ಹುಡುಗಿ, ಹುಡುಗರಿಗೆ ಸೈಕಾಲಜಿ ವಿಷಯವನ್ನ ಹೇಳುತ್ತಿದ್ದೆ. ಈಗ ಮನೆಯಲ್ಲೇ ಈ ಮಾತುಕತೆಗಳು ನಡೆಯುತ್ತಿವೆ.





Thank you!