ಅಪ್ಪ ಸಾಕಿದ ಬೀಜದ ಹೋರಿ..

ಮಲ್ಲಿಕಾರ್ಜುನ ಹೊಸಪಾಳ್ಯ

ನಮ್ಮ ಹಳ್ಳಿಗಾಡಿನ ರೈತಾಪಿ ಅಪ್ಪಂದಿರುಗಳಿದ್ದ ಹತ್ತೆಂಟು ಥರದ ಖಾಯಶ್ಷುಗಳು ನಮ್ಮಪ್ಪನಿಗೂ ಇದ್ದವು. ಹೊಲ ಕೊಳ್ಳುವುದು-ಮಾರುವುದು, ಮರ ಕಡಿಯುವುದು-ಸಸಿ ನೆಡುವುದು, ರೌಂಡ್ ಬಾವಿ ತೆಗೆಸುವುದು-ಅದಕ್ಕೆ ಕಲ್ಲು ಕಟ್ಟಿಸುವುದು, ಗ್ವಾರೆ ಕಟ್ಟಿ ನೆಲ ಸಮ ಮಾಡುವುದು, ನೆಲ್ಲು ಬೆಳೆಯುವುದು, ಹೊಲದಲ್ಲಿ ಜೋಪಡಿ, ಮಂಚಿಗೆ ಕಟ್ಟುವುದು… ಹೀಗೆ. ಅದರಲ್ಲಿ ಬಹುಮುಖ್ಯವಾದುದು ಬೀಜದ ಹೋರಿ ಕಟ್ಟುವುದಾಗಿತ್ತು. ಅವರಿವರ ಬಳಿ ಈ ಬಗ್ಗೆ ಹೇಳುತ್ತಲೇ ಇದ್ದರು. ಆದರೆ ಕೈಯಲ್ಲಿ ಕಾಸಿಲ್ಲದೆ ಸುಮ್ಮಕಾಗಿದ್ದರು.

ಹೀಗಿರಬೇಕಾದರೆ ಒಂದು ದಿನ, ನಾಕನೇ ಕ್ಲಾಸು ಓದುತ್ತಿದ್ದ ನಾನು ಆಗ ತಾನೇ ಸೈಕಲ್ಲಿನಲ್ಲಿ ಕತ್ರಿ ಹೊಡೆಯುವುದನ್ನು ಕಲಿಯುತ್ತಿದ್ದೆ. ನಾಗಲಮಡಿಕೆ ಜಾತ್ರೆಗೆ ಹೋಗಿದ್ದ ಅಪ್ಪ ಪ್ರತ್ಯಕ್ಷ. ಕೈಯಲ್ಲಿ ಎರಡು ಹಗ್ಗ ಹಾಕಿ ಹಿಡಿದಿದ್ದ ಬೀಜದ ಹೋರಿ. ಬಂದವರೇ ಅದನ್ನು ಎರಡು ಕಣ್ಣಿಯಲ್ಲಿ ಗ್ವಾಂದಿಗೆಗೆ ಕಟ್ಟಿ ನೋಡುತ್ತಾ ನಿಂತಿದ್ದ ನನಗೆ ‘ಕಡ್ಲೆ ಬಳ್ಳಿ ಕಿತ್ಕಂಬಾ ಓಗಲೇ’ ಎಂದಿತು.

ಹೋರಿ ಎಂದರೆ ಘನವಾದ ಹೋರಿ. ರುಪಾಯಿ ಬಣ್ಣ. ನೀಳವಾದ ಮುಂಗಾಲುಗಳು. ಕಪ್ಪು-ಕಂದು ಮಿಶ್ರಿತ ಪುಟ್ಟ ಗೊರಸುಗಳು. ಬಿರುಸಾದ ಮಾಂಸ ಖಂಡಗಳ ಹಿಂಗಾಲು ಪರ‍್ರೆಗಳು. ದಿವಿನಾದ ಬಾಲ. ತುಸುವೇ ಹಿಂಭಾಗಿದ ಒಂದಡಿ ಉದ್ದದ ಕಪ್ಪನೆ ಕೊಂಬುಗಳು. ನಿರಿಗೆ ಇಳಿದಂತೆ ಕಾಣುತ್ತಿದ್ದ ಕೊರಳಿಗೆ ಇಳಿಬಿದ್ದ ಚರ್ಮ. ನಕ್ಷತ್ರದಂತೆ ಕಾಣುತ್ತಿದ್ದ ಬೆನ್ನ ಮೇಲಿನ ಸುಳಿ. ನಡೆಯುವಾಗ ಬಲಗಾಲಿಟ್ಟರೆ ಎಡಗಡೆಗೂ, ಎಡಗಾಲಿಟ್ಟರೆ ಬಲಗಡೆಗೂ ವಾಲುತ್ತಿದ್ದ ಆಕರ್ಷಕ ಗೋಪುರ. ನೊಗ ಸೋಕದ ಹೆಗಲು. ಉಬ್ಬಿದ ಹಣೆ. ರ‍್ರಗೆ ಹೊಳೆವ ಗುಡ್ಡೆಗಳ ಕಣ್ಣುಗಳು, ಆ ಕಣ್ಣುಗಳ ಮೇಲೆ ಬಾಗಿದ ರೇಕುಗಳು, ಸದಾ ಥಣ್ಣಗಿರುತ್ತಿದ್ದ ಕಂದು ಮೂಗು. ತಿಳಿಗೆಂಪಿನ ಮೃದುವಾದ ಗದ್ದ… ಒಟ್ಟಾರೆ ಬೀಜದ ಹೋರಿಗೆಂದೇ ಹುಟ್ಟಿದ ಕರು ಅದಾಗಿತ್ತು.

ನೆರೆಮನೆ ಗೆಳೆಯರಾದ ಕೆಂಚ, ರಂಗ ಮತ್ತು ನನಗೆ ಅದು ಗಂಜಲ ಹುಯ್ಯುವುದನ್ನು ನೋಡಲು ಸಕತ್ ಖುಷಿ. ಬೇರೆ ಎತ್ತುಗಳಂತೆ ಅದು ಭೂಮಿಗೆ ನೇರವಾಗಿ ನಲ್ಲಿಯಲ್ಲಿ ನೀರು ಬಿಟ್ಟಂತೆ ಗಂಜಲ ಹುಯ್ಯುತ್ತಿರಲಿಲ್ಲ. ಬದಲಿಗೆ ಅದರ ಮುಂಗಾಲುಗಳ ನಡೂ ಮಧ್ಯಕ್ಕೆ ಚೊರ್ ಚೊರ್ ಅಂತ ಹಾರಿಸುತ್ತಿತ್ತು. ಅಲ್ಲದೆ ಅದು ಮಲಗಿ ಏಳುವುದನ್ನು ನಾವು ನಿರೀಕ್ಷಿಸುತ್ತಿದ್ದೆವು. ಆಗ ತನ್ನ ಮೈಯನ್ನು ಒಂದು ಮೊಳ ಹಿಗ್ಗುವಂತೆ ಮುರಿಯುತ್ತಿತ್ತು. ಅದರ ಕಣ್ಣು-ಮೂಗುಗಳು ಎಷ್ಟು ಚುರುಕೆಂದರೆ ಹಸುಗಳು ಅಷ್ಟು ದೂರದಲ್ಲಿ ಬರುತ್ತಿದ್ದರೂ ಸಿರ್ ಸಿರ್ ಎನ್ನುತ್ತಾ ಗೂಟಗಳು ಕಿತ್ತು ಹೋಗುವಂತೆ ನೆಗೆದಾಡುತ್ತಿತ್ತು.

ಹಸುಗಳಿಗೆ ಹೋರಿ ಕೊಡಿಸುವ ಕ್ರಿಯೆಯಂತೂ ಎಷ್ಟು ನೋಡಿದರೂ ಹೊಸತೇ. ಸಣ್ಣುಡುಗರೆಂಬ ಬೇಧ-ಭಾವ ಮಾಡದೆ ನಮ್ಮನ್ನೂ ಆ ಕೆಲಸಕ್ಕೆ ಕರೆಯುತ್ತಿದ್ದರು. ನಾವಾಗ ಮೂರೇ ಮನೆಗಳಿದ್ದ ಗ್ರಾಮಠಾಣದಲ್ಲಿ ವಾಸವಾಗಿದ್ದೆವು. ಒಂದು ಹಸುವಿಗೆ ಹೋರಿ ಬಿಡಲು ಕನಿಷ್ಟ ಐದು ಜನ ಬೇಕಿತ್ತು. ನಮ್ಮ ಮನೆ ಮುಂದಿದ್ದ ಹೊಂಗೆ ಮರವೇ ಹೋರಿ ಕೊಡಿಸುವ ಜಾಗ. ಅದರ ಕೊಂಬೆಗಳ ಸಂದಿಗೆ ಹಸುವಿನ ತಲೆ ತೂರಿಸಿ ಅಲ್ಲಾಡದಂತೆ ಒಬ್ಬರು ಹಿಡಿಯುತ್ತಿದ್ದರು. ಹಸು ಅತ್ತಿತ್ತ ನೆಗೆದಾಡದಂತೆ ಅದರ ಸೊಂಟಕ್ಕೆ ಎರಡೂ ಕಡೆ ಗಳ ಹಾಕಿ ಆತು ನಿಲ್ಲಲು ಇಬ್ಬರು ಬೇಕಿತ್ತು. ಮತ್ತು ಹೂಂಕರಿಸುತ್ತಾ ನೆಗೆಯುವ ಹೋರಿಯನ್ನು ಇಬ್ಬರು ಹಿಡಿಯುತ್ತಿದ್ದರು. ಜನ ಸಾಕಾಗುತ್ತಿರಲಿಲ್ಲ. ಹಾಗಾಗಿ ನಮ್ಮನ್ನೂ ‘ರ‍್ರಲೇ’ ಎಂದು ಕರೆಯುತ್ತಿದ್ದರು.

ಇಪ್ಪತ್ತು-ಮುವ್ವತ್ತು ಹೆಜ್ಜೆಗಳಿಂದ ಓಡಿಬಂದು ಹಸುವಿನ ಮೇಲೆ ಹಾರುತ್ತಿದ್ದ ಹೋರಿಯ ಭಂಗಿ ಲಾಂಗ್ ಜಂಪ್ ಮಾಡುವಂತೆ ಕಾಣುತ್ತಿತ್ತು. ಪ್ರತೀ ಸಲ ಈ ಕ್ರಿಯೆ ಮುಗಿದಾಗಲೂ ಹಸುವಿನ ಒಡೆಯ ತನ್ನ ಮಾತುಗಳ ಮೂಲಕವೂ ಮತ್ತು ಆ ಹಸು ತನ್ನ ಕಣ್ಣು, ಕಿವಿಗಳ ಮೂಲಕವೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು. ಒಂದೊಂದು ದಿನ ಮೂರ್ನಾಲ್ಕು ಹಸುಗಳು ಬಂದರೂ ಹೋರಿ ಜಗ್ಗುತ್ತಿರಲಿಲ್ಲ. ಮೊದಲ ಹಸುವಿಗೆ ತೋರುತ್ತಿದ್ದ ಉತ್ಸಾಹವನ್ನೇ ನಾಲ್ಕನೆಯದಕ್ಕೂ ತೋರುತ್ತಿತ್ತು. ಅಷ್ಟಾದ ಮೇಲೂ ಯಾವಾದರೂ ಬೀಡಾಡಿ ದನಗಳು ಆಕಡೆ ಬಂದರೆ ಹೂಂಕರಿಸಿ ಕಾಲು ಕೆರೆದು ಆಹ್ವಾನಿಸುತ್ತಿತ್ತು. ಇಂಥಾ ಐನಾತಿ ಹೋರಿ ಕಟ್ಟಿದ್ದಕ್ಕಾಗಿ ಹಸು ಪಿತರು ಅಪ್ಪನನ್ನೂ ಹೊಗಳುತ್ತಿದ್ದರು. ಪಶು ಚಿಕಿತ್ಸಾಲಯಗಳು ಅಪರೂಪವಾಗಿದ್ದ ಆ ಕಾಲದಲ್ಲಿ ಐದಾರು ಮೈಲಿ ಸುತ್ತಿದರೂ ಬೀಜದ ಹೋರಿಗಳು ಸಿಕ್ಕುವುದು ದುರ್ಲಭವಾಗಿತ್ತು.

ಅಪ್ಪನಂತೂ ದಿನದ ೨೪ ಗಂಟೆಗಳಲ್ಲಿ ಕೆಲವೇ ಗಂಟೆಗಳನ್ನು ತನಗಾಗಿ ಇರಿಸಿಕೊಂಡು ಮಿಕ್ಕ ಸಮಯವನ್ನು ಹೋರಿಯ ಆರೈಕೆಗೇ ಮೀಸಲಿಟ್ಟಿತು. ಅದರ ಮೂಗುದಾರ ತಿರುವುವುದು, ಈರೆಕಾಯಿ ಒಪ್ಪಿನಿಂದ ಮೈಯುಜ್ಜುವುದು, ಬಿಸಿನೀರು ಕಾಸಿ ಮೈತೊಳೆಯುವುದು, ಹುಳ್ಳಿ ನುಚ್ಚು ಕಡ್ಲೆಕಾಯಿ ಹಿಂಡಿ ನೆನಾಕಿ ಉಂಡೆ ಮಾಡಿ ತಿನ್ನಿಸುವುದು, ತೆಂಗಿನ ಮಟ್ಟೆ ಬಡಿದು ಅದರ ನಾರಿನಿಂದ ಹಗ್ಗ, ಕಣ್ಣಿ, ಕೊಳ್ಳುದಂಡೆಗಳೇ ಮುಂತಾದುವನ್ನು ಹೊಸೆಯುವುದು, ಕೊಂಬು ಜೀವುವುದು, ಉಣ್ಣೆ-ಪಿಡದಗಳನ್ನು ಕೀಳುವುದು… ಹೀಗೆ ಸದಾ ಹೋರಿಯ ಸೇವೆಯಲ್ಲೇ ಇರುತ್ತಿದ್ದರು. ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಾದ ನಮಗೆ ಅದರಲ್ಲಿ ನಾಲ್ಕಾಣೆ ಭಾಗ ಸಮಯ ಕೊಟ್ಟಿದ್ದರೂ ಸೈತ ನಮ್ಮ ಪೊಸಿಷನ್ನೇ ಬೇರೆ ಆಗುತ್ತಿತ್ತು ಎಂದು ನನ್ನ ಅಣ್ಣಂದಿರೆಲ್ಲಾ ನಗಸಾರ ಮಾಡುತ್ತಿದ್ದರು.

ಅಪ್ಪ ಹೋರಿ ಸೇವೆಗೆ ನಿಂತ ಮೇಲೆ ಅಮ್ಮನಿಗೆ ಕೆಲಸ ಜಾಸ್ತಿಯಾಯಿತು. ಒಂದು ಹಸುವಿಗೆ ಹೋರಿ ಕೊಡಿಸಲು ೧೫ ರುಪಾಯ್ ಸಿಗುತ್ತಿತ್ತು. ಅದರಲ್ಲಿ ಸ್ವಲ್ಪವಾದರೂ ಅಮ್ಮನಿಗೆ ಕೊಟ್ಟಿದ್ದರೆ ಎಲ್ಲಾ ಸಲೀಸಾಗಿರೋದು. ಆದರೆ ಅಪ್ಪ ಹೋರಿ ದುಡಿದಿದ್ದನ್ನು ಹೋರಿಗೇ ಖರ್ಚು ಮಾಡುತ್ತಿತ್ತು. ಅದರ ಮೈಗೆ ಹೊದಿಸಲು ಕೆಂಪನೆ ಕವುದಿ ತರುವುದು, ಕೊಂಬಿನ ಕಳಸ ಕೂರಿಸುವುದು, ಹಗ್ಗಕ್ಕೆ ತೆಕ್ಕೆಬಳೆ ಹಾಕಿಸುವುದು, ಕೊಳ್ಳುದಂಡೆಗೆ ಗೆಜ್ಜೆ, ಶಂಖು, ಕರೆದಾರ ಕಟ್ಟುವುದು ಮುಂತಾದುವಕ್ಕೆ ದುಡ್ಡೆಲ್ಲಾ ಖರ್ಚಾಗುತ್ತಿತ್ತು.

ಈ ಪಾಯಿಂಟು ಹಿಡಿದು ಅಮ್ಮ ಜಗಳ ತೆಗೆಯುತ್ತಿತ್ತು. ಹೊತ್ತುಟ್ಟಿದರೆ ಜಗಳ, ಹೊತ್ತು ಮುಣುಕಿದರೆ ಜಗಳ. ಇದೇ ಸಮಯಕ್ಕೆ ಒಂದು ದಿನ ಪಕ್ಕದ ಗೊಲ್ಲರಹಟ್ಟಿಯ ದೊಡ್ಡರಾಮಯ್ಯ ಬಂದು ವೈದ್ಯರು ರೋಗಿಯನ್ನು ಪರೀಕ್ಷಿಸುವಂತೆ ಹೋರಿಯನ್ನು ಅಪೂಟಾ ಪರೀಕ್ಷಿಸಿದ. ಈವಯ್ಯ ನಮ್ಮ ಮನೆಯ ಜಗಳಕ್ಕೆ ತುಪ್ಪ ಸುರಿದಿದ್ದನ್ನು ಹೇಳುವ ಮುನ್ನ ಈತನ ವ್ಯಕ್ತಿತ್ವದ ಕಿರು ಪರಿಚಯ ಮಾಡುವುದು ಉತ್ತಮ. ಪೂರ್ತಿ ಪರಿಚಯ ಮಾಡಲು ಏಳು ಹಗಲು, ಏಳು ರಾತ್ರಿ ಬೇಕು, ಇರಲಿ.

ಈತ ತನ್ನ ಐದು ಜನ ಗಂಡುಮಕ್ಕಳನ್ನು ಐದು ಊರುಗಳ ಸಾವ್ಕಾರರ ಮನೆಗಳಲ್ಲಿ ಸಂಬಳಕ್ಕಿಟ್ಟು, ಇದ್ದ ಲಂಗೋಟಿಯಗಲದ ಜಮೀನನ್ನು ಕಂಡೋರಿಗೆ ಕೋರಿಗೆ ಕೊಟ್ಟು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸಾಲ ಮಾಡಿ ಇವತ್ತು ಈ ಊರು, ವತ್ತಾರೆ ಇನ್ನೊಂದೂರು ಅಂತ ಅಲೆಯುತ್ತಿದ್ದ. ಕಟ್ಟಿಕೊಂಡ ಕರ್ಮಕ್ಕೆ ಹೆಂಡತಿಯೂ ಮತ್ತು ಎಳೆಯದೆಂಬ ಕಾರಣಕ್ಕೆ ಒಂದು ಗಂಡು ಮಗುವೂ ಮನೆಯಲ್ಲಿದ್ದರು.

ಇಂಥಾ ದೊಡ್ಡರಾಮಯ್ಯ ನಮ್ಮ ಹೋರಿಯನ್ನು ಕೊಂಬಿನ ತುದಿಯಿಂದ ಹಿಡಿದು ಬಾಲದ ಕುಚ್ಚಿನ ತನಕ ನೋಡಿ ‘ಸ್ವಾಮೇ’ ಎಂದು ಅಪ್ಪನನ್ನು ಕರೆದ. ‘ಯಾಕಲ’ ಎನ್ನುತ್ತಾ ಬಂದ ಅಪ್ಪನಿಗೆ ‘ಮಟ್ ಮದ್ಲು ಮಾರಾಕ್ರಿ ಹೋರಿಕರನ’ ಎಂದುಬಿಟ್ಟ. ಏನು ಎತ್ತ ಎಂದು ವಿಚಾರಿಸಲಾಗಿ ಹತ್ತಿರಕ್ಕೆ ಕರೆದು ಹೋರಿಯ ಯಾವುದೋ ಭಾಗ ತೋರಿಸಿ ‘ಅಲ್ಲಿ ಗೂಬೆ ಸುಳಿ ಐತೆ’ ಎಂದು ಹೇಳಿ ಕಾಪಿ ಕುಡಿದು ಹೊರಟೇಹೋದ. ಹೋದವನು ಸುಮ್ಮನಿರದೆ ಸುತ್ತ ಏಳು ಹಳ್ಳಿಗೂ ‘ಐನೋರ್ ಹೋರಿಕರೀಗೆ ಗೂಬೆ ಸುಳಿ ಐತೆ’ ಅಮ್ತ ಸಾರಿದ.

ಎಲ್ಲಾ ಜೀವಾದಿಗಳಿಗೂ ಮೈಮೇಲೆ ಸುಳಿಗಳಿರುತ್ತವೆ. ಅವುಗಳು ಇರುವ ಜಾಗಕ್ಕನುಗುಣವಾಗಿ ಪೊರಕೆ ಸುಳಿ, ಪಾತಾಳ ಸುಳಿ, ನಾಗರಹಾವಿನ ಸುಳಿ, ದೇವ ಸುಳಿ ಎಂದು ಕರೆಯುತ್ತಾರೆ. ಕೆಲವು ಶುಭ, ಇನ್ನು ಕೆಲವು ಅಶುಭ ಎಂದು ನಂಬಿಕೆ. ಅದರಲ್ಲಿ ಹೋರಿಗಳ ಹಿಂಗಾಲಿನ ಮೇಲ್ಭಾಗದ ಮುಡ್ಡಿಯ ಹತ್ತಿರ ಇರುವ ಸುಳಿಯನ್ನು ‘ಗೂಬೆ ಸುಳಿ’ ಎಂತಲೂ, ಅದು ಇದ್ದರೆ ಆ ಜೀವಾದಿ ಇರುವ ಮನೆಗೆ ಕೇಡೆಂತಲೂ ಭಾವಿಸುತ್ತಿದ್ದರು. ಇದಕ್ಕಾಗಿಯೇ ಹಸು, ಎತ್ತು, ಹೋರಿಕರಗಳನ್ನು ಖರೀದಿಸುವಾಗ ಕಣ್ಣಲ್ಲಿ ಕಣ್ಣಿಟ್ಟು ನಿಗಾ ಮಾಡುತ್ತಾರೆ. ಆದರೆ ಅದೆಂಗೋ ನಮಪ್ಪ ಗಮನಿಸಿರಲಿಲ್ಲ.

ದೊಡ್ಡರಾಮಯ್ಯನ ತುತ್ತೂರಿಯಿಂದ ಗರ್ಭ ಕಟ್ಟಿಸಲು ಬರುವ ಹಸುಗಳ ಸಂಖ್ಯೆ ಸ್ವಲ್ಪ ಕಡಿಮೆಯಾಯಿತು, ಆದರೆ ಪೂರ್ತಿ ನಿಲ್ಲಲಿಲ್ಲ. ಆದರೆ ಅಪ್ಪ-ಅಮ್ಮನ ಜಗಳ ಜೋರಾಯಿತು. ಅಮ್ಮನಂತೂ ಕೆಮ್ಮಿದ್ದು ಸೀನಿದ್ದಕ್ಕೆಲ್ಲಾ ಗೂಬೆ ಸುಳಿ ಹೋರಿಯೇ ಕಾರಣ ಎಂದು ಎಗರಾಡತೊಡಗಿತು. ‘ತರಬೇಕಾದ್ರೆ ಕಣ್ಣು ಕಾಮಲಿಲ್ವ’ ಎಂದು ಅಮ್ಮನೂ, ‘ನಾನ್ ಸಂಪಾದ್ನೆ ಮಾಡಿದ್ದಿನಿ, ತಂದಿದ್ದಿನಿ ಹೋಗೆಲ ಅವುಳ್ಯಾವಳು’ ಎಂದು ಅಪ್ಪನೂ ವರಾಸರಿ ಮಾಡುತ್ತಿದ್ದರು. ಒಂದು ಸಲವಂತೂ ಮಾತಿಗೆ ಮಾತು ಬೆಳೆದು ಅಪ್ಪ ಜಂತೆಯಲ್ಲಿದ್ದ ಕುಡ್ಲು ತಗೊಂಡು ‘ಪಿಚ್ ಪಿಚ್ಚಿಗೆ ಕತ್ತರಿಸಿಬುಡ್ತೀನಿ’ ಅಂತ ಏರಿ ಹೋಯಿತು. ‘ಕತ್ತುರಿಸ್ತಿಯಾ ಕತ್ತುರಿಸ್ತಿಯಾ ಗಂಗಳದಾಗೆ ಹಿಟ್ನ’ ಎಂದು ಅಮ್ಮ ಥಂಡ ಥಂಡ ಕೂಲ್ ಕೂಲ್ ಆಗಿ ಡಯಲಗ್ ಎಸೆಯಿತು. ಇನ್ನೂ ರೇಗಿದ ಅಪ್ಪ ಪಂಚೆ, ವಸ್ತ್ರ, ಜುಬ್ಬಗಳನ್ನೆಲ್ಲಾ ಕಂಕುಳಲ್ಲಿ ಇರುಕಿಕೊಂಡು ‘ಇನ್ನೊಂದ್ ಸೆಕೆಂಡ್ ಈ ಮನೆಲಿರಲ್ಲ’ ಅಂತಾ ಹೊರಟುಬಿಟ್ಟಿತು. ಸ್ವಲ್ಪ ಹೊತ್ತಷ್ಟೇ. ಮತ್ತೆ ವಾಪಸು. ಹೋರಿಯ ಸೆಳೆತ ಅಂಥಾದ್ದು.

ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ ಆ ಹೋರಿಯು ರಾಗಿ ತಾಳು ತಿನ್ನುತ್ತಲೋ, ಮೆಲುಕು ಹಾಕುತ್ತಲೋ, ಅರೆಗಣ್ಣು ತೆರೆದು ನಿದ್ದೆ ಮಾಡುತ್ತಲೋ ಇರುತ್ತಿತ್ತು. ಕೆಲವೊಮ್ಮೆ ಕಿವಿಗಳನ್ನು ಹಿಂದಕ್ಕೂ ಮುಂದಕ್ಕೂ ಆಡಿಸುತ್ತಾ ಕೇಳಿಸಿಕೊಳ್ಳುತ್ತಿತ್ತು. ಗೂಬೆ ಸುಳಿ ಇರುವುದು ನನಗೋ ಇವರಿಗೋ ಎಂದುಕೊಂಡಿರಲೂ ಸಾಕು.

ತಿಂಗಳುಗಟ್ಟಲೆ ಹೀಗೇ ನಡೆದು ಕೊನೆಗೆ ಹೋರಿಯು ನಾಲ್ಲು ಹಲ್ಲು ಉದುರಿಸಿದಾಗ ಅಪ್ಪ ಅದನ್ನು ಮಾರಾಕಿಬಿಟ್ಟಿತು. ಅಂದರೆ ವಯಸ್ಸಾಯಿತು ಎಂದರ್ಥ. ಸಾಮಾನ್ಯವಾಗಿ ಬೀಜದ ಹೋರಿಗಳೆಂದರೆ ಹಲ್ಲು ಹಾಕಿರಬಾರದು ಅಥವಾ ಎರಡು ಹಲ್ಲು ಹಾಕಿರಬೇಕು. ಅದಾದ ಮೇಲೆ ಅವುಗಳ ಗರ್ಭ ಕಟ್ಟಿಸುವ ಶಕ್ತಿ ಕುಂದುತ್ತದೆ. ಈಶ್ವರನ ಫೋಟೋದಲ್ಲಿರುವ ನಂದಿಯಂತೆ ಸುಂದರವಾಗಿ, ಕಟ್ಟುಮಸ್ತಾಗಿದ್ದ ಅದು ಹೋದಮೇಲೆ ನನಗಂತೂ ಬೇಜಾರಾಯಿತು. ಮನೆ ಮುಂದೆ ಖಾಲಿ-ಖಾಲಿ. ನೋಡಲು ಹೆದರಿಕೆಯಾಗುತ್ತಿದ್ದರೂ ಹಸುಮಕ್ಕಳಿಗೂ ಅದು ಹಾಯುತ್ತಿರಲಿಲ್ಲ, ಒದೆಯುತ್ತಿರಲಿಲ್ಲ. ಕೊಂಬಿನ ಸಂದಿಯಲ್ಲಿ ಕೆರೆದರೆ ಅದಕ್ಕೆ ತುಂಬಾ ಖುಷಿಯಾಗುತ್ತಿತ್ತು.

ಹೋರಿ ಹೋಯ್ತು ಅಂತ ಮನೆಯಲ್ಲಿ ಜಗಳವೇನೂ ಮುಗಿಯಲಿಲ್ಲ. ಹೋರಿ ಬರೋಕೆ ಮುಂಚೆಯೂ ಇತ್ತು, ಅದು ಹೋದ ಮೇಲೂ ಮುಂದುವರಿಯಿತು. ಆದರೆ ಅಪ್ಪ ಮತ್ತೆಂದೂ ಬೀಜದ ಹೋರಿ ಕಟ್ಟಲಿಲ್ಲ.

‍ಲೇಖಕರು Avadhi

June 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: