ಅಪ್ಪ ಎಂಬ ಮಹಾ ಒಗಟು

sibanti padmanabha

ಸಿಬಂತಿ ಪದ್ಮನಾಭ 

‘ಅಯ್ಯೋ ಎಷ್ಟೊಂದು ಜಾಗವನ್ನು ದಂಡ ಮಾಡಿದ್ದಾರೆ ಈ ಪುಣ್ಯಾತ್ಮರು!’ ಅದು ಖಾಲಿ ಸೈಟನ್ನು ನೋಡಿ ಅಪ್ಪ ತೆಗೆದ ಮೊದಲ ಉದ್ಗಾರ. ಜೋಗದ ಜಲಪಾತವನ್ನು ನೋಡಿ ವಿಶ್ವೇಶ್ವರಯ್ಯನವರು ತೆಗೆದ ಉದ್ಗಾರಕ್ಕಿಂತ ಇದು ಏನೇನೂ ಕಮ್ಮಿಯಿರಲಿಲ್ಲ.

ನಗರದ ನಡುವೆ ನಾವು ಬಾಡಿಗೆಗಿದ್ದ ಮನೆಯ ಮಾಲೀಕರದ್ದೇ ಆಗಿತ್ತು ಅದಕ್ಕೆ ಹೊಂದಿಕೊಂಡಂತಿದ್ದ ಈ ಪುಟ್ಟ ಸೈಟು. ಕಳೆ ಬೆಳೆಯಲೆಂದೇ ಮೀಸಲಿಟ್ಟಿದ್ದಾರೇನೋ ಎಂಬಂತಹ ಗೊಂಡಾರಣ್ಯವಾಗಿದ್ದ ಸೈಟು ಪಟ್ಟಣದ ಸಕಲ ಹಂದಿಗಳಿಗೂ ನೆಮ್ಮದಿಯ ಆವಾಸಸ್ಥಾನವಾಗಿತ್ತು. ಅಂದಮೇಲೆ ಅದು ಆ ಭಾಗದ ಅಷ್ಟೂ ನಿವಾಸಿಗಳ ಮನೆಯ ಕಸಮುಸುರೆಗಳನ್ನು ಸುರಿಸಿಕೊಳ್ಳುವ ಉದಾರ ಮನಸ್ಸಿನ ತಿಪ್ಪೆಯೂ ಆಗಿತ್ತು ಎಂದು ಬೇರೆ ಹೇಳಬೇಕಿಲ್ಲ.

‘ಎಂಥಾ ದಡ್ಡ ಸೋಮಾರಿಗಳು ಈ ಜನ? ಜಾಗವನ್ನು ಹೀಗೆ ಹಡ್ಳು ಹಾಕುವ ಬದಲು ಎರಡು ತೊಂಡೆ ಬುಡ ಆದರೂ ಮಾಡಬಾರದಿತ್ತಾ?’ ಅಪ್ಪ ನಮ್ಮೂರಿನಿಂದ ಪರ್ಮನೆಂಟಾಗಿ ಪಟ್ಟಣಕ್ಕೆ ಬಂದ ಮರುದಿನವೇ ಈ ಖಾಲಿ ಸೈಟು ನೋಡಿ ಗೊಣಗಿಕೊಂಡಿದ್ದರು. ಕರುವನ್ನು ಬಿಟ್ಟುಬಂದ  ಪುಣ್ಯಕೋಟಿಯಂತೆ ಹಳ್ಳಿಯ ನಾಲ್ಕು ಎಕರೆ ಹಸುರು ತೋಟವನ್ನು ಕೊಟ್ಟು ಬಂದಿದ್ದ ಅಪ್ಪನಿಗೆ ಕಾಂಕ್ರೀಟು ಕಾಡಿನ ನಡುವೆ ಅಡಗಿದ್ದ ಈ ಖಾಲಿ ಸೈಟು ಚಿನ್ನದ ಗಣಿಯಂತೆಯೇ ಕಂಡಿತ್ತು.

ಇಲ್ಲಿಂದ ಅಲ್ಲಿಯವರೆಗೆ ಒಂದು ಬದನೆ ಸಾಲು, ಪಕ್ಕದಲ್ಲೊಂದು ಅಲಸಂಡೆ ಸಾಲು, ಅದರಾಚೆಗೊಂದು ಹರಿವೆ ಗುಪ್ಪೆ, ಆ ತುದಿಯಲ್ಲಿ ಪಾತ್ರೆ ತೊಳೆದ ನೀರು ಸಂಗ್ರಹವಾಗುವ ಕಡೆ ಒಂದು ತೊಂಡೆ ಬುಡ, ಪಕ್ಕದಲ್ಲೊಂದು ಬಸಳೆ ಚಪ್ಪರ, ಉಳಿದ ಜಾಗದಲ್ಲಿ ಎರಡು ಹಾಗಲ ಬಳ್ಳಿ, ಮತ್ತೊಂದು ಟೊಮೇಟೋ ಗಿಡ… ಅಪ್ಪ ನಿಂತ ನಿಲುವಿನಲ್ಲೇ ಸೈಟಿಗೊಂಡು ಪ್ಲಾನು ತಯಾರಿಸಿದ್ದರು. ಮಾರನೆಯ ದಿನವೇ ಚುಮುಚುಮು ಬೆಳಕು ಹರಿಯುತ್ತಿರಬೇಕಾದರೆ ಅಪ್ಪ ಬಲು ಜತನದಿಂದ ಊರಿನಿಂದ ತಂದಿದ್ದ ಹಾರೆ ಗುದ್ದಲಿ ಕತ್ತಿ ಹೆಗಲಿಗೇರಿಸಿಕೊಂಡು ಆ ಸೈಟಿಗೆ ಪಾದಾರ್ಪಣೆ ಮಾಡಿಯೂ ಆಯಿತು.

‘ನಿನ್ನ ಅಪ್ಪಂಗೆ ಮರುಳು. ಎಂತ ಇವರ ಸ್ವಂತ ಜಾಗವಾ ಅದು? ನಾಳೆ ಅಲ್ಲಿ ಯಾರೋ ಬಂದು ಮನೆ ಕಟ್ಟಿದರೆ ಇವರ ತೊಂಡೆ ಚಪ್ಪರವನ್ನು ಟೆರೇಸಿಗೆ ಸಾಗಿಸುತ್ತಾರಂತಾ?’ ಅಮ್ಮ ಕಿಟಕಿಯಿಂದಲೇ ಹೊರಗೆ ನೋಡಿ ಗೊಣಗಿಕೊಳ್ಳುತ್ತಿದ್ದರು. ‘ಮನೆ ಕಟ್ಟಿಕೊಳ್ಳುವವರು ಕಟ್ಟಿಕೊಳ್ಳಲಿ ಬಿಡು. ನಾವೇನು ಬೇಡ ಅಂತೀವಾ?’ ನಾಳೆಯ ಚಿಂತೆಯೇ ಇಲ್ಲದವರಂತೆ ಅಪ್ಪ ಸೈಟು ನೈರ್ಮಲ್ಯ ಅಭಿಯಾನ ಆರಂಭಿಸಿಯೇಬಿಟ್ಟಿದ್ದರು.

ಅಪ್ಪ ಮೊದಲಿನಿಂದಲೂ ಹಾಗೆಯೇ. ನಾಳೆಯ ಬಗ್ಗೆ ನೂರು ಯೋಚನೆ ಮಾಡಿ ಇಂದು ಮಾಡಬೇಕಾದ ಒಂದಾದರೂ ಕೆಲಸ ಮಾಡದೆ ಉಳಿಸಿಕೊಂಡವರಲ್ಲ. ಎರಡೇ ವರ್ಷಕ್ಕೆ ಅಮ್ಮನನ್ನೂ ಮತ್ತೆ ನಾಲ್ಕು ವರ್ಷಕ್ಕೆ ಅಪ್ಪನನ್ನೂ ಕಳಕೊಂಡು ಯಾರ‍್ಯಾರದೋ ಹಿತ್ತಿಲಲ್ಲಿ ಚಾಕರಿ ಮಾಡಿಕೊಂಡು ಬಂದವರು. ‘ನಿಮ್ಮಪ್ಪ ನಿಮಗೂ ತುಂಬ ಕಥೆ ಹೇಳುತ್ತಿದ್ದರಾ ಅಪ್ಪ?’ ಪ್ರತೀ ರಾತ್ರಿ ಅಪ್ಪ ನನಗಾಗಿ ರಂಗುರಂಗಿನ ಕಥೆಗಳನ್ನು ಹೇಳುತ್ತಿದ್ದರೆ ನಾನು ಹಾಗೆ ಕೇಳುತ್ತಿದ್ದೆ. ‘ನೀವು ತುಂಬ ಯಕ್ಷಗಾನ ನೋಡುತ್ತಿದ್ದಿರಾ ಅಪ್ಪ?’ ರೇಡಿಯೋದಲ್ಲಿ ಪ್ರತೀ ಬುಧವಾರ ಅಪ್ಪ ತಾಳಮದ್ದಳೆ ಹಾಕುತ್ತಿದ್ದರೆ ನಾನು ಹಾಗೆ ಕೇಳುತ್ತಿದ್ದೆ. ‘ನಿಮ್ಮ ಅಪ್ಪ ಕೂಡ ನಿಮ್ಮನ್ನು ಹೀಗೆಯೇ ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿದ್ದರಾ ಅಪ್ಪ?’ ಅವರು ನನ್ನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕಾಡುಹಾದಿ ದಾಟಿ ಆಮೇಲೆ ನೇತ್ರಾವತಿಯ ದಂಡೆಯುದ್ದಕ್ಕೂ ಉರಿಬಿಸಿಲಿನಲ್ಲಿ ಹೆಜ್ಜೆ ಹಾಕಿ ಪೇಟೆಗೆ ಕರೆದುಕೊಂಡುಹೋಗುತ್ತಿರಬೇಕಾದರೆ ನಾನು ಹಾಗೆ ಕೇಳುತ್ತಿದ್ದೆ. ‘ನಿಮಗೆ ಇಂತಹದೇ ಪಾಠ ಪುಸ್ತಕಗಳಿದ್ದವಾ ಅಪ್ಪ?’ ನಾನು ಹೊಸಾ ಪಾಠ ಪುಸ್ತಕಕ್ಕೆ ನೀಟಾಗಿ ಬೈಂಡು ಹಾಕುತ್ತಿರುವುದನ್ನು ಅಪ್ಪ ನೋಡುತ್ತಾ ಕುಳಿತಿದ್ದರೆ ನಾನು ಹಾಗೆ ಕೇಳುತ್ತಿದ್ದೆ.

ಅಪ್ಪ ಮಾತಾಡುತ್ತಿರಲಿಲ್ಲ. ಸುಮ್ಮನೇ ಹೂಂಗುಡುತ್ತಿದ್ದರು ಇಲ್ಲವೇ ಮುಗುಳ್ನಗುತ್ತಿದ್ದರು. ಅಪ್ಪನಿಗೆ ಕಥೆ ಕೇಳುವ ಬಾಲ್ಯವೇ ಇರಲಿಲ್ಲ ಎಂದು ನನಗೆ ಅರ್ಥವೇ ಆಗಿರಲಿಲ್ಲ. ಯಕ್ಷಗಾನ ನೋಡಬಹುದಾದ ಸಮಯದಲ್ಲಿ ಅವರು ಕಣ್ಣಿಗೆ ಎಣ್ಣೆ ಹಚ್ಚಿ ಯಾರದ್ದೋ ಅಡಿಕೆ ತೋಟ ಕಾಯಬೇಕಿತ್ತು ಎಂದು ನನಗೆ ಹೊಳೆದೇ ಇರಲಿಲ್ಲ. ಅಪ್ಪನ ಹೆಗಲಲ್ಲಿ ವಿರಾಜಮಾನವಾಗಿ ಸಾಗಬೇಕಾದ ವಯಸ್ಸಿಗೆ ಅವರು ತಮಗಿಂತ ತೂಕದ ಕಷ್ಟಗಳ ಮೂಟೆಗೆ ಹೆಗಲು ಕೊಡಬೇಕಿತ್ತೆಂದು ತಿಳಿದೇ ಇರಲಿಲ್ಲ. ಪಾಠಪುಸ್ತಕ ಹಿಡಿಯಬೇಕಾದ ಕಾಲಕ್ಕೆ ಧಣಿಯ ಮಕ್ಕಳ ಪಾಟೀಚೀಲಗಳನ್ನು ಹೊತ್ತು ಅಪ್ಪ ನಡೆಯಬೇಕಾಗಿತ್ತು ಎಂದು ನನಗೆ ಗೊತ್ತೇ ಇರಲಿಲ್ಲ.

ಯಾರದೋ ಬದುಕುಗಳನ್ನು ತಮ್ಮ ಬದುಕಿನಂತೆಯೇ ಬದುಕಿದ ಅಪ್ಪನಿಗೆ ಯಾರದೋ ಸೈಟಿನಲ್ಲಿ ತರಕಾರಿ ಸಾಲು ಮಾಡುತ್ತಿರುವುದು ಒಂದು ನಿಷ್ಪ್ರಯೋಜಕ ಕೆಲಸ ಎಂದು ಬಹುಶಃ ಅನಿಸಲೇ ಇಲ್ಲ. ಇಪ್ಪತ್ತೈದು ವರ್ಷ ತಮ್ಮ ರಕ್ತ ಬಸಿದು ಬೆಳೆದ ತೋಟ ಫಲ ಕೊಡುವ ಹೊತ್ತಿಗೆ ಕೈತಪ್ಪಿಹೋದ ಕರಾಳ ನೆನಪನ್ನು ಒಡಲಲ್ಲಿಟ್ಟುಕೊಂಡು ಕ್ಷಣಕ್ಷಣವೂ ಕೊರಗುವ ಅಪ್ಪ ಮತ್ತೆ ತಮ್ಮದಲ್ಲದ ಜಾಗದಲ್ಲಿ ಒಂದು ಹಸುರು ಕನಸನ್ನು ಚಿಗುರಿಸುತ್ತಿದ್ದಾರೆಂದರೆ ಅವರ ನೆಲದ ನಂಟು ಎಷ್ಟು ಗಾಢವಾದದ್ದೆಂಬುದನ್ನು ನನಗೆ ಕೊನೆಗೂ ಅಳೆಯಲಾಗಲೇ ಇಲ್ಲ. ಅದಕ್ಕೇ ಅಪ್ಪ ನನಗೆ ಎಂದೆಂದಿಗೂ ಒಂದು ಮಹಾ ಒಗಟು.

ನೋಡನೋಡುತ್ತಿದ್ದ ಹಾಗೆಯೇ ತಿಪ್ಪೆಗುಂಡಿಯಂತಿದ್ದ ಸೈಟು ಹಸನಾಯಿತು. ಹಸನಾದ ನೆಲದಲ್ಲಿ ಹಸಿರು ಮೊಳೆಯಿತು. ಅಪ್ಪ ಊರಿನಿಂದ ಬರುವಾಗ ಹೆಗಲಿಗೆ ಜೋತುಹಾಕಿಕೊಂಡಿದ್ದ ಚೀಲದೊಳಗೊಂದು ಖಾಲಿ ಪರ್ಸು ಇತ್ತೆಂದು ಮಾತ್ರ ನಮಗೆ ಗೊತ್ತಿತ್ತು. ಅದರೊಳಗೆ ಒಂದಿಷ್ಟು ಕನಸಿನ ಬೀಜಗಳಿದ್ದವೆಂದು ಗಮನಿಸಿಯೇ ಇರಲಿಲ್ಲ. ಖಾಲಿ ಸೈಟಿನಲ್ಲಿ ಹಾಗಲಬಳ್ಳಿ, ಬದನೆ ಗಿಡ, ಹರಿವೆ ರಾಶಿ ಚಿಗುರೊಡೆದಾಗಲೇ ಅದು ಅರ್ಥವಾದದ್ದು.

ಅಯ್ಯೋ ಆ ಬರಡು ಸೈಟಿನಲ್ಲಿ ಏನು ಬೆಳೆಯುತ್ತೀರಿ ಎಂದು ಸುತ್ತಮುತ್ತಲ ಜನ ತಮಾಷೆ ಮಾಡಿದರು. ಅಪ್ಪ ಚಿಂತೆ ಮಾಡಲಿಲ್ಲ. ಅಡುಗೆ ಮನೆಯಿಂದ ಹೊರಹೋಗುತ್ತಿದ್ದ ನೀರಿನ ಪೈಪಿನ ತುದಿಗೊಂದು ಹಳೇ ಬಕೆಟ್ ಇಟ್ಟರು. ದಿನಕ್ಕೆ ಏನಿಲ್ಲವೆಂದರೂ ಏಳೆಂಟು ಬಕೆಟ್ ನೀರು ಯಾವುದಾದರೊಂದು ರೂಪದಲ್ಲಿ ಅಲ್ಲಿ ಹರಿದುಹೋಗುತ್ತದೆ ಎಂದು ಆವಾಗಲೇ ನಾವು ಗಮನಿಸಿದ್ದು. ‘ತರಕಾರಿಯಲ್ಲ, ಒಂದು ಬಾಳೆ ತೋಟವನ್ನೇ ಮಾಡಬಹುದು ಈ ನೀರಿನಲ್ಲಿ’ ಅಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅವರು ರಸ್ತೆಯುದ್ದಕ್ಕೂ ಒಮ್ಮೆ ಓಡಾಡಿ ಬಂದರೆ ಬುಟ್ಟಿ ತುಂಬಾ ಸೆಗಣಿ ಇರುತ್ತಿತ್ತು. ‘ಓಯ್ ನಿಮ್ಮ ಪೇಟೆಯಲ್ಲೂ ಸಾವಯವ ಕೃಷಿ ಮಾಡಬಹುದು ನೋಡು!’ ಅಪ್ಪನ ಮಾತಲ್ಲಿ ಯಾವತ್ತೂ ಹಳೆಯ ಮಧುರ ನೆನಪು.

ಈ ನಡುವೆ ಒಮ್ಮೆ ಅಪ್ಪ ಊರಿಗೆ ಹೋಗಿ ಹಿಂತಿರುಗುವಾಗ ತಲೆಯ ಮೇಲೊಂದು ದೊಡ್ಡ ಹೊರೆ ಇತ್ತು. ಅಪ್ಪ ಊರಲ್ಲಿ ಕಾಡು ಗುಡ್ಡ ಸುತ್ತಿ ಐದಾರು ಅಡಿಯ ಹತ್ತು ಕಂಬಗಳನ್ನೂ ಒಂದಷ್ಟು ಹಸಿ ಬಳ್ಳಿಗಳನ್ನೂ ಕಟ್ಟಿ ತಂದಿದ್ದರು. ಅಯ್ಯೋ ಇದನ್ನೆಲ್ಲ ಯಾಕೆ ಹೊತ್ತುಕೊಂಡು ಬಂದಿರಿ ಎಂದು ಮನೆಮಂದಿ ಸುಸ್ತಾಗಿ ಕುಳಿತಿರಬೇಕಾದರೆ ಅಪ್ಪ, ‘ಈ ಬೀಡಾಡಿ ಹಸುಗಳಿಂದ ಬಚಾವಾಗಬೇಕಲ್ಲ ಮಾರಾಯ್ರೆ… ನನ್ನ ತರಕಾರಿ ತೋಟಕ್ಕೊಂದು ಸಣ್ಣ ಮಟ್ಟಿನ ಬೇಲಿಯಾದರೂ ಹಾಕಬೇಕಲ್ಲ? ನಮ್ಮ ತೊಂಡೆ ಚಪ್ಪರಕ್ಕೆ ನಾಕು ಅಡರು ಕಡಿದಿಟ್ಟಿದ್ದೆ; ಆ ಬಸ್ಸಿನ ಕಂಡಕ್ಟರು ಇಷ್ಟನ್ನಾದರೂ ತರುವುದಕ್ಕೆ ಬಿಟ್ಟದ್ದೇ ಹೆಚ್ಚು’ ಎಂದು ತಮ್ಮ ಕೆಲಸವನ್ನು ಆರಂಭಿಸಿಯೇ ಬಿಟ್ಟಿದ್ದರು.

banana plantainಅಪ್ಪನ ಗಿಡಗಳು ಬಲಿತವು. ಬಳ್ಳಿಗಳು ಅದೇ ಬೇಲಿಯ ಮೇಲೆ ಹಬ್ಬಿದವು. ಹಾಗಲ ಬಳ್ಳಿಯಲ್ಲಿ ಮೊದಲ ಹೂವು ಕಾಣಿಸಿಕೊಂಡ ದಿನ, ಟೊಮೇಟೋ ಗಿಡದಲ್ಲಿ ಮೊದಲ ಹೀಚು ಇಣುಕಿದ ದಿನ ಅಪ್ಪ ಮಗುವಿನಂತೆ ಕಾಣುತ್ತಿದ್ದರು. ಮೊದಲ ಬಾರಿ ಹಾಗಲ ಪಲ್ಯ ಮಾಡಿದ ದಿನ ಅಪ್ಪ ಎರಡು ತುತ್ತು ಹೆಚ್ಚೇ ಉಂಡಿದ್ದರು ಎನಿಸುತ್ತದೆ.

ತೊಂಡೆ ಬಳ್ಳಿ ಚಪ್ಪರ ತುಂಬ ಹಬ್ಬುವ, ಅದೇ ಚಪ್ಪರಕ್ಕೊಂದು ಹೀರೆ ಬಳ್ಳಿ ಜೋಡಿಸುವ ಕನಸನ್ನು ಅಪ್ಪ ಪ್ರತೀಕ್ಷಣ ಕಾಣುತ್ತಿದ್ದರು. ಆದರೆ ಆ ಮುಹೂರ್ತ ಮಾತ್ರ ಬರಲೇ ಇಲ್ಲ. ಬಂದದ್ದು ಆ ಸೈಟಿನಲ್ಲಿ ಮುಂದಿನ ವಾರ ಭೂಮಿಪೂಜೆ ನಡೆಯಲಿದೆ ಎಂಬ ಸುದ್ದಿ. ಈ ಶುಭಸುದ್ದಿ ಒಂದಲ್ಲ ಒಂದುದಿನ ಬಂದೇ ಬರುತ್ತದೆ ಎಂದು ಗೊತ್ತಿದ್ದರೂ ಅಪ್ಪನಿಗೆ ಅದನ್ನು ಅರಗಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಬೆಳೆದು ನಿಂತ ಫಸಲು ಕೈಗೆ ಬರುವ ಮೊದಲೇ ಬೇರೆಯವರ ಪಾಲಾಗುವುದು ಅಪ್ಪನಿಗೆ ಹೊಸತೇನೂ ಆಗಿರಲಿಲ್ಲ. ಆದರೆ ಅಂತಹ ಮತ್ತೊಂದು ಘಟನೆಯನ್ನು ನೋಡುವುದಕ್ಕೆ ಅವರ ಮನಸ್ಸು ಏನೇನೂ ಸಿದ್ಧವಿರಲಿಲ್ಲ. ಅಪ್ಪನ ಬಿಳಿಚಿದ ಮುಖ, ತುಂಬಿದ ಕಣ್ಣು, ಆ ಮಹಾಮೌನಗಳನ್ನು ನಾನೇ ಏಕೆ, ಆ ಸೈಟು ಕೂಡ ಎಂದೂ ಮರೆಯದು. ಮತ್ತೊಂದು ಗಂಟೆಯೊಳಗೆ ತಮ್ಮ ತರಕಾರಿ ತೋಟದ ಒಂದೊಂದು ಹೂವು, ಹೀಚುಕಾಯಿಗಳನ್ನೂ ಬಿಡದೆ ಅಪ್ಪ ಕೊಯ್ದು ತಂದು ಅಡಿಗೆ ಮನೆಯಲ್ಲಿಟ್ಟಿದ್ದರು.

ಆ ಬುಟ್ಟಿಯಲ್ಲಿದ್ದ ಒಂದೊಂದು ಕನಸೂ ಭೂಮಿಯಷ್ಟು ಭಾರವಾಗಿತ್ತು. ಅಪ್ಪನಷ್ಟೇ ಒಗಟಾಗಿತ್ತು.

‍ಲೇಖಕರು Admin

February 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Praveen V Savadi

    ಬರಹ ಮತ್ತು ವಿಷಯ ಎರಡೂ ಇಷ್ಟವಾದವು. ಓದುತ್ತ ಇದ್ದರೆ ಮುಗಿದಿದ್ದೇ ಗೊತ್ತಾಗಲಿಲ್ಲ.. ಅದಕ್ಕಿಂತಲೂ ಮುಖ್ಯವಾಗಿ ನಿಮ್ಮ ತಂದೆಯವರ ಜೀವಸೆಲೆ ಅಪ್ಯಾಯಮಾನವಾಗಿದೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: