ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪನೊಂದಿಗೆ ಸೀದು ಹೋದ ಮನಸ್ಸು

–ಲಲಿತಾ.ಕೆ ಹೊಸಪ್ಯಾಟಿ

ಅವ್ವನ ಕಸೂತಿ ಕೌದಿ

ಹಡೆದವ್ವ ಪೋಣಿಸಿದ್ದು ಕಸವರ ಸೂಜಿಗಣ್ಣು
ಕೌದಿ ಹೊಲಿದು ಸವೆದಿದೆ ಕೈ ಬೆರಳು
ಸೆಳೆದು ತೊಳೆದು ಹರಿದ ಸೀರೆಗಳ ಜೋಡಿಸಿ
ಹಳೆಯದರಲ್ಲೇ ಹೊಂದಿಸಿ ಹೊಲಿದಳು ಇರುಳು

ಲ್ಯಾವಿಗಂಟಿನಲ್ಲಿ ಮನೆಮಂದಿಯೆಲ್ಲ
ತೊಟ್ಟು ಬಿಟ್ಟ ಹಳೆಯ ಅರಿವೆಗಳು
ಕತ್ತರಿಸಿ ತುಂಡುಗಳ ಮುಳ್ಳು ಕಾಣದಂತೆ
ಸಂಸ್ಕಾರ ಕೊಟ್ಟು ಹೊಲಿದಿದ್ದಾಳೆ ಇರುಳು

ಅಪ್ಪನೊಂದಿಗೆ ಸೀದು ಹೋದ ಮನಸ್ಸು
ಚೆಡ್ಡಿ ಕಿಸೆಯಲ್ಲಿ ಸಿಕ್ಕ ಭೋಗ ಕನಸು
ನಿಧಾನವಾಗಿ ಪರಿತಾಪದಲ್ಲೂ ನೇವರಿಸಿ
ಹೂವಾಗಿ ಅರಳಿಸುತ್ತಾಳೆ ಸುಟ್ಟ ಮನಸ್ಸು

ಎಣ್ಣೆ ತೀರಿದ ನಿತ್ರಾಣದಲ್ಲಿ ಹಿರಿಯರು
ಆರಿದ ದೀಪಗಳಂತೆ ಮೂಲೆಗಳಲ್ಲಿ
ಚಳಿಗೆ ಗದಗದ ನಡಗುವಾಗ ತೇಪೆಯ ಕೌದಿ
ಸುಖದುಃಖಗಳಿಗೆ ಮೈಸವರುತ್ತದೆ ಕೈಸೋಕಿ

ಕಪ್ಪುಮೋಡಗಳಂತೆ ನೀರು ಹೊತ್ತು
ಹೊಲಿಯುವ ಕಂಗಳಲ್ಲಿ ಚಡಪಡಿಕೆಯಿಲ್ಲ
ಕೌದಿಯ ಚಿತ್ತಾರಗಳೇ ಪದಗಳಾಗಿ
ಜೋಗುಳ ಹಾಡಿ ತೂಗುತ್ತವಲ್ಲ

ಭಾವ ಮೈದುನ ನಾದಿನಿ ಬಂಧುಗಳು
ಮುರಿದುಕೊಂಡಿದ್ದರು ಸಂಬಂಧ ಎಳೆದೆಳೆದು
ಅನ್ನ ಹಾಕಿ ಬೆಳೆಸಿದ ನಾಯಿಕುನ್ನಿಯು
ಬಾಲ ಅಲ್ಲಾಡಿಸಿ ಸದ್ದಿಲ್ಲದೆ ಕಚ್ಚಿತ್ತು ಕೈಯನು

ಗಂಟಿನ ದಾರದಲ್ಲಿ ನೋವಿನ ಗಾಯ
ನರಳಾಡದೆ ಹೊಲಿದರೆ ನಿತ್ರಾಣವೆ ಮಾಯ
ಮಹಲಿನಲ್ಲಿರುವವರು ನೆಲಕಿಳಿದು ಬಂದು
ಬೆಚ್ಚನೆಯ ಕೌದಿ ಒಯ್ದಿದ್ದಾರೆ ಚಳಿಗಿರಲೆಂದು

ಬಣ್ಣದ ಮಾತು ಬಡಿವಾರ ತಿಳಿಯದವಳು
ಬಣ್ಣವೆಂದರೆ ಕಾಗೆ ಬಂಗಾರದ ಮೆರಗು
ದಾರದ ಚೌಕಟ್ಟಿನಲ್ಲಿ ತ್ಯಾಪಿ ಕಾಣದಂತೆ
ರಂಗಾಗಿಸಿ ಹಾಸಿದ್ದಾಳೆ ಮುದುಡದಂತೆ ಎದುರು

ಗುಬ್ಬಿ ಕಾಲಿನ ಕಸೂತಿಗೆ ಚಿಂದಿಯದೇ ಶಕ್ತಿ
ಒಣಹಾಕಿದ ಕೌದಿಯಲ್ಲಿ ಕಾಳು ಮುಕ್ಕಿ
ಚೀಂವ್ಗುಟ್ಟುತ್ತ ಉಣಿಸಿದವಳ ಸುತ್ತು ಹಾಕಿ
ಮಕ್ಕಳು ಮೊಮ್ಮಕ್ಕಳ ಹಾರೈಸುತ್ತವೆ ಹಕ್ಕಿ

ಅವ್ವನ ಕಸೂತಿ ಕೌದಿ ಕೈಯೊಡ್ಡಿ ಕರೆದವರ ಪಾಲು
ಹಸುಗೂಸಿನ ತೊಟ್ಟಿಲಿಗೂ ಹಾಸಿ ಹೊದೆಯಲು
ಇಡೀ ರಾತ್ರಿ ತಲೆಬಾಗಿ ಸಿಕ್ಕಿಲ್ಲದೆ ಹೊಲಿದಳು
ಕೌದಿ ಎದೆಗೊರಗಿ ಮಲಗಿದರೆ ಅವ್ವನದೆ ಮಡಿಲು.

                 

‍ಲೇಖಕರು Admin

19 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading