ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನುವಾದಿಸಿದಳು ಅವ್ವ

-ದೀಪಾ ಗೋನಾಳ

ಅನುವಾದಕಿ ಅವ್ವ

ಅನುವಾದಿಸಿದಳು ಅವ್ವ
ಜೋಳವನ್ನು ಬಿಸಿಬಿಸಿ ರೊಟ್ಟಿಯಾಗಿ
ಕೆಚ್ಚಲ ಹಾಲನ್ನು ಘಮಗುಡುವ ತುಪ್ಪವಾಗಿ
ಹರಿದ ಸೀರೆಯ ತೂತನ್ನು
ಕೆಂಪು ದಾರದ-ಗುಲಾಬಿಯಾಗಿ
ಅನುವಾದಿಸಿದಳು ಅವ್ವ

ಅನುವಾದಿಸಿದಳು ಅವ್ವ
ನಾದಿನಿಯರ ಸಿಡಿಮಿಡಿಯನ್ನು
ಅತ್ತೆಯ ಅವಸರದ ಮಾತನ್ನು
ಅಪ್ಪನ ಹೊಡೆತವನ್ನು
ಬಿಗಿಹಿಡಿದ ಬಿಕ್ಕುಗಳಾಗಿ
ಅನುವಾದಿಸಿದಳು ಅವ್ವ

ಅನುವಾದಿಸಿದಳು ಅವ್ವ
ಸುಣ್ಣದ ಕಲ್ಲನ್ನು
ಬೆಳದಿಂಗಳ ಸೂಸುವ ಗೋಡೆಗಳಾಗಿ;
ಬಿರಿದ ಹಿಂಬಡಗಳನ್ನು
ದುಡಿಮೆಯ ಪ್ರತಿಮೆಯಾಗಿ;
ಅನುವಾದಿಸಿದಳು ಅವ್ವ ಅನುದಿನದ
ದುಮ್ಮಾನಗಳನು ಸವಾಲಾಗಿ

ಅವಳ ಪ್ರತಿ ಅನುವಾದದ ಹಿಂದೆ
ಭಾವಕೋಶಗಳ ಸೀಮಾತೀತ ಶಬ್ದಗಳು
ಮೌನವಾಗಿ ಮಲಗಿದ್ದವು
ಅವಳ ಪ್ರತಿ ಅನುವಾದದ ಹಿಂದೆ
ಬಚ್ಚಲು ಮನೆಯಲ್ಲಿ ಸವಾರಿ ಹೊರಟ –
ಕಣ್ಣೀರಿನ ರಥವಿತ್ತು
ಅವಳ ಪ್ರತಿ ಅನುವಾದದ ಹಿಂದೆ
ಜೀವಕೋಶದೊಳಗಿನ ನೋವು
ಚೆಲುವಾಗಿ ಅರಳಿತ್ತು

‍ಲೇಖಕರು Admin

1 October, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading