ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿತಾ ಪಿ.ತಾಕೊಡೆ ಕವಿತೆ: ಭಾರವಾಗಿದೆ ಬಳ್ಳಿ

ಅನಿತಾ ಪಿ.ತಾಕೊಡೆ

ಹಸಿಮಣ್ಣ ಮೆದುಗರ್ಭದಲಿ ಕಾದು

ಬಯಕೆಗಣ್ಣಲಿ ಹದವಾಗಿ ಬಿರಿದು 

ಬಯಲು ಬಾನಿನ ನಡುವೆ ಕಾನನದ ಕೈಹಿಡಿದು  

ಬೆಳೆದು ನಿಂತ ಬಳ್ಳಿ

ಛಲದ ನೆಲದಲಿ ಹೊರಳಿ

ಹೊನ್ನಿಗನ ನಡೆದಾರಿಯಲಿ ಅರಳಿ 

ಕಡುಹಸಿರಿನ ಮಿಡಿಗಾಯಿ ಮಿಡಿದು 

ಕಾಯಿಯಾದರೂ ಭಾರವಾಗಲಿಲ್ಲ ಬಳ್ಳಿ

ಎಳೆ ಕಾಯಿ ಮಾಗಿ ಹೊಸದಾರಿಯಲಿ ಸಾಗಿ 

ಬಂಧಗಳ ಹೊಸೆದು ಬದುಕು ಹಸನಾಗುತಿರಲು

ಬಳ್ಳಿಯ ಮೊಗದಲೂ ಹರುಷದ ಹೊನಲು

ಬಲಿತ ಕಾಯಿ ಸಂಸಾರದ ಜೋಲಿಯಲಿ ಜೀಕುತಿರಲು

ಇನ್ನೂ ದಣಿದಿರದ ತಣಿದಿರದ ಬಯಕೆಗಳು

ಒಡಗೂಡಲು ಕಾಯುತಿರಲು 

ಬಿಸಿಯುಸಿರಿನ ಏರಿಳಿತಕೆ ಯಾರು ದಿಟ್ಟಿಯಿಟ್ಟರೋ

ಕುಸಿಯಿತು ಕಾಯಿ ಕಸಿಯಿತು ಜೀವ…!

ಬಳ್ಳಿ ಭಾರವಾಗಿದೆ ಕಾಲನ ಉರುಳಿಗೆ ಸಿಲುಕಿ

ವಾಸ್ತವವು ಮಸಿಯಾಗಿ ನೆನಪುಗಳು ಹಸಿಯಾಗಿ

ವಿದಾಯದ ಕಂಗಳಲಿ ಹನಿಯೊಡೆಯುತಿದೆ

ಶಬ್ದಾರ್ಥಗಳ ಹಂಗಿರದ ಎದೆ ಭಾಷೆಯಲಿ 

ಬೇಗುದಿಯ ದನಿಯೊಂದು ಕಾಡುತಿದೆ

ಹತ್ತೂರು ಹೊತ್ತು ತಿರುಗಿದ ಬಳ್ಳಿ

ತನ್ನುಸಿರಿಗೆ ತನ್ನದೇ ಹೆಸರಿಟ್ಟ ಬಳ್ಳಿ

ಬಾರವಾಗಿದೆ ಕಾಯಿಯಿಲ್ಲದೆ

‍ಲೇಖಕರು avadhi

5 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading