ಅನಾಮಿಕಾ @ ಹ್ಯಾಂಡ್ ಪೋಸ್ಟ್: ‘ಒಲವು ಅಕ್ಷಯವಾಗಲಿ ಕೂಸೇ…’

ಈ ಕಂಪ್ಯೂಟರ್ ನಲ್ಲಿ ವಾಟ್ಸ್ಯಾಪ್ ಉಪಯೋಗಿಸುವುದು ಸ್ವಲ್ಪ ತರ್ಲೆ ಕೆಲಸ ಎಂದು ಗೊತ್ತಿದೆ. ಆದರೂ ಮಾಡುತ್ತೇನೆ. ಮೊನ್ನೆ ಕೂಡ ಸ್ನೇಹಿತನ ಮಗುವಿಗೆ ಮೂತಿ ತುಂಬ ಮುತ್ತಂಟಿಸಿಕೊಂಡ ಎಮೋಜಿ ಮೂಲಕ ಮುದ್ದು ಕಳುಹಿಸಲು ಹೋಗಿ, ಅದು ಮತ್ತೊಂದು ಚಾಟ್ ನಲ್ಲಿ ಅಂಟಿ ಒಲವು ಬೆಳಗಿ ನಕ್ಷತ್ರಿಸಿತು!

ಚಿಕ್ಕವಳಿದ್ದಾಗಿನಿಂದ ಇವತ್ತಿನವರೆಗೂ ಎದ್ದಾಗಿನಿಂದ ಮಲಗುವವರೆಗೆ ನನ್ನದು ಎಲ್ಲ ವಿಷಯಗಳಲ್ಲೂ ಅದೇ ಮಂಗತನ. ನನ್ನ ಮನಸಿನ ಸ್ವಭಾವವನ್ನು ಅರಿತಿರುವ, ಅದರ ಬಹುಮುಖ ಚೇಷ್ಟೆಗಳನ್ನು ಕಂಡಿದ್ದರಿಂದಲೇ ಮನುಷ್ಯ ಕಪಿಕುಲದಿಂದ ಅವತರಿಸಿದನೆಂದು ಹೇಳುವ ವಿಕಾಸವಾದವನ್ನು ನಾನು ಬೇಷರತ್ತಾಗಿ ಒಪ್ಪಿದ್ದೇನೆ.

ಇದರಿಂದಾಗಿ ಅತಿ ಹೆಚ್ಚು ತೊಂದರೆ ಸಿಲುಕಿದ್ದು ದೊಡ್ಡಕ್ಕ. ಅವಳು ಮದುವೆಯಾಗಿ ಹೋಗುವವರೆಗೂ ನನ್ನ ಊಟ, ತಿಂಡಿ ನಿದ್ದೆ ಜವಾಬ್ದಾರಿ ಹೊತ್ತಿದ್ದಳು. ಹಾಸಿಗೆ ಹಿಡಿದು; ಪಡಸಾಲೆಯ ಮೂಲೆಯಲ್ಲಿ ನಿಂತು, “ಅವ್ವನ ಮಗ್ಗಲಾಗ ಮಲಗ್ತಿಯೋ, ಕೊನೆಗೋ,” ಎಂದು ಕೇಳುವುದು ಒಂದೇ ಒಂದು ರಾತ್ರಿ ತಪ್ಪದೇ ನಡೆಯುತ್ತಿದ್ದ ದೃಶ್ಯ ಮನೆಯಲ್ಲಿ.

ನಾನು, “ಊಹೂಂ, ಕೆಳಗಡೆ ಒಲ್ಲೆ. ತೂಗುಮಂಚದ ಮೇಲೆ ಕೂತು ಟಿವಿ ನೋಡ್ತಿರೋ ಅಪ್ಪನ ತೊಡಿ ಮ್ಯಾಲೆ ಮಲಗ್ತೀನಿ,” ಒಂದು ನುಲಿಯುತ್ತಿದ್ದೆ. ಆ ಪ್ರಕಾರ ನಡೆಯುತ್ತಿತ್ತು. ಮಧ್ಯರಾತ್ರಿ ಉಯ್ಯಾಲೆಯಿಂದ ಕೆಳಗೆ ಬಿದ್ದು, ಎದ್ದು ಅವ್ವ ಮತ್ತು ಸಣ್ಣಕ್ಕನ ನಡುವೆ ತೂರಿಕೊಂಡು; ಹೊದೆಯುವುದಕ್ಕಾಗಿ ಗುದ್ದಾಡಿ, ಗುಬ್ಬಿ ಮರಿಯಂತೆ ತುದಿಯಲ್ಲಿ ಮಲಗಿರುತ್ತಿದ್ದ ದೊಡ್ಡಕ್ಕನಿಗೆ ಬಲವಂತವಾಗಿ ನೆಲದ ಮೇಲೆ ಮಲಗಿಸುವ ವ್ರತ ಮಾಡಿಸುತ್ತಿದ್ದೆ.

ಬೆಳಗ್ಗೆ ಅಣ್ಣ-ಅಕ್ಕಂದಿರು ಎದ್ದು, ಮಲಗಿದ ಹಾಸಿಗೆಯಲ್ಲೇ ನನ್ನ ಸುರುಳಿ ಸುತ್ತಿ, ಎತ್ತಿ ಮೇಲೆ ಹಾಕಿ ಮನೆಗೆಲಸ ಮುಗಿಸಿದರೂ ನಾ ಕಣ್ಣು ಬಿಟ್ಟಿರುತ್ತಿರಲಿಲ್ಲ. ಮುಖದ ಮೇಲಿನ ಹೊದಿಕೆಯನ್ನು ಹಗೂರಕ್ಕೆ ಸರಿಸಿದರೆ, ಒಂದು ಕಣ್ಣು ತೆರೆದು, ಒಂದು ಮುಚ್ಚಿ ಏನು ಎನ್ನುವಂತೆ ನೋಡುತ್ತಿದ್ದವಳನ್ನು, “ಯಾಕೆ ಒಂದೇ ಲೈಟ್ ಆನ್ ಆಗಿದೆ, ಸಾಲಿಗೆ ಹೋಗಂಗಿಲ್ಲೇನು ಕೂಸೇ?” ಎನ್ನುತ್ತಿದ್ದರು ಅಪ್ಪ.

ಯಾರಾದರೂ ಬಚ್ಚಲಿಗೆ ಎಳೆದೊಯ್ಯುವವರೆಗೆ, “ಎರಡೇ ನಿಮಿಷ, ಏಳ್ತೀನಿ,” ಎನ್ನುತ್ತ ಮುಸುಗೆಳೆದು ಮಲಗಿದಲ್ಲೇ ಜೀಕುತ್ತಿರುತ್ತಿದ್ದೆ. ಅಲ್ಲಿಂದ ಶಾಲೆಗೆ ಹೋಗುವವರೆಗೆ ಮನೆಯಲ್ಲಿದ್ದವರ ಕೈಗೆ ಬಿಡುವಿಲ್ಲ ಕೆಲಸ. ಮನೆಯಿಂದ ಶಾಲೆ ತಲುಪುವವರೆಗಿನ ದಾರಿಗುಂಟ ಅವ್ವ ಬಾಚಣಿಗೆ, ಕಾಕಂದಿರು ಸ್ಕೂಲ್ ಬ್ಯಾಗ್, ಬೂಟು-ಸಾಕ್ಸ್, ಅಪ್ಪ ಬಿಸ್ಕೆಟ್-ಚಾಕಲೇಟ್ ಹಿಡಿದುಕೊಂಡ ಮೆರೆವಣಿಗೆ ಸಾಗುತ್ತಿತ್ತು.

ಇನ್ನೇನು ಮನೆಯಿಂದ ನನ್ನನ್ನ ಬೀದಿಗೇ ತಳ್ಳಿದರು ಎನ್ನುವಂತೆ ಗೊಳೋ ಎನ್ನುತ್ತಿದ್ದವಳ ಮುಂಗೈ ಸವರುತ್ತ ಅಳಬೇಡ್ವೆ ಎಂದು ಅಣ್ಣ ಸಮಾಧಾನ ಮಾಡುತ್ತಿದ್ದ. ಹಾಗೂ ಹೀಗೂ ನನ್ನನ್ನ ಶಾಲೆಯ ಒಳಕ್ಕೆ ತಳ್ಳಿ ಸಮಾಧಾನದ ಉಸಿರು ಬಿಡುತ್ತಿದ್ದರು ಎಲ್ಲರೂ.

ಊಟಕ್ಕೆ ಬಂದಾಗಲೂ ಅಷ್ಟೇ. ಬೂಟ್ಸ್ ಕಳಚುವ ಮುನ್ನವೇ, “ಹಸಿವು…” ಎನ್ನುತ್ತಿದ್ದೆ. ಅವ್ವ, “ಅಲ್ಲಿಗೆ ಹೋಗಿ ಬಾ,” ಎನ್ನುತ್ತಿದ್ದಳು. “ನನಗೆ ಬಂದಿಲ್ಲ,” ಎನ್ನುತ್ತ, ಕೈಗೆ ನೀರು ಮುಟ್ಟಿಸಿ, ಗಬಗಬ ನಾಲ್ಕು ತುತ್ತು ತಿನ್ನುವುದರಲ್ಲಿ ನೆತ್ತಿಗೆ ಹತ್ತಿಸಿಕೊಂಡು, ಕುಡಿದ ನೀರು ಗಂಟಲಿಗೆ ಇಳಿವ ಮುನ್ನವೇ ವಾಷ್ ರೂಮಿಗೆ ಹೋಗಲು ಅವಸರಿಸುತ್ತಿದ್ದೆ.

ಎಂಜಲು ಕೈ ತೊಳೆಯದೆ, ಯೂನಿಫಾರಂ ಸಲ್ವಾರಿನ ಕಸಿಯ ಗಂಟನ್ನು ಜಾರಿಸಲು ಹೋಗಿ, ಕಗ್ಗಂಟು ಮಾಡಿಕೊಂಡು ಕಮೀಜ್ ಮೇಲೆತ್ತಿ, “ಬಿಚ್ಚೇ ಇದನ್ನ,” ಎಂದು ಅಕ್ಕಂದಿರ ಮುಂದೆ ನಿಲ್ಲುತ್ತಿದ್ದೆ. ನನ್ನ ಈ ಎಲ್ಲ ಅವತಾರ, ಅವಾಂತರಗಳನ್ನೆಲ್ಲ ನೋಡಿ ಅಪ್ಪ-ಅವ್ವ, ‘ನಾವು ಬೆಳೆಸುತ್ತಿರುವುದು ಮಗಳನ್ನಲ್ಲ, ಮಂಗವನ್ನ. ಬಾಲವೊಂದಿಲ್ಲ!’ ಎಂದು ಸಮಾಧಾನ ಮಾಡಿಕೊಂಡಿರಬೇಕು.

ಏನೇ ಕೀಟಲೆ, ತುಂಟತನ ಇದ್ದರೂ, ಎಲ್ಲ ಹೊತ್ತಿನಲ್ಲೂ ನಿಯಮ, ಕಟ್ಟಳೆಗಳನ್ನು ಮುರಿದು ಮೀರುವ ಜಾಯಮಾನದ ನನಗೆ ಯಾರನ್ನಾದರೂ ಏನನ್ನಾದರೂ ಕೇಳಬೇಕು ಎಂದರೆ ಜೀವ ಬಾಯಿಗೆ ಬರುತ್ತದೆ.

ಒಮ್ಮೆ ಅಪರೂಪಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಸೈಕ್ಲೋನ್ ಎಫೆಕ್ಟ್ ನಿಂದ ಜೋರು ಮಳೆ. ಸ್ನಾನಕ್ಕೆ ಹೋದರೆ ಬಿಸಿ ನೀರು ಮಾತ್ರ ಇದೆ. ತಣ್ಣೀರು ಹಂಡೆ ಖಾಲಿ. ಮನೆಯಲ್ಲಿರುವವರನ್ನು ಕರೆದು ಕೇಳಬೇಕಲ್ಲ ಎಂದು ಬಿಸಿನೀರಿನಲ್ಲಿ ಟವೆಲ್ ತೋಯ್ಸಿ-ತೋಯ್ಸಿ ಮೈ ಒರೆಸಿಕೊಳ್ಳುವ ಸ್ನಾನ ಮಾಡಿದ್ದೆ.

ಶಾಲೆಯಲ್ಲಿ ಕಿರುಬೆರೆಳೆತ್ತಿ ಟೀಚರ್ ಪರವಾನಗಿ ಪಡೆಯಬೇಕಿದ್ದುದಕ್ಕಾಗಿಯೇ ನಾನು ಹೋಗುತ್ತಿರಲಿಲ್ಲ. ಮತ್ತು, ಆ ಕಾರಣಕ್ಕಾಗಿಯೇ ಈಗ ನನ್ನ ಶಾಲೆಯ ಮಕ್ಕಳು ಅದಕ್ಕಾಗಿ ಯಾರ ಅನುಮತಿ ಪಡೆಯಬೇಕಿಲ್ಲದ ಸೌಕರ್ಯ ಒದಗಿಸಿದ್ದೇನೆ! (ಇದರ ಕಥೆ ಇನ್ನೊಮ್ಮೆ)

ಅದಕ್ಕೇ ಅನಿಸತ್ತೆ ನಾನು ಒಲವಿನ ವಿಷಯದಲ್ಲೂ ಸ್ವಯಂ ಅನುಕೂಲ ಕಲ್ಪಿಸಿಕೊಂಡಿರುವುದು ಮತ್ತು ಅಪ್ಪನ ತೊಡೆಯ ಮೇಲೆ ತಲೆಯಿಟ್ಟು ಮಲಗಿದವಳು ಇಷ್ಟವಾದವರ ಕನಸಿನಂಗಳಕ್ಕೂ ಗೆಜ್ಜೆ ಗಲಿಗಲಿಸುತ್ತ ನಡೆಯುವುದು. ಬದುಕಿನ ಚಲನೆಯಲ್ಲಿ ನಾ ಇಟ್ಟ ನಂಬಿಕೆ ನೋಡಿಯೇ ಅಪ್ಪ, “ನೀನು, ನಿದ್ದೆ ಮಂಪರಿನಲ್ಲಿ ಮಗ್ಗುಲು ಬದಲಾಯಿಸುವಾಗ ಕನಸೂ ಬದಲಿಸುತ್ತೀಯೋ ಹೇಗೆ?” ಎಂದು ರೇಗಿಸುವುದು.

ಜಗತ್ತು ನೀಡಿದ ಅನುಭವಕ್ಕಿಂತ ಹೆಚ್ಚಿನ ಅನುಭೂತಿ ಮತ್ತು ಹೊಸತನ್ನು ನನಗೆ ಕೊಟ್ಟಿದ್ದೇ ಒಲವು. ಇದರಿಂದಾಗಿಯೇ ನನಗೆ ಒಲವಿನ ಅಖಂಡತೆ ಹಾಗೂ ವ್ಯಕ್ತಿಗಳ ವೈವಿಧ್ಯ ಗುರುತಿಸಲು ಸಾಧ್ಯವಾಗಿದ್ದು. ಎಷ್ಟೋ ಸಲ ನನಗೆ ಬೇಕಿರುವುದು ಏನು ಎನ್ನುವುದು ನನಗೇ ಗೊತ್ತಿರದಿದ್ದಾಗಲೂ, ನಿನಗೀಗ ಇದರ ಅವಶ್ಯಕತೆ ಇದೆ ಎಂದು ಬೇಕಾಗಿದ್ದನ್ನು ಸಣ್ಣವಳ ಮಡಿಲಿಗೇ ತಂದು ಸುರಿವ ಜಗತ್ಪ್ರೀತಿಯ ಕರುಣೆಗೆ ನಾನು ಯಾವತ್ತೂ ಋಣಿ.

ಸಿಕ್ಕು ಆಸಕ್ತಿ ಕಳೆದುಕೊಳ್ಳದೆ, ಸಿಗದೆ ಕುದಿಯುವ ಒಲವೆಂದರೆ ನನಗೆ ಜೀವ ಎಂದಾಗಲೆಲ್ಲ ಅನಂತದಲ್ಲಿ ಸಂಕ್ರಮಿಸುವ ಒಲವು ಅಂತರಾಳಕ್ಕಿಳಿದು ಸಂಕ್ರಮಣವಾಗಿದೆ. ಹರೆಯದ ಅವಸರವಿಲ್ಲದ ಸಿಹಿ ಒಗರಿನಂತ ಈ ವಯಸ್ಸಿನ ಏಕಾಂತಕ್ಕೆ ಒಲವೊಂದು ಬೇಕಿತ್ತಲ್ಲ ಎಂದು ಜೀವ ಬಯಸಿತಷ್ಟೇ, ಆಕಸ್ಮಿಕಗಳು ಇಷ್ಟು ಅರ್ಥಪೂರ್ಣವಾಗಿ ಎಲ್ಲಿಯಾದರೂ ಸಂಭವಿಸಲು ಸಾಧ್ಯವೇ ಎನ್ನುವಂತೆ ಒಲವು ನನ್ನಲ್ಲಿಗೆ ಬಂದೇ ಬಿಟ್ಟಿತು!

ಎದುರು ಕೂತ ಒಲವು, “ಮಾಡುವಾಟವನೆಲ್ಲ ಮಾಡಿಯಾಡಿ ಮೈಸೊರಗಿ ಬೇಸತ್ತು/ ಈ ಗಳಿಗೆ ನಿನಗಾಗಿ ದೇಶವಿನಿತನು ಬಿಡದೆ ಕಾಲವೆಲ್ಲವನಲೆದು/ ಕಾತರದಿ ಹಾತೊರೆಯುತ್ತಿದ್ದೆ, ಕಾಯುತ್ತಿದ್ದೆ/ ಅಂತೂ ಬಂದೆಯಲ್ಲ ನನ್ನೆದೆಗೆ/ ಕೊನೆಯಿಲ್ಲದೆನ್ನೆಯ ನಿರೀಕ್ಷಣೆಯ ನಯನದಲಿ ಹನಿ ತುಂಬಿ ಕಂಪಿಸುತ್ತಿಹುದಾದರೂ/ ನೀನು ಸಿಕ್ಕೆ ಸಿಗುತ್ತಿ ಎನ್ನುವ ಭರವಸೆಯಿತ್ತಲ್ಲ ಹೀಗಾಗಿ ನನಗೆ ಅವಸರವಿರಲಿಲ್ಲ/ ನೀನು ಬೇಗ ಬರಲಿಲ್ಲವೆಂದು ನೋವಿದ್ದರೂ ಕೋಪವಿಲ್ಲ,” ಎಂದು ನಿವೇದಿಸುವ ಮೂಲಕ ನಾನು ಎಂದೋ ಕನಸು ಕಂಡ ಕವಿಸಮಯದಂತಹ ಕ್ಷಣವೊಂದು ನನಸಾಯಿತು.

ದೋಣಿಯೊಳಗಿನ ದೀಪ ಚೆಲ್ಲುತ್ತಿದ್ದ ಬೆಳಕು ನದಿಯ ಮೇಲೆ ಪ್ರತಿಫಲಿಸುತಿತ್ತು. ಜಗವನಾಳುವ ಒಲವು ಮೈದೋರಿದ ಪರಿಗೆ ಬೆರಗು ಮೌನದೊಳಗಿದ್ದೆ. ಮಾತಿಗಿಂತ ನೋಟದ ಭಾಷೆ ಕೃತಿಗೆ ಸಮೀಪ ಮತ್ತು ಸ್ಪಷ್ಟ ಎನ್ನುವಂತೆ ಕಣ್ಣಲ್ಲೇ ಕರೆದ ಒಲವಿನ ತೋಳುಗಳಲ್ಲಿ ಬಂಧಿಯಾದೆ. ಬಿಡುವಿದ್ದಾಗ ಯಾವಾಗಲಾದರೊಮ್ಮೆ ಗಮನಿಸು, ನನ್ನದೆಯ ಮೇಲಿನ ನಿನ್ನ ಪುಟ್ಟ ಕೈಗಳ ಗುರುತುಗಳನ್ನು ಎನ್ನುತ್ತ ಒಲವು ನನ್ನ ನೆತ್ತಿಗೆ ಮುತ್ತಿಡುವ ಮೂಲಕ ಇಬ್ಬರಿಗೂ ಮಗುತನ ಬಂಧುತ್ವದ ಅಭೇದದೀಕ್ಷೆಯೊಂದು ತಂತಾನೇ ಪ್ರಾಪ್ತವಾಯಿತು.

ಮೈಗೆ ಕತ್ತಲಿದ್ದರೂ ಮನದಲ್ಲಿ ಬೆಳಕಿದ್ದಿದ್ದರಿಂದ ಪ್ರಶ್ನೆ ಕೇಳಿಕೊಳ್ಳದೆ, ಉತ್ತರ ಹೇಳದೆ ಹಣೆಗೆ ಹಣೆ ಹಚ್ಚಿದ ಹೊತ್ತು ಅನಿಸಿಕೆಗಳೆಲ್ಲ ನಿವೇದನೆಗಳಾಗಿದ್ದವು. ಒಲವಋತುವಿನ ನೆರಳು ಬೆಳಕಿನಾಟದಲ್ಲಿ ನಿಶ್ಯಬ್ಧವಾಗಿ ಕುಳಿತ ಗಳಿಗೆ. ಸುಳಿದು ಸುತ್ತುತ್ತಿದ್ದ ಕುಳಿರ್ಗಾಳಿ ನನ್ನಿಂದ ಆಕ್ಷಿ-ಆಕ್ಷಿ ಎನಿಸುವುದಕ್ಕೂ, ‘ಒಲವು ಅಕ್ಷಯವಾಗಲಿ ಕೂಸೇ…’ ಎನ್ನುವ ಸಂದೇಶಕ್ಕೆ ಫೋನು ಚಿಲಿಪಿಲಿಗುಡುವುದಕ್ಕೂ ಸರಿ ಹೋಯಿತು.

ನನ್ನನ್ನೂ, ಒಲವನ್ನೂ ನೋಡಿ ನೋಡಿ ನಾಚುತ್ತಿದ್ದ ಬೆಳದಿಂಗಳು, ದಿಢೀರೆಂದು ಕಣ್ಣು ಪಳಪಳಿಸಿ ದಾರಿಗೆ ಅಡ್ಡಲಾಗಿ ಓಡಿಹೋದ ನರಿ, ಅಮೃತ ಸುರಿಯುತ್ತಿದ್ದ ರಾತ್ರಿ, -ಈ ಮೂವರಲ್ಲಿ ನನ್ನ ಬೇಟದ ತೋಟ ಮತ್ತು ಅದರ ಹಿನ್ನೋಟ ಕುರಿತು ಅಪ್ಪನಿಗೆ ಮಾಹಿತಿ ಕೊಟ್ಟವರು ಯಾರು ಎನ್ನುವುದರ ಬಗ್ಗೆ ವಿಚಾರಣೆ ಆಗಬೇಕಿದೆ ಈಗ ಡಿಟೇಲಾಗಿ!

‍ಲೇಖಕರು avadhi

February 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: