‘ಅವಹೇಳನಕಾರಿ ಹೇಳಿಕೆ ನೀಡಿದ’ ರಂಗಾಯಣ ನಿರ್ದೇಶಕರ ಮೇಲೆ ಕ್ರಮಕ್ಕೆ ಆಗ್ರಹ

ಸಮಗ್ರತೆಗೆ ಧಕ್ಕೆ

ದಿನಾಂಕ : 14.02.2020

ಇಂದ,
ಸುಮತಿ. ಕೆ.ಆರ್.
ಹಿರಿಯ ರಂಗ ನಿರ್ದೇಶಕಿ.
#28, ಆರ್.ಸಿ.ಇ. ಲೇಔಟ್,
ಪ್ರಶಾಂತ ನಗರ, ಬೋಗಾದಿ 2ನೇ ಕ್ರಾಸ್
2ನೇ ಹಂತ, ಮೈಸೂರು.570026

ಗೆ,
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ
ವಿಧಾನ ಸೌಧ, ಬೆಂಗಳೂರು
ಕರ್ನಾಟಕ ರಾಜ್ಯ.

ಮಾನ್ಯರೇ,

ವಿಷಯ :

ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪನವರು ಮಾಧ್ಯಮಗಳಲ್ಲಿ [ಆಂದೋಲನ ದಿನಪತ್ರಿಕೆ ಮೈಸೂರು : 13.02.2020, ಗುರುವಾರ]

ವಿನಾಕಾರಣ ನನ್ನ ಮತ್ತು ನನ್ನ ಮಗನ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.

ಅವರ ಮೇಲೆ ಕ್ರಮ ಕೈಗೊಳ್ಳಲು ಕೋರಿ,

ಈ ಜಗತ್ತಿನಲ್ಲಿ ಯಾವುದೇ ಸಂಘರ್ಷ ನಡೆಯಲಿ, ಅದು ಸಾಮಾಜಿಕ ಸಂಘರ್ಷ, ರಾಜಕೀಯ ಸಂಘರ್ಷ, ಧಾರ್ಮಿಕ ಸಂಘರ್ಷ ಹಾಗೆಯೇ ವೈಯಕ್ತಿಕ ಮಟ್ಟದಲ್ಲಿ ನಡೆಯುವ ಕಿತ್ತಾಟವಾಗಲಿ ಕೊನೆಗೆ ಬಂದು ನಿಲ್ಲುವುದು ಮಹಿಳೆಯ ವಿಚಾರಕ್ಕೆ. ಎದುರಾಳಿಗೆ ಸಂಬಂಧಿಸಿದ ಕುಟುಂಬದ ಮಹಿಳಾ ಸದಸ್ಯರನ್ನು ಘಾಸಿಗೊಳಿಸುವ (ಮಾನಸಿಕವಾಗಿ/ದೈಹಿಕವಾಗಿ) ಮೂಲಕ ಮೇಲುಗೈ ಸಾಧಿಸಿದೆನೆಂದು ಬೀಗುವುದು ಪುರುಷನ ಅಹಂಕಾರದ ಅಸಹ್ಯ ಪ್ರದರ್ಶನವಾಗಿದ್ದು, ಇದು ದಿನೇ ದಿನೇ ಅತಿರೇಕಕ್ಕೆ ಹೋಗುತ್ತಿದೆ. ಪುರುಷ ಪ್ರಧಾನ ಸಮಾಜದ ಮೌಲ್ಯಗಳು ಮಹಿಳೆಯ ಸಾಧನೆಗಳನ್ನು, ಅವಳ ಸಾಮರ್ಥ್ಯವನ್ನು, ಅವಳು ಗಳಿಸಿದ ಸ್ಥಾನಮಾನಗಳನ್ನು, ಸಮಯ ಬಂದಾಗಲೆಲ್ಲ ಪುರುಷರೊಟ್ಟಿಗೆ ತಳುಕುಹಾಕುವ ಮೂಲಕ ಅವಳ ಪ್ರತಿಭೆ, ಸಾಮರ್ಥ್ಯಗಳನ್ನೇ ಪ್ರಶ್ನೆ ಮಾಡುತ್ತಾ, ಅವಮಾನಿಸುತ್ತಾ, ಅವಳನ್ನು ವಸ್ತುವಾಗಿಸುವ, ಗುರಾಣಿಯಾಗಿಸಿಕೊಳ್ಳುವ ಮೂಲಕ ಅವಳ ಸಮಗ್ರತೆಗೇ ಸವಾಲೆಸೆಯುವ ಪರಿಪಾಠ ಇಂದು ನಿನ್ನೆಯದಲ್ಲ.

ಅದನ್ನೇ ಮಾನ್ಯ ಶ್ರೀ. ಅಡ್ಡಂಡ ಕಾರ್ಯಪ್ಪನವರು ಆಂದೋಲನ ದಿನಪತ್ರಿಕೆಯಲ್ಲಿ [13.2.2020] ನಮ್ಮ ಕುರಿತು ವಿನಾಕಾರಣವಾಗಿ ಅವಹೇಳನಕಾರಿ ಹೇಳಿಕೆ ಕೊಡುವುದರ ಮೂಲಕ ಯಶಸ್ವಿಯಾಗಿ ನಿರ್ವಹಿಸುತಿದ್ದಾರೆ.

ಮೂಲಭೂತವಾಗಿ ರಂಗಭೂಮಿ ಅಸಮಾನತೆಯನ್ನು ತೊಡೆದು ಹಾಕಲು ಇರುವ ಒಂದು ಶಕ್ತಿಶಾಲಿ ಮಾಧ್ಯಮ. ಈ ಮಾಧ್ಯಮದಲ್ಲಿ ನಾನು ಕಳೆದ 45 ವರ್ಷಗಳಿಂದ ಬದುಕನ್ನೇ ಅರ್ಪಿಸಿಕೊಂಡು ಕೆಲಸ ಮಾಡುತ್ತಿದ್ದೇನೆ ಹಾಗೂ ನಮ್ಮ ಇಡೀ ಕುಟುಂಬವೇ ಕಲಾವಿದರ ಕುಟುಂಬ ಎಂಬುದು ಕನ್ನಡ ನಾಡಿನ ಜನತೆಗೆ ತಿಳಿಯದ ವಿಷಯವೇನಲ್ಲ.

ರಾಷ್ಟ್ರೀಯ ನಾಟಕ ಶಾಲೆ ಹಾಗೂ ನೀನಾಸಂ ಪಧವೀಧರೆಯಾದ ನಾನು 2000ನೇ ವರ್ಷದಲ್ಲಿ ಶ್ರೀ ಪ್ರಸನ್ನರ ನೇತೃತ್ವದಲ್ಲಿ ನಡೆದ ಮೊದಲ ರಾಷ್ಟ್ರೀಯ ನಾಟಕೋತ್ಸವ ‘ಅಕ್ಕ’ದಲ್ಲಿ ಅಕ್ಕಮಹಾದೇವಿ ವಚನಗಳನ್ನಾಧರಿಸಿದ ‘ಕಲ್ಲರಳಿ ಹೂವಾಗಿ’ ನಾಟಕ ನಿರ್ದೇಶಿಸಿ, ಪ್ರದರ್ಶಿಸಿ ಸಂಭಾವನೆ ಪಡೆದಿರುತ್ತೇನೆ. ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಶ್ರೀ ಜಯಶಂಕರ ಪ್ರಸಾದರ “ಧೃವಸ್ವಾಮಿನಿ” ನಾಟಕ ನಿರ್ದೇಶಿಸಿ, ಅದಕ್ಕೂ ಸಂಭಾವನೆ ಪಡೆದಿರುತ್ತೇನೆ. ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಂಡು ಎಲ್ಲರಂತೆ ನಾನೂ ಸಂಭಾವನೆ ಪಡೆದಿರುತ್ತೇನೆ. ರಂಗಶಿಕ್ಷಣ ಕೇಂದ್ರದ ಪರೀಕ್ಷಾ ಮಂಡಳಿಯ ಸದಸ್ಯೆಯಾಗಿ, ಉತ್ತರ ಪತ್ರಿಕೆ ಮೌಲ್ಯಮಾಪಕಳಾಗಿಯೂ ಸಂಭಾವನೆ ಪಡೆದಿರುತ್ತೇನೆ. ಹಾಗೆಯೇ ನನ್ನ ನಿರೀಕ್ಷೆಯಷ್ಟು ಸಂಭಾವನೆ ಸಿಗುವುದಿಲ್ಲವೆಂದಾಗ ನಿರ್ದೇಶಕರೊಬ್ಬರು ನೀಡಿದ ನಿರ್ದೇಶನ ಜವಬ್ದಾರಿಯನ್ನು ಒಪ್ಪಿಕೊಳ್ಳದೇ ನಯವಾಗಿ ತಿರಸ್ಕರಿದ ಸಂದರ್ಭವೂ ಉಂಟು.

ಮೇಲಿನ ಕೆಲವು ಉದಾಹರಣೆಗಳೆಲ್ಲವೂ ಶ್ರೀ. ಜನಾರ್ಧನ್ ರವರು ನಿರ್ದೇಶಕರಲ್ಲದಿದ್ದಾಗ ನಡೆದ ಕೆಲವು ಉಲ್ಲೇಖಗಳು. ಒಬ್ಬ ಹಿರಿಯ ಕಲಾವಿದೆಯಾಗಿ ರಂಗಾಯಣ ನನ್ನನ್ನು ಗುರುತಿಸಿ ಇಷ್ಟೊಂದು ಗೌರವಯುತವಾಗಿ ಬಳಸಿಕೊಂಡ ಉದಾಹರಣೆಗಳಿದ್ದು, ಕಾರ್ಯಪ್ಪನವರು ಯಾವ ಆಯಾಮದಲ್ಲಿ ನನ್ನ ಸಾಮರ್ಥ್ಯ, ಪದವಿ, ಅನುಭವಗಳನ್ನು ಮರೆತು, ಇದೆಲ್ಲವನ್ನೂ ತಮ್ಮ ಕಾಮಾಲೆಯ ಕಣ್ಣಿನಿಂದ ನೋಡಿದರು!!

ಶ್ರೀ ಜನಾರ್ಧನ್ ರವರು ನಿರ್ದೇಶಕರಾಗಿದ್ದಾಗ ಕಾಲೇಜು ರಂಗೋತ್ಸವದಲ್ಲಿ ರಂಗಾಯಣದಲ್ಲಿ ನಾಟಕ ಪ್ರದರ್ಶಿಸುವ ಅವಕಾಶ ಬಿಟ್ಟರೆ ಇನ್ನಾವುದೇ ಸಂಭಾವನೆಯನ್ನು ನಾವು ಪಡೆದುಕೊಂಡಿರುವುದಿಲ್ಲ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಸ್ಥಳೀಯ ಹಿರಿಯ ರಂಗ ನಿರ್ದೇಶಕಿಯಾಗಿ, ಮರ್ಯಾದೆ ಹತ್ಯೆಯನ್ನು ವಿರೋಧಿಸುವ, ಮಾನವ ಪ್ರೀತಿಯ ಅನನ್ಯತೆಯನ್ನು ಸಾರುವ ಪಿ. ಲಂಕೇಶರ ಕಥೆಯಾದ ‘ಕಲ್ಲು ಕರಗುವ ಸಮಯ’ ನಾಟಕದ ಪ್ರದರ್ಶನಕ್ಕೆ ರಂಗಾಯಣದ ಆಯ್ಕೆಯ ಮಾನದಂಡದ ಪ್ರಕಾರವೇ ಅವಕಾಶ ದೊರೆತಿದ್ದು, ಅದರ ನಿಯಮಾವಳಿಗಳ ಪ್ರಕಾರವೇ ನನಗೂ ಸಂಭಾವನೆ ದೊರೆತಿರುತ್ತದೆ. ಈ ನೆಲೆಯಲ್ಲಿ ಸಂಬಂಧಪಟ್ಟವರಲ್ಲಿ ನನ್ನ ಪ್ರಶ್ನೆ; ಒಬ್ಬ ಅನುಭವೀ ರಂಗನಿರ್ದೇಶಕಿಯಾಗಿ ಅವಕಾಶ ಪಡೆದುಕೊಂಡ ನನ್ನನ್ನು ಜನಾರ್ಧನರವರ ಪತ್ನಿಯಾಗಿ ಅವಕಾಶ ಹಾಗೂ ಸಂಭಾವನೆಯನ್ನು ಪಡೆದೆನೆಂದು ಮಾಧ್ಯಮಗಳಲ್ಲಿ ಬಿಂಬಿಸಿ ನನ್ನ ತೇಜೋವಧೆ ಮಾಡಿ ಅಪಮಾನಿಸಿ ನನ್ನ ಸಮಗ್ರತೆಗೆ ಧಕ್ಕೆ ತಂದಿರುತ್ತಾರೆ. ಇದು ಯಾವ ನ್ಯಾಯ?

ಇನ್ನು ನಮ್ಮ ಮಗ ಶ್ರೀ ಚಿಂತನ ವಿಕಾಸ. ಜೆ. ಇವರ ಕುರಿತು ನಾಡಿನ ಜನಕ್ಕೆ ತಿಳಿಯದ್ದು ಏನೂ ಇಲ್ಲ. ಕನ್ನಡ ನಾಡಿನ ಜನ ತಮ್ಮವನೆಂದು ಸಂಭ್ರಮ ಪಟ್ಟು ಸನ್ಮಾನಿಸಿದ್ದಾರೆ. ಅವನ ಪ್ರತಿಭೆಯನ್ನು ಪುರಸ್ಕರಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಾರೆ. ಶ್ರೀ ಜನಾರ್ಧನ್ ರವರು ರಂಗಾಯಣದ ನಿರ್ದೇಶಕರಾಗಿದ್ದಾಗ ಶೇಕ್ಸ್ ಪಿಯರ್ ಕುರಿತಾದ ಬಹುರೂಪಿ ನಾಟಕೋತ್ಸವದಲ್ಲಿ ಶೇಕ್ಸ್ ಪಿಯರ್ ಕನ್ನಡ ಸಾನೆಟ್ಟುಗಳಿಗೆ ಸಂಗೀತ ನಿರ್ದೇಶನ ಮಾಡಿ ಮೈಸೂರಿನ ಗೆಳೆಯರೊಂದಿಗೆ ಪ್ರಸ್ತುತಪಡಿಸಿ, ಉತ್ಸವಕ್ಕೆ ಹೊಸ ಆಯಾಮ ನೀಡಿದ್ದು ಮೈಸೂರಿನ ಜನ ಮರೆತಿರಲಿಕ್ಕಿಲ್ಲ! ಇನ್ನು ಸೂಫಿ ಸಂತರ ಕುರಿತಾಗಿ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸೆಮಿನಾರ್ ನಲ್ಲಿ ಶರೀಫರ ಹಾಡನ್ನು ಹಾಡಲು ಆಹ್ವಾನಿತನಾಗಿದ್ದು, ಆಯೋಜಕರ ಕೋರಿಕೆಯ ಮೇರೆಗೆ ಶರೀಫರ ಕುರಿತಾಗಿ ವಿದ್ವತ್ಪೂರ್ಣ ಉಪನ್ಯಾಸಕೊಟ್ಟು ಅಭಿನಂದನೆ ಪಡೆದುಕೊಂಡ ಚಿಂತನ್, ರಂಗಾಯಣದಿಂದ ಆಹ್ವಾನಿತನಾಗಿ ಶರೀಫರ ಹಾಡು ಹಾಗೂ ವಚನಗಳನ್ನು ಪ್ರಸ್ತುತ ಪಡಿಸಿ, ನಿಯಮಾವಳಿಗಳಂತೆ ಸಂಭಾವನೆ ಪಡೆದರೆ, ಅಪ್ಪ ಮಗನಿಗೆ ಕೊಟ್ಟ ಸಂಭಾವನೆ ಎಂದು ಅಪಮಾನಿಸುವುದು ಯಾವ ರೀತಿಯಿಂದ ರಂಗಾಯಣದ ನಿರ್ದೇಶಕರಿಗೆ ಸರಿಯೆನಿಸಿತೋ ಗೊತ್ತಿಲ್ಲ !! ಈಗಿನ ರಂಗಾಯಣ ನಿರ್ದೇಶಕರ ದುರ್ಬಲ ನಾಲಗೆಯ ಅಪಹಾಸ್ಯದ ಹೇಳಿಕೆಗಳಿಗೆ ರಂಗಾಯಣ ಆಡಳಿತವರ್ಗವೂ ಜವಬ್ದಾರಿಯನ್ನು ಹೊರುತ್ತದೆಯೇ ?

ವಾಸ್ತವ ನೆಲೆಗಟ್ಟಿನಲ್ಲಿ ಜನಾರ್ಧನ್ ರವರು ಎತ್ತಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದಾಗ ಹೆಂಡತಿ, ಮಗನನ್ನು ಎಳೆದು ತಂದು ವೈಯಕ್ತಿಕವಾಗಿ ಅವಹೇಳನ ಮಾಡುವ ಮೂಲಕ ತನ್ನನ್ನು ತಾನು ಮರೆಮಾಡಿಕೊಂಡು, ತಾನು ಸಾಚಾ ಎಂದು ತೋರಿಸಿಕೊಳ್ಳುವ ಮನಸ್ಥಿತಿ ವ್ಯಕ್ತಿತ್ವವೊಂದರ ಪತನ ಎನ್ನದೇ ಬೇರೆ ದಾರಿಯಿಲ್ಲ.

ಕರ್ನಾಟಕದ ಹಿರಿಯ ರಂಗನಿರ್ದೇಶಕಿಯಾದ ನಾನು ಸುಮತಿ ಕೆ ಆರ್. ಹಾಗೂ ಖ್ಯಾತ ಜನಪದ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರ ಹಿನ್ನೆಲೆ ಗಾಯಕ, ಸಂಗೀತ ಸಂಯೋಜಕರಾದ ಚಿಂತನ್ ವಿಕಾಸ್. ಜೆ, ಇವರನ್ನು ಜನಾರ್ಧನ್ ರವರ ಹೆಂಡತಿ ಹಾಗೂ ಮಗ ಎನ್ನುವ ಕಾರಣಕ್ಕೆ ಸಂಭಾವನೆ ಪಡೆದಿದ್ದೇವೆಂದು ಮಾಧ್ಯಮದಲ್ಲಿ ವಿನಾಕಾರಣ ಹೇಳಿಕೆ ನೀಡುವ ಮೂಲಕ ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪನವರು ಸಾರ್ವಜನಿಕವಾಗಿ ನಮ್ಮನ್ನು ಅಪಮಾನಿಸಿ ನಮ್ಮ ಘನತೆಗೆ ಕುಂದುಂಟು ಮಾಡಿದ್ದಾರೆ. ನಮ್ಮ ಸಮಗ್ರತೆಗೆ ಧಕ್ಕೆ ತರುವ ಮೂಲಕ ನಮಗೆ ಮಾನಸಿಕವಾಗಿ ಆಘಾತ ಹಾಗೂ ನೋವುಂಟು ಮಾಡಿದ್ದಾರೆ. ಇಂಥಹ ಅನುಚಿತ ವರ್ತನೆ ತೋರುವ ಮೂಲಕ ತಮ್ಮ ಹೊಣೆಗೇಡಿತನವನ್ನು ಮೆರೆದಿದ್ದಾರೆ. ಕರ್ನಾಟಕ ಸರ್ಕಾರದ ಹೆಮ್ಮೆಯ ಸಾಂಸ್ಕೃತಿಕ ಸಂಸ್ಥೆಯಾದ ರಂಗಾಣದ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಯಲು ಬೇಕಾದ ಘನತೆಯನ್ನು ಹೊಂದಿಲ್ಲದ ಕಾರ್ಯಪ್ಪನವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.

ವಂದನೆಗಳೊಂದಿಗೆ

ತಮ್ಮ ವಿಶ್ವಾಸಿ

ಸುಮತಿ. ಕೆ,ಆರ್,

ಪ್ರತಿಗಳು :
1. ಸಚಿವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
2. ನಿರ್ದೇಶಕರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.
3. ಸದಸ್ಯರುಗಳು. ರಂಗಸಮಾಜ, ರಂಗಾಯಣ.
4. ಜಿಲ್ಲಾಧಿಕಾರಿಗಳು. ಮೈಸೂರು ಜಿಲ್ಲೆ.
5. ಆಂದೋಲನ ದಿನಪತ್ರಿಕೆ.

‍ಲೇಖಕರು avadhi

February 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ವಸಂತ್ ಮೈಸೂರು

    ಬಿಜೆಪಿಯ ಸಾಂಸ್ಕೃತಿಕ ರಾಜಕಾರಣಕ್ಕೆ ರಂಗಾಯಣದಂತಹ ಸಂಸ್ಥೆಗಳ ಬಳಕೆ

    ಕರ್ನಾಟಕದ ಪ್ರತಿಷ್ಠಿತ ರಂಗಸಂಸ್ಥೆ ರಂಗಾಯಣ ರಾಜಕೀಯ ಸಿದ್ದಾಂತಗಳಿಗೆ ಸಂಘರ್ಷಕ್ಕೆ ಒಳಗಾಗುತ್ತಿರುವುದು ಅಂತಕಕಾರಿ. ರಂಗ ಭೀಷ್ಮ ಬಿ.ವಿ.ಕಾರಂತರಿಂದ ಆರಂಭವಾದ ರಂಗಾಯಣವನ್ನು ಅನೇಕ ದಿಗ್ಗಜ ರಂಗ ತಜ್ಜರು ಮುನ್ನೆಡೆಸಿದ್ದಾರೆ. ಅವರ ಸೈದ್ದಾಂತಿಕ ಬದ್ದತೆ ಯಾವುದೇ ಇರಬಹುದು ಅದರೆ ಅವರು ರಂಗಾಯಣದಲ್ಲಿ ತಮ್ಮ ಸೈದ್ದಾಂತಿಕ ರಾಜಕೀಯ ಒಲವುಗಳನ್ನು ಪ್ರಚಾರ ಪಡಿಸಲು ಬಳಸಿರಲಿಲ್ಲ. ಎಲ್ಲಾ ರೀತಿಯ ಜನ ಪರ ಜೀವ ಪರ ಚಿಂತನೆಗಳಿಗೆ ಅವಕಾಶ ಕಲ್ಪಿಸಿದ್ದರು. ಬಹುರೂಪಿ ಕಾರ್ಯಕ್ರಮವನ್ನು ರೂಪಿಸಿದ ಪ್ರಸನ್ನರವರು ಸೇರಿದಂತೆ ಸಿ. ಬಸವಲಿಂಗಯ್ಯ, ಚಿದಂಬರ ರಾವ್ ಜಂಬೆ, ಲಿಂಗದೇವರು ಹಳೆಮನೆ, ಮತ್ತು ಜನ್ನಿಯವರು ಇವರಾರೂ ಯಾವ ರಾಜಕೀಯ ಪಕ್ಷಗಳ ಅಡಿಯಾಳುಗಳಂತೆ ಕಾರ್ಯನಿರ್ವಹಿಸಲಿಲ್ಲ. ತಮ್ಮ ಮಿತಿಯಲ್ಲಿ ರಂಗಾಯಣದ ಘನತೆಯನ್ನು ಹೆಚ್ಚಿಸಿದವರು. ಎಲ್ಲಾ ರೀತಿಯ ಚಿಂತನೆಗಳಿಗೆ ಪ್ರಯೋಗಗಳಿಗೆ ರಂಗಾಯಣವನ್ನು ಒಂದು ಭೂಮಿಕೆಯಾಗಿ ಬಳಸಿದವರು.

    ಅದರೆ ಈಗ ಅಡ್ಡಂಡ ಕಾರ್ಯಪ್ಪನವರನ್ನು ನಿರ್ದೇಶಕರನ್ನಾಗಿ ಮಾಡಿ ಇದನ್ನು ಮತ್ತೊಂದು ಬಲಪಂಥೀಯ ಅಡೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಡ್ಡಂಡ ಕಾರ್ಯಪ್ಪನವರು ತಾನು ರಂಗಭೂಮಿಯಲ್ಲಿ ಸಾಕಷ್ಟು ದುಡಿದಿದ್ದೇನೆ ಎಂದರು ಅವರು ಬಿಜೆಪಿ ಪಕ್ಷದ ವಕ್ತಾರಿಕೆಯನ್ನು ಮಾಡಿಕೊಂಡುಬಂದವರು. ಈಗ ಅದನ್ನು ರಂಗಾಯಣದ ನಿರ್ದೇಶಕರಾಗಿ ಮುಂದುವರೆಸಿದ್ದಾರೆ‌. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವ ಮಾನ್ಯ ಸಿ.ಟಿ. ರವಿಯವರ ಕುಮ್ಮಕ್ಕು ಇರುವುದು ಕಾಣುತ್ತಿದ್ದೆ. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ನಕ್ಸಲ್ ಬೆಂಬಲಿಗರೆಂದು ಬಿಂಬಿಸಿ ಚಿಕ್ಕಮಗಳೂರಿನ ಸಾಹಿತ್ಯ ಪರಿಷತ್ತಿಗೆ ಸಮ್ಮೇಳನ ನೆಡೆಸಲು ಸಾಹಿತ್ಯ ಪರಿಷತ್ತಿನ ಅನುದಾನ ಸಿಗದಂತೆ ನೋಡಿಕೊಂಡವರು. ಈಗ ಅನೇಕ ಬಲಪಂಥೀಯರು ರಂಗಾಯಣದ ಹಿಂದಿನ ನಿರ್ದೇಶಕರು ನಕ್ಸಲ್ ಬೆಂಬಲಿಗರೆಂದು ಹೇಳುತ್ತಿದ್ದಾರೆ.

    ಬಿಜೆಪಿ ಮತ್ತು ಆರ್ ಎಸ್ ಎಸ್ ಮುಸ್ಲಿಂರನ್ನು ನಿರಂತರ ವಿರೋಧಿಸಿಕೊಂಡು ಬಂದವರು ಅದರ ಮುಂದುವರಿಕೆಯಾಗಿ ಅಡ್ಡಂಡ ಕಾರ್ಯಪ್ಪನವರು ಕೊಡಗಿನ ಹಿನ್ನಲೆ ಇಟ್ಟಿಕೊಂಡು ನೂರಾರು ವರ್ಷಗಳ ಹಿಂದೆ ನೆಡೆದ ಘಟನೆಗಳನ್ನು ಉಲ್ಲೇಖಿಸಿ ಟಿಪ್ಪುವನ್ನು ಟೀಕಿಸುವ ನೆಪದಲ್ಲಿ ಮುಸ್ಲಿಂ ವಿರೋಧಿ ಧೋರಣೆಯನ್ನು ಮುಂದುವರೆಸಿದ್ದಾರೆ. ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯುತ್ತಿರುವ ರಂಗಾಯಣದಂತಹ ಸಂಸ್ಥೆಗಳನ್ನು ರಾಜಕೀಯ ಪುಡಾರಿಕೆ ಮಾಡಿಕೊಂಡು ಬಂದಿರುವ ಜನರ ಕೈಗೆ ನೀಡಿ ಆರ್ ಎಸ್ ಎಸ್ ತನ್ನ ಸೈದ್ಧಾಂತಿಕ ಅಜೆಂಡಾಗಳನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದ್ದೆ.

    ವಂದನೆಗಳೊಂದಿಗೆ
    ವಸಂತ್
    ಮೈಸೂರು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: