ಅನಾಮಿಕಾ @ ಹ್ಯಾಂಡ್ ಪೋಸ್ಟ್: ‘ರಂಗ’ನ್ನು ನಾನು ಬದುಕಿಗೆ ಅಳವಡಿಸಿಕೊಂಡೆ!

ಮಣ್ಣಿನೆದೆಯಲಿ ಬಣ್ಣ ಕಂಡೆನು…

ನಮ್ಮೂರಲ್ಲಿ ಹೋಳಿ ಹುಣ್ಣಿಮೆ ದಿನ ಓಕುಳಿಯಾಡುವುದಿಲ್ಲ. ಹುಣ್ಣಿಮೆಯಾದ ಐದನೆಯ ದಿನ ರಂಗಪಂಚಮಿ. ಆವತ್ತೆ ಬಣ್ಣ.

ಈ ಓಕುಳಿ, ಬಣ್ಣ, ಕಾಮನ ಹಬ್ಬಕ್ಕಿಂತ ನನಗೆ ರಂಗಪಂಚಮಿ ತುಂಬ ಇಷ್ಟವಾಗುವ ಪದ. ಈ ಪದಕ್ಕೆ ಒಂದು ವಿಶೇಷತೆಯಿದೆ. ಸೂಫಿ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಎರಡು ರಚನೆಗಳನ್ನು ಹಾಡಿಯೇ ಹಾಡುತ್ತಾರೆ. ಒಂದು, ಪರ್ಶಿಯನ್ ಭಾಷೆಯಲ್ಲಿರುವ ‘ಮನ್ ಉನ್ ತೊ ಮೌಲಾ…’ ಎರಡನೆಯದು, ಅಮೀರ್ ಖುಸ್ರೋ ಸ್ವತಃ ರಚಿಸಿ ಹೆಸರಿಟ್ಟ ‘ರಂಗ್’. ‘ಆಜ್ ರಂಗ್ ಹೈ ಜೀ…’ – ಮೊತ್ತ ಮೊದಲ ಕವಾಲಿಗಳಲ್ಲೊಂದು. ಸೂಫಿ ಸಂಗೀತದೊಳಗೆ ಬಂದಿರುವ ಈ ಶಬ್ದ ನಾನಾ ವಿಧದ ಪ್ರಸ್ತುತಿ ಕಲೆಗಳಲ್ಲಿ ಬಳಕೆಯಾಗುವ ರೀತಿಯಲ್ಲಿಯೇ ನಾನಾ ಅರ್ಥ ಪಡೆಯುತ್ತದೆ. ರಂಗಭೂಮಿ, ರಂಗಕರ್ಮಿ, ರಂಗಶೀರ್ಷ, ರಂಗಪೀಠ – ಹೀಗೆ ರಂಗು ರಂಗ ಮುಂತಾದವು ಎಷ್ಟು ಮಹತ್ವದ ಕಲ್ಪನೆಗಳು? ಈ ‘ರಂಗ’ನ್ನು ಸೂಫಿಗಳು ತಮ್ಮ ಸಂಗೀತಕ್ಕೆ ಅಳವಡಿಸಿಕೊಂಡರು ನಾನು ಬದುಕಿಗೆ ಅಳವಡಿಸಿಕೊಂಡೆ!

ಎಷ್ಟೊ ವರ್ಷಗಳ ನಂತರ ನಾನು ಹುಟ್ಟಿದ ರಂಗಪಂಚಮಿ, ವಾರ, ತಾರೀಖು ಎಲ್ಲವೂ ಒಂದೆ ದಿನ ಬಂದಿದೆ ಎಂದು ನನ್ನ ತಲೆಯ ಮೇಲೆ ನಾನೆ ಕಿರೀಟವಿಟ್ಟುಕೊಂಡು ಸ್ವಲ್ಪ ಜಂಭದಿಂದ ಓಡಾಡುತ್ತಿದ್ದೇನೆ. ಇದಕ್ಕೆ ಇನ್ನು ಒಂದು ಕಾರಣ ಇದೆ. ನನ್ನ ಬಾಲ್ಯ ಸ್ನೇಹಿತರಲ್ಲಿ ಮೂವರು ಇದೆ ದಿನ ಹುಟ್ಟಿದ್ದು. ಹೊಸ ವರ್ಷ, ಹಬ್ಬಗಳಿಗೆ ಶುಭ ಕೋರಿದರೆ ನಿಮಗೂ… ಎನ್ನುವುದು ರೂಢಿ. ಆದರೆ ಹುಟ್ಟುಹಬ್ಬಕ್ಕೆ ಹಾರೈಸಿದಾಗ ಸೇಮ್ ಟು ಯು ಎನ್ನುವ ಸೌಭಾಗ್ಯ ಎಷ್ಟು ಜನಕ್ಕಿರುತ್ತದೆ?

ನನ್ನ ಓದಿಗೆ ಹಣ ಸಹಾಯ, ಸಹಜ ಕೃಷಿ, ಹೈನುಗಾರಿಕೆಯಂತಹ ಎಲ್ಲ ಹುಚ್ಚಾಟಗಳಿಗೂ ಸಾಥ್ ಕೊಟ್ಟು, ಕೆಣಕಿದವರಿಗೆ ನಾಲಕ್ ಬಿಗದ್ ಬಾ ನಾವು ನೋಡ್ಕೋತೀವಿ ಎನ್ನುತ್ತ ನನ್ನನ್ನು ಗಲಿ ಕೀ ಗೂಂಡಿಯಂತೆ ಬೆಳೆಸಿದ್ದು ಸ್ನೇಹಿತರೆ. ಪ್ರತಿ ವರ್ಷ ತಿಂಗಳ ಮುಂಚೆಯೆ ಎಲ್ಲರ ಕರೆ ಸಂದೇಶಗಳು ಈ ಸಲ ಹುಟ್ಟುಹಬ್ಬಕ್ಕೆ ಏನು ಬೇಕು ಎಂದು. ನನ್ನ ಬಳಿಯಿರುವ ಫೋನು, ಬ್ಯಾಗು, ಬಕೆಟ್, ಜಗ್, ಮಗ್, ಯೋಗಾ ಮ್ಯಾಟಿನಿಂದ ಹಿಡಿದು ನಿಂಬೆ ಹಿಂಡುವ ಸ್ಕ್ವೀಜರ್ ವರೆಗೆ ಎಲ್ಲವು ಅವರ ಉಡುಗೊರೆಗಳೆ.

ಹಿಂದೊಮ್ಮೆ ನಾನು ಕೇಳಿದ ನಿಂಬೆ ಸ್ಕ್ವೀಜರ್ ಆನ್ ಲೈನಿನಲ್ಲಿ ಬಂದು ಕೈ ಸೇರಿದ ಮೇಲೆ ಟ್ರಯಲ್ ನೋಡಿ, ಕಾನ್ಫರೆನ್ಸ್ ಕರೆಯಲ್ಲಿ, ಸ್ಕ್ವೀಜರ್ ನಿಂಬೆಹಣ್ಣನ್ನು ಎಷ್ಟು ಚೆನ್ನಾಗಿ ಹಿಂಡುತ್ತದೆ ಅಂದ್ರೆ ಅಂತ ಅವರ ಆಯ್ಕೆಯನ್ನು ಪ್ರಶಂಸಿಸುತ್ತಿದ್ದೆ. ಅದಕ್ಕೆ ಉತ್ತರ: ಎಲ್ಲರ ಜೀವ ಹಿಂಡಿ ಹಿಂಡಿ ನಿನಗೆ ರೂಢಿ ಇದೆಯಲ್ಲ, ಅದಕ್ಕೆ ನಿಂಬೆಯನ್ನ ಚೆನ್ನಾಗಿಯೆ ಹಿಂಡುವೆ ಬಿಡು!

ಉಸಿರಾಡುವುದಕ್ಕಿಂತ ಹೆಚ್ಚು ಸಲ ನಾನು ಸ್ನೇಹಿತರನ್ನು ನೆನೆಯುವುದನ್ನು ನೋಡಿ ಹಳೆಯ ಆಫೀಸಿನಲ್ಲಿ ನನ್ನ ಹಿಂದೆ ಆಡಿಕೊಂಡು ನಕ್ಕವರಿದ್ದಾರೆ. ಸಹಜವೆ, ಇಂಥದ್ದೊಂದು ಸ್ನೇಹವನ್ನು ಅವರು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇರ್ಲಿ. ಜೀವ ಹಿಂಡುವುದು ಬಹುಶಃ ನನ್ನ ಜನ್ಮಕ್ಕಟಿಂದ್ದು ಅನಿಸುತ್ತದೆ. ಈ ವಿಷಯದಲ್ಲಿ ಅಪ್ಪ-ಅವ್ವನಿಗಂತೂ ಬಿಡುಗಡೆಯಿಲ್ಲ. ಆದರೆ ಅಜ್ಜ (ಅಪ್ಪನ ಅಪ್ಪ), ಕಾಕಂದಿರನ್ನು ನೆನೆಸಿಕೊಂಡರೆ ಪಾಪ ಎನಿಸುತ್ತದೆ.

ಒಂದು ಸಲ ಅಜ್ಜ ಅಂಗಡಿ ಕರೆದುಕೊಂಡು ಹೋಗಿದ್ದರು. ಎತ್ತಿಕೊಂಡು ರಸ್ತೆ ದಾಟಿಸಲಿಲ್ಲ ಅಂತ ಹೋ ಎನ್ನುತ್ತಿದ್ದೆ. ಬಾಗಿ ರಮಿಸುತ್ತಿದ್ದ ಅಜ್ಜನಿಗೆ ನಾನು ಏನು ಮಾಡಿರಬಹುದು? ಬನಿಯನ್ ಮೇಲೆ ಎರಡು ಗುಂಡಿ ತೆರೆದ ಅಂಗಿ ಹಾಕಿ, ಅದರ ಮೇಲೆ ಯಾವಾಗಲೂ ಸ್ವಲ್ಪ ದೊಗಳೆ ಸ್ವೆಟರ್ ಹಾಕಿಕೊಂಡೆ ಇರುತ್ತಿದ್ದ ಅಜ್ಜನ ಎದೆಯೊಳಗೆ ಕೈತೂರಿಸಿ ಹೊಟ್ಟೆಗೆ ಕಚಗುಳಿಯಿಟ್ಟು ಪಾಯಿಜಾಮದ ಕಸಿ ಬಿಚ್ಚಲು ಹವಣಿಸಿದ್ದು ನೆನಪಿಸಿಕೊಂಡರೆ ಈಗಲೂ ನಾಚಿಕೆಯಿಂದ ಮುಖ ಮುಚ್ಚಿಕೊಳ್ಳುವಂತಾಗುತ್ತದೆ ನನಗೆ.

ಕಾಕಂದಿರ ಕತೆಯಂತೂ ಕೇಳುವುದೇ ಬೇಡ. ಒಮ್ಮೆ ಸಣ್ಣಕಾಕ ಶರ್ಟಿಗೆ ಹೊಲಿಗೆ ಹಾಕುತ್ತ ಕೂತಿದ್ದರು. ಅದಾದ ಮೇಲೆ ಪ್ಯಾಂಟ್ ಹಾಕಿಕೊಳ್ಳುವಾಗ ದಾರ ಹೇಗೊ ಅವರ ಸೊಂಟಕ್ಕೆ ಸಿಕ್ಕಿಕೊಂಡಿತ್ತು. ನಡೆದಾಡಿದ ಹಾಗೆಲ್ಲ ಪಡಸಾಲೆಯ ತುಂಬ ಉರುಳಾಡುತ್ತಿದ್ದ ರೀಲನ್ನು ನೋಡಿ ನಾನು ಸ್ಟೌ ಮೇಲಿನ ಪಾಪ್ ಕಾರ್ನ್ ನಂತೆ ತಕಪಕ ಕುಣಿಯುತ್ತಿದ್ದೆ ಸಂತೋಷದಿಂದ. ನನ್ನ ನಗು ನೋಡಿ ತಮ್ಮ ಕೆಲಸ ಮುಂದೂಡಿ ಅಲ್ಲೇ ಓಡಾಡಿಕೊಂಡಿದ್ದರು.

ನಾನು ದೊಡ್ಡಕಾಕಾನನ್ನು ನೆನೆಯದ ದಿನವಿಲ್ಲ. ಚಿಕ್ಕವಳಿದ್ದಾಗ ಮನೆಯ ದಿವಾನಾದ ಒಂದು ಅಂಚು ಕಿತ್ತು ಒರಟಾಗಿತ್ತು. ದೊಡ್ಡಕಾಕಾ ಯಾವಾಗಲೂ ಅದೆ ದಿವಾನಾ ಮೇಲೆ ಕೂರುತ್ತಿದ್ದರು. ನಾನು ಅವರ ಕಾಲಡಿ ಕೂತು ಆಡುತ್ತಿರುವಷ್ಟು ಹೊತ್ತು ಅವರ ಕೈ ಆ ಜಾಗವನ್ನು ಮುಚ್ಚಿರುತ್ತಿತ್ತು. ಮದುವೆ ಮಂಟಪದಿಂದೆದ್ದು ಓಡಿ ಬಂದಾಗಲೂ ಆಡಿಕೊಳ್ಳುವವರ ಮಾತಿಗೆ ಆಹಾರವಾಗದಂತೆ, ಅದನ್ನು ಮೀರಿ ಪ್ರಶ್ನಿಸಿದವರಿಗೆ, “ಬಿಡಿ, ಅದು ನಮ್ಮನೆಯ Runaway Bride! ಮಕ್ಕಳು ಈ ವಯಸ್ಸಲ್ಲಿ ಇಂಥ ಹುಚ್ಚಾಟಗಳನ್ನು ಮಾಡದಿದ್ದರೆ ಇನ್ಯಾವತ್ತು ಮಾಡಲು ಸಾಧ್ಯ?” ಎಂದು ನಸುನಗುತ್ತಲೇ ಉತ್ತರಿಸಿ ನನ್ನ ರಕ್ಷಿಸಿದ ಕೈಗಳವು.

ಮೊದಲ ಸಲ ಬಾವಿ ನೀರು ಸೇದಿದಾಗ ನನಗೆ ಏಳು ವರ್ಷ. ಆವತ್ತು ಮನೆಗೆ ನೀರು ಸೇದುವುದು ಮುಗಿದ ಮೇಲೆ  ಹಗ್ಗ, ಕೊಡಪಾನವನ್ನು ಬಾವಿಕಟ್ಟೆ ಮೇಲೆಯೆ ಮರೆತಿದ್ದರು. ಕೊಡಕ್ಕೆ ಹಗ್ಗದ ಕುಣಿಕೆ ಹಾಕಿ, ಬಾವಿಗೆ ಕೆಡವಿ ಎಳೆಯುತ್ತಿದ್ದೆ. ತುಸು ಹೆಚ್ಚು ಕಡಿಮೆಯಾದರೂ ನೀರು ತುಂಬಿದ ತಾಮ್ರದ ಕೊಡಪಾನದ ಭಾರಕ್ಕೆ ನಾನೆ ಬಾವಿ ಪಾಲಾಗುವಂತಹ ಕೃತ್ಯವದು. ಕೆಲಸಕ್ಕೆಂದು ಹೊರಗೆ ಬಂದ ಅವ್ವ ನಾನು ಮಾಡುತ್ತಿರುವುದನ್ನು ನೋಡಿ, ಬೈಯ್ದರೆ ಹಠಕ್ಕೆ ಬೀಳುತ್ತಾಳೆ. ಇಲ್ಲ ಯಾರೂ ಇಲ್ಲದಿದ್ದಾಗ ಈ ಕೆಲಸಕ್ಕೆ ಕೈ ಹಾಕುತ್ತಾಳೆ ಎಂದರಿತು ನೀರು ಸೇದುವ ಪ್ರಥಮ ಪಾಠ ಬೋಧಿಸಿದಳು. ಮುಖ್ಯಸೂತ್ರ ಕೊಡಪಾನ ಮೇಲೆ ಬರುವಾಗ ಕೈಯಿಂದ ಕೆಳಗೆ ಸರಿಯುವ ಹಗ್ಗವನ್ನು ಕಾಲಿನಲ್ಲಿ ಮೆಟ್ಟುವ ಬಗೆಯನ್ನು ಪ್ರಾತ್ಯಕ್ಷಿಕೆ ತೋರಿಸಿ, ತನ್ನೆದುರಿಗೆ ಒಮ್ಮೆ ನನ್ನ ಕಡೆಯಿಂದ ಮಾಡಿಸಿ ನೋಡಿದಳು.

ನೀರು ಸೇದುತ್ತ, ವಾಪಸ್ಸು ಬಾವಿಗೆ ಸುರಿಯುತ್ತ ಆಟವಾಡುತ್ತಿದ್ದವಳು ಎಷ್ಟೊ ಹೊತ್ತಿನ ನಂತರ ಹಿಂದೆ ತಿರುಗಿದೆ. ತಾನಿಲ್ಲದ ವೇಳೆ ಏನಾದರೂ ಹೊಸಪ್ರಯೋಗ ಮಾಡಲು ಹೋಗಿ ಅಪಾಯ ತಂದುಕೊಳ್ಳಬಹುದ ಎಂದು ಅಪ್ಪ-ಅವ್ವ ಹಿತ್ತಲ ಬಾಗಿಲ ಹಿಂದಿನಿಂದ ಗಮನಿಸುತ್ತ ನಿಂತಿದ್ದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ. ಇಂದಿಗು ನನಗೆ ಗೊತ್ತಿಲ್ಲದೆ ಇವರೆಲ್ಲ ನನ್ನ ಅವಾಂತರಗಳನ್ನು ಗಮನಿಸುತ್ತಾರೆ. ಬಾಯಿ ಬಿಟ್ಟು ಹೇಳಿದರೆ ಮೂಗಿನ ಮೇಲೆ ಕನ್ನಡಕದ ಬದಲು ಸಿಟ್ಟು ಇಟ್ಟುಕೊಂಡು ಓಡಾಡುವವಳು ರೇಗುತ್ತಾಳೆಂದು ಸುಮ್ಮನಿರುತ್ತಾರೆ.

ಸಾಕು ಎಲ್ಲರ ಜೀವ ಹಿಂಡಿದ್ದು. ಮೂರು …. ವಯಸ್ಸಾಯ್ತು. ಇನ್ನಾದರೂ ನನಗಿಂತ ಚಿಕ್ಕವುಗಳನ್ನು ಸಹಿಸಿಕೊಳ್ಳುವುದನ್ನು ಕಲಿಯೋಣವೆಂದೇ; ನೀನಿಲ್ಲದೆ ಮನ್ಮಥದೇವನ ಹೋಳಿಯುತ್ಸವ ಹಾಳು ಸುರಿಯತ್ತಿದೆ. ಬಂದರೆ ಈ ಕ್ಷಣವೇ ಹಬ್ಬ ಎಂದವರೆಲ್ಲರಿಂದ ತಪ್ಪಿಸಿಕೊಂಡು ಹೊಲಕ್ಕೆ ಬಂದು ಕೂತಿದ್ದೆ. ಸ್ನೇಹಕ್ಕಾಗಿ ತಮ್ಮ ಪಾಲಿನ ಆಕಾಶ-ಭೂಮಿ ಕೊಟ್ಟ, ನನ್ನ ಖುಷಿಗಾಗಿ ಕೆಲಸ ಮುಂದೂಡಿದ, ಬಿಟ್ಟು ಬಂದಾಯ್ತಲ್ಲ ಇನ್ನು ಏನು ಗತಿ ಎನ್ನುವ ವೇಳೆಗೆ ಕರುಣೆಯಿಂದ ಕೈ ಹಿಡಿದು ನೀ ಸಾಗುತ್ತಿರುವ ದಾರಿಯಲ್ಲಿ ನಿನಗೆ ನಿನಗೆ ಬೇಕಾದಂತಹ ದಿನಗಳೇ ಸಿಗಲಿ ಎಂದು ಹರಸಿದವರನ್ನು ನೆನೆಯುತ್ತ, ಹೋಳಿಯಾಡಿದ ಮಕ್ಕಳೆಲ್ಲ ಬೋರವೆಲ್ ನೀರಿನಲ್ಲಿ ಸ್ನಾನ ಮಾಡಿದ್ದಕ್ಕೆ ಹರಿದು ಬರುತ್ತಿದ್ದ ಬಣ್ಣದೆದೆಯಲ್ಲಿ ಮಣ್ಣನ್ನೆ ಕಾಣುತ್ತ ಕೂತಿದ್ದೆ.

ನಮಗಿಂತ ಒಂದು ತಲೆಮಾರು ಅಂತರದಲ್ಲಿ ಬೆಳೆಯುತ್ತಿರುವ ಜೀವದ ಹುಡುಕಾಟ ಹೋರಾಟಗಳೇ ಬೇರೆ. ಮಕ್ಕಳು ತಮ್ಮ ಬದುಕಿನ ಆಟವನ್ನು ಆಡುತ್ತಿರಲಿ. ಗೆದ್ದರೆ ಗೆಲುವು ಅವರದು.‌ ಸೋತರೆ ಹೊಣೆ ನಮ್ಮದು ಎನ್ನುವಂತೆ ನಡೆದುಕೊಂಡು, ಅರೆನಿದ್ರೆಯಲ್ಲಿ ಎಚ್ಚರವಾದ ಹಸುಗೂಸಿನ ಅಸಹನೆಯಂತಹ ನನ್ನನ್ನು ಮರೆಗೆ ನಿಂತು ಕಾಯುವ ಮನಸುಗಳು ನೆನಪಾಗಿ ಸುಡುಬಿಸಿಲಲ್ಲೂ ಜೀವ ತಂಪಾಯಿತು. ಮನಸು ತುಂಬಿದಕ್ಕೆ ರೆಪ್ಪೆಯಂಚಲಿ ಕೂತು ತುಳುಕಾಡುತ್ತಿದ್ದ ಕಣ್ಣೀರಿನಲ್ಲಿ ಬಿಸಿಲು ಕೋಲು ಬೆರೆತು ಎಡೆಕುಂಟೆಗೆ ಹೊಡಮರಳಿ ಬಿದ್ದಿದ್ದ ಮಣ್ಣಿನೆದೆಯಲಿ ಕರುಣೆಯ ಬಣ್ಣ ಕಂಡೆನು!!

 

‍ಲೇಖಕರು avadhi

March 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. ಭವತಾರಿಣಿ

    ನಮಗಿಂತ ಒಂದು ತಲೆಮಾರು ಅಂತರದಲ್ಲಿ ಬೆಳೆಯುತ್ತಿರುವ ಜೀವದ ಹುಡುಕಾಟ ಹೋರಾಟಗಳೇ ಬೇರೆ. ಮಕ್ಕಳು ತಮ್ಮ ಬದುಕಿನ ಆಟವನ್ನು ಆಡುತ್ತಿರಲಿ. ಗೆದ್ದರೆ ಗೆಲುವು ಅವರದು.‌ ಸೋತರೆ ಹೊಣೆ ನಮ್ಮದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: