ಅನಾಮಿಕಾ @ ಹ್ಯಾಂಡ್ ಪೋಸ್ಟ್ : ನನ್ನೊಳಗೊಬ್ಬಳು 'ಬಡೆಮ್ಮಿ'

ಆತ್ಮವಿಕಸನವಲ್ತೆ ಮಿಲನ ಸಾರವನ್ನು
ವಿಶ್ವದೊಳನುಡಿಯಾಗಿಸಿದವರು…

ಶುಕ್ರವಾರ ಸಂಜೆ ಶಾಲೆಯಿಂದ ಹೊರಡುವಾಗ ಮಕ್ಕಳಿಗೆ ಶನಿವಾರ ಬೆಳಗ್ಗೆ ಮೈಕ್ರೋಸ್ಕೋಪಿನಲ್ಲಿ ಎಲೆಯ ನರಗಳನ್ನು, ನೊಣದ ಕಾಲುಗಳನ್ನು ತೋರಿಸುತ್ತೇನೆ ಎಂದು ಆಸೆ ಹುಟ್ಟಿಸಿದ್ದೆ. ಮರುದಿನ ‘ವರ್ಡಿಕ್ಟ್’ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ಎಂದು ತಿಳಿಯಿತು. ರವಿವಾರ ರಾತ್ರಿಗೆ ಕೆಲಸ ಮಾಡುವ ಜಾಗಕ್ಕೆ ನಾನು ಹಿಂದಿರುಗಿ ಬರಬೇಕಾದ ಕಾರಣ ಮಕ್ಕಳಿಗೆ ಸುಳ್ಳು ಹೇಳಿದಂತಾಯಿತಲ್ಲ ಎಂದು ಕಿರಿಕಿರಿಯಾಯಿತು.
ಈ ಜಾತಿ, ಧರ್ಮ ನನಗೆ ಯಾವತ್ತೂ ಔಟ್ ಆಫ್ ಸಿಲ್ಯಾಬಸ್. ಸದ್ಯ ಈ ಬಗ್ಗೆ ನಡೆದ, ನಡೆಯುತ್ತಿರುವ ಚರ್ಚೆಗಳನ್ನು ನೋಡುವಾಗಲ್ಲೆಲ್ಲ ನನಗೆ ಎಲಿಯಟ್ ನ, “ಒಂದು ಕಲಾಕೃತಿ ಅದು ಅರ್ಥವಾಗುವ ಮೊದಲೇ ಓದುಗನಿಗೆ ಗ್ರಾಹ್ಯವಾಗಿರುತ್ತದೆ” ಎನ್ನುವ ಮಾತೊಂದು ನೆನಪಾಗುತ್ತದೆ.
ನವಾಬರ ಆಳ್ವಿಕೆಗೆ ಒಳಪಟ್ಟ ನನ್ನೂರು, ನನ್ನೂರಿನ ಅಕ್ಕಪಕ್ಕದ ನೂರಾ ಚಿಲ್ಲರೆ ಹಳ್ಳಿಗಳ ಬಹುತೇಕರ ಮನೆಗಳಲ್ಲಿ ಉರ್ದು ಮನೆಭಾಷೆ. ಅವರ ಮನೆಗಳಲ್ಲಿ ಕನ್ನಡ ಬಳಕೆ ಉಸಿರಾದಷ್ಟೇ ಸಹಜ. ಇಲ್ಲಿಯ ದಿನನಿತ್ಯದ ಹೊಂದಾಣಿಕೆಯ ಜೀವನವನ್ನೇ ಒಂದು ಕಲಾಕೃತಿ ಪರಿಗಣಿಸುತ್ತೇನೆ ನಾನು. ಹೀಗಾಗಿ ಬದುಕೊಂದು ಕಲಾಕೃತಿ ಎಂದು ಅರ್ಥವಾಗುವ ಮೊದಲೇ ಬದುಕನ್ನು ಬದುಕಬೇಕಿರವುದೂ ಹೀಗೇ ಎನ್ನುವುದೂ ನಮಗೆ ಗ್ರಾಹ್ಯವಾಗಿದೆ.
ಇದಕ್ಕೆ ಯಾರ, ಯಾವ ವಾಖ್ಯಾನದ ಅಗತ್ಯವೂ ಇಲ್ಲ. ಒಂದು ವೇಳೆ ಅದನ್ನು ವ್ಯಾಖ್ಯಾನಿಸ ಹೊರಟರೆ ಅದು ಅವರ ಪರಿಮಿತಿಯೇ ಹೊರತು ಇಲ್ಲಿ ಬದುಕುತ್ತಿರುವ ನಮ್ಮ ದಡ್ಡತನವಲ್ಲ. ‘ಇದು’ ಅಸಹಿಷ್ಣುತೆ, ‘ಅದು’ ಅಸಹಿಷ್ಣುತೆ ಎನ್ನುವವರಿಗೆ ಸಹಿಷ್ಣುತೆ ಹೇಗಿರುತ್ತದೆ ಎನ್ನುವುದು ಗೊತ್ತಿದೆಯ ಎನ್ನುವುದು ನನ್ನ ಪ್ರಶ್ನೆ. ಹೀಗೆ ಹೇಳುವವರನ್ನ ಸೂಕ್ಷ್ಮವಾಗಿ ಗಮನಿಸಿದರೆ ನನಗೆ ಕಾಣುವುದು ಅವರಲ್ಲಿ ಮಹಾ ಬುದ್ಧಿವಂತರೆಂಬ ಮೇಲರಿಮೆ ಮತ್ತು ಸ್ವಪ್ರತಿಷ್ಠೆ. ಸಹಿಷ್ಣುತೆ ಕುರಿತಾಗಿ ಹತ್ತಿರದಿಂದ ಕಂಡ ಎರಡು ವಿಷಯಗಳನ್ನು ನನಗಿಲ್ಲಿ ಹಂಚಿಕೊಳ್ಳಬೇಕೆನಿಸುತ್ತಿದೆ.

ಮೊನ್ನೆ ಪಕ್ಕದೂರಿನಲ್ಲೇ ಇರುವ ದೊಡ್ಡವ್ವನ ಮನೆಯ ಆಕಳು ಕರು ಹಾಕಿದ್ದಕ್ಕೆ ಗಿಣ್ಣು ತಿನ್ನಲು ಹೋಗಿದ್ದೆ. ಇಡೀ ಊರಲ್ಲಿ ಒಂದೇ ಸಮುದಾಯಕ್ಕೆ ಸೇರಿದ ನಲವತ್ತು ಮನೆಗಳು, ಅವರಿಗೆ ಸಂಬಂಧಿಸಿದ ಹೊಲ ತೋಟಪಟ್ಟಿಗಳಿವೆ. ಎಲ್ಲದಕ್ಕೂ ಅವರು 5 ಕಿ.ಮೀ. ದೂರದ ಸಿಟಿಗೆ ಬರುತ್ತಾರೆ. ಮನೆಯಿಂದ ಕೂಗಳತೆ ದೂರದಲ್ಲಿರುವ ಹೊಲಕ್ಕೆ ಹೋಗಿ ಬರುವಾಗ ದಾರಿ ಪಕ್ಕದ ಬೇವಿನ ಮರದ ಮೇಲೆ ಹಸಿರು ಬಾವುಟ, ಕೆಳಗೆ ಗೋರಿ ಇರುವುದನ್ನು ನೋಡಿ ಕುತೂಹಲದಿಂದ ಏನಿದು ಎಂದೆ. ಅದಕ್ಕೆ ದೊಡ್ಡವ್ವ, “ಅದಾ, ಮೊನ್ನೆ ತೀರಿಕೊಂಡ ನಮ್ಮ ಭಾವನ ‘ಹೆಂಗಸು’ (ಪರಿಚಿತರು ಮಾತನಾಡುವಾಗ ಹೆಣ್ಣಮಕ್ಕಳನ್ನು ಹೆಂಗಸು ಎಂದು ಕರೆದರೆ, “ನಮ್ಮ ಕಡೆ ನನ್ನ ಹಿಂದಿನ ತಲೆಮಾರು ಹೆಂಗಸು ಅನ್ನೋ ಪದ ಬಳಸುತ್ತಿದ್ದಿದು, ‘ಆಕೆ’ ಅವನು ಇಟ್ಟುಕೊಂಡವಳು ಎಂದು ಹೇಳುವಾಗ ಮಾತ್ರ. ಅದಕ್ಕಾಗಿ ನೀವು ಆ ಪದ ಬಳಸಬೇಡಿ ಎನ್ನುತ್ತೇನೆ) ಶರೀಫಮ್ಮನಿಗೆ ಮಕ್ಕಳಿರಲಿಲ್ಲ ನೋಡು, ಅದಕ್ಕೆ ಅಕ್ಕನೇ ಮುಂದೆ ನಿಂತು ಅವರ ಪದ್ದತಿಯಂತೆ ಇಲ್ಲೇ ಅಂತ್ಯಕ್ರಿಯೆ ಮಾಡಿಸಿದಳು,” ಎಂದಳು.
ಗಂಡನ ‘ಹೆಂಗಸ’ನ್ನು ತನ್ನ ಹೊಲದಲ್ಲಿ ಮಣ್ಣು ಮಾಡಲು ಒಪ್ಪಿದ ಆ ಅಪರಮಿತೆಯ ಉದಾತ್ತತೆಗೊ, ದೊಡ್ಡವ್ವನ ಧ್ವನಿಯಲ್ಲಿದ್ದ ಸಹಜತೆಗೆ ಏನೋ ನನಗೆ ಏನನ್ನೂ ಪ್ರತಿಕ್ರಿಯಿಸಲಾಗಲಿಲ್ಲ. ಇಬ್ಬರು ಸುಮ್ಮನೆ ಮಾತನಾಡಿದರೇ ವಿಪರೀತ ಕಲ್ಪಿಸುವವರ ನಡುವೆ (ನಾಲ್ಕೈದು ವರ್ಷಗಳ ಹಿಂದೆ ಅನಿಸುತ್ತದೆ ಬಾಲ್ಯ ಸ್ನೇಹಿತನ ತಮ್ಮನ ಜೊತೆ ಕಡಲಿರುವ ಊರಿಗೆ ಹೋಗಿದ್ದೆ. ಸಂಜೆ ಇನ್ನೊಬ್ಬ ಸ್ನೇಹಿತನಿಗಾಗಿ ಕಾಯುತ್ತಿದ್ದಾಗ ಬಂದ ಆರೇಳು ಜನ ತಮ್ಮಲ್ಲಿರುವ ಅಸ್ತ್ರಗಳ ಭಾಷೆಯಲ್ಲಿ ಶುರ ಮಾಡಿದ ವಿಚಾರಣೆಯಲ್ಲಿ ಸ್ನೇಹಿತನ ತಮ್ಮ ಸೊಂಟದಲ್ಲಿದ್ದ ಉಡದಾರ, ಚಿಕ್ಕಂದಿನಲ್ಲಿ ಎರಡೂ ಕಿವಿಗಳಿಗೆ ಚುಚ್ಚಿದ್ದ ಗುರುತು ತೋರಿಸಿ ಬಚಾವ್ ಆಗಬೇಕಾಯಿತು. ಆಗ ನೆನಪಾಗಿದ್ದು ಪ್ರೊ. ಕೆ.ಎಸ್. ನಾರಾಯಣಚಾರ್ಯರ ‘ರಾಜಸೂಯದ ರಾಜಕೀಯ’ ಕಾದಂಬರಿಯಲ್ಲಿ ಬರುವ, ‘ರಥದಲ್ಲಿ ಅದೆಲ್ಲಿಗೊ ಹೊಗುತ್ತಿದ್ದ ಬಲರಾಮ ಕೃಷ್ಣನಿಗೆ ಕೊಳಲು ನುಡಿಸಲು ಹೇಳುತ್ತಾನೆ. ಆಗ ಕೃಷ್ಣ ಕೊಳಲು ತೊರೆದಾಯ್ತು ಗೋಕುಲದಲ್ಲೇ, ಇನ್ನೇನಿದ್ದರೂ ಶಸ್ತ್ರ ಮಾತ್ರ. ಹಳ್ಳಿಯ ಮುಗ್ಧ ಗೊಲ್ಲರಿಗೆ ಕೊಳಲ ಭಾಷೆ ಅರ್ಥವಾಗುತ್ತಿತ್ತು. ನಾಡ ನಾಗರಿಕರಿಗೆ ಗೊತ್ತಿರುವುದು ಶಸ್ತ್ರಾಸ್ತ್ರಗಳ ಭಾಷೆ ಮಾತ್ರ,” ಎನ್ನುವ ಸಾಲುಗಳು) ‘ಆಕೆ’ ಯಾರಿಗೆ, ಎಲ್ಲಿ ಎದುರಾದರೂ ಕೊಂಕುನೋಟ, ಮಾತಿನಿರಿತವಿಲ್ಲದೆ ಇದೆಲ್ಲ ಸ್ವಾಭಾವಿಕ ಎನ್ನುವಂತೆ ನಡೆದುಕೊಂಡರು ನಮ್ಮೂರಿನ ಜನ.
ಮೂವತ್ತು ವರ್ಷದ ಕೆಳಗೆ ನಾನು ಮನೆಗೆ ನಾಲ್ಕನೇ ಮಗುವಾಗಿ ಬಂದಾಗ ಅವ್ವನಿಗೆ ರಕ್ತಹೀನತೆ. ಅಂದು ಹೊಲದ ಕೆಲಸಕ್ಕೆ ಬಂದ ಬಡೆಮ್ಮಿ (ಅವಳ ಹೆಸರೇ ಮರೆತು ಹೋಗಿದೆ ನನಗೆ) ಕೂಸು ನೋಡಲು ಮನೆಗೆ ಬಂದಾಗ ಅವ್ವನ ಸ್ಥಿತಿ ನೋಡಿ ಸೊಂಟಕ್ಕೆ ಸೆರಗು ಸಿಕ್ಕಿಸಿ ಮನೆಗೆಲಸಕ್ಕೂ ನಿಂತವಳ ಸೇವೆ ಇನ್ನೂ ನಿಂತಿಲ್ಲ. ಆವತ್ತು ಕಾಲ ಮೇಲೆ ನನ್ನ ಹಾಕಿಕೊಂಡು, ಎಣ್ಣೆ ತೀಡಿ, ಎರೆದು, ದೃಷ್ಟಿಬೊಟ್ಟಿಟ್ಟು, ಗಲ್ಲ ಹಿಡಿದು ಲಟಿಕೆ ತೆಗೆದಂತೆ ಈಗ ಅಕ್ಕನ ಮಕ್ಕಳಿಗೆ ಮಾಡುತ್ತಾಳೆ. ಕಾಲು ದಶಕಕ್ಕೂ ಮೀರಿದ ಈ ಅವಧಿಯಲ್ಲಿ ಅವ್ವ ದೇಖರೇಖಿಯಲ್ಲಿರುವ ಅಸಂಖ್ಯಾತ ದೇವರುಗಳು ಇವಳ ಕೈಯ್ಯಲ್ಲೇ ಶುಚಿಗೊಂಡಿವೆ. ತನ್ನ ರಂಜಾನ್ ಉಪವಾಸದ ದಿನಗಳಲ್ಲೂ ಬಡೆಮ್ಮಿ ನಮಗೆ ಬಡಿದು, ಬೇಯಿಸಿ ಕೊಟ್ಟ ರೊಟ್ಟಿ ತಿಂದೆ ನಾವೆಲ್ಲ ಬೆಳೆದಿದ್ದು. ಕಳೆದ ಸಲ ಒಟ್ಟಿಗೆ ಬಂದ ಮಹಾನವಮಿ ಮತ್ತು ಮೊಹರಂ ಅನ್ನು ನಾವು ಜೊತೆಯಲ್ಲೇ ಆಚರಿಸಿದೆವು.

ಬಡೆಮ್ಮಿ ಮೇಲೆ ಮನೆ ಬಿಟ್ಟು ಹೋಗುವುದನ್ನು ನೋಡಿದ ಪರಿಚಿತರೊಬ್ಬರು ಇಷ್ಟೊಂದು ನಂಬಿದರೆ ಏಟು ತಿನ್ನುತ್ತೀರಿ ಎಂದಿದ್ದಕ್ಕೆ, “ಎಷ್ಟು ಸಲ ಏಟು ತಿಂದರೂ ಸರಿಯೇ ನಾನು ಮನುಷ್ಯರನ್ನು ನಂಬುತ್ತೇನೆ. ಮತ್ತೊಬ್ಬ ಮನುಷ್ಯನ ಮೇಲೆ ಅಪನಂಬಿಕೆಯಿಂದ ಗೆದ್ದ ಗೆಲುವಿಗಿಂತ ನಂಬಿಕೆಯಿಂದ ಬಂದ ಸೋಲು ಹೆಚ್ಚು ತೃಪ್ತಿ ನೀಡುತ್ತದೆ,” ಎನ್ನುವ ಮೂಲಕ ಅಪ್ಪ, ಅವ್ವ, ಬಡೆಮ್ಮಿ ಒಬ್ಬರಿಗೊಬ್ಬರು ತೋರಿದ ವಿಶ್ವಾಸ, ಮಾನವೀಯತೆ ನನಗೆ ಎಲ್ಲ ಕಾಲಕ್ಕೂ ಆದರ್ಶ. ನನಗಿದನ್ನು ಸಹಿಷ್ಣುತೆ ಎನ್ನಲು ಸಾಧ್ಯವೇ ಇಲ್ಲ. ಮನುಷ್ಯರು ಇರಬೇಕಾಗಿದ್ದೇ ಹೀಗಲ್ಲವೇ? ಕುವೆಂಪು ಅವರು ಒಂದು ಕಡೆ ‘ಆತ್ಮವಿಕಸನವಲ್ತೆ ಮಿಲನ ಸಾರ’ ಎನ್ನುವ ಮಾತು ಹೇಳುತ್ತಾರೆ. ಆತ್ಮವಿಕಸನ ಮತ್ತು ಮಿಲನ ಅಂದ್ರೆ ಗಂಡು, ಹೆಣ್ಣು ಮಿಲನವಲ್ಲ. ಎಲ್ಲ ಜೀವಿಗಳ ಮಿಲನ ಎನ್ನುವ ಸೃಷ್ಟಿ ಸಂಪೂರ್ಣತೆ ಬಿಂಬಿಸುವ ಅದ್ಭುತವಾದ ಸಂದೇಶವದು.
ಜಾತಿ, ಧರ್ಮದ ಗೋಡೆ ಕೆಡವಿ, ಯಾವ ವಿಶ್ವವಿದ್ಯಾಲಯಗಳ ಓದು, ಪದವಿಗಳಿಲ್ಲದೇ ಪ್ರತಿ ಆತ್ಮವೂ ಉನ್ನತವಾದದ್ದು ಎನ್ನುವುದನ್ನು ಬದುಕುವ ಮೂಲಕ ತೋರಿಸಿ ಕೊಟ್ಟು, ‘ಆತ್ಮವಿಕಸನವಲ್ತೆ ಮಿಲನ ಸಾರ’ವನ್ನು ನನ್ನ ಪುಟ್ಟ ವಿಶ್ವದೊಳನುಡಿಯಾಗಿಸಿದ ಆ ಅನಾಮಧೇಯರ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆಯಿದೆ. ಇದನ್ನೂ ಮೀರಿ ಏನಾದರೂ ಅಹಿತಕರ ಘಟನೆ ನಡೆದರೆ ಊರಿದ್ದಲ್ಲಿ ಇಂಥವೆಲ್ಲ ನಡೆಯುತ್ತವೆ, ಮುಂದೆ ಹೀಗಾಗದಂತೆ ನೋಡಿಕೊಳ್ಳೋಣ ಎಂದು ಮುನ್ನಡೆಯುವ ಹೊಂದಾಣಿಕೆಯ ಪಾಠವನ್ನು ನಮ್ಮ ನೆಲ ನಮಗೆ ಕಲಿಸಿದೆ. ಎಲ್ಲಿ ನಡೆದರೂ, ಎಲ್ಲಿ ನಿಂತರೂ, ತಲೆಯ ಮೇಲೆಯೇ ಆಕಾಶ, ಏನು ನಡೆದರೂ ಅದರ ಕೆಳಗೇ ಎನ್ನುವುದು ನನ್ನಂಥ ಸಾಮಾನ್ಯರು ಕಂಡ ಬದುಕು. ಇದು ಮಾಧ್ಯಮದಲ್ಲಿ ಸುದ್ದಿಯಾಗುವುದಿಲ್ಲ!

‍ಲೇಖಕರು avadhi

November 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. T S SHRAVANA KUMARI

    ತುಂಬಾ ಅರ್ಥವತ್ತಾದ ಬರಹ. ಸಹಿಷ್ಣುತೆ ಬದುಕುವ ರೀತಿಯೇ ಅಲ್ಲವೇ. ಇಷ್ಟವಾಯಿತು

    ಪ್ರತಿಕ್ರಿಯೆ
  2. girija raghunath

    ತುಂಬಾ ಆರ್ದ್ರವಾದ ಲೇಖನ ಸಮ್ಯೋಚಿತವೂ ಹೌದು. ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: