ಇದು ಆಕೆಯ ಕಥೆ : ಇಂದಿನ ಫೈರ್-ಬ್ರಾಂಡ್ ಶೀಲಾ..

ಪ್ರಸಾದ್ ನಾಯ್ಕ್

ನಿಮಗೆ ಮಾ ಆನಂದ್ ಶೀಲಾರಲ್ಲಿ ಪ್ರಶ್ನೆಯೇನಾದರೂ ಕೇಳಬೇಕಾಗಿದ್ದಲ್ಲಿ ನಿಮ್ಮ ಪ್ರಶ್ನೆಯನ್ನು ಬರೆದು ನಮಗೆ ಕೊಡಿ. ನಾವು ಲಕ್ಕಿ ಡಿಪ್ ಮೂಲಕ ಚೀಟಿಗಳನ್ನು ಆರಿಸುತ್ತೇವೆ!

ಫ್ರಂಟ್ ಡೆಸ್ಕಿನಲ್ಲಿದ್ದ ಆಯೋಜಕರ ತಂಡದ ತರುಣಿಯೋರ್ವಳು ಹೀಗೆ ಹೇಳಿದಾಗ ಯಾವ ಪ್ರಶ್ನೆಯನ್ನು ಕೇಳಬೇಕೆಂದೇ ಗೊತ್ತಾಗದೆ ನನಗೆ ತಲೆ ಕೆರೆದುಕೊಳ್ಳುವಂತಾಗಿತ್ತು. ಓಶೋ ರಜನೀಶ್ ಸ್ವತಃ ದಂತಕಥೆಯಂತಿದ್ದ ವ್ಯಕ್ತಿ. ಇನ್ನು ಅವರ ಜೊತೆಗೆ ಅದೆಷ್ಟೋ ವರ್ಷಗಳನ್ನು ಕಳೆದಿದ್ದ ಶೀಲಾರಂಥಾ ವ್ಯಕ್ತಿಯನ್ನು ಕೇಳಲು ಪ್ರಶ್ನೆಗಳು ಒಂದೆರಡೇನು, ಸಾಕಷ್ಟಿರುತ್ತವೆ.

ಆದರೆ ಇಷ್ಟು ವರ್ಷಗಳ ನಂತರ ಒರೆಗಾನ್ ವಿವಾದದ ಬಗ್ಗೆ ಮುಕ್ತವಾಗಿ ಮಾತನಾಡಲು ಆನಂದ್ ಶೀಲಾ ತಯಾರಿದ್ದಾರೆಯೇ ಎಂಬ ಬಗ್ಗೆ ಖಾತ್ರಿಯಿರಲಿಲ್ಲ. ಅಂಥಾ ಸಾಧ್ಯತೆಗಳೇನಾದರೂ ಇದ್ದಲ್ಲಿ ಪ್ರಶ್ನೆಯ ಅವಕಾಶವು ವ್ಯರ್ಥವಾಗುವುದು ಖಚಿತವಾಗಿತ್ತು. ಆದದ್ದಾಗಲಿ ಎಂದು ಒರೆಗಾನ್ ವಿವಾದದ ಬಗ್ಗೆ ಒಂದು ಪ್ರಶ್ನೆಯನ್ನೂ, ಓಶೋರವರ ವೈಯಕ್ತಿಕ ಜೀವನದ ಬದುಕಿನ ಒಂದು ಪ್ರಶ್ನೆಯನ್ನೂ ಬರೆದು ಕಾಗದವನ್ನು ಮಡಚಿ ಆಕೆಗೆ ಕೊಟ್ಟುಬಿಟ್ಟೆ. ನಾನು ಹಸ್ತಾಂತರಿಸಿದ್ದ ಚೀಟಿಯನ್ನು ಮಡಚಿಕೊಳ್ಳುತ್ತಾ ‘ಆಲ್ ದ ಬೆಸ್ಟ್’ ಎಂದು ತನ್ನ ಮುಗುಳ್ನಗುವಿನಲ್ಲೇ ಹೇಳಿದಳು ಆಕೆ.

ಆದರೆ ಕಾರ್ಯಕ್ರಮವು ಆರಂಭವಾಗುವಷ್ಟರಲ್ಲೇ ಈ ಅದೃಷ್ಟದ ಚೀಟಿಯು ಬರುವುದು ಅಷ್ಟರಲ್ಲೇ ಇದೆ ಎಂದು ನನಗೆ ಮನವರಿಕೆಯಾಗಿಬಿಟ್ಟಿತ್ತು. ಆಯೋಜಕರು ದುಬಾರಿ ಟಿಕೆಟ್ ದರವನ್ನಿಟ್ಟಿದ್ದ ಹೊರತಾಗಿಯೂ ಅಲ್ಲಿ ಸೇರಿದ್ದ ಜನಜಂಗುಳಿಯ ಪರಿಣಾಮವದು. ಅಷ್ಟಕ್ಕೂ ಮಾಧ್ಯಮದ ಯಾವ ಪ್ರಶ್ನೆಗೂ ನೋ ಕಾಮೆಂಟ್ಸ್ ಎಂದು ಆಕೆ ಹೇಳಿರುವುದು ನನಗೆ ಅಷ್ಟಾಗಿ ಗಮನಕ್ಕೆ ಬಂದಿಲ್ಲವಾದ್ದರಿಂದ, ಅದೇನೇ ಪ್ರಶ್ನೆಗಳು ಬಂದರೂ ಆನಂದ್ ಶೀಲಾ ಎಂದಿನಂತೆ ಬಿರುಸಾಗಿ ಉತ್ತರಿಸಲಿದ್ದಾರೆ ಎಂಬ ಲೆಕ್ಕಾಚಾರದೊಂದಿಗೆ ನಾನು ಆ ಅಪರೂಪದ ಸಂಜೆಗೆ ಸಾಕ್ಷಿಯಾಗುತ್ತಿದ್ದೆ.

ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಓಶೋರವರ ದೃಷ್ಟಿಕೋನವು ಈ ಬಗ್ಗೆ ಹೇಗಿತ್ತು?, ಎಂದು ಕೇಳಿದ್ದರು ಆತಿಥೇಯರಾಗಿದ್ದ ಅಶ್ವಿನ್ ಭಾರತಿ. ಮದುವೆಯೆನ್ನುವುದು ಸಂಪೂರ್ಣವಾಗಿ ವೈಯಕ್ತಿಕ ಆಯ್ಕೆ. ನನಗೆ ಮದುವೆಯ ವ್ಯವಸ್ಥೆಗಿಂತಲೂ ಸಾಂಗತ್ಯದ ಬಗ್ಗೆಯೇ ಹೆಚ್ಚಿನ ನಂಬಿಕೆ. ಲವ್ ಮತ್ತು ಸೆಕ್ಸ್ ಗಳು ಪ್ರತ್ಯೇಕವಾದವುಗಳು ಎನ್ನುವುದು ಭಗವಾನ್ ನಿಲುವಾಗಿತ್ತು. ನಿಮ್ಮ ದೇಹಸಂಬಂಧಗಳಲ್ಲಿ ಪ್ರೀತಿಯ ಸೆಲೆಯಿದ್ದರೆ ಆ ಸುಖವು ಮತ್ತಷ್ಟು ಗಾಢವಾಗಿರುತ್ತದೆ ಎಂಬುದನ್ನು ನಾನು ನನ್ನ ಅನುಭವಗಳಿಂದ ತಿಳಿದುಕೊಂಡಿದ್ದೇನೆ. ಇದನ್ನು ಬೋಧಿಸಲು ನನಗೆ ಭಗವಾನ್ ರ ಅವಶ್ಯಕತೆಯಿರಲಿಲ್ಲ, ಎಂದರು ಶೀಲಾ. ಅವರ ಉತ್ತರಗಳಲ್ಲಿ ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ವ್ಯರ್ಥಪ್ರಯತ್ನಗಳಿಲ್ಲ. ಎಂದಿನಂತೆ ಅದೇ ನಿರೀಕ್ಷಿತ ಬಿರುಸು ಮತ್ತು ಸ್ಪಷ್ಟತೆ.

ಮೆಡಿಟೇಷನ್ (ಧ್ಯಾನ), ಎನ್ಲೈಟನ್ಮೆಂಟ್ (ಜ್ಞಾನೋದಯ) ಗಳ ಬಗ್ಗೆ ನನಗೆ ಕಿಂಚಿತ್ತೂ ನಂಬಿಕೆಯಿಲ್ಲ. ನಾನು ಯಾವತ್ತೂ ಧ್ಯಾನ ಮಾಡಿದವಳೇ ಅಲ್ಲ. ಅಂದಿಗೂ, ಇಂದಿಗೂ…, ಎಂದು ಶೀಲಾ ಹೇಳುತ್ತಿದ್ದರೆ ಎಲ್ಲರ ಮೊಗದಲ್ಲೂ ಸಣ್ಣಗೆ ನಗು. ಆದರೆ ಕೆಲಸವೇ ಧ್ಯಾನವೆಂಬುದನ್ನು ಓಶೋ ರಜನೀಶರು ನಮಗೆ ಮನವರಿಕೆ ಮಾಡಿಕೊಟ್ಟಿದ್ದರು ಎಂದು ಶೀಲಾರವರು ಹೇಳುವ ಮಾತು ಒಪ್ಪುವಂಥದ್ದು.

ಉದಾಹರಣೆಗೆ ಒರೆಗಾನ್ ಪ್ರದೇಶಕ್ಕೆ ಬಂದ ಹೊಸತರಲ್ಲಿ ಕಮ್ಯೂನ್ ಸದಸ್ಯರು ನಿರಂತರವಾಗಿ ಕೆಲಸ ಮಾಡುವುದೇ ಆದ್ಯತೆಯಾಗಿತ್ತೇ ಹೊರತು ಕಣ್ಣುಮುಚ್ಚಿ, ಪದ್ಮಾಸನ ಹಾಕಿಕೊಂಡು ಧ್ಯಾನ ಮಾಡುವುದಲ್ಲ. ವಿಶಾಲವಾದ 64000 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದ್ದ ರಜನೀಶಪುರಂ ನಿರ್ಮಾಣದ ಅವಧಿಯಲ್ಲಿ ಅದು ತೀರಾ ಅಗತ್ಯವೂ ಆಗಿತ್ತೆನ್ನಿ.

ನಾಲ್ಕು ಜನ್ಮಗಳಿಗಾಗುವಷ್ಟು ಕಾಮಗಾರಿಯ ಕೆಲಸಗಳು ಬಾಕಿಯಿರುವಾಗ ತನ್ನ ಅನುಯಾಯಿಗಳು ಧ್ಯಾನ-ಮೋಕ್ಷಗಳ ಹೆಸರಿನಲ್ಲಿ ಸಮಯ ಪೋಲು ಮಾಡುವುದು ಓಶೋ ರಜನೀಶರಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ದಿನಕ್ಕೆ ಸರಾಸರಿ ಹದಿಮೂರರಿಂದ ಹದಿನೈದು ತಾಸುಗಳ ದುಡಿತವು ರಜನೀಶಪುರಂನಲ್ಲಿ ಸಾಮಾನ್ಯವಾಗಿದ್ದಿದ್ದನ್ನು ಶೀಲಾ ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಓಶೋರ ಆಶ್ರಮವು ಬೇರೇನಾಗಿದ್ದರೂ ಖಂಡಿತವಾಗಿಯೂ ಮೈಗಳ್ಳರ ಬೀಡಾಗಿರಲಿಲ್ಲ. ಆಯಾ ವಿಭಾಗದಲ್ಲಿ ಪರಿಣತಿಯನ್ನು ಹೊಂದಿದ್ದವರು ತಾವು ನೇಮಕಗೊಂಡಿದ್ದ ಆಶ್ರಮದ ವಿಭಾಗದಲ್ಲಿ ಇಂತಿಷ್ಟು ತಾಸುಗಳ ಕಾಲ ದುಡಿಯುವುದು ಕಡ್ಡಾಯವಾಗಿತ್ತು. ರಜನೀಶರ ಆಶ್ರಮಗಳು ಕೇವಲ ಹರಿದುಬರುತ್ತಿದ್ದ ದೇಣಿಗೆಯ ಮೊತ್ತಕ್ಕಷ್ಟೇ ಜೋತುಬೀಳದೆ ಬಹುಬೇಗನೇ ಸ್ವಾವಲಂಬನೆಯನ್ನು ಸಾಧಿಸಿದರ ಹಿಂದಿನ ಗುಟ್ಟು ಇವುಗಳಾಗಿರಬಹುದು.

ಮೈಂಡ್-ಫುಲ್ ನೆಸ್ ಅನ್ನುವುದನ್ನು ಆ ದಿನಗಳಲ್ಲೇ ಓಶೋರಷ್ಟು ಪ್ರಾಯೋಗಿಕವಾಗಿ ತನ್ನ ಅನುಯಾಯಿಗಳಿಗೆ ಕಲಿಸಿದ ಗುರು ಬೇರೊಬ್ಬರು ಇರಲಿಕ್ಕಿಲ್ಲವೇನೋ. ಶೀಲಾರ ಪ್ರಕಾರ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಜ್ಞಾನೋದಯಕ್ಕಾಗಿ ಕಾಯುವುದೆಂದರೆ ತಾವಿರುವ ಬಸ್ ಸ್ಟೇಷನ್ನಿಗೆ ಎಂದಿಗೂ ಬರದ ಬಸ್ಸಿಗೆ ಕಾಯುವಷ್ಟೇ ನಿರರ್ಥಕ.

ಇದು ರಜನೀಶರು ಒರೆಗಾನ್ ತೆರಳುವ ಮುನ್ನದ ಪುಣೆಯ ಆಶ್ರಮದ ದಿನಗಳಲ್ಲೂ ಸತ್ಯವಾಗಿತ್ತು. ಕೆಲವೇ ತಾಸು ಅಥವಾ ದಿನಗಳ ಮಟ್ಟಿಗೆ ಆಶ್ರಮದಲ್ಲಿರಲು ಹೊರಗಿನಿಂದ ಬರುತ್ತಿದ್ದ ಜನರಿಗಿದ್ದ ಒಂದಷ್ಟು ವಿನಾಯಿತಿಯನ್ನು ಹೊರತುಪಡಿಸಿದರೆ, ಆಶ್ರಮದಲ್ಲೇ ಇರುತ್ತಿದ್ದ ಅನುಯಾಯಿಗಳಿಗೆ ನಿತ್ಯದ ಕೆಲಸದ ವಿಚಾರದಲ್ಲಿ ಯಾವುದೇ ಬಗೆಯ ವಿನಾಯಿತಿಗಳಿರಲಿಲ್ಲ.

ಆದರೆ ಶೀಲಾರ ಡೋಂಟ್ ಕಿಲ್ ಹಿಮ್ ಕೃತಿಯಲ್ಲಿ ಈ ಬಗ್ಗೆ ಓಶೋರ ಮತ್ತೊಂದು ಕಿಲಾಡಿತನವೂ ದಾಖಲಾಗಿದೆ. ಅದೇನೆಂದರೆ ಕೆಲ ಮಹಾಶ್ರೀಮಂತ ಭಕ್ತಾದಿಗಳು ಬಂದು ತಮಗೆ ಜ್ಞಾನೋದಯವನ್ನೋ, ಮೋಕ್ಷವನ್ನೋ ಕರುಣಿಸಬೇಕೆಂದು ಓಶೋರ ಬೆನ್ನು ಬೀಳುತ್ತಿದ್ದರಂತೆ. ಜ್ಞಾನೋದಯವೆನ್ನುವುದು ಆಶ್ರಮದಲ್ಲೂ, ಹೊರಭಾಗದಲ್ಲೂ ಆ ದಿನಗಳಲ್ಲಿ ಒಂದು ಟ್ರೆಂಡ್ ಎಂಬಂತಿತ್ತು. ಹೀಗಾಗಿ ತಮಗೆ ಜ್ಞಾನೋದಯವು ಓಶೋ ರಜನೀಶರಿಂದ ಪ್ರಾಪ್ತವಾಯಿತು ಎಂಬುದನ್ನು ಹೇಳಿಕೊಂಡು ಹೋದಲ್ಲೆಲ್ಲಾ ಜಂಭಕೊಚ್ಚಿಕೊಳ್ಳುವುದು ಅವರಿಗೆ ಮುಖ್ಯವಾಗಿತ್ತು ಮತ್ತು ಇದಕ್ಕಾಗಿ ಅದೆಷ್ಟು ಮೊತ್ತವನ್ನಾದರೂ ದೇಣಿಗೆಯ ರೂಪದಲ್ಲಿ ಆಶ್ರಮಕ್ಕಾಗಿ ನೀಡಲು ಇಂಥಾ ವರ್ಗಗಳು ಸಿದ್ಧವಿದ್ದವು.

ಇಂಥಾ ಸಂದರ್ಭಗಳಲ್ಲಿ ರಜನೀಶರು ಇಂಥಾ ಶಾರ್ಟ್‍ಕಟ್ ಭಕ್ತರಿಗೂ, ತಮಗೂ ಏಕಕಾಲದಲ್ಲಿ ಲಾಭವಾಗುವಂತೆ ತಮ್ಮ ಶಿಷ್ಯವೃಂದದೆದುರು ಧಾರಾಳವಾಗಿ ಜ್ಞಾನೋದಯದ ಘೋಷಣೆಯನ್ನು ಮಾಡುತ್ತಿದ್ದರಂತೆ. ಹೀಗೆ ಅತ್ತ ಗಲ್ಲಾಪೆಟ್ಟಿಗೆಯು ತುಂಬುವುದರೊಂದಿಗೆ, ಇತ್ತ ಇವರಿಂದ ಬಿಡಿಸಿಕೊಳ್ಳುವಲ್ಲಿಯೂ ಇಂಥಾ ತಂತ್ರಗಳು ಬಳಕೆಯಾಗುತ್ತಿದ್ದವು.

ಕೆಲವೊಮ್ಮೆ ನಮ್ಮ ಸುತ್ತಮುತ್ತಲಿನವರ ಅಹಂ ಅನ್ನು ಪೋಷಿಸುವುದು ನಮ್ಮ ಅನಿವಾರ್ಯತೆಯೂ ಹೌದು, ಎಂದು ಓಶೋ ರಜನೀಶರು ಹೇಳಿರುವ ಬಗ್ಗೆಯೂ ಶೀಲಾರ ಕೃತಿಯಲ್ಲಿ ಉಲ್ಲೇಖವಿದೆ. ಇಂಥಾ ಆಧ್ಯಾತ್ಮ ಸಂಬಂಧಿ ಮಾರ್ಕೆಟಿಂಗ್ ತಂತ್ರಗಳನ್ನು ರಜನೀಶರ ಆಪ್ತವಲಯದ ಸದಸ್ಯರಲ್ಲೊಬ್ಬರಾಗಿ ಹತ್ತಿರದಿಂದ ನೋಡಿದ್ದೂ ಕೂಡ ಧ್ಯಾನ-ಜ್ಞಾನೋದಯ-ಮೋಕ್ಷಗಳಂತಹ ಭಾರೀ ತೂಕದ ಪದಗಳ ಹಿಂದಿರುವ ಪೊಳ್ಳುತನದ ಬಗೆಗಿನ ಅವರ ಅಭಿಪ್ರಾಯಕ್ಕೆ ಕಾರಣವಿರಬಹುದು.

ಹಾಗೆ ನೋಡಿದರೆ ಮಾ ಆನಂದ್ ಶೀಲಾರವರು ಓಶೋ ರಜನೀಶರ ಗುಟ್ಟುಗಳನ್ನು ಕೊಂಚ ಹೆಚ್ಚೇ ತಿಳಿದುಕೊಂಡಿದ್ದರು. ಇಂಥಾ ಸೂಕ್ಷ್ಮ ಅಂಶಗಳು ಅವರಿಗೆ ಮುಂದೆಯೂ ಮುಳುವಾಗಿದ್ದು ಸತ್ಯ. ಶೀಲಾ ರಜನೀಶಪುರಂ ಅನ್ನು ತೊರೆದ ಹೊಸತರಲ್ಲಿ ಆಕೆಯನ್ನು ಹುಡುಕಿ ತರುವ ಎಲ್ಲಾ ಪ್ರಯತ್ನಗಳಿಗೂ ಒರೆಗಾನ್ ಆಶ್ರಮವು ಕೈಹಾಕಿತ್ತು.

ಶೀಲಾರು ನೆರವಿಗಾಗಿ ಸಂಪರ್ಕಿಸಬಹುದಾಗಿದ್ದ ಅಕ್ಕಪಕ್ಕದ ಬಹುತೇಕ ಸಮುದಾಯಗಳಿಗೂ ಸುದ್ದಿ ತಲುಪಿಸಿ ಆಕೆಯೊಂದಿಗೆ ಯಾವ ಸಂಪರ್ಕವನ್ನೂ ಇರಿಸದಂತೆ ಕಮ್ಯೂನ್ ಸನ್ಯಾಸಿನಿಯರಿಗೆ ಕಟ್ಟಪ್ಪಣೆಗಳನ್ನು ನೀಡಲಾಯಿತು. ಮುಂದಿನ ಒಂದೆರಡು ವರ್ಷಗಳ ಕಾಲ ಶೀಲಾ ವಿರುದ್ಧ ಬಗೆಬಗೆಯ ಆರೋಪಗಳೂ ಕೂಡ ಮಸಾಲಾ ಸುದ್ದಿಗಳಿಗಾಗಿ ಹಾತೊರೆಯುತ್ತಿದ್ದ ಮಾಧ್ಯಮಗಳಿಗಾಗಿ ಆಶ್ರಮದ ಶಕ್ತಿಕೇಂದ್ರಗಳಿಂದ ಬರುತ್ತಲೇ ಇದ್ದವು.

ಇನ್ನು ಅಶ್ವಿನ್ ರವರು ರಜನೀಶಪುರಂ ನಗರದ ವೈಫಲ್ಯದ ಬಗ್ಗೆ ಮಾತುಮಾತಲ್ಲೇ ಹೇಳಿದಾಗ ಸೋಲೊಪ್ಪಿಕೊಳ್ಳದವರಂತೆ ಮಧ್ಯದಲ್ಲೇ ಬರುವ ಆನಂದ್ ಶೀಲಾ ರಜನೀಶಪುರಂ ಜನ್ಮತಾಳಲಿಲ್ಲ ಎಂಬುದು ಸುಳ್ಳು. ರಜನೀಶಪುರಂ ಜನ್ಮತಾಳದಿದ್ದರೆ ನಾನಿಲ್ಲಿ ನಿಮ್ಮ ಮುಂದೆ ಕುಳಿತು ಮಾತನಾಡುತ್ತಿರಲಿಲ್ಲ, ಎಂದು ಸಮರ್ಥಿಸಿಕೊಂಡರು. ಅದೇನೇ ಆದರೂ ಓಶೋರವರು ಖುದ್ದಾಗಿ ಒಪ್ಪಿಕೊಂಡಿರುವಂತೆ ರಜನೀಶಪುರಂ ಎನ್ನುವುದು ವಿಫಲವಾದ, ಆದರೆ ಹಿಂದೆಂದೂ ಮಾಡಿರದಿದ್ದ ಒಂದು ಸುಂದರವಾದ ಮಹಾಪ್ರಯೋಗ ಎನ್ನುವುದೇ ಅಂತಿಮ ಸತ್ಯ.

ಏಕೆಂದರೆ ಖುಷಿ-ನಗು-ಸಾಮರಸ್ಯದ ಧ್ಯೇಯವನ್ನೇ ಓಶೋ ಕಮ್ಯೂನ್ ಪ್ರತಿಪಾದಿಸುತ್ತಾ ಬಂದಿದ್ದರೂ ಇವುಗಳ ಅರ್ಧದಷ್ಟನ್ನೂ ಸಾಧಿಸಲು ಓಶೋ ಸಮುದಾಯವು ಒರೆಗಾನ್ ನಲ್ಲಿ ವಿಫಲವಾಗಿತ್ತು. ಇನ್ನು ರಜನೀಶಪುರಂ ನಿರ್ಮಾಣದ ಆರಂಭದ ದಿನಗಳಿಂದಲೂ ಸ್ಥಳೀಯ ಒರೆಗಾನ್ ನಿವಾಸಿಗಳಿಗೆ ಓಶೋ ಅನುಯಾಯಿಗಳು ಸುಳ್ಳನ್ನೇ ಉಣಿಸಿದ್ದರು.

ತಾನು ಶ್ರೀಮಂತ ವಿಧವೆಯ ಸೋಗಿನಲ್ಲಿ ಒರೆಗಾನ್ ನಲ್ಲಿ ತಿರುಗಾಡುತ್ತಾ ಸ್ಥಳೀಯರ ಸ್ನೇಹವನ್ನು ಸಂಪಾದಿಸುತ್ತಿದ್ದೆ, ಮಿಲಿಯನ್ ಡಾಲರ್ ಗಟ್ಟಲೆ ದೇಣಿಗೆಗಾಗಿ ನಗರದ ಶ್ರೀಮಂತರನ್ನು ಸೆಳೆಯಲು ಐಷಾರಾಮಿ ಪಾರ್ಟಿಗಳನ್ನು ತಮ್ಮ ರ್ಯಾಂಚ್ ನಲ್ಲಿ ಆಯೋಜಿಸುತ್ತಿದ್ದೆ ಎಂದು ಶೀಲಾ ಖುದ್ದಾಗಿ ತನ್ನ ಕೃತಿಯಲ್ಲಿ ದಾಖಲಿಸಿದ್ದಾರೆ. ಇವೆಲ್ಲದರಿಂದಾಗಿ ಒರೆಗಾನ್ ನಿವಾಸಿಗಳಿಗೆ ಎಲ್ಲಿಂದಲೋ ವಲಸೆ ಬಂದಿದ್ದ ಈ ಆಗಂತುಕರ ಮೇಲಿದ್ದ ಸಂಶಯ ಮತ್ತು ಆತಂಕಗಳು ದಿನೇದಿನೇ ಹೆಚ್ಚುತ್ತಿದ್ದಿದ್ದು ಸಹಜವಾಗಿತ್ತು. ಹೀಗೆ ಸುಳ್ಳಿನ ಅಡಿಪಾಯವನ್ನೇ ಹಾಕಿಕೊಂಡು ನಿರ್ಮಿಸಿದ್ದ ರಜನೀಶಪುರಂ ತಲೆಯೆತ್ತಿದ ವೇಗದಲ್ಲೇ ನಿರ್ಜನವಾಗಿ ಪಾಳುಬಿದ್ದುಹೋಗಿದ್ದು ವಿಧಿಯಾಡಿದ ವ್ಯಂಗ್ಯವೇ ಹೌದು.

ಇನ್ನು ಓಶೋರ ಪುಣೆ ಮತ್ತು ಒರೆಗಾನ್ ಆಶ್ರಮಗಳಲ್ಲಿತ್ತೆಂದು ಹೇಳಲಾಗುವ ಮುಕ್ತ ಲೈಂಗಿಕತೆಯ ಬಗ್ಗೆ ಮಾತನಾಡುತ್ತಾ, ಇಂದಿಗೂ ಭಗವಾನ್ ಹೆಸರನ್ನು ಬಳಸಿಕೊಂಡು ತಮ್ಮ ಬದುಕಿನ ವಿಚಿತ್ರ ಕರಾಮತ್ತುಗಳನ್ನು ಸಮರ್ಥಿಸಿಕೊಳ್ಳುವವರ ಬಗ್ಗೆ ನನಗೆ ಅನುಕಂಪವಿದೆ. ಭಗವಾನ್ ಯಾವತ್ತೂ ಯಾರ ಖಾಸಗಿ ಬದುಕಿನ ಬಗೆಯೂ ಅನವಶ್ಯಕ ಆಸಕ್ತಿಯನ್ನು ಹೊಂದಿವರಲ್ಲ. ನಮ್ಮ ಕೃತ್ಯಗಳಿಗೆ ನಾವೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇದಿಷ್ಟೇ ಜೀವನ, ಎನ್ನುತ್ತಾರೆ.

ಈ ಮಾತನ್ನು ಸ್ವಂತಕ್ಕೂ ಅನ್ವಯಿಸಿ ಹೇಳುವ ಆನಂದ್ ಶೀಲಾ ಭಗವಾನ್ ಬಳಿ ಇಷ್ಟಪಟ್ಟು ಹೋಗಿದ್ದು ನಾನೇ. ಅಲ್ಲಿಯ ಜವಾಬ್ದಾರಿಗಳನ್ನು ಮನಸಾರೆ ಒಪ್ಪಿಕೊಂಡು ನಿರ್ವಹಿಸಿದ್ದೂ ಕೂಡ ನನ್ನದೇ ವೈಯಕ್ತಿಕ ನಿರ್ಧಾರ. ನನ್ನ ತಪ್ಪು-ಒಪ್ಪುಗಳಿಗೂ ನಾನೇ ಜವಾಬ್ದಾರಳು. ನನ್ನ ಸೋಲು, ದುಃಖಗಳಿಗೆ ಬೇರೆಯವರನ್ನು ದೂರುವಷ್ಟು ನಾನು ಹೇಡಿಯಲ್ಲ, ಎಂದು ಮುಕ್ತವಾಗಿ ಹೇಳಿಕೊಂಡರು.

ತರುಣಿಯೊಬ್ಬಳ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ, ಈಗಿನ ಪೀಳಿಗೆಯ ಪ್ರೀತಿ-ಪ್ರೇಮ-ವಿವಾಹ ಮತ್ತು ಭಾವನಾತ್ಮಕ ನೋವುಗಳ ಬಗ್ಗೆಯೂ ಮಾತನಾಡಿದ ಆನಂದ್ ಶೀಲಾ ಜಗತ್ತನ್ನು ಕೆಟ್ಟದೆಂದು ದೂರಿ ಪ್ರಯೋಜನವಿಲ್ಲ. ಎಲ್ಲಾ ಕಾಲದಲ್ಲಿ ಎಲ್ಲಾ ಬಗೆಯ ಜನರೂ ಇದ್ದರು. ಇಷ್ಟಿದ್ದರೂ ಈ ಜಗತ್ತನ್ನು ಸ್ವರ್ಗವನ್ನಾಗಿಸಬೇಕೆಂಬ ಬಲವಾದ ಇಚ್ಛೆಯು ಇರುವುದೇ ಆದಲ್ಲಿ ನಮ್ಮ ಸ್ವರ್ಗವನ್ನು ನಾವೇ ಸೃಷ್ಟಿಸಬೇಕು, ಎಂದು ಮನೋಜ್ಞವಾಗಿ ಹೇಳುತ್ತಾರೆ.

ತಮ್ಮ ಜೈಲುವಾಸದ ದಿನಗಳು, ಏನಾದರೂ ರೋಚಕ ಸುದ್ದಿ ಸಿಗಬಹುದೆಂದು ಸೆರೆಮನೆಯ ಆವರಣದಲ್ಲೇ ಓಡಾಡುತ್ತಿದ್ದ ಪತ್ರಕರ್ತರ ಸಮೂಹ, ತಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲು ಜೈಲಿನ ಅಧಿಕಾರಿಗಳು ಮಾಡುತ್ತಿದ್ದ ಕುತಂತ್ರದ ಆಟಗಳು, ಇಂದಿಗೂ ಇ-ಮೈಲ್ ಸಹಿತವಾಗಿ ಹಲವು ಮೂಲಗಳಿಂದ ಬರುತ್ತಿರುವ ಕೊಲೆ ಬೆದರಿಕೆಗಳು… ಹೀಗೆ ಎಲ್ಲವನ್ನೂ ಸಹಜ ಸಂಗತಿಯೆಂಬಂತೆ ಮುಗುಳ್ನಗೆಯ ಸಹಿತವಾಗಿ ಹೇಳುವ ಶೀಲಾ ತಮ್ಮ ವಿಲಕ್ಷಣ ಹಿನ್ನೆಲೆಯ ಹೊರತಾಗಿಯೂ ಇಷ್ಟವಾಗುತ್ತಾರೆ. ಓಶೋ ರಜನೀಶ್, ರಜನೀಶಪುರಂ, ಜೈಲುವಾಸಗಳೂ ಸೇರಿದಂತೆ ಬಹಳಷ್ಟು ಸಂಗತಿಗಳು ಅವರಿಗೀಗ ತಾವು ಸಾಗಿ ಬಂದ ದಾರಿಯ ರೋಚಕ ಕಥೆಗಳಷ್ಟೇ.

ಒಟ್ಟಿನಲ್ಲಿ ವೇದಿಕೆಯ ಮೇಲಿದ್ದ ಶೀಲಾರಿಗೂ, ಕೆಳಗಿದ್ದ ಯುವಕ-ಯುವತಿಯರಿಗೂ ಇಲ್ಲಿ ಜನರೇಷನ್ ಗ್ಯಾಪ್ ಎಂಬುದು ಅಡ್ಡಗೋಡೆಯಾಗಿ ಬರಲೇ ಇಲ್ಲ ಎಂಬುದು ನನ್ನನ್ನೂ ಸೇರಿದಂರೆ ಬಹುತೇಕರ ಅಭಿಪ್ರಾಯವೂ ಆಗಿತ್ತು. ಏಕೆಂದರೆ ಹಿಪ್ಪಿ ಚಳುವಳಿಯಂಥಾ ಘಟನೆಗಳಿಗೆ ಸ್ವತಃ ಸಾಕ್ಷಿಯಾಗಿದ್ದ ಶೀಲಾರಂತಹ ವ್ಯಕ್ತಿಗಳು ಅರ್ಧ ದಶಕದ ಹಿಂದೆಯೇ ಸ್ವಚ್ಛಂದವಾಗಿ ಬದುಕಿದವರು. ಮುಕ್ತ ಲೈಂಗಿಕತೆಯನ್ನೂ ಸೇರಿದಂತೆ ಶೀಲಾರ ಸಮಕಾಲೀನರು ಪ್ರತಿಪಾದಿಸುವ ಸಂಗತಿಗಳೆಲ್ಲವನ್ನೂ ಒಪ್ಪಿಕೊಳ್ಳಲಾಗದಿದ್ದರೂ, ಬದುಕಿನ ಸೋಲು-ಸವಾಲುಗಳಿಗೆ ತಮ್ಮನ್ನು ತಾವು ಧೈರ್ಯವಾಗಿ ಒಡ್ಡಿಕೊಂಡು, ಜೀವನಾನುಭವಗಳಿಂದ ಪಾಠ ಕಲಿಯುವ ದಿಟ್ಟತನವನ್ನು ಆ ಪೀಳಿಗೆಯು ನಿಜಕ್ಕೂ ಸ್ವತಃ ಬದುಕಿ ಕಲಿಸಿತ್ತು. ಇದರಲ್ಲಿ ಎರಡು ಮಾತಿಲ್ಲ.

ನೀವೊಬ್ಬರು ಫೈರ್ ಬ್ರಾಂಡ್ ಲೇಡಿ, ಎನ್ನುತ್ತಾ ಪ್ರೇಕ್ಷಕರ ಗುಂಪಿನಿಂದ ಮಾತನ್ನಾರಂಭಿಸಿದ ಹುಡುಗಿಯೊಬ್ಬಳು ನಿಮ್ಮ ಬದುಕಿನ ಯಾವುದಾದರೂ ಭಾಗವೊಂದನ್ನು ಬದಲಾಯಿಸುವುದು ಸಾಧ್ಯವಿದ್ದರೆ, ಯಾವುದನ್ನು ಹೊಸದಾಗಿ ತನ್ನಿಷ್ಟದಂತೆ ಬದಲಾಯಿಸಲಿಚ್ಛಿಸುವಿರಿ?, ಎಂಬ ಪ್ರಶ್ನೆಯೊಂದಿಗೆ ಅಂದು ಶೀಲಾರ ಮುಂದೆ ನಿಂತಿದ್ದಳು. ಯಾವುದನ್ನೂ ಇಲ್ಲ. ಯಾವುದರ ಬಗ್ಗೆಯೂ ನನಗೆ ಬೇಜಾರಿಲ್ಲ. ನನ್ನೆಲ್ಲಾ ಸೋಲು-ಗೆಲುವುಗಳಿಗೆ, ಸುಖ-ದುಃಖಗಳಿಗೆ ನಾನೇ ಜವಾಬ್ದಾರಳು, ಎಂದು ತಮ್ಮ ಎಂದಿನ ಧಿಮಾಕಿನಲ್ಲೇ ನುಡಿದರು ಮಾ ಆನಂದ್ ಶೀಲಾ.

ಕೆಲ ವರ್ಷಗಳ ಹಿಂದೆ ಪತ್ರಕರ್ತನೊಬ್ಬ ಇದೇ ಪ್ರಶ್ನೆಯನ್ನು ಬೇರೊಂದು ಧಾಟಿಯಲ್ಲಿ ಶೀಲಾರಿಗೆ ಕೇಳಿದ್ದ. ಅದು ಅವರಲ್ಲಿ ಪಾಪಪ್ರಜ್ಞೆಯನ್ನು ಮೂಡಿಸುವಂತಿನ, ಪ್ರಶ್ನೆಯ ರೂಪದಲ್ಲಿ ಬಂದಿದ್ದ ನೇರ ದಾಳಿಯಾಗಿತ್ತು. ಅಂದಿನಿಂದ ಬಹಳಷ್ಟು ಸಂಗತಿಗಳು ಜಗತ್ತಿನಲ್ಲಿ ಬದಲಾಗಿರಬಹುದು. ಆದರೆ ಆನಂದ್ ಶೀಲಾರ ಮಾತುಗಳಲ್ಲಿರುವ ಬಿರುಸು ಮಾತ್ರ ಬದಲಾಗಿಲ್ಲ. ಹಾಗೆಯೇ ಈ ಬುದ್ಧಿವಂತಿಕೆಯ ಪ್ರಶ್ನೆಗೆ ಆಕೆ ಡೋಂಟ್ ಕೇರ್ ಧಾಟಿಯಲ್ಲಿ ಹೇಳುವ ಉತ್ತರವೂ. ಯಾರೇನೇ ಹೇಳಲಿ, ಓಶೋ ರಜನೀಶರ ಸಾಮ್ರಾಜ್ಯವು ಓಶೋರ ದೇಹಾಂತ್ಯದ ನಂತರ ತಣ್ಣಗಾದರೂ ಶೀಲಾ ಮಾತ್ರ ಇಂದಿಗೂ ‘ಫೈರ್ ಬ್ರಾಂಡ್!’

ಆದರೆ ಈ ಬಾರಿ ಕಿಡಿ ಹಚ್ಚಿದ ಕ್ರೆಡಿಟ್ ಮಾತ್ರ ನೆಟ್-ಫ್ಲಿಕ್ಸ್ ಗೆ ಸಲ್ಲುತ್ತದೆ. ಹಾಗೆಯೇ ಮೂವತ್ತನಾಲ್ಕು ವರ್ಷಗಳ ನಂತರ ಮಾ ಆನಂದ್ ಶೀಲಾರನ್ನು ಮತ್ತೆ ಭಾರತಕ್ಕೆ ಕರೆ ತಂದ ಆಯೋಜಕರಿಗೂ!

‍ಲೇಖಕರು avadhi

November 17, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: