ಅನಾಮಿಕಾ @ ಹ್ಯಾಂಡ್ ಪೋಸ್ಟ್ : ನಿನ್ನ ತುಂಬಿದೆದೆಗಳನ್ನು ನೋಡುವಾಗಲೆಲ್ಲ…

ಬ್ರಹ್ಮಪುತ್ರ ನದಿ ಅಕ್ಕ-ಪಕ್ಕ ಆಡಿ ಬೆಳೆಯುವ ಈಶಾನ್ಯ ಭಾರತದ ಹೆಣ್ಣುಮಕ್ಕಳ ಗಟ್ಟಿತನ ನನ್ನನ್ನು ಯಾವಾಗಲೂ ಬೆರಗುಗೊಳಿಸುತ್ತದೆ.

ಹಿಂದೊಮ್ಮೆ ಸೇನಾ ಪ್ರಾಜೆಕ್ಟ್ ವೊಂದರಲ್ಲಿ ಗೌಹಾಟಿಗೆ ಹೊರಟಿದ್ದ ಸ್ನೇಹಿತನೊಟ್ಟಿಗೆ ನಾನೂ ಹೋಗಿದ್ದೆ. ಅವನು ಮಿಲಿಟರಿ ಕ್ಯಾಂಪಿನಲ್ಲಿ ಉಳಿದಿದ್ದರಿಂದ ನನಗೆ ಸ್ಥಳೀಯವಾಗಿ ವ್ಯವಸ್ಥೆ ಮಾಡಲಾಗಿತ್ತು. ಹೆಣ್ಣುಮಗಳು ನರಳುವ ಸದ್ದೊಂದು ಮಧ್ಯರಾತ್ರಿ ನಿದ್ದೆಗೆಡಿಸಿತು.

ಸೆಕ್ಯೂರಿಟಿ ಕಾರಣದಿಂದ ಆಗ ಹೊರಗಡೆ ಹೋಗಲಾರದ್ದಕ್ಕೆ ಬೆಳಗಿಗೆ ಅದರ ಮೂಲ ಹುಡುಕುತ್ತಿದ್ದೆ. ನನ್ನ ವಯಸ್ಸಿನ ಹೆಣ್ಣುಮಗಳೊಬ್ಬಳು ಎರಡು ಬಕೆಟ್ ನಲ್ಲಿ ನೀರೆತ್ತಿಕೊಂಡು ನಾನು ನಿಂತಿದ್ದ ಗುಡ್ಡ ಹತ್ತುತ್ತಿದ್ದಳು. ಪ್ರತಿಸಲದಂತೆ ಅಪರಿಚಿತ ಪ್ರದೇಶಗಳಲ್ಲಿ ಭಾಷೆ ಬರದಿರುವುದು ಒಂದು ತೊಂದರೆ ಅಂತ ಅನಿಸದೆ ಸಂವಹನ ನಡೆಸುತ್ತ ರಾತ್ರಿಯ ಘಟನೆಯ ಬಗ್ಗೆ ಕೇಳಿದೆ.

ಮನೆಗೆ ಕರೆದುಕೊಂಡು ಹೋದಳು. ರಜಾಯಿ ಸುತ್ತಿಸಿಕೊಂಡು ನಿದ್ರಿಸುತ್ತಿದ್ದ ಹಸುಗೂಸು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. “ನಿನ್ನದಾ?” ಎಂದೆ “ಹೂಂ” ಎಂದಳು. ರಾತ್ರಿ ಹೆರಿಗೆ ಬೇನೆ ತಿಂದು, ತನ್ನ ಬಾಣಂತನ ತಾನೇ ಮಾಡಿಕೊಂಡು, ಬೆಳಗ್ಗೆ ಇಪ್ಪತ್ತು ಅಡಿ ಆಳದಿಂದ ನೀರು ತಂದು ಸ್ನಾನಕ್ಕೆ ಅಣಿ ಮಾಡಿಕೊಳ್ಳುತ್ತಿದ್ದವಳ ಮನೋಬಲಕ್ಕೆ ನಾನು ಅಕ್ಷರಶಃ ಕೈ ಮುಗಿದಿದ್ದೆ.

ಮುಂದಿನ ಕ್ರಿಯೆ ಇನ್ನೂ ಮನ ಕಲಕಿತು. ಹಾಲಿನ್ನೂ ಜಿನುಗದ ಕಾರಣ ಮಗುವಿಗೆ ಎದೆಯೂಡಿಸಲು ಮೊದಲ ಹೆರಿಗೆಯ ಅನನುಭವಿ ಹೆಣ್ಣು ಪ್ರಯತ್ನ ಪಡುತ್ತಿದ್ದರೆ, ಸರಿಯಾಗಿ ನಿಮಿರದ ಮೊಲೆಯ ತೊಟ್ಟು ಹಿಡಿಯಲಾಗದೆ ಮಗು ಹಸಿವಿನಿಂದ ಅಳುತ್ತಿದೆ. ಇವಳೇನು ಮಾಡಬಹುದು ಎನ್ನುವ ಕಾಳಜಿ ನನಗೆ.

ಸೊಂಟಕ್ಕೆ ಖೀರಾವೊಂದನ್ನು ಬಿಗಿಯಾಗಿ ಕಟ್ಟಿಕೊಂಡು ಕಾಡಿನ ಮನೆಯಂಗಳದಲ್ಲಿ ನಿರ್ಭಯವಾಗಿ ಓಡಾಡುತ್ತಿದ್ದ ತುಂಬಿದೆದೆಯ ಆ ಜೀವಂತ ಶಿಲಾಬಾಲಿಕೆ ಮಗುವನ್ನು ನನ್ನ ಕೈಗೆ ವರ್ಗಾಯಿಸಿದಳು. ಓಡಿಹೋಗಿ ಸೂಜಿಯಿಲ್ಲದ ಪಿಚಕಾರಿಯಂತಹ ಸಿರಿಂಜ್ ತಂದು, ಅದನ್ನು ಮೊಲೆ ತೊಟ್ಟಿಗಿಟ್ಟು ರಕ್ತ ತೆಗೆಯುವಂತೆ ಎದೆಹಾಲು ‘ಕರೆದಳು.’

ಪಿರಿಯಡ್ಸ್ ಇನ್ನೂ ವಾರವಿದೆ ಎನ್ನುವಾಗಲೇ ಶುರುವಾಗುವ ಸ್ತನಗಳ ನೋವಿಗೆ ಹೈರಾಣಾಗಿ, ಕೆಲಸಗಳಿಂದ ಸ್ವಯಂ ರಿಯಾಯಿತಿ ಘೋಷಿಸಿಕೊಂಡು ರೆಸ್ಟಿನಲ್ಲಿ ಇರಬಯಸುವ ನಾನು ಈ ಕ್ರಿಯೆಯಿಂದ ಉಂಟಾಗಬಹುದಾದ ನೋವು ನೆನೆದೇ ತುಟಿ ಕಚ್ಚಿ ಸ್ತಬ್ಧಳಾಗಿದ್ದೆ.

ಮುಂದೆ ತಾಯಿಮಗುವನ್ನು ಹತ್ತಿರದ ಸೇನಾ ವೈದ್ಯರ ಸುಪರ್ದಿಗೆ ಒಪ್ಪಿಸಿ ನಮ್ಮ ಕೆಲಸಕ್ಕೆ ಸಾಗಿದೆವು. ಬರೆವಣಿಗೆಯಲ್ಲಿ ಈ ವಿಷಯ ಆಯ್ದುಕೊಳ್ಳಲು ಕಾರಣಳಾದ ಆ ಅನಾಮಧೇಯ ಹೆಣ್ಣುಮಗಳಿಗೇ ಈ ಅಕ್ಷರಗಳು ಅರ್ಪಣೆ.

ವಾಯುಸೇನೆಯಲ್ಲಿದ್ದ ಗೆಳೆಯನೊಬ್ಬ ಒಮ್ಮೆ ಕಾರ್ಯನಿಮಿತ್ತ ಹಿಮಾಲಯದ ತಪ್ಪಲಿನಲ್ಲಿ ತುಂಬಾ ದಿನ ಕಳೆಯಬೇಕಾಗಿತ್ತು. ಆ ಏಕತಾನತೆಯಿಂದಾಗಿ ಖಿನ್ನತೆಗೆ ಜಾರುತ್ತಿದ್ದಾನೆ ಎನ್ನುವುದು ಗೊತ್ತಾಗಿ ಅವನಲ್ಲಿಗೆ ಓಡಿದ್ದೆ. ಹೋದವಳನ್ನು ಅದೆಷ್ಟು affectionate ಆಗಿ ಅಪ್ಪಿ, ವಕ್ಷಃದಲ್ಲಿ ಮುಖ ಹುದುಗಿಸಿದ್ದನೆಂದರೆ ನನ್ನ ದೇಹದ ಬಿಸಿ ತಹಬಂದಿಗೆ ಬರಬೇಕಾದರೆ ಹತ್ತು ನಿಮಿಷವೇ ಬೇಕಾಯಿತು.

ಎಷ್ಟೋ ವರ್ಷಗಳ ಮೌನವ್ರತ ಮುರಿದಂತೆ ಮಾತಿಗೆ ಶುರುವಿಟ್ಟುಕೊಂಡು, “ಎದೆ ಮಿಡಿತ, ಉಸಿರ ಸದ್ದೂ ಕೇಳಿಸುವಂಥ ಈ ಮಂಜಿನ ವನದ ಏಕಾಂತದಲ್ಲಿ ನಿನ್ನೆದೆಯ ಮೇಲೆ ಒರಗುವ ಕನಸೊಂದು ನನ್ನನ್ನು ಅನವರತ ಕಾಡುತ್ತಲೇ ಇರುತ್ತದೆ. ಎಷ್ಟೊ ಸಲ ಹೇಳಬೇಕೆಂದಿದ್ದೆ ಈ ಎದೆಯಾಳದ ಮಾತನ್ನ,” ಎನ್ನುತ್ತಿದ್ದವನನ್ನು ತಡೆದು, “ನಿನ್ನ ಮಾತುಗಳಲ್ಲಿ ಬರುತ್ತಿರುವುದು ಇವೇ ಎದೆಗಳೇನಾ,” ಎಂದೆ.

“ಇಲ್ಲೂ! ನಿನಗೆ ತಮಾಷೆ,” ಎಂದು ಅಟ್ಟಿಸಿಕೊಂಡು ಬಂದು ಹಿಮದ ಮೇಲೆ ಕೆಡವಿ ಕಚಗುಳಿಯಿಟ್ಟು ಸುಸ್ತುಮಾಡಿ, ಬರಸೆಳೆದು ತಬ್ಬಿದ. “ಉಕ್ಕಿ ಹರಿದು ಬಿಡಲಿ ಎನ್ನುವಂಥ ಉತ್ಕಟ ಇಚ್ಛೆ ಎದೆ ಶಿಖರಗಳಲ್ಲಿ ಮುಖ ಹುದುಗಿಸಿದಾಗ ಅದರ ಸೌಮ್ಯತೆಗೆ ತಣಿಯುತ್ತದೆ. ಪ್ರಕೃತಿ ಮತ್ತು ಹೆಣ್ಣನ್ನು ನಾನು ಒಂದೇ ರೀತಿಯಾಗಿ ನೋಡುತ್ತೇನೆ. ಅದಕೆಂದೆ ನಿನ್ನ ತುಂಬಿದೆದೆಗಳನ್ನು ನೋಡುವಾಗಲೆಲ್ಲ ಹಿಮ ಕವಿದ ನುಣುಪು ಪರ್ವತಗಳ ಚಿತ್ರ ನನ್ನ ಮನದಲ್ಲಿ,” ಎಂದ.

ಹಿಂದೊಮ್ಮೆ ದಕ್ಷಿಣ ಭಾರತ ಪ್ರವಾಸಕ್ಕೆ ಹೋಗಿ ಬಂದವನೊಬ್ಬ, “ಟೂರಿನಲ್ಲಿ ದ್ವಾರಸಮುದ್ರಕ್ಕೂ ಹೋಗಿದ್ದೆ. ಚೆನ್ನಕೇಶವ ದೇವಾಲಯದ ಸ್ವರ್ಗದ ಬಾಗಿಲ ಬಲಪಾರ್ಶ್ವದಲ್ಲಿರುವ ಶಿಲಾಬಾಲಿಕೆಯ ಬೈತಲೆಯ ಮೇಲೆ ಒಂದು ಹನಿ ನೀರು ಹಾಕಿದರೆ ಅದು ಹಣೆಯಿಂದ ಜಿನುಗಿ ಮೂಗಿನ ತುಂದಿಯಿಂದ ಎಡಸ್ತನದ ತೊಟ್ಟಿಗುರುಳಿ ಅಲ್ಲಿಂದ ಎಡಗೈ ಹೆಬ್ಬರಳಿಗೆ ಬಿದ್ದು, ಅದೇ ಕಾಲಿನ ತೋರುಬೆರಳ ತುದಿಗೆ ಬೀಳುತ್ತದೆ. ಈ ಅದ್ಭುತ ಕುರಿತು ಪ್ರಾತ್ಯಕ್ಷಿಕೆ ತೋರಿಸುತ್ತಿದ್ದಾಗ ನನ್ನ ಸೇರಿದಂತೆ ಯಾರ  ನೋಟವೂ ಸ್ತನದ ತೊಟ್ಟಿನಿಂದ ಕೆಳಗಿಳಿಯಲೇ ಇಲ್ಲ. ಎಂತಹ ಸಂಯಮಿಯನ್ನೂ ಕೆಣಕಬಲ್ಲ ಮದನಿಕೆ ಅವಳು,” ಎಂದು ಹೇಳುತ್ತಿದ್ದ. ನೋಟದ ಸೊಗಸು ಏನು ಹೇಳಬಹುದು ಎಂದು ಗಮನಿಸುತ್ತಿದ್ದೆ. ಕಣ್ಣ ಕುಡಗೋಲಿನಿರಿತ ಕತ್ತಿನ ಕೆಳಗೆ!

ಸ್ನೇಹಿತನೊಬ್ಬನಿಗೆ ನನ್ನ ಸ್ನೇಹಿತೆಯ ದೇಹ ಸೌಷ್ಟವ ತುಂಬಾ ಇಷ್ಟವಾಗಿತ್ತು. ಸದಾ ಆಗಷ್ಟೇ ಸ್ನಾನ ಮಾಡಿ ಬಂದಂತೆ ಕಾಣಿಸುತ್ತಿದ್ದ ಆತನೂ ಆಕೆಗಿಷ್ಟವಾಗಿದ್ದ. ಅವಳ ದೇಹದ ಬಾಗುಗಳನ್ನು ಬಹಳ ಆಸಕ್ತಿಯಿಂದ, ಸೂಕ್ಷ್ಮವಾಗಿ ಗಮನಿಸುತ್ತ ಅವನು ಗಂಟೆಗಳನ್ನೇ ಕಳೆಯುತ್ತಿದ್ದ. ಯಾರಿಗೂ ನೋವುಂಟು ಮಾಡದ ಪಿತೂರಿಗಳು, ಹುಡುಗಾಟಿಕೆಯ ಕೀಟಲೆಗಳು, ನವಿರಾದ ಪ್ರಣಯದಲ್ಲಿ ನಮ್ಮೆಲ್ಲರಿಗಿಂತ ಒಂದು ಕೈ ಮುಂದಿದ್ದ ಅವಳಿಗೂ ಆ ಸಾಂಗತ್ಯ ಖುಷಿ ಕೊಡುತ್ತಿತ್ತು, ಹತ್ತಿರವಾಗ ಬಯಸುತ್ತಿದ್ದಳು. ಆದರೆ ಅವನೇ, “ಅವಳ ಎದೆಮಿದುವಿನ ಮಿಡುಕಾಟದಲ್ಲಿ ಸಿಕ್ಕಿಕೊಂಡರೆ ಹೊರಬರುವ ಯೋಚನೆಯೇ ಬರುವುದಿಲ್ಲ. ಹಾಗಂತ ಅದನ್ನು ಸದಾ ಜಾರಿಯಲ್ಲಿ ಇಡುವ ಧೈರ್ಯವೂ ನನಗಿಲ್ಲ ಕಣೇ,” ಎಂದು ನನ್ನ ಹತ್ತಿರ ಹೇಳುವಾಗ ತೆಳ್ಳಗಿನ ಅರ್ಧ ಸತ್ತಂತಿದ್ದ ಅವನು ಮತ್ತಷ್ಟು ಸತ್ತಂತಾಗಿದ್ದ.

ಗೆಳೆಯನಿಗೆ, ಸಖನಿಗೆ, ಸ್ನೇಹಿತನಿಗೆ ಮಾತ್ರವಲ್ಲ ಇನಿಯ, ಪ್ರಿಯತಮ, ಮಾತಿನ ಫೋರ್‌ ಪ್ಲೇಯಲ್ಲಿರುವವ, ಪ್ಲರ್ಟ್ ಮಾಡುತ್ತಿರುವವನನ್ನೂ ಸೇರಿದಂತೆ ಎಲ್ಲರಿಗೂ ಇದು ಒಂದು ಆಬ್ಸೇಶನ್, ಜೊತೆಗೆ ವಿಚಿತ್ರ ಆಕರ್ಷಣೆ ಎನ್ನುವುದು ಖಾತ್ರಿಯಾಯಿತು.

ಒಡಲುಗಳ ಜತೆ ಆಡುವಾಗಲೆಲ್ಲ ಎಲ್ಲರದ್ದೂ ಅದೇ ಹುಡುಕಾಟ ಎನಿಸುತ್ತಿರುತ್ತದೆ. ಒಲವಿನ ಮೊದಲ ಹುಡುಗ ಮಡಿಲಲ್ಲಿ ಮಲಗಿದಾಗ ಶಾಕ್ ಹೊಡೆದಂತೆ ಬೆಚ್ಚಿ, ಅಗತ್ಯಕ್ಕಿಂತ ಜಾಸ್ತಿಯೇ ಉದ್ವಿಗ್ನಳಾಗಿ ಮುಖಕ್ಕೆ ರಕ್ತ ಚಿಮ್ಮಿಸುವ ಅಗತ್ಯವಿರಲಿಲ್ಲ ಎಂದು. ಈ ಸರಿರಾತ್ರಿಯಲ್ಲಿ ಎದೆಯೂಡಿಸುವವರಿದ್ದರೆ ಅದರ ಸುಖವೇ ಬೇರೆ ಎನ್ನುವವನಿಗೆ, ಎದೆಗೆ ಏದುಸಿರು ತರುವ ಮಾಟದ ಎದೆಕಟ್ಟಿನಲ್ಲೇ ನಿನ್ನ ಸೌಂದರ್ಯವಿದೆ ಎಂದು ಕಾಡುವವನಿಗೆ ಈಗ ಮುಗುಳ್ನಗೆಯೊಂದೇ ಉತ್ತರ.

ಈ ವಿಷಯದ ಬಗ್ಗೆ ನನ್ನನ್ನು ಯಾವಾಗಲೂ ಕಾಡುವುದು ಶಿಲ್ಪಿಗಳು. ಕಲೆಯ ನೈಪುಣ್ಯತೆ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವಳಲ್ಲ. ಆದರೆ ಎಲ್ಲೋರಾದ ಇಪ್ಪತ್ತೊಂಬತ್ತನೆಯ ಗುಹೆಯಲ್ಲಿ ಶಿವ ಪಾರ್ವತಿಯ ಬೆನ್ನು ಬಳಸಿ, ಬೆರಳುಗಳಿಂದ ಮೊಲೆ ಹಿಡಿದಿರುವ ಶಿಲ್ಪವನ್ನು ಕೆತ್ತಿದ ಶಿಲ್ಪಿಗಳದ್ದು ಅದೆಂತಹ ಕಾಣ್ಕೆ ಮತ್ತು ಧ್ಯಾನಸ್ಥ ಸ್ಥಿತಿ ಎಂದು ನಾನು ಬೆರಗಾಗುತ್ತೇನೆ.

ಈ ಕ್ಷಣ ನನ್ನ ಮುಂದಿರುವ ಇನ್ನೊಂದು ಚಿತ್ರ ಪಟ್ಟದಕಲ್ಲಿನ ವಿರೂಪಾಕ್ಷ ದೇವಸ್ಥಾನದಲ್ಲಿರುವ ದೇವಿ ವಿಗ್ರಹ. ಗರ್ಭಗುಡಿಗೆ ಮುಖ ಮಾಡಿದರೆ ಬಲ ಬದಿಯಲ್ಲಿದೆ ಮೂರೂವರೆ ಅಡಿಯ ಕಲ್ಲ ಕೆತ್ತನೆ. ದೇವಿ ರಾಕ್ಷಸ ಸಂಹಾರಕ್ಕಾಗಿ ಆಯುಧವನ್ನು ಮೇಲೆ ಎತ್ತಿದ್ದಾಳೆ. ಎರಡು ಕ್ಷಣ ದಿಟ್ಟಿಸಿದರೆ, ರಭಸದಿಂದ ಕೈ ಎತ್ತಿದ್ದಕ್ಕೆ ಒಳ ತೋಳಿನಿಂದ ಎದ್ದ ತುಯ್ದಾಟ ಬಲಸ್ತನದ ಮೇಲ್ಭಾಗದ ಮಿದುವಿನಲ್ಲಿ ಒಡಮೂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆ ಕೆತ್ತನೆಯನ್ನು ಅದೆಷ್ಟು ಸಲ ನೋಡಿ ನೋಡಿ ಮಾರು ಹೋಗಿದ್ದೇನೊ ನಾನು!

ಮೊನ್ನೆ ಆನ್ ಲೈನ್ ಇದ್ದೂ, ಚಾಟ್ ಮಾಡದೆ ಕೂತಿದ್ದಾಗ ಓಯ್, ವಾಟ್ಸ್ಯಾಪ್ ನಲ್ಲಿ ಕರೆದಿದ್ದು ಕೇಳದ ನಿನಗೆ artificial Deafness? ಎಂದು ಟೈಪಿಸಿದನೊಬ್ಬ. ನಸುನಗುತ್ತ ನಾನು, “ನಾವು ಮೊಲದ ಮನಸಿನ ಹುಡುಗಿಯರು. ಸಣ್ಣ ಕದಲಿಕೆ, ಕಂಪನವೂ ಚಿತ್ತದಲ್ಲಿ ದಾಖಲಾಗುತ್ತದೆ. ಕರೆದದ್ದು ಕೇಳದಿರುತ್ತದೆಯೇ…” ಎಂದು ಪ್ರತಿಕ್ರಿಯಿಸುವಾಗ ಮೊಲದ emoticon ಅಂಟಿಸಿದ್ದೆ (ನನ್ನಿಷ್ಟದ ಕೆಲವೇ ಕೆಲವು ಎಮೋಜಿಗಳಲ್ಲಿ ಇದೂ ಒಂದು). “ಚಿತ್ರ ಅಂಟಿಸಿ, ಮೊಲೆಯ ಮನಸಿನ ಹುಡುಗಿಯರು ಎಂದು ತಪ್ಪಾಗಿ ಓದುವ ತುಂಟತನವೂ ಇಲ್ಲದಂತೆ ಮಾಡಿದೆಯಲ್ಲೇ ಪಾಪಿ,” ಎಂದು ಶಪಿಸಿದ್ದಕ್ಕೆ ಇದೆಲ್ಲ ಮತ್ತೊಮ್ಮೆ ನೆನಪಾಯಿತು!

‍ಲೇಖಕರು avadhi

February 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: