ಶಿವಕುಮಾರ ಮಾವಲಿ ಹೊಸ ಕಥೆ: ಗೋಡೆ 

 

ಶಿವಕುಮಾರ್ ಮಾವಲಿ 

ಊರಿನ ಮುಖ್ಯಸ್ಥನೊಬ್ಬ ತನ್ನ ಮಗಳ ಮದುವೆ ಮಾಡುವುದರ ಬಗ್ಗೆ ಆಲೋಚಿಸುತ್ತಿದ್ದ.‌ ತನ್ನೂರಿನಿಂದ ಬಹುದೂರದ ನಗರವೊಂದರಲ್ಲಿ ವಾಸವಿರುವ ಸಂಬಂಧವೊಂದರ ಪ್ರಸ್ತಾಪವಾಯಿತು. ಅಷ್ಟು ದೂರದೂರಿನ ಸಂಬಂಧ ಬೆಳೆಸಿದರೆ ಹೋಗಿ ಬರುವುದು ಕಷ್ಟವಾದೀತು , ಅಲ್ಲದೆ ಮಗಳ ಆಗು-ಹೋಗುಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಆ ಬಗ್ಗೆ ಒಂದು ನಿಗಾ ಇಡುವುದು ಸಾಧ್ಯವಾಗದೇ ಹೋದೀತು ಎಂದು ಯೋಚಿಸಿದ. ಆದರೆ ಆ ಸಂಬಂಧ ಬಂದ ನಗರದ ಬಗ್ಗೆ ಜನರೆಲ್ಲ ಬಹಳ ಒಳ್ಳೆಯ ಮಾತುಗಳನ್ನು ಆಡತೊಡಗಿದರು. ಸ್ವತಃ ಮುಖ್ಯಸ್ಥನೂ ಆಗಾಗ ಪತ್ರಿಕೆಗಳಲ್ಲಿ  ಆ ನಗರದ ಅಭಿವೃದ್ಧಿ,ತಂತ್ರಜ್ಞಾನ, ರಸ್ತೆ , ಮೇಲ್ಸೇತುವೆಗಳು, ಮುಕ್ತ ಜೀವನ ಇವೇ ಮುಂತಾದವುಗಳ ಬಗ್ಗೆ ಬರುತ್ತಿದ್ದ ವರದಿಗಳನ್ನು ಓದಿದ್ದ. ಆದರೂ ಈ ಸಂಬಂಧ ಬೆಳೆಸುವುದೋ ಬೇಡವೋ ಎಂಬ ಆತಂಕದಲ್ಲಿದ್ದಾಗಲೇ ವರನ ಕಡೆಯವರು, ತಾವು ಸಾಕಷ್ಟು ಸ್ಥಿತಿವಂತರಿದ್ದು,ವರ ಕೂಡ ಒಳ್ಳೆಯ ಸಂಬಳವಿರುವ ಉದ್ಯೋಗದಲ್ಲಿರುವುದಾಗಿಯೂ, ಈಗಾಗಲೇ ಸಾಕಷ್ಟು ವಿದೇಶಗಳಿಗೆ ಉದ್ಯೋಗದ ಸಲುವಾಗಿ ಹೋಗಿ ಬಂದಿದ್ದರೂ ನಮ್ಮ ದೇಶವೇ ನಮಗೆ ಯೋಗ್ಯವಾದುದೆಂದು ಸಮುದ್ರೋಲ್ಲಂಘನೆ ಮಾಡಲು ಬಯಸದೆ ಈ ನಗರದಲ್ಲಿಯೇ ನೆಲೆಸಿರುವುದಾಗಿಯೂ, ಎಲ್ಲಕ್ಕಿಂತ ಮುಖ್ಯವಾಗಿ ತಮಗೆ ಹಳ್ಳಿಯ ಸಂಪ್ರದಾಯವನ್ನು ಮೈಗೂಡಿಸಿಕೊಂಡಿರುವ , ಅಷ್ಟಾಗಿ ಮಾರ್ಡನ್ ಅಲ್ಲದ ಹುಡುಗಿಯೇ ಅಗತ್ಯವಿದೆ ಎಂಬೆಲ್ಲ ವಿಷಯಗಳನ್ನು ಪರೋಕ್ಷವಾಗಿ ಆ ಮುಖ್ಯಸ್ಥನ ಕಿವಿಗೆ ಬೀಳಿಸಿದರು.

ಸಹಜವಾಗಿಯೇ ಇದರಿಂದ ಪ್ರಫುಲ್ಲನಾದ ಆತ ಇದನ್ನು ಕೇವಲ ಒಂದು ಕೌಟುಂಬಿಕ ವಿದ್ಯಮಾನವಾಗಿ ನೋಡದೆ, ಇದು ತನ್ನ ಊರಿನ ಸಂಸ್ಕ್ರತಿ ಮತ್ತು ಹಿರಿಮೆಗೆ ಸಲ್ಲಬಹುದಾದ ಗೌರವವೆಂದೇ ಭಾವಿಸಿದ. ಜೊತೆಯಲ್ಲಿರುವ ಆಪ್ತರೂ ಕೂಡ ‘ಅಯ್ಯೋ‌, ಅದೃಷ್ಟ ನಿಮ್ಮನ್ನೇ ಹುಡುಕಿಕೊಂಡು ಬಂದಿದೆ. ಅಷ್ಟು ದೊಡ್ಡ ಸಂಬಂಧ ನಿಮ್ಮಂಥೋರಿಗೆ ಅಲ್ದೇ ಇನ್ಯಾರಿಗೆ ಬರುತ್ತೆ? ಇದು ನಮ್ಮೂರಿಗೂ ಹೆಮ್ಮೆ ತರೋ ವಿಷಯ. ನೀವು ಚಕಾರ‌ ಎತ್ತದೆ ಒಪ್ಕೊಳ್ಳಬೇಕು. ನಮ್ಮೂರಿನ ಕೆಲವು ಅನುಕೂಲಸ್ಥರ ಮಕ್ಕಳೂ ಕೂಡ ಆ ನಗರದಲ್ಲಿ ಕೆಲಸ ಮಾಡ್ತಾ ಇದಾರೆ. ಅವರೆಲ್ಲ ಆ ನಗರದ ಬಗ್ಗೆ ಹೇಳೋದನ್ನು ಕೇಳಿದ್ರೆ ನಮ್ಗೂ ಅಲ್ಲಿ ಹೋಗಿರಬೇಕು ಅನ್ಸುತ್ತೆ. ನಮ್ ಹಣೇಲಿ ಅದೆಲ್ಲ ಇಲ್ಲ. ನಿಮ್ ಮಗಳಿಗೆ ಅಂಥ ಅವಕಾಶ ಸಿಕ್ಕಿದೆ ಬೇಡ ಅನ್ಬೇಡ್ರಿ’ ಎಂದು ದನಿಗೂಡಿಸಿದರು. ಆ ಮುಖ್ಯಸ್ಥನಿಗೂ ಅದು ಸರಿ ಅನ್ನಿಸಿತು. ಆದರೆ, ‘ಇವೆಲ್ಲ ಸರಿ ಆಗ್ ಬರೊಲ್ಲ ರೀ, ಆ ಸಿಟಿಲೆಲ್ಲ ಹೆಂಗ್ ಬೇಕ್ ಹಾಗ್ ಬದುಕ್ತಾರೆ. ನಾವೇನು ಟಿವಿಲಿ ನೋಡಿಲ್ವಾ ? ಸುಮ್ನೆ ಅವರಿಗೆ ಹಳ್ಳಿಯೋರು ಬೇಕಾಗಿರೋದು ಅವ್ರ ಮಾತು ಕೇಳ್ಕೊಂಡ್ ಇರೋಕೆ ಅಷ್ಟೆ. ನಮ್ ಊರ್ ಹುಡುಗಿ ಬಾಳು ಹಾಳಾಗ್ದೇ ಇದ್ರೆ ಸಾಕು. ಸರೀಕರ ಜೊತೆ ಸಂಬಂಧ ಮಾಡ್ಬೇಕು. ಅದ್ನ ಬಿಟ್ಟು ಆಕಾಶಕ್ಕೆ ಏಣಿ ಹಾಕೋಕ್ ಹೋದ್ರೆ ಆಮೇಲೊಂದಿನ ಬಾಯ್ ಬಡ್ಕೋಬೇಕಾಗುತ್ತೆ. ಆದ್ರೂ  ಅವರಪ್ಪಂಗೆ ಈ ಸರಿ ತಾನು ಊರ ಅಧ್ಯಕ್ಷ ಚುನಾವಣೆಲಿ  ಗೆದ್ದಿದೀನಿ ಅನ್ನೋದು ಜಂಭದ ವಿಷಯ ಆಗಿತ್ತು. ಇನ್ನು, ಸಿಟಿಲಿರೋ ಸಂಬಂಧ ಬಂದಿದೆ ಅನ್ನೋದು ಷೋಕಿ ಆಗೋಗಿದೆ ಅವ್ನಿಗೆ. ಅನುಬವಿಸ್ತಾರೆ ಬಿಡ್ರಿ ಮುಂದೊಂದು ದಿನ ‘ ಎಂದು ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಒಂದು ಗುಂಪೂ ಆ ಊರಿನಲ್ಲಿ‌ ಇತ್ತು.
*                 *                 *                   *
ದೊಡ್ಡ ನಗರದ ಮೇಲಿನ ಪ್ರೀತಿ ಆ ಸಂಬಂಧ ಕುದುರಲು ಯಾವುದೇ ಅಡ್ಡಿಯನ್ನೂ ನಿವಾರಿಸುವಷ್ಟು ಶಕ್ತವಾಗಿತ್ತು. ಆದರೆ,ಹುಡುಗನ ಕಡೆಯವರು ಹುಡುಗಿಯನ್ನು ನೋಡಲು ಈ ಹಳ್ಳಿಗೆ ಬರಲು ಸದ್ಯಕ್ಕೆ ಆಗುವುದಿಲ್ಲವೆಂದೂ, ಹುಡುಗಿಯನ್ನು ತಾವೇ ಆ ನಗರಕ್ಕೆ ಕರೆದುಕೊಂಡು ಬರಬೇಕಾಗಿಯೂ, ಹಾಗೆಯೇ ಎಷ್ಟು ಜನ ಬರುವವರೆಂದು ತಿಳಿಸಿದರೆ ತಾವೇ ವಾಹನ ವ್ಯವಸ್ಥೆ ಮಾಡುವುದಾಗಿಯೂ ಹೇಳಿದರು. ಇದಕ್ಕೆ ಊರಿನ ಮುಖ್ಯಸ್ಥನ ಕುಟುಂಬ ಅನಿವಾರ್ಯವಾಗಿ ಒಪ್ಪಿಕೊಂಡಿತು. ಅದರಂತೆಯೇ ಆ ನಗರಕ್ಕೆ ತಮ್ಮ ಮಗಳ ಜೊತೆಗೆ ಬಂದ ಕುಟುಂಬಸ್ಥರಿಗೂ ಹುಡುಗನ ಕುಟುಂಬದ ‘ಮಾತು-ಕತೆ’ , ಶಿಷ್ಟಾಚಾರ, ನಾಲ್ಕು ಜನರ ಮುಂದಿನ ಸಭ್ಯ ನಡವಳಿಕೆ ಎಲ್ಲವೂ ಒಪ್ಪಿಗೆಯಾಯಿತು.

ಹುಡುಗನ ಅಪ್ಪ , ‘ ನೋಡಿ ತುಂಬಾ ಅವಸರದಲ್ಲಿ ಎಲ್ಲಾ ಹೇಳ್ತಿದ್ದೀವಿ ಅನ್ಕೋಬೇಡಿ. ಹೇಗೂ ಬಂದಿದ್ದೀರಿ. ಇಬ್ಬರಿಗೂ ಸಂಬಂಧ ಒಪ್ಪಿಗೆಯಿದೆ ಇವತ್ತು ಒಳ್ಳೆಯ ಮುಹೂರ್ಥವೂ ಇದೆ‌. ನಿಶ್ಚಯ ಮಾಡಿಕೊಂಡೇ ಹೋಗಿಬಿಡಿ. ನಾನು ಪುರೋಹಿತರ‌ನ್ನೂ ಕರೆಸಿದ್ದೇನೆ’ ಎಂದು ಮೆಲುದನಿಯಲ್ಲಿ ಹೇಳಿದಾಗ ಹುಡುಗಿಯ ಕುಟುಂಬದವರ ಮುಖದಲ್ಲಿ ಆಶ್ಚರ್ಯ. ‘ಎಲ್ಲಾ ತಯಾರಿ ಮಾಡಿಕೊಂಡೇ ಕರೆದಿದ್ದಾರೆ ನೋಡಿ, ಪ್ಯಾಟೆ ಮಂದಿ ಭಾಳ ಲೆಕ್ಕದೋರು’ ಎಂದು ಹೇಳಿದರಾದರೂ ನಿಶ್ಚಿತಾರ್ಥ ಮಾಡಿಕೊಂಡೇ ಹೊರಡಬೇಕಾಯಿತು. ಆದರೆ ಮದುವೆ ಮಾತ್ರ ನಮ್ಮೂರಲ್ಲೇ ಆಗಬೇಕು. ಊರಿನ ಜನರ ಮುಂದೆ, ನಮ್ಮ ಮನೆ ಮುಂದೇ ಮಗಳ ಮದುವೆ ಮಾಡಬೇಕು ಎಂದು ಹುಡುಗಿಯ ಅಪ್ಪ ಕಡ್ಡಿ ತುಂಡಾದಂತೆ ಹೇಳಿದ್ದನ್ನು  ಒಪ್ಪದೆ ಹುಡುಗನ ಮನೆಯವರಿಗೆ ಬೇರೆ ದಾರಿಯಿರಲಿಲ್ಲ. ಅಲ್ಲಿಯೇ ಇದ್ದ ಪುರೋಹಿತರ ಬಳಿ ಮದುವೆ ದಿನಾಂಕವನ್ನು ಗೊತ್ತು ಮಾಡಿಕೊಂಡು ಹಳ್ಳಿಯ ಹಾದಿ ಹಿಡಿದರು…

*                      *                        *                        *

ಮದುವೆಗೆ ಇನ್ನೂ ಸಾಕಷ್ಟು ದಿನಗಳಿರುವಾಗಲೇ ಇಡೀ ಹಳ್ಳಿಯಲ್ಲಿ ಊರ ಮುಖ್ಯಸ್ಥನ ಮಗಳ ಮದುವೆಗೆ ಎಲ್ಲಾ ಸಿದ್ಧತೆಗಳು ಆರಂಭಗೊಂಡವು. ತನ್ನ ಅಧಿಕಾರ ಮತ್ತು ಪ್ರಭಾವ ಬಳಸಿ ಸರ್ಕಾರದ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗೆ ಬರಬೇಕಿದ್ದ ಎಲ್ಲಾ ಅನುದಾನಗಳನ್ನು ತ್ವರಿತವಾಗಿ ತಂದ ಆತ ಊರಿನ ರಸ್ತೆಗೆ ಟಾರು ಹಾಕಿಸಿದ. ಕೆರೆಯ ಹೂಳು ತೆಗೆಸಿ, ವಿಶೇಷ ಅನುದಾನದಡಿಯಲ್ಲಿ ಊರಿನ ಎಲ್ಲ ಬಡವರ ಮನೆಗಳಿಗೆ ಬಣ್ಣ ಹೊಡೆಸಲು ಹಣ ಕೊಡಿಸಿದ. ಎಪಿಎಲ್ ಕಾರ್ಡ್ ಹೊಂದಿದವರ ಮನೆಗೆ ಬಣ್ಣ ಹೊಡೆಯಲು ಸ್ವತಃ ತಾನೇ ಹಣ ಕೊಟ್ಟ. ಅವನನ್ನು  ಚುನಾವಣೆಯಲ್ಲಿ ಬೆಂಬಲಿಸಿದವರು, ವಿರೋಧಿಸಿದವರು ಎಂಬ ಬೇಧ-ಭಾವವಿಲ್ಲದೆ ಎಲ್ಲರಿಗೂ ಸವಲತ್ತುಗಳು ತಲುಪುವಂತೆ ನೋಡಿಕೊಂಡ. ಇಡೀ ಊರನ್ನ ಸಿಂಗರಿಸುತ್ತ, ಸ್ವಚ್ಛಗೊಳಿಸುತ್ತಲೇ ತನ್ನ ವಿಶಾಲವಾದ ಮನೆಯ ಹಿಂಭಾಗಕ್ಕೆ ಅಂಟಿಕೊಂಡಂತಿದ್ದ ತನ್ನ ಮನೆಯ ಖಾಯಂ ಕೆಲಸಗಾರ ಕುಟುಂಬದ ಮನೆ ಕಂಡು ಬೇಸರಗೊಂಡ.

ಎಷ್ಟೋ ವರ್ಷಗಳಿಂದ ತಮ್ಮ ಜಮೀನು ಮತ್ತು ಮನೆಯ ಕೆಲಸವನ್ನು ನಿಯತ್ತಾಗಿ ಮಾಡಿಕೊಂಡ ಬಂದ ಕುಟುಂಬ ತಮ್ಮ ಮನೆಯ ಹಿಂಭಾಗದಲ್ಲಿಯೇ ಹೀಗೆ ಗುಡಿಸಲು ಮನೆಯಲ್ಲಿರುವುದು ಕಂಡು ಮರುಕಪಟ್ಟುಕೊಳ್ಳುವುದರ ಬದಲು ಕುಪಿತನಾದ. ಆತ ಮನಸ್ಸು ಮಾಡಿದರೆ ಅವರಿಗೊಂದು ಆಶ್ರಯ ಮನೆಯನ್ನು ಗ್ರಾಂಟ್ ಮಾಡಿಸಬಹುದಿತ್ತು. ಆದರೆ ಹಾಗೆ ಮಾಡದೆ ಇಡೀ ಊರು ತನ್ನ ಮಗಳ ಮದುವೆಗೆ ಸಜ್ಜಾಗಿರುವ ಈ ಸಮಯದಲ್ಲಿ ಮನೆಗೆ ಬಂದ ನಗರದ ಬೀಗರು ಈ ಆಳಿನ ಮನೆ ನೋಡಿದರೆ ಏನಂದುಕೊಂಡಾರು ? ನಾವು ಅವರ ಮನೆಗೆ ಹೋದಾಗ ಎಷ್ಟು ಕಾಳಜಿ ವಹಿಸಿ ನಮ್ಮನ್ನೆಲ್ಲ ಸತ್ಕರಿಸಿದ್ದರು ಅವರು. ಇಡೀ ಮನೆ, ಮನೆಯ ಗೇಟ್ ನಿಂದ ಹಿಡಿದು ಟಾಯ್ಲೆಟ್ ನವೆರೆಗೂ‌ ಎಷ್ಟು ನೀಟ್ ಆಗಿ ಇತ್ತು. ಅಷ್ಟೊಂದು ಶಿಸ್ತಿನಿಂದಿರುವ ,ಅದರಲ್ಲೂ ಅಷ್ಟು‌ ದೊಡ್ಡ ಸಿಟಿಯಲ್ಲಿರುವ ಬೀಗರು ನಮ್ಮೂರಿಗೆ ಬಂದಾಗ ನಮ್ಮ ಮನೆಯನ್ನು, ಹಿತ್ತಲನ್ನು , ಜಮೀನನ್ನು ನೋಡಲು ಬಂದೇ ಬರುತ್ತಾರೆ. ಮದುವೆಯ ಶಾಸ್ತ್ರ ಮಾತ್ರ ಮನೆಯ ಮುಂದೆ ಚಪ್ಪರದಲ್ಲಿ , ಉಳಿದಂತೆ ಆರತಕ್ಷತೆ ಮತ್ತು ಊಟಕ್ಕೆಲ್ಲ ಊರಿನ ಶಾಲೆಯ ಐದು ಎಕರೆ ಮೈದಾನದಲ್ಲಿ ಶಾಮಿಯಾನ ಹಾಕಿಸುವುದೆಂದು ಊರಿನ ಮುಖ್ಯಸ್ಥ ನಿರ್ಧರಿಸಿಯಾಗಿತ್ತು.

ತನ್ನ ಮನೆಯ ಬಳಿ ಬೇಕಾದಷ್ಟು ಜಾಗವಿದ್ದರೂ ಅಲ್ಲಿಯೇ ಶಾಮಿಯಾನ ಹಾಕಿಸಬಹುದಾಗಿದ್ದರೂ ಆತನಿಗೆ ಇದನ್ನೊಂದು ಇಡೀ ಊರಿನ ಎಲ್ಲರೂ ಪಾಲ್ಗೊಳ್ಳುವ  ಮತ್ತು ಆ ಮೂಲಕ ಅವರೆಲ್ಲರೂ ಗರ್ವ ಪಟ್ಟುಕೊಳ್ಳುವ ಸಮಾರಂಭದಂತೆ ಮಾಡಬೇಕೆಂಬ ಆಸೆಯಿದ್ದಿದ್ದರಿಂದ ಶಾಲೆಯ ಮೈದಾನದಲ್ಲಿ ಇಷ್ಟೆಲ್ಲ ವ್ಯವಸ್ಥೆ ಮಾಡಿದ್ದಾನೆಂದು ಊರ ತುಂಬ ಗುಲ್ಲೆದ್ದಿತ್ತಾದರೂ, ತನ್ನ ಮನೆ ದೊಡ್ಡದಾಗಿದ್ದರೂ ಹಳೆಯ ಕಾಲದ ಹಳ್ಳಿ ಶೈಲಿಯ ಮನೆಯಾಗಿದ್ದು, ದೊಡ್ಡ ನಗರದ ಮಾಡರ್ನ್ ಬೀಗರು ಮತ್ತವರ ಕಡೆಯವರು ಈ ಮನೆಯನ್ನು ನೋಡಿ ತಮ್ಮ ಬಗ್ಗೆ ಕೀಳು ಬಗೆದಾರು ಎಂಬುದು ನಿಜವಾದ ಕಾರಣವಾಗಿತ್ತು ಎಂಬುದು ಗೊತ್ತಿದ್ದವರಿಗೆ ಮಾತ್ರ ಗೊತ್ತಿತ್ತು. ಆದರೂ ಊರಿಗೆ ಬಂದ ಬೀಗರಲ್ಲಿ ಕೆಲವರಾದರೂ ,ಅದರಲ್ಲೂ ಹೆಂಗಸರು ಕೆಲವರಾದರೂ ಹುಡುಗಿಯ ಮನೆ ನೋಡಿಕೊಂಡು ಹೋಗಲು ಬರದೇ ಇರುತ್ತಾರೆಯೇ ? ಎಂಬ‌ ಊರಿನ  ಮುಖ್ಯಸ್ಥನ ಹೆಂಡತಿಯ ಮಾತು ಕೇಳಿದಮೇಲೆ ಅವನಿಗೆ ಈ ಕೆಲಸದ ಆಳಿನ ಮನೆಯ ಬಗ್ಗೆ ಚಿಂತೆ ಶುರುವಾದದ್ದು.

ಎಷ್ಟೋ ವರ್ಷಗಳಿಂದ ನಮ್ಮ ಮನೆಗೆ ಅಂಟಿಕೊಂಡಂತೆಯೇ ಇರುವ ಆ ಗುಡಿಸಲು ಯಾವತ್ತೂ ಕೀಳಾಗಿ ಕಾಣಿಸಿರಲಿಲ್ಲ. ಆದರೆ ಈಗ ಅದನ್ನು ತನ್ನ ಬೀಗರ ಕಣ್ಣಿಗೆ ಬೀಳದಂತೆ ನೋಡಿಕೊಳ್ಳಲೇಬೇಕಾದ ಅನಿವಾರ್ಯತೆ ಅವನಿಗೆ ಎದುರಾಯಿತು. ಹಾಗಾಗಿ ತನ್ನ ಊರನ್ನು ‘ಗುಡಿಸಲು ಮುಕ್ತ ಹಳ್ಳಿ’ ಎಂಬ ಪಟ್ಟಿಗೆ ಸೇರಿಸಲು ಯಾವ ಯೋಜನೆ ಬೇಕಿತ್ತೋ‌ ಅದನ್ನೂ  ಮಂಜೂರು ಮಾಡಿಸಿಕೊಂಡು ಬಂದ. ಆದರೆ ಸದ್ಯಕ್ಕೆ ಇದೊಂದು ಗುಡಿಸಲು ಕೆಡಗಿ ತಮ್ಮ ಆಳಿಗೆ ಮನೆ ಕಟ್ಟಲು ಶುರು ಮಾಡಿದರೆ ಊರ ಒಳಗಿನ ಕೊನೆಯ ಕೇರಿಯಲ್ಲಿದ್ದ ಎಲ್ಲರ ಗುಡಿಸಲುಗಳನ್ನೂ ಕೆಡವಿ ಮನೆ ಕಟ್ಟ ಬೇಕಾಗುತ್ತದೆ ಎಂಬುದಕ್ಕಾಗಿ ,ಹೇಗೂ ತಮ್ಮ ಬೀಗರೇನು ಊರೊಳಗಿನ ಆ ಕೇರಿಗೆ ಹೋಗಲಾರರು ಹಾಗಾಗಿ ಅವುಗಳ ಚಿಂತೆ ಬೇಡವೆಂದು ತಮ್ಮ ಮನೆಯ ಹಿಂಬದಿಯ ಗುಡಿಸಲು ಕಾಣದಂತೆ ಒಂದು ತಾತ್ಕಾಲಿಕ ತಡೆಗೋಡೆಯನ್ನು ಕಟ್ಟಲು ತೀರ್ಮಾನಿಸಿದನು. ಇದರಿಂದ  ತಮ್ಮ ಮನೆ ನೋಡಲು ಬಂದ ಬೀಗರ ದೃಷ್ಟಿಯಿಂದ ಆ ಗುಡಿಸಲನ್ನು ಮುಚ್ಚಿಡಬಹುದೆಂಬುದು ಅವನ ಊಹೆಯಾಗಿತ್ತು.

*               *                *                 *                *

ಮರುದಿನವೇ ಇಟ್ಟಿಗೆ,‌ಸಿಮೆಂಟು ಬಂದು ಬಿದ್ದವು. ಇವೆಲ್ಲ ತನಗೆ ಮನೆ ಕಟ್ಟಿಸಿಕೊಡಲೇನೋ ಎಂದು ಆ ಕೆಲಸದಾಳು ಕನಸುತ್ತಿದ್ದರೆ, ಅವನಿಂದಲೇ ಆ ತಡೆಗೋಡೆಯ ನಿರ್ಮಾಣ ಕಾರ್ಯ ಮಾಡಿಸಲಾಯಿತು. ಆದರೆ ತನ್ನನ್ನು ಹೊರಗಿಡಲು ಕಟ್ಟುತ್ತಿರುವ ಈ ಗೋಡೆಯನ್ನು ತಾನೇ ನಿರ್ಮಿಸುತ್ತಿರುವುದು ಆ ಕೆಲಸದವನ ಅರಿವಿಗೆ ಬರಲೇ ಇಲ್ಲ. ತಡೆಗೋಡೆ ಎದ್ದು ನಿಂತಿತು. ಮನೆಯ ಹಿಂಬಾಗಿಲಿನಿಂದ ನೋಡಿದರೆ ಏನೂ ಕಾಣದಷ್ಟು ಎತ್ತರಕ್ಕೆ ಎದ್ದು ನಿಂತ ಗೋಡೆಯ ಪಕ್ಕದಲ್ಲಿ ಗುಡಿಸಲು ಮುದುರಿಕೊಂಡು ಕೂತಿತ್ತು. ಮುಖ್ಯಸ್ಥನಿಗಿದ್ದ ದೊಡ್ಡ ಆತಂಕ ನಿವಾರಣೆಯಾದಂತಾಯಿತು. ಆ ಕೆಲಸದವನ ಮಕ್ಕಳು ಒಂದೆರೆಡು ಬಾರಿ ಆ ಗೋಡೆಯನ್ನು ಏರಲು ಪ್ರಯತ್ನಿಸಿ‌ ಸೋತರು. ಆ ಗುಡಿಸಲಿನಿಂದ ಸ್ವಲ್ಪವೇ ದೂರದಲ್ಲಿದ್ದ ಒಡೆಯನ ಮನೆಯ ವಿಶಾಲವಾದ ಅಂಗಳಕ್ಕೆ ಆ ಮಕ್ಕಳು ಎಂದೂ ಆಟೋಟಗಳಿಗೆ ಕಾಲಿಟ್ಟವರಲ್ಲ.

*  ‌‌                *                      *                     *

ಮದುವೆಯ ದಿನ ಯಾವ ಕುಂದು ಕೊರೆತೆಯೂ ಇಲ್ಲದೆ ವಿಜೃಂಭಣೆಯಿಂದ ಎಲ್ಲವೂ ಜರುಗಿದವು. ಸ್ಥಳೀಯ ಶಾಸಕರಾದಿಯಾಗಿ ಪ್ರಮುಖ ಮುಖಂಡರೆಲ್ಲರೂ ಬಂದು ಇಡೀ ಊರನ್ನು ಕೊಂಡಾಡಿ ಹೋದರು. ದೊಡ್ಡ ನಗರದ ದೊಡ್ಡ ಬೀಗರೂ ಸಹ ಮದುವೆಯ ವ್ಯವಸ್ಥೆಗಳನ್ನು ಕಂಡು ಹೌಹಾರಿದರು. ‘ ಸಿಟಿಯಲ್ಲೂ ಇಷ್ಟೆಲ್ಲ ಅರೇಂಜ್ಮೆಂಟ್ಸ್ ಮಾಡೋಕ್ ಆಗ್ತಿರ್ಲಿಲ್ಲಪ. ನಾವೂ ರಿಸೆಪ್ಷನ್ ಗೆ ಈ ಊರಿನ ಜನರನ್ನೆಲ್ಲ ಕರೀಬೇಕು. ಹೀಗೇ ಸತ್ಕಾರ ಮಾಡಿ ಕಳಿಸಬೇಕು. ಎಷ್ಟು ನೀತಿವಂತ ಜನ ಅಲ್ವಾ ಇವ್ರು?’ ಎಂದು ಹೇಳಿದ ಮದುಮಗನ ಅತ್ತೆ, ಒಂದಷ್ಟು ಹೆಂಗಸರೊಂದಿಗೆ ಹುಡುಗನ ಮನೆ‌ ನೋಡಲು ಧಾವಿಸಿಯೇಬಿಟ್ಟರು. ಅವರ ಹಿಂದೆಯೇ ಮುಖ್ಯಸ್ಥನೂ ಬಂದ. ಮನೆಯನ್ನೆಲ್ಲ ನೋಡಿದ ಅವರು ಹಿತ್ತಲಿಗೆ ಬಂದರು. ಅಲ್ಲಿದ್ದ ಗೋಡೆಯನ್ನು ಕಂಡು ಇದರಾಚೆಗೆ ಏನಿದೆ ಎಂದು ಕೇಳಿದರು. ಅದಕ್ಕಾತ, ಅಲ್ಲೊಂದು ಕೆರೆಯಿರುವುದಾಗಿಯೂ, ಅದು ಬೇಸಿಗೆಯಲ್ಲಿ ಬತ್ತುವುದಾಗಿಯೂ ತಿಳಿಸಿದ. ಆದರೆ ಒಂದು ಲ್ಯಾಡರ್ ಇದ್ದಿದ್ರೆ ಕೆರೆನಾದ್ರೂ ನೋಡಬಹುದಿತ್ತು ಎಂಬ ಹುಡುಗನ ಅತ್ತೆಯ ವೈಯ್ಯಾರದ ಮಾತು ಕೇಳಿ ಆತ ಏಣಿಯನ್ನು ತಂದು ಗೋಡೆಗೆ ಚಾಚಿದ. ಅವರು ಏಣಿ‌ ಏರಿ ಕೆರೆಯನ್ನೇನೋ ನೋಡುತ್ತಾರೆ. ಆದರೆ ಆ ಗುಡಿಸಲನ್ನೂ ನೋಡಿಯೇಬಿಡುತ್ತಾರಲ್ಲ , ತಾನು ಅದಕ್ಕಾಗಿಯೇ ಕಟ್ಟಿಸಿದ ಗೋಡೆಯೇ ಮುಳುವಾಯಿತಲ್ಲ ಎಂದು ಒಳಗೊಳಗೇ ಆತ ಕುಸಿಯುತ್ತಿದ್ದ. ಆ ಹೆಂಗಸರೆಲ್ಲ ಏಣಿ ಏರಿ ಕೆರೆಯನ್ನು ನೋಡುತ್ತಾ ಏನೇನೋ ಉದ್ಘಾರ ತೆಗೆದು ವಾಪಸ್ಸಾದರು. ಯಾರೊಬ್ಬರೂ ಗುಡಿಸಲಿನ ಬಗ್ಗೆ ಏನೊಂದೂ ಚಕಾರವೆತ್ತಿರಲಿಲ್ಲ. ಇದರಿಂದಾಗಿ ಗೊಂದಲಕ್ಕೀಡಾದ ಆ ಯಜಮಾನ ಏಣಿ ತೆಗೆದಿಡುವ ಮುನ್ನ ತಾನೂ ಒಮ್ಮೆ ಅದನ್ನು ಏರಿದ. ಗೋಡೆಯ ಆ ಭಾಗದಲ್ಲಿದ್ದ ಗುಡಿಸಲು ನೆಲಸಮಗೊಂಡಿತ್ತು.‌ ಕೆಲಸದಾಳು ಮತ್ತವನ ಕುಟುಂಬ ಅಲ್ಲಿರಲಿಲ್ಲ.

*                   *                     *                    *

ಅದ್ದೂರಿ ಮದುವೆ ಮುಗಿಸಿ ದೊಡ್ಡ ಊರಿನ ದೊಡ್ಡ ಬೀಗರು ಊರಿನ ಜನರೆಲ್ಲರನ್ನೂ ತಮ್ಮ ನಗರಕ್ಕೆ ಬರುವಂತೆ ಆಹ್ವಾನವಿತ್ತು, ಕೈಬೀಸಿ ಹೊರಟು ಹೋದರು. ಇಡೀ ಊರು ಮದುವೆಯ ಬಗ್ಗೆ ಮಾತಾಡಿಕೊಂಡು ಮಲಗಿದ್ದರೆ, ಆ ಮುಖ್ಯಸ್ಥ ತನ್ನ ಕೆಲಸದಾಳಿನ ಗುಡಿಸಲು ನೆಲಸಮವಾದದ್ದು ಹೇಗೆ ? ಮತ್ತವರು ಎಲ್ಲಿ ಹೋಗಿರಬಹುದು ಎಂದು ನೆನೆದು ವ್ಯಾಕುಲತೆಗೊಳಗಾದ. ಎಷ್ಟೋ ವರ್ಷಗಳಿಂದ ನಮ್ಮ ಮನೆಗೆ ಅಂಟಿಕೊಂಡಂತೆಯೇ ಇದ್ದ ಆ ಗುಡಿಸಲು ನೆಲಸಮವಾಗಿದ್ದು ಅವನನ್ನು ನಿದ್ದೆಗೆಡಿಸಿತ್ತು. ಮದುವೆಯ ಕೆಲಸಗಳಲ್ಲಿ ತನ್ನ ಕೆಲಸದಾಳು ಎಲ್ಲಿರಬಹುದೆಂದು ಗಮನ ಕೊಡಲೂ ಆಗಿರಲಿಲ್ಲ. ರಾತ್ರಿಯಿಡೀ ಯೋಚಿಸಿದವನು ಬೆಳಿಗ್ಗೆ ನೇರವಾಗಿ ಊರಿನ ಕೊನೆಯ ಕೇರಿಗೆ ಹೋದ. ಅಲ್ಲಿ ಯಾವ ಗುಡಿಸಲುಗಳೂ ಉಳಿದಿರಲಿಲ್ಲ. ಗುಡಿಸಲಿನಲ್ಲಿದ್ದವರು‌ ಎಲ್ಲಿ ಹೋದರೆಂಬ ಯಾವ ಸುಳಿವೂ ಕೂಡ ಊರಲ್ಲಿ‌ ಯಾರಿಗೂ ಇರಲಿಲ್ಲ…

ಇತ್ತ ಊರಿನ ಜನ ನಗರದ ಬೀಗರ ಮನೆಗೆ ಹೋಗಲು ಕಾಯುತ್ತಿದ್ದರೆ , ಅಲ್ಲಿ ನಗರದ ಮನೆಯಲ್ಲಿನ ಕೋಣೆಯ ಗೋಡೆಗಳು  ಮದುಮಕ್ಕಳ ಸರಸದಾಟವನ್ನು ಸೆರೆಹಿಡಿಯುತ್ತಿದ್ದವು.

ಕೆಲವೇ ದಿನಗಳಲ್ಲಿ ಊರಿನವರು ಆ ಬಗ್ಗೆ ಎಲ್ಲವನ್ನೂ ಮರೆತರು. ಆ ಊರಿನ ಮುಖ್ಯಸ್ಥನ ಫೋಟೋದೊಂದಿಗೆ  ‘ಗುಡಿಸಲು ಮುಕ್ತ  ಗ್ರಾಮ ಯೋಜನೆ ಕಾರ್ಯಗತ ಪ್ರಶಸ್ತಿ’ ಯನ್ನು ನೀಡಿರುವ ಸುದ್ದಿ ಪತ್ರಿಕೆಗಳಲ್ಲಿ ಬಂದದ್ದನ್ನು ನೋಡಿ ಊರಿನ ಕೆಲವರು ಹೆಮ್ಮೆಪಟ್ಟರು ಮತ್ತೆ ಕೆಲವರು ಇನ್ನೊಂದು ಪತ್ರಿಕೆಯಲ್ಲಿದ್ದ ‘ ಗುಡಿಸಲು ಮುಕ್ತ ಗ್ರಾಮ ಯೋಜನೆಯಲ್ಲಿ ಅವ್ಯವಹಾರ ‘ ಎಂಬ ಸುದ್ದಿ ಓದಿ ತಮ್ಮ ಊರಿನ ಮುಖ್ಯಸ್ಥನ ವಿರುದ್ದ ಪ್ರತಿಭಟಿಸಲು ತೀರ್ಮಾನಿಸಿದರು…  ಮತ್ತೆ ನಗರದ ಆ ಮನೆಯಲ್ಲಿ ಈ ಬಗ್ಗೆ ಯೋಚಿಸುವ ಇರಾದೆ ಯಾರಿಗೂ‌ ಇರಲಿಲ್ಲ…

‍ಲೇಖಕರು avadhi

February 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: