ಅನಾಮಿಕಾ @ ಹ್ಯಾಂಡ್ ಪೋಸ್ಟ್: ಉಸಿರಿನ ಬಿಸಿ ನಿನಗೆ ತಾಗದೆ ಹುಸಿ ಹೋಗಿದ್ದು ಎಲ್ಲಿ?

‘ಉರಿಗಳು ಮೂಡುತ್ತಿದ್ದವು ನಿಡುಸುಯ್ಲಿನೊಳಗೆ…’

ಹತ್ತು ವರ್ಷದ ಹಿಂದೆ ಸ್ನಾತಕೋತ್ತರ ಪದವಿಗೆ ಆ ವರ್ಷ ಪ್ರವೇಶ ಸಿಗಲಿಲ್ಲ ಎಂದು ಮನೆಯವರೆಲ್ಲ ಬೇಡ ಎಂದರೂ ಬೇರೆ ರಾಜ್ಯದಲ್ಲಿ ಡಿಪ್ಲೊಮ ಒಂದಕ್ಕೆ ಪ್ರವೇಶ ಪಡೆದಿದ್ದೆ. ಆ ಊರಿಗೆ ಅದೇ ಮೊದಲ ಸಲ ಹೋಗಿದ್ದು. ಬಸ್ ಸ್ಟಾಪ್ ನಲ್ಲಿ ನಿಂತುಕೊಂಡು ನಾನು ಹೋಗಬೇಕಾಗಿದ್ದ ಜಾಗಕ್ಕಿರುವ ನಿರ್ದಿಷ್ಟ ನಂಬರಿನ ಬಸ್ಸಿಗೆ ಕಾಯುತ್ತಿದ್ದೆ.

ನೋಡ ನೋಡುತ್ತಿದ್ದ ಹಾಗೆ ಎಲ್ಲೋ ಶುರುವಾಗಿದ್ದ ಗಲಭೆಯೊಂದರ ಮುಂದುವರಿದ ಭಾಗ ಎನ್ನುವಂತೆ ಇಡೀ ಏರಿಯಾ ಪ್ರಕ್ಷುಬ್ಧಗೊಂಡಿತು. ಟೈರ್‌ಗೆ ಬೆಂಕಿ, ಜೋರು ಗದ್ದಲ. ಅಪರಿಚಿತ ಪ್ರದೇಶದಲ್ಲಿನ ಗಲಾಟೆಗೆ ಭಯಬಿದ್ದಿದ್ದಕ್ಕೆ ಬಸ್ ನಂಬರ್, ನಾನು ಇಳಿಯಬೇಕಾದ ಸ್ಟಾಪ್, ಹೋಗಬೇಕಾದ ವಿಳಾಸವನ್ನು ಬರೆದಿದ್ದ ಹಾಳೆ ಅಂಗೈಯಲ್ಲೇ ಮುದುರಿ ಹೋಗಿತ್ತು. ತೀರಾ ಹೆದರುಪುಕ್ಕಿಯಲ್ಲದೆ ಹೋದರೂ ಅಂಥ ಪರಿಸ್ಥಿತಿ ಎದುರಿಸುತ್ತಿರುವುದು ಅದೇ ಮೊದಲಾದುದರಿಂದ ಗಡಗಡ ನಡುಗುತ್ತಿದ್ದೆ.

ಕಂಗಾಲಾಗಿ ನಿಂತವಳ ಮುಂದೆ ಕಾರೊಂದು ನಿಂತಿತು. ವಯಸ್ಸಿನಲ್ಲಿ ನನಗಿಂತ ಚೂರು ದೊಡ್ಡವರ ಹಾಗಿದ್ದ ಹುಡುಗರಿಬ್ಬರು ಕೆಳಗಿಳಿದು ವಿಚಾರಿಸುವ ಸೌಜನ್ಯ ತೋರಿಸಿದರು. ನಾನು ಗಾಬರಿಯಲ್ಲಿ ತಿಳಿದಿದ್ದನ್ನು ಉಸುರುತ್ತಿದ್ದೆ. ಗಲಾಟೆ ನಮ್ಮನ್ನು ಸಮೀಪಿಸುತ್ತಿರುವುದನ್ನು ನೋಡಿ ಅವರು ಬ್ಯಾಗಿನ ಸಮೇತ ನನ್ನನ್ನು ಹಿಂದಿನ ಸೀಟಿನಲ್ಲಿ ಅಕ್ಷರಶಃ ನೂಕಿ ಗಾಡಿ ಶುರು ಮಾಡಿದರು. ಅಲ್ಲಿಂದ ಮುಂದೆ ನಾನು ಸ್ವಸ್ಥವಾಗಿ ತಲುಪಬೇಕಾದಲ್ಲಿಗೆ ತಲುಪಿದೆ.

ನಾನಿದ್ದ ಪರಿಸ್ಥಿತಿಯಲ್ಲಿ ಅವರ ಹೆಸರು ಕೇಳಿದ್ದರೆ ನೆನಪೂ ಇರುತ್ತಿರಲಿಲ್ಲ ಇನ್ನೊಮ್ಮೆ ಸಿಕ್ಕರೆ ಅವರೇ ನನ್ನ ಗುರುತು ಹಿಡಿದು ಮಾತನಾಡಿಸಬೇಕಿತ್ತು. ಆದರೆ ಆಗಿದ್ದೇ ಬೇರೆ. ಎರಡು ದಿನಗಳ ನಂತರ ನಡೆದ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವೇ ಮುಖಗಳು! ಆಮೇಲೆ ಗೊತ್ತಾಯಿತು ಇಬ್ಬರೂ ಅದೇ ಕಾಲೇಜಿನ ಉತ್ಪನ್ನಗಳೆಂದು. ಅದರಲ್ಲೊಬ್ಬ ಸೆಟ್ಲಮೆಂಟ್ ಏರಿಯಾದ ರಾಬಿನ್ ಹುಡ್!

ಹೊಸ ಊರು, ಹೊಸ ಕಲಿಕೆಯ ನಡುವೆ ಇವರಿಬ್ಬರು. ಎದೆಯಲ್ಲಿ ಪುಕು-ಪುಕು ಎನ್ನುತ್ತಿದ್ದರೂ ಮಾತನಾಡಿಸಿದೆ. ಸ್ವಾಗತ ಕಾರ್ಯಕ್ರಮದ ನಂತರ ನಡೆದ ಫನ್ನಿ ಆಟಗಳಲ್ಲಿ ಅವರಿಗೆ ಸಿಕ್ಕ ಚೀಟಿಯಲ್ಲಿ ಸ್ಯಾಫ್ರಾನ್ ಕಲರ್ ಡ್ರೆಸ್ ಹಾಕಿದವರನ್ನು ಛೇಡಿಸುವುದು (Tease) ಎಂದಿತ್ತು. ಹಾಕಿದ್ದು ನಾನೇ! ಕೇಳಬೇಕೆ?

“ಮೊನ್ನೆ ನಡೆದ ಗಲಾಟೆಯಲ್ಲಿ ನಮಗೊಂದು ಮೆತ್ತನೆಯ ಕರ್ಚೀಫು ಸಿಕ್ಕಿದೆ. ಇವರೇ ನಮ್ಮನ್ನು ನೋಡಿ ಬೇಕಂತಲೇ ಬೀಳಿಸಿದ್ದು. ಈಗದು ಇಲ್ಲೇ ನಮ್ಮ ಹತ್ತಿರವೇ ಇದೆ. ಅದರ ಮಾಲೀಕರಿಗೆ ತಮ್ಮ ವಸ್ತು ತಮಗೆ ಬೇಕು ಎನ್ನುವ ಹಾಗಿದ್ದರೆ ನಾವು ಕೇಳಿದ್ದು ಕೊಟ್ಟು ತಗೊಂಡು ಹೋಗಬಹುದು. ಇಲ್ಲವಾದರೆ ಅವರ ನೆನಪಾಗಿ ಅದು ನಮ್ಮ ಬಳಿ ಇರುತ್ತದೆ,” ಎಂದು ಜೀವ ತಿಂದಿದ್ದೇ ತಿಂದಿದ್ದು. ಒಂದು ಪರಿಚಯಕ್ಕೆ ಇಷ್ಟು ಸಾಕಲ್ಲ.

ಸೆಮಿನಾರ್, ವರ್ಕ್ ಶಾಪ್, ಅಸೈನ್ ಮೆಂಟ್ ಎಂದು ಮೊದಲ ಸೆಮಿಸ್ಟರ್ ಪರೀಕ್ಷೆಯ ಒತ್ತಡದಲ್ಲಿದ್ದೆ. ಒಂದು ಮಧ್ಯಾಹ್ನ ಅಟೆಂಡರ್ ಬಂದು, ‘ಭಯ್ಯಾ ನಿಮ್ಮನ್ನ ಕರೀತಿದ್ದಾರೆ,’ ಎಂದ. ಹೋಗಿ ನೋಡಿದರೆ ರಾಬಿನ್ ಹುಡ್! ಭಯವಾಯಿತು. ಕ್ಲಾಸ್ ಮುಗಿಸಿ ಬರುತ್ತೇನೆ ಎಂದೆ. ಎರಡು ಗಂಟೆ ಕಾಯಲಾರದೆ ಹೋಗಿರುತ್ತಾನೆ ಎನ್ನುವ ಯೋಚನೆ ಸುಳ್ಳು ಮಾಡುವಂತೆ ಕಾಯುತ್ತಲೇ ಇದ್ದ. ಹೀಗೊಂದು ಸಿನಿಮೀಯ ಭೇಟಿ, ನಮಗಾಗಿ ಯಾರೋ ಕಾಯುತ್ತಿದ್ದಾರೆ ಎನ್ನುವಾಗ ಮೂಡುವ ಆತ್ಮವಿಶ್ವಾಸವಿದೆಯಲ್ಲ ಅದನ್ನ ಬೇರೆ ಯಾವ ಸಾಧನೆಗಳೂ ತರಲು ಸಾಧ್ಯವಿಲ್ಲ ಎನಿಸುತ್ತದೆ.

ಇಂತದ್ದೊಂದು ಭಾವವನ್ನು ಕೈಗೇ ತಂದಿತ್ತವನ ಬಗ್ಗೆ ಒಳಗೊಳಗೆ ಹೆಮ್ಮೆ. ಅದಕ್ಕೆ ಕಾರಣ ನನ್ನ ವಯಸ್ಸಿದ್ದಿರಬಹುದು. ನಿಮ್ಮದು ಮಾತು ತುಂಬಾ ಕಡಿಮೆ ಎನಿಸುತ್ತದೆ ಎಂದರೆ ಅದಕ್ಕೂ ಮುಗುಳ್ನಗೆಯ ಉತ್ತರ. ಮುಂದೆ ಹೊಸವರ್ಷ, ಹುಟ್ಟುಹಬ್ಬ ಸೇರಿದಂತೆ ಸಣ್ಣಪುಟ್ಟ ಸೆಲೆಬ್ರೆಷೆನ್ಸ್, ಕಣ್ಣ ನೋಟಕ್ಕೆ, ಪಿಕ್‌ಅಪ್, ಡ್ರಾಪ್ ನ ಈ ಟಚ್ಚಲಿ ಏನೋ ಇದೆ ಎನ್ನುವಂತವು ನಡೆಯುತ್ತಲೇ ಇದ್ದವು.

ಒಮ್ಮೆ ಯಾವುದೋ ಜಗಳದಲ್ಲಿ ಇವನಿಗೂ ಸ್ವಲ್ಪ ಜೋರಾಗಿಯೆ ಪೆಟ್ಟಾಗಿದೆ ಎಂದು ಅವನ ಸ್ನೇಹಿತ ಹೇಳಿದ್ದಕ್ಕೆ ನೋಡಲು ಹೋಗಿದ್ದೆ. ಹೋದವಳನ್ನು ಮಾತೂ ಆಡಿಸದೆ ಕೂರುವಂತೆ ಕೈ ತೋರಿದ. “ಇದೆಲ್ಲ ಬಿಟ್ಟು ಬಿಡು,” ಎಂದು ಮಾತು ಶುರು ಮಾಡುತ್ತಿದ್ದೆನಷ್ಟೇ, ಕಡ್ಡಿ ಮುರಿದಂತೆ, “ಸಾಧ್ಯವಿಲ್ಲ,” ಎಂದ.

“ನಾನು ಹೇಳಿದ್ದನ್ನು ಕೇಳದ, ನನ್ನ ಮಾತಿನಂತೆ ನಡೆಯದವ ಗೊಡವೆ ನನಗೇಕೆ?” ಎಂದು ಎದ್ದು ಹೊರಟೆ. ಭೂಮಿಯ ಆಕಾರಗಳಲ್ಲಿ ಕಾಣುವ ಅಂಕುಡೊಂಕನ್ನೇ ನಾವು ಮನುಷ್ಯರ ಸ್ವಭಾವದಲ್ಲಿ ಕಾಣುವುದು. ನಿನ್ನ ಮಾತನ್ನು ನಡೆಸಿ ಕೊಡುತ್ತೇನೆ, ನೀ ಹೇಳಿದಂತೆ ಕೇಳುತ್ತೇನೆ ಎನ್ನುವುದೆಲ್ಲ ಅಪೇಕ್ಷೆಗಳು; ಕಡ್ಡಾಯ ನಿಯಮಗಳಲ್ಲ. ಬಾಗಿಸುವಲ್ಲಿ ಬಲವಂತ ಮಾಡಿದರೆ ಮುರಿಯುತ್ತದೆ. ಅದರ ಬದಲು ವ್ಯಕ್ತಿಗಳನ್ನು ಅವರಿದ್ದಂತೆಯೇ ಒಪ್ಪಿಕೊಂಡು ಗೌರವಿಸಬೇಕು ಎನ್ನುವುದನ್ನು ಕಲಿಸಿದ್ದೇ ಅವನು.

ಮತ್ತೆ ಸಂಧಾನ! ದಿನ ಕಳೆದದ್ದೆ ಗೊತ್ತಾಗಲಿಲ್ಲ. ಪರೀಕ್ಷೆ ಮುಗಿಸಿ ನಾನು ಊರಿಗೆ ಹೊರಡುತ್ತೇನೆ ಎಂದಾಗ ಮನೆಗೆ ಕರೆದ. ಹೋಗಲೊ ಬೇಡವೊ ಎನ್ನುವ ಗೊಂದಲದಲ್ಲಿ ಒಳಗಡಿ ಇಟ್ಟವಳಿಗೆ ಅಚ್ಚರಿ. ಪುಸ್ತಕ ಪ್ರೇಮಿ ಎಂದು ಹೇಳಿಕೊಂಡು ತಿರುಗುತ್ತಿದ್ದ ನನ್ನ ಬಳಿಯೂ ಅಷ್ಟು ಪುಸ್ತಕಗಳಿರಲಿಲ್ಲ!

ಪುಸ್ತಕದ ದೊಡ್ಡ ಕಪಾಟಿನ ಕೆಳಗಡೆ ಅವನು ನನಗೆ ಕಲಿಸಿದ ಓರಿಗಾಮಿ ಕಲೆಯನ್ನು ನಾನು ಯದ್ವಾತದ್ವಾ ಮಾಡಿದ್ದರ ಪ್ರದರ್ಶನ! ಉದುರಿ ಬಿದ್ದ ನನ್ನ ಸ್ಕರ್ಟಿನ ಲೇಸಿನ ಹೂ, ಎಲ್ಲೋ ಇಟ್ಟು ಮರೆತೆನಲ್ಲ ಎಂದು ನಾ ಸದಾ ಹುಡುಕುತ್ತಿದ್ದ ನನ್ನ ವಯಲಿನ್ ಬೋ, ನಾನು ಗುರುತು ಮಾಡಿಕೊಂಡಿದ್ದ ರಾಗಗಳ ಪುಸ್ತಕ ಎಲ್ಲವೂ ಅಲ್ಲಿ ವಿರಮಿಸುತ್ತಿದ್ದವು.

ಕಾಫಿ ಮಗ್  ಹಿಡಿದುಕೊಂಡು ಬಂದು ಹಿಂದೆ ನಿಂತವನ ಬಿಸಿಯುಸಿರು ಬೆನ್ನಿಗೆ ತಾಕುತ್ತಿತ್ತು. ಕರಗಿ ಬಿಡುತ್ತೇನೆ ಎನಿಸಿ ಬಾಲ್ಕನಿಗೆ ಬಂದೆ. ಹೊರಡುವಾಗ ಕೈಗಿತ್ತ ಪುಸ್ತಕದ ಪುಟ ತಿರುಗಿಸಿದೆ, “…ಒಲುಮೆಯ ನಚ್ಚೊಂದು, ಕುಲುಮೆಯ ಕಿಚ್ಚು. ನಿನ್ನ ಬಗ್ಗೆ ಯೋಚಿಸಿದಾಗೆಲ್ಲ ನಾನು ಮೌನಿಯಾಗುತ್ತೇನೆ. ನಿನ್ನ ನಗು ನನ್ನೆಲ್ಲ ಆಸೆ-ಬಂಧನಗಳಿಂದ ಬಿಡುಗಡೆ ಕೊಡುತ್ತದೆ. ಕಿಲುಬು ಬಂಡಿಯ ಕಾಲವೀಗ ಸರಾಗ ಮಧುರ ರಾಗವಾಗಿದೆ. ನಾನು ನಾನು ಮಾತ್ರ ಆಗಿರಬಲ್ಲತ್ತ ಕೊಂಡೊಯ್ಯುತ್ತಿದೆ, ನನ್ನ ಪ್ರಯಾಣ ಶುರುವಾಗಿದ್ದೇ ನನ್ನ ಹುಡುಕಾಟದಲ್ಲಿ. ಕೊನೆಯಿರದ ದಾರಿಯಲಿ ಕೊನೆಯಿರದ ಬಯಕೆಯಲಿ ನಾನೆಂದೂ ಆಶ್ರಯವೊಂದನು ತಲುಪುತ್ತೇನೆ ಅಂತ ಅಂದುಕೊಂಡಿರಲೇ ಇಲ್ಲ. ನಮ್ಮ ಹಾದಿಗಳು ಎದುರಾದಾಗ ನನಗೆ ಗೊತ್ತಾಯಿತು, ನಾನು ನನ್ನನ್ನು ನಿನ್ನಲ್ಲಿ‌ ಕಂಡುಕೊಂಡೆನೆಂದು. ಒಡೆದು ಚೂರಾದ ಹೃದಯದೊಂದಿಗೆ ನಾನು ಇಲ್ಲಿದ್ದೆ, ನೀನು ಬಂದು ಒಟ್ಟು ಮಾಡಿದೆ. ಈಗ ನೀನು ಹೊರಡುತ್ತಿರುವೆ. ಈ ಸಲ ಸಿಕ್ಕ ಹಾಗೆಯೇ ನೀನು ಇನ್ನೊಮ್ಮೆ ಅಚಾನಕ್ ಆಗಿ ನನಗೆ ಸಿಗಬಹುದು ಎಂದು ಗಾಳಿ ಪಿಸುನುಡಿಯುತ್ತಿದೆ…” ಎಂದು ಪುಟ್ಟ ಹೃದಯವೊಂದನ್ನ ಅಂಟಿಸಿದ್ದ.

ಅದೇ ಕಡೆಯ ಭೇಟಿ. ಮೊನ್ನೆ, ‘ಅವನು ಇನ್ನಿಲ್ಲ, ಬರುತ್ತೀಯ?’ ಎಂದು ಸ್ನೇಹಿತ ಕರೆ ಮಾಡುವವರೆಗೆ ಬದುಕಿನ ಓಟದಲ್ಲಿ ಮರ್ತೇ ಹೋಗಿದ್ದ. ನನ್ನ ಸಂವೇದನೆ ರೂಪಿಸಿದವರಲ್ಲಿ ಒಬ್ಬನು ಎನ್ನುವುದು ನೆನಪಾಗಿ ಓಡಿದೆ. ಸಾಯುವ ವಯಸ್ಸಲ್ಲವಾದರೂ ಜೀವನದ ಅನಿರೀಕ್ಷಿತ ಪೆಟ್ಟುಗಳಿಗೆ ದೇಹ ದುರ್ಬಲಗೊಂಡಿತ್ತು. ಅವನ ಮೌನಕುಲುಮೆಯಲ್ಲಿ ಆಡದೆ ಉಳಿದ ಮಾತುಗಳೇನಿದ್ದವು? ನೋಡಬೇಕು ಎಂದು ಹಂಬಲಿಸಿ, ಭೇಟಿಗೆ ಹೇಳಿ ಕಳುಹಿಸದೆ ಭವದ ಬಂಧನದಿಂದ ಕಳಚಿಕೊಂಡ ಮೇಲೆ ಅಂತಿಮ ವಿದಾಯಕ್ಕೆ ಅವಳೂ ಬರಲಿ, ಎಲ್ಲಿದ್ದರೂ ತಿಳಿಸಿ ಅಂತ ಹೇಳಿ ಹೋದವನ ಬಗ್ಗೆ ಏನನ್ನ ಎಷ್ಟನ್ನ ಆಡಿ ಮುಗಿಸಲಿ?

ಚಿತೆಗೆ ಬೆಂಕಿ ಸ್ಪರ್ಶವಾದಾಗ ಗಾಳಿಗೆ ಅವನ ದೇಹವನ್ನು ಆವರಿಸಿದ ಕೆನ್ನಾಲಿಗೆ, ಅಂದು ಮನೆಯಲ್ಲಿ ನಿನ್ನ ಹಿಂದೆ ನಿಂತಾಗ ಉರಿಗಳು ಮೂಡುತ್ತಿದ್ದವು ನಿಡುಸುಯ್ಲಿನೊಳಗೆ, ಉಸಿರಿನ ಬಿಸಿ ನಿನಗೆ ತಾಗದೆ ಹುಸಿ ಹೋಗಿದ್ದು ಎಲ್ಲಿ? ಎಂದು ಕೇಳಿದಂತಾಗುತ್ತಿತ್ತು. ಹುಡುಗರಿಗೆ ಅಪರೂಪ ಎನಿಸುವ ಅವನ ಭಾವುಕ ಬಟ್ಟಲು ಕಂಗಳು ಜೀವ ತುಂಬಿಕೊಂಡು ಈಗಲೂ ನನ್ನನ್ನ ದಿಟ್ಟಿಸುತ್ತಿವೆ ಎನಿಸಿದಂತಾಗಿ ನಿದ್ದೆಗಣ್ಣಿನಲ್ಲೂ ಬೆಚ್ಚಿ ಬೀಳುತ್ತಿದ್ದೇನೆ.

‍ಲೇಖಕರು avadhi

March 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: