ಅನಾಮಿಕಾ @ ಹ್ಯಾಂಡ್ ಪೋಸ್ಟ್: ಈ ಮಾಗಿಯಂತೆ ನಿನ್ನ ಮೈ, ಮೈನಸ್ಸು ತಾಜಾ…

ಹುಕ್ಕಾ, ರಷ್ಯಿಯನ್ ವೈಟ್ ಸ್ಕಾಚ್, ವೋಡ್ಕಾ ಸೇರಿದಂತೆ ನನ್ನಿಷ್ಟದ ನಶೆಯ ಚೀಜ್‌ಗಳಾವವೂ, ಇನ್ನೊಂದು ತುಡಿತುಡಿವ ಜೀವದ ಸಂಗದಲ್ಲಿದ್ದಾಗ ಆಡಿಸುವಂತ ಅಮಲಿನುಯ್ಯಾಲೆಯಲ್ಲಿ ಯಾಕಾಡಿಸುವುದಿಲ್ಲ? ಹೊಸ ವರ್ಷದ ಹಿಂದಿನ ಕಾಡಿನ ಸಮರಾತ್ರಿಯಲ್ಲೂ ಮತ್ತೆ ಎದುರಾದ ಪ್ರಶ್ನೆ ಇದು.

ಹತ್ತು ವರ್ಷಗಳಲ್ಲಿ ಪ್ರಯಾಣ, ಮಿಸ್ಡ್‌ಕಾಲ್, ಆರ್ಕುಟ್, ಫೇಸ್‌ಬುಕ್, ವ್ಯಾಟ್ಸ್ಯಾಪ್ ಗ್ರುಪ್ಪಿನಲ್ಲಿ ಪರಿಚಯವಾದವರೊಂದಿಗೆ ಒಲವು ಬೆಳೆಸಿದಂತೆ, ಬ್ರೇಕ್‌ಅಪ್ ಕೂಡ ಮಾಡಿದ್ದೇನೆ. ಈ ನನ್ನ ಒಲವಿಗೆ ಯಾರಾದರೂ ಪ್ರೀತಿ ಎಂದು ನಾಮಕರಣ ಮಾಡಿದ್ದರೆ, ಪ್ರೇಮದ ಹೆಸರಿನಲ್ಲಿ ಎಷ್ಟೆಲ್ಲ ಮೈ-ಮನಸ್ಸುಗಳ ಜತೆ ಚೆಲ್ಲಾಟವಾಡಿದಳು ಎಂದು ಕೇಸು ದಾಖಲಾಗಿ, ಅಪೀಲೇ ಇಲ್ಲದ ಫಾಸಿ ಕೂತಲ್ಲೇ ಕಾಯಂ ಆಗುತ್ತಿತ್ತು.

ಅವೇ ಅವೇ ದೇಹ-ಭಾವಗಳ ಏಕತಾನತೆಗೆ ಬೇಸತ್ತಾಗ ಇವನು ಸಿಕ್ಕಿದ್ದು. ಹೀಗೆ ಸುಮ್ಮನೆ ಇಷ್ಟವಾದವ (ನಿಜ್ಜ ಹೀಗೆ ಇಷ್ಟವಾಗುವವರ ಬಗ್ಗೆ ಹೇಳಬೇಕೆಂದರೆ ನನಗೆ ಏನೆಂದರೆ ಏನೂ ತಿಳಿದಿರುವುದಿಲ್ಲ. ಯಾರು ಯಾವ ಕಾರಣಕ್ಕೆ ಇಷ್ಟವಾಗುತ್ತಾರೆ ಎನ್ನುವುದು ಇವತ್ತಿಗೂ ಗೊತ್ತಾಗಿಲ್ಲ) ‘Did you ever experienced the love making?’ ಎನ್ನುವ ಪ್ರಶ್ನೆ ಕೇಳಿದ್ದ.

ಕಾಡುವ ಮಗುವಿನ ತಂದೆಯಾದ ಅವನನ್ನು ಮರುಪ್ರಶ್ನಿಸುವ ಹಾಗಿರಲಿಲ್ಲವಾದ್ದರಿಂದ ಈ ವಿಸ್ಮಯ ಇದೇ ಮೊದಲೆಂದೆ. ನಂಬಿದ ಪಾಪದ ಅವನು ಇಂಥ ಹುಡುಕಾಟಕ್ಕೆ ಮುಂದಾಗಿದ್ದು ಇದೇ ಮೊದಲು ಎಂದು ಪ್ರಾಮಾಣಿಕವಾಗಿ ಒಪ್ಪಿ(ಸಿ)ಕೊಂಡ. ಚಣಚಣಕು ಪರಿಪೂರ್ಣೆ, ನೀನು ತಣಿದೇ ದಣಿವೆ; ನನಗೆ ಪೂರ್ಣತೆಯೆಂದೂ, ನಾನು ದಣಿದೇ ತಣಿವೆ ಎನ್ನುವ ಸಾಂಗತ್ಯದ ನಂತರ ಎದೆಗೊರಗಿ ಕೂತವಳನ್ನು, “ಅದಾವ ಪೂರ್ವದಲ್ಲಿ ಒಲವನ್ನೇ ಉಂಡವಳಂತೆ ಉದಾರವಾಗಿ ಪ್ರಣಯ ಹಂಚುವ, ಯಾವ ವ್ಯಾಖ್ಯಾನಗಳಿಗೂ ನಿಲುಕದ ಬೆಳದಿಂಗಳ ಇರುಳಿನಂತಹ ವಿಶ್ವಚೈತನ್ಯೆ,’’ ನೀನು ಎಂದು ತೋಳಿನಲ್ಲಿ ಬಳಸಿದ.

ಕೈಯ್ಯಲ್ಲಿನ ಕ್ರಿಸ್ಟಲ್ ಗ್ಲಾಸ್‌ನಲ್ಲಿದ್ದ ಮಿರುಗುವ ಶ್ಯಾಂಪೇನ್ ಗುಟಕರಿಸುತ್ತ, ಏಕಕಾಲದಲ್ಲಿ ಹಲವರ ಜತೆ ಸಾಮೀಪ್ಯ ಸಾಧಿಸುತ್ತ, ಒಡಲುಗಳ ಜತೆಗೆ ಆಡುವ ಈ ಮುಗಿಯದಿಹ ಬಟ್ಟೆಯ ಅನವರತ ನೇಯುವ ನೇಕಾರತಿ ಕೆಲಸವನ್ನೇಕೆ ಮಾಡುತ್ತಿದ್ದೇನೆ ಎಂದು ಯೋಚಿಸುತ್ತಿದ್ದೆ. ಆ ರಾತ್ರಿ ಅಲ್ಲಿ ಹರಡಿದ್ದ ಕೇದಗೆ, ಸಾವಿರಮಲ್ಲಿಗೆ ವಾಸನೆ ಹಿಂದೊಮ್ಮೆ ನೆಲೆಸಿದ್ದ ಕಾಡಿನ ನೆನಪು ತಂದಿತು.

ಊರೆಂದರೆ ಸರ್ವಸ್ವ ನನಗೆ. ಮೂವತ್ತು ವರ್ಷಗಳಲ್ಲಿ ಊರಿಂದ ಆಚೆ ಇದ್ದಿದ್ದು ಕಡಿಮೆ. ಈಗ ಕೆಲಸ ಮಾಡುವ ಸ್ಥಳದಲ್ಲೂ ಹದಿನೈದು ದಿನಕ್ಕಿಂತ ಹೆಚ್ಚಿಗೆ ನಿಲ್ಲುವುದಿಲ್ಲ. ಇದು ಅಪ್ಪನಿಂದ ಬಂದ ಗುಣ. ಹುಟ್ಟಿದ ಮನುಷ್ಯ ಒಂದೇ ಕಡೆ ಬಾಳೋಕಾಗಲ್ಲ ಎನ್ನುವ ಮಾತು ಸುಳ್ಳು ಮಾಡುವಂತೆ ಅವರು ತಮ್ಮ ಎಪ್ಪತ್ತೂ ಗ್ರೀಷ್ಮಗಳನ್ನು ಊರಲ್ಲೇ ನೋಡಿದ್ದಾರೆ. ನಾನು ಚಿಕ್ಕವಳಿದ್ದಾಗ ಊರಿನಲ್ಲಿ ಬರಗಾಲ ಬಿದ್ದಿದ್ದಕ್ಕೆ ವಲಸೆ ಹೋಗಿದ್ದ ಅಖಂಡ ಹದಿನೆಂಟು ತಿಂಗಳ ಅಜ್ಞಾತವಾಸ ಬಿಟ್ಟರೆ ಅಪ್ಪ, ನಾನು ಅಷ್ಟು ದೀರ್ಘಕಾಲ ಊರಿನ ಮಣ್ಣನ್ನು ಮೆಟ್ಟದೇ ಇದ್ದಿದ್ದು ಅದೇ ಮೊದಲು, ಅದೇ ಕೊನೆ.

ಸದಾ ನೀರಿನ ಅರುಬು (ಕ್ಷಾಮ) ಇರುವ ಊರಿನ ಬರಗಾಲವೆಂದರೆ ಗಾಯದ ಮೇಲಿನ ಬರೆ. ಆ ಬವಣೆ ನೋಡಲಾರದೆ ಅಪ್ಪ ಮನೆ ಮಕ್ಕಳಿಗಿಂತ ಹೆಚ್ಚಾಗಿದ್ದ ದನಕರುಗಳ ಕಣ್ಣಿ ಬಿಚ್ಚಿ ಹೊಡೆದಿದ್ದರು. ಎಲ್ಲ ಹೋದರೂ, ಮನೆಯಲ್ಲಿ ಹುಟ್ಟಿದ ಎತ್ತು ‘ಬಾಬು’ ನೀರು, ಮೇವಿಲ್ಲದೇ ಅಂಗಳದಲ್ಲಿ ಕೊನೆ ಉಸಿರೆಳೆದಿತ್ತು. ಅದೇ ರಾತ್ರಿ ಮಿಕ್ಕ ಮಕ್ಕಳು ಅಜ್ಜಿಯ ಸೆರಗು, ಅಜ್ಜನ ಧೋತರದ ಚುಂಗು ಹಿಡಿದು ಮಲಗಿದ್ದರೆ, ಅವ್ವ ಮತ್ತು ನನ್ನ ಕರೆದುಕೊಂಡು ಕಾಡಿನ ದಾರಿ ಹಿಡಿದಿದ್ದರು ಅಪ್ಪ.

ತಿಳಿವಳಿಕೆ ಬಂದ ದಿನದಿಂದ ಊರಿನ ಚಳಿಗಾಲದ ಬೆಳಗಿನಲ್ಲಿ ಕುಸುಬಿ ತೆನೆ ಕೊಯ್ಯಲು (ಬಿಸಿಲಿನಲ್ಲಿ ಮುಳ್ಳು ಚುಚ್ಚುವುದರಿಂದ ಇದರ ಒಕ್ಕಲುತನ ನಸುಕಿನಲ್ಲೇ) ಇಬ್ಬನಿ ಬಿದ್ದು ಸ್ಪಂಜಿನಂತಿರುವ ಎರೆಹೊಲದ ಮೇಲೆ ಅಡಿಯಿಡುವುದೆಂದರೆ ಅವು ನನ್ನ ಪಾಲಿನ ಮಾನವೀಯ ಕಳಕಳಿಯ ಬೆಳಕಿನೆಡೆಗಿನ ಹೆಜ್ಜೆಗಳು.

ಮನೆ ಜಗಲಿಯ ಮೇಲೆ ನಿಂತು ಮಳೆಗಾಲ, ಚುರುಗುಡುವ ಬಾವಿಕಟ್ಟೆ ಮೇಲೆ ಕೂತು ಬೇಸಿಗೆಯನ್ನ ನನ್ನೂರಿನಲ್ಲೇ ಕಳೆಯಬೇಕು ಎಂದುಕೊಳ್ಳುವ ಹೊತ್ತಿಗೆ ಅಲ್ಲಿ ರಿಯಲ್ ಎಸ್ಟೇಟ್,  ಕೈಗಾರಿಕೆಗಳ ಪರ್ವ ಕಾಲ. ಭೂಮಿಗೆ ಪ್ಲಾಟಿನಂ ಬೆಲೆ ಬಂದು ಹೊಲವಿದ್ದೂ ಉಳಲಾಗದವರ ಮನೆಗಳಲ್ಲಿ ರೊಕ್ಕದ ಸುಗ್ಗಿ. ಅನ್ನದ ಹಸಿವು ಚಿನ್ನದಿಂದ ಸರಿದೂಗುವುದಿಲ್ಲ ಎನ್ನುವುದನ್ನು ಎರಡು ದಶಕದ ಹಿಂದೆಯೇ ಯೋಚಿಸಿ, ವಿರೋಧಿಸಿದ ಅಪ್ಪನಂಥವರನ್ನು ಜೀವ ಬೆದರಿಕೆಯ ಮೂಲಕ ಬಲವಿದ್ದವರು ಬಾಗಿಸಿದರು.

ಕಣ್ಣಲ್ಲೇ ಕೊರಗಿದ ಅವ್ವಂದಿರು ನನ್ನಂಥಹ ಹದಿನಾರರ ಹೆಣ್ಣುಗಳು ಕಂಡವರ ಪಾಲಾಗದಿರಲಿ ಎಂದು ಊರು ಬಿಡಿಸಿದರು. ಈಗಲೂ ಊರಿಗೆ ಹೋದಾಗ ಬೇರೆ ಜಗತ್ತಿನ ಭಾಷೆ ಎನಿಸುವ ಈ ಒಲವು, ಕ್ರಶ್, ಔಟಿಂಗ್, ಡೇಟಿಂಗ್ ಮಹಾನಗರಗಳಿಗೆ ಬಂದು ಬಿದ್ದಾಗ ಕೆಲಸ ಹಾಗೂ ಕನಸುಗಳೊಂದಿಗೆ ಗುದ್ದಾಡಲು ಬೇಕಾಗುವ ಬೂಸ್ಟ್ ನನಗೆ.

ಬದುಕಿಗಾಗಿ ಅಂದಿನ ಆ ಅಲ್ಪಾವಧಿಯ, ಅಸ್ತಿತ್ವದ ಉಳಿಗಾಗಿ ಇಂದಿನ ಈ ವಲಸೆ ನನ್ನ ಮೂಲ ಸ್ವಭಾವವನ್ನೇ ಬದಲಿಸಿತು. ಪರಿಣಾಮ ಒಲವಿನಲ್ಲೂ ನಾನು ವಲಸೆಯ ಗುಣವನ್ನೇ ಆಯ್ದುಕೊಂಡೆ ಎಂದು ಹೊರಡಲು ಅಣಿಯಾಗುತ್ತಿದ್ದೆ.

ಹತ್ತಿರ ಬಂದ ಅವನು, ‘‘ಬದುಕು, ಮಕ್ಕಳ ಕುರಿತ ಒಳನೋಟ, ಜೀವನ ಪ್ರೀತಿಯೇ ಮೈದಳೆದ ಹೆಣ್ಣು ನೀನು. ಅಸ್ಮಿತೆ ಬಗ್ಗೆ ನಿನಗಿರುವ ಗಾಢ ಅಭಿಮಾನಕ್ಕೊಂದು ನಮನ. ಈ ಮಾಗಿಯಂತಹ ನಿನ್ನ ಮೈ, ಮನಸ್ಸಿನ ತಾಜಾತನಕ್ಕಾಗಿ ಜೀವ ನಿನ್ನನ್ನ ಮತ್ತೆ ಮತ್ತೆ ಬಯಸುತ್ತಿದೆ. ನಿನ್ನ ಸಾಮೀಪ್ಯಕ್ಕಾಗಿ ಯುದ್ಧ ಘೋಷಣೆಯಾಗುವ ಮುನ್ನವೇ ಬಿಳಿ ಬಾವುಟ ತೋರಿಸಿ ಶರಣಾಗುವ ಯೋಧನಿವನು,’’ ಎಂದ.

ನಸು ನಕ್ಕ ನಾನು ನನ್ನಷ್ಟಕ್ಕೆ, ‘‘ಇದು ತಾಜಾತನವಲ್ಲ, ಒಳಗೇ ದಹಿಸುವ ಲಾವಾ. ಹೊರಗಿನಿಂದ ಕಾದುವ ವೈರಿಯ ಜತೆ ಆರಂಭವಾದದ್ದು ತಿಳಿಯುವ ಮೊದಲೇ ಗೆದ್ದು ಅಥವಾ ಸತ್ತು ಮುಗಿಸುವ ಯುದ್ಧ ಒಳ್ಳೆಯದು. ಇಂದಿಗೆ ಬೇಕಾದ ಒಲವು ಸಿಕ್ಕು ಬೆಳಕಾಯಿತಲ್ಲ, ಹಿಂದಿನದು ಗೊತ್ತಿಲ್ಲ, ಮುಂದೆ ಯಾವ ತಿರುವಿಗೆ, ಯಾವ ಕಣ್ಣ ಪಿಳುಕಿನಲ್ಲಿ ನಕ್ಷತ್ರ ಗೋಚರವಾಗುತ್ತದೆಯೋ ಗೊತ್ತಿಲ್ಲ.

ಎಲ್ಲರಿಗೂ ಒಂದಲ್ಲ ಒಂದು ಹೊತ್ತಿನಲ್ಲಿ ಮಾತ್ರ ದಕ್ಕುವ ‘ಅನುರಾಗ ವಿಧಿ’ ನನ್ನೊಂದಿಗೆ ಕಾಲವೂ ಇರುತ್ತದೆಯೇನೊ. ತಿಳಿಯುವ ಹೃದಯದ ಈ ತಳಮಳ, ಬೆಳೆಯುವ ಬುದ್ದಿಯ ಈ ಕಳವಳ ಎಂದಿಗೂ ಕೊನೆಗೊಳ್ಳದು. ನನ್ನೊಳಗಿರುವ ಈ ಯುದ್ಧಕಾಲದ ಅತಂತ್ರತೆ, ತಲ್ಲಣವಿದೆಯಲ್ಲ ಅದನ್ನು ಮನುಕುಲದ ಮಾತುಗಾರರಾರೂ ಪದಗಳಲ್ಲಿ ಅರ್ಥೈಯಿಸಲಾರರು,’’ ಎಂದು ಕಾರು ಚಾಲೂ ಮಾಡಿದೆ.

ಕಾಡ ಹಾದಿಗೆ ಕವಿದಿದ್ದ ಇಬ್ಬನಿ ಊರ ಗುಡಿಯ ಧೂಪವನ್ನು ನೆನಪಿಸಿತು. ನನ್ನ ಅರಿವಿಗೂ ಊರಿಗೂ ಇರುವ ಅಂತರ ಎಂದಿಗೂ ಅಳಿಯಲಾರದೇನೋ ಎನಿಸಿತು. ನಿಧಾನಕ್ಕೆ ಕಾಡು ಬೆಳಗುತ್ತಿದ್ದ ಹೊಸ ಮುಂಜಾನೆಯ ಸೂರ್ಯ ಕಿರಣಗಳು ವಿಂಡ್‌ಷೀಲ್ಡ್‌ನಿಂದ ಇಣುಕಿ ಹಣೆಗೆ ಮುತ್ತಿಡುತ್ತಿದ್ದವು. ಆದರೆ ಆ ಬೆಳಕಿನ ಹೆಸರು ತಿಳಿಯಲಿಲ್ಲ.

‍ಲೇಖಕರು avadhi

January 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಮನಸ್ಸಿಗೆ ಅಷ್ಟಾಗಿ ಒಪ್ಪಿಗೆಯಾಗದ ವಿಚಾರವಾದರೂ ಕಟ್ಟಿಕೊಟ್ಟಿರುವ ರೀತಿ ಆಕರ್ಷಕವಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: