ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅನಾಥವಾದ ಆರ್ತನಾದವೊಂದು ತರೆಗೆಲೆಗಳ ಅಡಿಯಲ್ಲಿ..’ – ರಶ್ಮಿ ತೆಂಡೂಲ್ಕರ್

ರಶ್ಮಿ ತೆಂಡೂಲ್ಕರ್

ಆಗಸದಲ್ಲಿ ದಿಶೆ ತಪ್ಪಿದ
ಒಂಟಿ ಬೆಳ್ಳಕ್ಕಿಯ ಕೂಗು
ನೀರಿನಿಂದ ದಡಕ್ಕೆ ಜಿಗಿದ
ಮೀನಿನ ಚಡಪಡಿಕೆಯ ಸದ್ದು
ಮೌನವನು ಸೀಳಲು ಹಾತೊರೆದಿದೆ
 
ಕಣ್ಣ ಹನಿ ಕೆನ್ನೆಗೆ ಜಾರುವ
ಮುನ್ನವೇ ಆವಿಯಾಗಿ
ಬೀಸುವ ಶುಷ್ಕ ಗಾಳಿಯಲಿ
ಸುಟ್ಟ ಹೃದಯದ ಘಾಟು
 
ಮೇಲೇರಿಗೇರಲು ಸಿದ್ಧ
ಭೂತವೂ, ಭವಿಷ್ಯವೂ
ಬಯಲು ಕೋಲವೋ
ಒತ್ತೆ ಕೋಲವೋ
ಕೆಂಡದ ರಾಶಿಯಲಿ ನಡೆದು
ಆವಾಹನೆ ಮಾಡಬೇಕಿದೆ

ಅನಾಥವಾದ ಆರ್ತನಾದವೊಂದು
ತರೆಗೆಲೆಗಳ ಅಡಿಯಲ್ಲಿ
ಕಸದ ತೊಟ್ಟಿಯಲ್ಲಿ ಇರುವೆಗಾಹಾರವಾಗಿ
ಚಿರ ನಿದ್ದೆಗೆ ಜಾರಿದೆ
 
ಕಡಲ ನೀಲಿ ಗೆರೆಯಲ್ಲಿ
ಕಳೆದು ಹೋಗಿದೆ ಪುಟ್ಟ ದೋಣಿ
ತೀರದಲಿ ಕಾದು ಕುಳಿತ
ಅವಳ ಮನೆಯ ಒಲೆ ಉರಿಯುವುದಿಲ್ಲ
 
ಮೀನು ನಾತದ ದುಂಡಗಿನ
ಮೈ ಮೇಲೆ ಹಸಿದ
ಬೀದಿ ನಾಯಿಗಳ ಕಣ್ಣು
ಅಲೆಗಳ ಅಬ್ಬರಕೆ ಅವಳು
ಚೀರಿದ್ದು, ಕೂಗಿ ಕರೆದದ್ದು ಕೇಳಿಸಿತೆ?
 
ಎದೆಯೊಳಗಿನ ಕೋಪ
ಉಸಿರ ಸುಡುತಿರೆ
ಮನೆಯ ಗಂಜಿ ಪಾತ್ರೆಯಲಿ
ಅಗಳು ಬಿರಿಯುವುದಿಲ್ಲ
 
ಶಿಳ್ಳೆ ಹೊಡೆದು ಹಾದು ಹೋದ
ರೈಲು ಬಂಡಿಯ ಕಿಟಿಕಿಗಳಲಿ
ಇಣುಕಿ ನೋಡಿದ ಮುಖಗಳು
ಟಾಟಾ ಮಾಡಿದ ಕೈಗಳು
ನಿದ್ದೆಯಿಂದೆದ್ದು ಕಣ್ಣೊರಸಿ ಕೊಂಡಾಗ
ಅರ್ಧ ಕನಸು ಇನ್ನೂ ಬಾಕಿಯಿದೆ
 
ಆರ್ತನಾದ, ಸಿಟ್ಟು, ಆಕ್ರೋಶದ
ಕೂಗು ಹೆಬ್ಬಂಡೆಗೆ ಬಡಿದು
ಮಾರ್ದನಿಸಿದೆ
 
ಆ ಶವದ ಮುಖ ಫೋಕಸ್ ಮಾಡಿ
ಜೂಮ್ … ಜೂಮ್… ಓಕೆ
ಟೀವಿ ಪರದೆಯ ಮೇಲೆ
‘ರೈತರ ಆತ್ಮಹತ್ಯೆ ‘ ಬ್ರೇಕಿಂಗ್ ನ್ಯೂಸ್!
 
ನೋಡಿದಿರಾ…
ಬೆಳಕು ಶಬ್ದಕ್ಕಿಂತ ವೇಗವಾಗಿದೆ!
 
ಇಲ್ಲೀಗ
ಉರಿವ ಚಿತೆಯ ಬೆಂಕಿ
ಸೂತಕದ ಮನೆಯ ರೋದನೆ
ಚಲಿಸುವ ಚಿತ್ರಗಳಲಿ ಸೆರೆಯಾಗಿ
ಸ್ತಬ್ಧವಾಗಿದೆ.

‍ಲೇಖಕರು G

25 July, 2015

5 Comments

  1. noorullathyamagondlu

    ಚೆನ್ನಾಗಿದೆ.

  2. Jayashree

    ಎದೆಯಾಳದ ನೋವು ಹಾಡಾಗಿ ಹೊಮ್ಮಿದ ಸಾಲುಗಳು …

  3. Sushma Moodbidri

    ಬದುಕಿನ ಅದೆಷ್ಟು ಮುಖಗಳಿವೆ ಇಲ್ಲಿ.. ಚೆನ್ನಾಗಿದೆ ರಶ್ಮಿ 🙂

  4. Ajith

    Excellent

  5. mmshaik

    very..very nice rashmi madam..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading