ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನಿತಾ ನರೇಶ್ ಮಂಚಿ ಅವರ ‘ಅನಂತಶಯನ ಮತ್ತು ಗುಪ್ತನಿಧಿ’..

-ಅನಿತಾ ನರೇಶ್ ಮಂಚಿ

ಬೆಳಿಗ್ಗೆ ಸ್ವಲ್ಪ ಪೇಪರ್ ಓದಿ ರಿಲ್ಯಾಕ್ಸ್ ಆಗೋಣ ಅಂತ ಅದನ್ನು ಬಿಡಿಸಿದರೆ ಎಲ್ಲೆಡೆಯಲ್ಲೂ ಅನಂತ ಶಯನನ ಅದ್ಭುತ ಭಂಡಾರದ ವರ್ಣನೆ. ಮೊದಲು ಎಲ್ಲರ ಕಣ್ಣಿಗೆ ಬೀಳದೆ ತನ್ನ ಪಾಡಿಗೆ ತಾನು ನಿದ್ದೆ ಮಾಡುತ್ತಿದ್ದ ದೇವ, ಈ ವಿಚಾರ ಬೆಳಕಿಗೆ ಬಂದ ಮೇಲೆ ಅಷ್ಟು ಆರಾಮವಾಗಿ ಶಯನಿಸುವುದುಂಟೇ? ಅವನು ಬಿಡಿ.. ನಿದ್ರಿಸಿದರೂ ನಿದ್ರಿಸಿದ.. ಆದರೆ ಬಗೆ ಬಗೆಯ ವಜ್ರ ವೈಡೂರ್ಯಗಳು, ಚಿನ್ನದ ಹಾರಗಳು ಅಳತೆ ಮೀರಿ ತುಂಬಿ ತುಳುಕುತ್ತಿದ್ದ ಆ ಭವ್ಯ ನಿಧಿ ನನ್ನ ನೆಮ್ಮದಿಯನ್ನಂತೂ ಕೆಡಿಸಿತ್ತು. ” ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರೆ” ಎಂಬ ದಾಸರ ಪದದಂತೆ ನನ್ನ  ಕಣ್ಣು ಮುಚ್ಚಿದರೂ, ಬಿಚ್ಚಿದರೂ, ಒಂದಿಷ್ಟು ಅರೆನಿದ್ರೆಯಲ್ಲಿ ಬೆಚ್ಚಿದರೂ, ಆ ಒಡವೆಗಳ ಗೊಡವೆಯ ಕಡೆಗೇ ಮನ ಚಲಿಸುತ್ತಿತ್ತು. ಬರೇ ಪೇಪರಿನಲ್ಲಿ ಓದಿಯೇ ನನ್ನ ಸ್ಥಿತಿ “ಗಾಗಿರಬೇಕಾದರೆ, ಆ ನಿಕ್ಷೇಪದ ಸನಿಹದಲ್ಲೆ ಇದ್ದರೂ ತಮ್ಮನ್ನು ಪದ್ಮನಾಭ ದಾಸನೆಂದು ಕರೆದುಕೊಂಡು ಪುಡಿಕಾಸೂ ಮುಟ್ಟದೆ ಬಾಳಿದ ತಿರುವಾಂಕೂರು ರಾಜರ ಪ್ರಾಮಾಣಿಕತೆ, ಮೂಗಿನ ಮೇಲೆ ಬೆರಳೇರಿಸಬೇಕಾದಂತ ವಿಷಯವೇ ಸರಿ.
ಇಷ್ಟರವರೆಗೆ ಕೇವಲ ಸಾಬಾಬಾರವರ ಖಾಸಗಿ ಕೋಣೆಯಲ್ಲಿದ್ದ ಕೇಜಿಗಟ್ಟಲೆ ಬಂಗಾರವನ್ನೇ ದೊಡ್ಡ ಸುದ್ದಿ ಎಂದು ಮಾತನಾಡಿ ಹೆಮ್ಮೆ ಪಡುತ್ತಿದ್ದ ನಾವುಗಳು, ಈಗ ಅನಂತಶಯನ ದೇವಾಲಯದ ರಹಸ್ಯ ಕೊಠಡಿಗಳು ಒಂದೊಂದಾಗಿ ತೆರೆಯುತ್ತಿದ್ದಂತೆ, ನಮ್ಮ ಗ್ರೇಡ್ ಮೇಲೇರಿಸಿಕೊಂಡು ಅಲ್ಲಿನ ಸೊತ್ತುಗಳ ಎಣಿಕೆಗೆ ಮೀರಿದ ಮೌಲ್ಯದ ಬಗ್ಗೆ ಮಾತನಾಡುತ್ತಿರುವುದಂತೂ ಸತ್ಯ. ತಿರುಪತಿ ತಿಮ್ಮಪ್ಪನನ್ನು ಮೀರಿಸುವಂತೆ ಅನಂತವಾಗುತ್ತಲೇ ಸಾಗಿರುವ ಇಲ್ಲಿನ ಸಂಪತ್ತು ಎಲ್ಲರ ಕಣ್ಣು ಕೋರೈಸುವಂತೆ ಮಾಡುತ್ತಿರುವುದು ಸುಳ್ಳಲ್ಲ. ಜಗತ್ತಿನ ಫೋರ್ಬ್ಸ್ ಲಿಸ್ಟ್ ಆಫ್ ಬಿಲಿಯನರ್ಸ್ ಪ್ರತಿ ವರ್ಷವೂ ಬದಲಾಗುವಂತೆ, ನಮ್ಮ ದೇವರುಗಳು ಕೂಡಾ ನಂ.೧ ನಂ. ೨ ಎಂಬ ಸರದಿಯಲ್ಲಿ ಕಾಣಿಸಿಕೊಳ್ಳುವ ದಿನ ಇನ್ನು ದೂರವಿಲ್ಲ ಎನ್ನಿ.
ಈ ಅದ್ಭುತ ಭಂಡಾರದ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ, ಸ್ವಲ್ಪ ಸಮಯದಿಂದ ಸದ್ದು ಗದ್ದಲವಿಲ್ಲದೆ ಬಿದ್ದಿದ್ದ ನಿಧಿ ಹುಡುಕಿಕೊಡುವ ಮಂತ್ರವಾದಿಗಳು ಈಗಾಗಲೆ ಎದ್ದು ನಿಂತಿರಬಹುದು. ಅಲ್ಲ ಅವರಾದರು ಇದನ್ನು ಕೇವಲ ಅವರ ಸ್ವಾರ್ಥಕ್ಕೆ ಮಾಡುತ್ತಾರೆಯೆ? ನಿಮ್ಮ ಉಪಕಾರಕ್ಕೆ ತಾನೆ? ನಿಮ್ಮ ಪೂರ್ವಿಕರು ಎಲ್ಲೋ ನೆಲದಾಳದಲ್ಲಿ ಯಾರ ಕಣ್ಣಿಗೂ ಬೀಳದಂತೆ ಹುಗಿದಿಟ್ಟ ಸಂಪತ್ತನ್ನು ವೃಥಾ ಮಣ್ಣಾಗಿ ಹೋಗದಂತೆ ತಡೆದು ನಿಮ್ಮ ಕೈಗೆ ತಲುಪಿಸುವ ಏಜಂಟರಷ್ಟೆ ಅವರು. ಏಜಂಟ್ ಅಂದ ಮೇಲೆ ಕಮಿಷನ್ ಇರಲೇಬೇಕಲ್ಲವೆ? ಅದಕ್ಕೆ ನೀವು ಸಹಕರಿಸಬೇಕಾದದ್ದು ನಿಮ್ಮ ಧರ್ಮ ಅಂತ ನೀವು ತಿಳಿದುಕೊಂಡಿದ್ದೀರ ಎಂಬುದು ನನಗೆ ಗೊತ್ತಿದೆ ಬಿಡಿ.
ಹಾಗೇನಾದರೂ ಆಸೆ ಇದ್ದರೆ ಅದೇನೂ ಕಷ್ಟದ ಕೆಲಸವಲ್ಲ. ಹಾಗೊ ಹೀಗೋ ನೀವು ಗಳಿಸಿ ಉಳಿಸಿದ ದುಡ್ಡು ಮತ್ತು ಹೇಗೋ ಏಗಿ ಗಳಿಸಿದ ಕೆಲವು ಗ್ರಾಮ್ ಚಿನ್ನ ಇವೆಲ್ಲವನ್ನು ಜೊತೆ ಮಾಡಿ ಅವರು ಅಪರಾತ್ರಿಯಲ್ಲಿ ಮಾಡುವ ಪೂಜೆಯ ಸ್ಥಳದಲ್ಲಿಟ್ಟು ನೀವು ಸ್ವಸ್ಥರಾಗಿ ಮಲಗಿದರಾಯಿತು. ಮುಂದಿನ ಕೆಲಸಕ್ಕೆ ನಿಮ್ಮ ಅಗತ್ಯವೇನಿಲ್ಲ. ಮರುದಿನ ಬೆಳಗ್ಗೆ ಮಂತ್ರವಾದಿ ಅಲ್ಲೇ ಉಳಿದಿದ್ದಾನೆ ಎಂದಾದರೆ ನಿಮ್ಮ ಬಳಿ ಇನ್ನೂ ಅವನ ಪೂಜೆಗೆ ಇಡುವಂತಹ ದೊಡ್ಡ ಗಂಟು ಇದೆ ಎಂಬುದು ಗೂಡಾರ್ಥ. ಅವನಿಲ್ಲ ಎಂದಾದರೆ ಇಷ್ಟರವರೆಗೆ ನೀವು ಹೊಟ್ಟೆ ಬಟ್ಟೆ ಕಟ್ಟಿ ಮುಚ್ಚಿಟ್ಟ ನಿಧಿ ಅವನ ಪಾಲಾಗಿ ಅವನು ಪರಾರಿಯಾಗಿದ್ದಾನೆ ಎಂಬುದು ಸ್ಪಷ್ಟಾರ್ಥ!
ಹೀಗೆ ಈ ತರಹದ ಆಲೋಚನೆಗಳ ಗುಂಗಿನಲ್ಲಿದ್ದುಕೊಂಡು ಮೊನ್ನೆ ಆತ್ಮೀಯರೊಬ್ಬರ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿ ಯಾರೋ ನೆಂಟರು ಬಂದಿದ್ದರು. ಕೆಲವು ಹೊಸ ಮುಖಗಳು ತುಸು ನಗೆ ಬೀರಿ ಅತ್ತಿಂದಿತ್ತ ಸುಳಿಯುತ್ತಿದ್ದವು. ಅವರ ಮನೆಯ ಎಲ್ಲಾ ಕೋಣೆಗಳಿಗೆ ರಾಜಾರೋಷವಾಗಿ ನಡೆದಾಡಲು ಅನುಮತಿದ್ದ ನಾನು ಆ ದಿನ ಒಂದು ವಿಚಿತ್ರ ಗಮನಿಸಿದೆ. ಯಾವತ್ತೂ ತೆರೆದೇ ಇರುತ್ತಿದ್ದ ಒಂದು ಕೋಣೆಯು ತನ್ನ ಕಿಟಕಿಗಳಿಗೆಲ್ಲ ಗಾಢ ವರ್ಣದ ಕರ್ಟನ್ ಹೊದ್ದು,ಬಾಗಿಲು ಮುಚ್ಚಿ ಧ್ಯಾನಸ್ಥವಾಗಿತ್ತು. ನಾನು ನನ್ನ ಎಂದಿನ ಅಟ್ಟಹಾಸದ ಶೈಲಿಯಲ್ಲೇ ಮಾತು ಪ್ರಾರಂಭಿಸಿದೆ. ಸಾಮಾನ್ಯವಾಗಿ ಅದೇ ಶೈಲಿಯಲ್ಲಿ ನನಗೆ ಸಾಥ್ ನೀಡುತ್ತಿದ್ದ ಮನೆಯೊಡತಿ, ಅಂದು ಮಾತ್ರ ತಗ್ಗಿದ ಸ್ವರದಲ್ಲಿ ನನ್ನನ್ನು,  ‘ನೀವು ಇಲ್ಲಿ ಬನ್ನಿ’ ಅಂತ ಹೊರಗೆ ಗಾರ್ಡನ್ ನಲ್ಲಿ ಹಾಕಿದ್ದ ಬೆಂಚಿನೆಡೆಗೆ ಕರೆದೊಯ್ದು ಕುಶಲೋಪಚರಿಗೆ ತೊಡಗಿದರು. ತಿಂಡಿ ತೀರ್ಥದ ಸರಬರಾಜು ಅಲ್ಲಿಗೇ ಆತು. ಅವರ ಚರ್ಯೆಯಿಂದ  ಗಲಿಬಿಲಿಗೊಂಡ ನನ್ನನ್ನು ನೋಡಿ ಇನ್ನಷ್ಟು ಸಣ್ಣ ಸ್ವರದಲ್ಲಿ ‘ಆ ಕೋಣೆಯಲ್ಲಿ ನಿಧಿ ಇದೆ’ ಅಂದರು. ಸ್ವಲ್ಪ ಹೊತ್ತು ಆ ಸುದ್ಧಿ ಈ ಸುದ್ಧಿ  ಎಲ್ಲಾ ಮಾತನಾಡಿದರೂ ನನ್ನ ಮನಸ್ಯಾಕೊ ಆ ಕೋಣೆಯೊಳಗೆ ಬಚ್ಚಿಟ್ಟಿರುವ ನಿಧಿ ಮತ್ತು ಅದರಿಂದಾಗಿ ಮೇಲೇರುವ ಅವರ ಲೆವೆಲ್ ಬಗ್ಗೆ ಕೊಂಚ ಅಸೂಯೆಗೊಂಡಿತ್ತು ಎಂಬುದು ಸುಳ್ಳಲ್ಲ. ಅವರು ನನಗೆ ಇಷ್ಟವಾಗದಿರುವ ಪಕ್ಕದಮನೆಯವರನ್ನು ಎಷ್ಟು ಬೈದರೂ, ನನಗ್ಯಾಕೋ ಆ ಮಾತುಗಳು ರುಚಿಸಲೇ ಇಲ್ಲ.
ಹೊರಡುವ ಮೊದಲು ಮನೆಯ ಉಳಿದ ಸದಸ್ಯರಿಗೆ ಹೇಳಿ ಬಿಡೋಣ ಎಂದುಕೊಂಡು ಒಳ ನಡೆದೆ. ಕಣ್ಣುಗಳು ಆ ಕೋಣೆಯ ಕಡೆಗೇ ಇತ್ತು. ಏನದೃಷ್ಟ ..!! ಆ ಕೋಣೆಯ ಬಾಗಿಲು ಗಾಳಿಗೋ ಏನೋ ತುಸು ತೆರೆದಿತ್ತು. ಮೆಲ್ಲಗೆ ಕಣ್ಣಿನಿಂದಾದರೂ ಆ ಐಶ್ವರ್ಯವನ್ನು ವೀಕ್ಷಿಸೋಣ ಎಂದು ಒಳಗೆ ಇಣುಕಿದೆ. ಒಳಗೆ ಒಂದು ಕೈ ಮೇಲೆತ್ತಿ ಮತ್ತೊಂದನ್ನು  ಮುಷ್ಠಿ  ಬಿಗಿದು  ತುಂಟ ನಗು ಮುಖ ಹೊತ್ತು ಮಲಗಿದ ಪುಟ್ಟ ಕಂದಮ್ಮ..! ನಾನು ಇಣುಕ್ಕಿದ್ದನ್ನು ಕಂಡು, ಆ ಮನೆಗೆ ಬಂದಿದ್ದ ನೆಂಟರ ಪೈಕಿಯ ಒಬ್ಬಾಕೆ, ‘ಅವ್ಳು ನನ್ನ ಮಗ್ಳು ನಿಧಿ. ಸ್ವಲ್ಪ ಬೆಳಕು, ಶಬ್ದಕ್ಕೆಲ್ಲ ಎದ್ದು ಬಿಡ್ತಾಳೆ ಅಂದರು. ಕಣ್ಣು ಕೋರೈಸುವ ಬಂಗಾರದೊಡವೆಗಳನ್ನು ನಿರೀಕ್ಷಿಸಿದ್ದ ನನಗೆ ಮಗುವನ್ನು ಕಂಡು ನಿರಾಸೆಯೂ, ನಮ್ಮ ಲೆವೆಲ್ ಇನ್ನು ಮುಂದೆಯೂ ಸೇಮ್  ಆಗಿರುವ ಬಗ್ಗೆ ಸಮಾಧಾನವೂ ಆಗಿ ಮೆತ್ತಗೆ ತಲೆ ಅಲುಗಿಸಿದೆ.
ವಿಷಯ ಎಲ್ಲಿಂದೆಲ್ಲಿಗೋ ಹೋಯ್ತೆಂದು ತಲೆಬಿಸಿ ಮಾಡಬೇಡಿ.ಇದ್ದಲ್ಲೇ ಬಿದ್ದಿರಲಿಕ್ಕೆ ಅದೇನು ಪದ್ಮನಾಭನ ತಿಜೋರಿಯಲ್ಲಿದ್ದ ಒಡವೆಗಳೇ..
ನಾನಂತೂ ನಿಧಿಯ ಗುಂಗಿನಿಂದ ಹೊರಬೀಳಬೇಕೆಂದುಕೊಂಡಿದ್ದೆ.. ಆದರೆ ಈ ಮಾಧ್ಯಮದವರಿಗೆ ನನ್ನಂತವರ ಹೊಟ್ಟೆ ಉರಿಸಿ ಅದೇನು ಸಂತಸ ಸಿಗುವುದೋ .. ಯಾರಿಗೆ ಗೊತ್ತು..  ದೇವ ಮಾನವರದ್ದೊ, ದೇವರದ್ದೋ ನಿಧಿಯ ಬಗ್ಗೆ
ವಿವರಣೆ ನೀಡಿ ಸುಮ್ಮನುಳಿವ ಬದಲು ಈಗ ಸ್ವಾಮಿ , ಯೆಡ್ಡಿ, ರೆಡ್ಡಿಗಳ ಸ್ಥಿರ ಚರ ಸೊತ್ತುಗಳ ಬಗ್ಗೆಯೂ ಸುಳಿವು ನೀಡಿ ಗೋಳು ಹೊಯ್ದುಕೊಳ್ಳುತ್ತಾರಲ್ಲ.. ಏನೆನ್ನಬೇಕು ಇವರನ್ನು..
ಅಯ್ಯೋ ಬಿಡಿ ನಮಗೇಕೆ ಅವರಿವರ ಸುದ್ಧಿ ಅಂತ ತಣ್ಣಗಿರುವುದೇ ನನ್ನ ಆರೋಗ್ಯಕ್ಕೆ ಉತ್ತಮ ಅನ್ಸುತ್ತೆ. ನೀವೇನಂತೀರಾ.. ??

‍ಲೇಖಕರು avadhi

18 September, 2011

2 Comments

  1. -ರವಿ ಮೂರ್ನಾಡು

    ಪ್ರಸ್ತುತ ವರ್ತಮಾನಕ್ಕೆ ಅವಲೋಕಿಸಿದರೆ ಮನಸ್ಸು ಮಾತಾಡುವುದನ್ನು ಪದಗಳಲ್ಲಿ ಸೆರೆ ಹಿಡಿದರೆ ಹೆಚ್ಚು ಮಂದಿಗೆ ತಲಪುತ್ತೇ ಅಂತ ಅನ್ನಿಸಿತು. ಅದರಲ್ಲೂ ಹೆಮ್ಮನಸ್ಸಿನ ಮಾತು ತುಂಬ ಗಟ್ಟಿ ಮಾತುಗಳನ್ನು ಆಡುತ್ತೆ. ಎಷ್ಟಾದರೂ ಭೂಮಿಯಲ್ಲವೇ? ಮಾತಾಡದಿದ್ದರೂ ಮಾತಾಡುತ್ತೆ.ಏನಿಲ್ಲದಿದ್ದರೂ ಮಳೆ ಸುರಿಯುತ್ತೆ. ಅದನ್ನು ಈ ಲೇಖನದಲ್ಲಿ ನೋಡಿದೆ.ಮಾತು ಬಂಗಾರವಾಗಬೇಕು. ಅದು ದೇವರಾದರೇನು, ಮನುಷ್ಯರಾದರೇನು? ಅದಕ್ಕಿಂತ ಹೆಚ್ಚಾಗಿ ಮನುಷ್ಯ ದೇವರ ಹೆಸರಿನಲ್ಲಿ ಮಾನವೀಯತೆ ಮೆರೆಯಬೇಕು. ಚೆನ್ನಾಗಿದೆ ಲೇಖನ.

  2. Ashoka A.S.

    Anitha…well written article, liked it very much.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading