ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಧಿನಾಯಕರು ನಮಗೆ ನಾವೇ !

-ಡಾ ನಾ ಮೊಗಸಾಲೆ

ಅಧಿನಾಯಕ

ಒಳಗಿದ್ದ ಈತ ಇದೀಗ ಹೊರೆಗೆ ಕಾಲಿಟ್ಟ
ಹಾಗೆ ಕಾಣುತ್ತಿರುವ ಎನ್ನುವ ಕಣ್ಣಿಗೆ
ಕಾಣಬಹುದೇ ಕಮಲಜನ ಹಾಗೆ ? ಅಥವಾ
ಹುಟ್ಟದೇ ತಾವರೆಯಿಂದ ಹುಟ್ಟಿದನೇ ಹೊರಗೆ ?

ಗೊತ್ತಿಲ್ಲ ! ಗ್ರಹಿಸುವುದು ಸುಲಭವೂ ಅಲ್ಲ
ಯಾಕೆಂದರವನು ಇದ್ದೂ ಇಲ್ಲದಂತಿರುವ
ಒಮ್ಮೊಮ್ಮೆ ಕಾಣುವನು ಅನೇಕರ ನಾಲಗೆಯಲ್ಲಿ
ಮತ್ತೊಮ್ಮೆ ಮೌನವಾಗುವುದುಂಟು, ತಿಳಿವುದಿಲ್ಲ !

ಅವನನ್ನು ಕರೆದು ಇಷ್ಟಲಿಂಗದ ಹಾಗೆ
ಕರದೊಳಿಟ್ಟು ಧ್ಯಾನಿಸಬೇಕೆಂದುಕೊಳುವಾಗ
ಧ್ಯಾನಸ್ಥನಾಗದೆ ಹೋಗಿ ನಿರಾಶೆಯಲಿ ಮರಳುವೆನು
ಇದು ಎಂಥ ಘನರಾಜ್ಯವೆಂಬೀಭಾವದಿAದ !

ಈ ಇವನ ಕೆಲಸಕ್ಕೆ ಅವನೊಬ್ಬನೇ ಹೊಣೆಯಲ್ಲ
ನಮಗೂ ಇಲ್ಲವೇ ಅದು ? ಆದರೂ ನಾವು
ನಮ್ಮನ್ನು ಮರೆತು, ಅವನನ್ನೆ ಹೊಣೆಗೇಡಿ
ಮಾಡುವುದು ಇದೆಯಲ್ಲ, ಇದು ಕುರುಡುಗಣ್ಣು !

ಯೋಜಿಸಿರುವನನೇಕ ಯೋಜನೆಗಳನ್ನಾತ
ಅವು ಒದಗಿ ಆಗಿವೆ ಇಂದು ಅಣೆಕಟ್ಟಿನಂತೆ
ನೀರು ಹರಿದಂತೆ ಸಹಜವಾಗಿ, ಅಸಹಜದ ಹರಿವೂ ಇದೆ
ನಾಳೆ ಬಂದಿತೇ ಬರಗಾಲ ಬೊಗಸೆಯ ನೀರಿಗೆ ?

ಇರು ಮಹರಾಯ ಕಾಲಾತೀತನಾಗಿ ನಮ್ಮೊಳಗೆ
ನಡೆತೇರನೇರಿ ದೇವರ ಭ್ರಮೆಯ ಹುಟ್ಟಿಸದೆ
ನನ್ನಂತೆ ನೀನು ನಿನ್ನಂತೆ ನಾನು ಎನುವುದಾಗಲಿ ಧ್ಯೇಯ
ಆಗ ಅಧಿನಾಯಕರು ನಮಗೆ ನಾವೇ !

‍ಲೇಖಕರು Admin

27 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading