-ನಾಗರಾಜ ಹರಪನಹಳ್ಳಿ
ಮಳೆ ನಿಂತ ನಂತರ ದಂಡೆ ಮೌನ

ಅದೇ ದಂಡೆ
ಸುದೀರ್ಘ ಮಳೆಯ ನಂತರ
ಈಗ ದೀರ್ಘ ಮೌನ
ಇನ್ನೇನಿದೆ ??
ಏನೋ ಬಾಕಿಯಿದೆ ಮಾತಿಗೆ
ಮಳೆ ಹೇಳಿತು:
ಮತ್ತೆ ಬರುವೆ ಮುಂದಿನ ವರುಷ
ದಂಡೆ ನಾಚಿತು
ಮುರಿಯದ ಮೌನದಲ್ಲಿ
ನಸು ನಕ್ಕಿತು
ನದಿಯಾಗಿ ಸೇರಿಯಾಯ್ತು
ಇನ್ನೇನಿದ್ದರು
ಒಡಲ ಮಾತು ಬಯಲ ಅಲೆ
ಮುಗಿಲು ಕಾವಲು ಅಷ್ಟೇ
******
ಗುಜರಿ ಅಂಗಡಿ
ಗುಜರಿ ಅಂಗಡಿಯಲ್ಲಿ
ನನ್ನ ಬಾಲ್ಯ ಅಡಗಿದೆ
ಮುರಿದ ಸೈಕಲ್ಲು ಮಾತಾಡುತ್ತಿದೆ
ಕನಸು ಹೊದ್ದು ಮಲಗಿದೆ
ಆ ಪುಟ್ಟ ಪೆಟ್ಲುಗಳ ಮೇಲೆ
ನನ್ನ ಎಳೆಯ ಪಾದಗಳಿವೆ
ಅಲ್ಲಿಯ ಮಾಸಿದ ಡೈರಿಯಲ್ಲಿ
ನನ್ನ ನಿನ್ನ ಕತೆಗಳಿವೆ ಕನಸುಗಳು ಇವೆ
ಈಡೇರದ ಬಯಕೆಗಳಿವೆ
ಗುಜರಿ ಅಂಗಡಿ
ಬರೀ ಗುಜರಿಯಲ್ಲ

ಅದೆಷ್ಟು ಮುರಿದ ಮಂಚ
ನಗ್ಗಿದ ಪಾತ್ರೆ ಹಳೆಯ ಪೇಪರು
ಧ್ವನಿ ಕಳೆದುಕೊಂಡ ರೇಡಿಯೋ
ದೃಶ್ಯ ಮರೆಯಾದ ಟಿವಿ ಮಾಸಿದ ದೇವರ
ಪೋಟೋ ಹರಿದ ಬಟ್ಟೆ ತೂತು ಬಿದ್ದ ಹಂಡೆ
ಊದಲಾರದ ಕೊಳಲು
ತಿದಿ ಹರಿದ ಹಾರ್ಮೋನಿಯಂ
ಒಂದೇ ಎರಡೇ
ನೂರಾರು ಕುಟುಂಬಗಳ ಕತೆಯೇ ಇದೆ
ಮರುಹುಟ್ಟಿಗಾಗಿ ಕಾದ ಹಳತು
ಹೊಸತಾಗಲು ತುಡಿವ ತಹತಹಿಕೆ ಎಲ್ಲವೂ ಇವೆ
ಅಲ್ಲೂ ಒಂದು ಕನಸು ಇದೀಗ ಹುಟ್ಟಿದೆ..






ತುಂಬಾ ಚೆನ್ನಾಗಿದೆ
ಥ್ಯಾಂಕ್ಯೂ