–ವಿಶಾಲ್ ಮ್ಯಾಸರ್
ಅದೆಷ್ಟು ಸೋಲುತ್ತದೆ ಕೈ
ಏನನ್ನಾದರೂ ಬೇಕಾದುದ ಮಾಡುವಾಗ
ನಡುಗುತ್ತದೆ ಸರಿಯಾದುದ
ಆಯ್ದುಕೊಂಡಾಗ
ಹೆದರುವುದಿಲ್ಲ ಮನಸು
ಕಟಿಂಗ್ ಕುಳಿತಾಗ
ಒಂದೊಂದು ಲುಕ್ಕು
ಹೊಸದಾಗಿ ನನ್ನನ್ನು ಕಂಡುಕೊಳ್ಳುವ ನಂಬಿಕೆ
ಯಾಕೆ ಭಯ ಪಡಬೇಕು
ನಾವು ಅಳುವಾಗ
ಕನ್ನಡಿ ನೋಡುವಾಗ
ಮೀಸೆಯ ಮುಂದುಮಾಡಿ
ಕತ್ತರಿಗೆ ಮುತ್ತುಕೊಡುವಾಗ
ಮಳೆ ಬರುತ್ತದೆ
ನೆಲ ಘಂ ಗುಡುತ್ತದೆ
ಕೊಡೆ ಮೈಚಾಚಿಕೊಳ್ಳುತ್ತದೆ
ಇದು ಯಾತಕ್ಕೆ ಎಂದರೆ
ಇಷ್ಟೇ ಅದನ್ನು ಅದು ತೆರೆದುಕೊಳ್ಳುವುದು ಅಷ್ಟೇ
ನಡೆಯುವಾಗ ದಾರಿ ಏನು ಹೇಳುತ್ತದೆ ಎಂದು ಕಿವಿಗೊಡಬೇಕಂತೆ
ಯಾತಕ್ಕೆ ಯಾವಾಗಲೂ
ಚಪ್ಪಲಿಯ ಚಿಂತೆ
ಕಾಲುವೆಗೆ ಹಲವು ನೀರು ಸೇರುವುದು ಅದೆಷ್ಟು ಸಹ್ಯವೋ
ನನ್ನೊಳಗೂ ಅದೇಷ್ಟು ಕನಸುಗಳು
ಕೂಡಿ ಹರಿಯುವುದು ಅದು ಅಸಹ್ಯವಲ್ಲವೇ ಅಲ್ಲಾ
ಒಂದೊಂದು ಕ್ಷಣಕ್ಕೂ
ಬೊಗಸೆ ತುಂಬಿ ನೀರು ಕುಡಿಯುವಾಗ
ಎಲ್ಲಾ ಹನಿಗೂ ದಾಹ ತೀರಿಸುವ ಅದೆಷ್ಟು ಇರಾದೆ
ಸಿಗರೇಟು ಸೇದುತ್ತಾ
ಕಣ್ಣಿಗೆ ಹೊಗೆ ಹೊಕ್ಕು
ಸ್ವಲ್ಪ ಮಂಜು ಮಂಜಾದಂತೆ
ಈ ಲೋಕ ಉರಿಯುತ್ತದೆ
ಕಣ್ಣಿನಂತೆ
ಕಣ್ಣು ಕಾಣುತ್ತದೆ ಒಳಗಿನ ಜಗತ್ತಿನಂತೆ
ಅಷ್ಟೇ
ಹೇಳುವೆನು ಕೊನೆಗೆ
ಶರಾ ಬರೆದಂತೆ
ಅಲ್ಲಾ ಇದು ಡೆಮಾಕ್ರೆಟಿಕ್ ಕಂಟ್ರಿ
ಹೇಳುವೆನು ಒಂದು ಅಭಿಪ್ರಾಯ
ಅದು ಕಟಿಂಗ್ ಕೂದಲಿನದ್ದೋ
ಯಾತರಾದ್ದೋ
ಕಟ್ ಮಾಡುವಾಗ ಅದೆಷ್ಟು ಮಿಸ್ ಮಾಡಿಕೊಳ್ಳುತ್ತವೆ
ನಮ್ಮನ್ನು ನಾವೇ!






0 Comments