ಅದು 'ಗಜಪಾದ'

ವಿಕಿರಣದೆದುರು ಮಂಡಿಯೂರಿದ ವಾಮನನ ಕಥೆ ಇದು

ಈ ‘ಗಜಪಾದ’, ಗಜಪಡೆಯನ್ನೂ ಹಿಮ್ಮೆಟ್ಟಿಸಬಲ್ಲುದು!

sathyakama sharma kasaragod

ಸತ್ಯಕಾಮ ಶರ್ಮಾ ಕಾಸರಗೋಡು

ಈ ವಿಶ್ವದಲ್ಲಿ ಅತ್ಯಂತ ಹಾನಿಕಾರಕ ವಸ್ತು ಯಾವುದು?

ವಿಷಗಳಲ್ಲಿ ಪೊಟಾಷಿಯಂ ಸಯನೈಡ್ ಅನ್ನುವಿರಾದರೆ ನಿಮ್ಮ ಸಾಮಾನ್ಯ ಜ್ಞಾನವನ್ನು ಮೆಚ್ಚಬಹುದು- ಆದರೆ ಅದೂ ಕೂಡಾ ಸರಿಯಾದ ಉತ್ತರವಲ್ಲ.

‘ಗೂಗಲೀಕರಿಸಿದರೆ’ ಅದನ್ನು ಮೀರುವಂತ ವಿಷಗಳ ಪಟ್ಟಿ ಸಿಗುತ್ತದೆ. ಮಾತ್ರವಲ್ಲ, ಅತ್ಯಂತ ವಿಷಕಾರಿ ಪದಾರ್ಥದ ಸುಳಿವನ್ನು ಮಾತ್ರ ವಿಜ್ಞಾನಿಗಳು ನೀಡುತ್ತಾರೆಯೇ ಹೊರತು ಅದು ಯಾವುದೆಂಬುದನ್ನು ನಿರ್ದಿಷ್ಟವಾಗಿ ಬಹಿರಂಗಪಡಿಸುವುದಿಲ್ಲ!

ಕಾರಣ? ಈ ವಿಷ ವಸ್ತುವಿಗೆ ಇಲ್ಲಿಯವರೆಗೆ ಒಂದು ಪರಿಣಾಮಕಾರಿ ಪ್ರತಿರೋಧಕವನ್ನು ಕಂಡು ಹಿಡಿದಿಲ್ಲ. ಅಂದರೆ, ಒಂದು ವೇಳೆ ಯಾವನೋ ಒಬ್ಬ ದುರುಳ ಅದನ್ನು ಅಮಾಯಕರ ಮೇಲೆ ಪ್ರಯೋಗಿಸಿದರೆ, ಅವರ ಕತೆ ಮುಗಿದಂತೆ! ತಕ್ಕ ಪ್ರತಿರೋಧಕವೇ ಇಲ್ಲದಿರುವಾಗ ಬದುಕಿಸುವ ಪ್ರಶ್ನೆ ಎಲ್ಲಿದೆ? ‘ಆಹಾ! ಈ ವಿಜ್ಞಾನಿಗಳಿಗೆ ಇಷ್ಟೊಂದು ಮನುಕುಲಪರ ಕಾಳಜಿ ಯಾವಾಗ ಬಂತು?’ ಎಂದು ನೀವು ಉದ್ಗರಿಸುವಿರಾದರೆ ಇಲ್ಲಿದೆ ನಿಮ್ಮನ್ನು ಬೆಚ್ಚಿಬೀಳಿಸುವ ಸತ್ಯಸಂಗತಿ. ಅದು ಈ ವಿಷಕ್ಕಿಂತಲೂ ಘನಘೋರವಾದ ಪದಾರ್ಥ. ಅದು ಕೂಡಾ, ಒಂದರ್ಥದಲ್ಲಿ, ವಿಜ್ಞಾನಿಗಳ ಕೊಡುಗೆ.

ಅದುವೇ ಈ ಗಜಪಾದ (Elephant’s foot)!

elephant-foot1ಇದಕ್ಕೆ ಆನೆಯ ಪಾದದಲ್ಲಿರುವ ಹಾಗೆ ನೆರಿಗೆಗಳು ಇರುವುದರಿಂದ ಈ ಹೆಸರು ಬಂದಿದೆಯೇ ಹೊರತು, ನಿರುಪದ್ರವಿ ಆನೆಗೂ ಈ ನಿರ್ಜೀವ, ಭೀಭತ್ಸ ಪದಾರ್ಥಕ್ಕೂ ಯಾವ ಸಂಬಂಧವೂ ಇಲ್ಲ. ಇನ್ನು, ವಿಷವೇನೋ ನಿಮ್ಮ ಶರೀರ ಸೇರಿದರೆ ಮಾತ್ರ ಹಾನಿ ಮಾಡುವುದಷ್ಟೆ? ಇದು ಹಾಗಲ್ಲ. ನೀವು ಇದರ ಪಕ್ಕ ನಿಂತರೆ ಸಾಕು- ಇದು ನಿಮ್ಮ ಆಹುತಿ ತೆಗೆದುಕೊಳ್ಳುವುದು ಗ್ಯಾರಂಟಿ!

ಗಜಪಾದದ ಉಗಮ 1986 ರ ಏಪ್ರಿಲ್ 26 ರ ವರಗೆ, (ಅವಿಭಜಿತ ) ಸೋವಿಯತ್ ಒಕ್ಕೂಟದ ಆ ಪಟ್ಟಣ ವಿಶ್ವದ ಗಮನ ಸೆಳೆದಿರಲಿಲ್ಲ. ಮುಂದೆ ಸೆಳೆಯುತ್ತಲೂ ಇರಲಿಲ್ಲ! ಆದರೆ ಆ ದುರ್ದಿನ ಅಲ್ಲಿ ಸಂಭವಿಸಿದ ಭೀಕರ ನ್ಯೂಕ್ಲಿಯರ್ ದುರಂತ ಆ ಪಟ್ಟಣದ ದೆಸೆಯನ್ನೆ ಬದಲಿಸಿತು. ದಿನಬೆಳಗಾಗುವಷ್ಟರಲ್ಲಿ ಆ ಸ್ಫೋಟದ ಸುದ್ದಿಯ ಕೆನ್ನಾಲಿಗೆಗಳು ಇಡೀ ವಿಶ್ವನ್ನು ಪಸರಿಸಿ ಮನುಕುಲದ ನಿದ್ದೆಗೆಡಿಸಿದವು. ಚೆರ್ನೋಬೈಲ್ ಎಂಬ ಪಟ್ಟಣದ ಹೆಸರನ್ನು ನಾವೆಲ್ಲಾ ಕೇಳಿದ್ದು ಅಂದೇನೇ! ನ್ಯೂಕ್ಲಿಯರ್ ಸ್ಥಾವರ ವಿರೋಧಿಗಳ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರವಾಗಿ ಮೆರೆವ ಭಾಗ್ಯ ಆ ಪಟ್ಟಣಕ್ಕೆ ಪ್ರಾಪ್ತವಾದದ್ದು ಆ ದಿನದಿಂದಲೇ!

ಆ ದಿನ ನಡೆದದ್ದು ಇಷ್ಟು: ಇಂದು ಉಕ್ರೇನ್ ದೇಶದ ಪಾಲಾಗಿರುವ ಚೆರ್ನೋಬೈಲ್ ನ ನ್ಯೂಕ್ಲಿಯರ್ ಸ್ಥಾವರದಲ್ಲಿ ದಿನಬೆಳಗಾಗುತ್ತಿದ್ದಂತೆ ಕೆಲಸಗಾರರು ತಮ್ಮ ಕೆಲಸ ಶುರುಮಾಡಿದ್ದಾರೆ. ರಿಯಾಕ್ಟರ್ ಸಂ 4 ರಲ್ಲಿ, ತಾವು ನಡೆಸುತ್ತಿದ್ದ ಪರೀಕ್ಷಾ ಕಾರ್ಯಾಚರಣೆಯ ಅಂಗವಾಗಿ, ಬಿಸಿಯಾಗಿ ಸುಡುತ್ತಿರುವ ನ್ಯೂಕ್ಲಿಯರ್ ಇಂಧನ ಸಲಾಕೆಗಳನ್ನು ಶೀತಲೀಕರಿಸುವ ನೀರಿನಲ್ಲಿ ಇಳಿಸಿದ್ದಾರೆ.

ಒಡನೆಯೆ ಭಾರಿ ಪ್ರಮಾಣದ ಆವಿ ಉಂಟಾಗಿದೆ. ಈ ಪ್ರತಿಕ್ರಿಯೆ ವೇಗೋತ್ಕರ್ಷಗೊಂಡು, ಅಗಾಧ ಶಕ್ತಿಯೊಂದಿಗೆ ಧುಮ್ಮಿಕ್ಕಿದೆ. ಅದು ನುಗ್ಗಿ ಬಂದ ರಭಸಕ್ಕೆ, ನ್ಯೂಕ್ಲಿಯರ್ ತಿರುಳನ್ನು ಮುಚ್ಚಿದ್ದ 1,000 ಟನ್ ಭಾರದ ಮುಚ್ಚಳ ಮೇಲಕ್ಕೆ ಚಿಮ್ಮಿದೆ! ಇದರಿಂದ ಅಪಾರ ಪ್ರಮಾಣದ ಕ್ಯಾನ್ಸರ್  ಕಾರಕ ವಿಕಿರಣ ಪದಾರ್ಥಗಳು ವಾತಾವರಣಕ್ಕೆ ಬಿಡುಗಡೆಯಾಗಿವೆ ಮತ್ತು ರಿಯಾಕ್ಟರ್ ಒಳಗೆ ಗಾಳಿ ನುಗ್ಗಿದೆ. ಕ್ಷಣಾರ್ಧದಲ್ಲಿ, ಇದಕ್ಕಿಂತ ಪ್ರಬಲವಾದ ಇನ್ನೊಂದು ಸ್ಫೋಟ ಸಂಭವಿಸಿ ರಿಯಾಕ್ಟರ್ ಇರುವ ಕಟ್ಟಡವನ್ನೇ ಛಿದ್ರ ಮಾಡಿದೆ. ಕರಗಿದ ನ್ಯೂಕ್ಲಿಯರ್ ಇಂಧನದ ಭಾರಿ ದ್ರವ್ಯಗಳು ಇಲ್ಲಿ ರೂಪಗೊಂಡದ್ದು ಆಗಲೇ. ಅವುಗಳಲ್ಲಿ ಕುಖ್ಯಾತವೆನಿಸಿದ್ದು ಈ ಗಜಪಾದ ! ಇದು ಪ್ರಪಂಚದಲ್ಲೇ ಅತ್ಯಂತ ಭಯಾನಕ ತ್ಯಾಜ್ಯ ಎಂಬ ಅಪಕೀರ್ತಿಗೆ ಪಾತ್ರವಾಗಿದೆ.

ತನ್ನನ್ನು ಸೀಲ್ ಮಾಡಿದ್ದ ಸಾಮಗ್ರಿಯ ಮೂಲಕವೇ ಕರಗಿ ಕರಗಿ, ರಿಯಾಕ್ಟರ್ ನ ತಳಸೇರಿ ಅವಶೇಷಗಳಡಿ ಬೆಚ್ಚಗೆ ಕುಳಿತ ಇದು ಹಲವು ಮೀಟರ್ ಉದ್ದ ಹಾಗೂ ನೂರಾರು ಟನ್ ಗಳಷ್ಟು ಭಾರವಿದ್ದು; ನ್ಯೂಕ್ಲಿಯರ್ ಇಂಧನ, ಕಾಂಕ್ರೀಟ್ ಮತ್ತು ತಾನು ಕರಗಿಸಿದ ತನ್ನದೇ ಕವಚದ ಪದಾರ್ಥ ಇವೆಲ್ಲ ಕಲಸಿಹೋದ ಒಂದು ಮಾರಕ ಮೊರಬ್ಬ.

ತನ್ನಷ್ಟಕ್ಕೇ ತಾನು ಬಚ್ಚಿಟ್ಟುಕೊಂಡಿದ್ದ ಇದನ್ನು ಪತ್ತೆಮಾಡಲು ಸಹಾಯಕವಾದದ್ದು ಈ ವಿಕಿರಣ. ದುರಂತ ಸಂಭವಿಸಿ ಕೆಲವು ತಿಂಗಳುಗಳ ಬಳಿಕ, ಸಂಶೋಧಕರು ಹಾಗೂ ಹೀಗೂ ರಿಯಾಕ್ಟರ್ ಸಂ 4ರ ಆವಿ ಗೋಳವನ್ನು ತಲುಪಿದಾಗ ಅವರ ಕಣ್ಣಿಗೆ ಬಿದ್ದದ್ದು, ನ್ಯೂಕ್ಲಿಯರ್ ತಿರುಳು ಹೊರಚೆಲ್ಲಿದ ಈ ಕಪ್ಪು ಲಾವ. ಅಷ್ಟರಲ್ಲಿ ಅವರ ಸೆನ್ಸರ್ ಜೋರಾಗಿ ಅರಚಲಾರಂಭಿಸಿತು. ಅದು, ತಮ್ಮ ಮುಂದೆ ಸಹಿಸಲಸಾಧ್ಯ ವಿಕಿರಣ ಇರುವುದರ ಸೂಚನೆ. ಅಪಾಯವನ್ನು ಅರಿತ ಅವರು, ಒಂದು ಸುರಕ್ಷಿತ ಅಂತರದಿಂದ ನೆಲವನ್ನು ಕೊರೆದು ಚಕ್ರವಿರುವ ರಿಮೋಟ್ ಕೆಮರಾವನ್ನು ಅದರ ಮೂಲಕ ಇಳಿಸಿ, ಈ ಕಪ್ಪು ಲಾವಾದತ್ತ ಸಾಗಿಸಿದರು.

ಆಗತಾನೆ ತೆಗೆದ ರೀಡಿಂಗ್ಸ್, ಈ ವಿಕಿರಣಾಗ್ರೇಸರನ ಮಹಿಮೆಯನ್ನು ಬಯಲು ಮಾಡಿತು. ಅದರೆದುರಿಗೆ ಇದ್ದರೆ ಸಾಕು, ಕ್ಷಣಾರ್ಧದಲ್ಲಿ ಸಾವು ಕಟ್ಟಿಟ್ಟದ್ದು ! ಅದು ಹೊರಸೂಸುವ ವಿಕಿರಣದ ಮಟ್ಟ, ಗಂಟೆಗೆ 10,000 ರೋಎನ್ಟ್ ಜೆನ್ಸ್ (roentgens). ಒಬ್ಬ ಮನುಷ್ಯ ಸಾಯಲು ಇದರ ಹತ್ತರಲ್ಲಿ ಒಂದು ಭಾಗ ವಿಕಿರಣ ಸಾಕು ಅಂದರೆ ಗಜಪಾದದ ತೀವ್ರತೆ ಎಷ್ಟೆಂದು ಊಹಿಸಿ.
ಇದರ ಸನಿಹ 30 ಸೆಕಂಡ್ ಇದ್ದಲ್ಲಿ, ಒಂದು ವಾರದಲ್ಲಿ ತಲೆ ಶೂಲೆ ಮತ್ತು ಸುಸ್ತು ಅನುಭವವಾಗತೊಡಗುವುದು. 2 ನಿಮಿಷಗಳ ಅನಂತರ, ನಿಮ್ಮ ಜೀವಕೋಶಗಳಲ್ಲಿ ರಕ್ತಸ್ರಾವ ಶುರುವಾಗುವುದು. 4 ನಿಮಿಷ ಕಳೆದರೆ ವಾಂತಿಬೇಧಿ, ಜ್ವರದ ಸರದಿ. 5 ನಿಮಿಷಕ್ಕಿಂತ ಹೆಚ್ಚು ನಿಲ್ಲಬೇಕಾಗಿ ಬಂದರೆ ನಿಮ್ಮ ಕೊನೆಯ ಆಸೆಗಳನ್ನು ಪೂರೈಸಿಕೊಂಡು ಬನ್ನಿ-ಯಾಕೆಂದರೆ ಆಮೇಲೆ ನೀವು ಬದುಕಿರುವುದು ಕೇವಲ ಎರಡೇ ದಿನ! ಇದರ ಪಕ್ಕ ಒಂದು ಗಂಟೆ ಇರುವುದೂ, ವಕ್ಷಸ್ಥಲದ ಮೂಲಕ 5,00,000 ಬಾರಿ ಎಕ್ಸ್ರೇ ಹಾಯಿಸುವುದು-ಪರಿಣಾಮ ಎರಡೂ ಒಂದೇನೆ!

ನ್ಯೂಕ್ಲಿಯರ್ ರಿಯಾಕ್ಟರ್ ಗಳಿಗೆ ಸಂಬಂಧಿಸಿ, ಮೆಲ್ಟ್ ಡೌನ್ (ಕರಗುವಿಕೆ) ಅಂದರೆ, ಬೆಣ್ಣೆ ಅಥವಾ ಬರ್ಫ ಕರಗಿದ ಹಾಗಲ್ಲ. ಇದು ಸಂಭವಿಸುವುದು, ರಿಯಾಕ್ಟರ್ ನ ತಿರುಳಿನಲ್ಲಿ. ಶೀತಲೀಕರಣ ವ್ಯವಸ್ಥೆ ನಿವಾರಿಸುವ ಉಷ್ಣವು, ನ್ಯೂಕ್ಲಿಯರ್ ರಿಯಾಕ್ಟರ್ ಉತ್ಪಾದಿಸುವ ಉಷ್ಣವನ್ನು ಮೀರತೊಡಗಿದಾಗ ಈ ಕರಗುವಿಕೆಗೆ ಚಾಲನೆ ದೊರೆಯುವುದು. ಹೀಗೆ ಮಿತಿ ಮೀರಿದ ಉಷ್ಣತೆ ಯಾವುದೇ ಒಂದು ನ್ಯೂಕ್ಲಿಯರ್ ಪದಾರ್ಥದ ( ಹೆಚ್ಚಾಗಿ ಯುರೇನಿಯಂ) ಕುದಿಬಿಂದುವಿಗಿಂತ ಹೆಚ್ಚಾದಾಗ, ಕರಗುವಿಕೆ ಪ್ರಾರಂಭವಾಗುತ್ತದೆ. ಪರಮಾಣು ಕಣಗಳು ಹೊರ ಚಿಮ್ಮುತ್ತಾ, ಕರಗುತ್ತಾ ಅದು ಸಮಸ್ಥಿಗೆ ಬರುತ್ತದೆ. ಇದರಿಂದ ವಿಕಿರಣ ಪದಾರ್ಥದ ಸುರಕ್ಷಾ ಕವಚಗಳು ಒಡೆದು, ವಿಕಿರಣವು ವಾತಾವರಣಕ್ಕೆ ಬಿಡುಗಡೆಯಾಗಿ ಅನಾಹುತವಾಗುತ್ತದೆ.

elephant-foot2ಚೆರ್ನೋಬೈಲ್ ದುರಂತದ ಪರಿಣಾಮ: ಆ ಸ್ಫೋಟ ಹೊರಚೆಲ್ಲಿದ ವಿಕಿರಣ ಪದಾರ್ಥಗಳ ತೀವ್ರತೆ, ಹಿರೋಷಿಮದ ಮೇಲೆ ಹಾಕಲಾದ ಅಣುಬಾಂಬ್ ಬಿಡುಗಡೆ ಮಾಡಿದ ವಿಕಿರಣಕ್ಕಿಂತ 400 ಪಟ್ಟು ಹೆಚ್ಚು ಪ್ರಬಲ. ಬೆಲಾರುಸ್, ರಷ್ಯಾ ಹಾಗೂ ಉಕ್ರೇನ್ ಅತ್ಯಂತ ಬಾಧಿತ ಪ್ರದೇಶಗಳು. ಸ್ಫೋಟದ ತರುವಾಯ ಚೆರ್ನೋಬೈಲ್ ಪಕ್ಕದ ಪ್ರಿಪ್ಯಟ್ ಪಟ್ಟಣದ ಜನರನ್ನು ಸ್ಲವುಟೈಚ್ ಪಟ್ಟಣಕ್ಕೆ ಸ್ಥಳಾಂತರಿಸಲಾಯಿತು. ಇನ್ನು ಈ ದುರಂತದ ಪರಿಣಾಮಗಳು, ಪ್ರಪಂಚದ ಗಮನ ಸೆಳೆದದ್ದು ನೆರೆಯ ಸ್ವೀಡನ್ ನ ನ್ಯೂಕ್ಲಿಯರ್ ಸ್ಥಾವರದ ನೌಕರರು ಅತಿಯಾದ ವಿಕಿರಣವನ್ನು ಪತ್ತೆ ಮಾಡಿದಾಗ. ಚೆರ್ನೋಬೈಲ್ ನಲ್ಲಿ ಉದ್ಭವವಾದ ವಿಕಿರಣ ಪದಾರ್ಥಗಳು ಯುರೋಪ್ ನಾದ್ಯಂತ ಹರಡಿದವು. ಉತ್ತರ ಇಂಗ್ಲೇಂಡ್ ನಲ್ಲಿ ಕುರಿಗಳನ್ನು, ಲಾಪ್ಲೇಂಡ್ ನಲ್ಲಿ ರೇನ್ಡೀಯರ್ ಗಳನ್ನು ನಿರ್ವಿಕಿರಣಗೊಳಿಸಿ (irradiate-ವಿಕಿರಣಕಾರಕ ಅಂಶಗಳನ್ನು ದುರ್ಬಲಗೊಳಿಸಿ) ಕೊಲ್ಲಬೇಕಾಗಿ ಬಂತು.

ಸ್ಫೋಟ ಸಂಭವಿಸಿದ ತಕ್ಷಣ ರಿಯಾಕ್ಟರ್ ನತ್ತ ದಡಬಡಾಯಿಸಿದ ಸಾವಿರಾರು ನೌಕರರು, ರಿಯಾಕ್ಟರ್ ನಿಂದ ಚಿಮ್ಮುತ್ತಿದ್ದ ವಿಕಿರಣವನ್ನು ತಡೆಯಲು ಪರದಾಡಿದರು. ರಿಯಾಕ್ಟರ್ 4 ರ ಬೆಂಕಿ ರಿಯಾಕ್ಟರ್ 1, 2 ಹಾಗೂ 3 ಇವುಗಳಿಗೆ ಹರಡುವುದನ್ನು ತಪ್ಪಿಸುವುದರಲ್ಲಿ ತಮ್ಮ ಪ್ರಾಣವನ್ನು ಪಣವಾಗಿರಿಸಿದ ನೌಕರರಿಗೆ, ಇನ್ನಷ್ಟೂ ಘನಘೋರ ಸಂಭವನೀಯ ವಿಕಿರಣ ಆಘಾತದಿಂದ ಪಾರಾದ ಯುರೋಪ್ ನ ಅದೆಷ್ಟೋ ಮಂದಿ ಚಿರ ಋಣಿಗಳಾಗಿದ್ದಾರೆ. ಸ್ಫೋಟ ಸಂಭವಿಸಿದ ತಕ್ಷಣ ಮತ್ತು ಕೆಲವೇ ತಿಂಗಳುಗಳ ಒಳಗೆ, ಹಲವು ಮಂದಿ ಸಾವನ್ನಪ್ಪಿದರೆ, ಸಾವಿರಾರು ಮಂದಿ ಅತಿ ಹೆಚ್ಚು ವಿಕಿರಣದ ಡೋಸ್ ಪಡೆದರು ಹಾಗೂ ಇದರಿಂದ ಅವರು ಕ್ಯಾನ್ಸರ್ ಗೆ ಬಲಿಯಾಗುವ ರಿಸ್ಕ್ ತೀರಾ ಹೆಚ್ಚಾಯಿತು. ಅಣು ವಿಕಿರಣ ಪರಿಣಾಮಗಳ ಕುರಿತು ಸಂಯುಕ್ತ ರಾಷ್ಟ್ರಗಳ ವೈಜ್ಞಾನಿಕ ಸಮಿತಿ ನೀಡಿದ ವರದಿಯಂತೆ, ಉಕ್ರೇನ್, ಬೆಲಾರುಸ್ ಅಥವಾ ರಷ್ಯಾದಲ್ಲಿ ದುರಂತದ ವೇಳೆ 18 ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದ 6,000 ಜನರಿಗೆ, 2006 ನೇ ಇಸವಿಯಲ್ಲಿ ಥೈರಾಯ್ಡ್ ಕ್ಯಾನ್ಸರ್ ತಗುಲಿತು.

ಗಜಪಾದದ ಅಂತ್ಯ ಕ್ರಿಯೆ: ಈ ಗಜಪಾದ ಸೂಸುವ ವಿಕಿರಣವನ್ನು ತಡೆಹಿಡಿಯಲು ಅದರ ಸುತ್ತ ವಿರಾಟ್ ಸ್ವರೂಪದ ‘ಶವ ಪೆಟ್ಟಿಗೆ’ ( ಅಂದರೆ sarcophagas-ಮೂಲದಲ್ಲಿ ಈ ಪದದ ಅರ್ಥ ಸ್ವಲ್ಪ ಭಿನ್ನವಾಗಿದೆಯಾದರೂ, ತಂತ್ರಜ್ಞಾನಕ್ಕೆ ಸಂಬಂಧಿಸಿ ‘ಕಲ್ಲಿನ ಶವ ಪೆಟ್ಟಿಗೆ ಎಂಬ ಅರ್ಥವನ್ನು, ಅಂದರೆ ಒಂದು ಅರ್ಥದಲ್ಲಿ ಕವಚ ಅನ್ನುವುದನ್ನು, ಪರಿಗಣಿಸಬಹುದು. ಭಾರೀ ಪ್ರಮಾಣದ ಸಿಮೆಂಟ್ ಹಾಗೂ ಉಕ್ಕನ್ನು ಬಳಸಿ ಇದನ್ನು ತಯಾರಿಸುತ್ತಾರೆ.)ಯನ್ನು ನಿರ್ಮಿಸಲಾಯಿತು. ಅಮೆರಿಕಾದ ಎಂಪೇರ್ ಸ್ಟೇಟ್ ಕಟ್ಟಡದ ಮೂರನೇ ಒಂದು ಭಾಗವನ್ನು ತುಂಬಬಹುದಾದಷ್ಟು ಸಿಮೆಂಟ್ ಅನ್ನು ಈ ಶವ ಪೆಟ್ಟಿಗೆನಿರ್ಮಿಸಲು ಬಳಸಲಾಗಿತ್ತು. ಆದಾಗ್ಯೂ ಗಜಪಾದವನ್ನು ಈ ಕವಚದಿಂದ ಪೂರ್ತಿ ಮುಚ್ಚಲಿಲ್ಲ. ಸಂಶೋಧಕರಿಗೆ ಅದನ್ನು ಪರೀಕ್ಷಿಸಲು ಅನುಕೂಲವಾಗಲು ಹಾಗೂ ಕಾರ್ಮಿಕರಿಗೆ ಅದನ್ನು ತಲುಪಲು ಸಹಾಯಕವಾಗುವಂತೆ ಅಲ್ಲಲ್ಲಿ ಸಂಪರ್ಕ ದ್ವಾರಗಳನ್ನು ನಿರ್ಮಿಸಲಾಗಿತ್ತು. ಈ ಶವ ಪೆಟ್ಟಿಗೆ ನಿರ್ಮಾಣದಲ್ಲಿ ತೊಡಗಿದ್ದ ಕೆಲಸಗಾರರು ಒಂದೆರಡು ವರ್ಷದಲ್ಲಿ ಶವವಾಗಿ ಹೋದರು! ಇದು ಅಪಾರ ವಿಕಿರಣದ ಪರಿಣಾಮ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಈ ನ್ಯೂಕ್ಲಿಯರ್ ಸ್ಥಾವರದ ಸುತ್ತ 30 ಕಿ ಮೀ ತ್ರಿಜ್ಯದ ವರೆಗಿನ ಪ್ರದೇಶ ಈಗಲೂ ವಿಕಿರಣಯುಕ್ತವಾಗಿದ್ದು ಇದನ್ನು Zone of Alienation  (ಪರಕೀಯ ವಲಯ) ಎಂದು ಕರೆಯುತ್ತಾರೆ. ಒಂದು ಚೆಕ್ ಪಾಯಿಂಟ್ ಮೂಲಕ ಮಾತ್ರ ಈ ವಲಯದೊಳಗೆ ಪ್ರವೇಶ ಸಾಧ್ಯ

ಈಗ ಹೇಗಿದೆ ಈ ಗಜಪಾದ? ಅದು ಅಜರಾಮರ! ಶವಪೆಟ್ಟಿಗೆಯೊಳಗಿದ್ದರೂ ಅದಕ್ಕೆ ಸಾವಿಲ್ಲ. ಆದರೆ ಹತ್ತು ವರ್ಷಗಳ ತರುವಾಯ ಗಜಪಾದದ ಮದ ಇಳಿಯಿತು. ಹಾಗೆಂದು ನೆಮ್ಮದಿಯಿಂದಿರಲು ಅದು ಬಿಡಲಿಲ್ಲ. ಮೊದಲಿಗಿಂತ ಹತ್ತರಲ್ಲಿ ಒಂದರಷ್ಟು ವಿಕಿರಣ ಸೂಸುತ್ತಿದ್ದ ಆ ಹಂತದಲ್ಲೂ, ಅದರ ಸಂಪರ್ಕದಲ್ಲಿ ಒಂದು ಗಂಟೆ ಇರುವುದು ಮಾರಣಾಂತಿಕವಾಗಿತ್ತು. ಈಗ, ಅಂದರೆ ಮೂವತ್ತು ವರ್ಷಗಳ ಬಳಿಕ ಅದು ಕ್ಷೀಣಿಸಿದೆಯಾದರೂ ಅದು ಅಪಾಯಕಾರಿಯಾಗಿಯೇ ಮುಂದುವರಿದಿದೆ. ಅದರ ಶವಪೆಟ್ಟಿಗೆಯ ಕಾಂಕ್ರೀಟು ಹದಗೆಡುತ್ತಿದ್ದು, ಅದು ಅಂತರ್ಜಲವನ್ನು ಮಲಿನಗೊಳಿಸುವ ಭೀತಿ ಎದುರಾಗಿದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಷ್ಟಾದರೂ, ಈ ಗಜಪಾದ ಮೂಲಭೂತವಾಗಿ ಅವಿನಾಶಿ. ಇನ್ನು 20,000 ಸಾವಿರವರ್ಷಗಳವರೆಗೂ ಈ ಪ್ರದೇಶ ಮಾನವ ಜೀವನಕ್ಕೆ ಸುರಕ್ಷಿತವೆನಿಸದು ಅನ್ನುವುದು ಉಕ್ರೇನ್ ಅಧಿಕಾರಿಗಳ ಅಂದಾಜು.

chernobyl

ವಿಕಿರಣದೆದುರು ಮಂಡಿಯೂರಿದ ವಾಮನ ಇದು ಸೋವಿಯತ್ ನ ಕತೆಯಾದರೆ ಜಪಾನ್ ನದ್ದು ಇನ್ನೊಂದು ಕತೆ. ಅಣು ಬಾಂಬ್ ನ ಪರಿಣಾಮಗಳೇ ಇರಲಿ, ನ್ಯೂಕ್ಲಿಯರ್ ರಿಯಾಕ್ಟರ್ ನ ದುಷ್ಪರಿಣಾಮಗಳೇ ಇರಲಿ, ಎರಡಕ್ಕೂ ಒಂದು ಪ್ರಯೋಗಶಾಲೆ ಆಗಿಹೋಗುವ ದೌರ್ಭಾಗ್ಯ ಈ ದೇಶಕ್ಕೆ ಒದಗಿಬಂದ್ದು ಎಂತಾ ಕಾಕತಾಳೀಯ! ಅಮೆರಿಕಾ ನಡೆಸಿದ ಎರಡು ಅತ್ಯಂತ ಹೇಯ, ಪೈಶಾಚಿಕ ಅಣುಬಾಂಬ್ ದಾಳಿಗಳಿಂದ ಚೇತರಿಸಿಕೊಂಡು ಇಡೀ ವಿಶ್ವದ ಕಣ್ಣುಕುಕ್ಕುವಂತೆ ಪ್ರವರ್ಧಮಾನಕ್ಕೆ ಬಂದ ಜಪಾನ್, 2011 ರ ಮಾರ್ಚ್ 11 ರಂದು ಅಲ್ಲಿನ ಕರಾವಳಿಗೆ ಅಪ್ಪಳಿಸಿದ ಸುನಾಮಿಗೆ ತತ್ತರಿಸಿತು. ಅಷ್ಟಕ್ಕೂ ಸುನಾಮಿಯೇನೂ ಜಪಾನ್ ಗೆ ಹೊಸದಲ್ಲ-ಸುನಾಮಿ ಪದವನ್ನು ಜಗತ್ತಿಗೆ ನೀಡಿದ್ದೆ ಈ ಜಪಾನ್. (ಜಪಾನಿ ಭಾಷೆಯಲ್ಲಿ ತ್ಸು ಅಂದರೆ ಹಾರ್ಬರ್, ನಾಮಿ ಅಂದರೆ ವೇವ್ಸ್ ‘ಹಾರ್ಬರ್ ವೇವ್ಸ್’ -ಬಂದರು ಅಲೆಗಳು).

ಈ ಸುನಾಮಿಗೆ ಕಾರಣವಾದದ್ದು ಒಂದು ಭೂಕಂಪ. ರಿಕ್ಟರ್ ಮಾಪಕದಲ್ಲಿ 9 ರಷ್ಟು ಎಂದು ದಾಖಲಾದ, ಶಾಂತ ಸಾಗರ ತೀರದ ಪಕ್ಕ ಸಂಭವಿಸಿದ, ಜಪಾನ್ ಇತಿಹಾಸದಲ್ಲಿ ಅತ್ಯಂತ ಪ್ರಬಲ ಎನ್ನಲಾದ ಭೂಕಂಪ ಅದು. ಅದು ಹೊಮ್ಮಿಸಿದ ಪ್ರಳಯ ಸದೃಶವಾದ ರಕ್ಕಸ ಅಲೆಗಳ ಆ ಸುನಾಮಿಯ ಆಕ್ರಮಣಕ್ಕೆ ಜಪಾನ್ ನಲ್ಲಿ 19,000 ಕ್ಕೂ ಹೆಚ್ಚು ಮಂದಿ ಬಲಿಯಾದರೆ, ಮನೆ ಮಠ ಕಳೆದುಕೊಂಡು ನಿರ್ಗತಿಕರಾದವರು ಎಷ್ಟೋ, ನಾಪತ್ತೆಯಾದವರು ಇನ್ನೆಷ್ಟೋ.

‘ಭೂಕಂಪವಾಗಿ ನೆಲ ಬಿರಿದರೇನು, ಕಡಲೆಲ್ಲ ಹೊಮ್ಮಿ ಬಳಿಬಂದರೇನು’ ಅನ್ನುತ್ತಿದ್ದ ಅತಿಕಾಯ ಜಪಾನ್. ಈ ಸುನಾಮಿ ಅಲೆಗಳು ಫುಕುಶಿಮ ದಾಯ್ ಇಚಿ ನ್ಯೂಕ್ಲಿಯರ್ ಸ್ಥಾವರವನ್ನು ಆಕ್ರಮಿಸಿದಾಗ ಮಾತ್ರ ಪ್ರಕೃತಿ ವಿಕೋಪ ಎಂಬ ಪೆಡಂಭೂತದೆದುರು ಮಂಡಿಯೂರಬೇಕಾಗಿ ಬಂತು. (ಫುಕುಶಿಮ ಅನ್ನುವುದು ನಮ್ಮ ಜಿಲ್ಲೆಯ ಹಾಗೆ, ಒಂದು ಆಡಳಿತಾತ್ಮಕ ಪ್ರದೇಶದ ಹೆಸರು. ದಾಯ್ ಇಚಿ ಎಂದರೆ ಜಪಾನ್ ಭಾಷೆಯಲ್ಲಿ ಮೊದಲನೆ ಎಂದರ್ಥ- ಅಂದರೆ ಮೊದಲನೆ ಸ್ಥಾವರ.) ಫುಕುಶಿಮದ ನ್ಯೂಕ್ಲಿಯರ್ ರಿಯಾಕ್ಟರ್ ಗಳೊಳಗೆ ನುಗ್ಗಿದ ಸುನಾಮಿ, ಅದರ ಶೀತಲೀಕರಿಸುವ ವ್ಯವಸ್ಥೆಯನ್ನೇ ಹಾಳುಗೆಡವಿತು. ಅದು ರಿಯಾಕ್ಟರ್ ಗಳಲ್ಲಿ ಕರಗುವಿಕೆ ಸಂಭವಿಸಬಹುದು ಎಂಬ ಭೀತಿಗೆ ಕಾರಣವಾಯಿತು. (ಮೂರು ರಿಯಾಕ್ಟರ್ ಗಳಲ್ಲಿ ಕರಗುವಿಕೆ ಸಂಭವಿಸಿದೆ ಎಂಬುದು ಮುಂದೆ ದೃಢಪಟ್ಟಿತು) ಅಪಾರ ವಿಕಿರಣವು ಸೋರಿ ವಾತಾವರಣ ಸೇರಿ, ಸುತ್ತಮುತ್ತಲಿನ ಜೀವರಾಶಿಯನ್ನು ಅರ್ಬುದ ರಾಶಿ ಮಾಡುವುದು ನಿಶ್ಚಿತ ಎಂಬುದನ್ನು ಮನಗಂಡ ಅಧಿಕಾರಿಗಳು ಅಂದಾಜು 1,60,000 ಜನರನ್ನು ಸ್ಥಳಾಂತರಿಸಲು ಆದೇಶಿಸಿದರು.

ಇದನ್ನು, ‘ಎಂಥಾ ಮರ್ಮಾಘಾತವನ್ನೂ ಸಮರ್ಥವಾಗಿ ಎದುರಿಸಿ ತಲೆಯೆತ್ತಿ ನಿಂತು ಮೆರೆಯಬಲ್ಲ ದೇಶ ಎಂಬ ಹೆಗ್ಗಳಿಕೆಗೆ ಹೆಸರಾಗಿರುವ ಜಪಾನ್ ನ ಇತಿಮಿತಿ’ ಎನ್ನಬೇಕೋ ಅಥವಾ ‘ವಿಕಿರಣದ ಅಜೇಯ ಶಕ್ತಿ ಎನ್ನಬೇಕೋ’ ಇದನ್ನು ಹೇಗಾದರೂ ವ್ಯಾಖ್ಯಾನಿಸಿ -ಫುಕುಶಿಮದ ವಿಕಿರಣದ ಜೊತೆಯಲ್ಲೇ, ಆ ದೇಶದ ಹುಳುಕುಗಳು ಸೋರಿಕೆಯಾದವು ಎಂಬುದಂತೂ ಸತ್ಯ. ಫುಕುಶಿಮ ದುರಂತದ ತರುವಾಯ, ಬರೋಬ್ಬರಿ 54 ನ್ಯೂಕ್ಲಿಯರ್ ರಿಯಾಕ್ಟರ್ ಗಳಿರುವ ಆ ಪುಟ್ಟ ದೇಶದಲ್ಲಿ, ಕೇವಲ ಎರಡನ್ನು ಹೊರತು ಪಡಿಸಿ ಉಳಿದೆಲ್ಲವನ್ನೂ ಸ್ಥಗಿತಗೊಳಿಸಲಾಯಿತು. ನ್ಯೂಕ್ಲಿಯರ್ ರಿಯಾಕ್ಟರ್ ಗಳ ಪುನರಾರಂಭಕ್ಕೆ ಸರ್ಕಾರ ಮುಂದಾಗುವುದು, ಜನರು ಬೀದಿಗಿಳಿದು ಪ್ರತಿಭಟಿಸುವುದು ಅಲ್ಲಿ ಮಾಮೂಲಾಯಿತು. ಮಾತ್ರವಲ್ಲ, ‘ಎಲ್ಲಾ ದೇಶಗಳ ದೋಸೆ ತೂತು’ ಅನ್ನುವ ಹಾಗೆ, ಅಲ್ಲೂ ಕೂಡಾ ಕಾರ್ಪೊರೇಟ್ ಜಗತ್ತು, ಮಾಧ್ಯಮ ಮತ್ತು ರಾಜಕೀಯದ ನಡುವಣ ಅಪವಿತ್ರ ಮೈತ್ರಿ, ಕಾರ್ಪೊರೇಟ್ ಜಗತ್ತಿನ ಲಾಭ ಬಡುಕತನ, ಹೊಣೆಗೇಡಿತನ, ಕಾರ್ಮಿಕ ವಿರೋಧಿ ನೀತಿ ವ್ಯಾಪಕವಾಗಿ ಬೇರೂರಿರುವುದು ಬಟ್ಟಾಬಯಲಾಯಿತು.

‘ಪುಸ್ತಕದ ಬದನೆಕಾಯಿ’ ಅಂದುಬಿಟ್ಟರು! ‘ರೀಬಿಲ್ಡ್ ಜಪಾನ್ ಇನಿಶಿಯೇಟಿವ್ ಫೌಂಡೇಶನ್’ ಎಂಬ ಸಂಸ್ಥೆ ನಡೆಸಿದ ಖಾಸಗಿ ತನಿಖೆಯಲ್ಲಿ ಬಹಿರಂಗವಾದದ್ದೇನೆಂದರೆ, ಫುಕುಶಿಮದ ನ್ಯೂಕ್ಲಿಯರ್ ಸ್ಥಾವರದ ಕಾರ್ಯಾಚರಣೆಯ ಹೊಣೆಹೊತ್ತಿರುವ ‘ಟೋಕಿಯೋ ಇಲೆಕ್ಟ್ರಿಕ್ ಪವರ್ ಕಂಪನಿ’ ( ಟೆಪ್ಕೋ) ಯಾಗಲಿ ಜಪಾನ್ ಸರಕಾರವಾಗಲಿ, ಇಂಥದೊಂದು ವಿಪತ್ತಿಗೆ ಸಿದ್ಧವಾಗಿಯೇ ಇರಲಿಲ್ಲ ಅನ್ನುವುದು! ತನಿಖಾಕಾರರ ಅಭಿಪ್ರಾಯದಂತೆ, 869 ಎ ಡಿ ಇಸವಿಯಲ್ಲಿ ವಕ್ಕರಿಸಿದ ಬೃಹತ್ ಪ್ರಮಾಣದ ‘ಜೋಗನ್ ಸುನಾಮಿ’ ಕುರಿತು ಸಂಶೋಧನೆಗಳಿಂದ, ಇಂಥಹಾ ಸುನಾಮಿಯ ಸಾಧ್ಯತೆಯನ್ನು ಎಲ್ಲರೂ ಮನಗಾಣಬೇಕಿತ್ತು. ‘ಟೆಪ್ಕೋ’ದ ನ್ಯೂಕ್ಲಿಯರ್ ವಿದ್ಯುತ್ ವಿಭಾಗಕ್ಕೆ ಈ ರಿಸ್ಕ್ ನ ಅರಿವಿತ್ತು. ಆದರೂ, ಈ ಸಾಧ್ಯತೆಗಳನ್ನು ಅದು ‘ಅಕಾಡೆಮಿಕ್'(ಪುಸ್ತಕದ ಬದನೆಕಾಯಿ) ಎಂದು ತಳ್ಳಿ ಹಾಕಿತ್ತು. ಓರ್ವ ಮೇಧಾವಿ ಪ್ರೊಫೆಸರ್, ಸುನಾಮಿಯು ರಿಯಾಕ್ಟರ್ ಗಳಿಗೆ ಧಕ್ಕೆಮಾಡಬಲ್ಲುದು ಎಂಬುದಾಗಿ ನೀಡಿದ ಮುನ್ನೆಚ್ಚರಿಕೆಯನ್ನು ಕಡೆಗಣಿಸಲಾಯಿತು.

ಸುನಾಮಿ ನುಗ್ಗಿ ಬರದಂತೆ ಎತ್ತರವಾದ, ಬಲಿಷ್ಠ ತಡೆಗೋಡೆಗಳನ್ನು ನಿರ್ಮಿಸುವುದು, ಜೆನರೇಟರ್ ವ್ಯವಸ್ಥೆ- ಯಾವುದನ್ನು ಒದಗಿಸಲೂ ಟೆಪ್ಕೋ ಮುಂದಾಗಲಿಲ್ಲ-ಅಂದರೆ ಸುರಕ್ಷಿತತೆಗಾಗಿ ಹಣವನ್ನು ‘ಪೋಲು’ ಮಾಡಲು ಅದಕ್ಕೆ ಮನಸ್ಸಿರಲಿಲ್ಲ.

ಅಣು ವಿಜ್ಞಾನಿಗಳ ಬುಲೆಟಿನ್ ನಲ್ಲಿ ಪ್ರಕಟವಾದ ತನಿಖಾ ವರದಿಯು, ಆ ಸಂದಿಗ್ಧ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸುವಂತಹಾ ಗಂಭೀರ ಪ್ರಮಾಣದ ಪ್ರಮಾದಗಳನ್ನು ಟೆಪ್ಕೋದ ಕೆಲಸಗಾರರು ಹಾಗೂ ಆಡಳಿತ ಎಸಗಿರುವುದನ್ನು ಬಹಿರಂಗಪಡಿಸಿತು. ಸ್ಥಳದಲ್ಲೇ ಇದ್ದ ಕೆಲಸಗಾರರು ‘ಗುರುತರ ಅಪಘಾತ ಮಾರ್ಗದರ್ಶಿ’ ಹೊತ್ತಗೆಯ ನೆರವು ಪಡೆಯಲು ಹೊರಟರೆ, ಅದರಲ್ಲಿ ಅವರ ಪ್ರಶ್ನೆಗಳಿಗೆ ಉತ್ತರವೇ ಇಲ್ಲ! ಯಾವ ತರಬೇತಿಯೂ ಇಲ್ಲದೆ, ಯಾವ ಮಾರ್ಗದರ್ಶನವೂ ಇಲ್ಲದೆ ಅವರು ಈ ವಿಪತ್ತಿನ ನಡುವೆ ಸಿಲುಕಿಕೊಳ್ಳುವಂತಾಯಿತು.

chernobyl2ಸಾರ್ವಜನಿಕರು ಹಾಗೂ ಸುದ್ದಿ ಮಾಧ್ಯಮದವರ ಒತ್ತಾಯದ ಮೇರೆಗೆ ಪ್ರದರ್ಶಿಸಲಾದ ಫುಕುಶಿಮಾ ವಿಪತ್ತಿನ ಮೊದಲ 150 ಗಂಟೆಗಳ ವೀಡಿಯೋದಲ್ಲಿ ಇವೆಲ್ಲವೂ ದಾಖಲಾಗಿದೆ. (ಆದಾಗ್ಯೂ ಇದು ಎಲ್ಲಾ ಘಟನಾವಳಿಯನ್ನೂ ಕೊನೆಯವರೆಗೆ ಸೆರೆಹಿಡಿದ ಸಂಪೂರ್ಣ ವೀಡಿಯೋ ಅಲ್ಲ ಎನ್ನಲಾಗಿದೆ.)

ನ್ಯೂಕ್ಲಿಯರ್ ರಿಯಾಕ್ಟರ್ ನಲ್ಲಿ ಒಂದೆರಡು ಸ್ಫೋಟ ಸಂಭವಿಸಿದೊಡನೆ ಅಲ್ಲಿನ ನೂರಾರು ಕೆಲಸಗಾರರು ಅಲ್ಲಿಂದ ಕಾಲ್ಕಿತ್ತರು. ಇದು ಅಂದಿನ ಪ್ರಧಾನಿ ನಒತೋ ಕಾನ್ ನ ಕಣ್ಣು ಕೆಂಪಾಗಿಸಿತು. ಸ್ಥಾವರದ ಮುಖ್ಯ ವ್ಯವಸ್ಥಾಪಕ ಮಸಾಓ ಮಸಒ ಯೊಶಿದ ತಾನು ಮತ್ತು ಅಲ್ಲೇ ಉಳಿದ ಕೆಲವೇ ಕೆಲವು ಕೆಲಸಗಾರರ ಜೊತಗೂಡಿ ಪರಿಸ್ಥಿತಿ ಕೈಮೀರುವುದನ್ನು ತಪ್ಪಿಸಲು ಹೆಣಗಾಡಿದ. ಕಂಪನಿಯ ಆದೇಶವನ್ನು ಧಿಕ್ಕರಿಸಿ ಸಮುದ್ರದ ನೀರನ್ನು ಸುರಿದು, ಕುದಿಯುತ್ತಿದ್ದ ರಿಯಾಕ್ಟರ್ ಅನ್ನು ತಣ್ಣಗಾಗಿಸಲು ಯತ್ನಿಸಿ ತಕ್ಕ ಮಟ್ಟಿಗೆ ಸಫಲನಾದ ಯೊಶಿದ ಜಪಾನಿಯರ ಪಾಲಿಗೆ ಹೀರೊ ಅನಿಸಿಕೊಂಡ. ಅವನು ಹಾಗೆ ಮಾಡದಿದ್ದಲ್ಲಿ ಇಂಧನವು ತಕ್ಷಣ ಕರಗಿ, ಮಹಾ ಗಂಡಾಂತರವೇ ಸಂಭವಿಸುತ್ತಿತ್ತು ಎಂಬುದು ಆಮೇಲೆ ಬೆಳಕಿಗೆ ಬಂತು. ದುರಂತ ಸಂಭವಿಸಿ 3 ವರ್ಷಗಳ ಬಳಿಕ, ತನ್ನ 58ನೇಯಸ್ಸಿನಲ್ಲಿ ಯೊಶಿದ ಕ್ಯಾನ್ಸರ್ ಗೆ ಬಲಿಯಾಗಿ, ಹುತಾತ್ಮ ಅನಿಸಿಕೊಂಡ.

ಇತ್ತ ಯೂನಿಟ್ 3 ರಲ್ಲಿ ಶೇಕಡಾ 25 ರಷ್ಟು ಕರಗುವಿಕೆ ಕಂಡು ಬಂದು ಯೊಶಿದ ಮತ್ತು ತಂಡ ಕಂಗಾಲಾಗಿ ಕೈಲಾದುದನ್ನು ಮಾಡುತ್ತಿರಬೇಕಾದರೆ ಅತ್ತ ಪ್ರಧಾನಿ ಕಾರ್ಯಾಲಯದಿಂದ ಅವರಿಗೆ ಬಂದ ಕಠಿಣ ಆದೇಶ-ಯೂನಿಟ್ 3 ರಲ್ಲಿ ಸಂಭವಿಸುತ್ತಿರುವುದು ಯಾವುದೂ ಮಾಧ್ಯಮದಲ್ಲಿ ಬೆಳಕಿಗೆ ಬರಬಾರದು. ಇವರಿಗೆ ವಿಕಿರಣ ಸೋರಿಕೆಯ ಚಿಂತೆಯಾದರೆ ಅವರಿಗೆ ಮಾಧ್ಯಮಕ್ಕೆ ಅದು ಸೋರಿಕೆಯಾಗುವ ಚಿಂತೆ!

ಕೆಲಸಗಾರರು ‘ ಮಾಹಿತಿಗಾಗಿ ಒತ್ತಡ ಹೇರುತ್ತಿರುವ ಸ್ಥಳೀಯ ಅಧಿಕಾರಿಗಳಿಗೆ ನಾವು ಏನಂತ ವಿವರಿಸಲಿ?’ ಎಂದು ಅಸಹಾಯಕತೆ ವ್ಯಕ್ತಪಡಿಸಿದರೂ, ಮೇಲಿನಿಂದ ಒಂದೇ ಉತ್ತರ- ‘ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದು!’.

ಇತ್ತ ಆದೇಶ ಪಾಲಿಸುವುದು, ಬಿಡುವುದು-ಈ ಹಗ್ಗಜಗ್ಗಾಟದ ನಡುವೆ, ಯೂನಿಟ್ 3 ಸ್ಪೋಟಗೊಳ್ಳಬೇಕೆ! ಸ್ಪೋಟದ ತರುವಾಯ ಅದು ಹೊಮ್ಮಿಸಿದ ವಿಕಿರಣಯುಕ್ತ ಹೊಗೆಯ ಮೋಡಗಳನ್ನು, ಫುಕುಶಿಮಾ ಸ್ಥಾವರದ ಮೇಲೆ ತಮ್ಮ ಕ್ಯಾಮರಾಗಳನ್ನು ಗುರಿಯಿಟ್ಟು ಹೊಂಚುಹಾಕಿ ಕಾಯುತ್ತಿದ್ದ ಮಾಧ್ಯಮದ ಮಂದಿ ಸಂಭ್ರಮದಿಂದ ಸೆರೆಹಿಡಿದು ಬಿಟ್ಟರು. ಅಂದಿನ ಜಪಾನ್ ಪ್ರಧಾನಿ ಕಾನ್ಗೆ ಅಧಿಕಾರಶಾಹಿ ಮತ್ತು ಟೆಪ್ಕೋ ಎಂದರೆ ಅಲರ್ಜಿ. ಅವರ ಮೇಲೆ ಇವನಿಗೆ ವಿಶ್ವಾಸವಿಲ್ಲ. ಅವರಿಗೆ ಇವನು ಎಂದರೆ ತಾತ್ಸಾರ. ಅವನು ಹೇಳಿದಂತೆ ಕೇಳಲು ಇವರು ತಯಾರಿಲ್ಲ. ಹೀಗಾಗಿ ಅವನೊಂದಿಗೆ ಮಾಹಿತಿ ಹಂಚಿಕೊಳ್ಳಲು ಇವರು ತಯಾರಿಲ್ಲ. ಕಂಪನಿಯ ಆದೇಶ ಧಿಕ್ಕರಿಸಿದ ಯೊಶಿದ ಇದೇ ಕಾರಣಕ್ಕೆ ಪ್ರಧಾನಿಯ ಆಪ್ತನಾದ. ಅವನು ಮತ್ತು ತಂಡ ತಮಗೆ ತೋಚಿದಂತೆ ಪರಿಹಾರ ಕಾರ್ಯ ಕೈಗೊಳ್ಳಲು ಕೂಡಾ ಇದೇ ಕಾರಣ. ಮುಂದೆ ಜಪಾನ್ ನಲ್ಲಿ ಹುಟ್ಟಿಕೊಂಡ ನ್ಯೂಕ್ಲಿಯರ್ ರಿಯಾಕ್ಟರ್ ವಿರೋಧಿ ಚಳವಳಿಯ ಮುಂಚೂಣಿಯಲ್ಲಿ (ಮಾಜಿ ಪ್ರಧಾನಿ ಅನಿಸಿಕೊಂಡ) ಈ ಕಾನ್ ಕಾಣಿಸಿಕೊಂಡ.

ಚಳಿಗಾಲದಲ್ಲಿ ಜಪಾನ್ನ ಉತ್ತರ ಭಾಗದಲ್ಲಿ ಗಾಳಿ ದಕ್ಷಿಣದತ್ತ ಬೀಸುತ್ತದೆ ಎಂಬ ತಪ್ಪು ಮಾಹಿತಿ ಅನುಸಾರ ಎಲ್ಲರನ್ನೂ ಉತ್ತರಕ್ಕೆ ಸ್ಥಳಾಂತರಿಸಲಾಯಿತಂತೆ. ನಿಜವಾಗಿ ಉತ್ತರಕ್ಕೆ ಬೀಸುತ್ತಿದ್ದ ಗಾಳಿ ವಿಕಿರಣವನ್ನೂ ಅದೇ ದಿಕ್ಕಿಗೆ ಹೊತ್ತೊಯ್ದು, ಸ್ಥಳಾಂತರ ನಿರರ್ಥಕವಾಗುವಂತೆ ಮಾಡಿತು.

ಇದೆಲ್ಲದರ ಮಾಹಿತಿ ಪಡೆದ ದೊಡ್ಡಣ್ಣ ಯು ಎಸ್ ಎ ‘ವಿಕಿರಣದಂತಹಾ ಗಂಭೀರ ವಿಷಯದಲ್ಲಿ ಏನಿದು ನಿಮ್ಮ ಹುಡುಗಾಟ?’ ಎಂದು ಒಂದು ಗುಟುರು ಹಾಕಿದ. (ದುರಂತ ಸಂಭವಿಸಿದಾಗಲೇ, ಅಮೆರಿಕಾ ಸೇನಾಪಡೆಯ 50 ಸಾವಿರ ಯೋಧರ ತುಕಡಿ ಜಪಾನ್ ಗೆ ನೆರವಾಗಲು ಸನ್ನದ್ಧವಾಗಿತ್ತು) ಮೊದ ಮೊದಲು ಅಮೆರಿಕಾವನ್ನು ದೂರವಿಡಲು ಯತ್ನಿಸಿದ ಜಪಾನ್, ಆಮೇಲೆ ಒತ್ತಡಕ್ಕೆ ಮಣಿಯಿತು. ಇದರಿಂದ ಜಪಾನ್ ಗೆ ಲಾಭವಾಯಿತು. ಮಾತ್ರವಲ್ಲ, ಟೆಪ್ಕೋ, ಸರಕಾರ, ಮಾಲಿನ್ಯ ನಿಯಂತ್ರಣ ಸಂಸ್ಥೆ ಹೀಗೆ ಹಲವು ಘಟಕಗಳು ಮಾಹಿತಿ, ಸಂಶೋಧನೆಗಳ ವಿನಿಮಯದಲ್ಲಿ ತೊಡಗಿದವು.

ಫುಕುಶಿಮದ ನ್ಯೂಕ್ಲಿಯರ್ ಸ್ಥಾವರ ಉತ್ಪಾದಿಸಿದ ವಿದ್ಯುತ್ ನ ಸಿಂಹಪಾಲು ದೊರೆಯುತ್ತಿದ್ದದ್ದು ನಗರವಾಸಿಗಳಿಗೆ, ಅಲ್ಲಿನ ಕೈಗಾರಿಕೆಗಳಿಗೆ, ಮೂಲ ಸೌಕರ್ಯಗಳಿಗೆ. ಸುನಾಮಿ ದುರಂತ ಕರುಣಿಸಿದ ವಿಕಿರಣ ಬಾಧಿಸಿದ್ದು ಫುಕುಶಿಮದ ಸುತ್ತಮುತ್ತಲಿನ ಹಳ್ಳಿಗಳನ್ನು. ಕೃಷಿ, ಹೈನುಗಾರಿಕೆಯನ್ನು ನಂಬಿ ಬಾಳುತ್ತಿದ್ದ ಮಂದಿಯನ್ನು, ಜಾನುವಾರು, ಬೆಳೆ, ಮಣ್ಣು, ನೀರು, ಗಾಳಿ…’ಸರ್ವಂ ವಿಕಿರಣಮಯಂ’ ಆದ ಮೇಲೆ ಅವರು ಅಲ್ಲಿ ಬಾಳುವುದಾದರೂ ಹೇಗೆ?

ಹಾಗೆ ಗುಳೆ ಎದ್ದು ಹೋದವರನ್ನು ಮರಳಿ ಬರುವಂತೆ ಮನವೊಲಿಸಲು ಜಪಾನ್ ಸರಕಾರ ಒಂದೆರಡು ವರ್ಷದಲ್ಲೇ ಶುರು ಮಾಡಿತು. ಆದರೆ ಅದು ರೈತರ ಮೇಲಿನ ಪ್ರೀತಿಯಿಂದಲ್ಲ. 2020 ರಲ್ಲಿ ಜಪಾನ್ ನಲ್ಲಿ ಜರುಗಲಿರುವ ಪ್ರತಿಷ್ಠೆಯ ಒಲಿಂಪಿಕ್ಸ್ ವೇಳೆಯಲ್ಲಿ, ಅದರ ಬಗಲಲ್ಲಿ ಈ ವಿಕಿರಣದ ಕಳಂಕ ಇರಬಾರದಂತೆ. ಹಾಗಾಗಿ ಜಪಾನ್ ನಲ್ಲಿ ‘ಆಲ್ ಇಸ್ ವೆಲ್’ ಎಂಬ (ತಪ್ಪು) ಸಂದೇಶವನ್ನು ವಿದೇಶಿಯರಿಗೆ ನೀಡುವ ಹುನ್ನಾರವಿದು. ಇದಕ್ಕೆ ಬಲಿಯಾದವರು ಪುನ: ಅವರೇನೇ-ಅಮಾಯಕ ಪ್ರಜೆಗಳು.

ದುರಂತದ ತರುವಾಯ ಒಂದೇ ವರ್ಷದಲ್ಲಿ, ಒಂದೆಡೆ ಮುಸುಕು ಹಾಗೂ ರಕ್ಷಣಾ ಕವಚಧಾರಿ ಕೆಲಸಗಾರರು ವಿಕಿರಣ ಪೀಡಿತ, ಜಪಾನ್ ನ ಈಶಾನ್ಯ ಭಾಗದಲ್ಲಿರುವ, ಒಂದು ಗ್ರಾಮದಲ್ಲಿ ಮಣ್ಣನ್ನು ಒಕ್ಕಿ ಒಕ್ಕಿ ಕಪ್ಪು ಗೋಣಿ ಚೀಲಗಳಿಗೆ ತುಂಬುತ್ತಾ, ಆ ಗ್ರಾಮವನ್ನು ಸುರಕ್ಷಿತಗೊಳಿಸಲು ಪಣತೊಡುತ್ತಿರಬೇಕಾದರೆ, ಇತ್ತ ಸಂತ್ರಸ್ತರ ಗುಂಪು ಈ ‘ಮರಳಿ ಮಣ್ಣಿಗೆ’ ಯೋಜನೆ ವಿರುದ್ಧ ಸೆಟೆದು ನಿಂತಿತು. ಅವರಲ್ಲೂ ಕೆಲವರು ಅಲ್ಲಿ ಜೀವನ ಪುನರಾರಂಭಿಸಲು ಮುಂದೆ ಬಂದಾಗ, ಅಲ್ಲಿನ ಸಂತ್ರಸ್ತರಲ್ಲೇ ಎರಡು ಬಣಗಳಾದವು.

ಸದಾ ಸೆರಗಿನ ಕೆಂಡ ಕೆಲವೇ ದಶಕಗಳ ಅಂತರದಲ್ಲಿ ಜಗತ್ತಿನ ಕಣ್ಣು ಕುಕ್ಕುವಂತೆ ಮೆರೆಯಲು ಇನ್ನಿಲ್ಲದಂತೆ ಪಣತೊಟ್ಟ ಜಪಾನ್ ಅದಕ್ಕಾಗಿ ತೆತ್ತ ಬೆಲೆ ಅಪಾರ. 54 ರಷ್ಟು ನ್ಯೂಕ್ಲಿಯರ್ ರಿಯಾಕ್ಟರ್ ಗಳನ್ನು ಹೊಂದಿದ್ದರೂ, ಅವುಗಳ ಸುರಕ್ಷಿತತೆಯ ಕಡೆಗೆ ಯಾವ ಗಮನವನ್ನೂ ನೀಡಲಿಲ್ಲ! ಕೆಲವು ವಾರಗಳ ಹಿಂದೆ ಬಂದ ವರದಿಯ ಪ್ರಕಾರ ಟೆಪ್ಕೋದ ಮಾಲೀಕರನ್ನು ಫುಕುಶಿಮದಲ್ಲಿ ಕಂಡು ಬಂದ ನಿರ್ಲಕ್ಷ್ಯದ ಆರೋಪದ ಮೇಲೆ ಬಂಧಿಸಿ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ಸದ್ಯ ಕಾರ್ಯಾಚರಿಸುತ್ತಿರುವ ಕೇವಲ ಎರಡು ರಿಯಾಕ್ಟರ್ ಗಳಲ್ಲಿ ಒಂದನ್ನು ‘ಫುಕುಶಿಮ ದುರಂತದ ಅನಂತರವೂ ಅದರಲ್ಲಿ ಸುರಕ್ಷಿತತೆಗೆ ಕೈಗೊಂಡ ಕ್ರಮಗಳು ಸಮರ್ಪಕವಾಗಿಲ್ಲ’ ಎಂಬ ಕಾರಣ ನೀಡಿ, ಸ್ಥಗಿತಗೊಳಿಸಲು ಜಪಾನ್ ನ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ.

ಕೆಲವರ ಪಾಲಿಗೆ ಅದು ಪ್ರವಾಸಿ ತಾಣ-ವಿಕಿರಣ ಸೋರಿಕೆಯ ದುಷ್ಪರಿಣಾಮಗಳಿಗೆ ಫುಕುಶಿಮ ಒಂದು ಸ್ಮಾರಕ ಅನ್ನುವ ಹಾಗೆ, ಅದನ್ನು ವರ್ಷ ವರ್ಷ ವೀಕ್ಷಿಸಲು ಬರುವವರು ಸುಮಾರು 2,000 ದಷ್ಟು ಜನ! ಈ ಸ್ಥಾವರ ಮತ್ತು ಅದರ ಪರಿಸರದಲ್ಲಿ ಜಪಾನ್ ಕೈಗೊಂಡಿರುವ ಶುದ್ಧೀಕರಣ ಕಾರ್ಯ ಪೂರ್ಣಗೊಳ್ಳಲು ಇನ್ನು ಸುಮಾರು 40 ವರ್ಷಗಳೇ ತಗಲಬಹುದು ಎನ್ನಲಾಗಿದೆ! ನಿವೃತ್ತರು, ಯುವಕರು, ಸ್ವಯಂಸೇವಕರು ಹೀಗೆ ಹಲವರು ಈ ಕೆಲಸದಲ್ಲಿ ಪಾಲ್ಗೊಳ್ಳಲು ನಿತ್ಯ ಅಲ್ಲಿಗೆ ತಂಡೋಪತಂಡವಾಗಿ ಬಂದು ಹೋಗುತ್ತಾರೆ. ಪ್ರತಿಯೊಬ್ಬರಿಗೂ ಒಂದು ಪಾಸ್ ಬುಕ್ ನೀಡಿರುತ್ತಾರೆ. ಅದರಲ್ಲಿ ಜಮಾವಣೆಯಾಗುವುದು ಅವರ ವೇತನವಲ್ಲ. ಅವರ ಶರೀರ ಸೇರಿರುವ ವಿಕಿರಣದ ಅಳತೆ! ಅದು ಅನುಮತಿಯುಳ್ಳ ಮಟ್ಟ ಮೀರಿದರೆ ಅವರಿಗೆ ಗೇಟ್ ಪಾಸ್ ಅಥವಾ ಕಡಿಮೆ ವಿಕಿರಣ ಇರುವ ಕೆಲಸದಲ್ಲಿ ಮುಂದುವರಿಯಲು ಅವಕಾಶ.

ಅತಿ ಹೆಚ್ಚು ವಿಕಿರಣ ತಾಳಿಕೊಳ್ಳುವವರಿಗೆ ಅತಿ ಹೆಚ್ಚು ವೇತನ-ಆದರೆ ಗೇಟ್ ಪಾಸ್ ದೊರೆಯುವುದು ಅವರಿಗೇನೆ ಬಲು ಬೇಗ. ಮುಂದೆ ಯಾವತ್ತಾದರೂ ಕ್ಯಾನ್ಸರ್ ತಗುಲಿದರೆ ಸರಕಾರದಿಂದ ಪರಿಹಾರವೂ ಇದೆ. ಒಟ್ಟಿನಲ್ಲಿ, ಜೀವಕ್ಕೆ ಕುಂದು ತರುವ ವಿಕಿರಣ, ಜೀವನೋಪಾಯಕ್ಕೆ ಕಡಿವಾಣ ಹಾಕುವುದು, ಅದರಲ್ಲೂ ಕೆಲವರು ವಿಕಿರಣದ ಅಳತೆಯನ್ನು ಮೋಸದಿಂದ ತಿದ್ದಿ ಹೆಚ್ಚಿನ ವೇತನಕ್ಕೆ ಆಶಿಸುವುದು, ಆ ಕೆಲಸಗಾರರ ಬದುಕಿನ ಪಾಲಿಗೆ ಒದಗಿ ಬಂದ ಕ್ರೂರ ವ್ಯಂಗ್ಯವೆನಿಸಿದೆ. ತೀರಾ ಅಪಾಯಕಾರಿ ವಿಕಿರಣಕ್ಕೆ ಈಡಾಗುವಂತಹಾ ಕೆಲಸಗಳಿಗೆ ಯಂತ್ರಮಾನವರನ್ನು ಬಳಸಲಾಗುತ್ತಿದೆ. ಸುಮಾರು 1,500 ಸ್ಪೆಂಟ್ ಫ್ಯೂಲ್ ರಾಡ್ ಗಳನ್ನು ಹೊರತೆಗೆಯಲಾಗಿದ್ದು, ವಿಕಿರಣದ ತೀವ್ರತೆ ಕಡಿಮೆಯಾಗಿದೆ ಎನ್ನಲಾಗಿದೆ.

chernobyl3ಹಾಲಿ ಜಪಾನ್ ಪ್ರಧಾನಿ ಶಿನ್ಝೋ ಅಬೆ, ಜರ್ಝರಿತವಾದ ಅಲ್ಲಿನ ನ್ಯೂಕ್ಲಿಯರ್ ವಿದ್ಯುತ್ ಉದ್ದಿಮೆಗೆ ಕಾಯಕಲ್ಪ ನೀಡಲು ಮುಂದಾಗಿದ್ದಾನೆ. ಅಂತೂ ಜಪಾನ್ ನಂಥಾ ಜಪಾನ್, ವಿಕಿರಣದೆದುರಿಗೆ ಮಣಿದಿದೆ. ನಿರ್ಲಕ್ಷ್ಯಕ್ಕೆ ತಕ್ಕ ಬೆಲೆ ತೆರುತ್ತಿದೆ.

ಎತ್ತಣ ಗಜಪಾದ, ಎತ್ತಣ ಭಾರತ? ಸೋವಿಯತ್/ ಉಕ್ರೇನ್ ನ ನಗಣ್ಯ ಚರ್ನೀ ಬೈಲ್ ನಲ್ಲಿ ಎಂದೋ ಸಂಭವಿಸಿದ ದುರಂತ, ಅಲ್ಲಿ ಉದ್ಭವಿಸಿ ಮದವಳಿದು ಮಲಗಿರುವ ಗಜಪಾದದ ಕತೆಯನ್ನು ಕೇಳಿ ನಮಗೆ ಏನಾಗಬೇಕಿದೆ-ಅಥವಾ ಫುಕುಶಿಮದ ‘ವಿಕಿರಣ ಸುನಾಮಿ’ಯ ಗೋಳಿನ ಪ್ರವರ ನಮಗೇಕೆ- ಅನ್ನುವಿರಾದರೆ ನೆನಪಿಡಿ: ಈ ವಿಶ್ವ ಕಂಡ ಅತ್ಯಂತ ಕರಾಳ ಕೈಗಾರಿಕಾ ದುರಂತ ಸಂಭವಿಸಿದ್ದು ನಮ್ಮ ದೇಶದಲ್ಲಿ. ತನಿಖಾ ವರದಿಗಳು, ಹೋರಾಟಗಳು, ಸುದೀರ್ಘ ವ್ಯಾಜ್ಯ, ಸಾಕ್ಷ್ಯಚಿತ್ರಗಳು, ಚಲನಚಿತ್ರಗಳು, ಪುಸ್ತಕಗಳು ಹೀಗ ಹತ್ತು ಹಲವು ಅವತಾರಗಳಲ್ಲಿ ಸದಾ ಜೀವಂತವಾಗಿರುವ ‘ಭೋಪಾಲ್ ಅನಿಲ ದುರಂತ’ ಭಾರತದ ಪಾಲಿಗೆ ಒಂದು ಅಳಿಸಲಾಗದ ಕಪ್ಪುಚುಕ್ಕೆ.

ಅಂಥಾ ಭಾರತದಲ್ಲಿ ಇಂಥಹುದೇ ನ್ಯೂಕ್ಲಿಯರ್ ದುರಂತ ಮರುಕಳಿಸದು ಎಂದು ನಂಬಿಕೊಂಡಿರುವುದು ದಡ್ಡತನವಲ್ಲವೇ? ಮಾತ್ರವಲ್ಲ, ನ್ಯೂಕ್ಲಿಯರ್ ರಿಯಾಕ್ಟರ್ ಗಳು-ಇಲ್ಲೇ ಕರ್ನಾಟಕದ ಬಗಲಲ್ಲೇ ಇವೆ! ಕೈಗಾದಲ್ಲಿ ಮತ್ತು ನೆರೆಯ ತಮಿಳುನಾಡಿನ ಕೂಡಂಕುಳಂ ನಲ್ಲಿ ಗಜಪಾದದ ಉದ್ಭವಕ್ಕೆ ತಕ್ಕ ಪಂಚಾಂಗಗಳು ಇವೆ. ಅಷ್ಟಕ್ಕೂ ನ್ಯೂಕ್ಲಿಯರ್ ದುರಂತಗಳು, ಒಮ್ಮೆ ಸಂಭವಿಸಿದೊಡನೆ ಸುದ್ದಿ ಮಾಡಿ ಕಾಲಕ್ರಮೇಣ ಒಳಪುಟಗಳಿಗೆ ಸರಿಯುವ ವಿದ್ಯಮಾನಗಳಲ್ಲ. ಸುದ್ದಿಯ ಸದ್ದಡಗಬಹುದು, ವಿಕಿರಣವು ಅಮರ. ಈ ಲೇಖನವನ್ನು ಬರೆಯುತ್ತಿರಬೇಕಾದರೆ ‘ಗುಜರಾತ್ ನ ಕಕ್ರಾಪರ್ನ ಪರಮಾಣು ಸ್ಥಾವರದ ಶೀತಲೀಕರಣ ವ್ಯವಸ್ಥೆಯಲ್ಲಿ ಭಾರಜಲ ಸೋರಿಕೆಯಿಂದ ವಿಕಿರಣದ ಭೀತಿ ಉಂಟಾಯಿತು’ ಎಂಬ ಸುದ್ದಿ ಬಂತು. ಇದು ಜರುಗಿದ್ದು ಫುಕುಶಿಮ ದುರಂತದ 5ನೇ ‘ವಾರ್ಷಿಕೋತ್ಸವ’ದಂದು ಮತ್ತು ಯಾವ ವರದಿಗಾರರಿಗೂ, ಅದರ ಕಾಕತಾಳೀಯತೆ ನೆನಪಿಗೆ ಬಂದಿರಲಿಲ್ಲ ಅಂದರೆ -ಈ ದುರಂತಗಳಿಗೆ ನಾವು ಎಷ್ಟು ‘ಸಿದ್ಧ’ರಾಗಿದ್ದೇವೆ ಎಂಬುದು ಅರಿವಾಗುತ್ತದೆ.

2040 ರ ಇಸವಿಯಲ್ಲಿ ಭಾರತದ ಜನಸಂಖ್ಯೆ 160 ಕೋಟಿ ತಲುಪಲಿದ್ದು, ಸದ್ಯ 400 ದಶ ಲಕ್ಷ ಮಂದಿಗೆ ವಿದ್ಯುಚ್ಛಕ್ತಿ ಲಭ್ಯವಿಲ್ಲ ಎನ್ನಲಾಗಿದೆ (2012 ರ ಅಂಕಿ-ಅಂಶ). ಅಂದರೆ ಭಾರತದ ರಕ್ಕಸ ವಿದ್ಯುತ್ ಹಸಿವನ್ನು ನೀಗಲು ಪರಮಾಣು ಶಕ್ತಿ ನಮಗೆ ಬೇಕೇ ಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಮಾತ್ರವಲ್ಲ, ಸೌರಶಕ್ತಿ ಇತ್ಯಾದಿ ನವೀಕರಿಸಬಹುದಾದ ಇಂಧನಗಳಿಂದ ಉತ್ಪಾದಿಸಬಹುದಾದ ವಿದ್ಯುಚ್ಛಕ್ತಿಯ ಪ್ರಮಾಣ ತೀರಾ ಅತ್ಯಲ್ಪ.

ಪ್ರಸ್ತುತ ಎನ್ ಡಿ ಎ ಸರಕಾರವು ಪರಮಾಣು ಶಕ್ತಿ ಉತ್ಪಾದನೆಗೆ ಪ್ರತೀವರ್ಷ ರೂ 3,000 ಕೋಟಿ ಅನುದಾನ ನೀಡಲು ನಿಶ್ಚಯಿಸಿದ್ದು ದೇಶದಾದ್ಯಂತ 6 ನ್ಯೂಕ್ಲಿಯರ್ ಸ್ಥಾವರಗಳು ನಿರ್ಮಾಣ ಹಂತದಲ್ಲಿವೆ ಮಾತ್ರವಲ್ಲದೆ ಇನ್ನೂ 3 ಸ್ಥಾವರಗಳನ್ನು ನಿರ್ಮಿಸಲಾಗುವುದು. ಕೂಡಂಕುಳಂನಲ್ಲಿ ಇನ್ನೂ ಎರಡು ರಿಯಾಕ್ಟರ್ ಗಳನ್ನು ನಿರ್ಮಿಸಲು ರಷ್ಯಾ ಮುಂದೆ ಬಂದಿದೆ. ಪ್ರಧಾನಿ ಮೋದಿಯವರ ‘ಮೇಕ್ ಇನ್ ಇಂಡಿಯಾ’ ‘ಡಿಜಿಟಲ್ ಇಂಡಿಯಾ’ ‘ಸ್ಟಾರ್ಟ್ ಅಪ್ ಇಂಡಿಯಾ’ ಕನಸುಗಳು ಸಾಕಾರಗೊಳ್ಳಲು ಅಪಾರ ಪ್ರಮಾಣದ ವಿದ್ಯುತ್ ಅತ್ಯಗತ್ಯ. ಅವರೊಂದಿಗೆ ಕೈಜೋಡಿಸಲು ಬಯಸುವವರು, ನ್ಯೂಕ್ಲಿಯರ್ ರಿಯಾಕ್ಟರ್ ಗಳ ವಿರುದ್ಧ ಹೋರಾಡುವ ಬದಲು ಅವುಗಳಲ್ಲಿ ಅತ್ಯಂತ ಕಟ್ಟುನಿಟ್ಟಿನ ಸುರಕ್ಷಿತತೆಗಾಗಿ ಹೋರಾಡುವುದು ವಿವೇಕಯುತ ಮಾರ್ಗ ಅನಿಸಿಕೊಳ್ಳುತ್ತದೆ. ಚೆರ್ನೋಬೈಲ್ ಹಾಗೂ ಫುಕುಶಿಮ, (ಇವೆರಡಕ್ಕೂ ಮುನ್ನ ಅಮೇರಿಕಾದ ‘ತ್ರೀ ಮೈಲ್ಸ್ ದ್ವೀಪ’ದಲ್ಲಿ ಸಂಭವಿಸಿದ ದುರಂತ) ಈ ನಿಟ್ಟಿನಲ್ಲಿ ನಮ್ಮ ಪಾಲಿಗೆ ದಾರಿದೀಪಗಳಾಗಿವೆ. ಈ ದುರಂತಗಳ ಆಳವಾದ ಅಧ್ಯಯನ ನಮ್ಮ ಪಾಲಿಗೆ ಶ್ರೀರಕ್ಷೆಯಾಗಲಿದೆ. ಉಳಿದಂತೆ, ‘ನಮ್ಮಲ್ಲಿ ಎಂದಿಗೂ ಗಜಪಾದ ಉದ್ಭವಿಸದಿರಲಿ’ ಎಂದು ಆ ಗಜಮುಖನನ್ನು ಬೇಡುವುದೇ ನಮಗಿರುವ ಒಂದೇ ದಾರಿ!

(ಕ್ಲಿಷ್ಟವಾದ ಜಪಾನಿ ಹೆಸರುಗಳ ಉಚ್ಚಾರವನ್ನು ಕನ್ನಡದಲ್ಲಿ ಬರೆದು ಕೊಟ್ಟು ನೆರವಾದ, ಟೋಕಿಯೋದಲ್ಲಿ ನೆಲೆಸಿರುವ ಕನ್ನಡಿಗ ಶ್ರೀ ಗುರುಪ್ರಸಾದ್ ವೆಂಕಟರಾಮು ಅವರಿಗೆ ನಾನು ಆಭಾರಿ.)

‍ಲೇಖಕರು Admin

September 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. kvtirumalesh

    ಪ್ರಿಯ ಸತ್ಯಕಾಮ ಶರ್ಮರೇ
    ಎಷ್ಟೊಂದು ಪ್ರಸ್ತುತವಾದ ಲೇಖನ ಬರೆದಿದ್ದೀರಿ! ಎಂತಹ ಅಧ್ಯಯನ, ವಿಶ್ಲೇಷಣೆ, ಧೋರಣೆ. ಓದಿ ನ್ಯೂಕ್ಲಿಯರ್ ರಿಯಾಕ್ಟರ್ಸ್ ಬಗೆಗಿನ ಅರಿವು ಹೆಚ್ಚಾಯಿತು. ನಿಮಗೆ ಧನ್ಯವಾದ!

    ಜಪಾನಿನಲ್ಲಿ ಈ ದುರಂತ ಸಂಭವಿಸಿದಾಗ ಯೆಮೆನ್ ದೇಶದಲ್ಲಿದ್ದೆ; ಅಲ್ಲಿ ನನ್ನ ಕೊನೆಯ ದಿನಗಳಾಗಿದ್ದವು ಅವು. ಪ್ರತಿ ದಿನವೆಂಬಂತೆ ಟೀವಿಯಲ್ಲಿ ಸುದ್ದಿ ನೋಡುತ್ತಿದ್ದೆ. ಜಪಾನ್ ನಾನು ಪ್ರೀತಿಸುವ ದೇಶ. ಈ ಅಣುದುರಂತದಲ್ಲಿ ಜಪಾನಿಗೆ ಮೇಲಿಂದ ಮೇಲೆ ಆಘಾತಗಳು ಸಂಭವಿಸುತ್ತಿರುವುದನ್ನು ಕಂಡು ಆಘಾತವಾಗುತ್ತಿತ್ತು. ಇಂದು ಸರಿಯಾಗುತ್ತದೆ, ನಾಳೆ ಸರಿಯಾಗುತ್ತದೆ ಎಂಬ ಆಸೆ ನುಚ್ಚುನೂರಾಗುತ್ತಿತ್ತು. ಇನ್ನೊಂದೆಡೆ ಯೆಮೆನೀಯರು ಪರಸ್ಪರ ಹೊಡೆದಾಡುತ್ತ ರಕ್ತ ಚೆಲ್ಲುತ್ತಿದ್ದರು. ಇದೆಲ್ಲ ನೆನಪಿಗೆ ಬಂತು.

    ನೀವಂದಂತೆ ಅಣುವಿದ್ಯುತ್ ನಮಗೆ (ಲೋಕಕ್ಕೆ) ಅನಿವಾರ್ಯ ಅನಿಸುತ್ತದೆ. ಆದರೆ ಅಣುವಿಕರಣ ಸ್ಥಾವರಗಳನ್ನು ಹೇಗೆ ಸುರಕ್ಷಿತವಾಗಿ ಇರಿಸಿಕೊಳ್ಳುವುದು ಎನ್ನುವುದೇ ಸಮಸ್ಯೆ. ವಿದ್ಯುತ್ತನ್ನು ಪಳಗಿಸಿದ ಮನುಷ್ಯ ಇದನ್ನು ಪಳಗಿಸಲಾರನೇ? ಅದಕ್ಕೂ ಮುನ್ನ ಎಷ್ಟು ಜನ ಬಲಿಯಾಗಬೇಕೋ ಎಂದರೆ ಮೈ ಝಲ್ಲೆನಿಸುತ್ತದೆ, ಮನಸ್ಸು ತಟಸ್ಥವಾಗುತ್ತದೆ.
    ಇಂತಹ ಮೌಲಿಕ ಲೇಖನಗಳನ್ನು ಬರೆಯುತ್ತಲೇ ಇರಿ!
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
    • Sathyakama Sharma K

      ಅದನ್ನು ನಾನು ನಿಮಗೆ ಹೇಳಬೇಕು! ನಿಮ್ಮ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್. ಬದುಕಿಗೆ ಸಂಬಂಧ ಪಟ್ಟದ್ದೆಲ್ಲಾ ಸಾಹಿತ್ಯಕ್ಕೆ ಸಂಬಂಧಪಟ್ಟದ್ದು ಅನ್ನುವಹಾಗೆ ಜ್ಞಾನದ ಶಾಖೆಗಳನ್ನು ಎಲ್ಲೆಡೆ ವಿಸ್ತರಿಸಿಕೊಂಡ ನಿಮ್ಮಂತಹಾ ಹಿರಿಯರ ಗಮನಕ್ಕೆ ನನ್ನ ಲೇಖನ ಬಂದಿದೆ ಅಂದರೆ ನನಗೆ ನಿಜಕ್ಕೂ ಹೆಮ್ಮೆಯ ಸಂಗತಿ . ಇನ್ನು, ನೀವು ಹೇಳಿದಂತೆ ಜಪಾನ್ ನ ವಿಷಯದಲ್ಲಿ ನನಗೂ ಅಚ್ಚರಿಯಾಗಿದೆ. ಅವರ ಎಡವಟ್ಟುಗಳು, ವಿಕಿರಣದ ಜೊತೆ ಆಡಿದ ಹುಡುಗಾಟ ಎಲ್ಲವನ್ನೂ ಓದಿದಾಗ ಜಪಾನ್ ಹೀಗೆ ಕೈಚೆಲ್ಲಿದರೆ ಅನ್ಯ ರಾಷ್ಟ್ರಗಳ ಪಾಡೇನು ಎಂದು ಚಿಂತಿಸಿದ್ದೇನೆ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: