ಎಲ್.ಸಿ.ನಾಗರಾಜ್

ಕೃಷಿಯ ಅತಿ ಯಾಂತ್ರೀಕರಣದಿಂದ ಯಾವುದಾದರೂ ಕ್ರಾಂತಿ ಸಾಧ್ಯವಾ ? ಅಂತಾ ಆಗಾಗ ಅನಿಸುತ್ತದೆ.
ಕೃಷಿಯಿಂದ ಬಿಡುಗಡೆಯಾಗುತ್ತಿರುವ ಗ್ರೀನ್ ಹೌಸ್ ಗ್ಯಾಸುಗಳ ಪ್ರಮಾಣ ಜಾಗತಿಕವಾಗಿ 27% .ಕೃಷಿಯಿಂದ ಒಂದು ಕ್ಯಾಲೋರಿ ಶಕ್ತಿ ಉತ್ಪನ್ನ ಮಾಡಲು ಅಮೇರಿಕ ಮತ್ತು ಜರ್ಮನಿ 6 ಕ್ಯಾಲೋರಿಗಳಷ್ಟು ಶಕ್ತಿಯನ್ನ ಖರ್ಚು ಮಾಡುತ್ತಿವೆ . ಭಾರತ ಸಧ್ಯಕ್ಕೆ ಒಂದು ಕ್ಯಾಲೋರಿ ಶಕ್ತಿ ಉತ್ಪನ್ನ ಮಾಡಲು ಒಂದು ಕ್ಯಾಲೊರಿ ಶಕ್ತಿ ಖರ್ಚು ಮಾಡುತ್ತಿದೆ ; ಅಂದರೆ ಅಮೇರಿಕ ಮತ್ತು ಜರ್ಮನಿ ಉಗುಳುತ್ತಿರುವ ತಲಾವಾರು ಗ್ರೀನ್ ಹೌಸ್ ಗ್ಯಾಸ್ ಪ್ರಮಾಣ ಹೆಚ್ಚು . ಅಂದರೆ ಭೂಮಿಯೊಳಗಿನ ಸಾವಿರಾರು ವರ್ಷಗಳ ಹಿಂದಿನ ನವೀಕೃತವಲ್ಲದ ಕಲ್ಲಿದ್ದಲು , ಪೆಟ್ರೋಲಿಯಂ ನಿಕ್ಷೇಪಗಳನ್ನ ಬಳಸಿಕೊಂಡು ನಮ್ಮ ಅನ್ನ ಬೆಳೆದುಕೊಳ್ಳುತ್ತಿದ್ದೇವೆ .
ಆಗಾಗ ಗೆಳೆಯರು ‘ ಕೃಷಿ ಮೇಳಕ್ಕೆ ಹೋಗೋಣ ಬಾ ‘ ಅಂತಾ ಕರೆಯುತ್ತಿದ್ದರು , ಅಲ್ಲಿನ ಅತ್ಯಾಧುನಿಕ ಯಂತ್ರಗಳ ಪ್ರದರ್ಶನದ ಬಗ್ಗೆ ನನಗೆ ಅಷ್ಟು ಆಸಕ್ತಿಯಿರಲಿಲ್ಲ . ಇದು ನಾನಾಗಿ ಭೇಟಿ ಮಾಡಿದ ಮೊದಲ ಕೃಷಿ ಮೇಳ. ಬರಲಿರುವ ಹವಾಮಾನ ವೈಪರೀತ್ಯವನ್ನ ಎದುರಿಸಲು ನಮ್ಮ ವಿಶ್ವವಿಧ್ಯಾಲಯಗಳಾದರೂ ಸಜ್ಜಾಗಿವೆಯಾ , ಅಂತಹ ನವೀಕರಿಸಬಹುದಾದ ಇಂಧನ ಆಧಾರಿತ ಯಂತ್ರಗಳೇನಾದರೂ ಬಂದಿವೆಯಾ ಎಂಬ ಕುತೂಹಲದಿಂದಲೇ ಹೋಗಿದ್ದೆ ; ಅಂತಹ ಯಾವ ಪ್ರಯತ್ನಗಳೂ ನಡೆದಿರುವ ಕುರುಹುಗಳು ಕಾಣಿಸಲಿಲ್ಲ.
ಅಮೇರಿಕದ ಟೆಕ್ಸಾಸ್ ರಾಜ್ಯದ ವಿಧ್ಯಾರ್ಥಿನಿಯೊಬ್ಬಳು ನನಗೆ ಹೇಳಿದ್ದಳು ‘ ನನ್ನ ಅಪ್ಪ ಒಬ್ಬನೇ 200 ಎಕರೆಯಲ್ಲಿ ಜೋಳ ಬೆಳೆಯುತ್ತಾನೆ ‘ ಅಂತಾ ; ಅಂದರೆ ಅದು ಪೂರ್ತಿ ಆಧುನಿಕ ಯಂತ್ರಾವಲಂಬಿ ಕೃಷಿ . ಜೋಳದ ಸುಗ್ಗಿಯ ನಂತರ ಮತ್ತೆ ರಾಸಾಯನಿಕ ಗೊಬ್ಬರವನ್ನ ಯತೇಚ್ಛವಾಗಿ ಸುರಿದು ಮತ್ತೆ ಜೋಳವನ್ನೇ ಬೆಳೆಯುವುದು ; ಮತ್ತದೇ ಪೆಟ್ರೋಲಿಯಂ ಉಪ ಉತ್ಪನ್ನದ ಮೇಲಿನ ಅವಲಂಬನೆ .
ಕೃಷಿ ಮೇಳದಲ್ಲಿ ನನಗೆ ಇಷ್ಟವಾದದ್ದು ಒಂದೇ, ಕೃಷಿ ವಿಶ್ವವಿಧ್ಯಾಲಯ ರೂಪಿಸಿರುವ ಕಡಿಮೆ ನೀರಿನಲ್ಲಿ ಬತ್ತ ಬೆಳೆಸುವ ಪ್ರಾತ್ಯಕ್ಷಿಕೆ ತಾಕು . ಅದರ ಬಗ್ಗೆ ತಿಳಿಯಲು ಬಹಳಷ್ಟು ರೈತರು ತವಕಿಸುತ್ತಿದ್ದರು , ಆದರೆ ಅದರ ಬಗ್ಗೆ ರೈತರಿಗೆ ತಿಳಿಸಲು ಅದನ್ನ ರೂಪಿಸಿದವರೇ ಇರಲಿಲ್ಲ.
ಸುಮ್ಮನೆ ನಡೆಯುತ್ತ ಕೊನೆಯಲ್ಲಿ ಬಿದಿರು ಉತ್ಪನ್ನಗಳ ಮಳಿಗೆಗೆ ಹೋದೆ ; ಅಲ್ಲಿನ ಬಿದಿರು ಕುಸುರಿಯ ದೀಪಗಳು ಮಾತ್ರ ಆಕರ್ಷಕವಾಗಿ ಕಂಡವು.
ಅತಿ ಯಾಂತ್ರೀಕರಣದಿಂದ ನಿಜವಾಗಲೂ ಕೃಷಿ ಕ್ರಾಂತಿಯೊಂದು ಸಾಧ್ಯ ಎಂಬ ಯಾವ ಭ್ರಮೆಯೂ ನನಗಿಲ್ಲ ; ಅತಿಯಾದ ಸುಗುಣ ಚಿಕನ್ ಉತ್ಪಾದಿಸಲು ಜೋಳದ ನಂತರ ಜೋಳವನ್ನೇ ಬೆಳೆಯುವ ಉತ್ಪಾದನಾ ಕ್ರಮ ಭೂಮಿಯ ಧಾರಣ ಚೈತನ್ಯವನ್ನ ಮೀರಿದ್ದು ; ನೈಸರ್ಗಿಕ ಬಂಡವಾಳ ಬಳಕೆಯಿಂದ ಭಾರತದ ಕೃಷಿ ಬಹುದೂರ ಸಾಗಿದೆ ; ಯೂರೋಪಿನ ಅಲ್ಲಲ್ಲಿ ನೈಸರ್ಗಿಕ ಬಂಡವಾಳ ಬಳಕೆಯೊಂದಿಗೆ ಸಾಮರಸ್ಯ ಸಾಧಿಸುವ ಮೆಲುದನಿಗಳು ಕೇಳಿಬರುತ್ತಿವೆ ; ಆದರೆ ಅವು ತುಂಬಾ ಕ್ಷೀಣವಾಗಿವೆ ಅಥವಾ ಯಾಂತ್ರಿಕ ಅಬ್ಬರಗಳ ನಡುವೆ ಮುಚ್ಚಿ ಹೋಗಿವೆ .









0 Comments