
ಕುಮಾರ್ ರಾಜ್ ಆದಿತ್ಯ
ಅಡ್ಡಗೋಡೆಯ ದೀಪ
ತಾನ್
ತದೇಕ ಚಿತ್ತದಿ
ಉರಿಯುತ್ತಾ
ಅತ್ತಿಷ್ಟು ಇತ್ತಿಷ್ಟು
ಬೆಳಕ ಚೆಲ್ಲಿ
ಸಮಾನತೆ ತೋರುತ್ತಾ
ನಗುತ್ತಿತ್ತು

ಇತ್ತಕಡೆಯ ಮನುಷ್ಯ
ಸಿಕ್ಕ ಬೆಳಕಲ್ಲಿ
ಸಿಹಿ ಕನಸೊಂದ ಕಾಣುತ್ತ
ಹಸನ್ಮೊಗದಿ
ಮಲಗಿದ
ಅತ್ತಕಡೆಯ ಎಡಬಿಡಂಗಿ ಜೀವ
ಸಿಕ್ಕ ಬೆಳಕ ಮರೆತು
ಸಿಗದ ಬೆಳಕ ನೆನೆದು
ರಾತ್ರಿಯಿಡೀ
ಅಡ್ಡಗೋಡೆಯ ದೀಪವ
ಶಪಿಸುತ್ತಾ
ನಿದ್ದೆಗೆಟ್ಟು ನರಳಿದ
ಯಾರು ಹೇಗೆ ಭಾವಿಸಿದರೂ
ಹೊಗಳಿದರೂ
ಉಗುಳಿದರೂ
ಎಣ್ಣೆ ಬತ್ತುವ ತನಕ
ಮರೆಯದೆ ಉರಿವುದು
ಅಡ್ಡಗೋಡೆಯ ಮೇಲಿನ ದೀಪ
ಸೂರ್ಯ ಚಂದ್ರರ
ದತ್ತು ಸಂತಾನದಂತೆ





Kavite tumba chennagide geleya.