
ರಾಜಕುಮಾರ ಮಡಿವಾಳರ
ಕೆಂಚು ಕೂದಲ ತೀಡಿ
ನವಿರಾದ ಜಡೆ ಹೆಣೆಯುತ್ತ
ನೀಲಿ ಕಂಗಳ ಮೇಲಿನ
ಹುಬ್ಬು ಒಪ್ಪಗೊಳಿಸುತ್ತ
ಒಮ್ಮೆ ಫ್ರಿಲ್ಲು ಮತ್ತೊಮ್ಮೆ ಅಂಬ್ರೆಲ್ಲಾ
ದಿನಕ್ಕೊಂದು ನಮ ನಮೂನೆಯ
ಫ್ರಾಕ್ ತೊಡಿಸುವ ಮುದುಕಿಯನ್ನ ಸುಮ್ಮನೆ
ಚಹಾ ಆಯ್ತಾ?
ಚೆನ್ನಾಗಿದ್ದಿರಾ?
ಕೇಳಿದೆ….
ಓಹ್…! ಬನ್ನಿ ಬನ್ನಿ ಇದಾ ನನ್ನ ಮಗಳು
ಕಳಿಸಿಕೊಟ್ಟಿದಾಳೆ, ಅವಳಿರೋ ದೇಶದಿಂದ
ಬಾರ್ಬಿ ಅಂತೆ ಇದಕೆ ಹೆಸರು,
ಮಗಳು ಒಬ್ಬಳೇ ನನಗೆ, ಚಿಕ್ಕವಳಿದ್ದಾಗ
ಅಲಂಕರಿಸುತ್ತಿದ್ದೆ ಅವಳನ್ನೂ ಹೀಗೆ
ಇಷ್ಟೇ ಮಾರುತ್ತರ ಮಾತು!
ಚಹಾ ಆಯ್ತಾ?
ಈಗ ಏಳು ವರ್ಷದ ಹಿಂದೆ ಇವರು ಹೋದಾಗ
ಬಂದಿದ್ದು ಮತ್ತೆ ಬಂದಿಲ್ಲ,
ಬರುವುದಾಗಿ ಹೇಳಿದ್ದಾಳೆ….
ಚಹಾ ಆಯ್ತಾ?
ಹೂಂ ಮೊನ್ನೆ ಫೋನ್ ಮಾಡಿದ್ದಳು
ಮಗಳು ನನ್ನ ಮೊಮ್ಮಗಳು ಅವಳಿಗೆ ಪರೀಕ್ಷೆಯಂತೆ
ಮುಗಿದ ಮೇಲೆ ಬರುವುದಂತೆ.
ಚಹಾ ಆಯ್ತಾ?
ಇಲ್ಲ ಮೊಮ್ಮಗಳು ಮತ್ತೆಲ್ಲೋ ಮುಂದಿನದು
ಕಲಿಯಲು ಹೋಗುವುದಂತೆ, ಅಳಿಯನಿಗೆ ರಜೆಯಿಲ್ಲ
ಮಗಳೊಬ್ಬಳೆ ಬರುವುದಂತೆ.
ಚಹಾ ಆಯ್ತಾ?
ಮೊಮ್ಮಗಳನ್ನ ನೋಡಿಯೇ ಇಲ್ಲ
ಹಾಗಂದಿದ್ದಕ್ಕೆ ಈ ಗೊಂಬೆ ಕಳಿಸಿದ್ದು
ಮಗಳು ಹೀಗೆ ಹೀಗೆ ಇರುವುದಂತೆ ಅವಳು!
ಚಹಾ ಆಯ್ತಾ?
ಇನ್ನೇನಪ್ಪ ಇದೆ? ಅವಳು ಬಂದ ಮೇಲೆ
ಹೋಗುವುದೇ? ಮೊಮ್ಮಗಳನ್ನ ನೋಡಲು
ಆಗುವುದೋ ಇಲ್ಲವೋ?
ನಾನು ಮುಂದಿನ ತಿಂಗಳು
ನಿಮ್ಮ ಮಗಳ ದೇಶಕ್ಕೆ ಹೊರಟಿದಿನಿ
ಚಹಾ ಈಗಷ್ಟೆ ಆಯ್ತು ಕಣಪ್ಪಾ
ಭೇಟಿ ಆಗಲಾ? ಏನಾದರು ಹೇಳಬೇಕಾ?
ನಂಗೆ ಸಕ್ರೆ ಮೇಲು ಚಹಾ ಇಷ್ಟ
ಈಗಷ್ಟೆ ಕುಡಿದೆ..
ಮೊಮ್ಮಗಳಿಗೆ ಏನಾದ್ರೂ ಕೊಡ್ತಿರಾ?
ಮುಟ್ಟಿಸುತ್ತೇನೆ.
ದಿನಕ್ಕೆ ಎರಡು ಸಲ ಮಾತ್ರ ಚಹಾ…
ನಾನು ಹೊರಡ್ತೀನಿ..
ಆಯ್ತು…
ಕದವನಿಕ್ಕಿ ಬೋಲ್ಟ್ ಹಾಕಿದ ಮುದುಕಿ
ಮಗಳು ಮಾತಾಡಿ ಏಳುವರ್ಷವಾಯಿತು
ನೆನಪಿಸಿಕೊಂಡು ಬಾರ್ಬಿಯ ತೊಡೆಗೆ
ಮಲಗಿಸಿ ಚಿಕ್ಕು ತಟ್ಟತೊಡಗಿದಳು…..






ಭಾವುಕವಾಗಬಾರದು ಎಂದುಕೊಂಡರೂ ಓದಿದೊಡನೆ ಅಪ್ಪಳಿಸಿದಂತಾಗಿ ಕಣ್ಣು ತೇವಗೊಳಿಸಿದ ಕವನ ಇದು,,, ಬಹಳ ಹೊತ್ತು ಮನಸ್ಸು ಕಲಕಿಹೋಯಿತು,
ಮನ ಮಿಡಿಯುವ ಕವಿತೆ
ಮನ ಮಿಡಿಯುವ ಕವಿತೆ
ಅರ್ಥ ಪೂರ್ಣವಾಗಿದೆ….
How did I miss this? Very Kind hearted <3
nice one sir