ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಜ್ಜಯ್ಯ ಬರೆದಿದ್ದ ಕಿಂದರಿ ಜೋಗಿ ಓದಿದ ಹುಡುಗಿ..

ಜೀವ ಜಾತ್ರೆಯಲ್ಲಿ ತಿರುಗಿ

ಜಿ ಮಲ್ಲಿಕಾ ಬಸವರಾಜು
ಅಜ್ಜಯ್ಯ ಬರೆದಿದ್ದ
ಕಿಂದರಿ ಜೋಗಿ
ಓದಿದ ಹುಡುಗಿ.

ಹಸಿರನೊತ್ತ ಜಗದಲಿ
ಒಂದು ಸುತ್ತು ಸುತ್ತಲು
ಪ್ರೀತಿ ಗೀತಿ ಗುಂಗಲಿ
ಅರೆ ಗಳಿಗೆ ಮೈಮರೆಯಲು

ಮಲೆಗಳಲ್ಲಿ ಮದುಮಗಳಲಿ
ಯಾತ್ರೆ ಹೊರಟಳು
ಚೈತ್ರ ಯಾತ್ರೆ ಹೊರಟಳು

ಏನಿದೇನಿದದ್ಭುತ !
ಜೀವ ಜಾತ್ರೆ ಸಂಪುಟ !!

ಜೀವವಿದೆ ಗಾಳಿಗೂ
ಜೀವವಿದೆ ಮೌನಕೂ
ಜೀವವಿದೆ ಕಾಡಿಗೂ
ಕಾಡುವಂಥ ಹಾಡಿಗೂ

ಜೀವವಿದೆ ಸ್ಪರ್ಶಕೂ
ಜೀವವಿದೆ ನೆನಪಿಗೂ
ನೆನಪು ಕೊಟ್ಟ ಕನಸಿಗೂ
ಕನಸಿದಂಥ ನನಸಿಗೂ

ಏನಿದೇನಿದದ್ಭುತ !
ಜೀವ ಜಾತ್ರೆ ಸಂಪುಟ !!

ಎದೆಯ ಬಯಲು
ಬೆರೆತು ಕಡಲು
ತುಂಬಿ ಹೋಯ್ತು ತಾಯಮಡಿಲು

ಏನಿದೇನಿದಧ್ಭುತ !
ಜೀವ ಜಾತ್ರೆ ಸಂಪುಟ !!

ಮಾತುಮಾತು ಸೇರಿಕೊಂಡು
ಜೀವವದಕೆ ಬೆರೆತುಕೊಂಡು
ಹುಲಿಕಲ್ ನೆತ್ತಿಯಿಂದ
ಕೇಳಿ ಬಂತು.ತೇಲಿ ಬಂತು
ಕಂಪಿನಂತೆ ಆವರಿಸಿತು
ಜೀವದ ಮಾತು
ಜೀವ ಜೀವದ ಮಾತು

ಚೈತ್ರ ಯಾತ್ರೆ ಹೊರಟ ಹುಡುಗಿ
ಜೀವ ಜಾತ್ರೆಯಲ್ಲಿ ತಿರುಗಿ
ಬಂದು ತಲುಪಿದ್ದೆಲ್ಲಿಗೆ
“ಮನುಜ ಮತಕೆ.ವಿಶ್ವ ಪಥಕೆ”

ಕರುಣೆ ಇರಲಿ ಜಗಜ್ಜನನಿ
ಬೆನ್ನಿಗಿರಲಿ ನಿನ್ನ ಅಭಯ

ಹೊರಟಿದ್ದೇವೆ ತುಂಬಿಕೊಂಡು
ಹೃದಯದೊಳಗೆ ಪ್ರೀತಿಯನ್ನು
ಅಜ್ಜಯ್ಯನ ಹಾದಿಯಲ್ಲಿ
ಹಾಕುತ್ತಾ ನಮ್ಮ ಹೆಜ್ಜೆ

ತೊಡರದಿರಲಿ ಜಗದ ಗೆಜ್ಜೆ
ತೊಡರದಿರಲಿ ಜಗದ ಗೆಜ್ಜೆ

ಕರುಣೆ ಇರಲಿ ಜಗಜ್ಜನನಿ
ಬೆನ್ನಿಗಿರಲಿ ನಿನ್ನ ಅಭಯ.

 

‍ಲೇಖಕರು Admin

6 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading