ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಜಾಮಿಳ ಮತ್ತು ಹುಲಿಗಳು

ಮೂಲ: ಅರುಣ ಕೋಲಟ್ ಕರ 

ಕನ್ನಡಕ್ಕೆ: ಪ್ರಮೋದ ಮುತಾಲಿಕ

ಹೋದವು ಹುಲಿಗಳೆಲ್ಲ ತಮ್ಮ
ರಾಯನೆಡೆಗೆ. ಅರುಹಿದವು ಒಕ್ಕೊರಲಿನಲಿ
‘ಸಾಯುತ್ತಿದ್ದೇವೆ ಹಸಿವಿಂದ ನಾವೆಲ್ಲ
ತಿಂದಿಲ್ಲ ಒಂದು ತುಂಡನ್ನೂ ಹದಿನೈದು ದಿನ
ಹದಿನಾರು ರಾತ್ರಿಗಳಿಂದ. ಇದೆಯೊಂದು
ಹೊಸ ನಾಯಿ ಅಜಾಮಿಳಂದು
ಬಿಡುವದೇ ಇಲ್ಲ ಹಾರಲು
ಒಂದೇ ಕುರಿಯ ಮೇಲೂ’

‘ಎಂಥ ಆಘಾತ! ಅರುಹಲಿಲ್ಲ
ಏಕೆ ಮೊದಲೇ?’ ಕೇಳಿದ ಅವರ ರಾಯ.
‘ಸಿದ್ಧರಾಗಿರಿ ಮೇಜವಾಣಿಗೆ. ಆ ನಾಯಿಗೆ
ನಾ ಕಲಿಸುವ ಬುದ್ಧಿ ಮರೆಯದದು ಜನ್ಮವಿಡಿ’
‘ಕೇಳು ರಾಯ ಕೇಳು’ಎಂದವು ಹುಲಿಗಳು.
‘ಜಾಗೃತೆ’ ಎಂದಳು ಹುಲಿರಾಣಿ.

ಹೊರಟೇ ಹೋಗಿದ್ದ ಆತ ಒಬ್ಬನೇ ಆಗಲೇ
ನಸುಗತ್ತಲಿನಲಿ. ಬಂದೇ ಬಿಟ್ಟ ಅಷ್ಟೇ
ರಭಸದಿ… ಒಳ್ಳೇ ರಾಯ! ಕಣ್ಣಿನ ಮೇಲೊಂದು
ಕಂದುಗಟ್ಟಿದ ರಕ್ತದ ಕಲೆ, ಮುದುಡಿದ ಬಾಲದೊಂದಿಗೆ.

‘ಹೋಗಿ ನೋಡಿಕೊಂಡು ಬಂದೆ.
ಯೋಜನೆ ಹಾಕಿದೆ. ಎಲ್ಲರೂ ಸೇರಿ
ಧುಮಕೋಣ, ಹೊಸಕುತ್ತೇವೆ ಆ ನಾಯಿ
ಕುನ್ನಿಯನ್ನು ಆಗ. ತೊಡಕೇನು ಆಗದು
ನಾನಿರುವೆ ನಿಮ್ಮ ಸಾರಥಿ ಆಗಿ’ಎಂದ.

ಮೀರಿಸಿ ಮಿಂಚಿನ ವೇಗವ
ಕುರಿನಾಯಿ ಎರಗಿತ್ತು ಐವತ್ತು
ಹುಲಿಗಳು ಮತ್ತು ರಾಯನ ಮೇಲೆ.
ಒಂದೇ ಕುರಿಯ ಹತ್ತಿರವೂ ಸುಳಿಯದಂತೆ
ಐವತ್ತೊಂದು ಸ್ಥಳದಲೂ ಏಕಾಂಗಿಯಾಗಿ
ಅವರನ್ನೆಲ್ಲ ಕೈದಿಗಳಾಗಿ
ತಳ್ಳಿತು ತನ್ನ ಯಜಮಾನನ
ಮುಂದೆ ಮಾಡಿ ಒಂದು ದೊಡ್ಡ ಗುಪ್ಪೆ.
ಅವರಿಗಾವ ದಾರಿಯೇ ಇರಲಿಲ್ಲ.

‘ಎಂಥ ಭಾರೀ ನಾಯಿ ನಿಂದು ಅಜಾಮಿಳ’
ಹೇಳಿದ ಹುಲಿರಾಯ, ಉಗುಳುತ್ತ ಮುರಿದ
ಹಲ್ಲೊಂದ. ‘ಗೈರ ಸಮಜೂತಿ ಇದು. ನಿನ್ನ
ದೊಡ್ಡಿಯ ಗುಡಿಸಬಹುದಿತ್ತು ನಾವು ಒಂದೇ
ಕ್ಷಣದಲಿ. ಬರಲಿಲ್ಲ ನಾವು ನಿನ್ನ ಕುರಿಗಳ
ಬೇಟೆಗೆ. ಫಲಕ್ಕಿಂತ ಪಡೆಯುವ ದಾರಿ ಮುಖ್ಯ
ನಮಗೆ. ಬಂದೆವು ನಿನ್ನೆಡೆ ಮಿತ್ರರಾಗಿ. ಇದು ಸತ್ಯ’

ಸಂಭಾವಿತ, ಮುಗ್ಧ ಅಜಾಮಿಳನ ನಾಯಿಗೆ
ಹೊಸದು ಇಂಥ ಸುಳ್ಳುಗಳು. ಆಯಿತು ಹೇಸಿಗೆ
ಕೇಳಿ ಈ ಸುಳ್ಳನ್ನ. ಮಾಡುತ್ತಲೇ ಹೋಯ್ತು
ಸನ್ನೆ ತನ್ನ ಯಜಮಾನನಿಗೆ.
ನೋಡಲೇ ಇಲ್ಲ ಇವನೆಡೆಗೆ ಜಾಣ ಅಜಾಮಿಳ.
ಹುಲಿರಾಯನಿಗಿತ್ತ ಆತಿಥ್ಯ ಮೇಜವಾಣಿಗೆ ಆ ರಾತ್ರಿ ಅಲ್ಲೇ.
ಬಿಟ್ಟಾವೇ ಹಸಿದ ಹುಲಿಗಳು ಮತ್ತು ರಾಯ?

ತಿಂದು ತೇಗಿದ ಮೇಲೆ ಸಮೃದ್ಧಿಯಾಗಿ
ಚಾಚಿದ ಸ್ನೇಹದ ಕೈ ಅಜಾಮಿಳ ಶಾಶ್ವತ
ಸೌಖ್ಯಕ್ಕೆ. ಕುಪ್ಪಳಿಸಿದವು ಹುಲಿಗಳೆಲ್ಲ
‘ಬೇಕು ನಮಗೂ ಇದೆ’ ಎನ್ನುತ್ತ
ಘರ್ಜಿಸಿದವು ಖುಷಿಯಾಗಿ.

ಬಂದರೊಂದೊಪ್ಪಂದಕ್ಕೆ ಇಬ್ಬರೂ.
ಬೀಳ್ಕೊಟ್ಟ ಅಜಾಮಿಳ ಅವರೆಲ್ಲರನು
ಕುರಿಗಳ, ಕುರಿಚರ್ಮದ ಹೊದಿಕೆ ಸಮೇತ.

ಪೆದ್ದನಲ್ಲ ಅಜಾಮಿಳ, ಜಾಣ ಆತ.
ಎಲ್ಲ ಜಾಣ ಕುರಿಗಾಹಿಗಳಂತೆ ಗೊತ್ತಿತ್ತು
ಆತಂಗೂ. ಹುಲಿಗಳೂ ತಿನ್ನಲೇ ಬೇಕಲ್ಲ
ಬದುಕಲು ಎಂದು. ಜಾಣ ಕುರಿಗಾಹಿ
ಯೋಚಿಸುವ ಇದನು.

ಅಷ್ಟಾದರಾಯ್ತು. ಮೈ ಮರೆತಾನು
ಖುಷಿಯಿಂದ ದಿನವಿಡೀ.
ಹೋದಾವು ಕೊಬ್ಬಿದ ಕುರಿಗಳು
ಹೊಟ್ಟೆ ತುಂಬಿದ ಹುಲಿಗಳು ಒಂದೇ
ಕೆರೆಗೆ ತಣಿಸಿ ದಾಹವ.
ಬದುಕಲು!

‍ಲೇಖಕರು Avadhi

13 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading