ಕವಯತ್ರಿ , ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಅವರ ಹೊಸ ಕೃತಿ ‘ಲಲಿತ ಮಂಟಪ’.
‘ಮಯೂರ’ ಮಾಸಿಕಕ್ಕಾಗಿ ರಾಜಲಕ್ಷ್ಮಿ ಅವರು ನಡೆಸಿದ ಸಂದರ್ಶನ ಮಾಲೆಯ ಸಂಕಲನ ಇದು.
ಈ ಕೃತಿ ಈ ಶನಿವಾರ ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ.
ಅಗ್ರಹಾರ ಕೃಷ್ಣಮೂರ್ತಿ ಅವರ ಮುನ್ನುಡಿ ಇಲ್ಲಿದೆ-

*
-ಅಗ್ರಹಾರ ಕೃಷ್ಣಮೂರ್ತಿ
*
ಈ ಕೃತಿಯ ಓದು ಒಂದು ನೃತ್ಯೋತ್ಸವದ ಆನಂದವನ್ನು ನೀಡಿತು. ಒಬ್ಬರಿಗಿಂತ ಒಬ್ಬರು ನಾಟ್ಯಪ್ರತಿಭಾ ದಿಗ್ಗಜರ ಜೊತೆಗಿನ ಮಾತುಕತೆ ಮಾತ್ರವಲ್ಲ, ಅವರೆಲ್ಲರ ಮೂಲಕ ನೃತ್ಯಕಲಾ ಜಗತ್ತಿನ ಸಮಗ್ರ ಅನಾವರಣವನ್ನು ಕೋಡಿಬೆಟ್ಟು ರಾಜಲಕ್ಷ್ಮಿ ಮಾಡಿದ್ದಾರೆ.
ಸಮಗ್ರವಾಗಿರುವುದು ಕೇವಲ ಇಪ್ಪತ್ತು ಅನನ್ಯ ಸಾಧಕರ ಯಶಸ್ಸಿನಿಂದಷ್ಟೇ ಅಲ್ಲ. ನೃತ್ಯಕಲಾವಿದರೆಲ್ಲರ ಒಳಗನ್ನು ಬಗೆದು ತೆಗೆದ ನಿವೇದನೆಗಳ ಸುರಳೀತ ನಿರೂಪದಲ್ಲಿ ವಿವಿಧ ನೃತ್ಯಕಲಾ ಪರಂಪರೆಗಳು, ಗುರು ದೀಕ್ಷೆ ಮತ್ತು ಗುರುಋಣಗಳು, ಕಲಿತ ಮತ್ತು ಕಟ್ಟಿದ ಕಲಾಸಂಸ್ಥೆಗಳು, ಭಿನ್ನ ಪ್ರಕಾರಗಳ ನಡುವಿನ ಕೊಡುಕೊಳ್ಳುವಿಕೆ, ಪ್ರಭಾವ, ಅಂತರ್ ಸಂಬಂಧಗಳ ಲೋಕ ತೆರೆದುಕೊಳ್ಳುತ್ತದೆ. ದೇವಾಲಯಗಳ ಸೆರೆಯಲ್ಲಿದ್ದ ಕಲೆಯ ಮುಕ್ತಿಕಥನ, ದೈವಿಕ ಮತ್ತು ಆಧ್ಯಾತ್ಮಿಕ ನಂಬಿಕೆ, ಪ್ರಾಚೀನ ಮತ್ತು ಆಧುನಿಕ ಕಾವ್ಯ ನೃತ್ಯಾವತಾರ ತಳೆಯುವ ಸಂಗತಿಗಳಿವೆ. ಶಾಸ್ತ್ರೀಯ ಧಾರೆಯ ಹಿನ್ನೆಲೆಯಲ್ಲಿ ಆಯಾ ಪ್ರದೇಶಗಳ ಬುಡಕಟ್ಟು, ಜಾನಪದ ಮತ್ತು ದೇಸೀ ಮೂಲಗಳ ಅನುಸಂಧಾನವಿರುವ ಅಂಶ ಹೆಮ್ಮೆಯುಂಟುಮಾಡುತ್ತದೆ.

ನೃತ್ಯಕಲಾ ಕಥನ ಕಟ್ಟಿಕೊಟ್ಟಿರುವ ಕಲಾವಿದರ ವೈಯಕ್ತಿಕ ಬದುಕಿನ ವಿವಿಧ ವಿನ್ಯಾಸಗಳು ಬಿಚ್ಚಿಕೊಳ್ಳುತ್ತವೆ; ಹೃದಯಸ್ಪರ್ಶಿ (ರಾಜಾ ರಾಧಾ ರೆಡ್ಡಿ), ಕಷ್ಟ ಸಹಿಷ್ಣುತೆ (ನರ್ತಕಿ ನಟರಾಜ್), ಧೋರಣೆ, ದಾರುಣತೆ (ಸೂರಿಕುಮೇರು ಗೋವಿಂದ ಭಟ್ಟ), ಕಲಾದೃಷ್ಟಿ ಮತ್ತು ಕಲಾಸೃಷ್ಟಿ (ಸೋನಾಲ್ ಮಾನ್ ಸಿಂಗ್), ಪ್ರಯೋಗಶೀಲತೆ (ಮಂಜರಿ ಚತುರ್ವೇದಿ) ಹೀಗೆ ನೃತ್ಯಕಲಾವಿದರ ಕಲಾನುಭವ ಮತ್ತು ಲೋಕದೃಷ್ಟಿಗಳು ಓದುಗರನ್ನು ಅಚ್ಚರಿ ಮತ್ತು ತಲ್ಲಣಗಳಿಗೆ ದೂಡುತ್ತವೆ.
ಮಾತುಕತೆ ಅಥವಾ ಸಂದರ್ಶನವೆಂಬುದು ಒಂದು ಸೂತ್ರವಷ್ಟೆ. ಆದರೆ ಇಲ್ಲಿ ತೆರೆದುಕೊಂಡಿರುವ ಜಗತ್ತು ವಿಸ್ಮಯವುಂಟುಮಾಡುತ್ತದೆ. ಇಲ್ಲಿನ ಮಾತುಕತೆಯೊಂದರಲ್ಲಿ ಇಬ್ಬರು ನರ್ತಕಿಯರು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಇಷ್ಟಪಟ್ಟುಕೊಂಡು ತೊಯ್ದುತೊಪ್ಪೆಯಾಗುತ್ತಾರೆ. ಈ ಪುಸ್ತಕವನ್ನು ಓದುತ್ತಿರುವಾಗ ನಾನೂ ಅವರ ಜೊತೆಗಿದ್ದೆ ಅನಿಸುತ್ತಿದೆ. ಇದು ಕಲಾಸಕ್ತರು ಮಾತ್ರ ಓದಬೇಕಾದ ಪುಸ್ತಕವಲ್ಲ ಎಂದು ನಾನು ತಿಳಿಯುತ್ತೇನೆ.






0 Comments