ಸ್ಪರ್ಷಭೀತಿ
ಸುಧಾ ಚಿದಾನಂದಗೌಡ
ತೇಲುತಿರುವ ಧ್ಯಾನಸ್ಥ
ಪತಂಗದ ಸ್ಥಬ್ಧರೆಕ್ಕೆಗಳಲಿ
ಮಾಯಕದ ಜ್ವಾಲೆ
ಮುಟ್ಟಿ ದಹಿಸಲೆಂಬ ಭಾವ
ಅಗ್ನಿಸ್ಪರ್ಷಕೆ ಸದಾ
ಮರುಹುಟ್ಟಿನ ಮೋಹ
ಜನ್ಮದೊಳಗಿನ ನಂಬಿಕೆಯ ಭೀತಿ
ಆದ್ರವಾಗುವುದು ಬೀಜದೊಳಗಿನ
ಆಕಾಶಗಂಗೆಗೆ
ಮಲಿನತೆಯ ಹೊಸಚಿಗುರಿನ
ಬೇರುಗಳ ಬಿಗಿತ
ಆತ್ಮದ ನವಿರು ಸೋಕಿದ
ನೂರುವರ್ಣದ ರೆಕ್ಕೆಯನು
ಮುಟ್ಟಿಯೆ ಬಿಡಲೇನು ಒಮ್ಮೆ..?!
ಬಯಲೆನಿಸಿರುವುದಕೆ
ಬೆತ್ತಲೆಯು ಕದವಾಗಿರುವುದು ಕಾರಣ
ಮಾಂತ್ರಿಕಸೃಷ್ಟಿಗೆ
ಸ್ಪರ್ಷವೆ ಸೂಜಿಗಲ್ಲು
ಎಚ್ಚರಾಗುತ ಆಲಿಸಿದ
ಸೂರ್ಯನರಳುವ ಸಪ್ಪಳ
ಮಾರ್ದನಿಸಿ ಒಳಗು
ಭೀತಿಯಿಂದಲೆ ಏಕತ್ರಗೊಂಡ
ಕ್ಷಣದ ಬೆಳಕಿನ ಸ್ಫೋಟ
ಎದೆಯ ಪಕಳೆಕೇಸರಗಳ
ದೇಹದಗುಂಟ ಬೆಳಕನಕ್ಷತ್ರ
ಆಯ್ದುಕೊಳುವ ಗಳಿಗೆಯದು
ನೀರವ ಮೌನದ ವಶವಾಗಿರುವುದು
ನಿರೀಕ್ಷೆಯ ಭೀತಿಯಲಿರುವ
ಧ್ಯಾನಸ್ಥ ಕನಸು
ಆತ್ಮದ ಬಲಿಯನು
ಧಿಕ್ಕರಿಸುವುದು ನಿಜದ ಅಳಲು








wow…. tumba chennagide….