ಅಕ್ಷರದ ಅರಮನೆಯಲ್ಲರಳಿದ 'ಬರ್ಫದ ಬೆಂಕಿ'

ಸ್ಮಿತಾ ಅಮೃತರಾಜ್. ಸಂಪಾಜೆ

ತೀರಾ ಇತ್ತೀಚೆಗೆ ಪರಿಚಯವಾದ ನಾಗರೇಖಾ ಗಾಂವಕರ ತಮ್ಮ ಕವಿತೆಗಳ ಮುಖಾಂತರ ಆಪ್ತರಾದವರು. ಆಂಗ್ಲ ಸಾಹಿತ್ಯದ ಉಪನ್ಯಾಸಕಿಯಾಗಿರುವ ಕವಯತ್ರಿ ತಮ್ಮ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಕತೆ, ಕವಿತೆ, ಪ್ರಬಂಧ, ಅಂಕಣ, ಅನುವಾದ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಯೋಚಿಸುವಾಗಲೆಲ್ಲಾ ಇವಕ್ಕೆಲ್ಲಾ ಸಮಯ ಹೊಂದಾಣಿಕೆ ಹೇಗೆ ಸಾಧ್ಯ? ಅಂತ ಅಚ್ಚರಿಯಾಗೋದಿದೆ. ಆಸಕ್ತಿಯಿದ್ದರೆ ಸಮಯ ನಮ್ಮನ್ನೇ ಹುಡುಕಿಕೊಂಡು ಬರುತ್ತದೆ ಅನ್ನುವಂತೆ ಬರೆಯುವ ಆಕೆಯ ಅದಮ್ಯ ಸಾಹಿತ್ಯ ಪ್ರೀತಿಯ ಕುರಿತು ಹೆಮ್ಮೆ ಅನ್ನಿಸುತ್ತದೆ.  ಆಗಾಗ್ಗೆ ಒಂದಿಲ್ಲೊಂದು ಬರಹಗಳ ಮೂಲಕ ಚಾಲ್ತಿಯಲ್ಲಿರುವ ನಾಗರೇಖ ನಮ್ಮ ನಡುವಿನ ಪ್ರಮುಖ ಬರಹಗಾರ್ತಿಯರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಪ್ರಕಟಗೊಂಡ ಅವರ ’ ಬರ್ಫದ ಬೆಂಕಿ’ ಯೆಂಬ ಪ್ರತಿಮಾತ್ಮಕ ಕವನ ಸಂಕಲನದ ಮೂಲಕ ನಮ್ಮನ್ನು ಗಾಢವಾಗಿ ತಟ್ಟಿದವರು.

ನಾಲ್ಕು ದಿನದ ಹಿಂದೆಯಷ್ಟೇ ಕೈ ಸೇರಿದ ಅವರ ಕವನ ಸಂಕಲವನ್ನು ಓದುತ್ತಾ ಹೋದ ಹಾಗೆ ಆವರಿಸಿಕೊಂಡ ಭಾವವನ್ನು  ಹೀಗೆ ಹಾಳೆಯ ಮೇಲೆ ಬಿಚ್ಚಿಡ ಬೇಕೆನ್ನುವಷ್ಟು ಹುಕಿ ಹುಟ್ಟಿ ಬಿಟ್ಟಿತ್ತು. ನಾಗರೇಖರವರು ತಮ್ಮ ಸಂಕಲನದಲ್ಲಿ ೧) ಮಾಗುವುದೆಂದರೆ ೨) ಅವಳ ಕವಿತೆಗಳು) ೩) ಕಾಲಾತೀತ ಕವಿತೆಗಳು ೪) ಭಾನ್ಸುರಿಯ ನಾದ ಅನ್ನುವ ನಾಲ್ಕು ಮಜಲುಗಳಲ್ಲಿ  ಕವಿತೆಯನ್ನು ವಿಂಗಡಿಸಿದ್ದು ಔಚಿತ್ಯಪೂರ್ಣವಾಗಿದೆ. ಒಟ್ಟಾರೆಯಾಗಿ ಈ ನಾಲ್ಕು ಗುಚ್ಚಗಳ ಮೇಲೆ ಕಣ್ಣಾಡಿಸಿದಾಗ ನನಗೆ ಅನ್ನಿಸಿದ್ದೇನೆಂದರೆ, ಕವಿತೆ ಅನ್ನುವುದು ಆಕೆಗೆ ಉಸಿರಿದ್ದಂತೆ. ಬರೆಯಲೇ ಬೇಕು ಅನ್ನುವ ಹಠಕ್ಕೆ ಬಿದ್ದು ಕೂತು ಬರೆದವರಲ್ಲ. ಬದುಕಿನ ಒಳಹೊಕ್ಕು  ಸೂಕ್ಷ್ಮವಾಗಿ ಅವಲೋಕಿಸುತ್ತಾ, ಬಹು ತಾಧ್ಯತ್ಮತೆಯಿಂದ  ತಾನಾಗಿಯೇ ಬೆರೆತ ಕಾರಣ ಆಕೆಗೆ ಕವಿತೆಯೆಂದರೆ ಬದುಕು ಅಥವಾ ಬದುಕಿನ ಒಂದು ಭಾಗ. ಅದಕ್ಕೇ ಕವಿತೆ ಕಟ್ಟುವುದೆಂದರೆ ಆಕೆಗೆ ಹೂ ಕಟ್ಟಿದಷ್ಟೇ ಸಲೀಸು.
ಮಾಗುವುದೆಂದರೆ.. ಹೇಗೆ?. ಅದಕ್ಕೆ ವಯಸ್ಸಿನ ಮಿತಿ ಉಂಟಾ?, ವೃದ್ಧಾಪ್ಯ ಬರಬೇಕಾ?,  ಅಥವಾ ಹಿರಿತನವನ್ನು ಆವಾಹಿಸಿಕೊಳ್ಳ ಬೇಕಾ?. ಸಮರ್ಥ ದಿಸೆಯಲ್ಲಿ ಇವಕ್ಕೆಲ್ಲ ಸ್ಪಷ್ಟ ಚಿತ್ರಣ  ಮಾಗುವುದೆಂದರೆ..ಕವಿತೆಯೊಳಗೆ ಮನಸು ನೆಟ್ಟಾಗ ನಮ್ಮ ಅರಿವಿಗೆ ಬರುತ್ತಾ ಸಾಗುತ್ತದೆ.  ಬದುಕಿನ ಪಲ್ಲಟಗಳಿಗೆ, ತಲ್ಲಣಗಳಿಗೆ  ಮನಸು ಸ್ಪಂದಿಸಿದರೆ, ಬದುಕಿನ ಎಲ್ಲಾ ಸಂಧಿಗ್ಧತೆಗಳಿಗೆ ಮುಖಾಮುಖಿಯಾಗುತ್ತಾ ಅವೆಲ್ಲಾ ತಾನೇ ತಾನಾದ ಗಳಿಗೆ ಮಾತ್ರ ಇಂತಹ ಮಾಗುವಿಕೆ ಸಾಧ್ಯ.  ಇಂತ ಪಕ್ವತೆ ಅವರ ಇಲ್ಲಿನ ಕವಿತೆಗಳಲ್ಲಿ  ನಾವು ಅನುಭವಿಸಬಹುದು. ನಮ್ಮೊಳಗು ಮಾಗಿಕೊಂಡರೆ ಮಾತ್ರ ಬದುಕನ್ನು ಹೊಸ ಬಗೆಯಲ್ಲಿ ಕಂಡುಕೊಳ್ಳಲು ಸಾಧ್ಯ ಅನ್ನುವಂತದ್ದನ್ನ ಸೂಚ್ಯವಾಗಿ ಕವಿತೆ ಕಟ್ಟಿಕೊಡುತ್ತದೆ.  ಅವರ ಮೊದಲ ಕವಿತೆಯ ಸಾಲುಗಳಲ್ಲೇ ಇದಕ್ಕೆ ಅರ್ಥ ದಕ್ಕಿಬಿಡುತ್ತದೆ.

ಹರಳೆಣ್ಣೆ ಗಾಡವಾಗುರಿದರೆ
ಕಡು ಕಪ್ಪು ಕಾಡಿಗೆ
ಚಿತ್ರ ಬರೆಯುತ್ತದೆ ಮುಚ್ಚಳದ ಅಂಚಿಗೆ..


ಎನ್ನುವಲ್ಲಿ ಬದುಕನ್ನು ಸೃಜನಶೀಲವಾಗಿ ನೋಡುವ  ಹೊಸ ದೃಷ್ಟಿಕೋನ ಕಣ್ಣೆದುರು ನಿಲ್ಲುತ್ತದೆ. ಭಾವಗಳು ಒಳಕ್ಕಿಳಿದು ಅಕ್ಷರ ರೂಪು ತಳೆದರೆ ಮಾತ್ರ ಅಂತಹ ಕವಿತೆ ಜೀವಂತವಾಗಿರಬಲ್ಲದು ಅನ್ನುವ  ಎಚ್ಚರ ಆಕೆಗಿರುವ ಕಾರಣವೇ ಶೋಕೇಸಿನ ಒಳಗಿಟ್ಟ ತೋರಿಕೆಯ ಪದಕಗಳ ಬಗ್ಗೆ ಆಕೆಗೆ ಒಲವಿಲ್ಲ. ಇದು ನಿಜವಾದ ಕವಿಯ ಅಂತ;ಸತ್ವ. ಇನ್ನು ಮುಂದುವರಿಯುತ್ತಾ ಆಡಂಬರ ಕಾಣುವಾಗಲೆಲ್ಲಾ ಸಹನೆಯ ಕಟ್ಟೆಯೊಡೆಯುತ್ತದೆ ಎನ್ನುವ ಆಕ್ರೋಷದ ಹಿಂದೆ , ಸರಳತೆಗೆ ಬಾಗುವಂತದ್ದು, ಶೂನ್ಯವನ್ನು ತಬ್ಬಿಕೊಳ್ಳುವಂತದ್ದು , ಅಸ್ಮಿತೆಯ ಹಂಗೇ ಇರದೆ ದುಡಿಯುವಂತದ್ದು ಅವರ ಬಹುತೇಕ ಕವಿತೆಗಳ ಮೂಲ ಆಶಯ. ಅದಕ್ಕಾಗಿಯೇ  ಅಡಿಕೆ ಸಿಪ್ಪೆ ಒಟ್ಟು ಮಾಡುವ ಪಾರೋತಿ, ತೆಂಗಿನ ಸಿಪ್ಪೆ ಸುಲಿಯುವ ಮಾದ ಕವಯತ್ರಿಗೆ ಮುಖ್ಯ ಅನ್ನಿಸುವುದು. ಬದುಕಿನಲ್ಲಿ ಸಮತೋಲನತೆಯನ್ನು ಸಾಧಿಸ ಬೇಕಾದರೆ ಎಲ್ಲರೂ ಮುಖ್ಯರೇ, ಯಾರು ಇಲ್ಲಿ ನಿಕೃಷ್ಟರಲ್ಲ ಅನ್ನುವ ತಾತ್ವಿಕ ಸತ್ಯವನ್ನು ಬಯಲು ಮಾಡುತ್ತಾರೆ.
ಒಡಲೊಳಗೆ ಕುದಿಯುವ ಹಂಡೆಯನ್ನೇ ಇಟ್ಟುಕೊಂಡು ಬೇಯುತ್ತಿದ್ದರೂ ಹೊರಗೆ ತಣ್ಣಗೆ ನಗುವಿನ ಲೇಪ ಹಚ್ಚಿಕೊಂಡು ಇರಲು ಹೆಣ್ಣಿಗಲ್ಲದೆ ಇನ್ಯಾರಿಗೆ ಸಾಧ್ಯ?. ಹಾಗಾಗಿ ಆಕೆಯನ್ನು ಬರ್ಫದ ಬೆಂಕಿಯೆಂದದ್ದು ಹೆಚ್ಚು ಸಮಂಜಸ ಅಂತನ್ನಿಸುತ್ತದೆ. ಕೆಲವೊಮ್ಮೆ ವೇದಾಂತಿಯಂತೆ ಕವಯತ್ರಿ ಬದುಕಿನ ನಿಜ ಸ್ಥಿತಿಯನ್ನು ಅನಾವರಣಗೊಳಿಸುತ್ತಾರೆ. ಅದೆಷ್ಟೇ  ಅಮಲು ಇದ್ದರೂ ಮಜ್ಜಿ ಕುಡಿದಾಕ್ಷಣ ನಶೆ ಜರ್ರನೆ ಇಳಿದು ಬಿಡುತ್ತದೆ. ಬದುಕು ಹೀಗೇ ಇರುವುದಿಲ್ಲ, ಅನಿವಾರ್ಯತೆಗಳು , ಸಂದರ್ಭಗಳು ಮನುಷ್ಯನನ್ನು ಎಲ್ಲಿಂದ ಎಲ್ಲಿಗೋ ಕೊಂಡೊಯ್ದು ಬಿಡಬಲ್ಲದು. ಒಮ್ಮೊಮ್ಮೆ ಹೀಗೊ ಆಗಿ ಬಿಡಬಹುದು ಎನ್ನುವ ಸಾಲುಗಳ ಮೂಲಕ ವಿವರಿಸುತ್ತಾರೆ. ಬದುಕಿನ ಬಗ್ಗೆ ಭರವಸೆಯಿಡುವುದೆಂದರೆ ಇದೇ ತಾನೇ?.
ಎಷ್ಟೆಂದರೂ.. ಬದುಕನ್ನು ಪ್ರೀತಿಸದವ ಕವಿಯಾಗಲಾರ. ಅದೆಷ್ಟೋ ವೈರುಧ್ಯಗಳ ನಡುವೆಯೂ ಸಮ ಸಮಾಜದ ಒಳಿತಿಗೆ ಕವಿ ಭಾವ ಮಿಡುಕುತ್ತದೆ. ಅದಕ್ಕೇ ,ಕಸ ಕಡ್ಡಿ ಬೆಂಕಿ ಮುಳ್ಳುಗಳನ್ನು ತೊಳೆಯುವಂತಹ ಮಳೆ ಬರಬೇಕು ಆ ಸೋನೆಯಲ್ಲಿ ಇವರೆಲ್ಲರೂ ಅಪಾದಮಸ್ತಕ ನೆನೆಯಲಿ ಮುದಗೊಳ್ಳಲಿ ದೇವರೇ.. ಅಂತ ಕನವರಿಸುತ್ತಾರೆ.
 
ಬೆಳಕನ್ನು ಹೊದ್ದುಕೊಂಡರೆ ಬದುಕು ಹಸನಾಗಬಹುದು . ಆಗ ಒಣ ಗೂಟದ ಮೇಲೆಯೂ ಚಿಗುರು ಹಬ್ಬಿ ನಳನಳಿಸ ಬಹುದು ಎನ್ನುವುದೇ ಕವಿತೆಯ ಆಶಾವಾದ. ನಮ್ಮ ಜೀವನದ ರುವಾರಿಗಳು ನಾವೇ ಅನ್ನುವುದು ನಿಚ್ಚಳ ಸತ್ಯ. ಮಜ್ಜಿಗೆ ಕಡೆಗೋಲಿನಿಂದ  ಕಡೆದರೆ ಕೊನೇಗೆ ತೇಲಿ ಬರುವ ಬೆಣ್ಣೆಯಂತೆ ಬದುಕು ಅನ್ನುವ ಪಾರಮಾರ್ಥಿಕ ಸತ್ಯವನ್ನು ಹೌದಲ್ಲ ಅನ್ನುವಂತೆ ನಿರೂಪಿಸುತ್ತಾರೆ. ಇಂತಹ ಸಾಲುಗಳು ಮಾಗಿದ ಮನಸ್ಥಿತಿಗಷ್ಟೇ ದಕ್ಕುವ ಸಂಗತಿ. ಅದಕ್ಕಾಗಿಯೇ ಅವರ ಕವಿತೆಗಳು ಡಂಭ ಬದುಕಿಗೆ, ಬೂಟಾಟಿಕೆಗೆ ಆಕ್ರೋಷ ವ್ಯಕ್ತ ಪಡಿಸುತ್ತಲೇ ಬಯಲೇ ನಾವಾಗ ಬೇಕೆನ್ನುವ ಎಲ್ಲ ಮೀರಿದ ಅರಿವಿನ ಹಂದರದ ಬಯಕೆಯನ್ನು ನಿವೇದಿಸುತ್ತಾರೆ.  ಬದುಕು ಅನ್ನುವುದು ಜೋಕಾಲಿಯಾಟದಂತೆ ಅನ್ನುವ ಎಚ್ಚರ ಕವಿತೆಗಳಲ್ಲಿ ಅಂತರ್ಗತವಾಗಿರುವ ಕಾರಣವೇ, ಜಗದ ನಿಯಮದ ಮುಂದೆ ಎಲ್ಲವೂ ಒಂದೇ  ಅನ್ನುವ ತತ್ವವನ್ನು ಪತಿಫಲಿಸುವ ಅವರ ಕವಿತೆಗಳು ಆಗ ಪ್ರೇಮ ಮತ್ತು ಮಸಣಗಳು ಒಂದೇ ತೊಟ್ಟಿಲಿನಲ್ಲಿ ಜೋಕಾಲಿಯಾಡುತ್ತವೆ ಅನ್ನುವ ಅಂತಿಮ ಸತ್ಯವನ್ನು ನಾವು ಬೆಚ್ಚಿ ಬೀಳುವಂತೆ ಅರಹುತ್ತಾರೆ. ನಿಜ. ಮಾಗುವುದೆಂದರೆ.. ಇದೇ ಇರಬೇಕು ಅಂತ ಈಗ ಅನ್ನಿಸುತ್ತದೆ. ಹೌದಲ್ಲವಾ?!.
ಅಕ್ಷರದ ಅರಮನೆಗೆ ಪರಿಮಳವನ್ನು ಮಾರಿ ಬರುತ್ತೇನೆಂಬ ಹಂಬಲ ಹೊತ್ತಿರುವ ಅವಳ ಕವಿತೆಗಳು ಇಡೀ ಸ್ತ್ರೀ ಕುಲದ ಅಭಿವ್ಯಕ್ತಿಯಾಗಿ ಪಡಿ ಮೂಡಿದೆ. ಅವಳು ಮತ್ತೆ ಕವಿತೆ ಬೇರೆ ಬೇರೆಯಾ?. ಹಾಗೆ ನೋಡಿದರೆ  ಪ್ರತಿಯೊಬ್ಬ ಹೆಣ್ಣು ಕವಿತೆಯ ಮತ್ತೊಂದು ರೂಪವೇ. ಪದ ಪದದೊಳಗೆ ಸಾಕಷ್ಟು ಅರ್ಥಗಳನ್ನು ಇಟ್ಟುಕೊಂಡು ಸುಲಭಕ್ಕೆ ಬಿಟ್ಟು ಕೊಡದ ಹಾಗೇ.  ಅರ್ಥಕ್ಕೆ ದಕ್ಕಿದ್ದು ಮಾತ್ರ ಕವಿತೆಯಲ್ಲ. ಅರ್ಥಕ್ಕೆ ದಕ್ಕದ್ದು ಕೂಡ ಕವಿತೆಯೇ. ಕವಿತೆಯೆಂಬುದು ನಮ್ಮೊಳಗಿನ ನಿರಂತರ ಶೋಧ. ಅಂತಹ ಹುಡುಕಾಟ ಇಲ್ಲಿನ ಅವಳ ಕವಿತೆಗಳಲ್ಲಿ ಕಾಣಬಹುದು.  ಕವಯತ್ರಿಗೆ ಪ್ರತೀ ಹೆಣ್ಣಿನ ಮನಸ್ಥಿತಿಯೂ ಗೊತ್ತು.  ವ್ಯವಸ್ಥೆಗೆ ತಲೆಬಾಗಿ ಬದುಕಿದರೂ ಒಳಗೊಳಗೆ ಆಕೆ ಕೆಲವೊಂದು ಸಂಗತಿಗಳನ್ನು ನಿರಾಕರಿಸುತ್ತಾಳೆ . ತಾಳಿ, ಉಂಗುರ ಇವೆಲ್ಲಾ ಮದುವೆಯಾದುದ್ದಕ್ಕೆ ಗುರುತೇ ಹೊರತೂ ಇವೆಲ್ಲಾ ಇಲ್ಲದೆಯೂ ಒಲವು ಗಟ್ಟಿಗೊಳ್ಳುವುದಾದರೆ ಮತ್ರ ಅದು ನಿಜವಾದ ಭಾಂದವ್ಯ ಇಲ್ಲದಿದ್ದರೆ ಅದು ಬಂಧನ ಅನ್ನುವುದನ್ನ ದಿಟ್ಟತನದಿಂದ ಪ್ರಶ್ನಿಸುತ್ತಾರೆ.  ಬಹುಷ; ಎಲ್ಲಾ ಹೆಣ್ಣು ಮಕ್ಕಳ ಅಂತರಾಳದ ಭಾವ ಇದುವೇ.  ಕಟ್ಟು ಪಾಡುಗಳ ಸಂಕೋಲೆಯೊಳಗೆ ಬಂಧಿಯಾಗಿ ನಾ ಹೆಂಡತಿಯಾಗಲಾರೆ  ಅನ್ನುವ ಪ್ರತಿಭಟನೆ ಹೆಂಡತಿಯೆಂದರೆ ಹೀಗೇ ಇರಬೇಕು ಅನ್ನುವ ಸ್ಥಾಪಿತ ವ್ಯವಸ್ಥೆಯನ್ನು ಧಿಕ್ಕರಿಸಿ ತಾನೇ ಹೊಸ ಭಾಷ್ಯ ಬರೆದ ಕವಿತೆ ಸಾಲಿನಲ್ಲಿ ದಿಟ್ಟತನ ಗೋಚರವಾಗುತ್ತದೆ. ಹೆಣ್ಣು ಮೊದಲಿನಂತಿಲ್ಲ ಅನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.
ನನ್ನನ್ನು ಬಹುವಾಗಿ ಕಾಡಿದ ಕವಿತೆಗಳಲ್ಲಿ ’ ಮಿಡಿಗಾಯಿ ಮಹಿಮೆ’ ಒಂದು. ಅಮ್ಮ ಹದವರಿತು ಮಾಡಿದ ಉಪ್ಪಿನಕಾಯಿ ಹೇಗೆ ಕಾಲಪೂರ್ತಿ ಬಾಳಿಕೆ ಬರಬಲ್ಲದು. ಮಿಡಿಗಾಯಿಗೂ ಹೆಣ್ಮಕ್ಕಳಿಗೂ ಅದೆಷ್ಟು ಸಾಮ್ಯತೆ ಇದೆಯಲ್ಲ ಅನ್ನಿಸಿತು. ಬದುಕು ,ಕವಿತೆ ಇಷ್ಟೇ ಅಲ್ಲವಾ?, ಹದವರಿತು ಮಾಡಿದ ಮಿಡಿಗಾಯಿ ಉಪ್ಪಿನಕಾಯಿ ಹಾಗೇ. ಅವಳ ಕವಿತೆಯ ತುಂಬಾ ಆಕೆಯ ಒಡಲುರಿ, ಸಂಕಟ ಧುಮುಗುಡುತ್ತದೆ. ಇಡೀ ಸ್ತ್ರೀ ಕುಲದ ಸಾಮುಧಾಯಿಕ ದನಿಯಂತೆ ಕೇಳಿಸುತ್ತದೆ. ಹಾಗಾಗಿ ಆಕೆಯ ಬೇಗೆ ಬೇರೆಯೇ ತೆರನಾಗಿ ಹೊರಳಿಕೊಂಡದ್ದನ್ನ ನಾವಿಲ್ಲಿ ಗಮನಿಸಬಹುದು.  ಹೇಗೆ ಆಯ್ಕೆಯ ಸ್ವಾತಂತ್ರ್ಯವಿಲ್ಲದೆ ನಮ್ಮ ಹೆಣ್ಣು ಮಕ್ಕಳು ಯಾರೋ ಆರಿಸಿದ್ದನ್ನ  ತಮಗೆ ಇಷ್ಟವಿಲ್ಲದೆಯೂ ವರಿಸಿ ಬಾಳುವೆ ನಡೆಸುತ್ತಿದ್ದರು. ಇನ್ನು ಮುಂದಕ್ಕೆ ಹೋಗಿ ಸ್ವಯಂವರ  ಅನ್ನೋ ಹೆಸರಿನಲ್ಲಿ  ಕೂಡ ಆದದ್ದು ಅಷ್ಟೇ ಅಲ್ಲವಾ?. ಅವಳ ಮನದ ಇಂಗಿತಕ್ಕೆ ಅಸ್ತು ಅನ್ನುವವರು ಇದ್ದರೆ?. ಅದಕ್ಕೆ ಬದಲಾದ ಗತಿಯಲ್ಲಿ ಹೆಣ್ಣೊಬ್ಬಳು ತನ್ನನ್ನು ತಾನೇ ಮೋಹಿಸಿಕೊಂಡು ತನ್ನನ್ನು  ತಾನೇ  ಮದುವೆಯಾಗುವುದು ಹೊಸ ದನಿಯಾಗಿ ಅಭಿವ್ಯಕ್ತಿಗೊಂಡಿದೆ. ಅವರಿಷ್ಟವಾದದ್ದನ್ನು ಬಿತ್ತಿದಂತೆ ಫಸಲೂಡಿಸಲು, ಗದ್ದೆಗಳು ನಿರಾಕರಣೆ ಮಾಡುತ್ತಿವೆ.. ಅನ್ನುತ್ತಾ ಈಗ ಅವಳು ಅವಳೆದೆಯ ಮೋಹನರಾಗಕ್ಕೆ  ಕಿವಿಯಾಗಿದ್ದಾಳೆ .. ಅನ್ನುವಲ್ಲಿ ಕವಿತೆ ಚಂಗನೆ ಹೊಸ ಹೊಳಹನ್ನ ಕಾಣಿಸುತ್ತದೆ. ಇಲ್ಲಿ  ಪ್ರತಿಭಟನೆಯ ಕಾವು  ಮತ್ತೊಂದು ಬಗೆಯಲ್ಲಿ ಹೊರಳಿಕೊಂಡಿದೆ. ಇಷ್ಟೆಲ್ಲಾ ಬೆಳವಣಿಗೆ ಕಂಡು ಬಂದರೂ , ಒಲೆಯ ವಿನ್ಯಾಸ , ಆಕಾರ ಬದಲಾದರೂ ಉರಿ ಬದಲಾಗಲೇ ಇಲ್ಲ ಅನ್ನುವ  ಸಾಲುಗಳಲ್ಲಿ  ಎಷ್ಟೆಂದರೂ ನಮ್ಮ ಹಾದಿ ಅಷ್ಟೊಂದು ಸುಗಮವಲ್ಲ ಅನ್ನೋ ವಿಷಾದ ಭಗ್ಗನೆ ಒಳಗೊಳಗೆ ಹೊತ್ತಿ ಉರಿಯತೊಡಗುತ್ತದೆ: ತಂಪು ನಗು ಮುಖವಾಡ ಧರಿಸುತ್ತದೆ.

ಇನ್ನು ಅವರ ಕಾಲಾತೀತ ಕವಿತೆಗಳಲ್ಲಿ , ಸಮಷ್ಟಿ ಚಿಂತನೆಯನ್ನು ನಾವು ಮನಗಾಣ ಬಹುದು. ಒಬ್ಬ ಕವಿಗೆ ಸಾಮಾಜಿಕ ಜವಾಬ್ದಾರಿ ಎಷ್ಟು ಮುಖ್ಯ ಅನ್ನುವಂತದ್ದು ಇಲ್ಲಿ ವೇದ್ಯವಾಗುತ್ತದೆ.  ಕರಿ ಮೈಯ  ಮಾರನ ಮನೆಯ ದೀಪದ ಬೆಳಕಿಗೆ ಯಾವ ಬಣ್ಣ .. ಅನ್ನುತ್ತಾ  ವರ್ಣ ಸಮಸ್ಯೆಯ ಬುಡಕ್ಕೆ ಕೈ ಹಾಕಿ ಪ್ರಶ್ನಿಸುತ್ತಾರೆ.  ಬದಲಾದ ಕಾಲಘಟ್ಟ ಹೇಗೆ ನಮ್ಮ ಮನಸ್ಥಿತಿಗಳನ್ನು ಕೂಡ  ಬದಲು ಮಾಡಿದೆ ಅನ್ನೋ ಆತಂಕವನ್ನ,
ರಹೀಮನ ಮನೆಯ ಸಿರಕುಮಾ
ನಮ್ಮ ಮನೆಯ ಬೆಂಡು ಬತ್ತಾಸು
ಪರಸ್ಪರ ಮಾತು ಬಿಟ್ಟಿವೆ
ತಪಶೀಲು ಜಾರಿಯಾಗಿದೆ..
ಎನ್ನುವ ಸಾಲುಗಳ ಮೂಲಕ ನಮ್ಮನ್ನು ಚಿಂತನೆಗೆ ದೂಡಬಲ್ಲರು.
ಪ್ರೀತಿಗೆ ಸೋಲದ, ಅರ್ಧ್ರಗೊಳ್ಳದ ಜೀವಗಳು ಎಲ್ಲಿ ತಾನೇ ಇದ್ದಾತು?. ಇತ್ತೀಚಿಗಿನ ಹಸಿ ಹಸಿ ಪ್ರೇಮ ಕವಿತೆಗಳ ಮುಂದೆ ಇಲ್ಲಿಯ ಕವಿತೆಗಳು ಬಾನ್ಸುರಿಯ ನಾದದಂತೆ ಮಧುರ ಸ್ವರವನ್ನು ಹೊರಡಿಸ ಬಲ್ಲವು. ಕೃಷ್ಣ ಪ್ರೀತಿಗೊಂದು ರೂಪಕ. ಸದಾ ಬದುಕನ್ನ ಉಲ್ಲಸಿತವಾಗಿಡುವ  ಕೃಷ್ಣನಂತಹ ಕಪಟವಿಲ್ಲದ ಸ್ನೇಹ ಸಖ್ಯಕ್ಕೆ ಮನ ಹಪಹಪಿಸುವುದನ್ನು  ಎಲ್ಲರ ಆಳದ ತಹತಹಿಕೆಯಂತೆ ನಿರೂಪಿಸುತ್ತಾರೆ. ಸಾವನ್ನೇ ಒಂದಷ್ಟು ಕಾಲ ಹಿಂದೋಡು ಅಂತ ವಿನಂತಿಸಿಕೊಳ್ಳುವ ಸಾಲುಗಳ ಹಿಂದೆ ಇರುವುದು ಬದುಕಿನ ಕುರಿತಾದ ಉತ್ಕಟ ಪ್ರೀತಿಯಷ್ಟೆ. ಪ್ರಾಮಾಣಿಕ ಪ್ರೀತಿಯೆಂದರೆ ಅದು ರಾಧೆಯಂತೆ. ನಿರ್ಮಲ ಪ್ರೀತಿಗೆ ಸಾವಿಲ್ಲ ಅನ್ನುವಂತದ್ದನ್ನ ಇದು ಸಾಬೀತು ಪಡಿಸುತ್ತಾ, ಪ್ರೀತಿಯೆಂದರೆ ದೇಹ ಮೀರಿದ ಸಖ್ಯ ಅನ್ನುವ ನಿಜವಾದ ಪ್ರೀತಿಯ ಆಳವನ್ನು ನವಿರಾಗಿ ಕಟ್ಟಿಕೊಡುತ್ತಾರೆ. ಪ್ರೀತಿ ಭಗ್ನಗೊಂಡರೂ ಅದರ ಪಳೆಯುಳಿಕೆ ಮೇಲೆ ಸಣ್ಣ ಜೋಪಡಿ ಕಟ್ಟಿ, ಸುತ್ತ ಗುಲಾಬಿ ಗಿಡ ನೆಟ್ಟಿದ್ದೇನೆ.. ಎಂದು ಹೇಳುವ ಸಾಲುಗಳು ಆಳದಿಂದ ನಮ್ಮನ್ನು ತಟ್ಟುತ್ತವೆ.  ಎಲ್ಲ ನೋವುಗಳ ಮೇಲೆಯೂ ಗುಲಾಬಿ ಅರಳಿಸುವುದು ಇದೆಯಲ್ಲಾ.. ಅದು ನಿಜವಾದ ಪ್ರೀತಿಯ ಧ್ಯೋತಕ. ಇವರ ಕವಿತೆಗಳಲ್ಲಿ ಪ್ರೀತಿಯೆಂದರೆ ಅಮೂರ್ತವಾಗಿ ಕೈ ಹಿಡಿದು ನಡೆಸುವ ಬೆಳಕು.
ಹೀಗೆ ಒಟ್ಟಾರೆಯಾಗಿ  ಇಡೀ ಬದುಕನ್ನು ಸಮಗ್ರವಾಗಿ ಪರಿಭಾವಿಸಿಕೊಂಡೂ ಮಾಗಿದ ಅವಳ ಕವಿತೆಗಳು ಕಾಲಾತೀತವಾಗಿ ಭಾನ್ಸುರಿಯ ನಾದವನ್ನು ಹೊಮ್ಮಿಸ ಬಲ್ಲವು. ಹೊಸ ಪ್ರತಿಮೆ, ಹೊಸ ರೂಪಕ, ನಿಬಿಢ  ಅರ್ಥಗಳ ಮೂಲಕ ತೆರೆದುಕೊಳ್ಳುವ ಅವರ ಕವಿತೆಗಳನ್ನ  ಒಂದೇ ಗುಕ್ಕಿಗೆ ಓದಿ ಅರ್ಥೈಸಿಕೊಳ್ಳುವುದು ತುಸು ಕಷ್ಟ ಅಂತ ಅನ್ನಿಸಿದ್ದಿದೆ. ಕೆಲವೊಮ್ಮೆ ಪದಗಳ ಭಾರದಿಂದ ಕವಿತೆ ನಲುಗಿದೆಯೇನೋ ಅಂತ ಅನುಮಾನ ಕೂಡ ಕಾಡಿದ್ದಿದೆ. ಬಹುಷ; ಇದು ನನ್ನ ಗ್ರಹಿಕೆಯ ಮಿತಿಯೂ ಇರಬಹುದೇನೋ. ಕೊನೆಗೂ ಹಠ ಬಿಡದೆ ಕವಿತೆಯೊಳಗೆ ತಲೆ ಹುದುಗಿಸಿದರೆ ಹಾಗೇ ಮೆಲ್ಲನೆ ಎದೆಗಿಳಿದು ಬಿಡುತ್ತವೆ ಕವಿತೆಗಳು. ನಮ್ಮೊಳಗಿನ ಸುಡುವ ನೋವುಗಳು ಬರ್ಫದ ಬೆಂಕಿಯೊಂದಿಗೆ ಮಾತಿಗಿಳಿಯುತ್ತಾ ಹಗುರತನವನ್ನು ಅನುಭವಿಸ ತೊಡಗುತ್ತವೆ. ನಾಗರೇಖರವರ ಕಾವ್ಯ ಪ್ರೀತಿ ಹಸಿರಾಗಿರಲಿ.

‍ಲೇಖಕರು AdminS

August 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. SHRIDHAr B.Nayak

    ಅದ್ಭುತ ವಿಶ್ಲೇಷಣೆ.ಅಭಿನಂಧನೆಗಳು ನಾಗರೇಖಾ ಮತ್ತು ಸ್ಮಿತಾ ಅವರಿಗೆ.

    ಪ್ರತಿಕ್ರಿಯೆ
  2. Sarayu

    Kavana sankalanada parichaya odi e thakshanve pusthakavannu kondu kavanagalannu odabekenisitu. Chennagi barediddiri Smitha.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: