ಬಿಸಿಲಿನ ಅರ್ಥ ಇಮ್ಮಡಿಸಿತು

ನಾಗರಾಜ್ ಹರಪನಹಳ್ಳಿ
ಸುಡು ಬಿಸಿಲು
ಉರಿಬಿಸಿಲು
ಬಯಲು ಸುಡುತ್ತಿದೆ
ನಾಲ್ಕು ಹನಿ ಉದುರಬೇಕಿತ್ತು
ಪ್ರೀತಿಯಂತೆ
…ದೂರವಾದೆ
ಬಿಸಿಲು ಉಲ್ಬಣಿಸಿದೆ
-2-
ಉರಿ ಬಿಸಿಲ ದಾರಿ
ದಾರಿಯಲ್ಲಿ ಕಂಡವರು
ನಕ್ಕರು, ಮಾತಾಡಿದರು
ಆದರೂ
ಸಮಾಧಾನವಾಗಲಿಲ್ಲ
ಉರಿ ಬಿಸಿಲಿನದ್ದೇ ಮಾತು
ಒಂದು ಹನಿ ಪ್ರೀತಿಗಾಗಿ
ಎಲ್ಲರದ್ದೂ ಹುಡುಕಾಟವೇ
ಬಿಸಿಲಿನ ಅರ್ಥ
ಇಮ್ಮಡಿಸಿತು
-3-
ಭೂಮಿ ತಲ್ಲಣಿಸಿದೆ
ಕಾವ್ಯ ಕಾಣೆಯಾಗಿದೆ
ನೀನು ಹೋದ ಮೇಲೆ
ಯಾರಿಗೆ ಬೇಕು ಈ ಕಾವ್ಯ
ಅಕ್ಷರಗಳು ಸಹ
ಬಿಸಿನ ದಾಹಕ್ಕೆ
ಬಳಲಿವೆ
-4-
ನದಿ ದಂಡೆಗೆ ಬಂದೆ
ನದಿ ಬಾಯರಿಕೆ ಎಂದಿತು
ಕಡಲದಡಕ್ಕೆ ಬಂದೆ
ಅದು ಸಹ ಅಬ್ಬರಿಸಿತು
ಮೋಡ ಕಟ್ಟುವ ಮುಗಿಲಿಗಾಗಿ
ಕಾದಿದ್ದೇನೆ ಎಂದಿತು
ನನ್ನದು
ನಿನ್ನ ಹಸಿವೆಯೇ ಎಂದು
ಮೌನಿಯಾದೆ
-5-
ಒಂದು ಹಿಡಿ ಮಣ್ಣು
ನಾಲ್ಕು ಹನಿ ನೀರು
ಸುಮ್ಮನೆ ಚೆಲ್ಲಿದ
ಬೀಜಕ್ಕೆ
ಜೀವ ಇದೆಯೆಂದಾದರೆ
ನಮಗೆ?
-6-
ಬೊಗಸೆಯಲ್ಲಿ
ನೀರು
ಹಿಡಿದೆ
ಸಂಭ್ರಮದಲಿ
ನಕ್ಕಿತು ;
ಅವಳ
ನೆನಪಾಯಿತು
-7-
ಹಕ್ಕಿ ಮುಗಿಲು
ಮರ ಹಗಲು
ಮಾತಾಡತೊಡಗಿದವು
ಹೂಗಳು
ಬೆಳಕಿನ ಸ್ಪರ್ಶಕ್ಕೆ
ಹಾಡಿದವು
ನಮಗೇನಾಗಿದೆ?
-8-
ಅಷ್ಟು ಜನರ
ನಡುವೆ
ನಿನ್ನನ್ನೇ ಹುಡುಕಿ
ಮಾತಾಡಿಸುವುದೆಂದರೆ
ಪ್ರೀತಿಯಾಗಿದೆಯೆಂದೇ
ಅರ್ಥ






0 Comments