ಅಕ್ಷಯ ಆರ್ ಶೆಟ್ಟಿ
1. ಸ್ವಾತಂತ್ರ್ಯ ಮತ್ತು ಆಚರಣೆ
ಇಲ್ಲ, ಈ ದಿನವೂ ಅಲರಾಂಗೆ ಮುಕ್ತಿಯಿಲ್ಲ,
ನನ್ನಂತೆಯೇ,
ಮೊಟಕಿದ್ದು ಅಲ್ರಾಮ್ ತಲೆಗೋ, ಪ್ರಗತಿಯ ಪಥಕ್ಕೋ
ನಿಲ್ಲದೆ ನಡೆದ ಘಂಟೆಯ ಪಕ್ಕಾ ಲೆಕ್ಕದಲಿ, ಎಪ್ಪತ್ತೈದೆಂಬ ವರ್ಚಸ್ಸು!
ದಕ್ಕುವ ವಾರದ ರಜೆಯೂ, ಹೀಗೆ
ಛೆ, ಎಷ್ಟು ಯೋಚಿಸಿದರೂ ಅಷ್ಟೆ
ಎದ್ದು, ಸಡಿಲಗೊಂಡುದರ ಬಿಗಿಗೊಳಿಸುವ ಗೋಜು,
ಮಾನ, ಬಟ್ಟೆಗೋ ವ್ಯಕ್ತಿಗೋ
ಎಲ್ಲವೂ ಅಸ್ಪಷ್ಟ, ನಿದ್ದೆಗಣ್ಣಿನ ಅಸಂಬದ್ಧ ಚಿಂತೆ, ಚಿಂತನೆ!
ಮಂಜುಗಣ್ಣಲ್ಲಿ ಮಂಚ ಬಿಟ್ಟೇಳುವಾಗ,
ಕಾಲು ನಡೆದದ್ದೆ ದಾರಿ, ಕೈಯಾಡಿದ್ದೆ ಅಡುಗೆ
ಮನಸು ಜೊತೆಯಿರದಿರೆ!
ಉಪ್ಪಿಗೂ ರುಚಿಯಿರದು, ದಾಂಡಿಯಾದರೇನು?
ಅಪ್ಪಿಕೋದ ಬೆಲೆಯೇನು?
ಭಾಗಿಯಾದರಲ್ಲವೆ ಅರಿವು – ನೋವಿನದೂ ನಲಿವಿನದೂ
…ಉಪವಾಸದ್ದೂ ಸತ್ಯಾಗ್ರಹದ್ದೂ!
ಪರತಂತ್ರ್ಯ ಅನುಭವಿಸಿರಬೇಕು, ಸ್ವಾತಂತ್ರ್ಯದ ಸೊಬಗು ಸವಿಯಲು…
ಉಗುರು ನೀರಿಗೆ ತಾಕಿರಬೇಕು,
ಒಂಚೂರು ಬಿಸಿ ಕೈತೊಗಲ ಸುಟ್ಟಿರಬೇಕು ಅಡುಗೆ ಹಿತವೆನಿಸಲು
ಮಾಡುವ ಕೈಗಳ ಬಗೆಗೆ ಧನ್ಯತೆಯ ಭಾವ ಜೊತೆಗೂಡಲು ಕೂಡಾ
ಒಂಚೂರು ಬಿಸಿ ಮುಟ್ಟಿರಬೇಕು!

ನಲ್ವತ್ತೆಳರ ನಾನೂ ಇಪ್ಪತ್ತೊಂದರ ಈ ನನ್ನ ಬಿಳಲುಗಳೂ
ಅಡುಗೆ ನನಗೆ ಕರ್ತವ್ಯ.
ಓಡಾಡಿ ನಾ ಮಾಡಿದ್ದನ್ನು ತಿಂದು ತೇಗುವ ಅವರದು, ಹಕ್ಕು…!
ಕರ್ತವ್ಯ ಎಂಬಂತೆ ಹೋರಾಡಿದ ನಲ್ವತ್ತೆಳರವರೂ
ಹಕ್ಕನ್ನಷ್ಟೆ ಚಲಾಯಿಸುತ್ತಿರುವ ಇಪ್ಪತ್ತೊಂದರ ನನ್ನವರೂ
ಮತವೋ, ಪಕ್ಷವೋ, ಜಾತಿ ರಾಜಕೀಯವೋ
ಇನ್ನೊಂದೊ ಮತ್ತೊಂದೊ
ಏನಿಲ್ಲದಿರೆ, ಪ್ರಕೃತಿಯನೆ ಉಣ್ಣುವ ಬಾಕತನಕೂ ಸೈ!
ಹೀಗೆ ಮುಳುಗಿದವಳು ಹೊರ ಬಂದಾಗ ಘಂಟೆ ಏಳೈವತ್ತು
ಹಾಸಿಗೆಯನು ಬಿಡದ ಅವರ ಮತ್ತೆ ಎಬ್ಬಿಸುವ ದೌಡು
ಈ ಅರೆ ಎಚ್ಚರದ ನಿದ್ದೆ ಬಹಳ ಘಾತಕ
ಜಾಣ ಮರೆವಿನಂತೆ! ಇದ್ದೂ ಇಲ್ಲದ ದೃಷ್ಟಿಯಂತೆ!
ಎಪ್ಪತ್ತೈದು ನೂರಾದರೂ ಪ್ರಗತಿ ಇಂಚೂ ಅಲ್ಲಾಡದು
ನಮ್ಮೊಳಗೆ ಏಳುವ ಛಲವಿರದಿರೆ!
ಬಾಗಿಲು ಮುಂದು ಮಾಡಿ ಹೊರಟೆ
ಬೇಜವಬ್ಧಾರಿಯ ಹಾಸಿ ಹೊದ್ದ ಹಳವಂಡಗಳ ಕೂಗಿದೆ
ಮತ್ತೊಮ್ಮೆ ಎಬ್ಬಿಸುವ ಔಪಚಾರಿಕತೆಯ ಮರೆಯದೆ!
ಓರಣವಿಟ್ಟ ಅಡುಗೆಗಳೆಡೆ ದೃಷ್ಟಿಯ ಬೀರುತ
ನಗುಸ್ಮಿತದ ಲೇಪ ಮುಖಾರವಿಂದದಿ ಸೂಸುತ
ಪೂರೈಸಿ ಕರ್ತವ್ಯ, ಸಂಭ್ರಮದಿ ಹೊರಟೆ
ಮಾಡಿಟ್ಟಿದುದ ತಿಂದುಂಡು ಬಾಳಲಿ ಎಂಬ ಒಲವೋ
ನಲ್ವತ್ತೆಳರ ನಾ ಹೊರಟೆ, ಇಪ್ಪತ್ತೊಂದರ ಶುಭಾಶಯದ ಕನಸ ಹೊತ್ತು!

ಎದ್ದಾಗ ಇದ್ದ ಚುಮುಚುಮು ಸೊಬಗು ಕರಗಿ,
ಸೂರ್ಯ ನಗುವ ಚಿಮ್ಮಿದ್ದ, ಎಳೆ ಬಿಸಿಲೊಡನೆ
ನಗುವಿಗೊಂದುತ್ತರ ಕೊಡುವ ಹುಮ್ಮಸ್ಸು ಕಟ್ಟಿಕೊಂಡು,
ಹೊರಟೆ,
ದಕ್ಕಿದ್ದ ರವಿವಾರವ ಅರ್ಥಪೂರ್ಣವಾಗಿಸುವುದರ ಕಡೆಗೆ
ದೇಶಕ್ಕೊಂದು ವಂದನೆಯ ಮಾಡುವ ಎಡೆಗೆ
ಹೊರಟೆ, ನಲ್ವತ್ತೆಳರ ನಾನು, ಇಪ್ಪತ್ತೊಂದರಲಿ ಶುಭಾಶಯದ ಕನಸ ಹೊತ್ತು!
2. ನಾರ್ಸಿಸಸ್ ಮತ್ತು ನಾನು
ಅವನು ಸುಂದರ, ನನ್ನಂತೆ
ಕೆಲವೊಮ್ಮೆ ನಾನೇ ಅವನಾದಂತೆ ಕನಸುವೆ
ಸೌಂದರ್ಯವೇ ಮೈವೆತ್ತಂತೆ ಭ್ರಮಿಸುವೆ
ಎಲ್ಲ ಬರಿಯ ಆತ್ಮರತಿ
ದೇಹದ ಬಯಕೆಯೋ ಮನದ ಓಕುಳಿಯೋ
ಅಂತೂ ನಾನು ನನ್ನ ಬಿಂಬದೊಡನೆ ಸುಖಿಸುವೆ
ಆದರೂ ನಾನು ಅವನಲ್ಲ
ಮುಳುಗೇಳುವ ಅಲೆಗಳಲಿ ಹರಡಿರುವ ಬಿಂಬವ ಪ್ರೀತಿಸುವ ಅವನು
ಮತ್ತು
ಕನ್ನಡಿಯ ಎದುರು ತನ್ನ ಇರುವಿನ ಅರಿವನು ಅರಿತ ನಾನು
ಖಂಡಿತ, ನಾನು ಅವನಲ್ಲ.
ಆದರೂ ಪುರಾಣದ ನಾರ್ಸಿಸಸ್ ಆತ್ಮದಲಿ
ನನ್ನತನವ ಹುಡುಕ ಹೊರಟ ಮೂಢ ನಾನೋ?
ಪ್ರತಿಬಿಂಬದೊಳು ಸಖ್ಯವ ಬೆಳೆಸಿ
ಕೊಳವ ಅಪ್ಪಿಕೊಳ್ಳುವ ಮೂಢ ಅವನೋ?
ಕುರುಡು ಪ್ರೀತಿಯೊಳಗು ಬೇಳೆ ಬೇಯಿಸಿಕೊಳ್ಳುವ ಜ್ಞಾನ ತುಂಬಿರುವಾಗ
ಆವರಣದೊಳಗೂ ಹೊರಗೂ ಬಣ್ಣ ಬದಲಿಸುವ ಊಸರವಳ್ಳಿ ಒಳಗಿರುವಾಗ
ನಾನು ಅವನಾಗಬಲ್ಲೆನೆ?

ಬೇಕೆಂದಾಗ ಕಳಚುವ ಮುಖವಾಡದೊಳಗೆ ವ್ಯಾಘ್ರನನು ಸಾಕುತಲೆ
ಗೋವಿನ ಮುಖದೊಳಗೆ ಹುದುಗಿರುವ ನಾನು
ಸ್ವಯಂ ಹಿಡಿತ ಎಲ್ಲೆ ಮೀರಿದಾಗ ಕಳಚಿ ಮುಖವಾಡ
ರಕ್ಕಸತನ ತೋರುವ ನಾನು
ಅವನಾಗಲು ಸಾದ್ಯವೇ ಇಲ್ಲ.
ಆತ್ಮವನು ಪ್ರೀತಿಸುವ ಅವನು, ಆತ್ಮರತಿಯಿಂದ ಸಾಯುವ ಅವನು
ಮತ್ತು ಆತ್ಮವನೇ ಹರಾಜಿಗಿಟ್ಟ ನಾನು
ಅಂತರ ಯುಗದ್ದೋ ಸಮಾಜದ್ದೋ
ಯುಗ ಚಕ್ರದಲಿ ಸಿಲುಕಿರುವ ವ್ಯಕ್ತಿಯದೋ?
ದೃಷ್ಟಿಕೋನದ ಮಗ್ಗುಲಿಗೆ ನಿಷ್ಕರ್ಷೆಯ ಕೂಸ ಮಗ್ಗಲು ಮಲಗಿಸುತ್ತಾ
ಕೊಳದರಳಿರುವ ನಾರ್ಸಿಸಸ್ ಹೂವಿನ ಕನಸ ಪಕಳೆಗಳ ಸವರುತಿರುವೆ…
ಒಳಗಿನ ಸೌಂದರ್ಯವ ಅನುಭವಿಸುತಿರುವೆ…
ಲಜ್ಜೆಯಿಲ್ಲದ ಮೋಹಿ ನಾನು…
ನನ್ನಾತ್ಮವ ಸುಖಿಸುತಿರುವೆ






0 Comments