ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಕ್ಕಿಮಂಗಲ ಮಂಜುನಾಥ ಬರೆದ ಮಕ್ಕಳ ಪದ್ಯಗಳು

– ಅಕ್ಕಿಮಂಗಲ ಮಂಜುನಾಥ


ಜುಟ್ಟು ಮೇಷ್ಟ್ರು
 
ರಿಬ್ಬನ್ ಕಟ್ಟದ ಜುಟ್ಟನು ಬಿಟ್ಟು
ಗುರುಗಳು ಇರುವರು ಶಾಲೆಯಲಿ
ಶಿಸ್ತಿನ ಗುರುಗಳು ನೆಟ್ಟಗೆ ನಿಲುವರು
ಚಪ್ಪಲಿ ಬಿಡುವರು ಮೂಲೆಯಲಿ
 
ಪಾಠವು ಬರದಿರೆ ಏಟನು ಬಿಡುವರು
ಕಣ್ಣನು ಹಿಗ್ಗಿಸಿ ಬಲು ಜೋರು
ಕೈಯೊಳಗಿರುವ ಕೋಲನು ಕಂಡರೆ
ಸರ ಸರ ಇಳಿವುದು ಕಣ್ಣೀರು
 
ಜನ ಗಣ ಮನವನು ಹಾಡಿಸಿ ನಂತರ
ಒಳಗಡೆ ಬಿಡುವರು ನಮ್ಮನ್ನು
ಪುಸ್ತಕ ಹರಿದರೆ ಕಿವಿಯನು ಹಿಂಡಿ
ಹಚ್ಚಲು ಕೊಡುವರು ಗಮ್ಮನ್ನು
 
ಪಾಠದ ಜೊತೆಗೇ ಆಟವನಾಡಿಸಿ
ಬೆಳೆಸುವರೆಮ್ಮಯ ದೇಹವನು
ನಾಟಕ ಆಡಿಸಿ ಹಾಡನು ಹಾಡಿಸಿ
ಹೇಳುವರವರೇ ಕತೆಯನ್ನು
 
ಮುಂಜಾನೆಯಿಂದ ಸಂಜೆಯವರೆಗೆ
ನಮ್ಮಲಿ ಅವರಿಗೆ ವ್ಯವಹಾರ
ಸಂಜೆಯ ವೇಳೆಗೆ ಮನೆಕಡೆ ಹೋದರೆ
ಅಲ್ಲಿದೆ ಅವರಿಗೆ ಸಂಸಾರ
 
ರಾತ್ರಿ
ರಾತ್ರಿ ಹೊತ್ತು ಕತ್ತಲಲ್ಲಿ
ಅಜ್ಜಿ ಹೇಳಿದ್ದೇನು ?
-ಗುಮ್ಮನ ಕತೆಯನ್ನು.
 
ದೀಪ ಬೆಳಗೋ ವೇಳೆಯಲ್ಲಿ
ಅಪ್ಪ ಅಂದದ್ದೇನು ?
-ಓದಿಕೊಳ್ಳೋ ನೀನು.
 
ಅಡಿಗೆ ಮನೆಯೊಳಗಿಂದ
ಅಮ್ಮ ಕೂಗಿದ್ದೇಕೆ ?
-ತಿಂಡಿ ತಿನ್ನಲಿಕ್ಕೆ.
 
ಬೆಳದಿಂಗಳ ಬೆಳಕಲ್ಲಿ
ಗೆಳೆಯ ಕರೆದದ್ದೇಕೆ ?
-ಆಟ ಆಡಲಿಕ್ಕೆ.
 
ಬಟ್ಟೆ ಹೊದ್ದು ಮಲಗುತ್ತ
ಕರೆದ ಅಜ್ಜನ ಕೂಗು ?
-ಬೇಗ ಹಾಸಿ ಮಲಗು.
 
ಮಲಗಿದಾಗ ಕೇಳಿ ಬಂದ
ಉಹೂ ಉಹೂ ಗುನುಗು ?
-ಅಜ್ಜಿಯ ಕೊರಗು.

ಅಜ್ಜನ ಜೊತೆಯವರು
ಕಾಲಿಗೆ ಎಕ್ಕಡ
ಕೈಯಲಿ ಕೋಲು
ಕಣ್ಣಿಗೆ ಕನ್ನಡಕ
 
ಕಾಣದ ಕಣ್ಣು
ಕೇಳದ ಕಿವಿಯು
ಮೈಯಲಿ ಬಲು ನಡುಕ
 
ತುಂಬಾ ಮರೆವು
ಬೇಡದ ಮಾತು
ಬಾಯಲಿ ಬರಿ ಗುನುಗು
 
ಏನೋ ಎಂತೋ
ಹತ್ತದು ನಿದ್ದೆ
ಮನದಲಿ ಬಲು ಕೊರಗು
 
ಬೆಳ್ಳಿಯ ಕೂದಲು
ಉದುರಿದ ಹಲ್ಲು
ಸುಕ್ಕಾಗಿದೆ ಚರ್ಮ
 
ಆದರೂ ಇರುವುದು
ಬದಕುವ ಆಸೆ
ತಿಳಿಯದದರ ಮರ್ಮ
 

‍ಲೇಖಕರು G

6 June, 2015

2 Comments

  1. ಅಕ್ಕಿಮಂಗಲ ಮಂಜುನಾಥ

    ಅಭಿನಂದನೆಗಳು; ಅವದಿ.

  2. ಆರತಿ ಘಟಿಕಾರ್

    ಕಂದ ಪದ್ಯಗಳ ಬಹಳ ಸ್ವಾರಸ್ಯಕರವಾಗಿ ಮೂಡಿ ಬಂದಿವೆ . ಓದಲು ಖುಷಿಯಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading